‘ಉಸಿರೇ ಗಾಳಿಯಾದಾಗ’ ಎನ್ನುವುದು ಪುಸ್ತಕವಲ್ಲ… ಕಣ್ಣೀರು

 ಸುಮಾವೀಣಾ, ಹಾಸನ

ಮನುಷ್ಯನ ಸೂಕ್ಷ್ಮ ಸಂವೇದನೆಗಳು, ಭಾವನೆಗಳು ದೇಶಾತೀತ ಹಾಗು ಕಾಲಾತೀತ. ವೈದ್ಯಲೋಕದ ಸಂಶೋಧನೆಗಳ ಫಲುಕುಗಳ ಜೊತೆಗೆ ಸಾಹಿತ್ಯಾತ್ಮಕ ಒಳಸೆಳೆತಗಳನ್ನು ಒಳಗೊಂಡಿರುವ ಈ ಕೃತಿ, ಶ್ವಾಸಕೋಶದ ಕ್ಯಾನ್ಸರಿನೊಂದಿಗೆ ಹೋರಾಡಿ ಕೊನೆಯುಸಿರೆಳೆದ ಭಾರತೀಯ ಮೂಲದ ವೈದ್ಯ ಡಾ. ಪೌಲ್ ಕಲಾನಿಧಿಯವರ ಆತ್ಮಚರಿತ್ರೆಯಾಗಿದೆ. ನರರೋಗ ತಜ್ಞನಾಗುವ ಪರಿಪೂರ್ಣ ಅರ್ಹತೆಗಳನ್ನು ಪಡೆದುಕೊಂಡರೂ ರೋಗಿಗಳನ್ನು ಪೂರ್ಣಾವಧಿಗೆ ತಲುಪಲಾಗದ ಡಾ. ಪೌಲ್ ರವರ ಈ ಆತ್ಮಚರಿತ್ರೆ ಅವರ ಮಾನಸಿಕ ತೊಳಲಾಟವನ್ನೂ, ವೈದ್ಯಲೋಕದ ಭಾವನಾತ್ಮಕ ಪ್ರಪಂಚವನ್ನು ತೆರೆದಿಡುತ್ತದೆ.

When Breath becomes air “ಉಸಿರೇ ಗಾಳಿಯಾದಾಗ” ಡಾ. ಪೌಲ್ ಕಲಾನಿಧಿ ಎಂಬ ಭಾರತ ಮೂಲದ ಅಮೇರಿಕ ನರರೋಗತಜ್ಞನ ಆಂಗ್ಲ ಕೃತಿಯನ್ನು ಡಾ. ಸಿ. ನಂಜುಂಡ ಅವರು ಕನ್ನಡಕ್ಕೆ ತಂದಿದ್ದಾರೆ. ನೈತಿಕತೆ, ಪ್ರಾಮಾಣಿಕತೆ, ಶಾರೀರಿಕ, ಆಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಮುಂತಾದ ಪರಿಭಾಷೆಗಳ ಮೂಲಕ ವೈದ್ಯ ಲೋಕದ ಮಿಂಚಿನ ಪರ್ಯಟನೆಯನ್ನು  ಮೂಡಿಸುವ ಕೃತಿ. ವೈದ್ಯಕೀಯ ವಿದ್ಯಾರ್ಥಿಗಳ ತಲ್ಲಣಗಳನ್ನು ಎಳೆ ಎಳೆಯಾಗಿ ಬಿಡಿಸುವ ಕೃತಿ. ವೈದ್ಯನ ಮಗನಾಗಿ ಸ್ವತಃ ವೈದ್ಯನಾಗಿ ಕ್ಯಾನ್ಸರ್ ರೋಗಕ್ಕೆ, ತನ್ನದೇ ಸಹೋದ್ಯೋಗಿಗಳಿಂದ ಚಿಕಿತ್ಸೆಗೆ ಒಳಗಾಗುವ ಡಾ. ಪೌಲ್ ಅನುಭವಿಸುವ ತಲ್ಲಣಗಳು ಈ ಕೃತಿಯ ಮುಖ್ಯ ವಸ್ತುವಿಷಯ “ನನಗೆ ಇಂಥದ್ದೆ ಮಾತ್ರೆ ಕೊಡಿ (Tarceva)” ಎಂದು ಕೇಳುವ ಇನ್ಟ್ಯೂಬೇಕಶನ್ ಬದಲಾಗಿ “ಕಂಫರ್ಟ್ ಕೇರ್” ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮಟ್ಟಿಗೆ ಪೌಲ್ ಕ್ಯಾನ್ಸರ್ ನಿಂದ ಜರ್ಜರಿತರಾಗಿರುತ್ತಾರೆ.

ಸಾವಿನ ಸುಳಿಯಿಂದ ನಾನು ಹೊರಬರಲಾರೆ ಅನ್ನಿಸಿದಾಗ ಮೇ 2013ರಲ್ಲಿ ಪೌಲ್ ತನ್ನ ಆತ್ಮೀಯ ಗೆಳೆಯನಿಗೆ ಮಿಂಚಂಚೆಯ ಮೂಲಕ “ನನಗೆ ಕೊನೆ ಹಂತದ ಕ್ಯಾನ್ಸರ್ ಇದೆ. ನಾನು ಈಗಾಗಲೇ ಬ್ರಾಂಟಿಸ್, ಕೀಟ್ಸ್, ಮತ್ತು ಸ್ಟೀಫನ್ ಗಿಂತ ಹೆಚ್ಚಿನ ಕಾಲ ಬದುಕಿದ್ದೇನೆ. ಆದರೆ ಕೆಟ್ಟ ಸುದ್ದಿ ಎಂದರೆ ನಾನು ಅವರಂತೆ ಏನನ್ನೂ ಸಹ ಬರೆಯಲಾಗಲಿಲ್ಲ…” ಎಂಬ ಸಂದೇಶವನ್ನು ಕಳಿಸುತ್ತಾರೆ.

ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡಿದ್ದ ಕೃತಿಕಾರರು ಟಿ.ಎಸ್ ಎಲಿಯಟ್, ಸ್ಯಾಮ್ಯುವೆಲ್ ಬೆಕೆಟ್, ಜಿರಮೈ ಲಿವೆನ್ ಮುಂತಾದವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ತನ್ನನ್ನು ನೋಡಿಕೊಳ್ಳುತ್ತಿದ್ದ ಡಾ. ಎಮ್ಮಾರನ್ನು ನನ್ನ ಬಾಸ್ ಎಂದೆ  ಕರೆಯುತ್ತಿದ್ದ ಡಾ. ಪೌಲ್ ಚಿಕಿತ್ಸೆಗೆ ತನ್ನನ್ನು ತಾನು ಮಾನಸಿಕವಾಗಿ ತಯಾರಿ ಮಾಡಿಕೊಂಡ ರೀತಿ ಪ್ರತಿಯೊಬ್ಬರ ಕಣ್ಣನ್ನೂ ಹನಿಗಣ್ಣಾಗಿಸುತ್ತದೆ. ಡಾ. ಪೌಲ್ ತಾನು ನೋಡಿಕೊಂಡ ರೋಗಿಗಳ ಕಥಾನಕದಲ್ಲಿ ತಾನೂ ಪಾತ್ರವಾಗುವ ಸಂವೇದನ, ಹಾಗೂ ಸಂಶೋಧನ ಮನಸ್ಸು ಎರಡೂ ಇಲ್ಲಿವೆ. ದುರಂತವೆಂದರೆ ನುರಿತ ನರರೋಗತಜ್ಞ ಪೌಲ್ ಅವರ ವೈದ್ಯಕೀಯ ಸೇವೆ ಕಡೆಗೂ ರೋಗಿಗಳಿಗೆ ದೊರೆಯದೆ ಇರುವುದು. ಈ ಕೃತಿ ಯುವ ವೈದ್ಯ  ಪ್ರಶಿಕ್ಷಣಾರ್ಥಿಗಳ ಮಾರ್ಗದರ್ಶಿ ಎಂದರೂ ತಪ್ಪಿಲ್ಲ.

ಡಾ. ಲೂಸಿ ಪೌಲ್ ಅವರ ಪತ್ನಿ. ಡಾ. ಪೌಲ್ ಅವರ ನಿಧನಾನಂತರ ಈ ಕೃತಿಯನ್ನು ಪೂರ್ಣಗೊಳಿಸುತ್ತಾರೆ. “ಶಬ್ದಗಳು ಬಹಳ ವರ್ಷಗಳ ಕಾಲ ಬದುಕುತ್ತವೆ. ಆದರೆ ನಾನಲ್ಲ…” ಎಂದು ಮೂಲಕೃತಿಕಾರರು ತನ್ನ ವರ್ಷವನ್ನೂ ದಾಟಿರದ ಮಗಳು ಕ್ಯಾಡಿಯನ್ನು ನೆನಪಿಸಿಕೊಂಡು    ಮಗಳು ಎಲಿಜಬೆತ್ ಕ್ಯಾಡಿಯನ್ನು “ನನ್ನ ನಂತರ ಈ ಭೂಮಿಯಲ್ಲಿ ನನ್ನ  ಏಕೈಕ ಸಾಕ್ಷಿ…” ಎಂದು ದಾಖಲಿಸಿದ ಸಂಕ್ಷಿಪ್ತ ಆತ್ಮಚರಿತ್ರೆ. ಶಸ್ತ್ರ ಚಿಕಿತ್ಸೆಯ ನಂತರ ಡಾ. ಪೌಲ್ ಹೊಲಿಗೆ ಹಾಕುವಾಗ “ನನ್ನ ಮೆದುಳು ಮತ್ತು ಕಣ್ಣು ಎರಡಕ್ಕೂ ಸರಿಯಾದ ತರಬೇತಿ ಬೇಕು ಎನ್ನುವ ಭಾವನೆ ನನಗೆ ಈ ಕ್ಷಣಕ್ಕೆ ಬಂದಿತ್ತು” ಎಂದು ಬರೆದುಕೊಳ್ಳುವಲ್ಲಿ, “ಪುಸ್ತಕ ಓದಿ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಬೇಸರ ಎನಿಸುತ್ತದೆ ಆದರೆ ರೋಗಿಗೆ ನಿಜವಾದ ಚಿಕಿತ್ಸೆ ನೀಡುವುದು ತುಂಬಾ ಜವಾಬ್ದಾರಿ ಅನ್ನಿಸುತ್ತದೆ” ಎಂದು ಬರೆದುಕೊಂಡಿರುವಲ್ಲಿ ವೈದ್ಯನಿಗೆ ಬೇಕಾದ ಬದ್ಧತೆಯ ಕುರಿತು ಅವರೆಷ್ಟು ಜಾಗೃತರಾಗಿದ್ದರು ಎಂದು ತಿಳಿಯುತ್ತದೆ.

ರೋಗಿಗಳಿಗೆ ಕ್ಯಾನ್ಸರ್ ಇದೆ ಎಂದು ತಿಳಿಸುವುದೇ ಧರ್ಮ ಸಂಕಟ ಎಂದು ಹೇಳುವುದರ ಮೂಲಕ ವೈದ್ಯರೂ ಕೂಡ ಕ್ಯಾನ್ಸರ್ ರೋಗಿಗಳ ಸಂಕಟಕ್ಕೆ ಸ್ಪಂದಿಸುವ ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಭವಿಷ್ಯದಲ್ಲೊಮ್ಮೆ ನೋವು ನೀಗಿಸುವ ಸಲುವಾಗಿಯೇ ವೈದ್ಯ ಲೋಕದಲ್ಲಿ ಹೊಸ ಸಂಶೋಧನೆಗಳಿಗೆ ತೊಡಗಿಕೊಳ್ಳುವ ಯುವ ವೈದ್ಯರ  ಉತ್ಸಾಹಿ ಚಿಂತನೆ ಇಲ್ಲಿದೆ. ಈ ಕೃತಿಯಲ್ಲಿ JUDGEMENT CALL (ಜಡ್ಜ್ಮೆಂಟ್ ಕಾಲ್) ಎಂಬ ಪದ ಬರುತ್ತದೆ. ನಮ್ಮ ಭಾರತೀಯ ಕಾವ್ಯ ಮೀಮಾಂಸೆಯ ಧ್ವನಿ ಇದ್ದಂತೆ. JUDGEMENT ಅನ್ನುವುದು   ಯಾವುದಕ್ಕೆ, ಕಾಯಿಲೆಗೆ ಚಿಕಿತ್ಸೆ ಕೊಡುವುದಕ್ಕೋ, ಕೊಡಿಸುವುದಕ್ಕೋ, ಚಿಕಿತ್ಸೆಗೆ ಮಾನಸಿಕವಾಗಿ ಸ್ಪಂದಿಸುವುದಕ್ಕೋ… ಕಾಯಿಲೆ ಹತ್ತಿರ ಬಂದಿದೆ ದೂರ ತಳ್ಳಬಹುದು ಎಂಬುದಕ್ಕೋ… ಇನ್ನು ಆಯುಷ್ಯ ಮುಗಿಯಿತು ಎಂಬುದಕ್ಕೊ ಹೀಗೆ..! ಅದರಲ್ಲೂ ಆಸ್ಪತ್ರೆಗೆ ದಾಖಲಾಗುವ ರೋಗಿ, ಶಸ್ತ್ರ ಚಿಕಿತ್ಸೆಗೆ ಒಳಗಾಗುವ ರೋಗಿ ವೈದ್ಯರಲ್ಲೂ, ಸಂಬಂದಿಗಳಲ್ಲೂ ಭರವಸೆ ಮೂಡಿಸಿ ಗೆಲುವು ಮೂಡಿಸಿ ತಕ್ಷಣಕ್ಕೆ ಉಸಿರು ಚೆಲ್ಲುವ ನೆನಪನ್ನು ಬಿಟ್ಟು ಹೋಗುವ ಮನಸ್ಸುಗಳನ್ನು ಚಿಕಿತ್ಸಕ ದೃಷ್ಟಿಯಿಂದ ಪರಿಚಯಿಸಿರುವುದು ಕೃತಿಯ ಹೆಗ್ಗಳಿಕೆ.

ರೋಗಿಯೊಬ್ಬ ವೈದ್ಯನಾಗಿ, ವೈದ್ಯನೊಬ್ಬ ರೋಗಿಯಾಗಿ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸಕನಾಗುವುದು, ಚಿಕಿತ್ಸೆಗೆ ಒಳಪಡುವ ವೈರುಧ್ಯವನ್ನೂ ಬಹಳ ಚೆನ್ನಾಗಿ ಎಳೆ ಎಳೆಯಾಗಿ ಈ ಕೃತಿ ಬಿಚ್ಚಿಡುತ್ತದೆ. ಅವಧಿ ಪೂರ್ವ ಹೆರಿಗೆ, ಸಹಜ ಹೆರಿಗೆ, ಸಿಝೇರಿಯನ್ ಹೆರಿಗೆ, ಬ್ರೈನ್ ಹೆಮರೇಜ್, ಪಿಟ್ಸ್, ಮಲಬದ್ಧತೆ ಟೋಕೋಮೀಟರ್, ಎಮ್ ಆರ್ ಐ ಕ್ಯಾನ್ಸರ್, ಇನಕ್ಯೂಬೇಶನ್, ರೇಡಿಯಾಲಜಿ, ಕಿಮೋಥೆಪಿ, ಐಸಿಯು, ಇಸಿಜಿ, ಪರಿಟೋನಿಯಮ್, ಪೋರ್ಸಿಪ್ಸ್, ಮುಂತಾದ ಪದಗಳು ಮತ್ತೆ ಮತ್ತೆ ಬರುತ್ತವೆ. ಓದುಗರೂ  ಚಿಕಿತ್ಸೆಗೆ ಒಳಗಾದಾಗ ಆದ ಅನುಭವಗಳನ್ನು ಮೆಲುಕು ಹಾಕುವಂತೆ ಈ ಕೃತಿ ನಿರೂಪಣೆಯಾಗಿದೆ.

ಡಾ. ನಂಜುಂಡರವರ ಮೂಲಕ ಕನ್ನಡಕ್ಕೆ ಬಂದಿರುವ ಈ ಕೃತಿ ಇಂಗ್ಲೀಷಿನದ್ದು ಅನ್ನಿಸದೆ ಕನ್ನಡದ್ದೆ ಅನ್ನಿಸುತ್ತದೆ, ಬಿಡದೆ ಓದಿಸಿಕೊಂಡು ಹೋಗುತ್ತದೆ. ಇಲ್ಲಿ ಅನುವಾದಕರು ಮೂಲ ಕೃತಿಯ ಆಶಯಗಳಿಗೆ ಚ್ಯುತಿ ಬಾರದಂತೆ, ವೈದ್ಯಲೋಕದ ಪರಿಭಾಷೆಗಳನ್ನು ಅಧ್ಯಯಿಸಿ,  ಸಾಕಷ್ಟು ಪದಗಳ ಅಧ್ಯಯನಕ್ಕಿಳಿದು ಓದುಗರನ್ನು ತಲುಪಿದ್ದಾರೆ ಎಂದರೆ ತಪ್ಪಾಗದು. Words travels World ಎಂಬುದಕ್ಕೆ  ಅನ್ವರ್ಥವಾಗಿರುವ ಡಾ. ನಂಜುಂಡರವರ ಉಸಿರೇ ಗಾಳಿಯಾದಾಗ ಕೃತಿ ಮೈಸೂರಿನ ದೀಕ್ಷಾ ಪ್ರಕಾಶನದಿಂದ ಪ್ರಕಾಶಿಸಲ್ಲಪಟ್ಟಿದೆ. ಕೃತಿಯ ಬೆಲೆ ಇನ್ನೂರು ರೂ., ಗಳು.

ಸಾಮಾನ್ಯ ಓದುಗರಾಗಿ, ಸಾಹಿತ್ಯದ ಓದುಗರಾಗಿ,  ಹೇಗೆ ಓದಿದರೂ ಚಿಂತನೆಗಳು, ತಿಳಿವಳಿಕೆಗಳು, ಅನುಭವಗಳು, ಮನಸ್ಸಿನ ಒಳ ಪದರುಗಳಲ್ಲಿ ದಾಖಲಾಗುತ್ತವೆ. ನಮ್ಮ ಪರಿಚಿತ ವೈದ್ಯರ ಕತೆಯೇನೋ ನಾವು ನೋಡಿರುವ ವೈದ್ಯರ ಪೈಕಿ ಇವರೂ ಒಬ್ಬರು ಛೆ… ಹೀಗಾಗಬಾರದಿತ್ತು..! ಎಂದು ಓದುಗರು ತಾವು ಕಂಡ ಸಹೃದಯಿ ವೈದ್ಯರನ್ನು ಕ್ಷಣ ಕಾಲ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಪುಸ್ತಕದ ಬಹಳಷ್ಟು ಭಾಗಗಳಲ್ಲಿ ಇದು ವೈದ್ಯರೊಬ್ಬರ ಆತ್ಮಚರಿತ್ರೆ ಎಂದು ಅನ್ನಿಸುವುದೇ ಇಲ್ಲ. ಸಾಹಿತ್ಯದ ವಿದ್ಯಾರ್ಥಿಯೊಬ್ಬ ತಾನು ದಾಖಲಿಸಿದ  ತನ್ನದೇ ಓದಿನ ಟಿಪ್ಪಣಿಗಳು ಅನ್ನಿಸುತ್ತದೆ.

ಇಲ್ಲಿ ಮೂಲ ಲೇಖಕರ “ನನ್ನ ಪ್ರಕಾರ ಭಾಷೆ ಒಂದು ಅಗೋಚರ ಪ್ರಬಲಶಕ್ತಿ” ಎಂಬ ಮಾತು ಸಾರ್ವಕಾಲಿಕವಾಗಿದೆ. ಬದುಕಿನ ಭಾಷೆ, ಖುಷಿಯ ಭಾಷೆ, ಹಸಿವಿನ ಭಾಷೆ, ಪ್ರೀತಿಯ ಭಾಷೆ, ಸಂಬಂಧಗಳ ಭಾಷೆ, ದ್ವೇಷದ ಭಾಷೆ, ಬೇಸರದ ಭಾಷೆ, ಕೆಲವೊಮ್ಮೆ ರಕ್ತದ ಭಾಷೆ, ಜೀರ್ಣಾಂಗದ ಭಾಷೆ, ಹೃದಯ ಬಡಿತದ ಭಾಷೆಯಾಗಿ ಈ ಕೃತಿ ಇದೀಗ ನಮ್ಮ ಕೈಯಲ್ಲಿದೆ.

‍ಲೇಖಕರು nalike

July 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಎಂ. ಕುಸುಮ

    ಪುಸ್ತಕ ಪರಿಚಯ ಆಪ್ತವಾಗಿದೆ, ಓದುವ ಕುತೂಹಲ ಮೂಡಿಸಿದೆ, ಧನ್ಯವಾದಗಳು.

    ಪ್ರತಿಕ್ರಿಯೆ
  2. Likhitha

    Review of the book “when breath becomes air”made mee soo attractive ,am soo excited to read the whole book…..
    Thankyou for this brief review.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: