ಸೌಮ್ಯ ದಯಾನಂದ
ಯಾರಿಗೆ ಕೇಳೀತು
ನನ್ನೆದೆಯ ನೋವು?!
ಅವನ ಕೈಯಿಂದ ಬೀಳ್ಕೊಂಡೆ
ಅವಳ ಸ್ಪರ್ಶಕ್ಕೆ ಕಾದಿದ್ದೆ
ನನ್ನ ಸುವಾಸನೆಯ
ಅರ್ಪಿಸುವ ಖುಷಿಯಲ್ಲಿದ್ದೆ!
ನನ್ನ ಬಣ್ಣವನ್ನವಳು
ಮೋಹಿಸುವುದಿರಲಿ
ಕಣ್ಣೆತ್ತಿ ನೋಡಲೂ ಇಲ್ಲ..
ನಾನೇನು ಮಾಡಿದ್ದೆ?!
ಇಬ್ಬರ ನಡುವಿನ
ಸೇತುವೆ ನಾನು!
ಒಲಿದರೆ ಮುತ್ತು
ಇಲ್ಲವೇ ಮೃತ್ಯು!
ಅವರಿಗಾಗಿ ನನ್ನ ಬದುಕು
ಅವಳ ಮುಡಿ
ಇಲ್ಲ ಯಾರದೋ ಕಾಲ ಅಡಿ!

ಅದೆಷ್ಟು ಮುದ್ದಾಗಿ
ಬೆಳೆಸಿದ್ದ ನನ್ನ
ತೋಟಗಾರ!
ಹೂಗಾರನೆಷ್ಟು
ಜೋಪಾನ ಮಾಡಿದ್ದ
ಪದೇ ಪದೇ ನೀರುಣಿಸಿ..
ಅವನ ಕಿಸೆಯ
ಕಾಸಿಗೆ ಬಿಕರಿಯಾದಾಗ
ಹೆಮ್ಮೆಯಿಂದ ಬೀಗಿದ್ದೆ!
ಅವನ ಎದೆಬಡಿತ
ಅದೆಷ್ಟು ಜೋರಾಗಿತ್ತು
ಅವಳ ಹೆಸರನ್ನೇ ಉಸುರುತ್ತಿತ್ತು.!
ನೆನಪಿನ ಶೃತಿ
ತಲ್ಲಣದ ತಾಳ
ಖುಷಿಯ ಮೇಳ ತುಂಬಿತ್ತು
ಕಣ್ಣ ಹೊಳಪಿಗೆ
ನನ್ನ ಮೇಲಿನ
ಮಂಜಹನಿ ಮುತ್ತಾಯ್ತು!
ಅವಳೆಷ್ಟು ಸುಂದರಿ!
ನನ್ನ ಜನ್ಮ ಸಾರ್ಥಕ
ಅರೇ..!
ಕಣ್ಣಲೇಕೆ ನೀರು?!
ನೋವುಂಡ ಕನಸುಗಳೇ
ಸುರಿಯುತ್ತಿವೆ!
ತಾಪವೋ..ಕೋಪವೋ..?!
ಮಾತಿಗೆ ದುಃಖದ ಅಣೆಕಟ್ಟು!
ಗೊತ್ತಾಯ್ತು..
ಇನ್ನು ನನಗೆ ಉಳಿಗಾಲವಿಲ್ಲ!
ಭೂಮಿಯ ಸ್ಪರ್ಶವೇಕೋ
ಭಾರ ಭಾರ..
ತುಳಿದರೆ ತುಳಿಯಲಿ
ಅವಳ ಮುಡಿಸೇರದ
ನಾನು ಇದ್ದೇನು ಮಾಡಲಿ..
ಯಾವುದೋ ಚಕ್ರಕ್ಕೆ
ಸಿಕ್ಕಿ ಅಪ್ಪಚ್ಚಿಯಾದರೂ
ಸೋರುವುದು ಪ್ರೀತಿಯೇ!
ನೆನಪಿರಲಿ…






0 Comments