ಗೋವಿಂದ ಹೆಗಡೆ ಗಜಲ್ ಬರಹ…

ಗೋವಿಂದ ಹೆಗಡೆ

ಕನ್ನಡ ಗಜಲ್ ಬರಹದಲ್ಲಿ ಒಂದು ವಿಶಿಷ್ಟ ಪ್ರಯೋಗ ಇದು. ಇಂಥ ಗಜಲ್ ಬರಹ, ಸಂಯೋಜನೆಯನ್ನು ನಾನು ಆರಂಭಿಸಿದ್ದು ಶಿವರಾಮ ಕಾರಂತರ ಕಾದಂಬರಿಗಳ ಹೆಸರುಗಳನ್ನು ಗಜಲ್ ಒಂದರಲ್ಲಿ ಪೋಣಿಸುವ ಮೂಲಕ. ಆಮೇಲೆ ಸರ್ವಶ್ರೀ ಸುಬ್ರಾಯ ಚೊಕ್ಕಾಡಿ, ಕೆ ವಿ ತಿರುಮಲೇಶ್, ಗೋಪಾಲಕೃಷ್ಣ ಅಡಿಗ, ಜಿ ಎಸ್ ಶಿವರುದ್ರಪ್ಪ, ಕೆ ಎಸ್ ನರಸಿಂಹಸ್ವಾಮಿ ಮೊದಲಾದವರ ಕವಿತೆಗಳ ಮತ್ತು ಕೃತಿಗಳ ಹೆಸರುಗಳನ್ನು ಗಜಲ್ ರೂಪದಲ್ಲಿ ಸಂಯೋಜಿಸಿ ರಚಿಸಿದೆ.

ಈ ಮಾದರಿಯ ಮುಂದುವರಿಕೆಯಾಗಿ ಒಟ್ಟು ಐದು ಗಜಲ್ ಗಳು ಇಲ್ಲಿವೆ. ಮೊದಲ ಮೂರು ಗಜಲ್‌ಗಳಲ್ಲಿ ‌‌‌‌‌‌‌‌‌‌‌‌‌‌‌‌‌‌‌‌‌‌ ಕ್ರಮವಾಗಿ ವರಕವಿ ಬೇಂದ್ರೆ, ಅನುಪಮಾ ನಿರಂಜನ ಮತ್ತು ವಿವೇಕಾನಂದ ಕಾಮತರ ಕೃತಿಗಳ ಹೆಸರುಗಳನ್ನು ಬಳಸಿ ಗಜಲ್ ಬರೆಯಲಾಗಿದೆ. ಮುಂದಿನ ಎರಡು ಗಜಲ್ ಗಳಲ್ಲಿ ನನ್ನ ಎರಡು ಕವನ ಸಂಕಲನಗಳ ಕೃತಿ ಮತ್ತು ಕವನಗಳ ಶೀರ್ಷಿಕೆಗಳನ್ನು ಬಳಸಿದ್ದೇನೆ.

ಈ ಹೆಸರುಗಳನ್ನು ರಸಸ್ಯಂದಿಯಾಗಿ ಸಂಯೋಜಿಸುವುದು ಸವಾಲಿನ ಕೆಲಸ. ಈ ಸಾಹಸದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂಬುದನ್ನು ಓದುಗರು ಹೇಳಬೇಕು. (ಗಜಲ್ ಬರೆಯುವ ಮೂಲ ರೀತಿ ಇದಲ್ಲ  ಎಂಬುದು ನನಗೆ ಗೊತ್ತು. ಗಜಲ್ ನಿಯಮಗಳ ಪರಿಧಿಯಲ್ಲೇ ಹೀಗೂ ಬರೆಯಬಹುದು ಎಂದು ಒಂದು ಪ್ರಯೋಗವನ್ನು ಮಾಡಿ ತೋರಿಸುವುದು ನನ್ನ ಉದ್ದೇಶ).

1.

ಗರಿಯ ಚಾಚಿ ಮತ್ತೆ ಶ್ರಾವಣಾ ಬಂತು ನಾದ ಲೀಲೆ
ಜೀವ ಲಹರಿಯ ಹಾಡು ಪಾಡು ತಂತು ನಾದ ಲೀಲೆ

ಚೈತ್ಯಾಲಯದಲಿ ವಿನಯದಿ ನಡೆದ ಚೈತನ್ಯದ ಪೂಜೆ
ಒಲವೇ ನಮ್ಮ ಬದುಕು ಕಾಣೋ ಅಂತು ನಾದ ಲೀಲೆ

ಮುಕ್ತ ಕಂಠದಲ್ಲಿ ಸಾರು ಇದು ನಭೋವಾಣಿ
ಸಖೀಗೀತ ಸಂಚಯದ ಕಂತು ನಾದ ಲೀಲೆ

ಆಹಾ,ಮೇಘದೂತ ಮೂರ್ತಿ ಮತ್ತು ಕಾಮ ಕಸ್ತೂರಿ
ಹೃದಯ ಸಮುದ್ರವ ಕಡೆವ ಮಂತು ನಾದ ಲೀಲೆ

ಕೃಷ್ಣಾ ಕುಮಾರಿ ಕರೆದಿದ್ದಾಳೆ ಬಾ ಹತ್ತರ ಬಾ ಹತ್ತರ
ನೂರು ಮರ ನೂರು ಸ್ವರ ಮಿಡಿವ ತಂತು ನಾದಲೀಲೆ

ಮತ್ತೆ ಬಾ ‘ಜಂಗಮ’ ತಾ ಲೆಕ್ಕಣಕಿ ತಾ ಧೌತಿ
ನಾಕುತಂತಿ ಮೀಟದೇನೆ ಎಂತು ನಾದಲೀಲೆ

ವರಕವಿ ದ ರಾ ಬೇಂದ್ರೆಯವರ ೧೮ ಕೃತಿಗಳ ಶೀರ್ಷಿಕೆಗಳನ್ನು ಇಲ್ಲಿ ಸಂಕಲಿಸಿದೆ.

ಶೀರ್ಷಿಕೆಗಳು- ಗರಿ, ಮತ್ತೆ ಶ್ರಾವಣಾ ಬಂತು, ನಾದಲೀಲೆ, ಜೀವ ಲಹರಿ, ಹಾಡು ಪಾಡು, ಚೈತ್ಯಾಲಯ, ವಿನಯ, ಚೈತನ್ಯದ ಪೂಜೆ, ಒಲವೇ ನಮ್ಮ ಬದುಕು, ಮುಕ್ತ ಕಂಠ, ಇದು ನಭೋವಾಣಿ, ಸಖೀಗೀತ, ಸಂಚಯ, ಮೇಘದೂತ, ಮೂರ್ತಿ ಮತ್ತು ಕಾಮಕಸ್ತೂರಿ, ಹೃದಯ ಸಮುದ್ರ, ಕೃಷ್ಣಾ ಕುಮಾರಿ, ಬಾ ಹತ್ತರ, ನೂರು ಮರ ನೂರು ಸ್ವರ,ತಾ ಲೆಕ್ಕಣಕಿ ತಾ ಧೌತಿ, ನಾಕುತಂತಿ

2.

ಗೊತ್ತೇನು ಅನಂತ ಗೀತ ಸ್ನೇಹ ಪಲ್ಲವಿಯ ಆಳ
ಚಿತ್ತ ಮೋಹನ ಏಳುಸುತ್ತಿನ ಮಲ್ಲಿಗೆಯ ಆಳ

ಸಂಕೋಲೆಯೊಳಗಿಂದ ಕಂಡ ಒಂದು ಗಿಣಿಯ ಕಥೆ
ನೂಲು ನೇಯ್ದ ಚಿತ್ರ ನೆನಪು: ಸಿಹಿ-ಕಹಿಯ ಆಳ

ಮೂಡಣ ಪಡುವಣದ ಕಣಿವೆಗೆ ಬಂತು ಬೇಸಿಗೆ
ಕಂಡಿತೇನು ಮುಕ್ತಿಚಿತ್ರದ ಮೂಲಮುಖಿಯ ಆಳ

ಕಲ್ಲೋಲಗೊಂಡಿವೆ ಕೊಳಚೆ ಕೊಂಪೆಯ ದನಿಗಳು
ಅಳೆಯಲೇ ದಿಟ್ಟೆ ಮಾಧವಿಯ ಆ ಸೇವೆಯ ಆಳ

ಋಣಮುಕ್ತಳು ಅವಳು ಗಿರಿಧಾಮದ ಹಿಮದ ಹೂ
ತಿಳಿಯಲಿ ಹೇಗೆ ಹೃದಯ ವಲ್ಲಭನ ಕಣ್ಮಣಿಯ ಆಳ

ಹೃದಯ ಸಮುದ್ರ ದಾಟಿ ಅದೋ ಸಸ್ಯ ಶ್ಯಾಮಲಾ
ಒಡಲುಗೊಂಡು ಅರಿ ‘ಜಂಗಮ’, ಆಕಾಶ ಗಂಗೆಯ ಆಳ

ಅನುಪಮಾ ನಿರಂಜನರ ೨೭ ಕೃತಿಗಳ ಶೀರ್ಷಿಕೆಗಳನ್ನು ಇಲ್ಲಿ ಪೋಣಿಸಲಾಗಿದೆ.

ಕೃತಿಗಳು- ಅನಂತ ಗೀತ, ಸ್ನೇಹ ಪಲ್ಲವಿ, ಆಳ, ಚಿತ್ತ ಮೋಹನ, ಏಳು ಸುತ್ತಿನ ಮಲ್ಲಿಗೆ, ಸಂಕೋಲೆಯೊಳಗಿಂದ, ಒಂದು ಗಿಣಿಯ ಕಥೆ, ನೂಲು ನೇಯ್ದ ಚಿತ್ರ, ನೆನಪು: ಸಿಹಿ-ಕಹಿ, ಮೂಡಣ ಪಡುವಣ, ಕಣಿವೆಗೆ ಬಂತು ಬೇಸಿಗೆ, ಮುಕ್ತಿಚಿತ್ರ, ಮೂಲಮುಖಿ, ಕಲ್ಲೋಲ, ಕೊಳಚೆ ಕೊಂಪೆಯ ದನಿಗಳು, ದಿಟ್ಟೆ, ಮಾಧವಿ, ಸೇವೆ, ಋಣಮುಕ್ತಳು, ಗಿರಿಧಾಮ, ಹಿಮದ ಹೂ, ಹೃದಯವಲ್ಲಭ, ಕಣ್ಮಣಿ, ಹೃದಯ ಸಮುದ್ರ, ಸಸ್ಯ ಶಾಮಲಾ,
ಒಡಲು, ಆಕಾಶ ಗಂಗೆ.

3.

ಮೇಘ ಮಾಧುರಿಯಲ್ಲಿ ಅದೋ ಅನುಬಂಧದ ಅನಾವರಣ
ಜೀವನ ಗಂಗೋತ್ರಿಯಲ್ಲಿ ಕೇಳಿದೆ ಋತುಗಾನದ ಅನಾವರಣ

ನೀ ನಡೆವ ಹಾದಿಯಲ್ಲಿ ಆಸರೆಯೇ ಸೂತ್ರದ ಗೊಂಬೆ
ಕವಲೊಡೆದ ಹಾದಿಯಲ್ಲೂ ಸ್ವೀಕಾರದ ಅನಾವರಣ

ಬರಿಯ ಕಾಗದದ ಹೂವಲ್ಲ ಅರಳಿದೆ ಬಣ್ಣದ ಚಿತ್ತಾರ
ಮರಳಿನ ಮನೆಯಲ್ಲೂ ಇದೆ ಸುಖ, ಸಾಫಲ್ಯದ ಅನಾವರಣ

ಮೂಕ ಸ್ವರಗಳ ನಡುವೆ ನಡೆದೇ ಇದೆ ಮುಖಾಮುಖಿ
ಅಂತರಂಗದ ಮೃದಂಗದಲ್ಲಿ ಅಂಕಿತದ ಅನಾವರಣ

ದೂರ ದಾರಿಯ ತೀರದಲ್ಲೂ ಸುಳಿ ಸಿಕ್ಕುಗಳ ಹಂಗು
ಸಂಸಾರದ ಸಾರವೇ ಇದು ಶ್ರೀಗಂಧದ ಅನಾವರಣ

ಬದುಕಲ್ಲೊಂದು ಹೊಸ ಉಸಿರು ಈ ಬಂಧ ಅನುಬಂಧ
ಪೂರ್ಣ ಚಂದಿರ ಬೆಳಗೆ ಸುಪ್ತಸ್ವರದ ಅನಾವರಣ

ನೆಲ ಮುಗಿಲುಗಳ ಆಚೆ ಹೃದಯ ರಂಗೋಲಿ ‘ಜಂಗಮ’
ಭಾವ ಬದುಕುಗಳ ತೀರದಲ್ಲಿ ಅಜ್ಞಾತದ ಅನಾವರಣ

ಶ್ರೀ ವಿವೇಕಾನಂದ ಕಾಮತರ 33 ಕಾದಂಬರಿಗಳ ಹೆಸರುಗಳನ್ನು ಇಲ್ಲಿ ಪೋಣಿಸಲಾಗಿದೆ.
ಇಲ್ಲಿ ಬಳಸಲಾದ ಶೀರ್ಷಿಕೆಗಳು:

ಮೇಘ ಮಾಧುರಿ, ಅನುಬಂಧ, ಅನಾವರಣ, ಜೀವನ ಗಂಗೋತ್ರಿ, ಋತುಗಾನ, ನೀ ನಡೆವ ಹಾದಿಯಲ್ಲಿ, ಆಸರೆ, ಸೂತ್ರದ ಗೊಂಬೆ, ಕವಲೊಡೆದ ಹಾದಿ, ಸ್ವೀಕಾರ, ಕಾಗದದ ಹೂ, ಬಣ್ಣದ ಚಿತ್ತಾರ, ಮರಳಿನ ಮನೆ, ಸಾಫಲ್ಯ, ಮೂಕ ಸ್ವರಗಳು, ಮುಖಾಮುಖಿ, ಅಂತರಂಗದ ಮೃದಂಗ, ಅಂಕಿತ, ದೂರ ದಾರಿಯ ತೀರ, ಸುಳಿ, ಸಿಕ್ಕು, ಹಂಗು, ಸಂಸಾರದ ಸಾರ, ಶ್ರೀಗಂಧ, ಬದುಕಲ್ಲೊಂದು ಹೊಸ ಉಸಿರು, ಈ ಬಂಧ ಅನುಬಂಧ, ಪೂರ್ಣ ಚಂದಿರ, ಸುಪ್ತಸ್ವರ, ನೆಲ ಮುಗಿಲು, ಹೃದಯ ರಂಗೋಲಿ, ಭಾವ ಬದುಕು, ತೀರ, ಅಜ್ಞಾತ.

4.

ಕಳೆದುಹೋಗುವ ಮಾತಿನಲ್ಲಿ ಯಾವ ದರ್ಶನ ಹೇಳು
ಒಡಕು ದೋಣಿಯ ಮೌನದಲ್ಲಿ ಯಾವ ದರ್ಶನ ಹೇಳು

ಒಂದು ರಾತ್ರಿಯ ಪರಿಚಯ ಹಾಡಾಗದ ಗೊಂದಲ
ಬೆಳಗಾಯಿತೆಂದರೆ ಮಳೆಯಲ್ಲಿ ಯಾವ ದರ್ಶನ ಹೇಳು

ಹಾಡಿ ಮುಗಿಸುವ ಮೊದಲು ತಾಸು ರಾತ್ರಿಯ ಹೊತ್ತು
ಮಾಗಿಯ ವಿಷಾದ ಯೋಗದಲ್ಲಿ ಯಾವ ದರ್ಶನ ಹೇಳು

ಆರಿದ ಒಂಟಿ ದೀಪ ಅಣುವಿನಾಳದ ಭೀತಿ ಬಿಂಬ
ಚಂದ್ರ ಕರಗಿದ ಸುದ್ದಿಯಲ್ಲಿ ಯಾವ ದರ್ಶನ ಹೇಳು

ಗೋಡೆ ಮತ್ತು ಬಾಗಿಲಿನಲ್ಲಿ ನೆಟ್ಟಿದೆ ಮರದ ಕಣ್ಣು
ಚಿಟ್ಟೆಯಾಗದ ಚಿತ್ರಗಳಲ್ಲಿ ಯಾವ ದರ್ಶನ ಹೇಳು

ಕನಸು ಕೋಳಿಯ ಕತ್ತಿನಲ್ಲಿದೆ ಬೇರೆಯದೇ ಮುಖ
ದಾರಿಯೊಂದರ ಇತಿ-ವೃತ್ತದಲ್ಲಿ ಯಾವ ದರ್ಶನ ಹೇಳು

ಅಜ್ಜ ಕಟ್ಟಿದ ಮನೆ ಈಗ ನಾನಾಗದ ‘ಅವ’ಗೆ ಸೇರಿದೆ
ವರ್ತಮಾನದ ಮಂಕು ಕ್ಷಣದಲ್ಲಿ ಯಾವ ದರ್ಶನ ಹೇಳು

ಇದು ಎಂಥ ಬೆಳಕು ಎಂಥ ಪತನವಿದು ‘ಜಂಗಮ’
ಸ್ವ-ಸ್ವರೂಪದ ಅವಸಾನದಲ್ಲಿ ಯಾವ ದರ್ಶನ ಹೇಳು

ನನ್ನ ‘ಕನಸು ಕೋಳಿಯ ಕತ್ತು’ ಸಂಕಲನದ ೨೮ ಕವಿತೆಗಳ ಶೀರ್ಷಿಕೆಗಳನ್ನು ಈ ಗಜಲ್ ನಲ್ಲಿ ಪೊಲೀಸಲಾಗಿದೆ –

ಕಳೆದುಹೋಗುವ ಮಾತು, ದರ್ಶನ, ಒಡಕು ದೋಣಿಯ ಮೌನ, ಒಂದು ರಾತ್ರಿಯ ಪರಿಚಯ, ಬೆಳಗಾಯಿತೆಂದರೆ,ಮಳೆ, ಹಾಡಿ ಮುಗಿಸುವ ಮೊದಲು, ತಾಸು ರಾತ್ರಿಯ ಹೊತ್ತು, ಮಾಗಿ, ವಿಷಾದ ಯೋಗ, ಒಂಟಿ ದೀಪ, ಅಣುವಿನಾಳದ ಭೀತಿ, ಚಂದ್ರ ಕರಗಿದ ಸುದ್ದಿ, ಗೋಡೆ ಮತ್ತು ಬಾಗಿಲು, ಮರದ ಕಣ್ಣು, ಚಿಟ್ಟೆ, ಚಿತ್ರಗಳು, ಕನಸು ಕೋಳಿಯ ಕತ್ತು, ಬೇರೆಯದೇ ಮುಖ, ದಾರಿಯೊಂದರ ಇತಿ-ವೃತ್ತ, ಅಜ್ಜ, ಮನೆ,ನಾನಾಗದ ‘ಅವ’ಗೆ, ವರ್ತಮಾನ, ಇದು ಎಂಥ ಬೆಳಕು, ಪತನ, ಸ್ವರೂಪ, ಅವಸಾನ

5.

ಕದ ತೆರೆವ ಹೊತ್ತು ಮುಸುಕು ಸರಿಯಬೇಕು ಇನ್ನಾದರೂ
ಕಾಗದದ ದೋಣಿ ತಂದ ಬಿಡುಗಡೆಯ ಅರಿಯಬೇಕು ಇನ್ನಾದರೂ

ದಾಖಲಾಗದ ಅರ್ಧ ಸತ್ಯಗಳಲ್ಲಿ ಅಕಾಲ ನಡೆದ ಕುಣಿತ
ಸಜೀವ ವಾಸ್ತವದಲ್ಲಿ ಏಕತಾರಿ ಮೊರೆಯಬೇಕು ಇನ್ನಾದರೂ

ಕಾಲ-ಕಡಲು ಮೀರಿದೆ ಕನಸು ಕವಿತೆಯ ಚಾಚು
ಕನ್ನಡಕವ ಮೀರಿದ ಅತೀತಗಳ ಬರೆಯಬೇಕು ಇನ್ನಾದರೂ

ಪೇಟೆ ಬೀದಿಯ ತೇರು ಬಂತೇನು ಸಂಜೆ ಮಳೆಯಲ್ಲಿ
ನವಿಲುಗಳ ಜಾದೂವಿನಲಿ ನೋಟ ತೆರೆಯಬೇಕು ಇನ್ನಾದರೂ

ಮಧ್ಯಂತರಗಳಲ್ಲಿನ ಚಹರೆ ಬಲ್ಲೆ ನೀನು ‘ಜಂಗಮ’
ಕನ್ನಡಿಯ ಆಚಿನ ಉಂಬಳಿಗಳ ಕರೆಯಬೇಕು ಇನ್ನಾದರೂ

‍ಲೇಖಕರು Admin

August 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: