ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಜಿ ಸಿದ್ಧರಾಮಯ್ಯ ಹೊಸ ಕವಿತೆ – ಬನ್ನಿ ನೀವೂ ಮನುಷ್ಯರಾಗಿ…

ಎಸ್ ಜಿ ಸಿದ್ಧರಾಮಯ್ಯ

ಕ್ಷಮಿಸಿ ನೀವು ಕಟ್ಟುವ ಜಗತ್ತಿನಲ್ಲಿ ನಮಗೆ ಜಾಗವಿಲ್ಲ
ಅದು ಗೊತ್ತಾಗಿಯೇ ನಿಮ್ಮ ಬಗ್ಗೆ ನಮ್ಮ ವಿರೋಧ
ನೀವೆಂದರೆ ನಿಮಗೆ ನೀವೇ ಜಗತ್ತು ಸಂಪತ್ತು
ನಾವುಗಳಿರುವುದು ಎಂದರೆ ನಿಮಗೆ ವಿಪತ್ತು

ನಮ್ಮ ನೆರಳು ಕಂಡರಾಗದ ನಿಮಗೆ ನಾವು ಬೇಕು
ನಿಮ್ಮ ಅಂಗಳವ ಗುಡಿಸಲಿಕ್ಕೆ ಬಾಚಿ ಬಳಿಯಲಿಕ್ಕೆ
ನೀವು ತಿನ್ನುವ ಅನ್ನವ ಬೆಳೆಯಲಿಕ್ಕೆ ಬೇಯಿಸಲಿಕ್ಕೆ
ಉಂಡ ತಟ್ಟೆಯ ಬಳಿಯಲಿಕ್ಕೆ ಬೆಳಗಲಿಕ್ಕೆ

ಉಟ್ಟು ಕಳೆದ ಬಟ್ಟೆಯ ಮಡಿಮಾಡಲಿಕ್ಕೆ
ಮೆಟ್ಟುವ ಚಪ್ಪಲಿಗಳ ಮಾಡಲಿಕ್ಕೆ ಅದಕ್ಕೆ
ಇದಕ್ಕೆ ಎದಕ್ಕೂ ನಾವು ಬೇಕೇ ಬೇಕು ಕೊನೆಗೆ
ನಿಮ್ಮ ಕರ್ಮಫಲ ಕೃಪೆಗೆ ಬೊಗಸೆಯೊಡ್ಡಲಿಕ್ಕೆ

ಮೂಗುರಿಗಳಾಗಿ ಕತ್ತೆ ದುಡಿತಕೆ ತೆತ್ತು ಕೊಂಡರು
ನಮ್ಮವರು ನಮ್ಮ ಮನೆಯ ಹಿರಿಯರು
ನೀವು ನಿಷೇಧಿಸಿದ್ದ ಅಕ್ಷರದರಿವಿಗೆ ತೆರೆದುಕೊಂಡ
ನಾವು ನಿಮ್ಮ ಬುಡಕ್ಕೆ ಬಿಸಿನೀರು ಹರಿಸುತ್ತೇವೆ.

ಭಯ ನಿಮಗೆ ನಮ್ಮ ನೆರಳು ಕಂಡರೂ ಅದಕ್ಕೇ
ನಮ್ಮವರನ್ನು ನಮ್ಮ ವಿರುದ್ಧವೇ ಎತ್ತಿ ಕಟ್ಟಿದ್ದೀರಿ:
ಅಪ್ಪ ಮಕ್ಕಳಿಗೆ ಅಣ್ಣ ತಮ್ಮರಿಗೆ ಕೊನೆಗೆ
ಗಂಡ ಹೆಂಡಿರಿಗೆ ಮಾತಿನ ಕಿಡಿ ಹೊತ್ತಿಸಿದ್ದೀರಿ.

ನಮ್ಮ ಗುಡಿಗುಂಡಾರಗಳಿಂದ ನಮ್ಮನ್ನು ಹೊರ ದಬ್ಬಿದ್ದೀರಿ:
ಕುಕ್ಕೆಯೊಳಗಿನ ಸುಬ್ರಹ್ಮಣ್ಯ ಪುರಿಯ ಜಗನ್ನಾಥ
ತಿರುಪತಿಯ ವೆಂಕಟರಮಣ ಒಂದೇ ಎರಡೆ
ಎಲ್ಲ ನಮ್ಮವರೇ ನಮ್ಮ ಮನೆಯ ಮಕ್ಕಳು.

ಒಕ್ಕಲುತನದಲಿ ಮಿಕ್ಕವರಿಗೆ ಮಾದರಿಯಾಗಿ
ಮನೆದೇವರಾದವರು ಬಳಿಸಾಲ ಬಳಗದೊಟ್ಟಿನಲಿ
ಸಂಪನ್ನರಾದವರು ನಿಮ್ಮ ಕಣ್ಣಿಗೆ ಬಿದ್ದು ಪರಬಾರೆ
ಯಾದವರು. ಕುಲಗಳ ತಬ್ಬಲಿಮಾಡಿ ಕಥೆಯಾಗಿ

ಬೆಳೆದವರು, ಕುಲದ ಮಕ್ಕಳ ಮಡೆಸ್ನಾನಕೆ ಸಿಡೆ ಹಬ್ಬಕೆ
ದಬ್ಬಿದವರು. ನಿಮ್ಮ ಗಾಳಕ್ಕೆ ಎರೆಹುಳುವಾದವರು.
ನಮ್ಮ ಅರಿವು ನಮ್ಮ ಧರ್ಮ ನಮಗೆ ಬೇಡ ನಿಮ್ಮ ಕರ್ಮ.
ದಯೆಯಿಲ್ಲದ ಧರ್ಮದಲ್ಲಿ ಯಾರು ಹಿಂದು ಯಾರು ಮುಂದು?

ನಮಗೆ ಬೇಡ ನಿಮ್ಮ ರಾಮರಾಜ್ಯ. ನಮಗಿರಲಿ ನಮ್ಮದೇ ಪ್ರಜಾರಾಜ್ಯ.
ಚಾರ್ವಾಕ ಆಜೀವಕ ಬೌದ್ಧರು ಶರಣರು
ನಡೆದ ದಾರಿ ತೆರೆದಿದೆ ಸಾವಿರದ ಬಳಿಸಾಲ ಬಳಗವಾಗಿ
ಬನ್ನಿ ನೀವೂ ನಮ್ಮೊಂದಿಗೆ ಬಳಗದೊಟ್ಟಿನ ಮನುಷ್ಯರಾಗಿ.

‍ಲೇಖಕರು Admin

17 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading