ಮಧುಕರ್ ಬಳ್ಕೂರು ಸರಣಿ ಕಥೆ 14- ನಾವು ಕ್ರಿಕೆಟರ್ ಆಗಬಹುದಿತ್ತಾ..?

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ.

‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ.

ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ.

14

ಕೀನ್ಯಾದಂತಹ ದೇಶದಲ್ಲಿ ಹುಟ್ಟಿದ್ದರೆ ನಾವು ಕ್ರಿಕೆಟರ್ ಆಗಬಹುದಿತ್ತಾ..?

ಯಾಕೋ ಕೀನ್ಯಾದಂತಹ ದೇಶಗಳಲ್ಲಿ ಹುಟ್ಟಿದ್ದರೆ ನಾವು ಕೂಡ ಕ್ರಿಕೆಟರ್ ಆಗಬಹುದಿತ್ತೆನೋ..? ಸ್ವಲ್ಪ ಸಿರೀಯಸ್ ಆಗಿ ಪ್ರಾಕ್ಟೀಸ್ ಮಾಡಿದ್ರೆ ನಮಗೂ ಆ ದೇಶದ ಪರ ಆಡೋಕೆ ಚಾನ್ಸ್ ಸಿಗುತ್ತಿತ್ತೆನೋ …?” ಹಾಗಂತ ರಾಘು ಗುನುಗಲಾರಂಭಿಸಿದ್ದ. ನನಗೂ ಹೌದಲ್ವಾ ಅಂತ ಅನ್ನಿಸಲಾರಂಭಿಸಿತ್ತು.

ಅದು ಭಾರತ, ಕೀನ್ಯಾ ಕೋಕಾಕೋಲ ಕಪ್ ಸರಣಿಯ ಮ್ಯಾಚ್. ಕೀನ್ಯಾ ಟೀಮ್ ನಲ್ಲಿ ಅರ್ಧಕರ್ಧ ಭಾರತೀಯ ಮೂಲದ ಆಟಗಾರರನ್ನು ಟಿವಿಯಲ್ಲಿ ನೋಡಿದ ನಮಗೆ ಸಹಜವಾಗೇ ಅಚ್ಚರಿ ಎನಿಸಿತ್ತು. ಆ ಕ್ಷಣಕ್ಕೆ ರಾಘು ಹಾಗೆ ಅಂದಾಗ ನನ್ನ ತಲೆಯಲ್ಲಿ ಮೂಡಿದ ಪ್ರಶ್ನೆ ಇಷ್ಟೇ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ತಂಡದ ಪರ ಆಡೋದಕ್ಕೆ ಅಲ್ಲಿನವರೇ ಅಂತ ಒಂದ್ ಹನ್ನೊಂದು ಮಂದಿ ಕೂಡ ಇಲ್ಲವಾ..? ಅಷ್ಟೊಂದು ಆ ದೇಶ ಕ್ರಿಕೆಟ್ ಆಡುವವರ ಬರದಲ್ಲಿದೆಯಾ..? ಕ್ರಿಕೆಟ್ ಆಟ ಗೊತ್ತಿರದಷ್ಟು ಅಲ್ಲಿನ ಹುಡುಗ್ರು ಅಮಾಯಕರಾ..? ಹಾಗಿದ್ರೆ ಅದೆಂತಾ ದೇಶ..? ನಾವ್ ನೋಡಿದ್ರೆ ಇಲ್ಲಿ ಬ್ಯಾಟ್ ಮಾಡೋದಕ್ಕೆ ನಾ ಮುಂದು ತಾ ಮುಂದು ಅಂತ ಜಗಳವಾಡುತ್ತೇವೆ.

ಒಂದು ನಾಲ್ಕು ಬಾಲ್ ಆಡೋಕೆ ಸಿಕ್ಕರೂ ಆ ದಿನ ಧನ್ಯ ಅಂದುಕೊಳ್ತೇವೆ. ಅಪ್ಪಿ ತಪ್ಪಿ ಯಾವಾನಾದರೂ ಕೇರಿಗೆ, ಊರಿಗೆ ಒಂದೊಳ್ಳೇ ಪ್ಲೇಯರ್ ಅಂತ ಅನ್ನಿಸಿಕೊಂಡರೂ ಅವನನ್ನೆ ದೊಡ್ಡ ಸ್ಟಾರ್ ರೀತಿಯಲ್ಲಿ ನೋಡುತ್ತೇವೆ. ಅಂತದ್ದರಲ್ಲಿ ಇವರ್ಯಾರಯ್ಯ ರವಿಂದು ಷಾ, ಹಿತೇಶ್ ಮೋದಿ, ದೀಪಕ್ ಚೂಡಾಸಾಮ..? ಯಾವ ಸುಳಿವು ಹಿಡಿದು ಅಲ್ಲಿಗೆ ಹೋಗಿ ಚಾನ್ಸ್ ಗಿಟ್ಟಿಸಿಕೊಂಡ್ರು ಅಂತ? ಭಾರತದಲ್ಲಿದ್ದರೆ ಅವರಿಗೆ ಇಂತದ್ದೊಂದು ಚಾನ್ಸ್ ಸಿಗುತ್ತಿತ್ತಾ..? ಇಲ್ಲಿನ ಪಾಪ್ಯೂಲೇಷನ್, ಸ್ಪರ್ಧೆ, ರಾಜಕೀಯವನ್ನೆಲ್ಲ ದಾಟಿಕೊಂಡು ಹೋಗೋದು ಅಷ್ಟೊಂದು ಸುಲಭವಿತ್ತಾ.? ಹಾಗಂತ ಶಿವನಾರಾಯಣ್ ಚಂದ್ರಪಾಲ್, ರಾಮ್ ನರೇಶ್ ಸರವಣ್ ಅವರನ್ನು ವಿಂಡೀಸ್ ಟೀಮಿನಲ್ಲಿ ನೋಡಿದ್ದೆವಾದರೂ ಅವರು ತಮ್ಮ ಅಧ್ಬುತ ಪ್ರತಿಭಾ ಬಲದಿಂದ ದೈತ್ಯರಂತಹ ಟೀಮಿನಲ್ಲಿ ಸ್ಥಾನ ಪಡೆದ್ರು ಅನ್ನೋದು ಮೈಂಡ್ ನಲ್ಲಿತ್ತು. ಆದರೆ ಕ್ರಿಕೆಟ್ ಶಿಶುಗಳೆನಿಸಿದ ಕೀನ್ಯಾದಲ್ಲಿ ಹೋಗಿ ಇವರುಗಳು ಹೇಗೆ ಸುಲಭದಲ್ಲಿ ಸ್ಥಾನ ಪಡೆದ್ರು ಅನ್ನೋದೆ ಅಚ್ಚರಿಯಾಗಿತ್ತು.

ಕಡೆಗೆ ತಿಳಿದಿದ್ದೆನೆಂದರೆ ಅವರ ಪೂರ್ವಜರು ತಲೆಮಾರುಗಳ ಹಿಂದೆನೆ ಅಲ್ಲಿಗೆ ಹೋಗಿ ಸೆಟ್ಲ್ ಆಗಿದ್ದಾರೆ ಅನ್ನುವುದು. ಸೋ, ಅವರು ಅಲ್ಲಿನ ಪ್ರಜೆಗಳೇ ಆಗಿ ಹೋದ ಮೇಲೆ ನಮ್ಮ ಯೋಚನಾ ಕ್ರಮ ಬದಲಾಗಿ ಮನಸು ಸಮಧಾನವಾಗಿ ಅವರ ಮೇಲೆ ಅಭಿಮಾನವೇ ಮೂಡಿತು. ಕಾರಣ, ಇಂಡಿಯಾದವರು ಎಲ್ಲಿಯೇ ಇದ್ದರೂ ಆಯಾ ನೆಲದ ಅಭಿವೃದ್ಧಿಗೆ ಕಾರಣ ಆಗುತ್ತಾರೆ ಎನ್ನುವ ಸತ್ಯ. ಅವರು ಎಲ್ಲಿಯೇ ಇದ್ದರೂ ನಮ್ಮ ಮಣ್ಣಿನ ಸೊಗಡಿನ ಚಾಪನ್ನು ತೋರೇ ತೋರುತ್ತಾರೆ ಅನ್ನೋ ವಾಸ್ತವ. ಏನೇ ಆದರೂ ಆ ದೇಶದಲ್ಲಿ ಹುಟ್ಟಿದಿದ್ದರೆ… ಎನ್ನುವ ಆಸೆ ಮಾತ್ರ ನಮ್ಮ ತಲೆಯಿಂದ ಕಳಚಲು ಸಾಧ್ಯವಿರಲಿಲ್ಲ. ಯಾಕಂದ್ರೆ ತಲೆಯೊಳಗೆ ಬಿಟ್ಟಕೊಂಡ ಹುಳ ಅಷ್ಟು ಬೇಗ ಶಮನವಾಗೋಕೆ ಹೇಗೆ ಸಾಧ್ಯ ಹೇಳಿ…?
ಹಾಗಂತ ಮನಸು ಸುಮ್ಮನಾಗಬೇಕಲ್ಲ…?

“ಅಯ್ಯೋ ಅಷ್ಟು ದೂರ ಯಾಕೆ ಮಾರಾಯ..? ಗೋವಾ, ಸಿಕ್ಕಿಮ್ ನಂತಹ ರಾಜ್ಯದಲ್ಲಿ ಇದ್ದಿದ್ದರೂ ಸಾಕಿತ್ತು. ಕೊನೆಪಕ್ಷ ಸುಲಭವಾಗಿ ರಣಜಿ ಮ್ಯಾಚ್ ನ್ನಾದರೂ ಆಡಿಕೊಂಡ್ ಇರಬಹುದಿತ್ತು” ಅಂತ ಅಂದುಬಿಟ್ಟೆ. ರಾಘುನೂ ಹೌದಲ್ವಾ..! ಟ್ರೈಮಾಡಬೇಕು ಹಾಗಿದ್ರೆ ಅನ್ನೋ ದಾಟಿಯಲ್ಲಿ ಗಂಭೀರನಾದ.

ಆ ದಿನಗಳೇ ಹಾಗೆ. ಹನ್ನೆರಡು ಹದಿಮೂರರ ಪ್ರಾಯ. ವಾಸ್ತವತೆ ಗೊತ್ತಾಗುತ್ತಿದ್ದರೂ ಆಸೆ ಕನಸುಗಳನ್ನು ಕಾಣುವ ವಯಸು. ಆಗುತ್ತದೊ ಬಿಡ್ತದೋ ಕನಸನ್ನು ಕಾಣೋಕೆ ಹಣ ಕೊಡಬೇಕಾ..? ಇದು ನಮ್ಮ ಥೀಯರಿ. ಪರಿಣಾಮ, ಓದಿನ ಕಡೆಗೆ ಲಕ್ಷ್ಯ ಇಲ್ಲ. ಎಲ್ಲಿಯವರೆಗೆ ಅಂದರೆ ನಾಳೆ ಎಕ್ಸಾಮ್ ಇದ್ದರೂ ಕ್ರಿಕೆಟ್ ಗ್ರೌಂಡ್ ಗೆ ಹೋಗೋದು ಬಿಡ್ತಿರಲಿಲ್ಲ. ದಿನಕ್ಕೆ ಒಂದು ಸಲನಾದ್ರೂ ಗ್ರೌಂಡ್ ಗೆ ಹೋಗಿ ಬರಲೇಬೇಕು. ಮಳೆ ಬಂದು ಗ್ರೌಂಡ್ ನಲ್ಲಿ ಎಷ್ಟು ನೀರು ನಿಂತಿದೆ ಅಂತ ನೋಡೋಕಾದರೂ..!!

ಈ ಮನಸ್ಥಿತಿ ಬೇಸಿಗೆ ರಜೆ ಕೊಟ್ಟಾಗ ಶಾಲೆಗೆ ವಿಸಿಟ್ ಕೊಡುವುದರಲ್ಲೂ ಇದ್ದಿತ್ತು. ರಜೆ ಕೊಟ್ಟ ಆ ಸಮಯದಲ್ಲೂ ಎರಡು ಮೂರು ದಿನಕ್ಕೊಮ್ಮೆ ಶಾಲೆಗೆ ಹೋಗಿ ನಮ್ಮ ತರಗತಿಯ ಕೋಣೆಯನ್ನು ಹೊರಗಡೆ ಕಿಟಕಿಯಿಂದ ನೋಡದಿದ್ದರೆ ಸಮಾಧಾನವೇ ಇರುತ್ತಿರಲಿಲ್ಲ. ಕಾರಣವಿಷ್ಟೇ, ನಾವು ಬಳುಸುತ್ತಿದ್ದ ಡೆಸ್ಕ್, ಬೆಂಚ್ ಗಳು ಇರುವ ಜಾಗದಲ್ಲಿ ಇದೆಯಾ ಇಲ್ಲವಾ ಅಂತ ಚೆಕ್ ಮಾಡೋಕೆ…! ಒಮ್ಮೊಮ್ಮೆ ಏನಾಗುತ್ತಿತ್ತು ಅಂದ್ರೆ ಶಾಲೆಯ ಹಳೆ ವಿದ್ಯಾರ್ಥಿಗಳೆನಿಸಿಕೊಂಡವರು ನಾಟಕದ ರಿಹರ್ಸಲ್ ಗೆ ಅಂತ ರೂಮ್ ಅನ್ನ ಬಳಸಿಕೊಳ್ಳುತ್ತಿದ್ದರಿಂದ ಹಾಗೂ ಪೋಲಿಯೋ ಲಸಿಕೆ, ರಕ್ತದಾನ ಶಿಬಿರ ಅಂತ ಕಾರ್ಯಕ್ರಮಗಳು ಆಗಾಗ ನಮ್ಮ ಶಾಲೆಗಳಲ್ಲಿ ನಡೆಯುತ್ತಿದ್ದರಿಂದ ನಮ್ಮ ಡೆಸ್ಕ್ ಬೆಂಚ್ ಗಳು ಇರುವ ಜಾಗದಲ್ಲಿ ಇರದೆ ಗಾಯಬ್ ಆಗಿರುತ್ತಿದ್ದವು. ಹಾಗಾಗಿ ಈ ಕಾಳಜಿ. ಆದರೆ ನಾನು ಮಾತ್ರ ಎಲ್ಲೆಲ್ಲಿ ಮಳೆ ಬಂದು ಸೋರ್ತಿದೆ, ಗೂಡು ಕಟ್ಟಿದ್ದ ಪಾರಿವಾಳ ಎಲ್ಲೆಲ್ಲಿ ಹೇಸಿಗೆ ಮಾಡಿದೆ ಅಂತಷ್ಟೇ ನೋಡುತ್ತಿದ್ದೆ. ಹಾಗೆನಾದರೂ ಸೋರುತ್ತಿದ್ದರೆ ಹೀಗಿಗಾಗಿದೆ ಅಂತ ಪರಿಚಯದ ಮೇಷ್ಟ್ರಿಗೆ ಹೇಳಿ ಕಾಳಜಿ ಮೆರೆಯುವುದು ನನಗೆ ಹೆಮ್ಮೆಯ ವಿಷಯವಾಗಿತ್ತು. ಇದೊಂತರ ನಾನೇನೋ ಸಮಸ್ಯೆ ಕಂಡು ಹಿಡಿದೆ ಸಾಮಾಜಿಕ ಪ್ರಜ್ಞೆ ಮೆರೆದೆ ಎನ್ನುವ ಭಾವ ನನ್ನ ತಲೇಲಿ ಬಂದಂತಾಗುತ್ತಿತ್ತು. 

ಅದೊಂದು ದಿನ ಮಾರನೇ ದಿನ ಪರೀಕ್ಷೆ ಇದ್ದಿದ್ದರೂ ಗ್ರೌಂಡ್ ಗೆ ಬಂದಿದ್ದೆ. ಆ ದಿನ ಬೇರೆ ಶಾರ್ಜಾದಲ್ಲಿ ಇಂಡಿಯಾ, ಜಿಂಬಾಬ್ವೆ ಲೈವ್ ಮ್ಯಾಚ್ ಇತ್ತು. ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡುತ್ತಿದ್ದರಿಂದ ಭಾರತ ಇನ್ನಿಂಗ್ಸ್ ನೋಡಿದರಾಯಿತು ಎಂಬುದು ನನ್ನ ಯೋಚನೆ. ಕಾರಣ, ಮಾರನೇ ದಿನ ಪರೀಕ್ಷೆ ಇದ್ದಿದ್ದರಿಂದ ಇಡೀ ಮ್ಯಾಚ್ ನೋಡಬಾರದು ಅಂತ ಒಂದು ನಿಬಂಧನೆ! ಆದರೆ ಮನಸೆಲ್ಲಿ ಕೇಳಬೇಕು..? ಮ್ಯಾಚ್ ನೋಡಬಾರದು ಅಂತಷ್ಟೇ ಅಲ್ವಾ ನಿಬಂಧನೆ! ಆಡಬಾರದಂತೇನು ಇಲ್ಲವಲ್ಲ? ಹಾಗಂತ ಒಂದು ರೌಂಡ್ ಗ್ರೌಂಡ್ ಗೆ ಹೋಗಿ ಬರೋಣ ಅಂದುಕೊಂಡು ಗ್ರೌಂಡ್ ಗೆ ಬಂದುಬಿಟ್ಟೆ. ಹರಿ ಹರಿ ಅಂತ ಅದೇ ಸಮಯಕ್ಕೆ ವಿವೇಕ್ ಸರ್ ನೋಡಬೇಕಾ..? ‘ಏನೋ ನಾಳೆಯ ಪರೀಕ್ಷೆ ಓದೋದ್ ಬಿಟ್ಟು ಆಡೋಕೆ ಬಂದಿದ್ದೀಯಲ್ಲೊ’ ಅಂತ ಕಣ್ಣು ಬಿಟ್ಟು ಅಂದರು.

ನನಗಷ್ಟೇ ಸಾಕಾಯಿತು. ಅಲ್ಲಿಂದ ನಿಧಾನವಾಗಿ ಕಳಚಿಕೊಂಡೆ. ಯಾಕೋ ಮನೆಗೆ ಹೋಗಿ ಓದೋದು ಅಷ್ಟರೊಳಗೆ ಇದ್ದಿದ್ದರಿಂದ ಹೊಟೆಲ್ ಗೆ ಹೋಗೋಣ ಅಂತ ನಮ್ಮ ಹೊಟೆಲ್ ಕಡೆಗೆ ಹೋದೆ. ಸ್ವಲ್ಪ ಹೊತ್ತಿಗೆ ವಿವೇಕ್ ಸರ್ ಅಲ್ಲಿಗೂ ಬಂದುಬಿಟ್ಟರು. ‘ಈಗ ಅಷ್ಟೇ ಗ್ರೌಂಡ್ ನಲ್ಲಿ ಇದ್ದಿಯಲ್ಲೊ ಅಷ್ಟು ಬೇಗ ಆಟ ಮುಗಿಸಿಬಿಟ್ಟು ಬಂದಿಯೆನೋ’ ಅಂತ ಮತ್ತೆ ಕಾಲೆಳೆದರು. ಯಾಕೋ ಕೆಲಸ ಕೆಟ್ಟೊಯಿತು ಅಂತೆನಿಸಿ ಮತ್ತೆ ಮುಜುಗರವಾಗಿ ಅಲ್ಲಿಂದಲೂ ಕಾಲ್ಕಿತ್ತೆ. ಹೇಳಿ ಕೇಳಿ ವಿವೇಕ್ ಸರ್ ಸಮಾಜ ವಿಜ್ಞಾನದ ಟೀಚರ್ ಆಗಿದ್ದರು. ಸಮಾಜದಲ್ಲಿ ನಾನೇನು ವೀಕ್ ಅಲ್ಲದಿದ್ದರೂ ಈ ಬಾರಿ ಕಡಿಮೆ ಮಾರ್ಕ್ಸ್ ತಗೊಂಡ್ರೆ ಕ್ಲಾಸ್ ನೀಡುವುದು ಗ್ಯಾರಂಟಿ ಅಂತ ಖಾತ್ರಿ ಆಯಿತು. ಮೇಸ್ಟ್ರಿಂದ ಅನಿಸಿಕೊಳ್ಳೊದು ದೊಡ್ಡ ವಿಷಯ ಅಲ್ಲದಿದ್ದರೂ ತೀರಾ ಒಬ್ಬೊಬ್ನೆ ಅನ್ನಿಸ್ಕೊಬೇಕಾ ಅಂತ ಮನಸಲ್ಲಿ. ಏನೇ ಮೇಸ್ಟ್ರ ಕೈಲಿ ಸಿಕ್ಕಿ ಬಿದ್ದರೂ, ಬೈಸಿಕೊಂಡರೂ, ಒಬ್ಬೊಬ್ಬರೇ ಸಿಕ್ಕಾಕೋಬಾರದು ಅಂತಷ್ಟೇ ನಮ್ಮ ಅಜೆಂಡಾ. ಆದರೆ ಕ್ರಿಕೆಟ್ ಹುಚ್ಚು ಬಿಡಬೇಕಲ್ಲ.

ಇಂಡಿಯಾದ ಇನ್ನಿಂಗ್ಸ್ ಶುರುವಾಗಿ ಹೆನ್ರಿ ಓಲಾಂಗಾಗೆ ನಮ್ಮ ತೆಂಡೂಲ್ಕರ್ ಸಕತ್ ಆಗಿ ಕ್ಲಾಸ್ ತಗೋತಾ ಇದ್ದಾನೆ ಅಂತ ಗೊತ್ತಾಗಿದ್ದೆ ತಡ, ಕಾಮೆಂಟ್ರಿ ಕೇಳೋದು ಬಿಟ್ಟು ಮ್ಯಾಚ್ ನೋಡೋಕೆ ಓಡ್ಬಿಟ್ಟೆ. ಅದೇ ಸಮಯಕ್ಕೆ ಕರೆಂಟ್ ಹೋಗಿದ್ದರೂ ಸಚಿನ್ ಆಟ ತುಂಬಾ ಕ್ಯೂರಿಯಾಸಿಟಿ ಹುಟ್ಟಿಸಿದ್ದರಿಂದ ಮ್ಯಾಚ್ ನೋಡದೆ ಸುಮ್ಮನೆ ಕೂರುವಂತಿರಲಿಲ್ಲ. ಕಡೆ ಪಕ್ಷ ಜನರೇಟರ್ ಇರುವ ಮನೆಯನ್ನಾದರೂ ಹುಡುಕಿಕೊಳ್ಳಬೇಕಿತ್ತು. ಒಟ್ಟಿನಲ್ಲಿ ಮ್ಯಾಚ್ ನೋಡಬೇಕು ಅಷ್ಟೆ. ಕೊನೆಗೂ ಅಡ್ಡಾಡಿ ಅಡ್ಡಾಡಿ ಜನರೇಟರ್ ವ್ಯವಸ್ಥೆ ಇರುವ ಮಂಜು ಶೇಟ್ ಅವರ ಮನೆಗೆ ಹೋಗಿದ್ದು ಆಯಿತು. ಕರೆಂಟ್ ಹೋಗಿದ್ದರಿಂದ ಮ್ಯಾಚ್ ನೋಡೋಕೆ ಅವರ ಮನೆಯಲ್ಲಿ ಸಿಕ್ಕಾಪಟ್ಟೆ ಜನ. ಅದರಲ್ಲೂ ವಿವೇಕ್ ಸರ್ ಕೂಡಾ ಅಲ್ಲೆ ಮ್ಯಾಚ್ ನೋಡುತ್ತಿದ್ದರು ಅಂತ ನನಗೆಲ್ಲಿ ಗೊತ್ತಾಗಬೇಕು..? ಮ್ಯಾಚ್ ನೋಡೋ ಆತುರಕ್ಕೆ ನನಗದು ಗೊತ್ತಾಗದೆ ಸೀದಾ ಅವರ ಪಕ್ಕದಲ್ಲೆನೆ ಹೋಗಿ ನಿಂತುಬಿಟ್ಟೆ. ‘ನೋಡ್ರೊ ತೆಂಡೂಲ್ಕರ್ ಹ್ಯಾಗೆ ಓಲಾಂಗಾಗೆ ಬೆಂಡ್ ಎತ್ತಾ ಇದಾನೆ ನೋಡ್ರೊ’ ಅಂತ ವಿವೇಕ್ ಸರ್ ನಮ್ಮನ್ನು ನೋಡಿ ಅಂತಿರಬೇಕಾದ್ರೆ ನನ್ನೆದೆ ಒಂದು ಕ್ಷಣ ಧಸಕ್ ಅಂದಾಗಾಯಾತು.

ಆ ಕ್ಷಣಕ್ಕೆ ಏನ್ ಮಾಡ್ಬೇಕು ತಿಳಿದೆ ಕಂಗಾಲಾದೆ. ಸರ್ ಏನ್ ಮ್ಯಾಚ್ ನೋಡಿ ಎಂಜಾಯ್ ಮಾಡ್ತಾ ಇದಾರಾ, ಅಥವಾ ನಮ್ಮನ್ನ ನೋಡಿ ಬೆಂಡೆತ್ತೊದಕ್ಕೆ ಮೂಹೂರ್ತ ಇಡ್ತಾ ಇದ್ದಾರಾ ಅಂತ ಗೊತ್ತಾಗದೆ ಕಸಿವಿಸಿಗೊಂಡು ನಿಧಾನಕ್ಕೆ ಅವರ ಕಣ್ತಪ್ಪಿಸಿ ಹಿಂದೆ ಸರಿದುಬಿಟ್ಟೆ. ನಿಂತ ಉಸಿರು ವಾಪಾಸು ಬಂದಂತಾಯಿತು. ಇವತ್ತ್ಯಾಕೊ ಎದ್ದ ಗಳಿಗೆನೇ ಚೆನ್ನಾಗಿಲ್ವಲ್ಲಪ್ಪ ಅಂತ ಆ ಕ್ಷಣಕ್ಕೆ ಅನ್ನಿಸಿದರೂ ವಾಪಾಸು ಮನೆಗೆ ಹೋಗೋಕೆ ಮನಸ್ಸಾಗದೆ ಅಲ್ಲೆ ಕಲ್ಲಿನ ಹಾಗೆ ನಿಂತುಬಿಟ್ಟೆ. ನಮ್ಮದೇ ಹರೆಯದ ಕೆಲ ಸೀನಿಯರ್ ಸ್ಕೂಲ್ ಮೇಟ್ ಗಳು ಅಲ್ಲಿ ಇದ್ದಿದ್ರಿಂದ ಒಂಥರಾ ಸಮಾಧಾನವಾದಂತಾಯಿತು. ಆದರೂ ಸರ್ ಒಳ್ಳೆ ಮೂಡ್ ನಲ್ಲಿದಾರೆ ಗೊತ್ತಾಗಿ ಯಾವುದಕ್ಕೂ ಸೆಪ್ಟಿಗೆ ಅವರಿಗೆ ಮತ್ತೆ ಮುಖ ತೋರಿಸೋದು ಬ್ಯಾಡ ಅಂತಂದುಕೊಂಡು ಕಮಕ್ ಕಿಮಕ್ ಅನ್ನದೆ ಮ್ಯಾಚ್ ನೋಡ್ದೆ.

ಫಸ್ಟ್ ಟೈಮ್ ನಾನು ಸೈಲೆಂಟಾಗಿ ಮ್ಯಾಚ್ ನೋಡಿದ್ದು.!! ಎಲ್ಲರೂ ಮ್ಯಾಚ್ ನೋಡಿ ಎಂಜಾಯ್ ಮಾಡ್ತಾ ಇರಬೇಕಾದ್ರೆ, ನಾನು ಮಾತ್ರ ಟಿವಿನೊಮ್ಮೆ, ಸರ್ ಮುಖವನ್ನೊಮ್ಮೆ ಒಳ್ಳೆ ಫೆಕ್ರು ತರಹ ನೋಡುತ್ತಿದ್ದೆ. ಒಂದು ಕಡೆ ತೆಂಡೂಲ್ಕರ್ ಜಿಂಬಾಬ್ವೆ ಬೌಲರ್ ಗಳ ಮೇಲೆ ರೀವೆಂಜ್ ತೋಗೋತಾ ಇದ್ರೆ, ನನ್ನ ತಲೇಲಿ ಸರ್ ಹತ್ರ ನಾಳೆ ಇನ್ನೇನ್ ಗ್ರಹಚಾರ ಕಾದಿದೆಯೋ ಅಂತಲೇ ಓಡುತ್ತಿತ್ತು. ಸರ್ ಮ್ಯಾಚ್ ನೋಡ್ತಾ ನೋಡ್ತಾ ಎಲ್ಲರೊಡನೆ ಎಂಜಾಯ್ ಮಾಡುತ್ತಲೇ ಇದ್ದರು. ಇದನ್ನು ನೋಡಿ ಸರ್ ನನ್ನನ್ನು ಗಮನಿಸಿದಂತೆ ಇಲ್ಲ ಎಂದೆನಿಸಿ ರಿಲೀಫ್ ಆಗಿ ಖುಷಿಯಿಂದಲೇ ಮ್ಯಾಚ್ ನೋಡಿದೆ. ಆದರೆ ಮ್ಯಾಚ್ ಮುಗಿಯುವ ವೇಳೆಗೆ ಸರ್ ಎಂಜಾಯ್ ಮಾಡುತ್ತಿದ್ದ ಪರಿ ನೋಡಿ ನನಗಿದ್ದ ಅನುಮಾನಗಳೆಲ್ಲ ದೂರ ಆದವು.

ಆಡುವ ಟೈಮಲ್ಲಿ ಆಡಬೇಕು. ಓದುವ ಟೈಮಲ್ಲಿ ಓದಬೇಕು. ಎಂಜಾಯ್ ಮಾಡೋ ಎಂಜಾಯ್ ಮಾಡಬೇಕು ಅನ್ನೋದು ವಿವೇಕ್ ಸರ್ ಥೀಯರಿ ಆಗಿತ್ತು. ಏನೇ ಮಾಡಿದರೂ ಸ್ಟಡೀಸ್ ಮೇಲೆ ಬೇರಾವ ಚಟುವಟಿಕೆಗಳು ಪರಿಣಾಮ ಬೀರಬಾರದು ಅನ್ನೋದು ಅವರ ನಿಲುವಾಗಿತ್ತು. ಆದರೆ ಇದೆಲ್ಲ ಆಗ ನಮಗೆಲ್ಲಿ ತಿಳಿಯಬೇಕು..? ಆ ಕ್ಷಣಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ವಿ ಅನ್ನೋದಷ್ಟೇ ತಲೇಲಿತ್ತು. ಆದರೆ ವಿವೇಕ್ ಸರ್ ಅದೆಲ್ಲವನ್ನೂ ಆ ಕ್ಷಣಕ್ಕೆನೆ ಮರೆತು ಬಿಟ್ಟಿದ್ದರು ಅನ್ನೋದು ಆಮೇಲೆ ತಿಳಿಯಿತು. ಯಾವುದೇ ಮುಚ್ಚುಮರೆ ಇಲ್ಲದೆ ಕಂಡದ್ದನ್ನು ಕಂಡ ಹಾಗೆ ಹೇಳುವ ಅವರ ಗುಣ, ಮಕ್ಕಳೊಡನೆ ಸದಾ ಸ್ನೇಹಪರವಾಗಿ ವರ್ತಿಸುವ ಅವರ ಮನಸು ಅಂದು ಮ್ಯಾಚ್ ನೋಡಿ ಇಂಡಿಯಾ ಗೆದ್ದ ಖುಷಿಯ ನೆನಪಷ್ಟೇ ಸುಮಧುರ ಎಂಬುದಂತೂ ಸುಳ್ಳಲ್ಲ.

| ಇನ್ನು ನಾಳೆಗೆ ।

‍ಲೇಖಕರು Admin

August 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: