ಎಂ ನಾಗರಾಜ ಶೆಟ್ಟಿ ಓದಿದ – ʼನಾಲಿಗೆ, ನೆತ್ತರು ಮತ್ತು ಬುದ್ಧʼ

ಎಂ ನಾಗರಾಜ ಶೆಟ್ಟಿ

**

ಖ್ಯಾತ ಸಾಹಿತಿ ಚಂದ್ರಪ್ರಭ ಕಠಾರಿಯವರ ಹೊಸ ಕಥಾ ಸಂಕಲನ ಪ್ರಕಟವಾಗಿದೆ.

ಚಿಕ್ಕು ಕ್ರಿಯೇಷನ್ಸ್ ಈ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಕತೆಗಾರರಾದ ಎಂ ನಾಗರಾಜ ಶೆಟ್ಟಿ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.

**

ಕತೆಗಳು ಬೆಳಕು ಕಾಣುವ ಹೊತ್ತಲ್ಲಿ – ಚಂದ್ರಪ್ರಭ ಕಠಾರಿ
ಹಳ್ಳಕೊಳ್ಳ ದಾಟಿ, ಬೆಟ್ಟಗುಡ್ಡ ಹತ್ತಿಳಿದು, ಕಾಡುಮೇಡು ಅಲೆದು, ಕೊನೆಗೂ ನನ್ನ ಕತೆಗಳು ಒಂದು ನೆಲೆ ಕಂಡಿದೆ. ಬಿಡುಗಡೆಗೆ ಕಾತರಿಸಿ ಕಣ್ಣರಳಿಸಿದೆ. ಕಳೆದ ಒಂದು ವರ್ಷದಿಂದ ಪ್ರಕಾಶಕರಿಂದ ಪ್ರಕಾಶಕರಿಗೆ ಅಲೆದಾಡುತ್ತಿದ್ದ ʼನಾಲಿಗೆ, ನೆತ್ತರು ಮತ್ತು ಬುದ್ಧʼ ಕಥಾಸಂಕಲನಕ್ಕೆ
ಕೊನೆಗೂ ಮುಕ್ತಿ ಸಿಕ್ಕಿದೆ. ಕೆಲವು ಪ್ರಕಾಶಕರು ಕತೆಗಳ ವಸ್ತು ವಿಷಯಕ್ಕೆ ಇರಸುಮುರುಸುಗೊಂಡು, ಮತ್ತೆ ಕೆಲವರು ಸರ್ಕಾರದ ವಿಳಂಬ ನೀತಿಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಪ್ರಕಟನೆಗೆ ಹಿಂದೇಟು ಹಾಕಿದರು. ಆದರೆ, ಕೊನೆಗೆ ಚಿಕ್ಕು ಕ್ರಿಯೇಷನ್ಸ್‌ ಪ್ರಕಟನೆಗೆ ಮುಂದೆ ಬಂದಿದೆ. ನಿಟ್ಟುಸಿರು ಬಿಡುವಂತಾಗಿದೆ.

ʼನಾಲಿಗೆ, ನೆತ್ತರು ಮತ್ತು ಬುದ್ಧʼ ಪುಸ್ತಕದ ಕತೆಗಳಿಗೆ, ಕತೆಗಾರರು ಮತ್ತು ಸಿನಿಮಾ ವಿಶ್ಲೇಷಕರು ಆದ ಎಂ. ನಾಗರಾಜ ಶೆಟ್ಟಿ ಅವರು ಮೌಲಿಕ, ಅರ್ಥಪೂರ್ಣ ಮುನ್ನುಡಿಯನ್ನು ಬರೆದು ಕೊಟ್ಟಿದ್ದಾರೆ. ಪುಸ್ತಕ ಪ್ರಕಟವಾಗಿರುವ ಈ ಸಂತೋಷದ ಗಳಿಗೆಯಲ್ಲಿ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ.

**

ವರ್ತಮಾನದ ಬುನಾದಿಯಲ್ಲಿ ಅರಳಿದ ಕತೆಗಳು

“ಕತೆ ಬರೆದು ಮುಗಿಸಿದ ರಾಮಣ್ಣನ ಎದೆ ಭಾರ ಕಮ್ಮಿಯಾದಂತಾಯಿತು” ʼನಾಲಿಗೆ, ನೆತ್ತರು ಮತ್ತು ಬುದ್ಧʼ ಕಥಾಸಂಕಲನದಲ್ಲಿನ ಕತೆ ʼಗುಳೇ ಎದ್ದ ಹನುಮʼ ದಲ್ಲಿ ಕತೆಗಾರ ರಾಮಣ್ಣ ಹೇಳುವ ಮಾತುಗಳಿವು. ಈ ಮಾತುಗಳು ಚಂದಪ್ರಭ ಕಠಾರಿಯವರಿಗೂ ಒಪ್ಪುತ್ತವೆ. ಸಮಕಾಲೀನ ಘಟನೆಗಳಿಗೆ ತೀವ್ರವಾಗಿ ಸ್ಪಂದಿಸುವ ಕಠಾರಿಯವರು ಆ ಒಜ್ಜೆಯನ್ನು ಕತೆಗಳ ಮೂಲಕ ಪರಿಹರಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಟ್ಟಡ ಕಟ್ಟುವುದರಲ್ಲಿ ನಿಷ್ಣಾತರಾಗಿರುವ ಕಠಾರಿಯವರಿಗೆ ಅದೇ ಶ್ರದ್ಧೆ, ಉತ್ಸಾಹ ಕತೆ ಕಟ್ಟುವುದರಲ್ಲಿಯೂ ಇದೆ. ಅಕಡೆಮಿಕ್‌ ಅಲ್ಲದ ಲೇಖಕನೊಬ್ಬ ಅಕ್ಷರ ಪ್ರೀತಿಯಿಂದ ಖ್ಯಾತಿ, ಪ್ರಶಸ್ತಿ ಬಯಸದೆ ತಪಸ್ಸಿನಂತೆ ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಅಚ್ಚರಿಯ ಹಾಗೂ ಸಂತೋಷದ ವಿಷಯವೇ. ಈಗಾಗಲೇ ಅವರ ಎರಡು ಕಥಾ ಸಂಕಲನಗಳು ಪ್ರಕಟವಾಗಿವೆ. ಎರಡನೆಯ ಸಂಕಲನ ʼಕಾಗೆ ಮೋಕ್ಷʼ ಪ್ರಕಟವಾದ ಎರಡು ವರ್ಷಗಳ ಬಳಿಕ ʼನಾಲಿಗೆ, ನೆತ್ತರು ಮತ್ತು ಬುದ್ಧʼ ಬರುತ್ತಿದೆ. ವೃತ್ತಿಪರ ಅನುಭವಗಳು ದಟ್ಟವಾಗಿದ್ದ ಹಿಂದಿನೆರಡು ಸಂಕಲನಗಳ ಮೂಲಕ ಸಿವಿಲ್‌ ಇಂಜಿನಿಯರ್‌ ಒಬ್ಬರ ಅನುಭವಗಳ ನೋಟ ಕನ್ನಡಕ್ಕೆ ದಕ್ಕಿತ್ತು. ʼನಾಲಿಗೆ, ನೆತ್ತರು ಮತ್ತು ಬುದ್ಧʼ ಸಂಕಲನ ಕೂಡಾ ಪೂರ್ತಿಯಾಗಿ ಕತೆಗಾರನ ಅನುಭವದ ಮೂಲ ದ್ರವ್ಯದಿಂದ ಹೊರತಾಗಿಲ್ಲ.

ಇದಕ್ಕೆ ಉದಾಹರಣೆಯಾಗಿ ʼಮುಚ್ಚಟೆʼ ʼಬಟವಾಡೆʼ ಮತ್ತು ವಿದ್ಯಾರ್ಥಿ ದೆಸೆಯ ʼಸ್ಕಾಲರ್‌ ಶಿಪ್‌ʼ ಕತೆಗಳಿವೆ. ʼಮುಚ್ಚಟೆʼ ಕತೆಯಲ್ಲಿ ಆನಂದ ಸಿವಿಲ್‌ ಇಂಜಿನಿಯರ್.‌ ಸಂದಿಗ್ಧ ಸಮಯದಲ್ಲಿ ನೆರವಿಗೆ ನಿಂತ ಪರಶುರಾಮನಿಗೆ ಆನಂದ ತನ್ನ ಹೊಸ ಮನೆಯ ಒಂದು ಭಾಗದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತಾನೆ. ಇದರಲ್ಲಿ ಹೆಂಡತಿಗೆ ಅನುಕೂಲವಾಗಬಹುದು ಎನ್ನುವ ಒಳ ಉದ್ದೇಶವೂ ಇದೆ. ಆನಂದ ವಾಸ್ತುಪೂಜೆ, ಹೋಮ ಹವನ, ಗೋಪೂಜೆ ಇವೆಲ್ಲ ಮಾಡದೆ ಮನೆ ಸೇರಿಕೊಂಡರೂ ಹೆಂಡತಿಯ ಮಡಿವಂತಿಕೆಯನ್ನು ತಡೆಯದ, ಶುಚಿತ್ವಕ್ಕೂ ಮಡಿವಂತಿಕೆಗೂ ಫರಾಕು ಕಾಣದ ಸೋಗಲಾಡಿ. ಶುಚಿತ್ವದ ನೆಪದಲ್ಲಿ ಮನೆ ಖಾಲಿ ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಆನಂದ ಪರಶುರಾಮನಿಗೆ ದುಡ್ಡನ್ನು ಕೊಡಲು ಬಂದಾಗ ಆತ “ ಬೇಡ ಸಾ…ಆಗ್ಲೇ ನಿಮ್ಮ ರುಣ ನಮ್ಮೆಲೆ ಭಾಳ ಇದೆ. ನಿಮ್ಮ ಆಶೀರ್ವಾದ ಇದ್ರೆ ಸಾಕು” ಎಂದು ಕೈ ಮುಗಿಯುತ್ತಾನೆ. ಬಡವರಿಗೆ ಋಣಭಾರವಿದೆ, ಉಳ್ಳವರಿಗಿಲ್ಲ ಎನ್ನುವುದನ್ನು ಓದುಗನಿಗೆ ದಾಟಿಸುವಲ್ಲಿ ಕತೆ ಸಫಲವಾಗಿದೆ.

ಎಲ್ಲೆಲ್ಲಿಂದಲೋ ಬರುವ ಕಟ್ಟಡ ಕಾರ್ಮಿಕರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಕಂಟ್ರಾಕ್ಟುದಾರರು ಇರಲು ಜಾಗ, ಸಮಯಕ್ಕೆ ಸರಿಯಾಗಿ ಸಂಬಳವನ್ನೂ ಕೊಡದೆ ಸತಾಯಿಸುವುದು ನಮಗೆ ಗೊತ್ತಿರುವ ವಿಷಯವೇ. ಇಂಜಿನಿಯರ್‌ಗಳಿಗೂ ಅವರ ಕೈಕೆಳಗೆ ಏಗುವುದು ಕಷ್ಟವೇ. ಅಪಘಾತವಾದಾಗಲೂ ಕನಿಕರ ತೋರದೆ, ಪರಿಣತಿಗೂ ಬೆಲೆ ಕೊಡದೆ, ತಮ್ಮ ಬಂಡವಾಳವನ್ನು ಹೆಚ್ಚಿಸುವತ್ತಲೇ ಗಮನ ಕೊಡುವ ʼಬಟವಾಡೆʼ ಕತೆಯ ಗಂಗಾಧರ ರೆಡ್ಡಿಯಂತವರು ನಮ್ಮ ನಡುವೆ ಇರುವ ಜನ. ಕಟ್ಟಡ ನಿರ್ಮಿತಿಯ ಸೂಕ್ಷ್ಮಗಳು, ಕಾರ್ಮಿಕರ ಅಸಹಾಯಕತೆ, ವಿರೋಧಿಸುವವರ ಹತಾಶೆ ಇವೆಲ್ಲ ಕತೆಯನ್ನು ಕಟ್ಟುವ ಇಟ್ಟಿಗೆಗಳಾಗಿ ಜತನದಿಂದ ಜೋಡಿಸಲ್ಪಟ್ಟಿವೆ. ದೇವರು- ದಿಂಡರು, ನೇಮನಿಷ್ಟೆಗಳನ್ನು ಕೊಡವಿಕೊಂಡರೂ ಬದುಕಿನ ಸಂದಿಗ್ಧತೆಯಲ್ಲಿ ಅದನ್ನು ತೋರಿಸುವ ಅನಿವಾರ್ಯತೆ ಇರುತ್ತದೆ.

ಸಮಾಜದ ಹಾಸ್ಟೆಲ್ಲುಗಳಿಂದ ಬಡ ಮಕ್ಕಳಿಗೆ ಅನುಕೂಲವಾಗುವಂತೆ ದುರುಪಯೋಗವೂ ನಡೆಯುತ್ತದೆ. ʼಸ್ಕಾಲರ್‌ ಶಿಪ್‌ʼ ಕತೆ ಹಾಸ್ಟೆಲ್‌ ವಾಸವನ್ನು ಹೇಳುತ್ತಲೇ ಪ್ರಬುದ್ಧತೆಗೆ ಹೊರಳಿಕೊಳ್ಳುವ ವಿದ್ಯಾರ್ಥಿಯ ಮನೋಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ತಪ್ಪು ಮಾಡಿದವರು ಬಚಾವಾಗುವ, ಅಮಾಯಕರು ದಂಡಿಸಲ್ಪಡುವ ವ್ಯವಸ್ಥೆಯನ್ನು ನಿರೂಪಿಸುವಲ್ಲಿ ಕತೆ ಯಶಸ್ವಿಯಾಗಿದೆ. ಚಂದ್ರಪ್ರಭ ಕಠಾರಿಯವರು ವೃತ್ತಿ ಸಂಬಂಧಿ ಕತೆಗಳ ಹೊರತಾಗಿಯೂ ಸೂಕ್ಷ ಗ್ರಹಿಕೆಯ ಕತೆಗಾರರೆನ್ನುವುದು ಸಂಕಲನದ ಇನ್ನಿತರ ಕತೆಗಳಲ್ಲಿ ಕಂಡು ಬರುತ್ತದೆ. ಸಮಕಾಲೀನವೆನ್ನಿಸುವ ಈ ಕತೆಗಳಲ್ಲಿ ಜೀವಪರ ನಿಲುವಿದೆ. ʼಕಾಂಡಮ್ʼ ಕತೆಯಲ್ಲಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಸ್ವರೂಪ, ಆಧುನಿಕ ಮನೋಭಾವದವನು ಎಂದು ತೋರಿಸಿಕೊಂಡರೂ ರೂಢಿಗತ ಮೌಲ್ಯಗಳನ್ನು ಮೀರದವನು. ಮದುವೆಯಾಗುವ ಹೆಣ್ಣು ಕತೆ ಬರೆಯುತ್ತಾಳೆಂದಾಗ ಅಭಿಮಾನ ಪಡುತ್ತಾನೆ. ಅವಳು ಬರೆದ ಕತೆಯಲ್ಲಿ ಸಹನಾ ಪ್ರಿಯತಮನೊಂದಿಗೆ ಸೇರಿದ್ದಳು ಎನ್ನುವುದನ್ನು ಆತನಿಂದ ಅರಗಿಸಿಕೊಳ್ಳಲಾಗುವುದಿಲ್ಲ. “ನಿಮ್‌ ಪ್ರಕಾರ ಹೆಣ್ಣಿನ ಶೀಲ ಅವಳ ಯೋನಿಯಲ್ಲಿ ಇರುತ್ತಾ?” ಎಂದು ಕತೆ ಬರೆದ ಪ್ರತಿಮಾ ಸ್ವರೂಪನನ್ನು ಪ್ರಶ್ನಿಸುತ್ತಾಳೆ. ಧ್ವನಿಪೂರ್ಣವಾಗಿ ಕೊನೆಗೊಳ್ಳುವ ಈ ಕತೆಯಲ್ಲಿ ಫೇಸ್ಬುಕ್‌, ವಾಟ್ಸಾಫ್‌ಗಳಿಂದ ಏರ್ಪಡುವ ಸಂಬಂಧಗಳ ಕುರಿತ ಎಚ್ಚರಿಕೆಯೂ ಇದೆ. ಸ್ವರೂಪನಂತವರ ಎಡೆಬಿಡಂಗಿತನವನ್ನು, ಪ್ರತಿಮಾರಂತವರ ಗಟ್ಟಿತನವನ್ನು ಕತೆ ಸ್ಪಷ್ಟವಾಗಿ ತೆರೆದು ತೋರುತ್ತದೆ.

ಪ್ರತಿಮಾಳಂತೆ ಚಂದ್ರಪ್ರಭ ಕಠಾರಿಯವರ ಹೆಚ್ಚಿನ ಕತೆಗಳಲ್ಲಿ ಗಟ್ಟಿಗಿತ್ತಿ ಮಹಿಳೆಯರಿದ್ದಾರೆ. ʼಹಾಡು ಗುಬ್ಬಿ ಪಾಡುʼ ಕತೆಯಲ್ಲಿ ಭಾಗ್ಯ ಗಂಡನ ಮನೆಯನ್ನು ತೊರೆದು ಬರುತ್ತಾಳೆ. ʼನಿನ್ನ ಅಂಡು ಒಣಗಿದ ಸೇಬುʼ ಎಂದ ಗಂಡನಿಗೆ ʼನಿಂದೂ ಸುಟ್ಟ ಬದನೆಕಾಯಿʼ ಎಂದು ಭಾಗ್ಯ ದಿಟ್ಟವಾಗಿ ಹೇಳಬಲ್ಲಳು. ಶೋಷಣೆಗೆ ಒಳಗಾದ ಆಕೆ ಅಪವಾದವನ್ನು ಕೇಳಬೇಕಾಗಿ ಬಂದಾಗ ಸೆಟೆದು ನಿಲ್ಲುತ್ತಾಳೆ. ಸವಾಲು ಹಾಕುವ, ಸಿಗರೇಟು ಎಳೆಯುವ ಹೆಣ್ಣಿನ ಮೂಲಕ ಗಂಡಿಗೆ ಸರಿ ಸಮಾನವಾದ ಪಾತ್ರವನ್ನು ಕಠಾರಿ ಸೃಷ್ಟಿಸಿದ್ದಾರೆ. ಈ ಕತೆಯಲ್ಲಿ ಸೂಕ್ಷ್ಮವಾಗಿ ಬರುವ ಜೈನ ಕುಟುಂಬದ ಕ್ರಮವನ್ನು ʼಅವರೆಕಾಯಿ ಸೀಸನ್ನಿನಲ್ಲಿ ಮಣಗಟ್ಟಲೆ ಸುಲ್ದ ಹಿಚುಕಿದ ಬೇಳೆ ಸಾರು, ವುಸ್ಲಿʼ ʼಬಸದಿಗೆ ಹೋಗಿ ಅಕ್ಕಿಪುಂಜ ಇಟ್ಟು, ಣಮೋಕಾರ ಹೇಳುವುದುʼ ಮಾತುಗಳಲ್ಲಿ ಗಮನಿಸಿಬಹುದು.

ʼನಾಲಿಗೆ, ನೆತ್ತರು ಮತ್ತು ಬುದ್ಧʼ ಕತೆಯಲ್ಲಿ ಭಾರತಿ ಸ್ವತಂತ್ರ ಮನೋವೃತ್ತಿಯವಳು. ಬುರುಡೆ ಬಿಡುತ್ತಾ ʼವಿಸ್ಮೃತಿಗೆ ಒಳಗಾದ ಜನರಲ್ಲಿ ಭವ್ಯ ಸಂಸ್ಕೃತಿಯನ್ನು ಪುನರ್‌ ಪ್ರತಿಷ್ಠಾಪಿಸುವ ದಿವ್ಯೌಷಧಿʼಯನ್ನು ಹಂಚಿ ದೇಶಾಭಿಮಾನಿಗಳ ಮೆಚ್ಚುಗೆಗೆ ಪಾತ್ರನಾಗುವ ಸತ್ಯೇಂದ್ರ ಚಕ್ರವರ್ತಿಯ ವೈಖರಿ ಆಕೆಗೆ ಅಸಹ್ಯ ಹುಟ್ಟಿಸುತ್ತದೆ. ಸತ್ಯೇಂದ್ರ ಚಕ್ರವರ್ತಿಯ ವರ್ತನೆ ಮಿತಿಮೀರಿದಾಗ ತನ್ನದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತಾಳೆ. ಸಮಕಾಲೀನ ಘಟನೆಗಳ ತೀಕ್ಷ್ಣ ವಿಡಂಬನೆಯಾಗಿರುವ ಈ ಕತೆಯಲ್ಲಿ ಎಲ್ಲವನ್ನೂ ಒಮ್ಮೆಲೆ ಹೇಳಿ ಬಿಡುವ ಆತುರವಿದೆ. ರಸ್ತೆಯಲ್ಲಿ ತುಪತುಪನೆ ಬಿದ್ದು ಸಾಯುವ ಸುಳ್ಳುಗಳ ಕಲ್ಪನೆ ಚೆನ್ನಾಗಿದೆ. ಪರಿಚಿತರಲ್ಲಿ ನಡೆದ ಘಟನೆಯೆಂದು ತೋರುವ ʼಕಾಡುವ ಅಪ್ಪʼ ಮತ್ತು ʼಉಯಿಲುʼ ಕತೆಗಳಲ್ಲಿ ಕುತೂಹಲಕಾರಿಯಾಗಿ ಕತೆ ಹೇಳುವ ವಿಧಾನವಿದೆ. ಕತೆಗಾರನೇ ಪಾತ್ರವಾಗಿರುವ ʼಕಾಡುವ ಅಪ್ಪʼ ಕತೆಯಲ್ಲಿ ಚಂದ್ರಕಾಂತನ ತೊಳಲಾಟ ಸಮರ್ಪಕವಾಗಿ ಮೂಡಿ ಬಂದಿದ್ದರೂ ಅಂತ್ಯ ಸಿನೀಮಿಯವೆನ್ನಿಸುತ್ತದೆ. ಜಾತಿಗ್ರಸ್ತ ಮನಸ್ಸುಗಳನ್ನು ಚುಚ್ಚುವ ಈ ಸಂಕಲನದಲ್ಲಿರುವ ಸಣ್ಣಕತೆ ʼಉಯಿಲುʼ ನಿರೀಕ್ಷೆಯಂತೆ ಕೊನೆಯಾಗುತ್ತದೆ. ವಾಸ್ತವಿಕವೆಂದು ಅನ್ನಿಸುವ ಈ ಎರಡೂ ಕತೆಗಳು ಕಲ್ಪಕತೆ ಇಲ್ಲದೆ ಸೊರಗುತ್ತವೆ.

ಸಂಕಲನದ ಕತೆಗಳಾದ ʼಗುಳೇ ಬಿದ್ದ ಹನುಮʼ ಮತ್ತು ʼಅಂಬೇಡ್ಕರ್‌ ಕಾಲೋನಿʼ ನನಗೆ ಇಷ್ಟವಾದ ಕತೆಗಳು. ಕೊರೋನಾ ಕಾಲದ ವಲಸೆ ಕಾರ್ಮಿಕರ ಸಂಕಷ್ಟವನ್ನು ಹೇಳುವ ʼಗುಳೇ ಬಿದ್ದ ಹನುಮʼ ಕತೆಯಲ್ಲಿ ಹನುಮ ತನ್ನನ್ನು ಸೃಷ್ಟಿಸಿದ ಕತೆಗಾರನನ್ನೇ ಕಾಡುತ್ತಾನೆ. ಜೊತೆಗಾರ ಕಾರ್ಮಿಕರು ತೊಂದರೆಯಾಗದಂತೆ ನೋಡಿಕೊಂಡರೂ ಇರಲಾರದೆ, ನಾಲ್ಕು ನೂರು ಕಿಲೋ ಮೀಟರ್‌ ದೂರದ ತನ್ನೂರಿಗೆ ಕಾಲ್ನಡಿಗೆಯಲ್ಲಿ ಹೊರಟು ಬಿಡುವ ಹನುಮ ಅಡ್ಡಹಾಕಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಯಿ ತಪ್ಪಿ “ನಮ್ಮಪ್ಪನಿಗೆ ಮೈ ಚೆನ್ನಾಗಿಲ್ಲ…ಇವತ್ತೋ…ನಾಳೆಯೋ” ಎಂದು ಬಿಡುತ್ತಾನೆ. ಈ ಮಾತುಗಳು ಅವನನ್ನು ಪಾಪ ಪ್ರಜ್ಞೆಯಿಂದ ನರಳುವಂತೆ ಮಾಡುತ್ತವೆ. ಹನುಮನ ಗೋಳಾಟ ಸಹಿಸಲಾರದೆ ಕತೆಗಾರ ಕತೆಯ ಅಂತ್ಯವನ್ನು ಬದಲಿಸುತ್ತಾನೆ. ಈ ಮೂಲಕ ಸಾಮಾನ್ಯ ಕೊರೋನಾ ಸಂಬಂಧಿ ಕತೆಯಾಗಬಹುದಾಗಿದ್ದ ಕತೆ ವಿಶಿಷ್ಟ ತಿರುವು ಪಡೆದುಕೊಳ್ಳುತ್ತದೆ. ಕೊರೋನಾ ಕಾಲದ ವಿಪತ್ತನ್ನು ಸರಕಾರ ಸರಿಯಾಗಿ ನಿರ್ವಹಿಸಿದ್ದರೆ ಹಲವು ಪ್ರಾಣಗಳನ್ನು ಉಳಿಸಬಹುದಿತ್ತಲ್ಲವೇ? ಎಂದು ಓದುಗನಿಗೂ ಅನ್ನಿಸುವುದು ಕತೆಯ ಸಫಲತೆ.

ಸಮಾಜಮುಖಿ ಮಾಸಿಕ ಕಥಾ ಪುರಸ್ಕಾರ- 2023ರಲ್ಲಿ ವಾರ್ಷಿಕ ಕಥಾ ಸಂಕಲನಕ್ಕೆ ಆಯ್ಕೆಯಾದ ಕತೆ ʼಅಂಬೇಡ್ಕರ್‌ ಕಾಲೊನಿʼ. ಸಿದ್ದಣ್ಣನೆಂಬ ಕಾರ್ಮಿಕನ ಮೂಲಕ ಕಟ್ಟಡ ಕೂಲಿ ಕಾರ್ಮಿಕರ ಅಸ್ಥಿರ ಬದುಕು, ಅವರನ್ನು ಶೋಷಿಸುವ ವ್ಯವಸ್ಥೆ, ಸ್ವಲಾಭ ಮಾಡಿಕೊಳ್ಳುವ ರಾಜಕೀಯವನ್ನು ಕತೆ ಸಾಂದ್ರವಾಗಿ ಕಟ್ಟಿಕೊಡುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಶೋಷಕರೂ ರಕ್ಷಕರಂತೆ ಕಾಣುವುದು ವಿಪರ್ಯಾಸ. ಈ ಕತೆಯ ತಂತ್ರ ವಿಶೇಷವಾದುದು. ತಂದೆಯನ್ನು ಹುಡುಕುವ ಸಿದ್ದಣ್ಣನ ಮೊದಲನೆಯ ಭಾಗದ ನಂತರ ಪ್ರಾರಂಭ ಮತ್ತು ಉಪಸಂಹಾರವಿದೆ. ಇದರಿಂದ ಕತೆಯ ಆಶಯವನ್ನು ಸಶಕ್ತವಾಗಿ ಓದುಗನಿಗೆ ಮುಟ್ಟಿಸಲು ಸಾಧ್ಯವಾಗಿದೆ. ಕತೆಗಾರರ ಕೌಶಲ್ಯಕ್ಕೂ ಇದು ಮಾದರಿಯಾಗಿದೆ. ವಾಸ್ತವಿಕ ಘಟನೆಗಳಿಗೆ ಕಲ್ಪನೆಯ ಕುಲಾವಿ ಹೊಲಿದು ಕಠಾರಿ ಕತೆ ಕಟ್ಟಬಲ್ಲರು. ʼನಾಲಿಗೆ, ನೆತ್ತರು ಮತ್ತು ಬುದ್ಧʼ ʼಗುಳೇ ಎದ್ದ ಹನುಮʼ, ʼಕಾಂಡಮ್‌ʼ ಕತೆಗಳಲ್ಲಿ ವಾಸ್ತವ- ಕಲ್ಪನೆಗಳನ್ನು ಮೇಳೈಸಿದ ಕಟ್ಟುವಿಕೆಯನ್ನು ಗುರುತಿಸಬಹುದು.

ಚಂದ್ರಪ್ರಭ ಕಠಾರಿಯವರ ಕತೆಗಳು ನಗರ ಕೇಂದ್ರಿತವಾಗಿದ್ದು ಸಮಕಾಲೀನ ಘಟನೆಗಳಿಗೆ ಕನ್ನಡಿ ಹಿಡಿಯುತ್ತವೆ. ಅವರ ಕತೆಗಳಿಗೆ ಭೂತಕಾಲದ ಹಂಗಿಲ್ಲ. ʼಕಾಡುವ ಅಪ್ಪʼ ಕತೆಯಲ್ಲಿ ಹಳೆಯ ಘಟನೆಗಳ ಪರಿಶೀಲನೆ ಇದೆ. ಆದರೆ ಅದು ಕೂಡಾ ವರ್ತಮಾನದ ಕೆದಕು.
ಹಳ್ಳಿಯ ಪ್ರಸ್ತಾಪವು ಅವರ ಕತೆಗಳಲ್ಲಿ ಕ್ವಚಿತ್ತಾಗಿ ಬರುತ್ತದೆ. ʼಗುಳೇ ಎದ್ದ ಹನುಮʼ ಕತೆಯಲ್ಲಿ ಹಳ್ಳಿಯಿಂದ ನಗರಕ್ಕೆ ಬರುವ ಹನುಮನಿಗೆ ನಗರ ರಾಕ್ಷಸ ರೂಪ ತಾಳಿ ನುಂಗಲು ಬರುವಂತೆ ಕಂಡರೆ, ʼಅಂಬೇಡ್ಕರ್‌ ಕಾಲೋನಿʼ ʼಬಟವಾಡೆʼ ಕತೆಗಳಲ್ಲಿ ನಗರದಲ್ಲಿ ವಾಸ ಮಾಡಲು ಕಟ್ಟಡ ಕಾರ್ಮಿಕರು ಪಡುವ ಪಡಿಪಾಟಲಿನ ಚಿತ್ರಣವಿದೆ. ʼಯಾವ ಹೊತ್ತಿಗಾದರೂ ಮೈ ಮೇಲೆ ಬೀಳುವುದೋ ಎಂಬ ದಿಗಿಲು ಹುಟ್ಟಿಸುವಂತಿದ್ದ ಕಾಂಕ್ರೀಟು ಗಗನಚುಂಬಿ ಕಟ್ಟಡಗಳ ಮಧ್ಯೆ ಇರುಕಿಸಿಕೊಂಡು ಏದುಸಿರುಬಿಡುವ, ತಗಡಿನ ಶೆಡ್ಡು ಮನೆಗಳಲ್ಲಿ ವಾಸ ಮಾಡುವವರ ಕುರಿತ ಮಾನವೀಯ ಕಾಳಜಿಯ ಕತೆಗಳಿವು.

ಚಂದ್ರಪ್ರಭ ಕಠಾರಿಯವರ ಕತೆಗಳ ಮುಖ್ಯ ಲಕ್ಷಣವೇ ಮಾನವೀಯ ಸಂಬಂಧಗಳ ಪರಿಶೀಲನೆಯೆಂದು ನನಗೆ ಅನ್ನಿಸಿದೆ. ಗಂಡ- ಹೆಂಡತಿ,
ಕಾರ್ಮಿಕರು- ಕಂಟ್ರಾಕ್ಟರರು, ತಂದೆ- ಮಗ ಈ ಸಂಬಂಧಗಳನ್ನು ಅವಸರವಿಲ್ಲದೆ ಅವರು ಶೋಧಿಸುತ್ತಾ ಹೋಗುತ್ತಾರೆ. ಧರ್ಮ ರಾಜಕಾರಣ, ಜಾತಿ-ಧರ್ಮಗಳ ಕೆಡುಕನ್ನು ಲೇವಡಿಯ ಮೂಲಕ ಸಾಧಿಸುತ್ತಾರೆ. ಅವರ ಕತೆಗಳ ಮಹಿಳೆಯರು ಸ್ತ್ರೀವಾದಿಗಳೆನ್ನಿಸದಿದ್ದರೂ ಸ್ವತಂತ್ರ ವ್ಯಕ್ತಿತ್ವ ಹೊಂದಿದವರು. ಸಾವಧಾನದಿಂದ ಕತೆ ಕಟ್ಟುವ ಕಲೆ ಕಠಾರಿಯವರಿಗೆ ಕರಗತವಾಗಿದೆ. ಆದರೆ ಕೆಲವು ಕತೆಗಳು ವಾಚ್ಯವಾಗುವ ಅಪಾಯದಿಂದ
ತಪ್ಪಿಸಿಕೊಂಡಿಲ್ಲ. ವೃತ್ತಿ ಅನುಭವಗಳ ಕತೆಗಳು ವಾಸ್ತವತೆಯ ಭಾರದಿಂದ, ಕಲ್ಪನೆಯ ಮೆರುಗಿಲ್ಲದೆ ಸೊರಗುವುದೂ ಇದೆ. ಕಠಾರಿಯವರ ಕತೆ ಕಟ್ಟುವ ಕುಶಲತೆಯನ್ನು ಗಮನಿಸಿದಾಗ ಇವು ದೊಡ್ಡ ದೋಷಗಳಲ್ಲ.

ಚಂದ್ರಪ್ರಭ ಕಠಾರಿಯವರು ಅಕಡೆಮಿಕ್ ವಲಯದಿಂದ ಹೊರಗಿರುವವರು. ಸಾಹಿತ್ಯ ವಲಯ ಅವರನ್ನು ಗುರುತಿಸದಿರುವುದಕ್ಕೆ ಈ ಕಾರಣವೂ ಇರಬಹುದು. ಅವರ ಕತೆಗಳಲ್ಲಿ ಅಡಕವಾಗಿರುವ ಅನುಭವ, ಕತೆ ಕಟ್ಟುವ ವಿಧಾನ, ಕತೆಗಳಲ್ಲಿರುವ ಸಂಬಂಧಗಳ ಶೋಧನೆಗಳನ್ನು ಗಮನಿಸಿದರೆ ಅವರೊಬ್ಬ ಗುರುತಿಸಬೇಕಾದ, ಭರವಸೆಯ ಕತೆಗಾರ. ಮುಂದಿನ ದಿನಗಳಲ್ಲಿ ನಮ್ಮನ್ನು ಕಾಡುವ, ಚಿಂತನೆಗೆ ಹಚ್ಚುವ ಇನ್ನಷ್ಟು ಕತೆಗಳು ಅವರಿಂದ ಬರಲಿ ಎಂದು ಹಾರೈಸುತ್ತೇನೆ.

‍ಲೇಖಕರು Admin MM

March 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: