ದಿನೇಶ್ ನಾಯಕ್ ಕಾಡುವ ಕತೆ- ‘ಚಾರ್ವಾಕನೂ.. ಆಟದ ಆಚಾರ್ಯರೂ..’

 ಡಾ. ದಿನೇಶ್ ನಾಯಕ್

“ಜನ್ರ ಅತ್ರಾಣ ಜಾಸ್ತಿಯಾಯ್ತು, ಕಾಲ ಕೆಟ್ಟು ಹೋಯ್ತು. ಇಲ್ಲಾಂದ್ರೆ ಮಾವು, ಗೇರು ಮರಗಳಲ್ಲಿ ಹೂ ಬಿಟ್ಟು ಮಿಡಿ, ಹಣ್ಣು ಆಗೋ ಈ ಹೊತ್ತಿಗೆ ಆಟಿ ತಿಂಗಳ್ಲಲ್ಲಿ ಹೊಡೆಯೋ ಹಾಗೆ ಹೀಗೆ ಮಳೆ ಬರೋದುಂಟಾ” ಅಂತ ರಿಕ್ಷಾದ ಕಾಂತಣ್ಣ ಹಾಜಿಯಬ್ಬರ ಹತ್ತಿರ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಗೆ ಮಾತ್ರ ಸುರಿಯುತ್ತಿರುವ ಭಾರೀ ಮಳೆಯ ಬಗ್ಗೆ ಬೆಳ್ಳಂಬೆಳಗ್ಗೆ ಮಾತಿಗೆ ಶುರು ಹಚ್ಚಿದ್ದರು. ಈ ವರ್ಷ ಗದ್ದೆ, ತೋಟ, ವ್ಯಾಪಾರ ಎಲ್ಲಾ ಹಾಳಾಗಿ ಹೋಯಿತು, ಪ್ರಳಯ ಇನ್ನು ಹೆಚ್ಚು ದೂರ ಇಲ್ಲ ಎಂಬುದು ಕಾಂತಣ್ಣನ ಒಟ್ಟು ಮಾತಿನ ಧ್ವನಿಯಾಗಿತ್ತು. ಕಾಂತಣ್ಣ ಹೇಳೋದ್ರಲ್ಲೂ ಯಥಾರ್ಥ ಇದೆ. ಹಿಂದೆ ಯಾವತ್ತೂ ಧನುರ್ಮಾಸದ ಮಾಗಿಯ ಕಾಲದಲ್ಲಿ ಹೀಗೆ ಆದದ್ದಿಲ್ಲ. ಈ ವರ್ಷ ಬಹಳ ವಿಚಿತ್ರ. ಬೆಳಗ್ಗೆ ಕೊರೆಯುವ ಚಳಿ, ಮಧ್ಯಾಹ್ನ ಮೈ ಮೇಲೆ ಬೊಕ್ಕೆ ಏಳುವಂಥಾ ಸುಡು ಬಿಸಿಲು, ಸಂಜೆಗೆ ಮೋಡ ಮುಸುಕಿ ಸಿಡಿಲು-ಗುಡುಗು-ಮಿಂಚು ಸಮೇತ ಜೋರು ಮಳೆ.

ಈ ದೇಶಕ್ಕೆ ಏನು ಮಾರಿ ಹೊಡೆದಿದೆಯೋ ಏನೋ ಅಂತ ಯೋಚಿಸುತ್ತಿದ್ದ ಹಾಜಿಯಬ್ಬರು, ಒಂದು ಪಾಟೆಯಲ್ಲಿರುವ ಬಿಸಿ ಬಿಸಿ ಚಹವನ್ನು ಇನ್ನೊಂದು ಪಾಟೆಗೆ ಮೇಲಿನಿಂದ ಹೊಡೆಯುತ್ತಾ ‘ಹೌದು ಕಾಂತಣ್ಣ ಈಗೀಗ ಮಳೆ, ಚಳಿ, ಬೇಸಿಗೆ ಎಲ್ಲ ಕಾಲಗಳನ್ನು ಒಂದೇ ದಿನದಲ್ಲಿ ನೋಡುವಂತಾಗಿದೆ, ಏನು ದುರವಸ್ಥೆ ಕಾದಿದೆಯೋ ಏನೋ, ನಮ್ಮನ್ನ ಮೇಲಿರುವ ಅಲ್ಲಾನೇ ಕಾಪಾಡ್ಬೇಕು’ ಅಂತ ಉಸುರುತ್ತಾ ಚಾ ಕೇಳಿದವರ ಟೇಬಲ್‌ನ ಮೇಲೆ ಚಹದ ಲೋಟವನ್ನು ತಂದಿಟ್ಟರು. ಅದೇ ವೇಳೆಗೆ ದೇವಪುರದ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಪರಿಚಾರಿಕೆ ಕೆಲಸವನ್ನು ಮಾಡುತ್ತಿರುವ ರಾಮಚಂದ್ರ ರಾಯರು ವೇಗ ವೇಗವಾಗಿ ಹೆಜ್ಜೆ ಹಾಕುತ್ತಾ ಹೊಟೇಲ್ ಕಡೆಗೆ ಬರುತ್ತಿರುವುದನ್ನು ಕಂಡರು. ಯಾವತ್ತೂ ನನ್ನ ಹೊಟೇಲ್ ಕಡೆಗೆ ಕಾಲಿಡದಿದ್ದ ಈ ರಾಯರ ಸವಾರಿ ಇವತ್ತು ಏನು ಈ ಕಡೆಗೆ ಎಂದು ಯೋಚಿಸಿ, ದೂರದಿಂದಲೇ ಕರೆದು, ‘ಓಯ್ ರಾಯರೇ.., ಅಪರೂಪದವರು.., ಏನು ಈ ಕಡೆ…, ಬನ್ನಿ ಕೂತ್ಕೊಳ್ಳಿ…’ ಎಂದು ವಿಶೇಷವಾಗಿ ಉಪಚರಿಸಿದರು.

ದೇವರ ಕೈಂಕರ್ಯದಲ್ಲಿ ಸದಾ ಕಾಯಾ ವಾಚಾ ಮನಸಾ ತಮ್ಮನ್ನು ತೊಡಗಿಸಿಕೊಂಡು ಒಂದು ಕ್ಷಣವೂ ಬಿಡುವಿಲ್ಲದೆ ಇರುತ್ತಿದ್ದ ರಾಯರು, ಮುಂಜಾನೆ ಎದ್ದು, ಕೊರೆಯುವ ಚಳಿಯಲ್ಲಿ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಾಜಿಯಬ್ಬರ ಹೊಟೇಲ್ ಕಡೆಗೆ ಬಂದಿದ್ದರು. ಆದ್ರೆ ರಾಯರ ಮುಖದಲ್ಲಿ ಆತಂಕ ಮನೆ ಮಾಡಿತ್ತು. ಸ್ವಲ್ಪ ಮಟ್ಟಿಗೆ ವಿಚಲಿತರಾಗಿದ್ದರು ಕೂಡಾ. ಹಾಜಿಯಬ್ಬರಿಂದ ತಕ್ಕೊಂಡ ಬೀಡವನ್ನು ಬಿಚ್ಚಿ ಅಡಿಕೆ ತುಂಡು ಬಾಯಿಗೆ ಹಾಕಿ, ಎಲೆಗೆ ನಿಧಾನಕ್ಕೆ ಸುಣ್ಣ ಹಚ್ಚುತ್ತಾ, ಆಚೀಚೆ ನೋಡುತ್ತಾ ಮಡಚಿದ ವೀಳ್ಯವನ್ನು ಬಾಯೊಳಗೆ ಹಾಕಿದರು. ಅವರು ಕೂತಲ್ಲಿ ಕೂರುತ್ತಿರಲಿಲ್ಲ, ನಿಂತಲ್ಲಿ ನಿಲ್ಲುತ್ತಿರಲಿಲ್ಲ, ಮಾತಲ್ಲಿ ಹೊಂದಾಣಿಕೆ ಕಾಣಿಸುತ್ತಿರಲಿಲ್ಲ. ಆಗಾಗ ಯೋಚನೆಗೆ ಬೀಳುತ್ತಿದ್ದರು. `ನಮ್ಮ ಚಾರ್ವಾಕ ಎಲ್ಲೋ ಹೋಗಿದ್ದಾನೆ, ಸಾಹೇಬ್ರೆ… ನಿಮ್ಮ ಹತ್ರ ಏನಾದ್ರೂ ಹೇಳಿದ್ದಾನಾ ಮತ್ತೆ…’ ಎರಡು ದಿನಗಳಿಂದ ಮನೆಯಲ್ಲಿರದ ತಮ್ಮ ಅಳಿಯನ ಬಗ್ಗೆ ರಾಯರು ವಿಚಾರಿಸತೊಡಗಿದರು. ರಾಯರ ಮಾತು ಕೇಳಿ ಹಾಜಿಯಬ್ಬರು ಸ್ವಲ್ಪ ಟೆನ್ಶನ್ ಮಾಡಿಕೊಂಡು, `ಅರೆ ಎಲ್ಲಿ ಹೋದ ನಮ್ಮ ಹುಡುಗ’ ಎಂದು ಚಿಂತಿಸುತ್ತಾ ಕಾಂತಣ್ಣನ ಮುಖ ನೋಡಿದರು. ಅಲ್ಲಿಯವರೆಗೆ ಪರಿಸರ, ವಾತಾವರಣ-ಹವಾಗುಣ, ದೇಶ ಅಂತ ಉತ್ಸಾಹದಲ್ಲಿದ್ದ ಕಾಂತಣ್ಣ ಕೂಡಾ ಒಮ್ಮೆಲೆ ಮುಖ ಸಪ್ಪೆ ಮಾಡಿಕೊಂಡರು.

ಹಾಗೆ ನೋಡಿದ್ರೆ ರಾಮಚಂದ್ರ ರಾಯರು ಚಾರ್ವಾಕನಿಗೆ ಹೆಣ್ಣು ಕೊಟ್ಟ ಮಾವನೂ ಅಲ್ಲ, ಸೋದರ ಮಾವನೂ ಅಲ್ಲ. ಅಣ್ಣನ ಹೆಂಡತಿಯ ತಂದೆ. ರಾಯರು ಆ ದಿನ ರಾತ್ರಿ ಮತ್ತೆ ದೇವಸ್ಥಾನದಲ್ಲಿ ಭಜನೆ, ಪೂಜೆ ಎಂದೆಲ್ಲ ವ್ಯವಸ್ಥೆ ಮಾಡಿದ್ದರು. ಶುಕ್ರವಾರದ ಆ ವಿಶೇಷ ಪೂಜೆ ಬೇರೆ ಯಾವ ಕಾರಣಕ್ಕಾಗಿಯೂ ಏರ್ಪಡಿಸಿದ್ದಲ್ಲ. ಮನೆ-ಮಠ-ಊರು ಬಿಟ್ಟ ಚಾರ್ವಾಕ ಮರಳಿ ಮನೆಗೆ ಬರಲೆಂದು ದೇವರಿಗೆ ಹರಕೆ ಹೊತ್ತಿದ್ದರು ಚಾರ್ವಾಕನ ಕುಟುಂಬಸ್ಥರು. ಅದರ ಉಸ್ತುವಾರಿ ಕುಟುಂಬದ ಹಿರಿಯರಾದ ರಾಮಚಂದ್ರ ರಾಯರ ಹೆಗಲ ಮೇಲಿತ್ತು. ಮಾತ್ರವಲ್ಲದೇ ಎಲ್ಲ ಬಿಟ್ಟು ಹೊರಟು ಹೋದ ತಂದೆಯಿಲ್ಲದ ಅಳಿಯನ ಮೇಲೆ ಸ್ವಲ್ಪ ಹೆಚ್ಚು ಎನ್ನುವಷ್ಟು ಮಮತೆ-ಮಮಕಾರವೂ ರಾಯರಿಗಿತ್ತು. ಹಾಗಾಗಿ ಬೆಳಗ್ಗೆ ಸೂರ್ಯೋದಯ ಕಳೆದು ಒಂದು ಗಂಟೆಯ ಬಳಿಕ ನೇರವಾಗಿ ದೇವಪುರದ ಹಾಜಿಯಬ್ಬರ ಹೊಟೇಲ್ ಕಮ್ ಅಂಗಡಿಯಲ್ಲಿ ಸೇರಿದ ನೆರೆಕರೆಯವನ್ನು ಆಹ್ವಾನಿಸಲು ಮತ್ತು ತನ್ನ ಅಳಿಯನ ಬಗ್ಗೆ ಏನಾದರೂ ಸುದ್ದಿ ಸಿಕ್ಕೀತೇ ಎಂದು ನೋಡಲು ರಾಯರು ಅಂಗಡಿ ಕಡೆಗೆ ಬಂದಿದ್ದರು. ಆದರೆ ರಾಯರು ಹೊತ್ತು ತಂದ ಸುದ್ದಿಯಿಂದ ಸ್ತಬ್ಧರಾದ ಜನ ಯಾರೂ ಹೆಚ್ಚು ಏನನ್ನೂ ರಾಯರಲ್ಲಿ ಕೇಳುವ ಗೋಜಿಗೆ ಹೋಗಲಿಲ್ಲ. ಎಲ್ಲರೂ ರಾಯರನ್ನು ಸಹಾನುಭೂತಿಯಿಂದ ನೋಡಿದ್ದು ಬಿಟ್ರೆ ಬೇರೇನನ್ನೂ ಹೇಳಲಿಲ್ಲ. ರಾಯರಿಗೆ ಯಾವ ಹೊಸ ಸುದ್ದಿಯೂ ಸಿಗಲಿಲ್ಲ. ಅಲ್ಲಿದ್ದವರಿಗೆಲ್ಲ ಹೇಳುವುದನ್ನು ಹೇಳಿ ಮನೆ ಹಾದಿ ಹಿಡಿದರು.

ರಾತ್ರಿ ಊರ ಹುಡುಗರೆಲ್ಲ ಸೇರಿ ಭಜನೆ ಶುರುವಾಗಿತ್ತು. ಮೈಕಲ್ಲಿ ತಮ್ಮ ಧ್ವನಿ ಲೋಕಕ್ಕೆ ಕೇಳಬೇಕೆಂಬ ಅಸೆಯಿಂದಲೋ ಅಥವಾ ನಿಜ ಭಕ್ತಿಯಿಂದಲೋ ಗೊತ್ತಿಲ್ಲ, ಅಂತೂ ಸಂಗೀತದ ಯಾವ ಗಂಧ ಗಾಳಿ ಗೊತ್ತಿಲ್ಲದಿದ್ದರೂ ತಮ್ಮದೇ ರಾಗ-ತಾಳದಲ್ಲಿ ಜೋರಾಗಿ ಹಾಡತೊಡಗಿದ್ದರು. ರಿಕ್ಷಾದ ಕಾಂತಣ್ಣ ಪಕ್ಕದ ಮನೆಯ ಗಿರಿಯಪ್ಪಣ್ಣನನ್ನು ರಸ್ತೆ ಬದಿಗೆ ಎಳೆದುಕೊಂಡು ಹೋಗಿ ಏನೋ ಗುಸು ಗುಸು ಮಾತಾಡುತ್ತಿದ್ದರು. ಈ ಕಾಂತಣ್ಣನಿಗೆ ಯಾವಾಗಲೂ ಎಲ್ಲರಲ್ಲಿಯೂ ಎಲ್ಲದರಲ್ಲೂ ಅನುಮಾನವೇ ಅಂತ ಗಿರಿಯಪ್ಪಣ್ಣ ಹೆಚ್ಚು ತಲೆಕೆಡಿಕೊಳ್ಳದೆ ಯಾಂತ್ರಿಕವಾಗಿ ತಲೆಯಾಡಿಸುತ್ತಿದ್ದರು. ಅಲ್ಲಿ ಸೇರಿದ್ದ ಜಾತಿ ಬಾಂಧವರ ಬಾಯಲ್ಲಿ ಚಾರ್ವಾಕನದ್ದೇ ವಿಷಯ. ಚಾರ್ವಾಕ ಹೇಳದೇ ಕೇಳದೆ ಊರು ಬಿಟ್ಟು ಹೋದದ್ದಕ್ಕೆ ಚಾರ್ವಾಕನ ತಾಯಿ ಮತ್ತು ಹೆಂಡತಿ ಮಕ್ಕಳ ಮೇಲೆ ಅನುಕಂಪ ಸೂಚಿಸಿದ ಒಂದು ಗುಂಪು ಒಂದೆಡೆ, ಮತ್ತೊಂದೆಡೆ ಇನ್ನು ಕೆಲವರು ಏನೇನೋ ಕಥೆ ಕಟ್ಟುತ್ತಿದ್ದರು. ಕೆಲವರ ಮಾತಲ್ಲಂತೂ ಬರೇ ಕುಹಕ, ಕೊಂಕು ಮಾತ್ರ ತುಂಬಿತ್ತು. “ಏನೇ ಇದ್ದರೂ ಮಾತಾಡಿ ಸರಿ ಮಾಡಬಹುದಿತ್ತು, ಹೀಗೆ ಹೇಳದೆ ಕೇಳದೆ ಎದ್ದು ಹೋದ್ರೆ ಹೆಂಡತಿ ಮಕ್ಕಳನ್ನು ನೋಡಿಕೊಳ್ಳೋರು ಯಾರು? ಸ್ವಲ್ಪಾನು ಜವಾಬ್ದಾರಿ ಇಲ್ಲ ಈ ಮನುಷ್ಯನಿಗೆ” ಹೆಣ್ಣು ಕೊಟ್ಟ ಅತ್ತೆ-ಮಾವಂದಿರು ಭುಸುಗುಟ್ಟುತ್ತಿದ್ದರು. ಅದಕ್ಕೆ ಇನ್ನೂ ಕೆಲವು ಹೆಂಗಸರು ತುಪ್ಪ ಸುರಿಯುತ್ತಿದ್ದರು. “ಮದ್ದಿಗೆ ಕಾಸು ಇನ್ನು ಯಾರಲ್ಲಿ ಕೇಳಲಿ? ಎಲ್ಲಿಗೆ ಹೋದ್ನೋ ಏನಾದ್ನೋ? ಮೊದ್ಲಿಂದಲೂ ಹಾಗೆ. ಹೇಳಿದ್ದನ್ನು ಕೇಳ್ತಾನೂ ಇರ್ಲಿಲ್ಲ, ಯಾವುದನ್ನೂ ಹೇಳ್ತಾನೂ ಇರ್ಲಿಲ್ಲ, ಯಾರ ಬಗ್ಗೆಯೂ, ಯಾವುದರ ಬಗ್ಗೂ ತಲೆಕೆಡಿಸಿಕೊಳ್ತಿರಲಿಲ್ಲ” ಅಂತ ಹೆತ್ತ ತಾಯಿ ಗೋಗರೆಯುತ್ತಿದ್ದಳು.

ಅವಳ ಗೋಳಾಟ ಇನ್ನೂ ವಿಪರೀತಕ್ಕೆ ಹೋಗುವುದು ಬೇಡ ಅಂತ ಚಾರ್ವಾಕನ ಅಕ್ಕಂದಿರು ಸಮಾಧಾನಿಸುವ ರೀತಿಯಲ್ಲಿ ಆಕೆಯನ್ನು ಗದರಿಸುತ್ತಿದ್ದರು. “ಈ ಕಲ್ತವ್ರೇ ಹೀಗೆ. ಒಂದೂ ನಂಬಲ್ಲ, ಏನೂ ಮಾಡಲ್ಲ, ಕೇಳಲ್ಲ. ಎಲ್ಲದರಲ್ಲೂ ಎಲ್ಲದಕ್ಕೂ ತಕರಾರು, ಆಕ್ಷೇಪ. ಅವರಿಗೆ ಅವರದ್ದೇ ಪ್ರಪಂಚ” ಅಂತ ಚಾರ್ವಾಕನ ಅಣ್ಣನೊಬ್ಬ ಗೊಣಗುತ್ತಿದ್ದ. ಅಷ್ಟಾಗುವಾಗ “ಈಗೆಲ್ಲ ಈ ಗಂಡಸರನ್ನೆಲ್ಲ ನಂಬುವ ಹಾಗಿಲ್ಲಪ್ಪ. ಎಲ್ಲೆಲ್ಲಿ ಯಾರ್ಯಾರಿಗೆ ಏನೇನು ಮಾತು ಕೊಟ್ಟಿರ್ತಾರೆ ಅಂತ ಹೇಳೋದೇ ಕಷ್ಟ” ಅಂತ ಚಾರ್ವಾಕನ ವೈವಾಹಿಕೇತರ ಸಂಬಂಧದ ಬಗ್ಗೆ ಅನುಮಾನಿಸುತ್ತ ದೂರದ ಬಾಯಿ ಬಡುಕಿ ಸಂಬಂಧಿಯೊಬ್ಬಳು ಬಾಯಿ ಬಿಡುವ ವೇಳೆಗೆ ಸರಿಯಾಗಿ ರಾಮಚಂದ್ರ ರಾಯರು ಬಂದು, `ಎಲ್ಲ ಸ್ವಲ್ಪ ಮಾತು ನಿಲ್ಸಿ ಪೂಜೆಗೆ ಬನ್ನಿ’ ಅಂತ ಖಡಕ್ ಆಗಿ ಹೇಳಿ ಸರ್ವರ ಅಭಿಪ್ರಾಯ ಹಂಚಿಕೆಯ ಕಾರ್ಯಕ್ರಮಕ್ಕೆ ತಾತ್ಕಾಲಿಕ ವಿರಾಮವನ್ನು ತಂದರು. ಪೂಜೆ ಏನೋ ಮುಗಿಯಿತು. ಪುರೋಹಿತರು ಸ್ವಲ್ಪ ಕಾಸು ದುಡ್ಡು, ಅದು ಇದು ಸಾಮಾನು ವಸ್ತು ಅಂತ ಜೇಬಿಗೆ ಮತ್ತು ಜೋಳಿಗೆಗೆ ಇಳಿಸಿಕೊಂಡ್ರು. ಜನ್ರೂ ದೇವರ ಪ್ರಸಾದ ತಕ್ಕೊಂಡು ಮನೆಗೆ ಹೊರಟ್ರು. ಆದ್ರೆ ಆದ ಪೂಜೆ, ಭಜನೆಯ ಮಹಾತ್ಮೆಯಿಂದ ಹೋದವನು ವಾಪಾಸ್ ಬರುತ್ತಾನೆ ಅನ್ನುವ ಗ್ಯಾರಂಟಿ ಭಯಂಕರ ದೈವಭಕ್ತರಾದ ರಾಮಚಂದ್ರರಾಯರಿಗೆ ಇದ್ದಂತೆ ಕಾಣಲಿಲ್ಲ. ಏನೊಂದೂ ತೋಚದೆ ದೇವಸ್ಥಾನದ ಒಂದು ಮೂಲೆಯಲ್ಲಿ ಕೂತು ಯೋಚನೆಗೆ ಬಿದ್ದಿದ್ದ ಚಾರ್ವಾಕನ ತಾಯಿಯ ಬಳಿ ಸಾರಿದ ಅವರು `ನೋಡೋಣ ಸ್ವಲ್ಪ ದಿನ ಕಳೆಯಿಲಿ’ ಅಂತ ಸಮಾಧಾನ ಹೇಳಿ ಅಲ್ಲಿಂದ ಹೊರಟರು.

ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಮ್ ಕಾಲದಲ್ಲೂ ಹಾಜಿಯಬ್ಬರ ಅಂಗಡಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರ್ತಾರೆ ಅಂದರೆ ಅದೊಂದು ಸೋಜಿಗವೇ ಸರಿ. ಆಧುನಿಕತೆಯ ವಿಪರೀತ ಆಕರ್ಷಣೆ ಇರುವ ಇಂದಿನ ದಿನಗಳಲ್ಲೂ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲ್ ಆಕರ್ಷಣೆಯ ಕೇಂದ್ರವಾಗಿ ಸೂಜಿಗಲ್ಲಿನಂತೆ ಜನರನ್ನು ತನ್ನೆಡೆಗೆ ಸೆಳೆಯಲು ಸಾಧ್ಯವಾಗಿದೆ ಅಂದರೆ ಅದಕ್ಕೆ ಅವರ ಒಳ್ಳೆಯತನವೂ ಕಾರಣವಿರಬಹುದು. ಊರ ಎಲ್ಲ ಜಾತಿ-ಧರ್ಮದ ಜನರು ಹಾಜಿಯಬ್ಬರ ಖಾಯಂ ಗಿರಾಕಿಗಳು. ವಯಸ್ಸಾದವರು, ಮಧ್ಯವಯಸ್ಸಿನವರು, ಹೆಂಗಸರಿಂದ ಹಿಡಿದು ಅಂಡ್ರ್ಯಾಯ್ಡ್ ಮೊಬೈಲಿನಲ್ಲಿ ಬಿದ್ದು ಪಬ್ಜಿ ಆಡುತ್ತಾ, ಫೇಸ್‌ಬುಕ್‌ಲ್ಲಿ ಹೊರಳಾಡುತ್ತಾ, ಜಗತ್ತನ್ನೇ ಮರೆಯುವ ಹೊಂತಕಾರಿ ಪಡ್ಡೆ ಹುಡುಗರಿಗೂ ಇಲ್ಲಿ ಏನೇನೋ ಕೆಲಸಗಳು. ಬೀಡಿ-ಸಿಗರೇಟ್ ಸೇದುವವರಿಗೆ, ದೇಸೀ ಬೀಡ ಮೆಲ್ಲುವವರಿಗಂತೂ ರಾತ್ರಿ ೧೧ ಗಂಟೆಯಾದರೂ ಮನೆಗೆ ಹೋಗಲು ನೆನಪಾಗುವುದಿಲ್ಲ.
ಕೊನೆಗೆ ಹಾಜಿಯಬ್ಬರೆ, “ಅಣ್ಣೆರೆ ಎಂಕ್ ಇಲ್ಲ್ ಉಂಡ್, ಒರ್ತಿ ಬೊಡೆದಿ ಉಲ್ಲಲ್, ಜೋಕ್ಲ್ ಉಲ್ಲೆರ್, ಎನನ್ ಕೇನ್‌ನಕ್ಲು ಉಲ್ಲೆರ್” (ಅಣ್ಣಂದಿರೇ ನನಗೂ ಮನೆ ಎಂಬುದೊಂದು ಇದೆ, ಒಬ್ಬಳು ಹೆಂಡತಿ ಇದ್ದಾಳೆ, ಮಕ್ಳು ಇದ್ದಾರೆ, ನನ್ನನ್ನೂ ಕೇಳುವವರು ಇದ್ದಾರೆ) ಎನ್ನುತ್ತ ಎಲ್ಲರನ್ನು ಒತ್ತಾಯದಲ್ಲಿ ಕಳುಹಿಸಿ ಅಂಗಡಿ ಮುಚ್ಚಿದ್ದುಂಟು. ಹಾಜಿಯಬ್ಬರ ಅಂಗಡಿ ಅಂದ್ರೆ ಅದು ಬರೇ ಅಂಗಡಿ ಅಲ್ಲ. ಚಹದ ಚಟವನ್ನು ಅಂಟಿಸಿಕೊಂಡಿದ್ದ ಹಾಜಿಯಬ್ಬರಿಗೆ ಆಗಾಗ ಕುಡಿಯಲು ನೀರಿನ ಬದಲಿಗೆ ಚಹವೇ ಬೇಕು. ಹಾಗಾಗಿ ದೂರದ ಸಾಹೇಬ್ ನಗರದಿಂದ ಹೊಟ್ಟೆಪಾಡಿಗೆಂದು ದೇವಪುರಕ್ಕೆ ವಲಸೆ ಬಂದ ಶುರುವಿಗೆ ತಮ್ಮ ಚಹದ ದಾಹಕ್ಕಾಗಿ ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ಟೌ ಹೊತ್ತು ತಂದಿದ್ದರು. ಹಾಜಿಯಬ್ಬರಿಗೆ ತಾವು ಚಹ ಕುಡಿಯುತ್ತಿರುವಾಗ ಯಾರಾದರೂ ಗಿರಾಕಿಗಳು ಬಂದ್ರೆ ಅವರಿಗೂ ಚಹ ಕೊಡುವಷ್ಟು ಉದಾರ ಮನಸ್ಸು. ಕ್ರಮೇಣ ಚಹದ ಅತಿಥಿಗಳು ಹೆಚ್ಚಾಗುತ್ತಾ ಹೋದ್ರು. ಕೊನೆಗೊಂದು ದಿನ ತಾನೇ ಯಾಕೆ ಇಲ್ಲೇ ಒಂದು ಸಣ್ಣ ಕ್ಯಾಂಟೀನ್ ಶುರು ಮಾಡಬಾರದು ಎಂಬ ಯೋಚನೆ ಬಂದು ಅದನ್ನೇ ಕಾರ್ಯರೂಪಕ್ಕೆ ತಂದರು. ಗಿರಾಕಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಾಜಿಯಬ್ಬರು, ಅಂಗಡಿಯ ಗೋಡೆಗೊಂದು ಅಡಿಕೆ ಸೋಗೆಯ ಮಾಡು ಮಾಡಿ ಬಿದಿರಿನ ತಟ್ಟಿ ಕಟ್ಟಿ ಸಣ್ಣ ರೂಮ್ ಮಾಡಿಯೇ ಬಿಟ್ರು. ಊರ ಜನರಿಗೆ ಬಂದು ನಿಲ್ಲೋದಕ್ಕೆ, ನಿಂತು ಮಾತಾಡೋದಕ್ಕೆ ಈ ಅಂಗಡಿ ಕಮ್ ಹೊಟೇಲ್ ಒಂದು ನೆಮ್ಮದಿಯ ತಾಣವಾಗಿ ಬಿಟ್ಟಿತು. ಬಂದ ಜನ ಸುಮ್ನೆ ಇರ್ತಾರೆಯೇ..? ಮನಸ್ಸಿಗೆ ತೋಚಿದ ಹಾಗೆ ಮಾತಾಡ್ತಾರೆ. ಬಾಯಿಗೆ ಬಂದುದನ್ನು ಬಂದ ಹಾಗೆ ಹೊರಹಾಕ್ತಾರೆ. ಈ ದೇಶದಲ್ಲಿ ಎಲ್ಲಾ ಕಡೆ ನಡೆಯುವ ಹಾಗೆ ಜಗತ್ತಿನ ಕುರಿತ ಕಥೆ ಕಲಾಪಗಳು ಇಲ್ಲೂ ನಿತ್ಯ ನಡೆಯುತ್ತಲೇ ಇವೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ಪೌರತ್ವ ತಿದ್ದುಪಡಿ ಕಾಯ್ದೆಯವರೆಗೂ ಇವರು ಮಾತಾಡುವವರೆ. ಮಾತುಕತೆ, ಚರ್ಚೆ, ವಾದ-ವಿವಾದ, ಹರಟೆ ಮುಂದುವರಿದು ತಾರಕಕ್ಕೇರಿ ಕೆಲವೊಮ್ಮೆ ಎಲ್ಲ ಸೇರಿ ದೇಶವನ್ನು ಬದಲಾಯಿಸುವ ಮಟ್ಟಿಗೆ ಅವರ ಉತ್ಸಾಹ ಏರಿ ಹೋಗುವುದೂ ಇದೆ. ಕೊನೆಗೆ ಎಲ್ಲವೂ ಒಮ್ಮಿಂದೊಮ್ಮೆಲೆ ನಿಂತುಹೋಗಿ ಸ್ತಬ್ಧವಾಗುವುದೂ ಉಂಟು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಾಜಿಯಬ್ಬರು ತಾವಾಯ್ತು ತಮ್ಮ ಕೆಲಸವಾಯ್ತು ಅಂತ ತಮ್ಮ ಪಾಡಿಗೆ ತಮ್ಮ ಕಾಯಕದಲ್ಲಿ ಮುಳುಗಿರುತ್ತಿದ್ದರು.

ಕರಾವಳಿಯ ಜನರಿಗೆ ಬೆಳಗ್ಗೆ ಎದ್ದು ಕಾಫಿ ಕುಡಿಯದಿದ್ದರೂ ಪರವಾಗಿಲ್ಲ ಆದ್ರೆ ಉದಯವಾಣಿ ದಿನಪತ್ರಿಕೆಯನ್ನು ಓದದಿದ್ರೆ ಏನೋ ಕಳಕೊಂಡ ಹಾಗೆ. ಅಷ್ಟರ ಮಟ್ಟಿಗೆ ಈ ಪತ್ರಿಕೆ ಊರ ಎಲ್ಲ ಜಾತಿಧರ್ಮದವರಿಗೆ ಹುಚ್ಚು ಹಿಡಿಸಿದೆ. ಈ ಊರಿನ ಜನರಿಗೆ ಉದಯವಾಣಿ ಪತ್ರಿಕೆಯಲ್ಲಿ ಬಂದುದೆಲ್ಲವೂ ಪರಮ ಸತ್ಯ. ಹಾಜಿಯಬ್ಬರ ಅಂಗಡಿಗೆ ಬರುತ್ತಿದ್ದದ್ದು ಇದೊಂದೇ ಪತ್ರಿಕೆ. ಈ ಪತ್ರಿಕೆಯ ಖಾಯಂ ಓದುಗ ರಿಕ್ಷಾದ ಕಾಂತಣ್ಣ ಪತ್ರಿಕೆ ಓದಿ ಓದಿ ತಾನು ಈ ದೇಶ, ಸಂವಿಧಾನ ಎಲ್ಲವನ್ನೂ ಸಾಕಷ್ಟು ತಿಳಿದುಕೊಂಡಿದ್ದೇನೆ, ಈ ಅಂಗಡಿಗೆ ಬರುವವರಲ್ಲಿ ತಾನೊಬ್ಬ ಮಾತ್ರ ಉಳಿದವರಿಗಿಂತ ಹೆಚ್ಚು ವಿಚಾರವಂತ ಎಂಬ ಅಹಮಿಕೆಯಲ್ಲಿ ಮಾತಾಡುವುದನ್ನು ಕಂಡು ಅಲ್ಲೇ ಇದ್ದ ದೇವಪುರದ ದಿವಂಗತ ಗೋವಿಂದರಾಯರ ಮಗ ಚಾರ್ವಾಕ ಒಮ್ಮೆ ಮೇಲಿಂದ ಮೇಲೆ ಪ್ರಶ್ನೆ ಕೇಳಿ ಅವರನ್ನು ಕಕ್ಕಾಬಿಕ್ಕಿಗೊಳಿಸಿ ಬಾಯಿ ಮುಚ್ಚಿಸಿದ್ದ. ಚಾರ್ವಾಕನ ತಂದೆ ಗೋವಿಂದ ರಾಯರು ತಾವು ಮಾಡುತ್ತಿದ್ದ ಬಾಚಾಣಿಕೆಯ ಕೆಲಸವನ್ನು ಭಾರೀ ಶ್ರದ್ಧೆಯಿಂದ ತಮ್ಮ ಕೊನೆಯ ಉಸಿರಿನವರೆಗೂ ಮಾಡಿದವರು. ಅವರು ಮಾಡುವ ಬಾಚಾಣಿಕೆ ಕೆಲಸ ಗಾಂಧಿಯ ನೂಲುವ ಕೆಲಸಕ್ಕೆ ಸಮಾನ ಎಂಬ ಗೌರವ, ಅಭಿಮಾನ ಅವರಲ್ಲಿತ್ತು ಎಂದು ಊರ ಜನ ಹೇಳುತ್ತಿದ್ದರು. ಆಗೆಲ್ಲ ಪ್ರಾಣಿಗಳ ಕೊಂಬಿನಿಂದ ಮಾಡುವ ಬಾಚಾಣಿಕೆಗಳನ್ನೇ ತಲೆ ಬಾಚಲು ಬಳಸುತ್ತಿದ್ದರು. ಅಂಥಾ ಸಂದರ್ಭದಲ್ಲಿ ಗೋವಿಂದ ರಾಯರು ತಮ್ಮ ಬಡತನದಲ್ಲೂ ಕೊನೆಯ ಒಬ್ಬ ಮಗನಿಗಾದರೂ ಡಾಕ್ಟರ್ ಓದಿಸಿಬೇಕೆಂಬ ಆಸೆಯೋ ಅಥವಾ ಬಾಪು ಗಾಂಧಿಯ ಮೇಲೆ ಪ್ರೀತಿಯೋ ಏನೋ ತಿಳಿಯದು. ಯಾಕೋ ಮಗನಿಗೆ ಚರಕ ಎಂಬ ಹೆಸರಿಟ್ಟಿದ್ದರು. ಆದರೆ ಈ ಚರಕನ ವರ್ತನೆ ನೋಡುವವರ ಕಣ್ಣಿಗೆ ಉಳಿದ ಹುಡುಗರಿಗಿಂತ ಬೇರೆಯಾಗಿ ಕಾಣುತ್ತಿತ್ತು. ಅವನ ಮಾತು ಅನೇಕರಿಗೆ ತಲೆಗೆ ಹೋಗುತ್ತಿರಲಿಲ್ಲ. ಏನೋ ವಿಚಿತ್ರ, ವಕ್ರ ಅಂತ ಭಾವಿಸುತ್ತಿದ್ದರು. ಊರ ಜನರಿಗೆ ಚರಕ ತೀರಾ ಅಧಾರ್ಮಿಕನಾಗಿ ಕಂಡುದರಿಂದಲೋ ಅಥವಾ ಚರಕ ಹೆಸರನ್ನು ಉಚ್ಚರಿಸಲು ಕಷ್ಟವಾಗುತ್ತಿದ್ದುದರಿಂದಲೋ ಏನೋ ಅವರ ಬಾಯಲ್ಲಿ ಚರಕ ಹೋಗಿ ದೇವರನ್ನು ನಂಬದ ಚಾರ್ವಾಕ್ ಎಂದಾಯಿತು. ಅಲ್ಲಿಂದ ಹಾಜಿಯಬ್ಬರ ಅಂಗಡಿಯಲ್ಲಿ ಬಂದು ಸೇರುವವರೆಲ್ಲ ಚರಕನನ್ನು ಚಾರ್ವಾಕ ಅಂತಲೇ ಕರೆಯಲು ಶುರುಮಾಡಿ ಆ ಹೆಸರೇ ಅವನಿಗೆ ಪರ್ಮನೆಂಟ್ ಆಯಿತು.

ಜನರ ಚಪಲಕ್ಕೊಂದು ಎಡೆ ಬೇಕು, ಕುಂಡೆ ಊರಲು ಒಂದು ನೆಲೆ ಬೇಕು ಎನ್ನುವಂತೆ ಜನ ಸದಾ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲಲ್ಲಿ ಬಂದು ಸೇರುತ್ತಿದ್ದರು. ದೇವಪುರಕ್ಕೆ ಅದೊಂದು ಪ್ರಮುಖ ಹೊಟೇಲ್ ಕಮ್ ಅಂಗಡಿ ಎನ್ನಲು ಯಾವುದೇ ಅಡ್ಡಿ ಇಲ್ಲ. ಭಾನುವಾರ ಎಂದರೆ ಶಾಮಣ್ಣನ ಮಗ ಅಭಿಷೇಕ್‌ಗೆ ಬಹಳ ಖುಷಿ. ವಾರದ ಆರು ದಿನಗಳೂ ಬೆಳಗ್ಗೆ ಬೇಗನೆ ಎದ್ದು ದೂರದ ಪಾಂಡವಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಅದೊಂದು ದಿನ ಅವನಿಗೆ ತಡವಾಗಿ ಏಳುವುದಕ್ಕೆ ಇರುವ ದಿನ. ರವಿವಾರ ಹೆಚ್ಚಾಗಿ ತಡವಾಗಿಯೇ ಏಳುವ ಆತ ಆ ಭಾನುವಾರ ಮಾತ್ರ ಸ್ವಲ್ಪ ಬೇಗನೆ ಎದ್ದು ಹಾಜಿಯಬ್ಬರ ಅಂಗಡಿಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಉದಯವಾಣಿ ಪೇಪರ್ ಓದುತ್ತಾ ತನ್ನ ಗೆಳೆಯ ಚಾರ್ವಾಕನ ಬರವಿಗಾಗಿ ಕಾಯುತ್ತಿದ್ದ. ಚಾರ್ವಾಕ ಹಾಜಿಯಬ್ಬರ ಅಂಗಡಿಗೆ ಬಂದಾಗಲೆಲ್ಲಾ ಏನಾದರೂ ಸುದ್ದಿ ಹೊತ್ತು ತಂದು ಒಂದಷ್ಟು ಮಾತಾಡುವುದು ರೂಢಿ. ಸಿನೆಮಾ, ನಾಟಕ, ಯಕ್ಷಗಾನ, ಕ್ರಿಕೆಟ್, ರಾಜಕೀಯದ ಬಗ್ಗೆ ಯಾವಾಗಲೂ ಒಂದಷ್ಟು ಹೊಸ ಹೊಸ ವಿಷಯಗಳನ್ನು ಹೇಳುತ್ತಿದ್ದುದರಿಂದ ಚಾರ್ವಾಕನೆಂದರೆ ಹಾಜಿಯಬ್ಬರಿಂದ ಹಿಡಿದು ಅಂಗಡಿಯಲ್ಲಿ ಜಮಾಯಿಸುವ ಎಲ್ಲರಿಗೂ ಕುತೂಹಲ, ಕೆಲವೊಮ್ಮೆ ಮತ್ಸರವೂ. ದಿನಾ ಬೆಳಗಾದರೆ ಸಾಕು ಏನಾದರೂ ಒಂದು ವಿಷಯ ಎತ್ತಿಕೊಂಡು ಒಂದಷ್ಟು ಚರ್ಚೆ ನಡೆಸುತ್ತಿದ್ದ. ಏನೂ ಇಲ್ಲದಾಗ ಲೋಕಾಭಿರಾಮ ಮಾತಾಡುತ್ತಿದ್ದ. ಕೆಲವೊಮ್ಮೆ ಮಾತಿನ ಭರದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡು ತನಗೆ ತಾನೆ ಇರಿಸು ಮುರಿಸು ತಂದುಕೊಳ್ಳುತ್ತಿದ್ದ. ಆಗೆಲ್ಲ ತಾನಾಡಿದ ಮಾತುಗಳ ಬಗ್ಗೆ ತಾನೇ ವಿಮರ್ಶೆ ಮಾಡಿಕೊಳ್ಳುತ್ತಾ ಎಲ್ಲೋ ಎಡವಿದೆ ಎಂದು ಭಾವಿಸಿಕೊಂಡು ಮೂಡ್‌ಆಫ್ ಮಾಡಿಕೊಂಡು ಖಿನ್ನನಾಗುತ್ತಿದ್ದ.

ತಮ್ಮದೇ ಕಷ್ಟ ಕಾರ್ಪಣ್ಯಗಳಿಂದ ಬಸವಳಿದ ಜನರಿಗೆ ಚಾರ್ವಾಕನಲ್ಲಾಗುತ್ತಿದ್ದ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಸಮಯವುಂಟೆ ಅಥವಾ ವ್ಯವಧಾನವುಂಟೇ..? ಆದ್ರೆ ಇತ್ತೀಚಿನ ಕೆಲವು ದಿನಗಳಿಂದ ಚಾರ್ವಾಕ್ ಅಂಗಡಿಗೆ ಬರುತ್ತಿಲ್ಲ ಮತ್ತು ತನಗೂ ಮಾತಿಗೆ ಸಿಗದ್ದನ್ನು ಮನಸ್ಸಿಗೆ ಇಳಿಸಿಕೊಂಡ ಅಭಿ, `ಏನಾಯ್ತು ಇವನಿಗೆ? ಕಾಣ್ತಾನೆ ಇಲ್ವಲ್ಲ’ ಅಂತ ಯೋಚಿಸುತ್ತಾ, ಒಂದು ಫೋನ್ ಮಾಡ್ತೇನೆ ಎಂದು ಮೊಬೈಲ್ ಕೈಗೆತ್ತಿಕೊಂಡ. ‘ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿಪ್ರದೇಶದಿಂದ ಹೊರಗಿದ್ದಾರೆ, ಸ್ವಲ್ಪ ಸಮಯದ ಬಳಿಕ ಕರೆ ಮಾಡಿ..’ ಎಂಬ ಹೆಣ್ಣಿನ ಧ್ವನಿ ಕೇಳುತ್ತಿದ್ದಂತೆ ಅಭಿಷೇಕ್ ನಿರಾಶನಾದ. ಮತ್ತೆ ಗೆಳೆಯನ ಬಗ್ಗೆ ಯೋಚನಾ ಲಹರಿ ಮುಂದುವರಿಯಿತು. ಸದಾ ಚಿನಕುರುಳಿಯಂತೆ, ಎಣ್ಣೆಯಲ್ಲಿ ಹೊಟ್ಟುವ ಸಾಸಿವೆಯಂತೆ ಪಟಪಟ ಎಂದು ಹೊಟ್ಟುತ್ತಿದ್ದ ಇವನನ್ನು ನಾನು ಸರಿಯಾಗಿ ಗಮನಿಸಿಯೇ ಇಲ್ಲ ಎಂದು ಭಾವಿಸತೊಡಗಿದ ಅಭಿ, ಈಗ ಕಳೆದ ಕೆಲವು ದಿನಗಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದಾನೆ. `ಹೌದು, ಇವನಲ್ಲಿ ಏನೋ ಒಂದು ಸಂಚಲನ ಉಂಟಾಗಿದೆ, ಇವನ ತಲೆಯಲ್ಲಿ ಏನೋ ಓಡುತ್ತಿದೆ, ಇವನೊಳಗೆ ಏನೋ ತುಂಬಿದೆ,’ ಎಂದು ಬಲವಾಗಿ ಅನ್ನಿಸಲು ಶುರುವಾಯಿತು. ಯಾರನ್ನೂ ಯಾವತ್ತೂ ಗಂಭೀರವಾಗಿ ಪರಿಗಣಿಸುವ ಜಾಯಮಾನದವನೇ ಅಲ್ಲದ ಈ ಅಭಿಗೆ ಯಾರ ಭಾವಪ್ರಪಂಚದ ಪರಿಚಯವಿರಲಿಲ್ಲ. ಯಾವ ಮನಸ್ಸಿನ ಒಳಗುದಿಯನ್ನು ಅರ್ಥೈಸಲು ಕಿಂಚಿತ್ ಸಾವಧಾನಿಸಿ ಗೊತ್ತಿಲ್ಲದ ಅವಸರದ ಈ ಮನುಷ್ಯ ಜೀವಿಗೆ ಈಗ ಮಾತ್ರ ಏನೋ ಅನ್ನಿಸಲು ಶುರುವಾಗಿದೆ. ಗೆಳೆಯನ ವಿಲಕ್ಷಣ ನಡವಳಿಕೆ ಕೊರೆಯಲು ಶುರುವಾಗಿ ಅದರ ತೀವ್ರತೆ ಹೆಚ್ಚುತ್ತಿದ್ದಂತೆ ಮತ್ತೆ ಮೊಬೈಲ್ ಕೈಗೆತ್ತಿಕೊಂಡು ನಂಬರ್‌ಗೆ ಕ್ಲಿಕ್ ಮಾಡಿ ಕಿವಿಗಿಡುತ್ತಿರಬೇಕಾದ್ರೆ, ದೂರದಲ್ಲಿ ಚಾರ್ವಾಕ ಗಾಡಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ. `ಅರೆ ಇಂವ ಈಗೆಲ್ಲಿಗೆ ಹೊರಟಿದ್ದಾನೆ’ ಎಂದು ಯೋಚಿಸುವಾಗಲೇ ಚಾರ್ವಾಕ ದೇವಪುರದ ಮೊದಲ ತಿರುವನ್ನು ದಾಟಿ ಮುಂದೆ ಸಾಗಿಯಾಗಿತ್ತು. ಅಭಿ ನೋಡು ನೋಡುತ್ತಿದ್ದಂತೆಯೇ ಚಾರ್ವಾಕ ಮೇರೆಮಜಲ್ ಸರ್ಕಲ್‌ನಿಂದ ಮುಂದೆ ಹೋಗಿ ರಾಷ್ಟ್ರೀಯ ಹೆದ್ದಾರಿ ಸೇರಿಯಾಗಿತ್ತು. ಇನ್ನು ಇವನನ್ನು ಕೂಗಿ ಪ್ರಯೋಜನವಿಲ್ಲ ಅಂದುಕೊಂಡು ತನ್ನ ಗಾಡಿ ಹಿಡಿದು ಅವನನ್ನು ಕುತೂಹಲದಿಂದ ಹಿಂಬಾಲಿಸಿದ.

ರೈಲ್ವೆ ಟ್ರ್ಯಾಕ್ ದಾಟಿ ಮುಂದೆ ದೂರದಲ್ಲಿ ಒಂದು ಗುಡಿ. ಸುತ್ತ ಬೆಳೆದು ನಿಂತ ಎತ್ತರದ ವಿಶಾಲವಾದ ಮರಗಳ ದಟ್ಟವಾದ ನೆರಳಲ್ಲಿ ಚಾರ್ವಾಕ್‌ನ ನೀಲಿ ಬಣ್ಣದ ಗಾಡಿಯನ್ನು ಕಂಡ ಅಭಿ, ಸ್ವಲ್ಪ ದೂರದಲ್ಲಿ ತನ್ನ ಗಾಡಿಯನ್ನು ನಿಲ್ಲಿಸಿ ಮುಂದೆ ಮುಂದೆ ಬಂದ. ಎಲ್ಲರಂತೆ ದೇವಸ್ಥಾನಕ್ಕೆ ಹೋಗುವುದು, ಮೂರ್ತಿಗೆ ಕೈಮುಗಿಯುವುದು ಇವ್ಯಾವುದನ್ನು ಬಹಿರಂಗವಾಗಿ ರಾಜಾರೋಷವಾಗಿ ಎಂದೂ ಮಾಡದಿದ್ದ ಚಾರ್ವಾಕ ತನ್ನ ಹೆಸರಿಗೆ ಅನ್ವರ್ಥದಂತೆ ಎಲ್ಲರ ಕಣ್ಣಲ್ಲೂ ನಾಸ್ತಿಕನಾಗಿದ್ದ. ಆದರೆ ಈಗ ಗುಡಿ ಸೇರಿದ್ದಾನಲ್ಲ ಎಂದು ಬೆರಗಾದ ಅಭಿ, ಏನು ಮಾಡುವುದೆಂದು ಗೊಂದಲಕ್ಕೀಡಾದ. ಅನಿರ್ವಚನೀಯವಾದ ಆಧ್ಯಾತ್ಮಿಕ ಭಾವ ಹುಟ್ಟಿ ತನ್ಮಯರಾಗಬಹುದಾದ ಪ್ರಶಾಂತವಾದ ಆ ವಾತಾವರಣದಲ್ಲಿ ಮಿಂದೇಳುತ್ತಿದ್ದ ಅಭಿ, ತಾನು ಈ ಹಿಂದೆ ಎಂದೂ ಕಾಲಿಡದ ಈ ಗುಡಿಯೊಳಗೆ ನಿಧಾನಕ್ಕೆ ಹೆಜ್ಜೆ ಇಟ್ಟ. ಜಾತ್ರೆ ಮತ್ತು ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಬ್ರಾಹ್ಮಣೇತರರಿಗೆ ಊಟ ಹಾಕುವ, ದೇಗುಲದ ಪ್ರಾಂಗಣಕ್ಕೆ ತಾಗಿಕೊಂಡಿರುವ ಸಭಾಂಗಣದ ಮೋಟು ಗೋಡೆಯ ಮರೆಯಲ್ಲಿ ಒಂದು ಕ್ಷಣ ನಿಂತ. ಒಂದು ಬಗೆಯ ವಿಸ್ಮಯ ಮತ್ತು ಸಂಕಟದಲ್ಲಿ `ಇಂವ ಇಲ್ಲಿಗ್ಯಾಕೆ ಬಂದ’ ಎಂದು ಯೋಚಿಸುತ್ತಾ ಸಭಾಂಗಣದ ಸುತ್ತಲೂ ನೋಡಿದಾಗ ಗಾಳಿಯಾಡಲು ಮತ್ತು ಬೆಳಕಿಗಾಗಿ ಹಾಕಲಾದ ಗೆದ್ದಲು ಹಿಡಿದ ಹಳೆ ಕಾಲದ ಮರದ ಕಿಟಕಿಯೊಂದನ್ನು ಕಂಡ. ತಡ ಮಾಡದೆ ಕಿಟಕಿಯ ಬಳಿ ಸಾರಿದ ಅಭಿ, ಧೂಳು ಹಿಡಿದು ಕೆಂಪಾಗಿದ್ದ, ಪಳೆಯುಳಿಕೆಯಂತಿದ್ದ ಆ ಕಿಟಕಿಯ ಮೂಲಕ ಕತ್ತು ಬಾಗಿಸಿ ಕಣ್ಣು ಹಾಯಿಸಿದ. ತಾನು ಯಾವತ್ತೂ ಕಲ್ಪಿಸಿದ ದೃಶ್ಯವೊಂದನ್ನು ಅಲ್ಲಿ ಅಭಿ ಕಂಡ. ಕಾಣುತ್ತಿರುವುದು ವಾಸ್ತವವೇ ಅಥವಾ ಕನಸೇ ಎಂದು ತನ್ನನ್ನು ತಾನೇ ಚಿವುಟಿ ನೋಡಿದ. ತನ್ನ ಕಣ್ಣನ್ನು ತಾನೇ ನಂಬದಾದ. ತನ್ನ ಗೆಳೆಯ ಹತ್ತಾರು ಮಕ್ಕಳ ಮಧ್ಯದಲ್ಲಿ ಕಾಲುಗಳನ್ನು ಅಗಲಿಸಿ, ದೇಹವನ್ನು ಕುಗ್ಗಿಸಿ ಮಂಡಲ ಸ್ಥಿತಿಯಲ್ಲಿ ನಿಂತಿದ್ದಾನೆ. ಬಾಯಿತಾಳವನ್ನು ಹೇಳುತ್ತಿದ್ದಾನೆ. ನಿಧಾನಕ್ಕೆ ಒಂದೊಂದೇ ಹೆಜ್ಜೆಯನ್ನು ಎತ್ತಿ ಎತ್ತಿ ಇಡುತ್ತಿದ್ದಾನೆ. ತಕ್ಷಣಕ್ಕೆ ಇದು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟಪಟ್ಟ ಅಭಿ, ದಂಗಾಗಿ ಅಲ್ಲಿ ಹಾಗೆ ನಿಂತು ಬಿಟ್ಟ. ಮಕ್ಕಳ ಬಾಯಿತಾಳದ ಧ್ವನಿಯೊಂದಿಗೆ ಚಾರ್ವಾಕನ ಹೆಜ್ಜೆಯ ಸದ್ದು ಕೇಳುತ್ತಲೇ ಇತ್ತು.

ಧೀಂ, ಧಿತ್ತ, ತಕಿಟ, ತಕಧಿಮಿ, ತಕ ತಕಿಟ, ತಕಿಟ ತಕಧಿಮಿ

ಧೀಂ ಕಿಟ ಕಿಟತಕ ತರಿಕಿಟ ಕಿಟತಕ

ಎಲ್ಲವನ್ನು ನೋಡುವ ತವಕದಲ್ಲಿ ಆತ ಅಲ್ಲೇ ಆ ಕಿಟಿಕಿಗೆ ಮತ್ತಷ್ಟು ಹತ್ತಿರವಾಗಿ ಒರಗಿದ. ಒರಗಿದನೆಂದರೆ ಬರೇ ಒರಗಿದ್ದಲ್ಲ. ಯೋಚನಾಮಗ್ನನಾದ. “ಮೊನ್ನೆ ಮೊನ್ನೆ ಕ್ರಿಸ್‌ಮಸ್ ರಜೆಯವರೆಗೂ ಸರಿಯಾಗಿಯೇ ಇದ್ದ. ಯಾವಾಗ ಕೇಳಿದ್ರು ಓದು-ಬರಹ, ಸೆಮಿನಾರ್, ನಾಟಕ ಅದು ಇದು ಕಾರ್ಯಕ್ರಮ, ಒಂದು ಗಳಿಗೆ ಪುರ್ಸೋತು ಇಲ್ಲ ಅಂತ ಹೇಳ್ತಿದ್ದ ಇವ್ನಿಗೆ ಏನೋ ಆಗಿದೆ. ಇವನೊಳಗೆ ಯಾರೋ ಬಂದಿದ್ದಾರೆ. ಇಲ್ಲದಿದ್ರೆ ಈ ಆಟದ ಹೆಜ್ಜೆಯಲ್ಲಿ ಇವ್ನಿಗೆ ಈಗ ಒಮ್ಮಿಂದೊಮ್ಮೆಗೆ ಮನಸ್ಸಾಗಲು ಸಾಧ್ಯವೇ ಇಲ್ಲ” ಎಂದುಕೊಳ್ಳುತ್ತಾ ಇವನು ಯಾವಾಗ ಹೊರಬರುತ್ತಾನೆ ಎಂದು ಕಾಯುತ್ತಾ ನಿಂತ. ಎಷ್ಟೋ ಸಮಯ ಕಳೆದ ಮೇಲೆ ಮಕ್ಕಳೆಲ್ಲ ಗುಡಿಯ ಪ್ರಾಂಗಣದಿಂದ ಹೊರಬರುತ್ತಿರುವುದನ್ನು ಕಂಡ. ಚಾರ್ವಾಕನು ದೃಢ ಕಾಯದ, ತುಂಬು ಕೂದಲಿನ, ನಡುವಯಸ್ಸಿನ ವ್ಯಕ್ತಿಯೊಬ್ಬರ ಹತ್ತಿರ ಏನೋ ಉತ್ಸಾಹದಿಂದ ಮಾತಾಡುತ್ತಾ, ನಗುತ್ತಾ ನಿಧಾನಕ್ಕೆ ಬರುತ್ತಿದ್ದ. ಇವನಿಗೆ ನಾಟ್ಯವನ್ನು ಕಲಿಸುವ ಗುರುಗಳು ಅವರಿರಬೇಕೆಂದು ಭಾವಿಸಿದ ಅಭಿ ಕೂಡಲೇ ಸಭಾಂಗಣದಿಂದ ಹೊರಬಂದು ಚಾರ್ವಾಕನ ಮುಂದೆ ಪ್ರತ್ಯಕ್ಷನಾಗಿ ದೇಶಾವರಿ ನಗೆ ಬೀರಿದ. ಚಾರ್ವಾಕನಿಗೂ ಕಸಿವಿಸಿ. ಒಮ್ಮೆ ಗಂಟಲು ಒಣಗಿದಂತಾಯಿತು. ತಾನು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದೆನೆಂದು ಸುಳ್ಳು ಹೇಳಲು ಚಡಪಡಿಸುತ್ತಿರುವ ಅಭಿಯನ್ನು ಗಮನಿಸಿದ ಚಾರ್ವಾಕ ಮನಸ್ಸಲ್ಲೇ ಏನೋ ಹೇಳತೊಡಗಿದ.

ಅಭಿ ಸ್ವಲ್ಪಮಟ್ಟಿಗೆ ವಿಚಲಿತನಾಗಿ ಸರಿಯಾಗಿ ಏನು ಕೇಳಬೇಕೆಂದು ತೋಚದೆ, “ಚಾರ್ವಾಕ ನೀನೇನು ಇಲ್ಲಿ..? ಇದೆಲ್ಲ ಏನು? ಏನಾಗಿದೆ ನಿನಗೆ? ಇತ್ತೀಚಿಗೆ ಮಾತಿಗೇ ಸಿಗುತ್ತಿಲ್ಲ…” ಎಂದು ಅವಸರ ಅವಸರವಾಗಿ ಒಂದೇ ಉಸುರಿಗೆ ಕೇಳಿಯೇ ಬಿಟ್ಟ. ಚಾರ್ವಾಕ ಅಭಿಯನ್ನು ಗುಡಿಯಲ್ಲಿ ನೋಡಿದ್ದು ಅನಿರೀಕ್ಷಿತ. ಅವನ ಪ್ರಶ್ನೆಗಳು ಮಾತ್ರ ಅವನಿಗೆ ಅನಿರೀಕ್ಷಿತ ಎನಿಸಲಿಲ್ಲ. ಆದರೆ ಅದು ಅನಪೇಕ್ಷಿತವಾಗಿತ್ತು. ಏನು ಉತ್ತರ ನೀಡಬೇಕೆಂದು ಗೊತ್ತಾಗದೇ ವನದುರ್ಗೆ ಮೂರ್ತಿಯ ಕಡೆಗೆ ಮುಖ ತಿರುಗಿಸಿ ಮೌನದ ಸಾಕಾರ ಮೂರ್ತಿಯಂತೆ ನಿರ್ಲಿಪ್ತನಾಗಿ ನಿಂತುಬಿಟ್ಟ. ಅಭಿ, ಅವನು ಕಲ್ಲಾಗಿದ್ದಾನೆಯೇ ಅಥವಾ ಇದು ಕಲ್ಲು ಕರಗುವ ಸಮಯವೇ ಎಂದು ಗೊಂದಲಕ್ಕೊಳಗಾಗಿ ಮೊದಲ ಮಳೆಗೆ ಕಾಯುವ ಚಾತಕ ಪಕ್ಷಿಯಂತೆ ಅವನ ಹಿಂದೆ ಉತ್ತರಕ್ಕಾಗಿ ಕಾಯುತ್ತ ನಿಂತ. ಕೆಲವೊಮ್ಮೆ ತಾನು ಹೋಗುತ್ತಿರುವ ದಾರಿ ಮತ್ತು ಮಾಡುತ್ತಿರುವ ಕೆಲಸ ಸರಿಯೋ ತಪ್ಪೋ ಎಂದು ನಿರ್ಧಾರಕ್ಕೆ ಬರಲಾಗದೇ, ಇವುಗಳ ಬಗ್ಗೆ ಹೇಳಲು ಧೈರ್ಯ ಸಾಕಾಗದೇ, ನಾಚುವ, ಅಂಜುವ ಸ್ವಭಾವದ ಚಾರ್ವಾಕ ತನ್ನನ್ನು ವಿಚಾರಿಸುತ್ತಿರುವ ಪ್ರೀತಿಯ ಗೆಳೆಯನಿಗೆ ಉತ್ತರಿಸಲಾಗದೇ ಚಡಪಡಿಸುತ್ತಿದ್ದಾನೆ. ಅಲ್ಲಿಯವರೆಗೂ ನವಚೈತನ್ಯದಲ್ಲಿ ತುಂಬಿ ತುಳುಕಾಡುತ್ತಿದ್ದ ಆತ ಈಗ “ಏನು ಮಾತಾಡಲಿ? ಯಾರಲ್ಲಿ ಮಾತಾಡಲಿ?, ನನ್ನ ಬೆನ್ನು ಹತ್ತಿ ಬಂದು ಪ್ರಶ್ನಿಸುತ್ತಿರುವ ಇವನಲ್ಲೇ ಅಥವಾ ಲೋಕದ ಜನರಲ್ಲಿ ತಾನು ಕಾಯುವವಳು ಎಂದು ನಂಬಿಕೆ ಹುಟ್ಟಿಸಿ ಇಲ್ಲೇ ಕಲ್ಲಾಗಿ ನೆಲೆ ನಿಂತಿರುವ ಈ ಜಡ ಮೂರ್ತಿಯಲ್ಲೇ?” ಎಂದು ಚಿಂತಿಸುತ್ತಾ ತನ್ನಲ್ಲೇ ಮಾತಾಡಲು ತೊಡಗಿದ.

“ನನ್ನೊಳಗಿನ ಆಸೆ, ಆಕಾಂಕ್ಷೆ, ತೊಳಲಾಟವನ್ನು ಇವನಿಗೆ ಹೇಗೆಂದು ವಿವರಿಸಲಿ. ನನ್ನ ಆತಂಕಗಳೆಲ್ಲಾ ಇವನಿಗೆ ಹೇಗೆ ತಿಳಿಯಬೇಕು?” ಚಾರ್ವಾಕನ ಮಾತು ಹೊರಗೆ ಎಲ್ಲೂ ಕೇಳುತ್ತಿರಲಿಲ್ಲ. ಓದಿನ ದಿನಗಳಲ್ಲಿ ಸದಾ ತನ್ನನ್ನು ಕಾಡಿದ ಹೊಟ್ಟೆ-ಬಟ್ಟೆಯ ನೋವು, ಅಪಮಾನ ಈಗಲೂ ಅವನಲ್ಲಿ ಭಯ ಹುಟ್ಟಿಸುತ್ತದೆ. “ಹತ್ತು ಮಕ್ಕಳನ್ನು ಭೂಮಿಗೆ ಹಾಕಿ ಹೆಂಡತಿ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಹೊನ್ನು-ಮಣ್ಣು ಅಂತ ಒಂದಿಷ್ಟು ಸಂಪಾದಿಸದೆ, ಏನನ್ನೂ ಉಳಿಸದೆ ತನಗೂ ಈ ಭೂಮಿಗೂ ಯಾವುದೇ ಬಗೆಯ ಸಂಬಂಧವೇ ಇಲ್ಲ ಅನ್ನುವ ರೀತಿಯಲ್ಲಿ ತಣ್ಣಗೆ ಹೊರಟು ಹೋದ ಜನ್ಮದಾತನನ್ನು ಶಪಿಸಲೇ? ಕ್ಷಮಿಸಲೇ..? ಅಕ್ಷರದ, ಶಿಷ್ಟಾಚಾರದ, ನಾಗರಿಕತೆಯ ಯಾವ ಸೋಂಕಿಲ್ಲದ ತಾಯಿ ಹೆತ್ತ ಮಕ್ಕಳ ಸಾಕುವ ಜವಾಬ್ದಾರಿಯನ್ನು ಹೊತ್ತುಕೊಂಡದ್ದು ಬನದ ಕರಡಿಯಂತಲ್ಲ. ಬದಲಾಗಿ ಬೀದಿನಾಯಿಯಂತೆ. ಯಾವ ಮಕ್ಕಳಿಗೂ ಶಾಲೆಯ ಮೆಟ್ಟಿಲನ್ನು ತುಳಿಸದೆ, ಯಾರಿಗೂ ಪ್ರೀತಿಯನ್ನೂ ಧಾರೆಯೆರೆಯದೆ, ಕಂಡ ಕಂಡವರಲ್ಲಿ ಜಗಳವಾಡುತ್ತಾ, ಕೆಟ್ಟವಳಾಗುತ್ತಾ, ಎಲ್ಲವನ್ನೂ ವಂಚಿಸಿಸುತ್ತಾ ತನ್ನವರಿಗೇ ಬೇಡವಾಗುತ್ತಾ ಬದುಕಿದಳು. ಒರಟಾಗುತ್ತಾ ಎಲ್ಲರಿಂದ ದೂರವಾದಳು. ಈ ಎಲ್ಲದರ ನಡುವೆಯೂ ಬೀಳುತ್ತಾ ಏಳುತ್ತಾ ನಾನು ಬೆಳೆಯುತ್ತಲೇ ಇದ್ದೆ. ಕನಸುಗಳನ್ನು ಕಟ್ಟುತ್ತಾ, ಭಾವನೆಗಳನ್ನು ಹತ್ತಿಕ್ಕುತ್ತಾ, ಭರವಸೆಗಳು ಹುಟ್ಟುತ್ತಾ, ಸಾಯುತ್ತಾ ವಿಕ್ಷಿಪ್ತವಾಗಿ ಬೆಳೆಯುತ್ತಿದ್ದೆ. ಕೃತ್ರಿಮತೆಯಿಂದ ತುಂಬಿದ ಈ ಲೋಕದಲ್ಲಿ ಸರಿ ತಪ್ಪುಗಳ ಪಾಠಗಳನ್ನು ಕಂಡ ಕಂಡವರನ್ನೆಲ್ಲ ನೋಡಿ ಕಲಿತೆ. ಓದಬೇಕೆಂಬ ನನ್ನ ಆಸೆ ನೆರವೇರುವುದಕ್ಕಾಗಿ ಜನರ ಕೈ ಬಾಯಿ ನೋಡಿದೆ. ಅನೇಕ ಮಂದಿಯ ಪ್ರಭಾವಕ್ಕೊಳಗಾಗಿ ಅವರಂತೆ ನಾನಾಗಬೇಕೆಂದು ಬಯಸಿದೆ. ಅನೇಕರು ವಿನಾಕಾರಣ ಇಷ್ಟವಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿದೆ. ಬದುಕಲ್ಲಿ ಭರವಸೆಯ ಪ್ರವಾದಿಯಂತೆ ಬಂದರು ಕೆಲವರು. ಆದರೆ ಒಮ್ಮಿಂದೊಮ್ಮೆಲೇ ಮಾಯವಾದರು. ಆಗೆಲ್ಲ ಬದುಕು ಬರೀ ಶೂನ್ಯದ ಒಂದು ಹಿಡಿ ಬೂದಿಯಾಗಿ ಬಿಟ್ಟಿತ್ತು. ಯಾರೆಲ್ಲೆಲ್ಲ ಸೊಗಸಿದೆಯೊ ಸೊಬಗಿದೆಯೊ ಅವರಂತೆ ನಾನಾಗಬೇಕು ಎಂಬ ಅರ್ಥವಿಲ್ಲದ ನನ್ನ ಅಸೆ ವಾಂಛೆಯಾಗಿ ಬದುಕಿನುದ್ದಕ್ಕೂ ನನ್ನ ಹಿಂಬಾಲಿಸಿ ಬಂದು ಇವತ್ತು ನಾನು ಹೀಗಾಗಲು ಒಂದು ರೀತಿಯಲ್ಲಿ ಕಾರಣವಲ್ಲವೇ..? ನಾವು ಏನಾಗಬೇಕು, ನಮಗೆ ಏನು ಬೇಕು ಎಂದು ತಿಳಿಯಲು ಅಶಕ್ತರಾಗಿದ್ದಾಗ, ನಮ್ಮನ್ನು ಆಧರಿಸಲು ಯಾರೂ ಇಲ್ಲದಿದ್ದಾಗ, ಗೊತ್ತು ಗುರಿ ಇಲ್ಲದೆ ಬಾಳ ದೂಡುವವರ ಪಯಣದ ಕಥೆ ಹೀಗೆ ಅಲ್ಲವೇ..?” ಏನೋ ನವ ಹುರುಪು, ಹೊಸ ಹಿಗ್ಗಿನಲ್ಲಿದ್ದ ಚಾರ್ವಾಕ ತೀರಾ ಭಾವುಕನಾಗಿದ್ದಾನೆ. ಅವನ ಕಣ್ಣ ತುಂಬಾ ತೇಲಿ ಬರುತ್ತಿರುವ ನಾನಾ ಪಟಗಳು, ದೃಶ್ಯಗಳು. ಕನಸು ಕಂಡದ್ದು, ಹುಸಿಯಾದದ್ದು, ಘಾಸಿಗೊಂಡದ್ದು, ಭ್ರಮನಿರಸನಗೊಂಡದ್ದು. ಹುಟ್ಟು, ಬಾಲ್ಯ, ಬದುಕು, ತನ್ನವರು ಎಲ್ಲವೂ ನೆನಪಾಗುತ್ತಿದೆ ಅವನಿಗೆ…

 

ಅಭಿಗೆ ಉತ್ತರಿಸುವ ಯಾವ ಗೋಜಿಗೂ ಹೋಗದೆ ಮುಂದೆ ಕಾಣುತ್ತಿರುವ ವನದುರ್ಗೆಯ ಮೂರ್ತಿಯನ್ನೇ ದಿಟ್ಟಿಸುತ್ತಾ ತನ್ನ ಗತವನ್ನು ಹೀಗೆ ಮೆಲುಕು ಹಾಕುತ್ತಿರುವ ಚಾರ್ವಾಕ, ಈಗ, ದಿನ–ತಿಂಗಳುಗಳ ಲೆಕ್ಕ ಹಾಕುತ್ತಿದ್ದಾನೆ – ತನ್ನ ಭಾವಪ್ರಪಂಚವನ್ನು ಪ್ರವೇಶ ಮಾಡಿ ಧೀಂಗಿಣವಿಡುತ್ತಿರುವ ಹೆಜ್ಜೆಯ ಪರಿಚಯವಾಗಿ ಸಮಯವೆಷ್ಟಾಯಿತೆಂದು. ಪಾಂಡವಪುರ ನಗರದ ಪ್ರತಿಷ್ಠಿತ ಕಾಲೇಜಲ್ಲಿ ಓದಿ, ವಿಶ್ವವಿದ್ಯಾಲಯದ ಮೆಟ್ಟಿಲನ್ನು ತುಳಿದು ಸಮಾಜ, ಕಲೆ, ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಚಾರ್ವಾಕನಿಗೆ ಬಾಪು ಗಾಂಧಿ ಅಂದರೆ ಪುಳಕ. ಹಾಗಾಗಿ ಅವನದ್ದು ಮೊಬೈಲಲ್ಲಿ ಸದಾ ಗಾಂಧಿ ಕುರಿತ ವೀಡಿಯೋದ ಹುಡುಕಾಟ. ಇದು ಅವನಿಗೆ ದಣಿವಿರದ ಸಂಭ್ರಮದ ಕೆಲಸ. ಹೀಗೆ ಐದಾರು ತಿಂಗಳುಗಳ ಹಿಂದೆ ಯು-ಟ್ಯೂಬ್‌ನಲ್ಲಿ ಗಾಂಧಿಯ ಕುರಿತ ವೀಡಿಯೋವೊಂದನ್ನು ಹುಡುಕುತ್ತಿರಬೇಕಾದರೆ ಆಕಸ್ಮಿಕವಾಗಿ ಸಿಕ್ಕ ವ್ಯಕ್ತಿ ಮೇಳದ ಆಟದ ಶಂಕರನಾರಾಯಣ ಆಚಾರ್ಯರು. ಆದ್ರೆ ಈ ಆಚಾರ್ಯರು ಇಂದು ತನ್ನೊಳಗೆ ಇಷ್ಟೊಂದು ಆವರಿಸಿಕೊಂಡಿರುವುದನ್ನು ಅವನಿಗೇ ನಂಬಲು ಸಾಧ್ಯವಾಗುತ್ತಿಲ್ಲ. ಆ ಒಂದು ರಾತ್ರಿ ಯು-ಟ್ಯೂಬಲ್ಲಿ ಈ ಆಚಾರ್ಯರ ಸಂದರ್ಶನವೊಂದರ ವೀಡಿಯೋ ತುಣುಕೊಂದನ್ನು ಅಚಾನಕ್ಕಾಗಿ ಕಂಡ. ಕಲೆ, ಸಾಹಿತ್ಯದ ಕುರಿತು ಹುಚ್ಚನ್ನು ಬೆಳೆಸಿಕೊಂಡಿದ್ದ ಚಾರ್ವಾಕನಿಗೆ ಹಿರಿ ಕಲಾವಿದರ ಮಾತುಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಖುಷಿ. ಹಾಗಾಗಿ ಏನು ಹೇಳುತ್ತಾರೆ ನೋಡೋಣ ಎಂದು ಆಚಾರ್ಯರ ಮಾತುಗಳನ್ನು ಸಂಪೂರ್ಣ ಆಲಿಸಿದ. ಕಲೆಯ ಕುರಿತಂತೆ ಚಾರ್ವಾಕನಿಗೆ ರುಚಿಸುವ ಅನೇಕ ಮಾತುಗಳನ್ನು ಅಲ್ಲಿ ಆಚಾರ್ಯರು ಆಡಿದ್ದರು. ಯಕ್ಷಗಾನದ ಬಗ್ಗೆ ತನ್ನದೇ ಸರಿ ಎಂಬ ಹಠವಿಲ್ಲದ ಅವರ ನಿಲುವು, ಹೊಸ ವಿಚಾರಗಳಿಗೆ ಮತ್ತು ಪ್ರಯೋಗಗಳಿಗೆ ತೆರೆದುಕೊಳ್ಳುವ ಅವರ ಒಲವು- ಇವೆಲ್ಲವೂ ಚಾರ್ವಾಕನನ್ನು ಸೆಳೆದಿದ್ದವು.

ಹಾಗೆ ನೋಡಿದ್ರೆ ಶಂಕರನಾರಾಯಣ ಆಚಾರ್ಯರದ್ದು ಚಾರ್ವಾಕನಿಗೆ ಎಂದೂ ಕೇಳಿರದ ಹೊಸ ಹೆಸರೇನೂ ಅಲ್ಲ. ಕರಾವಳಿಯ ಎಲ್ಲ ಹುಡುಗರಂತೆ ಚಾರ್ವಾಕನೂ ಬಾಲ್ಯದಲ್ಲಿ ಆಟದ ಹುಚ್ಚನ್ನು ಬೆಳೆಸಿಕೊಂಡಿದ್ದವನು. ಅನೇಕ ವರ್ಷಗಳ ಹಿಂದೆ ಶಂಕರ ನಾರಾಯಣ ಆಚಾರ್ಯರ ತಿರುಗಾಟದ ಮೇಳ ದೇವಪುರ, ಹೊಸನಗರ ಮತ್ತು ಸುತ್ತಮುತ್ತಲ ಊರಲ್ಲಿ ಪ್ರದರ್ಶನಕ್ಕೆಂದು ಬಂದಾಗ ಆಟ ನೋಡಿದ್ದುಂಟು. ಮಳೆಗಾಲದಲ್ಲಿ ಆಷಾಢಮಾಸದಲ್ಲಿ ಸಂಪಿಗೆಪುರದ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ತಾಳಮದ್ದಲೆ ಸಪ್ತಾಹ ಕೂಟಕ್ಕೆ ಪ್ರತೀವರ್ಷವೂ ಆಚಾರ್ಯರು ತಪ್ಪದೆ ಬರುತ್ತಿದ್ದರು. ಆಗೆಲ್ಲ ಚಾರ್ವಾಕ ಅಲ್ಲಿಗೆ ಹೋಗಿ ಆಚಾರ್ಯರ ಅರ್ಥಗಾರಿಕೆ ಕೇಳಿದ್ದುಂಟು. ಅದು ಬಿಟ್ಟರೆ ಆಚಾರ್ಯರನ್ನು ತೀರಾ ಹತ್ತಿರದಲ್ಲಿ ನೋಡಿದ್ದು, ಮಾತಾಡಿಸಿದ್ದು ಚಾರ್ವಾಕನಿಗೆ ನೆನಪಿಲ್ಲ. ಅದರಲ್ಲೂ ಆ ಕಾಲಕ್ಕೆ ಯಕ್ಷಗಾನ ಕಲಾವಿದರಿಗೆಲ್ಲ ಅಹಂ ಜಾಸ್ತಿ ಎಂಬ ಪುಕಾರು ಊರಲ್ಲೆಲ್ಲ ಹರಡಿದ್ದ ಕಾರಣಕ್ಕಾಗಿ ಚಾರ್ವಾಕನಿಗೆ ಚೌಕಿಗೆ ಹೋಗೋದು, ಕಲಾವಿದರಲ್ಲಿ ಮಾತಾಡಿಸುವುದರ ಬಗ್ಗೆ ಅಂಜಿಕೆ ಇತ್ತು. ಮುಂದೆ ಅನೇಕ ವರ್ಷಗಳ ಕಾಲ ಚಾರ್ವಾಕ ಬೆಂಗಳೂರಲ್ಲಿ ಖಾಸಗಿ ಕಾಲೇಜೊಂದರಲ್ಲಿ ಕೆಲಸದಲ್ಲಿದ್ದ. ಇದರಿಂದಾಗಿ ಆಟದ ಸಂಪರ್ಕ ಸಂಪೂರ್ಣ ತಪ್ಪಿಹೋಯಿತು, ಬರ ಬರುತ್ತಾ ಆಸಕ್ತಿಯೂ ಕಡಿಮೆಯಾಗಿತ್ತು. ಅಲ್ಲಿಂದ ದೇವಪುರಕ್ಕೆ ವಾಪಾಸ್ ಬಂದು ಪಾಂಡವಪುರದಲ್ಲಿ ಕೆಲಸ ಸಿಕ್ಕು ಅನೇಕ ವರ್ಷಗಳಾದರೂ ತೀರಾ ಇತ್ತೀಚಿನವರೆಗೂ ಆಟದ ಬಗ್ಗೆ ಅವನಲ್ಲಿ ಅಂಥಾ ಉತ್ಸಾಹ ಏನೂ ಇರಲಿಲ್ಲ.

ಈಗ ಮತ್ತೆ ಆಚಾರ್ಯರ ಕಾರಣಕ್ಕಾಗಿ ಯಕ್ಷಲೋಕದ ಬಗ್ಗೆ ಸ್ವಲ್ಪ ಮಟ್ಟಿನ ಆಸಕ್ತಿ ಚಿಗುರಿದೆ. ಯು-ಟ್ಯೂಬಲ್ಲಿ ಒಮ್ಮೆ ನೋಡಿದ ವೀಡಿಯೋಗಳನ್ನೇ ಮತ್ತೆ ಮತ್ತೆ ನೋಡುವ ಚಟವನ್ನು ಬೆಳೆಸಿಕೊಂಡಿದ್ದಾನೆ. ಯು-ಟ್ಯೂಬಲ್ಲಿ ಲಭ್ಯವಿರುವ ಆಚಾರ್ಯರ ಎಲ್ಲ ಪಾತ್ರಗಳನ್ನು ನೋಡಿದ ಚಾರ್ವಾಕನಿಗೆ ಆಚಾರ್ಯರನ್ನು ಎಷ್ಟು ನೋಡಿದರೂ ದಣಿವಿಲ್ಲ. ಮೊನ್ನೆ ಮೊನ್ನೆಯವರೆಗೂ ಆಟ ಅಂದ್ರೆ ಬೋರ್ ಎಂದು ವಟಗುಟ್ಟುತ್ತಿದ್ದ ಈತ, ಈಗ ಆಚಾರ್ಯರ ಪಾತ್ರಗಳಲ್ಲಿ ತನ್ಮಯನಾಗಿದ್ದಾನೆ. ಮಧ್ಯರಾತ್ರಿಯವರೆಗೆ ಕೂತು ವೀಡಿಯೋ ನೋಡುವ ಈತ ನಿಂತಲ್ಲಿ ಕೂತಲ್ಲಿ ಪ್ರಯಾಣದಲ್ಲೂ ನಿದ್ರಿಸುವ ಸ್ಥಿತಿಗೆ ತಲುಪಿದ್ದಾನೆ. ಅಚಾರ್ಯರು ನಿರ್ವಹಿಸುವ ಪಾತ್ರಗಳು ತನಗೆ ಯಾಕೆ ಇಷ್ಟ ಎಂಬುದನ್ನು ಒಮ್ಮೊಮ್ಮೆ ತನ್ನ ಮನಸ್ಸಿಗೆ ಕೇಳಿಕೊಳ್ಳುತ್ತಾನೆ, ಹಾಗೆಲ್ಲ ಯೋಚನೆ ಬಂದಾಗ – ಆಚಾರ್ಯರ ಸ್ಫುರದ್ರೂಪೀ ಸಮಸುಂದರ ಆಕಾರ, ಆಕರ್ಷಕ ನೀಲಿ ಕಣ್ಣು, ಹದವಾದ ಎತ್ತರ, ಈಡು-ಜೋಡಿಲ್ಲದ ಸರ್ವಾಂಗ ಸುಂದರ ವೇಷ ಅವನ ಕಣ್ಣ ಮುಂದೆ ನಾಟ್ಯವಾಡುತ್ತದೆ. ಕೈಯ ಚುರುಕಿನ ಚಲನೆ, ಕಣ್ಣು-ಹುಬ್ಬುಗಳ ನಲಿದಾಟ, ರಾಜ ಅಂದ್ರೆ ಥೇಟ್ ರಾಜನೇ. ದೇಹವನ್ನು ಹಿಗ್ಗಿಸಿ-ಕುಗ್ಗಿಸಿ ಮುಂತಿಲ್ಲ-ಪಿಂತಿಲ್ಲವೆಂಬ ರೀತಿಯ ಮನಮೋಹಕ ನಾಟ್ಯ, ಗತ್ತಿನ-ಶಿಸ್ತಿನ ರಂಗ ನಡೆ, ಸೂಕ್ಷ್ಮ ರಂಗಪ್ರಜ್ಞೆ, ಎಲ್ಲವೂ ಬಿಡಿ ಬಿಡಿಯಾಗಿ ಆತನ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಗದಾಯುದ್ಧದ ಸುಯೋಧನನಾಗಿ, ಕರ್ಣಪರ್ವದ ಕರ್ಣನಾಗಿ, ಕೃಷ್ಣಾರ್ಜುನದ ಅರ್ಜುನನಾಗಿ, ಪಾದುಕಾ ಪ್ರದಾನದ ಭರತನಾಗಿ ಆಚಾರ್ಯರ ಭಾವತುಂಬಿದ ನೈಜಾಭಿನಯ ಚಾರ್ವಾಕನ ಮನಸೂರೆಗೊಂಡಿತ್ತು. ಬೆಳಗ್ಗಿನ ಜಾವದ ರಕ್ತಬೀಜಾಸುರನ ಪ್ರವೇಶ, ಮಧ್ಯರಾತ್ರಿ ಮೂರು ಗಂಟೆಯ ವೇಳೆಗೆ ಪ್ರವೇಶವಾಗುವ ಋತುಪರ್ಣ, ಇಂದ್ರಜಿತುವಿನಂಥಾ ಪಾತ್ರಗಳಿಗೆ ಆಚಾರ್ಯರು ಜೀವ ತುಂಬುತ್ತಾ ರಂಗಸ್ಥಳದಲ್ಲಿ ಪೌರಾಣಿಕ ಮಾಯಾಲೋಕವನ್ನು ಸೃಷ್ಟಿಸುವ ಬಗೆಯನ್ನು ಚಾರ್ವಾಕ ಕಣ್ಮನ ತುಂಬಿಕೊಳ್ಳುತ್ತಾನೆ, ಸಂಪೂರ್ಣ ರಸಾನಂದದಲ್ಲಿ ತೇಲಿ ಹೋಗುತ್ತಾನೆ. ಆಚಾರ್ಯರ ಈ ಎಲ್ಲ ವೇಷಗಳನ್ನು ನೋಡಿದ ಚಾರ್ವಾಕ ಆಚಾರ್ಯರಿಗೆ ರಂಗಸ್ಥಳದಲ್ಲಿ ನಿಜಕ್ಕೂ ಸರಿಸಾಟಿ ಯಾರೂ ಇಲ್ಲ ಅಂತ ಯೋಚಿಸುತ್ತಿದ್ದ.

 

ಆಚಾರ್ಯರ ಇಂಥಾ ಅದ್ಭುತ ಪಾತ್ರ ಪ್ರಸ್ತುತಿಯನ್ನು ಕಂಡು ರಾತ್ರಿ ಬೆಳಗಾಗುವುದರೊಳಗಾಗಿ ಅವರ ದೊಡ್ಡ ಅಭಿಮಾನಿಯಾದ ಚಾರ್ವಾಕನಿಗೆ ಅವರ ಪ್ರಭಾವಲಯದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ. `ಅಯ್ಯೋ ಇಂಥಾ ಅದ್ಭುತ ಕಲಾವಿದರ ಬಗ್ಗೆ ನಾನು ಮೊದಲೇ ತಿಳಿದುಕೊಳ್ಳಲೇ ಇಲ್ವಲ್ಲ, ನಾನೆಂಥ ಮುಠ್ಠಾಳ, ನನ್ನ ವಿಸ್ಮೃಗೆ ಏನೆನ್ನಲ್ಲಿ’ ಎಂದು ತನ್ನನ್ನು ಹಳಿಯುತ್ತ ಹೇಗಾದರೂ ಮಾಡಿ ಇವರಲ್ಲಿ ಮಾತಾಡಲೇ ಬೇಕು’ ಎಂದು ನಿರ್ಧರಿಸಿ ಗೆಳೆಯರೊಬ್ಬರಿಗೆ ಫೋನಾಯಿಸಿ ನಂಬರ್ ಪಡೆದೇ ಬಿಟ್ಟ. ಆದರೆ ಎಷ್ಟು ವೇಗವಾಗಿ ನಂಬರ್ ಪಡೆದುಕೊಂಡನೋ ಅಷ್ಟೇ ವೇಗವಾಗಿ ತನ್ನ ಭಾವನೆಯನ್ನು ಹಿಡಿದಿಟ್ಟು ಫೋನ್ ಮಾಡಲು ಹಿಂದೇಟು ಹಾಕಿದ. ಆ ಹೊತ್ತು ಅಂಜಿದ. `ಅವರಲ್ಲಿ ಏನೆಂದು ಮಾತಾಡಲಿ, ಇತ್ತೀಚೆಗೆ ನಾನು ಆಟವನ್ನೂ ಬೇರೆ ನೋಡುತ್ತಿಲ್ಲ, ಯಕ್ಷಗಾನದ ಅಪ್‌ಡೇಟ್ಸ್ ನನಗೇನೂ ತಿಳಿದಿಲ್ಲ, ಅಲ್ಲದೆ ಆ ಅಜ್ಜ ನೋಡುವಾಗಲೂ ಅಷ್ಟೊಂದು ಜೋವಿಯಲ್ ಆಗಿ ಇರುವ ಹಾಗೆ ಕಾಣಲ್ಲ, ಅವರ ಮುಖದಲ್ಲಿ ನಗುವೆಂಬುದೇ ಇಲ್ಲ’ ಎಂದು ಮಾತಾಡುವುದನ್ನು ಮುಂದಕ್ಕೆ ಹಾಕಿದ. ಹೀಗೆ ವಾರ ಮುಂದೆ ಹೋಯಿತು, ಎರಡು ವಾರ ಕಳೆಯಿತು. ಈ ನಡುವೆ ತನ್ನ ಕೆಲಸದ ನಡುವೆಯೂ ಚಾರ್ವಾಕನಿಗೆ ಆಚಾರ್ಯರು ಆಗಾಗ ನೆನಪಾಗುತ್ತಿದ್ದರು. ಕೊನೆಗೆ ಒಂದು ಸಂಜೆ ಗಟ್ಟಿ ಮನಸ್ಸು ಮಾಡಿ ಕರೆ ಮಾಡಿಯೇ ಬಿಟ್ಟ. ಫೋನ್ ರಿಂಗಾಗುತ್ತಿತ್ತು. ಇತ್ತ ಇವನ ಎದೆಯ ಢವಢವ ಬಡಿತ ಜೋರಾಗಿ ತನಗೆ ಮಾತ್ರವಲ್ಲ ಪಕ್ಕದಲ್ಲಿ ಇದ್ದವರಿಗೂ ಕೇಳಿಸುವ ಸಾಧ್ಯತೆ ಇತ್ತು. ಅಷ್ಟು ಹೆದರಿದ್ದ. ಯಾಕೆ ಈ ಹೆದರಿಕೆ ಎಂಬುದು ಅವನಿಗೆ ಈ ಹೊತ್ತಿನವರೆಗೂ ತಿಳಿದಿಲ್ಲ. ಆಚಾರ್ಯರು ತಾನು ಮಾತಾಡುತ್ತಿರುವುದು ಹೊಸ ವ್ಯಕ್ತಿಯಲ್ಲಿ ಎಂಬ ಯಾವ ಭಾವನೆಯನ್ನು ತೋರಿಸದೆ ಪರಿಚಿತರಲ್ಲಿ ಮಾತಾಡುವಂತೆಯೇ ಮಾತಾಡಿದ್ದರು. ತಮ್ಮ ಬದುಕಿನ ದೀರ್ಘ ಪಯಣದಲ್ಲಿ ಅಪಾರ ಅನುಭವವನ್ನು ಹೊಂದಿರುವ, ಸಾವಿರಾರು ಅಭಿಮಾನಿಗಳನ್ನು ಪಡೆದಿರುವ ಅವರಿಗೆ ಇವನು ಇನ್ನೊಬ್ಬ ಅನ್ನಿಸಿರಲೂಬಹುದು. ತಾನೊಬ್ಬ ದೊಡ್ಡ ಕಲಾವಿದ ಎಂಬ ಯಾವ ಅಹಂ ಇಲ್ಲದೆ ಮನುಷ್ಯನಿಗೆ ನೀಡಬೇಕಾದ ಎಲ್ಲ ಗೌರವವನ್ನು ಕೊಟ್ಟು ಪ್ರೀತಿಯಿಂದಲೇ ಆ ದಿನ ಅವರು ಮಾತಾಡಿದ್ದರು. ಅಂಥಾ ಆಚಾರ್ಯರನ್ನು ಮೊದಲೇ ಭಾವಜೀವಿಯಾದ ಚಾರ್ವಾಕ ಅಲ್ಲಿಂದ ನಂತರ ಬಿಟ್ಟು ಬಿಡಲು ಕಾರಣಗಳೇ ಇರಲಿಲ್ಲ. ತಾನೂ ಕಲೆಯಲ್ಲಿ ಸೇರಬೇಕು, ಏನಾದರೂ ಆಗಬೇಕು, ಕೊನೆಯ ಪಕ್ಷ ನಾಲ್ಕು ಹೆಜ್ಜೆಯನ್ನಾದರೂ ಕಲೀಬೇಕು ಎಂಬ ಆಸೆ ಹುಟ್ಟಿದ್ದೇ ಇಲ್ಲಿಂದ, ಇದೇ ಆಚಾರ್ಯರಿಂದ.

ಅಷ್ಟೂ ಹೊತ್ತು ತಾಳ್ಮೆವಹಿಸಿ ಮೌನವಾಗಿಯೇ ಇದ್ದ ಅಭಿ ಈಗ ತುಸು ವ್ಯಗ್ರನಾಗಿದ್ದಾನೆ. ಕಣ್ಣು ಕೆಂಪಾಗಿದೆ. ಚಾರ್ವಾಕನ ಅನ್ಯಮನಸ್ಕತೆಯನ್ನು ಭೇದಿಸುವ ರೀತಿಯಲ್ಲಿ `ಲೋ ಯಾಕೆ ಹಿಂಗೆ ತಲೆಗೆ ಏಟಾದವರ ಹಾಗೆ ವರ್ತಿಸುತ್ತಿದ್ದೀಯಾ? ನಾನು ಕೇಳಿದ್ದೇನು? ನೀನಿಲ್ಲಿ ಮಾಡ್ತಿರೋದೇನು?” ಎಂದು ಸ್ವಲ್ಪ ಗಟ್ಟಿಯಾಗಿಯೇ ಕೇಳಿದ. ಚಾರ್ವಾಕನಿಗೆ ಈಗ ಮಾತು ತಪ್ಪಿಸಲು ನೆವನವಿಲ್ಲ. ಈ ಕ್ಷಣಕ್ಕೆ ಇವನ ಬಾಯಿಮುಚ್ಚಿಸಬೇಕೆಂದು ನಿರ್ಧರಿಸಿ ಎಲ್ಲ ಅಲ್ಲದಿದ್ದರೂ ಅರ್ಧಂಬರ್ಧ ಹೇಳಿ ಇಲ್ಲಿಂದ ತಾನು ಜಾಗ ಖಾಲಿ ಮಾಡಬೇಕು ಎಂದು ಯೋಚಿಸುತ್ತಾ, “ನನಗೆ ಬೇರೆ ಏನಾದರೂ ಮಾಡಬೇಕು ಎಂದು ಅನ್ನಿಸಲು ಶುರುವಾಗಿದೆ. ಈಗ ನನ್ನಿಂದ ಏನೂ ಆಗ್ತಿಲ್ಲ. ನಾನು ಏನನ್ನೂ ಮಾಡ್ತಾ ಇಲ್ಲ. ಒಂದು ಬಗೆಯ ಖಾಲಿತನ ನನ್ನನ್ನು ಕಾಡ್ತಾ ಇದೆ, ನಾನೂ ಒಂದು ಪಾತ್ರವಾಗಬೇಕು…” ಎಂದ.

“ಹೊಸತು ಏನು ಮಾಡೋದು? ಎಲ್ಲವೂ ಸರಿಯಾಗಿಯೇ ಇದೆ ಅಲ್ವ… ಪಾತ್ರನಾ..? ಏನು ಪಾತ್ರ?” ಎಂದ ಅಭಿ ಏನೂ ಅರ್ಥವಾಗದೆ ಮುಗ್ಧನಾಗಿ.

“ಅಲ್ಲ, ಅದು ಹಾಗಲ್ಲ…”

“ಸದ್ದುಗದ್ದಲದ ದನಿಗಳಾಚೆಗೆ ನಿಂತು ನಿಶ್ಯಬ್ದದಲ್ಲಿ ನನ್ನ ನಾನು ಕಾಣಬೇಕೆಂಬ ನನ್ನ ಬಯಕೆಯನ್ನು ಇವನಿಗೆ ಹೇಗೆ ಹೇಳಲಿ? ತಾರೆಗಳಿಂದ ತುಂಬಿದ ನಭವಾಗಿ ವಿಸ್ತಾರ ಚಾಚಿಕೊಳ್ಳಬೇಕೆಂಬ ನನ್ನ ಕನಸು ಇವನಿಗೆ ಅರ್ಥವಾದೀತೆ? ನನ್ನೊಳಗೆ ಇಷ್ಟೆಲ್ಲ ತುಂಬಿದೆ ಎಂದು ಇವನಿಗೆ ಅಥವಾ ಯಾರಿಗಾದರೂ ತಿಳಿಯಲು ಸಾಧ್ಯವೇ? ಇಲ್ಲ, ಸಾಧ್ಯವೇ ಇಲ್ಲ.” ಮತ್ತೆ ಮೌನಕ್ಕೆ ಶರಣಾದ ಚಾರ್ವಾಕನನ್ನು ಕಂಡು ಅಭಿಗೆ ಏನನ್ನಿಸಿತೋ ಗೊತ್ತಿಲ್ಲ. ನೇರವಾಗಿ ತನ್ನ ಗಾಡಿಯ ಹತ್ತಿರ ಬಂದು ಸ್ಟಾರ್ಟ್ ಮಾಡಿ ಹೊರಡುವ ಮೊದಲು ಹೇಳಿದ “ನಾನು ಹೊರಟೆ. ಮನೆಗೆ ತರಕಾರಿ ಕೊಂಡು ಹೋಗ್ಬೇಕು. ಹಾಜಿಯಬ್ಬರ ಅಂಗಡಿಯ ಹತ್ತಿರ ಬರುವುದಾದರೆ ಬಾ. ಇಲ್ಲವಾದರೆ ನಾಳೆ ಸಿಗೋಣ…” ಸ್ವಲ್ಪ ಹೊತ್ತು ತಡೆದು, ಮತ್ತೆ ಗಾಡಿ ತಿರುಗಿಸಿ ದೇವಪುರದ ಮಾರ್ಗವನ್ನು ಹಿಡಿದ. ಗೆಳೆಯನಿಗೆ ಬೇಸರವಾದುದನ್ನು ಅರ್ಥೈಸಿಕೊಳ್ಳಲಾಗದಷ್ಟು ಮೂಢನಲ್ಲದ ಚಾರ್ವಾಕ, ಕೊನೆಯಪಕ್ಷ ಇವನಲ್ಲಾದರೂ ನನ್ನ ಮನಸ್ಸಿನ ಹೊಯ್ದಾಟವನ್ನು ಹೇಳಬಹುದಿತ್ತಲ್ಲ ಅಂತ ಒಂದು ಕ್ಷಣ ಅಂದುಕೊಂಡು, ಏನೂ ಹೇಳಲಾಗದ್ದಕ್ಕೆ ಬೇಸರಗೊಂಡು ತಾನೂ ಅಲ್ಲಿಂದ ಹೊರಟ.

ಒಂದು ಕಾಲಕ್ಕೆ ಯಾವುದನ್ನೇ ಆದರೂ ವಿಪರೀತವಾಗಿ ಮಾಡುತ್ತಿದ್ದ ಚಾರ್ವಾಕ ಪ್ರೀತಿ- ಕೋಪ, ಹೊಗಳಿಕೆ-ತೆಗಳಿಕೆಯ ವಿಷಯದಲ್ಲೂ ಹಾಗೆ ತೀರಾ ಮುಂದೆ ಹೋಗಿ, ಇಲ್ಲ ಸಲ್ಲದ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಾ ಕೊನೆಗೆ ವಾಸ್ತವದ ಅರಿವಾಗಿ ನೆಲಕ್ಕೆ ಕುಸಿಯುತ್ತಿದ್ದ. ಈಗ ಹಿಂದಿನ ಆ ಎಲ್ಲ ಅತಿ ಮಿತಿಯಲ್ಲಿದ್ದರೂ ಸಂಪೂರ್ಣವಾಗಿ ಅದರಿಂದ ಹೊರಬರಲಾಗದೇ ತನ್ನೊಳಗೆ ಹೋರಾಟ ನಡೆಸುತ್ತಲೇ ಇದ್ದಾನೆ. ಇವನ ಸ್ವಭಾವದ ಬಗ್ಗೆ ಆ ಊರಲ್ಲಿ ಬಲ್ಲವರಾರು ಎಂದು ಕೇಳಿದ್ರೆ ಅದು ಅಂಗಡಿಯ ಹಾಜಿಯಬ್ಬರು, ಸ್ವಲ್ಪ ಮಟ್ಟಿಗೆ ಚಾರ್ವಾಕನ ಎದುರು ಮನೆಯ ಗಿರಿಯಪ್ಪಣ್ಣ ಮತ್ತು ಪಕ್ಕದ ಮನೆಯ ರಿಕ್ಷಾದ ಕಾಂತಣ್ಣ ಮಾತ್ರ. ಚಾರ್ವಾಕನಿಗೆ ಅಭಿಯನ್ನು ಬಿಟ್ಟರೆ ದೇವಪುರದ ಹಿರಿಯರಲ್ಲಿ ಈ ಮೂವರಲ್ಲೇ ಹೆಚ್ಚು ಆತ್ಮೀಯತೆ ಇದ್ದುದು. ಅದರಲ್ಲೂ ಹಾಜಿಯಬ್ಬರಿಗಂತೂ ಉಳಿದೆಲ್ಲವರಿಗಿಂತ ತುಸು ಹೆಚ್ಚೇ ಗೊತ್ತಿದೆ. ಹಾಜಿಯಬ್ಬರು ಅಂಗಡಿಗೆ ಬರುತ್ತಿದ್ದ ಗಿರಾಕಿಗಳಿಗೆ ಸಾಮಾನು ಕಟ್ಟಿ ಕೊಡುತ್ತಾ, ಕೆಲವೊಮ್ಮೆ ಚಹ ಮಾಡುತ್ತಾ ತಮ್ಮ ಕೆಲಸದಲ್ಲಿ ತಾವು ಮುಳುಗಿರುತ್ತಿದ್ದರೂ ಅಲ್ಲಿ ಬಂದು ಸೇರುತ್ತಿದ್ದ ಕೆಲವರನ್ನಾದರೂ ಬಲ್ಲವರಾಗಿದ್ದರು. ಆದರಲ್ಲೂ ಚಾರ್ವಾಕನ ಬಗ್ಗೆ ಹಾಜಿಯಬ್ಬರಿಗೆ ಮೊದಲಿನಿಂದಲೂ ವಿಶೇಷ ವಾತ್ಸಲ್ಯ. ಹೊಟ್ಟೆಗಿಲ್ಲದೆ ಶಾಲೆಗೆ ಹೋಗುತ್ತಿದ್ದ ಮುದ್ದು ಮುಖದ ಚಾರ್ವಾಕನನ್ನು ಕಂಡರೆ ಅವರಿಗೆ ಇನ್ನಿಲ್ಲದ ಅಕ್ಕರೆ ಇತ್ತು. ನಾಲ್ಕು ಹೆಣ್ಣು ಮಕ್ಕಳ ಹಾಜಿಯಬ್ಬರಿಗೆ ಈ ಹುಡುಗನಲ್ಲಿ ತನ್ನ ಮಗನ ಮೇಲಿನ ಮಮತೆ. ಸಂಜೆಯ ವೇಳೆಗೆ ಹಸಿದು ಬರುತ್ತಿದ್ದ ಅವನಿಗೆ ಹೊಟೇಲಿನ ದೋಸೆ, ಅಕ್ಕಿ ರೊಟ್ಟಿ ಅಂತ ತಿನ್ನಲು ಏನಾದರೂ ಕೊಡುತ್ತಿದ್ದರು. ಚಾರ್ವಾಕ ಅಭಿಯಲ್ಲಿ ಹೇಳಿದಂತೆ ಅವನಿಗೆ ಮೊದಲ ಬಾರಿ ಚಾಕಲೇಟ್ ಕೊಡಿಸಿದ್ದೇ ಈ ಹಾಜಿಯಬ್ಬರು. ಸ್ಕೂಲ್‌ಡೇಗೆ ಅಂತ ಒಂದು ಬಾರಿ ಚಾರ್ವಾಕನಿಗೆ ಜೀನ್ಸ್ ಪ್ಯಾಂಟ್ ಕೊಡಿಸಿದ್ದನ್ನು ಯಾವುದೋ ಸಂದರ್ಭದಲ್ಲಿ ಬಾಯಿತಪ್ಪಿ ಚಾರ್ವಾಕ ಅಭಿಗೆ ಹೇಳಿದ್ದ.

ಕಾಲೇಜಿಗೆ ಹೋಗುವಾಗಲೂ ಕೆಲವೊಮ್ಮೆ ಖರ್ಚಿಗೆ ಅಂತ ದುಡ್ಡು ಕೊಟ್ಟದ್ದು ಉಂಟು. ಹೀಗೆ ಹಾಜಿಯಬ್ಬರು ಚಾರ್ವಾಕನ ಮೇಲೆ ತೋರಿಸುತ್ತಿದ್ದ ಅಪಾರ ಮಮತೆ–ವಾತ್ಸಲ್ಯವನ್ನು ಅಂಗಡಿಯಲ್ಲಿ ಸೇರುತ್ತಿದ್ದ ಜನರು ಗಮನಿಸದೇ ಇರಲಿಲ್ಲ. ಗಂಡು ಮಕ್ಕಳಿಲ್ಲದ ಹಾಜಿಯಬ್ಬರಿಗೆ ಪಾಪದ ಈ ಹುಡುಗನ ಮೇಲೆ ಸ್ವಲ್ಪ ಪ್ರೀತಿ ಹೆಚ್ಚು ಅಂತ ಭಾವಿಸಿದವರೇ ಹೆಚ್ಚು. ಆದರೆ ರಿಕ್ಷಾದ ಕಾಂತಣ್ಣ ಅಂಥಾ ಕೆಲವರು ಮಾತ್ರ ಇವರ ನಂಟಿಗೆ ಬೇರೆಯೇ ಅರ್ಥವನ್ನು ಕಲ್ಪಿಸಿ ಗಾಸಿಪ್ ಸೃಷ್ಟಿಸಿ, ಸುದ್ದಿ ಮಾಡಿದ್ದರು. ಹಾಜಿಯಬ್ಬರು ದೇವಪುರಕ್ಕೆ ಬಂದ ಶುರುವಲ್ಲಿ ದೇವಪುರ ಮತ್ತು ಸುತ್ತಲ ಹಳ್ಳಿಗಳಲ್ಲಿ ಕೆಲವು ನಡುವಯಸ್ಸಿನ ಗಂಡಸರು ಚಂದದ ಹುಡುಗರನ್ನು ತಮ್ಮ ಲೈಂಗಿಕಾಸಕ್ತಿಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುತ್ತಿದ್ದುದರ ಬಗ್ಗೆ ಜನರು ಆಡಿಕೊಳ್ಳುತ್ತಿದ್ದರು. ಬಡ ಹಿಂದೂ ಹುಡುಗರು ಹೊಟ್ಟೆ ಬಟ್ಟೆಯ ಸಮಸ್ಯೆಯನ್ನು ನೀಗಿಸಿಕೊಳ್ಳುವುದಕ್ಕಾಗಿ ದುಡ್ಡು, ಊಟ-ತಿಂಡಿಯ ಮೇಲಿನ ಆಸೆಯಿಂದ ಗಂಡು ವೇಶ್ಯೆರಾಗುತ್ತಿದ್ದಾರೆ ಎಂದೆಲ್ಲ ಕಾಂತಣ್ಣನಂಥಾ ಜನರು ಪುಕಾರು ಎಬ್ಬಿಸಿದ್ದರು. ಹಾಗಾಗಿ ನೋಡಲು ಅತ್ಯಂತ ಸ್ಫುರದ್ರೂಪಿಯಾಗಿದ್ದ ಚಾರ್ವಾಕನ ಮೇಲೆ ಹಾಜಿಯಬ್ಬರು ಕಣ್ಣು ಹಾಕಿದ್ದಾರೆ ಎಂದು ಮುಸಲ್ಮಾನರೆಲ್ಲರನ್ನು ಸದಾ ಅನುಮಾನದ ಕೆಂಗಣ್ಣಿನಿಂದಲೇ ನೋಡುತ್ತಿದ್ದ ರಿಕ್ಷಾದ ಕಾಂತಣ್ಣ ಆಗಾಗ್ಗೆ ಅಭಿಯಲ್ಲಿ ಹೇಳುತ್ತಿದ್ದರು. ಆದರೆ ಗೆಳೆಯನ ಬಗ್ಗೆ ಚೆನ್ನಾಗಿ ಅರಿತದ್ದ ಅಭಿ ಕಾಂತಣ್ಣನ ಸಂಶಯದ ಮಾತಿಗೆ ಯಾವತ್ತೂ ಸೊಪ್ಪು ಹಾಕುತ್ತಿರಲಿಲ್ಲ. ಬದಲಿಗೆ ಚಾರ್ವಾಕ ಮತ್ತು ಹಾಜಿಯಬ್ಬರ ಸಂಬಂಧದ ಬಗ್ಗೆ ಈ ಕಾಂತಣ್ಣನಿಗೆ ವಿನಾ ಕಾರಣ ಕಿಚ್ಚು ಎಂದೇ ತಿಳಿದಿದ್ದ. ಕಾಂತಣ್ಣನಿಗೆ ಹಿಂದೂ ಹುಡುಗ ಅನ್ಯಾಯವಾಗಿ ಹಾಜಿಯಬ್ಬರಿಂದ ಹಾಳಾಗುತ್ತಿದ್ದಾನೆ ಎಂಬ ಅನಗತ್ಯ ಭಯ. ಹಾಜಿಯಬ್ಬರು ಮಾತ್ರ ಇದಕ್ಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕರುಬುವವರನ್ನು ಕಂಡು ನಗುತ್ತ, ಪ್ರೀತಿಸುವವರಿಗೆ ಬೊಗಸೆ ತುಂಬಾ ಮಮತೆ ತೋರುತ್ತಾ ಅಂದಿನಿಂದ ಇಂದಿನವರೆಗೂ ತಮ್ಮದೇ ಘನತೆಯಲ್ಲಿ ದೇವಪುರದಲ್ಲಿ ಬಾಳುತ್ತಾ ಬಂದಿದ್ದಾರೆ.

ಹೀಗೆ ಚಿಕ್ಕವನಿಂದ ಹಿಡಿದು ಇಲ್ಲಿಯವರೆಗೆ ನೋಡುತ್ತ ಬಂದಿದ್ದ ಈ ಹುಡುಗನ ಚರ್ಯೆಯಲ್ಲಾದ ಇತ್ತೀಚಿನ ಬದಲಾವಣೆಯ ಬಗ್ಗೆ ಅವರಿಗೆ ತಿಳಿಯದೇನೂ ಅಲ್ಲ. ಆದರೆ ಅದನ್ನು ಯಾರಲ್ಲೂ ಹೇಳಿರದ ಅವರು, ಈ ಚಾರ್ವಾಕ ಈಗ ಮೊದಲಿನ ಹುಡುಗ ಅಲ್ಲ ಬೆಳೆದು ದೊಡ್ಡವನಾಗಿದ್ದಾನೆ, ನಾನು ಏನಾದರೂ ಕೇಳಿದ್ರೆ ಸರಿಯಾಗಿ ಉತ್ತರ ಕೊಡುತ್ತಾನೋ ಇಲ್ಲವೋ ಎಂಬ ಅನುಮಾನದಲ್ಲಿದ್ದರು. ಅವನನ್ನು ಏನೋ ಕೊರೆಯುತ್ತಿದೆ, ಅವನನ್ನೇ ಕೇಳೋಣ ಅಂತ ಒಮ್ಮೆ ಮಾತು ನಾಲಗೆಯ ತುದಿಯವರೆಗೆ ಬಂದದ್ದುಂಟು. ಆದರೆ ಚಾರ್ವಾಕನ ಘನಗಂಭೀರ ಮುಖದರ್ಶನದಿಂದ ಅಂಜಿ, ಸಂಕೋಚಪಟ್ಟು ಸುಮ್ಮನಾಗಿದ್ದರು. ಚಾರ್ವಾಕ ಹಾಜಿಯಬ್ಬರ ಹೊಟೇಲಿಗೆ ಬಂದರೆ ಯಾವಾಗಲೂ ಎಲ್ಲರಲ್ಲೂ ಉತ್ಸಾಹದಿಂದಲೇ ಮಾತಾಡುವವನು. ಆದರೆ ಕೆಲವೊಮ್ಮೆ ಮಾತ್ರ ಅವನನ್ನು ಕಂಡಾಗ ಇವನಲ್ಲಿ ಮಾತಾಡುವುದು ಹೇಗಪ್ಪ ಅಂತ ಹಾಜಿಯಬ್ಬರಿಗೂ ಅನ್ನಿಸಿದ್ದು ಉಂಟು.

ಮೂಡ್ ಚೆನ್ನಾಗಿದ್ದಾಗ ಚಾರ್ವಾಕ್ ಇಷ್ಟಪಟ್ಟು ಮಾತಾಡುತ್ತಿದ್ದದ್ದು ಅವನ ಅಣ್ಣನ ಮಕ್ಕಳಲ್ಲಿ. ಅಪರೂಪದಲ್ಲಿ ತನ್ನ ಕಾರ್ಯಕ್ರಮ-ಕೆಲಸ, ಅದು ಇದು ಅಂತ ಅವರಲ್ಲಿ ಹೇಳೋದು ಇದೆ. ತಾನು ಸೋತೆ ಎಂದು ಭಾವಿಸಿ ತೀರಾ ಕುಸಿಯುತ್ತಿರುವಾಗ ಹೊಸ ಬಟ್ಟೆ ಕೊಂಡುಕೊಳ್ಳಬೇಕೆಂಬ ಬಯಕೆ ತೀವ್ರಗೊಂಡು ಶಾಪಿಂಗ್ ಮಾಡಿ ತರುತ್ತಿದ್ದ ಶರ್ಟ್ ಗಳನ್ನು ತೋರಿಸಬೇಕೆಂದು ಅವನಿಗೆ ಅನ್ನಿಸುತ್ತಿದ್ದದ್ದು ಅವರಲ್ಲಿ ಮಾತ್ರ. ಅದು ಬಿಟ್ಟರೆ ತನ್ನ ಒಡಹುಟ್ಟಿದವರಲ್ಲಿ, ಜಾತಿ ಬಾಂಧವ ಸಂಬಂಧಿಕರಲ್ಲಿ ಅವನಿಗೆ ಭಾವನಾತ್ಮಕವಾದ ಒಡನಾಟವಾಗಲಿ, ಸೆಳೆತವಾಗಲಿ ಇರಲಿಲ್ಲ. ಬಹುತೇಕ ಫ್ಯಾಮಿಲಿ ಕಾರ್ಯಕ್ರಮಗಳಿಂದ ದೂರ ಇದ್ದು ಬಿಡುತ್ತಿದ್ದ ಆತ, ಎಲ್ಲರಿದ್ದೂ ತನ್ನೊಳಗೆ ಮಾತ್ರ ಒಬ್ಬಂಟಿಯಾಗಿದ್ದ. ಹೊರಜಗತ್ತಿಗೆ ನಿಗೂಢವಾಗಿದ್ದ. ಅದು ತನ್ನ ಓದಿನಿಂದ ಬಂದ ತತ್ತ್ವ ಸಿದ್ಧಾಂತದ ತೊಡಕೇ? ಅಥವಾ ಬದುಕುವ ಕಲೆಯರಿಯದ ತನ್ನ ವ್ಯಕ್ತಿತ್ವದ ಸಮಸ್ಯೆಯೇ? ಒಂದೂ ಅವನಿಗೆ ಅರ್ಥವಾಗದು. ಚಾರ್ವಾಕನಿಗೆ ಈಗೀಗ ಎದ್ದರೆ, ನಿಂತರೆ, ಕೂತರೆ ಆಚಾರ್ಯರದ್ದೇ ನೆನಪು. ನಿದ್ರೆಯಲ್ಲೂ ಎಚ್ಚರದಲ್ಲೂ ಅವರೇ. ಅಷ್ಟರಮಟ್ಟಿಗೆ ತನ್ನ ಮೈಮನಗಳಲ್ಲಿ ಅವರು ತುಂಬಿಕೊಂಡಿದ್ದಾರೆ. ದೇವಪುರದ ಮತ್ತು ತಾನು ಕೆಲಸ ಮಾಡುತ್ತಿರುವ ಪಾಂಡವಪುರದ ಸಮೀಪ ನಡೆದ ಆಚಾರ್ಯರ ಮೇಳದ ಆಟದ ಹತ್ತಿರ ಹೋಗಿ ಬಣ್ಣದ ಮನೆಯಲ್ಲಿ ಕುಳಿತು ಅವರಲ್ಲಿ ಅನೇಕ ಬಾರಿ ಮಾತಾಡಿ ಬಂದಿದ್ದಾನೆ. ಆಚಾರ್ಯರು ಅಷ್ಟೇ. ಮೊದಲ ಬಾರಿ ಇವನನ್ನು ಭೇಟಿ ಮಾಡಿದ ಸಂದರ್ಭದಲ್ಲಂತೂ ಬಹಳ ಚೆನ್ನಾಗಿ ಉಪಚರಿಸಿ ಆ ಭೇಟಿಯನ್ನು ಸ್ಮರಣೀಯಗೊಳಿಸಿದ್ದರು.

ಪುಸ್ತಕವೊಂದನ್ನು ನೀಡಿ, ‘ಕಾಫಿ ಕುಡಿಯುತ್ತೀಯಾ, ಊಟ ಮಾಡ್ತೀಯಾ’ ಎಂದೆಲ್ಲ ಕೇಳಿ ಚಾರ್ವಾಕನ ಮನಸೆಳೆದಿದ್ದರು. ಆಗೆಲ್ಲ ಅವನಿಗೆ ಆಚಾರ್ಯರು ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಕೆಳಬೈಲು ಗೋಪಾಲಯ್ಯರ ಹಾಗೆ ಕಾಣಿಸಿದ್ದು. ಆಚಾರ್ಯರಲ್ಲೂ ಅದೇ ಮಮತೆ ತುಂಬಿದ ಗೋಪಾಲಯ್ಯರ ಮಾತಿನ ಶೈಲಿ. ಮೊದಲ ಭೇಟಿಯಾದರೂ ತುಂಬಾ ಹೊತ್ತು ಬಣ್ಣದ ಮನೆಯಲ್ಲಿ ಕಳೆದ ಚಾರ್ವಾಕನಿಗೆ ಆ ದಿನ ಆಚಾರ್ಯರನ್ನು ಬಿಟ್ಟು ಮನೆಗೆ ಬರಲು ಮನಸ್ಸೇ ಇರಲಿಲ್ಲ. ಆದ್ರೆ ದೇವಪುರಕ್ಕೆ ಹೋಗುವ ಕೊನೆಯ ಬಸ್ಸನ್ನು ತಾನು ತಪ್ಪಿಸಿಕೊಂಡ್ರೆ ಬಸ್‌ಸ್ಟ್ಯಾಂಡೇ ಗತಿ ಎಂದು ಮನಸ್ಸಿಲ್ಲದ ಮನಸ್ಸಲ್ಲಿ ಭಾರದ ಹೆಜ್ಜೆ ಹಾಕಿ ಚಾರ್ವಾಕ ಅಂದು ಹೊರಟಿದ್ದ.

ಅದೊಂದು ದಿನ ಆಚಾರ್ಯರ ಜನ್ಮದಿನ. ಆಚಾರ್ಯರಿಗೆ ಫೋನಾಯಿಸಿ ಶುಭ ಕೋರಲೇ ಬೇಡವೇ ಗೊಂದಲ ಚಾರ್ವಾಕನಿಗೆ. “ಈ ಅಜ್ಜ ಕಾಣಲು ಸಂಪ್ರದಾಯವಾದಿಗಳ ಹಾಗೆ ಇದ್ದಾರೆ. ಹಳೆಕಾಲದ ಅಜ್ಜಂದಿರಿಗೆಲ್ಲ ಹುಟ್ಟುಹಬ್ಬ ಅಂತ ಆಚರಣೆ ಇರಲ್ಲ. ಮತ್ತೆ ಕೆಲವರಿಗೆ ಹುಟ್ಟುಹಬ್ಬದ ಶುಭಾಶಯಗಳೂ ಇಷ್ಟವಾಗುವುದಿಲ್ಲ. ಅದೆಲ್ಲ ಪೇಟೆಯವರ ಸ್ಟೈಲ್ ಅಂತ ಇವರೂ ಹಾಗೆ ಏನಾದರೂ ನೇರವಾಗಿ ಹೇಳಿ ಬಿಟ್ರೆ…” ಅವನೊಳಗೆ ನೂರು ಯೋಚನೆಗಳು. ಹೊಟ್ಟೆಯಲ್ಲಿ ಚಿಟ್ಟೆ ಓಡಾಡುತ್ತಿರುವ ಅನುಭವ. ಬೆವರು, ಚಡಪಡಿಕೆ… ಚಾರ್ವಾಕ್ ಫೋನ್ ಮಾಡುವ ಕಾರ್ಯಕ್ರಮವನ್ನು ಸದ್ಯಕ್ಕೆ ತಡೆಹಿಡಿದ. ಹಾಗೆ ನೋಡಿದರೆ ಈ ಹಿಂದೆ ಫೋನ್ ಮಾಡಿದಾಗಲೆಲ್ಲ ಚಾರ್ವಾಕನಲ್ಲಿ ಆಚಾರ್ಯರು ಸರಿಯಾಗಿಯೇ ಮಾತಾಡಿದ್ದರು. `ನಾನು ಫೋನ್ ಮಾಡುವುದರಿಂದ ನಿಮಗೆ ಏನಾದರೂ ಕಿರಿಕಿರಿಯಾಗುವುದಾದರೆ ದಯವಿಟ್ಟು ಮೊದಲೇ ಹೇಳಿ’ ಎಂದು ಚಾರ್ವಾಕ ಒಮ್ಮೆ ಆಚಾರ್ಯರಲ್ಲಿ ಹೇಳಿದಾಗ `ನನಗೆ ಏನೂ ತೊಂದರೆ ಇಲ್ಲ, ನೀವು ಯಾವಾಗ ಬೇಕಾದರೂ ಫೋನ್ ಮಾಡಬಹುದು’ ಅಂತ ಅವರು ಹೇಳಿದ್ದರೂ ಆಚಾರ್ಯರು ಬ್ರಾಹ್ಮಣರಾಗಿದ್ದಕ್ಕೋ ಅಥವಾ ಯಾವಾಗಲೂ ಗಂಭೀರವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಬಗ್ಗೆ ಚಾರ್ವಾಕನಿಗೆ ಏನೋ ಒಂದು ಬಗೆಯ ಭಯ.

ಯಾರಲ್ಲಾದರೂ ಒಂದೆರಡು ಬಾರಿ ಮಾತಾಡಿದಾಗ ಬೇಗನೆ ಸಲುಗೆಗೆ ಬೀಳುತ್ತಿದ್ದ ಚಾರ್ವಾಕ್‌ಗೆ ಆಚಾರ್ಯರ ವಿಷಯದಲ್ಲಿ ಮಾತ್ರ ಹಾಗಾಗಲೇ ಇಲ್ಲ. ಹಾಗಿದ್ದರೂ ಆಚಾರ್ಯರೆಂದರೆ ಅವನೊಳಗೆ ಸದಾ ಒಂದು ಬಗೆಯ ಪುಳಕ. ಆದರೆ ಪ್ರತೀ ಬಾರಿ ಫೋನಾಯಿಸುವಾಗ ಮಾತ್ರ ಏನೋ ತಳಮಳ. ಹಾಗಾಗಿ ಈ ಹೊತ್ತು ಅವನಲ್ಲಿ ಪ್ರಶ್ನೆಗಳ ಮೆರವಣಿಗೆ ಹೊರಟಿವೆ. `ನನಗೆ ಏನಾಗಿದೆ? ನನ್ನ ಮತ್ತು ಈ ಆಚಾರ್ಯರ ನಡುವಿನ ಸಂಬಂಧ ಎಂಥಾದ್ದು? ಅವರೊಬ್ಬ ಕಲಾವಿದ. ಕಲಾಭಿಮಾನಿಯಾಗಿ ನಾನು ಅವರಲ್ಲಿರುವ ಕಲೆಯನ್ನು ಕಣ್ತುಂಬಬೇಕೇ ಹೊರತು ಅದರಾಚೆಗಿನ ಸಂಬಂಧವನ್ನು ಅವರೊಂದಿಗೆ ಕಟ್ಟಿಕೊಳ್ಳಲು ಹವಣಿಸುತ್ತಿರುವೆನೆ? ಈ ಹವಣಿಕೆಯೇ ನನ್ನಲ್ಲಿ ಇಷ್ಟೊಂದು ಗಾಬರಿ ಹುಟ್ಟಿಸುತ್ತಿರುವುದೇ? ನನ್ನ ಮನಸ್ಸು ಅವರಿಗೆ ಹತ್ತಿರವಾಗಲು ಬಯಸುತ್ತಿದೆಯಲ್ಲ… ಅವರನ್ನು ನಾನು ನಿಜವಾಗ್ಲೂ ಸರಿಯಾಗಿ ಅರ್ಥ ಮಾಡಿಕೊಂಡದ್ದೇನೆಯೇ…? ನನ್ನ ತಪ್ಪು ಭಾವನೆಯಿಂದ ವಿನಾ ಕಾರಣ ಕರ್ಮಠ ಬ್ರಾಹ್ಮಣನೊಬ್ಬನ ಪ್ರಭಾವಲಯದಲ್ಲಿ ನಾನು ಬಿದ್ದೆನೆ? ಹಿಂಸೆ ತಪ್ಪು, ಅನ್ಯಧರ್ಮದ ಪ್ರಾರ್ಥನಾ ಮಂದಿರ ಒಡೆಯುವುದು ತಪ್ಪು, ಅಸಮಾನತೆ ತಪ್ಪು ಅಂತ ಹೇಳುವ ಗಾಂಧಿಯಂತಹ ಮನುಷ್ಯರ ಕಾಲಿಗೆ ಬಿದ್ದು ನಮಸ್ಕರಿಸಬೇಕು ಎಂದು ಭಾವಿಸುತ್ತಿರುವ ನಾನು ಹಿಂದೆ ಮುಂದೆ ನೋಡದೆ ಮೊನ್ನೆ ಪಾಂಡವಪುರದ ಆಟದ ಚೌಕಿಯಲ್ಲಿ ಇವರ ಕಾಲಿಗೆ ಬಿದ್ದೆನೆಲ್ಲ. ಇದು ಹೇಗೆ ಸಾಧ್ಯವಾಯಿತು? ಇವರೊಳಗೆ ಗಾಂಧಿ ಇದ್ದಾನೆಯೇ? ದುಡಿಯುವವರೂ ನ್ಯಾಯದಲ್ಲಿ ಗೆಲ್ಲುವ ಸಮಾಜವನ್ನು ಕಾಣಬೇಕೆಂದ ದಾರ್ಶನಿಕರ ಮಾತುಗಳಿಗೆ ಧ್ವನಿಯಾಗಬೇಕೆಂದು ಕನಸು ಕಾಣುತ್ತಿರುವ ನಾನು ಇವರಲ್ಲಿ ಸಮತಾವಾದವನ್ನು ಕಾಣಲು ಸಾಧ್ಯವೇ..? ಇವರ ರಾಜಕೀಯ ನಿಲುವು ಒಂದು ವೇಳೆ ನನಗಿಂತ ಬೇರೆಯಾಗಿದ್ರೆ..? ನನ್ನ ಜಾತ್ಯತೀತ ಆದರ್ಶಗಳಿಗೆ ಕೊಂಕು ಮಾತು ಬಂದ್ರೆ ಏನು ಮಾಡೋದು… ಕೆಲವು ಹಿಂದೂ ಕಲಾವಿದರಲ್ಲಿ ಇರುವ ಹಾಗೆ ಇವರಲ್ಲೂ ಧಾರ್ಮಿಕ ಅಸಹನೆ ಇದ್ರೆ…” ಹೀಗೆಲ್ಲ ಮೇರೆಯಿರದ ಆಕಾಶದಲ್ಲಿ ಹದ್ದುಗಳು ಸ್ವಚ್ಛಂದವಾಗಿ ಹಾರಾಡುವಂತೆ ಅವನ ತಲೆತುಂಬ ಬೇಕಾದ, ಬೇಡದ ಯೋಚನೆಗಳು ಹರಿದಾಡುತ್ತಿದ್ದವು. ಲಂಕೇಶ್, ಅನಂತಮೂರ್ತಿ, ಕಾರ್ನಾಡ್, ತೇಜಸ್ವಿಯವರ ಬರಹಗಳನ್ನು ಓದುತ್ತಿದ್ದ ಚಾರ್ವಾಕನಿಗೆ, ‘…ಮನುಷ್ಯ ಎಷ್ಟೇ ಕ್ರೂರವಾಗಿ ಕಂಡರೂ ಆತ ತನ್ನ ಮೂಲಭೂತ ಮನುಷ್ಯತ್ವ ಮತ್ತು ಪ್ರೇಮದಿಂದ ಹೊರಬರಲಾರ’ ಎಂದ ಲಂಕೇಶರು ನೆನಪಾಗುತ್ತ ತನ್ನ ಈ ಎಲ್ಲ ವರ್ತನೆಗೆ ಇದೇ ಕಾರಣವಿರಬಹುದೇ? ಎಂದು ತಡಕಾಡುತ್ತಿದ್ದಾನೆ.

ಓದಿದ ಚಾರ್ವಾಕ ತನ್ನ ವಿಚಾರವಾದದ ಹಿನ್ನೆಲೆಯಲ್ಲಿ, ತನ್ನ ತಿಳಿವಳಿಕೆಯ ತರ್ಕದಲ್ಲಿ ಪ್ರಾಥಮಿಕ ಹಂತದ ಶಾಲೆಯನ್ನೂ ಪೂರೈಸದ ಪಾಪದ ಆಚಾರ್ಯರನ್ನು ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದಾನೆ. ಅವರನ್ನು ಒರೆಗೆ ಹಚ್ಚಿ ಉಜ್ಜಿ ಉಜ್ಜಿ ನೋಡುತ್ತಿದ್ದಾನೆ. ಹೊಟ್ಟೆಪಾಡಿಗಾಗಿ ಉದ್ಯೋಗವನ್ನು ಅರಸುತ್ತ ಯಕ್ಷಗಾನವನ್ನು ಸೇರಿದ ಓದದ ಆಚಾರ್ಯರೊಂದಿಗೆ ಅವನಿಗೆ ಈಗ ತತ್ತ್ವದ ಸಮಸ್ಯೆ. ತತ್ತ್ವದಲ್ಲಿ ತನಗಿಂತ ಬೇರೆಯಾಗಿರುವ ಜನರನ್ನು ತನ್ನೊಳಗೆ ತರುವುದು ಹೇಗೆಂಬ ಬಿಕ್ಕಟ್ಟು. ಇದು ಸರಿಯಲ್ಲ ಅಂತ ಅವನಿಗೆ ತಕ್ಷಣಕ್ಕಲ್ಲದಿದ್ದರೂ ನಿಧಾನಕ್ಕಾದರೂ ಅನ್ನಿಸಲು ಶುರುವಾಗತೊಡಗಿತು. ಹಲವು ಬಗೆಯ ಜನರಿರುವ ಸಮಾಜದಲ್ಲಿ ಬದುಕುವ ಮನುಷ್ಯ ತನ್ನ ಹಾಗೆಯೇ ಯೋಚನೆ ಮಾಡುವವರ ಜೊತೆಯಲ್ಲಿ, ತಾನು ನಂಬಿದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿರುವ ಜನರ ಜೊತೆಯಲ್ಲಿ ಮಾತ್ರ ತಾನಿದ್ದು, ಬದುಕಬೇಕು ಎಂದು ಹಠ ಹಿಡಿದು ಕೂರಲು ಸಾಧ್ಯವೇ? ಭಯಂಕರ ಸಿದ್ಧಾಂತಿಗಳೆಲ್ಲ ಕೊನೆಯವರೆಗೂ ಜೊತೆಯಾಗಿಯೇ ಇರುತ್ತಾರೆಯೇ? ನಾವು ಹೀಗೆ ಬದುಕಲು ಪ್ರಯತ್ನಿಸಿದರೆ ಕೊನೆಗೆ ನಮಗೆ ನಮ್ಮವರು ಅಂತ ಯಾರೂ ಇರಲು ಸಾಧ್ಯವೇ ಇಲ್ಲ ಎಂದು ಆತನಿಗೆ ಅನ್ನಿಸಿತು. ಎಲ್ಲರೂ ಬೇರೆ ಬೇರೆಯೇ ವ್ಯಕ್ತಿತ್ವ. ಆದರೆ ಎಲ್ಲರಿಗೆ ಎಲ್ಲರೂ ಅಲ್ಲದಿದ್ದರೂ ಕೆಲವರಿಗಾದರೂ ಕೆಲವರು ಖಂಡಿತವಾಗಿಯೂ ಬೇಕೇ ಬೇಕು. ಹೊರಗೆ ಯಾಕೆ ನಮ್ಮ ಮನೆಯಲ್ಲೇ ಎಲ್ಲರೂ ಒಂದೇ ರೀತಿ ಯೋಚನೆ ಮಾಡುವುದಿಲ್ಲ, ಒಂದೇ ರೀತಿ ಮಾತಾಡುವುದಿಲ್ಲ. ಯೋಚಿಸಿದಂತೆಲ್ಲ ಆತನಿಗೆ ಬದುಕುವುದೆಂದರೆ ನಮ್ಮಂತೆಯೇ ಇರುವವರ ಜೊತೆಯಲ್ಲಿ ಮಾತ್ರ ನಾವು ಇರುವುದಲ್ಲ, ಭಿನ್ನರ ಜೊತೆಯಲ್ಲಿ ಸೇರುವುದು, ಅವರಲ್ಲಿ ವಿಶ್ವಾಸಿಗಳಾಗುವುದು, ನಮ್ಮನ್ನು ನಾವು ವಿಮರ್ಶೆ ಮಾಡುತ್ತಾ ತಿದ್ದುತ್ತಾ ಹೋಗುವುದು ಮುಖ್ಯ, ಇದರಲ್ಲೇ ಬದುಕಿನ ಸ್ವಾರಸ್ಯವಿರುವುದು ಎಂದೆನಿಸಿತು.

ಒಂದರ್ಥದಲ್ಲಿ ಚಾರ್ವಾಕನ ಬದುಕಿನಲ್ಲಿ ಆಚಾರ್ಯರ ಆಗಮನ ಅವನ ಉಸುರಿನ ಲಯವನ್ನು ಬದಲಿಸಿ ಬಿಟ್ಟಿದೆ. ಸಾವಿರ ಗೌಜು-ಗದ್ದಲಗಳ ನಡುವೆ ಮೌನವಾಗಿ ಹರಿವ ಕಲರವವಾಗಿ ಚಾರ್ವಾಕನೊಳಗೆ ಆಚಾರ್ಯರು ಆಗಲೇ ಸೇರಿ ಹೋಗಿದ್ದರು. “…ಅಲ್ಲಾ… ಬದುಕಿನ ಸಂಜೆಯಲ್ಲಿದ್ದು, ಯೋಗ, ಜಪತಪ, ನಿತ್ಯಾನುಷ್ಠಾನಗಳಲ್ಲಿ ಬಿದ್ದಿರುವ ಈ ಅಜ್ಜನಿಗೆ ನನ್ನಂಥವರ ಸಾಹಚರ್ಯ ಬೇಕೆ? ಅವರಲ್ಲೇಕೇ ನನಗೆ ಇಷ್ಟೊಂದು ಕನಿಕರ? ಇವರನ್ನು ಕಂಡಾಗ ಬಾಂಧವ್ಯದ ಭಾವ ತುಂಬಿ ಬರುವುದೇತಕೆ? ಇವರನ್ನು ಕಂಡರೆ ನನಗೇಕೆ ಕಾರಣಗಳನ್ನು ಮೀರಿ ಮಮತೆ, ವಿಶ್ವಾಸ, ಪ್ರೀತಿ, ಭರವಸೆಗಳು ಉಂಟಾಗುತ್ತವೆ? ಇದೆಂಥಾ ಮಮತೆ-ವಾತ್ಸಲ್ಯ? ಈ ಪ್ರೀತಿಗೇನು ಹೆಸರು..? ಇದು ಮನುಷ್ಯ ಸಹಜ ದೌರ್ಬಲ್ಯವೇ? ಅಥವಾ ನನ್ನ ಬಾಲ್ಯದ ವಿಕ್ಷಿಪ್ತತೆಯೇ? ಅಥವಾ ಇದು ನನ್ನ ಮನೋವಿಕಾರತೆಯೇ? ಇದನ್ನು ಯಾರಲ್ಲಾದರೂ ಹೇಳಲು ಸಾಧ್ಯವೇ? ಹೇಳಿದರೆ ನನ್ನನ್ನು ಏನಂದಾರು…’ ಬೆದರಿದ ಚಾರ್ವಾಕ ಏನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿದ್ದಾನೆ. ಅಂತೂ ಕೊನೆಗೂ ಆಚಾರ್ಯರ ಹುಟ್ಟಿದ ದಿನಕ್ಕೆ ಫೋನ್ ಮಾಡಲೇ ಇಲ್ಲ, ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲೇ ಇಲ್ಲ.

ಆ ಒಂದು ದಿನ ಮಾತ್ರ ಎಂದಿನಂತೆ ಇರಲಿಲ್ಲ. ಮಧ್ಯಾಹ್ನದ ಉರಿ ಬಿಸಿಲು ತಾರಕಕೇರಿ ಸಂಜೆಯ ವೇಳೆಗೆ ಜೋರು ಗಾಳಿ ಮಿಂಚು, ಸಿಡಿಲು. ನೋಡ ನೋಡುತ್ತಿದ್ದಂತೆ ಕಾರ್ಗತ್ತಲು ಎಲ್ಲೆಡೆ ಮುಸುಕಿ, ಭೋರೆಂದು ಸುರಿದ ಮಳೆ ಇಳೆಯ ತಾಪವನ್ನು ಕೊಂಚ ಕಡಿಮೆಗೊಳಿಸಿದೆ. ಭೂಮಿಯ ತಂಪು ಜನರಿಗೆ ಸಂತಸ-ಸಂಭ್ರಮ ಕೊಟ್ಟರೂ ಇತ್ತ ಚಾರ್ವಾಕನೊಳಗೆ ತಾಪ ಏರುತ್ತಲೇ ಇದೆ. ಬಹಿರಂಗದ ವ್ಯಾಪಾರದ ಯಾವ ಗೊಡವೆಯಲ್ಲಿರದ ಆತ ಮಾತ್ರ ಮಂಕಾಗಿ ಕೂತಿದ್ದಾನೆ. ಅವನ ಒದ್ದಾಟ ಹಾಗೆಯೇ ಮುಂದುವರಿದೇ ಇತ್ತು. ಮತ್ತೆ ಮತ್ತೆ ಅವನ ಮನಸ್ಸು ಆಚಾರ್ಯರ ಕಡೆಗೆ ಹರಿಯುತ್ತಿತ್ತು. ಒಮ್ಮೆ ಅವರ ಧ್ವನಿ ಕೇಳಬೇಕು, ಅವರ ಆರೋಗ್ಯ ವಿಚಾರಿಸಬೇಕು, ಅವರ ಅನಾರೋಗ್ಯ ಪೀಡಿತ ಹೆಂಡತಿಯ ಬಗ್ಗೆ ಕೇಳಬೇಕು -ಹೀಗೆ ಏನೆಲ್ಲ ಹಂಬಲ. ಅವನ ತಲೆತುಂಬ ಓಡುತ್ತಿದ್ದದ್ದು ಆಚಾರ್ಯರೇ. ಆಚಾರ್ಯರ ಹುಟ್ಟಿದ ದಿನಕ್ಕಿಂತ ಕೆಲವು ದಿನಗಳ ಹಿಂದೆ ದೇವಪುರದ ಪಕ್ಕದ ಊರಲ್ಲಿ ಆಟದ ಹತ್ತಿರ ಆಚಾರ್ಯರಿಗೆ ಸಿಕ್ಕಿದ್ದ ಚಾರ್ವಾಕ ಸ್ವಲ್ಪ ಹೊತ್ತು ಚೌಕಿಯಲ್ಲಿ ಕುಳಿತು ಏನೆಲ್ಲ ಹರಟೆ ಹೊಡೆದು ಬಂದಿದ್ದ. ದೂರದ ಊರು ದೇವೀನಗರದಲ್ಲಿ ಪ್ರತೀ ವರ್ಷ ನಡೆಯುವ ವೈಭವದ ಯಕ್ಷೋತ್ಸವದಲ್ಲಿ ಆಚಾರ್ಯರ ಕಿರೀಟ ವೇಷದ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಯಾದದ್ದನ್ನು ಆಚಾರ್ಯರಿಗೆ ಅಂದು ಅಲ್ಲಿ ಚಾರ್ವಾಕ ಹೇಳಿದ್ದ. ಆಗ ಆಚಾರ್ಯರು, `ತನಗೆ ಕಣ್ಣಿನ ಸಮಸ್ಯೆ ಇರುವುದರಿಂದ ಅಲ್ಲಿಯ ರಂಗಸ್ಥಳ ನನಗೆ ಅಂದಾಜು ಆಗೋದಿಲ್ಲ, ಹಾಗಾಗಿ ಅಲ್ಲಿ ನಾನು ಕಿರೀಟ ವೇಷ ಮಾಡುವುದಿಲ್ಲ, ಆದರೆ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೇಳದ ಆಟಕ್ಕೆ ವಾಪಾಸು ಬರುತ್ತೇನೆ’ ಎಂದು ಚಾರ್ವಾಕನಲ್ಲಿ ಹೇಳಿದ್ದರು. ಹೀಗಾಗಿ ಆಚಾರ್ಯರಿಗೆ ಫೋನ್ ಮಾಡಿ ಕಾರ್ಯಕ್ರಮ ಹೇಗಾಯಿತು ಎಂದು ವಿಚಾರಿಸಬೇಕು ಎಂಬ ಆಸೆ ಅವನಿಗೆ. ಜೊತೆಗೆ ಆಚಾರ್ಯರಲ್ಲಿ ಮಾತಾಡಲು ಇನ್ನೊಂದು ನೆವನವಾಗಿ ಅವರು ಬರೆದ ಪ್ರಸಂಗಗಳ ಬಗ್ಗೂ ತಿಳಿದುಕೊಳ್ಳಬೇಕು ಎಂಬ ಯೋಚನೆ ಮನಸ್ಸಲ್ಲಿತ್ತು. ಇದನ್ನೆಲ್ಲ ಮನಸ್ಸಲ್ಲಿಟ್ಟುಕೊಂಡು ಫೋನ್ ಮಾಡಲು ವಿಲಿವಿಲಿ ಒದ್ದಾಡುತ್ತಿದ್ದಾನೆ. ಅವನಿಗೆ ಅರ್ಥವಾಗದ ವಿಚಿತ್ರ ಮಾನಸಿಕ ಹೊಯ್ದಾಟ. ಮನದ ಕುರುಕ್ಷೇತ್ರದಲ್ಲಿ ಹೋರಾಟ ಮಾಡಲು ಹೊರಟ ವೀರ ಅಭಿಮನ್ಯುವಿನಂತೆ ಕೊನೆಗೂ ಕರೆ ಮಾಡಿಯೇ ಬಿಟ್ಟ.

ಆಚಾರ್ಯರು ಮಾತಿಗೆ ಸಿಕ್ಕಿದರು. ಚಾರ್ವಾಕನ ಪ್ರಶ್ನೆ, ಅದಕ್ಕೆ ಆಚಾರ್ಯರ ನೇರ ಉತ್ತರ. ಒಂದು ಮಾರ್ಕಿನ ಪ್ರಶ್ನೆಗಳಿಗೆ ಒಂದು ಪದದಲ್ಲಿ ಉತ್ತರಿಸಿದಂತೆ. ನೆನಪಿನಲ್ಲಿ ಕೇಳಿದ ಚಾರ್ವಾಕ- ದೇವೀನಗರದ ಕಾರ್ಯಕ್ರಮದ ಬಗ್ಗೆ. `ಹೌದು ಹೋಗಿದ್ದೆ’ ಅಂದರು ಆಚಾರ್ಯರು. `ವೇಷ ಮಾಡಿದ್ರಾ?’ ಎಂಬ ಚಾರ್ವಾಕನ ಪ್ರಶ್ನೆಗೆ `ಇಲ್ಲ ವೇಷ ಮಾಡ್ಲಿಲ್ಲ’ ಅಂದರು ಆಚಾರ್ಯರು. ಚಾರ್ವಾಕನ ಇನ್ನು ಕೆಲವು ಪ್ರಶ್ನೆಗಳಿಗೆ ಆಚಾರ್ಯರು ಸಂಕ್ಷಿಪ್ತವಾಗಿ ಉತ್ತರಿಸಿ ಮಾತು ನಿಲ್ಲಿಸಿದ್ದರು. ಚಾರ್ವಾಕನಿಗೆ ಅಷ್ಟು ಸಾಕಿತ್ತು. ಮಾತಿನ ಸಂಭ್ರಮ, ಸಂತೃಪ್ತಿಯಲ್ಲಿ ಚಾರ್ವಾಕ್ ತೇಲಿ ಹೋದ. ಆದರೆ ಫೋನ್ ಇಟ್ಟು ಬಟ್ಟೆ ಒಗೆಯುತ್ತಿರಬೇಕಾದರೆ ಯೋಚಿಸುತ್ತಿದ್ದ. `ಈ ಆಚಾರ್ಯರನ್ನು ಕಳೆದ ಆರೇಳು ತಿಂಗಳುಗಳಲ್ಲಿ ಐದಾರು ಬಾರಿ ಭೇಟಿಯಾಗಿದ್ದೇನೆ. ಅನೇಕ ಸಲ ಫೋನಲ್ಲಿ ಮಾತಾಡಿದ್ದೇನೆ. ಯಾವ ಭೇಟಿಯೂ ನಿರ್ದಿಷ್ಟ ವಿಷಯ, ಉದ್ದೇಶವನ್ನು ಆಧರಿಸಿ ಆದದ್ದಲ್ಲ. ಆದರೂ ಸಾಕಷ್ಟು ಮಾತಾಡಿದ್ದೇನೆ. ಫೋನಲ್ಲೂ, ಸಿಕ್ಕಾಗಲೂ ಅವರ ಕುಟುಂಬ-ಸಂಸಾರ, ಕಲಾಬದುಕು ಎಲ್ಲದರ ಬಗ್ಗೆ ನಾನು ಕುತೂಹಲದಿಂದ ಅವ್ರಲ್ಲಿ ಕೇಳಿದ್ದೇನೆ. ನಡುವೆ ಸಾಮಾಜಿಕ ಆಗುಹೋಗು ಲೋಕಾಭಿರಾಮವೂ ಮಾತುಕತೆಗಳಲ್ಲಿ ಬಂದು ಹೋಗಿವೆ. ಆದ್ರೆ ಯಾವತ್ತೂ ಅವರು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಆಸಕ್ತಿ ತೋರಿಸಿ ಒಂದೇ ಒಂದು ಪ್ರಶ್ನೆ ಕೇಳಿದವರಲ್ಲ. ಬಾಯಿ ಮಾತಿಗೂ ಹೇಗಿದ್ದೀಯಾ..? ಮನೆಯಲ್ಲಿ ಹೇಗೆ ಇದ್ದಾರೆ ಈ ಏನನ್ನೂ ವಿಚಾರಿಸಿದವರಲ್ಲ. ಇವರ್ಯಾಕೆ ಹೀಗೆ ಎಂದು ಅವನಿಗೆ ಅನ್ನಿಸದೇ ಇರಲಿಲ್ಲ. `ಬಹುಶ: ಈ ಆಚಾರ್ಯರಿಗೆ ಸಂದರ್ಶಕರು ಕೇಳುವ ಪ್ರಶ್ನೆಗೆ ಉತ್ತರ ಕೊಡುವುದು ಮತ್ತು ಯಕ್ಷಗಾನದಲ್ಲಿ ಪಾತ್ರವಾಗಿ ಮಾತಾಡುವುದು ಇಷ್ಟು ಮಾತ್ರ ಇಷ್ಟ ಅಂತ ಕಾಣಿಸುತ್ತದೆ’ ಎಂದು ಮನಸ್ಸಲ್ಲಿ ಭಾವಿಸಿ ತನ್ನ ಒಗೆಯುವ ಕಾಯಕವನ್ನು ಮುಗಿಸಿದ.

ಆಚಾರ್ಯರನ್ನು ಅಷ್ಟಕ್ಕೆ ಬಿಟ್ಟಿರುತ್ತಿದ್ದರೆ ಆ ರಾತ್ರಿ ಅವನಿಗೆ ಕಡಿದು ಹಾಕಿದ ಹಾಗೆ ನಿದ್ರೆ ಬರುತ್ತಿತ್ತೋ ಏನೋ. ಆದ್ರೆ ವಿಧಿಯಾಟ ಬೇರೆಯೇ ಇತ್ತು. ಊಟ ಮುಗಿಸಿ ಮಲಗುವ ಮುನ್ನ ಫೇಸ್ಬುಕ್ ನೋಡುತ್ತಾ ಪುಟಗಳನ್ನು ಸ್ಕ್ರೋಲ್ ಮಾಡುತ್ತಿರಬೇಕಾದರೆ ಅವನಿಗೆ ದೇವೀನಗರದ ಆಟದ ವೀಡಿಯೋ ಕ್ಲಿಪ್ಪಿಂಗ್‌ವೊಂದು ಕಾಣಿಸಿತು. ಅದನ್ನು ನೋಡುತ್ತಿದ್ದಂತೆ `ತಿಲೋತ್ತಮೆ’ ಅನ್ನುವ ಪ್ರಸಂಗದಲ್ಲಿ ಸುಂದೋಪಸುಂದರು ರಂಗಸ್ಥಳದಿಂದ ನಿರ್ಗಮಿಸಿದ ಕೂಡಲೇ ದೇವೇಂದ್ರನ ಜೊತೆಯಲ್ಲಿ ನಿಧಾನವಾಗಿ ಬ್ರಹ್ಮ ಬರುವುದನ್ನು ಕಂಡ. ಈ ಪಾತ್ರಧಾರಿ ಯಾರಿರಬಹುದು ಎಂದು ಸುಮ್ಮನೆ ಕುತೂಹಲಕ್ಕೆಂದು ನೋಡ ಹತ್ತಿದ. ಪದ್ಯ ಮುಗಿದು ಅರ್ಥ ಕೇಳುತ್ತಿರಬೇಕಾದರೆ ತನಗೆ ಪರಿಚಿತವಿರುವ ಧ್ವನಿ. ತನ್ನ ಹತ್ತಿರ ಈಗಷ್ಟೇ ಕೆಲವು ಗಂಟೆಗಳ ಹಿಂದೆ ಗುಂಯ್‌ಗುಟ್ಟಿದ ಧ್ವನಿ ಅಂತನ್ನಿಸಿತು. ಇಲ್ಲ ಇದು ಆಚಾರ್ಯರೇ ಅಂತನ್ನಿಸಿತು. ಭಾಗವತರ ಹಿಂದೆ ಇರುವ ಬ್ಯಾನರಲ್ಲಿ ದಿನಾಂಕ, ಇಸವಿಯನ್ನು ಸೂಕ್ಷ್ಮವಾಗಿ ಗಮನಿಸಿದ. ದಿನಾಂಕ, ವರ್ಷ ಎಲ್ಲ ಈ ಸಲದ್ದೇ. ಪ್ರಸಂಗ, ಭಾಗವತರು ಎಲ್ಲವನ್ನು ತಿಳಿಯುವುದಕ್ಕಾಗಿ ವಾಟ್ಸ್ಯಾಪಲ್ಲಿದ್ದ ಆಟದ ನೋಟೀಸ್‌ನ್ನು ಇನ್ನೊಮ್ಮೆ ನೋಡಿದ. ವೀಡಿಯೋವನ್ನು ಮತ್ತೆ ಮತ್ತೆ ನೋಡಿದ, ಮಾತನ್ನು ಮತ್ತೆ ಮತ್ತೆ ಆಲಿಸಿದ. ವಯಸ್ಸಾಗಿದೆ, ಹಲ್ಲು ಉದುರಿದೆ. ಕೆಲವೊಂದು ಅಕ್ಷರಗಳು ತೊದಲುತ್ತಿವೆ. ಅದೇ ಕಂಚಿನ ಕಂಠ. ಅನುಮಾನವೇ ಇಲ್ಲ. ನನ್ನ ಆಚಾರ್ಯರೇ.

ಸಂಜೆ ಫೋನಲ್ಲಿ ಮಾತಾಡುವಾಗ `ವೇಷ ಹಾಕ್ಲಿಲ್ಲ’ ಅಂದ ಆಚಾರ್ಯರನ್ನು ರಂಗದಲ್ಲಿ ನೋಡಿದ ಚಾರ್ವಾಕನಿಗೆ ಆಶ್ಚರ್ಯವೂ ಬೇಸರವೂ ಆಯಿತು. `ಅಯ್ಯೋ ಆಚಾರ್ಯರು ನನ್ನಲ್ಲಿ ಸುಳ್ಳು ಹೇಳಿದರಲ್ಲ’ ಎಂದು ನೊಂದ. ಆಚಾರ್ಯರು ಏನೇ ಹೇಳಿದರೂ ಈ ಚಾರ್ವಾಕನಿಗೆ ಸತ್ಯಸ್ಯ ಸತ್ಯವಾಗಿತ್ತು. ಅವರ ಮಾತು ದೇವವಾಣಿಯಾಗಿತ್ತು. ಆಚಾರ್ಯರು ತನ್ನಲ್ಲಿ ತುಂಬಾ ವಿಶ್ವಾಸ ಇಟ್ಟುಕೊಂಡಿದ್ದಾರೆ, ತಾನು ಆಚಾರ್ಯರಿಗೆ ಇತರರಿಗಿಂತ ಆತ್ಮೀಯನು, ಹಾಗಾಗಿ ತಮ್ಮೆಲ್ಲ ಖಾಸಗಿ ಸಂಗತಿಗಳನ್ನು ನನ್ನಲ್ಲಿ ಮಾತ್ರ ಹೇಳುತ್ತಾರೆ ಎಂದು ಭಾವಿಸಿದ್ದ. ಆ ಕಾರಣಕ್ಕಾಗಿ ಹೆಮ್ಮೆ ಪಡುತ್ತಿದ್ದ ಕೂಡಾ. ಆದರೆ ಈಗ ಸಿಡಿಲೆರಗಿದಂತಾಗಿದ್ದಾನೆ. `ನಾನು ಆಚಾರ್ಯರನ್ನು ಏನೋ ಅಂತ ತಿಳಿದುಕೊಂಡಿದ್ದೆ. ನನ್ನಲ್ಲಿ ಮಾತಾಡುವುದು ಅವರಿಗೂ ಖುಷಿ ಅಂತ ಭಾವಿಸಿದ್ದೆ. ನನ್ನನ್ನು ನಂಬಿಗಸ್ಥ ಅಂತ ಅವರು ತಿಳಿದಿದ್ದಾರೆ ಅಂತ ಭಾವಿಸಿದ್ದೆ. ಬಾಲ್ಯದಲ್ಲಿ ಅವರು ಪಟ್ಟ ಪಾಡನ್ನು ಅವರ ಆತ್ಮಕಥನದಲ್ಲಿ ಓದಿ ನೊಂದ ನಾನು ಆಚಾರ್ಯರು ಮಾತ್ರ ಯಾರಿಗೂ ನೋವು ಕೊಡಲಾರರು ಅಂತ ಅಂದುಕೊಂಡಿದ್ದೆ. ಆದರೆ ಅವರ್ಯಾಕೆ ಹೀಗೆ ಮಾಡಿದರು. ನನ್ನಲ್ಲಿ ಸುಳ್ಳು ಹೇಳಿ ಅವರಿಗೆ ಏನು ಲಾಭ? ನಾನು ಕೇಳಿದ್ದು ಬೇರೆ ಏನೋ ಎಂದು ಭಾವಿಸಿ ನನಗೆ ಹಾಗೆ ಉತ್ತರಿಸಿರಬಹುದೇ?’ ಎಂದು ಯೋಚಿಸಿದ. ತಾನು ಕೇಳಿಸಿಕೊಂಡದ್ದು ತಪ್ಪಾಗಿರಲಿ ಎಂಬ ಪ್ರಾರ್ಥನೆಯೊಂದಿಗೆ ತನ್ನ ಮತ್ತು ಆಚಾರ್ಯರ ನಡುವಿನ ಫೋನ್ ಕರೆಯ ರೆಕಾರ್ಡಿಂಗ್‌ನ್ನು ಚಾರ್ವಾಕ್ ಮತ್ತೊಮ್ಮೆ ಸರಿಯಾಗಿ ಆಲಿಸಿದ. ತನ್ನ ಪ್ರಶ್ನೆ ಮತ್ತು ಆಚಾರ್ಯರ ಉತ್ತರ ಸ್ಪಷ್ಟವಾಗಿತ್ತು. ಆಚಾರ್ಯರು `ವೇಷ ಹಾಕ್ಲಿಲ್ಲ’ ಅಂತಾನೇ ಹೇಳಿದ್ದರು. ದಂಗುಬಡಿದಂತಾದ ಚಾರ್ವಾಕ್ ರಿಕ್ತಮನಸ್ಕನಾದ. ಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಒಂದು ಸಂದರ್ಭದಲ್ಲಿ, ಶಿವರಾಮಯ್ಯ ನಾರಾಯಣನಲ್ಲಿ ಮಾವ ಗೋಪಾಲಯ್ಯರ ಬಗ್ಗೆ ಕೇಳುವ ಮಾತು “ನಿಮ್ಮ ಮಾವಯ್ಯ ನಿಜವಾಗ್ಲೂ ನಿಮಗೇನಾಗಬೇಕು?” ಅದಕ್ಕೆ ನಾರಾಯಣ “ಅವ್ರಾ… ದೇವ್ರು…” ಅಂತ ಹೇಳ್ತಾನೆ. ಆಗ ಶಿವರಾಮಯ್ಯ ಬೆರಗಾಗಿ ‘ದೇವ್ರಾ..?’ಎಂದು ಕೇಳ್ತಾನೆ. ಅದಕ್ಕೆ ನಾರಾಯಣ ಮತ್ತೆ “ಹ್ಹೂ…ದೇವ್ರು.” ಅದೇ ನಾರಾಯಣನಂತೆ ಆಚಾರ್ಯರ ಬಗ್ಗೆ ನಾನು ಯೋಚಿಸುತ್ತಿದ್ದೆನಲ್ಲ… ದೇವರು ಸುಳ್ಳು ಹೇಳಬಾರದು ಎಂದೆನಿಸಿತು ಈ ಚಾರ್ವಾಕನಿಗೆ.

 

`ಸತ್ಯವೇ ಪರಮಾತ್ಮ, ಹೃದಯಶುದ್ಧಿಯಿಲ್ಲದವರಿಗೆ ಎಂದಿಗೂ ಪರಮಾತ್ಮನ ಸಾಕ್ಷಾತ್ಕಾರವಾಗುವುದಿಲ್ಲ’ ಎಂದು ಪದೇ ಪದೇ ಹೇಳಿದ ಗಾಂಧಿಯನ್ನು ಆದರ್ಶವಾಗಿಟ್ಟುಕೊಂಡು ಸಾಧ್ಯವಾದಷ್ಟು ಅವರ ಹಾಗೆ ಇರಬೇಕು ಎಂದು ಬಯಸುತ್ತಿದ್ದ ಚಾರ್ವಾಕನಿಗೆ ಗಾಂಧಿಯಂತೆಯೇ ಕಾಣುತ್ತಿದ್ದ ಆಚಾರ್ಯರು ಸುಳ್ಳು ಹೇಳಿದ್ದನ್ನು ಅರಗಿಸಿಕೊಳ್ಳಲಾಗಲಿಲ್ಲ. ಅಲ್ಲದಿದ್ದರೂ ಆತ ಇದ್ದದ್ದೇ ಹಾಗೆ. ತಾನು ಗೌರವಿಸುವ ಹಿರಿಯರು ಯಾರಾದರೂ ಆಡುವ ಮಾತುಗಳು ಸತ್ಯಕ್ಕೆ ಹತ್ತಿರವಾದುದಲ್ಲ ಅಂತ ತಿಳಿದ ತಕ್ಷಣ ಅವನ ಮನಸ್ಸು ಮುದುಡಿಕೊಳ್ಳುವುದು ಮತ್ತು ಅದನ್ನು ತೀರಾ ಗಂಭೀರವಾಗಿ ಪರಿಗಣಿಸಿ ಬೇಸರದಿಂದ ಇರುವುದು, ತನ್ನಲ್ಲಿರುವ ಆ ಹಿರಿಯರ ಬಗೆಗಿನ ಹಿತ ಭಾವವನ್ನು ಕಡಿಮೆ ಮಾಡಿ ಅಂಥಾ ಜನರನ್ನು ಅನುಮಾನದಿಂದ ನೋಡುವುದು ಮೊದಲಿನಿಂದಲೂ ರೂಢಿ. “ಅಷ್ಟಕ್ಕೂ ಅವರು ಅದನ್ನು ನನ್ನಲ್ಲೇಕೆ ಮುಚ್ಚಿಡಬೇಕಾಗಿತ್ತು? ನನ್ನಲ್ಲಿ ಸತ್ಯ ಹೇಳಿದ್ರೆ ನಾನೇನು ಲೋಕಕ್ಕೆ ಟಾಂ ಟಾಂ ಮಾಡುತ್ತಿದ್ದೆನೆ? ಈ ಆಚಾರ್ಯರಿಗೆ ಏನಾಗಿದೆ…’’ ಚಾರ್ವಾಕನಿಗೆ ಎಷ್ಟು ಯೋಚಿಸಿದರೂ ಅರ್ಥವಾಗಲಿಲ್ಲ. ಒಮ್ಮೆ ಅನ್ನಿಸಿಯೇ ಬಿಟ್ಟಿತು- ಈಗಲೇ ಕೇಳೀಯೇ ಬಿಡೋಣ ಎಂದು. ತಕ್ಷಣ ಮನಸ್ಸಲ್ಲಿ ಹೊಯ್ದಾಟ ಶುರುವಾಯಿತು.

`ಮತ್ತೊಮ್ಮೆ ಆ ತಪ್ಪು ಮಾಡಬೇಡ’ ಎಂದು ಒಳಮನಸ್ಸು ಹೇಳಿತು. ಹಿಂದೊಮ್ಮೆ ಇಂಥಾದ್ದೇ ಪ್ರಸಂಗ ಎದುರಾಗಿ, ಸತ್ಯಾಸತ್ಯತೆಯನ್ನು ತಿಳಿಯಲು ಹೋಗಿ ಕೈ ಸುಟ್ಟುಕೊಂಡಿದ್ದು ನೆನಪಾಯಿತು. ಪ್ರಾಣಕ್ಕೆ ಪ್ರಾಣದಂತಿದ್ದ ಸ್ನೇಹಿತ ಏಕಾಏಕಿ ತನ್ನನ್ನು ತೊರೆದದ್ದು ಅವನಿಗೆ ಗಾಢ ನೋವನ್ನು ಉಂಟು ಮಾಡಿತ್ತು. ಎಷ್ಟೋ ಸಮಯದವರೆಗೆ ಅದನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಈಗಲೂ ಆ ಘಟನೆ ಸಂಪೂರ್ಣವಾಗಿ ಆವನ ಸ್ಮೃತಿಪಟಲದಿಂದ ಉಜ್ಜಿ ಹೋಗಿಲ್ಲ. ಒಂದೇ ತಟ್ಟೆಯಲ್ಲಿ ಅನ್ನವನ್ನು ಹಂಚಿಕೊಂಡ ಗೆಳೆಯ ಅವನು. ತಾನೊಂದು ಶರ್ಟು ಕೊಂಡರೆ ಗೆಳೆಯನಿಗೊಂದು ಕೊಂಡುಕೊಳ್ಳುತ್ತಿದ್ದ ಚಾರ್ವಾಕ… ಗೆಳೆಯನ ಮನೆಯ ಹಬ್ಬಕ್ಕೆ ಇವನು ಸದಾ ಅತಿಥಿ. ಕಷ್ಟ ಸುಖ ಸಂತೋಷ ಯಾವುದೇ ವಿಚಾರಕ್ಕೂ ಚಾರ್ವಾಕ್ ಇಲ್ಲದೇ ಆ ಗೆಳೆಯನಿಗೆ ಯಾವುದೂ ಇರಲಿಲ್ಲ. ಅಂಥಾ ಅಂಟಿನಂಥಾ ನಂಟು ಇವರ ನಡುವೆ ಇತ್ತು. ಆದರೆ ಅನ್ಯಧರ್ಮೀಯನಾದ ಆ ಗೆಳೆಯನೊಡನೆ ಒಂದು ದಿನ ಧರ್ಮದ ಕುರಿತ ತನ್ನ ಒಂದು ಸಂಶಯವನ್ನು ಸಲುಗೆಯಿಂದ ಈ ಚಾರ್ವಾಕ್ ಕೇಳಿದ್ದ. `ದೇವರು ಧರ್ಮವನ್ನು ಸೃಷ್ಟಿಸಿದ್ದೇ? ಅಥವಾ ಮನುಷ್ಯರೇ?’ ಈ ಪ್ರಶ್ನೆಯನ್ನು ತೀರಾ ಮೈಯಕ್ತಿಕವಾಗಿ ತೆಗೆದುಕೊಂಡ ಆ ಗೆಳೆಯ ಮುನಿಸಿಕೊಂಡ. ಮಾತು ಚರ್ಚೆಗೆ ಇಳಿದು ವಾಗ್ವಾದವಾಗಿ ಬಿಸಿಯೇರಿ ಕೊನೆಗೆ ಆ ದಿನ ಅವನು ಹೇಳಿದ – `ನನ್ನ ಧರ್ಮದ ಬಗ್ಗೆ ನನಗೆ ನಿನಗಿಂತ ಹೆಚ್ಚು ತಿಳಿದಿದೆ, ನಾನು ಹೇಳಿದ್ದನ್ನು ನೀನು ವಿಶ್ವಾಸದಿಂದ ಕೇಳಬೇಕು. ಅಷ್ಟಕ್ಕೂ ನಿನ್ನಲ್ಲಿ ಎಲ್ಲ ಸತ್ಯವನ್ನು ಯಾಕೆ ಹೇಳಬೇಕು? ಇನ್ನು ನೀನು ನಿನ್ನ ದಾರಿಯನ್ನು ಹುಡುಕಿಕೋ, ನಾನು ನನ್ನ ಬದುಕನ್ನು ನೋಡಿಕೊಳ್ಳುತ್ತೇನೆ’. ಅಂದು ಚಾರ್ವಾಕನಿಂದ ದೂರವಾದ ಆತ ಇಲ್ಲಿಯವರೆಗೂ ಇವನಿಗೆ ಸಿಕ್ಕಿಲ್ಲ. ಹಾಗಾಗಿ ಇದು ಸತ್ಯಾಸತ್ಯತೆಯನ್ನು ಭೇದಿಸುವ ಕಾಲ ಅಲ್ಲ, ಯಾವುದನ್ನೂ ನೇರವಾಗಿ ಕೇಳುವುದಕ್ಕೆ ಸಮಯವೂ ಇದಲ್ಲ ಎಂದು ಭಾವಿಸಿ ಸುಮ್ಮನಾದ. ಆದರೆ ಮಾತು ಬಾಯಿಂದ ಬಾರದೇ ಇದ್ದರೂ ಮನಸ್ಸು ಕೇಳುವುದೇ?

ಆಚಾರ್ಯರ ಸುತ್ತ ಸುತ್ತುತ್ತಿದ್ದಾನೆ, “ಅವರಿಗೆ ಹೇಳಲು ಇಷ್ಟ ಇರಲಿಲ್ಲ, ಹೇಳಲಿಲ್ಲ ಅಷ್ಟೇ, ಅಷ್ಟಕ್ಕೂ ಎಲ್ಲವನ್ನು ಅವರು ನಿನ್ನಲ್ಲಿ ಯಾಕೆ ಹೇಳಬೇಕು, ನೀನೇನು ಅವರ ಸಂಬಂಧಿಯೇ..? ಕುಟುಂಬಸ್ಥನೇ..? ಅಥವಾ ಅವರು ನನ್ನನ್ನು ಅನ್ಯನೆಂದು ಭಾವಿಸಿರಬಹುದೇ? ತಾನು ಇಷ್ಟು ದೊಡ್ಡ ಕಲಾವಿದ, ಮೊನ್ನೆ ಮೊನ್ನೆ ಸಿಕ್ಕ ಇವನಲ್ಲಿ ಸತ್ಯದ ಮಾತೇನು ಎಂದು ಅನ್ನಿಸಿರಬಹುದೇ?” “ಅವರಿಗೆ ಏನೂ ಅಲ್ಲದ ನೀನು ಅವರನ್ನೇಕೆ ಹೀಗೆ ಹಚ್ಚಿಕೊಂಡಿದ್ದೀಯಾ..? ಅವರನ್ನು ಅವರ ಪಾಡಿಗೆ ಬಿಟ್ಟುಬಿಡು…” ಮನಸ್ಸಿನ ಮಾತೆಲ್ಲವನ್ನು ಕೇಳಿಸಿಕೊಳ್ಳಬೇಕು ಅಂದುಕೊಂಡರೂ ಆಚಾರ್ಯರ ವರ್ತನೆ ಇವನ ತರ್ಕಕ್ಕೆ ಸಿಗಲಿಲ್ಲ. ತನಗೆ ತಾನು ಎಷ್ಟು ಸಮಾಧಾನಿಸಿಕೊಂಡರೂ ಆಚಾರ್ಯರು ತನಗೆ ಸತ್ಯ ಹೇಳಲೇ ಬೇಕಿತ್ತು ಎಂಬ ಅತೀ ನಿರೀಕ್ಷೆ ಮತ್ತು ಅತಿ ಭಾವುಕತನದಿಂದ ಕುಸಿದು ಹೋಗಿದ್ದಾನೆ. ಕೆಲವೊಮ್ಮೆ ಕೆಲವೊಬ್ಬರ ಒಂದು ಒಳ್ಳೆಯ ಮಾತಿಗೆ ನೂರು ಒಳ್ಳೆಯ ಅರ್ಥ ಕಲ್ಪಿಸಿಕೊಳ್ಳುವ ಭೋಳೆ ಮುಗ್ಧತನದ ಚಾರ್ವಾಕ ತನ್ನನ್ನು ತಾನು ಸಂಪೂರ್ಣ ಅವರಿಗೆ ಅರ್ಪಿಸಿ ಬಿಡುವ ಜಾಯಮಾನದವನು. ಹಾಗೆಯೇ ತನ್ನ ನಿರೀಕ್ಷೆಯಂತೆ ಯಾವುದೂ ಇಲ್ಲ ಅಂತ ತಿಳಿದ ಕ್ಷಣ ಪಾತಾಳಕ್ಕೆ ಕುಸಿದು ಹೋಗುವನು. ಈಗ ಆದದ್ದು ಹಾಗೆಯೇ. ಅನೂಹ್ಯವಾದ ಉದ್ವೇಗದಲ್ಲಿ ಸಿಲುಕಿ ಏನೆಲ್ಲಾ ಚಿಂತಿಸುತ್ತಿದ್ದಾನೆ.

 

ಆಚಾರ್ಯರ ತಿರುಗಾಟದ ಮೇಳ ಬಿಳಿಯೂರಿನ ಪ್ರಸಿದ್ಧ ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ್ದು. ಮೇಳದಲ್ಲಿ ಆಚಾರ್ಯರು ಹಿರಿಯ ಕಲಾವಿದರು. ಅದೊಂದು ಶಿಸ್ತಿನ ಮೇಳವಾಗಿತ್ತು. ಮೇಳದ ಯಜಮಾನನು ಮಿಲಿಟರಿ ಲೆಪ್ಟಿನೆಂಟ್ ಥರಾದವನೇ. ಯಜಮಾನನಿಗೆ ತಿಳಿಸದೇ ಮೇಳ ಬಿಟ್ಟು ಕಲಾವಿದರಾರೂ ಹೊರಗೆ ಹೋಗುವ ಹಾಗಿಲ್ಲ. ಹೊರಗಿನ ಪ್ರದರ್ಶನಗಳಲ್ಲಿ ಭಾಗವಹಿಸುವಂತಿಲ್ಲ. ಈ ಎಲ್ಲ ಕಟ್ಟುನಿಟ್ಟಿನ ನಿಯಮಗಳು ಆಚಾರ್ಯರ ಮೇಳದಲ್ಲಿ ಚಾಲ್ತಿಯಲ್ಲಿದ್ದವು. ಕರಾವಳಿಯ ಆಟದ ಕಲಾವಿದರಿಗೆ ತಿರುಗಾಟದಲ್ಲಿ ಸಿಗುವ ಸಂಬಳ ಅಷ್ಟಕ್ಕಷ್ಟೇ. ಅಪ್ಪ-ಅಮ್ಮ, ಹೆಂಡತಿ-ಮಕ್ಕಳು ಅಂತ ಬದುಕ ಸಾಗಿಸುವ ಕಲಾವಿದನಿಗೆ ಈ ನಾಲ್ಕು ಕಾಸು ತಲೆಗೆ ಎಳೆದರೆ ಕಾಲಿಗೆ ಬಾರದು, ಕಾಲಿಗೆ ಎಳೆದರೆ ತಲೆಗೆ ಬಾರದು ಅನ್ನುವ ಪಾಡು. ಮೇಳದ ಕಲಾವಿದನ ಭವಿಷ್ಯಕ್ಕೆ ಯಾವ ಭದ್ರತೆಯೂ ಇಲ್ಲ. ಇದರಿಂದ ಕಲಾವಿದರು ದುಡ್ದು ಮಾಡುವ ಅನ್ಯಮಾರ್ಗವನ್ನು ಹಿಡಿದಿದ್ದರು. ಹಾಗಾಗಿ ಕೆಲವೊಮ್ಮೆ ಹವ್ಯಾಸಿಗಳು, ಊರ ಶ್ರೀಮಂತರು ನಡೆಸುವ ವಿಜೃಂಭಣೆಯ ಆಟಗಳಲ್ಲಿ ಮೇಳದ ಕಲಾವಿದರು ಯಜಮಾನರ ಅನುಮತಿ ಪಡೆದೋ ಇಲ್ಲ ಕಣ್ಣುತಪ್ಪಿಸಿಯೋ ಭಾಗವಹಿಸುವುದುಂಟು. ಮೇಳ ನಡೆಸುವವರು ತಮ್ಮ ಕಲಾವಿದರು ಹೊರಗೆ ಆಟಕ್ಕೆ ಹೋದರೆ ಮೇಳದ ಮಾರ್ಕೆಟಿಗೆ ಸಮಸ್ಯೆಯಾಗಬಹುದು ಎಂದು ಭಾವಿಸಿ ಕಲಾವಿದರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಬಿಗಿ ನಿಯಮಗಳನ್ನು ಮಾಡಿದ್ದರು. ಹಾಗಾಗಿಯೇ ಬಹುತೇಕ ಎಲ್ಲ ಮೇಳಗಳಲ್ಲಿ ಈ ನಿಯಮ ಇದ್ದದ್ದೇ. ಆದರೆ ಬಿಳಿಯೂರಿನ ಸೋಮನಾಥೇಶ್ವರ ಪ್ರಸಾದಿತ ಯಕ್ಷಗಾನ ಮೇಳದಲ್ಲಿ ನಿಯಮ ತುಸು ಹೆಚ್ಚೇ ಎಂದು ಕಲಾವಿದರು ಗೊಣಗುತ್ತಿದ್ದರು. ಅಂದು ದೇವೀನಗರದ ಆಟದಲ್ಲಿ ಆಚಾರ್ಯರ ಮೇಳದ ಒಂದೆರಡು ಕಿರಿಯ ಕಲಾವಿದರು ಯಜಮಾನನ ಅನುಮತಿ ಇಲ್ಲದೆ ಭಾಗವಹಿಸಿದ್ದರು. ಮೃದು ಸ್ವಭಾವದ ತಿರುಗಾಟದ ಮ್ಯಾನೇಜರ್‌ಗೆ ವಿಷಯ ಗೊತ್ತಿದ್ದರೂ ಈ ವಿಷಯ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.

ಆಚಾರ್ಯರು `ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಬಂದು ಮೇಳದ ಆಟದಲ್ಲಿ ಭಾಗವಹಿಸುತ್ತೇನೆ’ ಎಂದು ಮ್ಯಾನೇಜರ್‌ರಲ್ಲಿ ಹೇಳಿ ಹೋಗಿದ್ದರು. ಮೇಳದ ಕುರಿತ ಆಚಾರ್ಯರ ಬದ್ಧತೆ ಪ್ರಶ್ನಾತೀತ. ಅದರೆ ಅಂದು ಮಾತ್ರ ಆಚಾರ್ಯರಿಗೆ ವಾಪಾಸ್ ಬರಲಾಗಲಿಲ್ಲ. ದೇವೀನಗರದ ಆಟವನ್ನು ನಡೆಸಿದ ವ್ಯವಸ್ಥಾಪಕರ ದಾಕ್ಷಿಣ್ಯಕ್ಕೆ ಒಳಗಾಗಿ ಅಲ್ಲಿ ವೇಷ ಮಾಡಿಬಿಟ್ಟರು. ಮಾತ್ರವಲ್ಲದೆ ಪ್ರಸಂಗ ಮುಗಿವಾಗ ತಡವಾಗಿ ಮೇಳದ ಆಟವನ್ನು ತಪ್ಪಿಸಿಕೊಂಡರು. ಏನು ಮಾಡುವುದೆಂದು ತೋಚದೇ ಆಚಾರ್ಯರು ಆ ರಾತ್ರಿ ಸೋತು ಹೋಗಿದ್ದರು. ಸಾಕಷ್ಟು ಕಷ್ಟಪಟ್ಟು ಆಚಾರ್ಯರು ಮರಳಿ ತಮ್ಮ ಮೇಳವನ್ನು ಸೇರುವಾಗ ಆ ದಿನದ ಆಟ ಮುಗಿದಿತ್ತು. ಮರುದಿನ ಭಾನುವಾರ. ಯಜಮಾನನಿಗೆ ಎಲ್ಲವನ್ನು ಯಾರೋ ತಿಳಿಸಿದ್ದಾರೆ. ಚಾಡಿಕೋರರಿಗೆ ಮೇಳದಲ್ಲಿ ಕೊರತೆಯೇನೂ ಇಲ್ವೆ. ಕೋಪೋನ್ಮತ್ತನಾಗಿ ಕಣ್ಣಲ್ಲಿ ಬೆಂಕಿಯುಗುಳುತ್ತಿದ್ದ ಆತ ಬೆಳ್ಳಂಬೆಳಗ್ಗೆ ಮ್ಯಾನೇಜರಲ್ಲಿ `ನನ್ನ ಹತ್ರ ಹೇಳದೆ ಕೇಳದೆ ಇವರೆಲ್ಲ ಹೊರಗೆ ಆಟಕ್ಕೆ ಹೋಗುತ್ತಿದ್ದಾರೆ, ಆ ತುಂಡು ಹುಡುಗರು ಬಿಡಿ, ಅವಕ್ಕೆ ಗೊತ್ತಾಗಲ್ಲ, ಆದ್ರೆ ಈ ಹಿರೀ ಕಲಾವಿದರ್ಗೆ ಗೊತ್ತಾಗಲ್ವ, ಅವರಿಗಾದ್ರೂ ಜವಾಬ್ದಾರಿ ಬೇಡ್ವ, ನನ್ಗೆ ಗೊತ್ತಾಗೋಲ್ಲ ಅಂತ ತಿಳಿದಿದ್ದಾರೆ, ಅವರೆಲ್ಲ ಹಾಗೆ ಹೋಗಿ ದುಡ್ಡು ಮಾಡ್ತಾರೆ ಅಂತ ಆದ್ರೆ ಮೇಳದಲ್ಲಿ ವೇಷ ಮಾಡೋದು ಬೇಡ ಅಂತ ಹೇಳಿ’ ಎಂದು ಖಡಕ್ಕಾಗಿ ಹೇಳಿದ್ದಾನೆ. ಮ್ಯಾನೇಜರ್ ಬಂದು ಹಾಗೆ ವರದಿ ಒಪ್ಪಿಸಿದ್ದಾನೆ. ಇಬ್ಬರು ಕಿರಿ ಕಲಾವಿದರು ಅಷ್ಟೇನೂ ಮನಸ್ಸಿಗೆ ಹಾಕಿಕೊಳ್ಳಲಿಲ್ಲ. `ಇದೆಲ್ಲ ಇದ್ದದ್ದೇ, ಇದಲ್ಲದಿದರೆ ಇನ್ನೊಂದು..’ ಅಂತ ಪರಸ್ಪರ ಮಾತಾಡಿಕೊಂಡರು. ಆಚಾರ್ಯರಿಗೆ ಪರಿಸ್ಥಿತಿ ಕೈಮೀರಿ ಹೋದದ್ದರ ಅರಿವಾಯಿತು. `ಇಷ್ಟು ವರ್ಷಗಳಿಂದ ಈ ಮೇಳದ ಭಾಗವಾಗಿದ್ದೇನೆ, ನನ್ನ ಹೃದಯ ಮತ್ತು ಆತ್ಮವನ್ನು ಇದಕ್ಕಾಗಿ ಮುಡುಪಾಗಿ ಇಟ್ಟವನು ನಾನು, ನನ್ನಂಥ ಹಿರಿಯನನ್ನು ಮೊನ್ನೆ ಮೊನ್ನೆ ಮೇಳ ಸೇರಿದ ಹುಡುಗರ ಸಾಲಿಗೆ ಸೇರಿಸಿ ಮೇಳವನ್ನು ಬಿಡಲು ಹೇಳುವುದೇ..? ಛೇ… ನಾನು ಇಲ್ಲಿಯವರೆಗೆ ಮೇಳಕ್ಕಾಗಿ ಶ್ರಮಿಸಿದ್ದು ಈ ಯಜಮಾನನಿಗೆ ನೆನಪಾಗಲೇ ಇಲ್ವೇ..?’ ಯಜಮಾನ ಖಾರವಾಗಿ ಮಾತಾಡಿದ್ದು ಆಚಾರ್ಯರಿಗೆ ಸಹಿಸಲಸಾಧ್ಯವಾದ ನೋವನ್ನು ಕೊಟ್ಟಿತ್ತು. ದಿನವಿಡೀ ಕೊರಗಿದ್ದ ಆಚಾರ್ಯರಿಗೆ ಹಸಿವೆ, ಬಾಯಾರಿಕೆ ಮರೆತು ಹೋಗಿತ್ತು. ಯಾರಲ್ಲೂ ಮಾತು ಬೇಡವಾಗಿತ್ತು. ಅದೇ ಸಂಜೆ ಚಾರ್ವಾಕ್ ಫೋನಾಯಿಸಿದ್ದ. ಚೌಕಿಯ ಒಂದು ಮೂಲೆಯಲ್ಲಿ ಕುಳಿತಿದ್ದ ಆಚಾರ್ಯರು ಫೋನ್ ಯಾರದ್ದು ಎಂಬುದನ್ನು ನೋಡದೆ ಯಾಂತ್ರಿಕವಾಗಿ ಮಾತಾಡತೊಡಗಿದ್ದರು. ಆ ಮಾತುಗಳೆಲ್ಲ ಬುದ್ಧಿಯ ಸ್ಥಿಮಿತದಿಂದ ಆಡಿದ ಮಾತುಗಳಾಗಿರಲಿಲ್ಲ. ಹಾಗಾಗಿ ಚಾರ್ವಾಕನ ಪ್ರಶ್ನೆಗೆ ಬರೇ ಒಂದೊಂದು ಪದಗಳಲ್ಲಿ ಅವರು ಉತ್ತರಿಸುತ್ತಿದ್ದರು ಅಷ್ಟೇ. ಬಹುತೇಕ ಎಲ್ಲದಕ್ಕೂ ಅವರು ಇಲ್ಲ ಎಂದೇ ಹೇಳುತ್ತಿದ್ದರು. ಎಷ್ಟೋ ಹೊತ್ತಿನ ಬಳಿಕ ಸಹ ಕಲಾವಿದನೊಬ್ಬ ಬಂದು ಆಚಾರ್ಯರನ್ನು ಎಬ್ಬಿಸಿದ. ಆ ದಿನದ ಆಟಕ್ಕೆ ತಯಾರಾಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದರು ಆಚಾರ್ಯರು. ಅಲ್ಲೇ ಬಿದ್ದಿದ್ದ ಮೊಬೈಲನ್ನು ಕೈಯಲ್ಲೆತ್ತಿ ಒಮ್ಮೆ ನೋಡಿದರು. `ಯಾರಲ್ಲಿ ಏನು ಮಾತಾಡಿದೆನೋ ಏನೋ ಒಂದೂ ಗೊತ್ತಿಲ್ಲ, ಎಲ್ಲವೂ ಮರೆತು ಹೋಗಿದೆ’ ಎಂದು ಗೊಣಗುತ್ತಾ ಚೌಕಿಯಿಂದ ಹೊರಬಂದು ರಂಗಸ್ಥಳದ ಕಡೆಗೆ ನೋಡುತ್ತಾ ಯಾರಿಗೋ ಫೋನ್ ಮಾಡಲು ಸಜ್ಜಾಗಿದ್ದರು.

ಆಚಾರ್ಯರು ಯಾವ ಪರಿಸ್ಥಿತಿಯಲ್ಲಿ ತನ್ನಲ್ಲಿ ಮಾತಾಡಿರಬಹುದು ಎಂಬುದರ ಬಗ್ಗೆ ತಪ್ಪಿಯೂ ಒಮ್ಮೆಯೂ ಯೋಚಿಸದ ಚಾರ್ವಾಕ ಈಗ ಎಣ್ಣೆ ಆರಿದ ಹಣತೆಯಂತಾಗಿದ್ದಾನೆ. ಬಹಳ ಹಿಂದೆಯೇ ಪ್ರೀತಿ-ಸ್ನೇಹದ ಭಗ್ನತೆಯ ಹತಾಶೆಯಲ್ಲಿ ಮೋಕ್ಷದ ಹಾದಿಯಲ್ಲಿ ಬಿದ್ದವ ಈ ಚಾರ್ವಾಕ. ಆಕಸ್ಮಿಕವಾಗಿ ಸಿಕ್ಕ ಆಚಾರ್ಯರು ಭರವಸೆಯ ಬೆಳಕಾಗಿ ಕಾಣಿಸಿಕೊಂಡರು. ತಕ್ಷಣ ಈ ಅಜ್ಜ ತನ್ನೆಲ್ಲ ಸೃಜನಶೀಲತೆಗೆ ಸ್ಫೂರ್ತಿಯಾಗಬಹುದು, ತನ್ನೆಲ್ಲ ಅಹಂಕಾರಕ್ಕೆ ಔಷಧಿಯಾಗಬಹುದು, ಅವರ ಮಡಿಲಲ್ಲಿ ಬಿದ್ದರೆ ಸಾವನ್ನು ಕೂಡಾ ಗೆಲ್ಲಬಹುದು ಎಂದೆಲ್ಲ ವಿಪರೀತವಾಗಿ ಯೋಚಿಸಲಾರಂಭಿಸಿದ್ದನು. ತನಗೇ ತಿಳಿಯದಂತೆ ತಾನೆಂದೂ ಕಾಣದ ಅಕ್ಕರೆಗಾಗಿ ಅವನು ಕಾತರಿಸುತ್ತಿದ್ದ ಕೂಡಾ. ಅವರೆದೆಗೆ ಮುಖ ಹುದುಗಿಸಿ ಎಲ್ಲವನ್ನು ಹೇಳಬೇಕು, ತನ್ನನ್ನು ತಾನು ಕಳೆದು ಬಿಡಬೇಕು ಏನೇನೋ ಯೋಚನೆಗಳು ಅವನದ್ದು. ಆದರೆ ನಾವು ಅಂದುಕೊಂಡಂತೆ ಈ ಲೋಕ ಇರಲಾರದು ಎಂಬ ವಾಸ್ತವ ಇವನಿಗೆ ಅರ್ಥವಾಗದು. ನಮ್ಮ ನಿರೀಕ್ಷೆಯಂತೆ ಎಲ್ಲ ಜನರಿರಲು ಸಾಧ್ಯವಿಲ್ಲ ಎಂಬ ಸೂಕ್ಷ್ಮವನ್ನು ಗ್ರಹಿಸಲಾಗದ ಆತ ಎಷ್ಟೋ ಹೊತ್ತಿನ ನಂತರ ನಿಧಾನಕ್ಕೆ ಹೊರಬಂದು ಆಕಾಶದೆಡೆಗೆ ನೋಡಿದ. ಧೋ ಎಂದು ಒಂದೇ ಸಮನೆ ಸುರಿಯುತ್ತಿರುವ ಮುಸಲಧಾರೆಯಂಥಾ ಮಳೆ, ನಡುನಡುವೆ ಮಿಂಚು. ರಭಸದಲ್ಲಿ ಹರಿಯುವ ಮಳೆನೀರಲ್ಲಿ ದಾರಿಗಳೆಲ್ಲಾ ಮುಳುಗಿ ಹೋಗಿವೆ. ಆಗಾಗ ಸುಳಿಯುವ ಬೆಳ್ಳಿ ಬೆಳಕಲ್ಲಿ ಕಾಲುದಾರಿ ಹುಡುಕುತ್ತಾ ಮುಂದೆ ಮುಂದೆ ಸಾಗಿದ್ದಾನೆ. ಕಾರ್ಗತ್ತಲ ಆ ರಾತ್ರಿಯಲ್ಲಿ ತನ್ನ ಪ್ರೀತಿಯ ಅಜ್ಜನಿಗೆ ಎರಡು ಸಾಲುಗಳನ್ನು ಮಾತ್ರ ಬಿಟ್ಟು ಹೋಗಲು ಅತ ಮರೆಯಲಿಲ್ಲ:

“ಅಜ್ಜಾ…

ನೋವು, ನಲಿವು, ಒಲವು, ಚೆಲುವು, ಹರ್ಷ, ವಿಷಾದದ ಎಲೆಗಳ ಕಳಚಿ ಧ್ಯಾನಸ್ಥ ಮರದಂತಿರುವೆ ನೀನು. ನಿನ್ನ ಶುಭ್ರ ಮೌನ ಕಾಡಿತ್ತು ನನ್ನನ್ನು. ಅಂದು ಬೆಳಗಿನಲ್ಲಿ ನಿನ್ನ ಹೊಗಳಿದೆ. ಇರುಳಿನಲ್ಲಿ ನಿನ್ನೊಡನಿದ್ದೆ. ನೀನು ಮಾತ್ರ ನೀನಾಗಿದ್ದೆ. ಕೆಲವರಿಗೆ ಬೇಕಾಗಿರೋದು ಸತ್ಯ, ಸರಳತೆ ಮತ್ತು ಪ್ರೀತಿ ಮಾತ್ರ. ಗಾಂಧಿ ಅಂದಂತೆ ನಾನು ಶೂನ್ಯನಾಗಬೇಕು, ರೂಮಿ ಅಂದಂತೆ ಬೆತ್ತಲೆಯಾಗಬೇಕು… ನನ್ನೆದೆಯೊಳಗೆ ನಿನ್ನ ಹೆಜ್ಜೆ-ಗೆಜ್ಜೆಯ ಸದ್ದು ಸದಾ ಅನುರಣಿಸುತ್ತದೆ. ನಿನ್ನ ಹಾರೈಕೆಗೆ ನನ್ನ ತಲೆ ಯಾವಾಗಲೂ ಬಾಗಿರುತ್ತದೆ. ಸರಿ ತಪ್ಪುಗಳಾಚೆಗೊಂದು ವಿಶಾಲ ಬಯಲಿದೆ, ನಾನು ನಿನಗಲ್ಲಿ ಸಿಗುವೆ…”

‍ಲೇಖಕರು nalike

July 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: