ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೧೫
ಬೆಳಗಿನ ಬೆಳಕು ಕಿಟಕಿಯ ಪರದೆಯ ಅಂಚಿನಿ೦ದ ಕೋಣೆಯೊಳಗೆ ಹರಿಯುತ್ತಿದ್ದರೂ ಈಶಾನ್ನ ಮನಸ್ಸಿನ ಕತ್ತಲೆ ಕಡಿಮೆಯಾಗಿರಲಿಲ್ಲ. ಹಿಂದಿನ ರಾತ್ರಿ ಅವನು ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಮೇಜಿನ ಮೇಲಿದ್ದ ಹಳೆಯ ನೋಟ್ಬುಕ್ ಅವನನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತಿತ್ತು. ಅದರಲ್ಲಿದ್ದ ಅನಿರುದ್ಧನ ಕೈಬರಹ, ಅಳಿಸಿಹಾಕಿದ ಮೂರನೆಯ ಹೆಸರು ಮತ್ತು ಕೊನೆಯ ಪುಟದಲ್ಲಿದ್ದ ಎಚ್ಚರಿಕೆ ಇವೆಲ್ಲವೂ ಅವನೊಳಗೆ ಹೊಸ ಪ್ರಶ್ನೆಗಳನ್ನು ಹುಟ್ಟಿಸಿದ್ದವು. ಅವನು ಮರೆತಿರುವುದೇ ಅವನನ್ನು ಬದುಕಿಸಿತು. ಅನಿರುದ್ಧ ಈ ಮಾತನ್ನು ಏಕೆ ಬರೆದಿದ್ದ? ಈಶಾನ್ ಏನನ್ನು ಮರೆತಿದ್ದ? ಆ ಘಟನೆಗೆ ತನ್ನ ಸಂಬ೦ಧವೇನು?
ಬೆಳಿಗ್ಗೆ ಸಾರಾ ಎದ್ದು ಬಂದಾಗ ಈಶಾನ್ ಇನ್ನೂ ಮೇಜಿನ ಎದುರು ಕುಳಿತಿದ್ದ. ಅವನ ಮುಂದೆ ನೋಟ್ಬುಕ್ ತೆರೆದಿತ್ತು. ಅವಳು ಅವನಿಗೆ ಕಾಫಿ ತಂದುಕೊಟ್ಟು, ಸ್ವಲ್ಪ ಹೊತ್ತು ಏನೂ ಮಾತನಾಡದೆ ಪಕ್ಕದಲ್ಲಿ ಕುಳಿತಳು.
“ಇಡೀ ರಾತ್ರಿ ಇದನ್ನೇ ಓದುತ್ತಿದ್ದೆಯಾ?” ಎಂದು ಕೇಳಿದಳು.
“ಪ್ರತಿಯೊಂದು ಪುಟದಲ್ಲೂ ಏನೋ ಇದೆ. ಆದರೆ ಅದು ಏನು ಎಂದು ಅರ್ಥವಾಗುತ್ತಿಲ್ಲ.” ಗೊಂದಲದಲ್ಲೇ ಹೇಳಿದ.
“ಅರ್ಥವಾಗದ ಪ್ರತಿಯೊಂದು ಸಾಲಿಗೂ ಈಗಲೇ ಉತ್ತರ ಹುಡುಕಬೇಕಿಲ್ಲ. ಮೊದಲು ನಮ್ಮ ಬಳಿ ಇರುವ ಮಾಹಿತಿಯನ್ನು ಕ್ರಮಬದ್ಧವಾಗಿ ಜೋಡಿಸೋಣ.” ಸಲಹೆ ನೀಡಿದಳು.
ಈಶಾನ್ ಅವಳ ಮಾತಿಗೆ ಒಪ್ಪಿಕೊಂಡ. ಅವನು ಒಂದು ಹೊಸ ನೋಟ್ಬುಕ್ ತೆಗೆದುಕೊಂಡು ಮೂರು ವಿಭಾಗಗಳನ್ನು ಮಾಡಿದ.ದೃಢಪಟ್ಟ ಸಂಗತಿಗಳು.ಪರಿಶೀಲಿಸಬೇಕಾದ ಅನುಮಾನಗಳು.ನೆನಪಿನ ತುಣುಕುಗಳು.ಇದು ಅವನಿಗೆ ಬರವಣಿಗೆಯ ಅಭ್ಯಾಸದಂತೆ ಕಂಡರೂ, ಈಗ ಅದಕ್ಕೆ ಬೇರೆ ಅರ್ಥವಿತ್ತು. ತನ್ನ ಕಲ್ಪನೆ ಮತ್ತು ವಾಸ್ತವದ ನಡುವಿನ ಗಡಿಯನ್ನು ಗುರುತಿಸಿಕೊಳ್ಳುವುದು ಅವನಿಗೆ ಅಗತ್ಯವಾಗಿತ್ತು.
ದೃಢಪಟ್ಟ ಸಂಗತಿಗಳ ಪಟ್ಟಿಯಲ್ಲಿ ಅವನು ಮ್ಯೂಸ್ನ ಕಡತಗಳು, ರಾಘವೇಂದ್ರನ ಸಾವು, ಹಳೆಯ ಸಂಶೋಧನಾ ಯೋಜನೆಗೆ ಸಂಬAಧಿಸಿದ ಛಾಯಾಚಿತ್ರ ಮತ್ತು ತನ್ನ ಬಾಲ್ಯದ ನೋಟ್ಬುಕ್ನ ವಿವರಗಳನ್ನು ಬರೆದ. ಅನುಮಾನಗಳ ವಿಭಾಗದಲ್ಲಿ ತನ್ನನ್ನು ಯಾರೋ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬ ಸಾಧ್ಯತೆಯನ್ನು ದಾಖಲಿಸಿದ. ಕೊನೆಯ ವಿಭಾಗದಲ್ಲಿ ಅವನಿಗೆ ನೆನಪಾದ ತುಣುಕುಗಳನ್ನು ಮಾತ್ರ ಬರೆದ.ಆದರೆ ಆ ಪುಟದ ಮಧ್ಯದಲ್ಲಿ ಒಂದು ಖಾಲಿ ಜಾಗ ಉಳಿಯಿತು.ಅದು ಅನಿರುದ್ಧನ ಹೆಸರಿನ ಪಕ್ಕದಲ್ಲಿತ್ತು.
ಮಧ್ಯಾಹ್ನದ ಹೊತ್ತಿಗೆ ವಿನಯ್ ಮತ್ತೆ ಬಂದ. ಹಿಂದಿನ ದಿನ ಪರಿಶೀಲಿಸಿದ್ದ ಕಡತಗಳ ಕುರಿತು ಅವನಿಗೆ ಹೊಸ ಮಾಹಿತಿ ಸಿಕ್ಕಿತ್ತು. ಈ ಬಾರಿ ಅವನು ತನ್ನ ಲ್ಯಾಪ್ಟಾಪ್ ಜೊತೆಗೆ ಕೆಲವು ಮುದ್ರಿತ ಪುಟಗಳನ್ನೂ ತಂದಿದ್ದ.
“ನಾನು ಹೇಳಿದಂತೆ, ಕಡತಗಳ ದಿನಾಂಕಗಳನ್ನು ಮಾತ್ರ ನಂಬಲು ಸಾಧ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಮೂಲ ಸಾಧನ ಅಥವಾ ಹಳೆಯ ಸರ್ವರ್ನ ಪ್ರತಿಯ ಅಗತ್ಯವಿದೆ. ಆದರೂ ಕೆಲವು ಕಡತಗಳ ರಚನೆಯಲ್ಲಿರುವ ಹಳೆಯ ಗುರುತುಗಳಿಂದ ಒಂದು ವಿಷಯ ಗೊತ್ತಾಗಿದೆ,” ಎಂದು ವಿನಯ್ ಆರಂಭಿಸಿದ.
“ಏನು?” ಈಶಾನ್ ಕೇಳಿದ.
“ಮ್ಯೂಸ್ನ ಈಗಿನ ತಂತ್ರಾ೦ಶವು ಹಿಂದೆ ಇದ್ದ ಮತ್ತೊಂದು ವ್ಯವಸ್ಥೆಯ ಕೆಲವು ಭಾಗಗಳನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ. ಅದರೊಳಗೆ ಹಳೆಯ ಬಳಕೆದಾರರ ದಾಖಲೆಗಳಿವೆ. ಅವುಗಳಲ್ಲಿ ಮೂರು ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತವೆ.” ಎಂದ ವಿನಯ್.
ವಿನಯ್ ಪರದೆಯನ್ನು ತಿರುಗಿಸಿ ಈಶಾನ್ಗೆ ತೋರಿಸಿದ.
USER 01 — A.N.
USER 02 — E.B.
USER 03 — R.B.
ಆ ಅಕ್ಷರಗಳು ಈಶಾನ್ಗೆಈಗಾಗಲೇ ಪರಿಚಿತವಾಗಿದ್ದವು. ಆದರೂ ಅವುಗಳನ್ನು ಒಂದೇ ಪಟ್ಟಿಯಲ್ಲಿ ನೋಡಿದಾಗ ಅವನ ಎದೆಯೊಳಗೆ ಏನೋ ಬಿಗಿಯಾದಂತೆ ಅನಿಸಿತು.“A.N. ಅನಿರುದ್ಧ ನಾಗರಾಜ್ ಆಗಿರಬಹುದು,” ಎಂದನು. “E.B. £Á£ÀÄ. R.B. ರಾಘವೇಂದ್ರ ಭಟ್.” ಎಂದನು ಈಶಾನ್,
“ಸಾಧ್ಯತೆ ಇದೆ. ಆದರೆ ಇವು ಕೇವಲ ಗುರುತುಗಳು. ಪೂರ್ಣ ಹೆಸರುಗಳನ್ನು ದೃಢಪಡಿಸಲು ಹೆಚ್ಚುವರಿ ದಾಖಲೆಗಳು ಬೇಕು.” ಎಂದ ವಿನಯ್.
“ಹಾಗಾದರೆ ನಾಲ್ಕನೇ ವ್ಯಕ್ತಿ ಯಾರು?” ಈಶಾನ್ ಗೊಂದಲದಲ್ಲಿದ್ದ.
ವಿನಯ್ ಕೆಲವು ಕ್ಷಣ ಮೌನವಾಗಿದ್ದ.“ಅಲ್ಲಿಯೇ ಸಮಸ್ಯೆ ಇದೆ. ಮೂಲ ದಾಖಲೆಯಲ್ಲಿ ನಾಲ್ಕನೇ ಬಳಕೆದಾರನ ಗುರುತು ಇದ್ದಂತೆ ಕಾಣುತ್ತದೆ. ಆದರೆ ಅದರ ಹೆಸರು, ಗುರುತು ಸಂಖ್ಯೆ ಮತ್ತು ಸಂಪರ್ಕ ಮಾಹಿತಿಮೂರನ್ನೂ ಅಳಿಸಲಾಗಿದೆ. ಇದುಸಾಮಾನ್ಯವಾಗಿ ಸಂಭವಿಸುವ ತಾಂತ್ರಿಕ ದೋಷದಂತೆ ಕಾಣುವುದಿಲ್ಲ. ಯಾರೋ ಉದ್ದೇಶಪೂರ್ವಕವಾಗಿ ಅಳಿಸಿರಬಹುದು. ಆದರೆ ಅದನ್ನು ಮಾಡಿದವರು ಯಾರು ಎಂಬುದು ಇನ್ನೂ ಗೊತ್ತಿಲ್ಲ.” ಎಂದ ವಿನಯ್.
ಸಾರಾ ಮೇಜಿನ ಎದುರು ಕುಳಿತಳು.“ಮ್ಯೂಸ್ ಈಗಿನ ವ್ಯವಸ್ಥೆಯಾಗಿದ್ದರೆ, ಈ ಹಳೆಯ ಬಳಕೆದಾರರ ಮಾಹಿತಿ ಅದರಲ್ಲಿ ಹೇಗೆ ಉಳಿದಿದೆ?” ಎಂದಳು.
“ಹಳೆಯ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ಮಾಹಿತಿ ವರ್ಗಾಯಿಸಿದ್ದರೆ ಅದು ಸಾಧ್ಯ. ಆದರೆ ಈ ಮಾಹಿತಿ ಏಕೆ ವರ್ಗಾಯಿಸಲಾಯಿತು ಎಂಬುದೇ ಮುಖ್ಯ ಪ್ರಶ್ನೆ. ಹಳೆಯ ಯೋಜನೆಯ ದಾಖಲೆಗಳನ್ನು ಸಂಶೋಧನೆಗಾಗಿ ಉಳಿಸಿರಬಹುದು. ಇಲ್ಲವೇ ಅವುಗಳನ್ನು ಹೊಸ ಉದ್ದೇಶಕ್ಕೆ ಬಳಸಿರಬಹುದು.” ಎಂದ ವಿನಯ್.
ಈಶಾನ್ನ ಮನಸ್ಸಿನಲ್ಲಿ ಒಂದು ಅನುಮಾನ ಮೂಡಿತು.“ಈ ಬಳಕೆದಾರರು ಕೇವಲ ತಂತ್ರಾ೦ಶ ಬಳಸಿದವರೇ? ಅಥವಾ ಪ್ರಯೋಗದಲ್ಲಿ ಭಾಗವಹಿಸಿದವರೇ?” ಅನುಮಾನ ವ್ಯಕ್ತಪಡಿಸಿದ ಈಶಾನ್.
“ಕಡತಗಳಲ್ಲಿರುವ ‘TRIAL’ ಎಂಬ ಪದವನ್ನು ನೋಡಿದರೆ ಎರಡನೆಯ ಸಾಧ್ಯತೆಯೂ ಇದೆ. ಆದರೆ ಅದೊಂದರಿ೦ದ ಖಚಿತಪಡಿಸಲು ಸಾಧ್ಯವಿಲ್ಲ.” ಎಂದ ವಿನಯ್.
ವಿನಯ್ ಪಟ್ಟಿಯ ಕೆಳಭಾಗದಲ್ಲಿದ್ದ ಮತ್ತೊಂದು ಸಾಲನ್ನು ತೆರೆದ.USER STATUS: ARCHIVED. ಅದರ ಪಕ್ಕದಲ್ಲಿ ಮೂವರಿಗೂ ಬೇರೆ ಬೇರೆ ದಿನಾಂಕಗಳಿದ್ದವು. ಅನಿರುದ್ಧನ ದಾಖಲೆಯ ದಿನಾಂಕ ಅವನು ಕಾಣೆಯಾಗಿದ್ದ ಅವಧಿಗೆ ಹತ್ತಿರವಾಗಿತ್ತು. ರಾಘವೇಂದ್ರನ ದಾಖಲೆಯಲ್ಲಿ ಇತ್ತೀಚಿನ ಬದಲಾವಣೆಯ ಗುರುತು ಕಾಣಿಸಿತು. ಈಶಾನ್ನ ದಾಖಲೆಯಲ್ಲಿ ಮಾತ್ರ ಒಂದು ವಿಚಿತ್ರ ಟಿಪ್ಪಣಿ ಇತ್ತು.STATUS: ACTIVE-RESPONSE PENDING.
“ಇದರ ಅರ್ಥವೇನು?” ಈಶಾನ್ ಕೇಳಿದ.
“ಇದು ವ್ಯವಸ್ಥೆಯ ಒಳಗಿನ ಸ್ಥಿತಿ ಸೂಚಕವಾಗಿರಬಹುದು. ಆದರೆ ‘ಸಕ್ರಿಯ’ ಎಂದರೆ ಯಾರೋ ನಿನ್ನ ಕಂಪ್ಯೂಟರ್ಗೆ ಈಗಲೂ ಸಂಪರ್ಕ ಹೊಂದಿದ್ದಾರೆ ಎಂಬುದೇ ಅರ್ಥವಲ್ಲ. ನಿನ್ನ ಹೆಸರಿನೊಂದಿಗೆ ಸಂಬ೦ಧಿಸಿದ ದಾಖಲೆ ಇನ್ನೂ ಪ್ರಕ್ರಿಯೆಯಲ್ಲಿದೆ ಎಂಬ ಅರ್ಥವೂ ಇರಬಹುದು.” ಎಂದು ತಿಳಿಸಿದ ವಿನಯ್.
“ಆದರೆ ನನ್ನ ದಾಖಲೆಯನ್ನು ಇತ್ತೀಚೆಗೆ ಯಾರೋ ಬದಲಾಯಿಸಿದ್ದರೆ?” ಅನುಮಾನದಿಂದ ಕೇಳಿದ ಈಶಾನ್.
“ಅದು ಸಾಧ್ಯ. ಅದರ ಬಗ್ಗೆ ಇನ್ನಷ್ಟು ಪರಿಶೀಲನೆ ಮಾಡಬೇಕು.” ಎಂದ ವಿನಯ್.
ಈಶಾನ್ ಆ ಸಾಲನ್ನು ತನ್ನ ಟಿಪ್ಪಣಿಯಲ್ಲಿ ಬರೆದ. ನಂತರ ಅದರ ಕೆಳಗೆ ಒಂದು ಪ್ರಶ್ನೆ ಸೇರಿಸಿದ.ನನ್ನನ್ನು ಯಾರು ಇನ್ನೂ ಸಕ್ರಿಯ ವಿಷಯವಾಗಿ ಪರಿಗಣಿಸುತ್ತಿದ್ದಾರೆ?ವಿನಯ್ ತನ್ನ ಪರಿಶೀಲನೆಯನ್ನು ಮುಂದುವರಿಸಿದಾಗ ಹಳೆಯ ದಾಖಲೆಗಳೊಳಗೆ ಒಂದು ಚಿಕ್ಕ ಪಠ್ಯ ಕಡತ ಸಿಕ್ಕಿತು. ಅದರ ಹೆಸರು MUSE_USERS_README ಎಂದಿತ್ತು. ಕಡತದಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ ಕೊನೆಯ ಭಾಗದಲ್ಲಿ ಮೂರು ಬಳಕೆದಾರರ ಪಾತ್ರಗಳನ್ನು ವಿವರಿಸುವ ಕೆಲವು ಸಾಲುಗಳಿದ್ದವು.
A.N. — Narrative Origin
E.B. — Memory Subject
R.B. — Research Supervisor
ಈಶಾನ್ ಮೊದಲ ಸಾಲನ್ನು ಓದಿ ನಿಂತ.“ನಾರೇಟಿವ್ ಒರಿಜಿನ್ ಅಂದರೆ ಕಥೆಯ ಆರಂಭವೇ?” ಕೇಳಿದ ಈಶಾನ್.
“ಅಥವಾ ಕಥೆಯ ಮೂಲ ವಸ್ತು. ಇದು ಸಂಶೋಧನಾ ಯೋಜನೆಯಲ್ಲಿ ಬಳಸಿದ ಪದವಾಗಿರಬಹುದು. ಅದರ ನಿಖರ ಅರ್ಥವನ್ನು ತಿಳಿಯಲು ಪೂರ್ಣ ದಾಖಲೆ ಬೇಕು,” ಎಂದ ವಿನಯ್.
“ಹಾಗಾದರೆ ನಾನು ‘Memory Subject’ ಆಗಿದ್ದೆನೇ?” ಈಶಾನ್ ಕೇಳಿದ.
“ಹಾಗೆ ಕಾಣುತ್ತದೆ. ಆದರೆ ಈ ದಾಖಲೆಯ ಮೂಲವನ್ನು ದೃಢಪಡಿಸಬೇಕು.” ವಿನಯ್ ಹೇಳಿದ.
ಈಶಾನ್ಗೆ ತನ್ನ ಬಾಲ್ಯದ ನೋಟ್ಬುಕ್ ನೆನಪಾಯಿತು. ನಮ್ಮ ಕಥೆ-ಭಾಗ ೩. ಅದರಲ್ಲಿದ್ದಸಾಲುಗಳು, ಮೂರನೆಯವನ ಬಗ್ಗೆ ಬರೆದಿದ್ದ ಎಚ್ಚರಿಕೆ ಎಲ್ಲವೂ ಈಗ ಈ ದಾಖಲೆಗಳೊಂದಿಗೆ ಸ೦ಬ೦ಧ ಹೊ೦ದಿರುವ೦ತೆ ಕಾಣುತ್ತಿದ್ದವು.ಅನಿರುದ್ಧ ಕಥೆಯ ಮೂಲವಾಗಿದ್ದರೆ, ಈಶಾನ್ ಅದರ ನೆನಪಿನ ವಿಷಯವಾಗಿದ್ದ. ಹಾಗಾದರೆ ಅವರು ಬಾಲ್ಯದಲ್ಲಿ ಬರೆದ ಕಥೆ ಕೇವಲ ಮಕ್ಕಳ ಆಟವಾಗಿರಲಿಲ್ಲವೇ? ಅಥವಾ ಯಾರೋ ನಂತರದ ಕಾಲದಲ್ಲಿ ಆ ಕಥೆಯನ್ನು ಸಂಶೋಧನಾ ಯೋಜನೆಯ ವಿವರಣೆಗೆ ಹೊಂದುವ೦ತೆ ಮರುವ್ಯಾಖ್ಯಾನಿಸಿದ್ದರೇ? ಈಶಾನ್ ತನ್ನದೇ ಪ್ರಶ್ನೆಗೆ ಉತ್ತರ ಕೊಡಲಾಗದೆ ಮೌನವಾಗಿದ್ದ.ಅಷ್ಟರಲ್ಲಿ ವಿನಯ್ ಮತ್ತೊಂದು ಕಡತವನ್ನು ತೆರೆದ. ಅದರಲ್ಲಿದ್ದ ಒಂದು ಸಾಲು ಉಳಿದ ದಾಖಲೆಗಳಿಗಿಂತ ಭಿನ್ನವಾಗಿತ್ತು.
A.N. — STOP REQUEST RECEIVED.
ಅದರ ಕೆಳಗೆ ದಿನಾಂಕವಿತ್ತು.ಅದೇ ಅವಧಿಯಲ್ಲಿ ಅನಿರುದ್ಧನ ಕುಟುಂಬ ಊರು ಬದಲಾಯಿಸಿತ್ತು. ಈಶಾನ್ಗೆ ತಾನು ಹಿಂದೆ ಓದಿದ್ದ ಪತ್ರ ನೆನಪಾಯಿತು. ಅನಿರುದ್ಧನ ತಾಯಿ ಬರೆದಿದ್ದ ಪತ್ರದಲ್ಲಿ ಆ ಮಕ್ಕಳ ಕಥೆಯು ನಿಜವಾದ ವ್ಯಕ್ತಿಗಳ ಹೆಸರುಗಳು ಮತ್ತು ನೆನಪುಗಳನ್ನು ಒಳಗೊಂಡ ಕಂಪ್ಯೂಟರ್ ಪ್ರಯೋಗವಾಗಿ ಬದಲಾಗಿತ್ತು ಎಂದು ಉಲ್ಲೇಖಿಸಲಾಗಿತ್ತು. ಅನಿರುದ್ಧ ಅದನ್ನು ನಿಲ್ಲಿಸಬೇಕೆಂದು ಬಯಸಿದ್ದ.
“ಅನಿರುದ್ಧ ಯೋಜನೆಯನ್ನು ನಿಲ್ಲಿಸಲು ಕೇಳಿದ್ದ,” ಎಂದ ಈಶಾನ್ ನಿಧಾನವಾಗಿ. “ಆದರೆ ನಂತರ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ.”
“ಈ ದಾಖಲೆಯ ಪ್ರಕಾರ ಅವನಿಂದ ನಿಲ್ಲಿಸುವ ಮನವಿ ಬಂದಿತ್ತು. ಅದನ್ನು ಸ್ವೀಕರಿಸಲಾಯಿತೇ, ನಿರಾಕರಿಸಲಾಯಿತೇ ಎಂಬ ಮಾಹಿತಿ ಇಲ್ಲ,” ಎಂದ ವಿನಯ್.
“ಅವನು ಏಕೆ ಹೊರಟುಹೋದ?”
ಯಾರೂ ಉತ್ತರಿಸಲಿಲ್ಲ.
ಆ ಸಂಜೆ ಈಶಾನ್ ತನ್ನ ತಾಯಿಗೆ ಕರೆ ಮಾಡಿದ. ಬಾಲ್ಯದ ಘಟನೆಗಳ ಬಗ್ಗೆ ಮತ್ತೆ ಕೇಳಬೇಕೆಂದು ಅವನು ನಿರ್ಧರಿಸಿದ್ದ. ಹಿಂದಿನ ಬಾರಿ ಮಾತನಾಡುವಾಗ ಅವಳು ಅನಿರುದ್ಧನ ಬಗ್ಗೆ ಕೆಲವು ವಿಷಯಗಳನ್ನು ನೆನಪಿಸಿಕೊಂಡಿದ್ದಳು. ಈ ಬಾರಿ ಅವನು ಹೆಚ್ಚು ನಿಖರವಾದ ಪ್ರಶ್ನೆಗಳನ್ನು ಕೇಳಲು ಬಯಸಿದ.
“ಅಮ್ಮ, ನಾನು ಮತ್ತು ಅನಿರುದ್ಧ ಒಟ್ಟಿಗೆ ಬರೆದ ಕಥೆ ನಿನಗೆ ನೆನಪಿದೆಯೇ?” ಕೇಳಿದ.
ಫೋನ್ನ ಆಚೆ ಬದಿಯಲ್ಲಿ ಸ್ವಲ್ಪ ಮೌನ. ನಂತರ “ಹೌದು. ನೀವು ಇಬ್ಬರೂ ಯಾವಾಗಲೂ ಏನಾದರೂ ಬರೆಯುತ್ತಿರುತ್ತಿದ್ದಿರಿ. ನಿನ್ನ ತಂದೆ ಅದನ್ನು ಮೊದಲಿಗೆ ಮಕ್ಕಳ ಆಟವೆಂದುಕೊ೦ಡಿದ್ದರು. ನಂತರ ಏನೋ ಬದಲಾಯಿತು.” ಎಂದಳು ತಾಯಿ.
“ಏನು ಬದಲಾಯಿತು?” ಕೇಳಿದ ಈಶಾನ್.
“ಒಂದು ದಿನ ನಿನ್ನ ತಂದೆ ತುಂಬಾ ಕೋಪಗೊಂಡಿದ್ದರು. ನೀನು ಮನೆಗೆ ಬಂದಾಗ ನಿನ್ನ ಬಟ್ಟೆ ಕೆಸರಾಗಿತ್ತು. ಕೈಗೂ ಗಾಯವಾಗಿತ್ತು. ನೀನು ಏನಾಯಿತು ಎಂದು ಹೇಳಲಿಲ್ಲ. ಅನಿರುದ್ಧನೂ ಕೆಲವು ದಿನಗಳವರೆಗೆ ನಮ್ಮ ಮನೆಗೆ ಬರಲಿಲ್ಲ. ಆಮೇಲೆ ಅವರ ಕುಟುಂಬ ಊರು ಬದಲಾಯಿಸಿತು.” ಎಂದಳು ತಾಯಿ.
“ಆ ದಿನ ನಾನು ಎಲ್ಲಿ ಹೋಗಿದ್ದೆ?” ಕೇಳಿದ.
“ನೀನು ಮತ್ತು ಅನಿರುದ್ಧ ಇಬ್ಬರೂ ಧಾರವಾಡದ ಹಳೆಯ ವಾಚನಾಲಯಕ್ಕೆ ಹೋಗಿದ್ದಿರಿ ಎಂದು ನಂತರ ತಿಳಿಯಿತು. ನಿನ್ನ ತಂದೆ ಅದನ್ನು ಕೇಳಿ ತುಂಬಾ ಕೋಪಗೊಂಡಿದ್ದರು.”
“ಅಲ್ಲಿ ಏನಾಯಿತು ಎಂದು ತಂದೆ ಹೇಳಿದ್ದರಾ?” ಕೇಳಿದ.
“ಇಲ್ಲ. ಅವರು ಆ ವಿಷಯವನ್ನು ಮತ್ತೆ ಮಾತನಾಡಲು ಇಷ್ಟಪಡಲಿಲ್ಲ. ನಾನು ಕೇಳಿದಾಗಲೆಲ್ಲ, ‘ಮಕ್ಕಳ ತಪ್ಪು ದೊಡ್ಡವರ ಕೈಗೆ ಸಿಕ್ಕಾಗ ಅಪಾಯವಾಗುತ್ತದೆ’ ಎಂದು ಹೇಳುತ್ತಿದ್ದರು.” ಎಂದಳು ತಾಯಿ.
ಈಶಾನ್ಗೆ ಆ ಮಾತುಗಳು ಒಳಗಿನಿಂದ ಏನನ್ನೋ ಎಬ್ಬಿಸಿದವು.“ಅಮ್ಮ, ಆ ದಿನ ನನ್ನ ಜೊತೆ ಬೇರೆ ಯಾರಾದರೂ ಇದ್ದರಾ? ಅನಿರುದ್ಧನ ಹೊರತಾಗಿ?” ಕೇಳಿದ.
ಅವಳು ಮತ್ತೆ ಮೌನವಾದಳು.“ನನಗೆ ಖಚಿತವಾಗಿ ನೆನಪಿಲ್ಲ. ಆದರೆ ನಿನ್ನ ತಂದೆ ಒಂದು ಬಾರಿ ಆ ಹುಡುಗನನ್ನು ಈಶಾನ್ನಿಂದ ದೂರವಿಡಬೇಕು ಎಂದು ಹೇಳಿದ್ದರು. ನಾನು ಅನಿರುದ್ಧನ ಬಗ್ಗೆ ಕೇಳಿದೆ. ಅವರು ಅನಿರುದ್ಧನ ಬಗ್ಗೆ ಹೇಳುತ್ತಿಲ್ಲ ಎಂದು ಹೇಳಿದರು.”
ಈಶಾನ್ನ ಕೈ ತಣ್ಣಗಾಯಿತು.“ಹಾಗಾದರೆ ಯಾರ ಬಗ್ಗೆ ಹೇಳುತ್ತಿದ್ದರು?”
“ಅದನ್ನು ಅವರು ನನಗೆ ಹೇಳಲಿಲ್ಲ.” ಎಂದಳು ತಾಯಿ.
“ಅಮ್ಮ, ಆ ವ್ಯಕ್ತಿಯ ಹೆಸರು ನಿನಗೆ ನೆನಪಿದೆಯೇ?” ಕೇಳಿದ.
“ಇಲ್ಲ. ಆದರೆ ಆ ದಿನಗಳ ನಂತರ ನಿನ್ನ ತಂದೆ ಕೆಲವು ಪತ್ರಗಳನ್ನು ಸುಟ್ಟುಹಾಕಿದ್ದರು. ಒಂದು ಹಳೆಯ ನೋಟ್ಬುಕ್ ಅನ್ನು ಮಾತ್ರ ಅವರು ಬಹಳ ಕಾಲ ತಮ್ಮ ಬಳಿ ಇಟ್ಟುಕೊಂಡಿದ್ದರು. ನೀನು ಶಾಲೆಗೆ ಹೋದ ಮೇಲೆ ಅದನ್ನು ಎಲ್ಲೋ ತೆಗೆದುಕೊಂಡು ಹೋಗಿದ್ದರು.” ಎಂದಳು.
ಈಶಾನ್ ತನ್ನ ಮೇಜಿನ ಮೇಲಿದ್ದ ನೋಟ್ಬುಕ್ನತ್ತ ನೋಡಿದ.
“ಅದು ಯಾವ ನೋಟ್ಬುಕ್ ಆಗಿತ್ತು ಎಂದು ಗೊತ್ತೇ?”
“ನೀನು ಮತ್ತು ಅನಿರುದ್ಧ ಬರೆದಿದ್ದ ಕಥೆಯ ಪುಸ್ತಕದಂತಿತ್ತು. ಆದರೆ ಅದೇ ಪುಸ್ತಕವೇ ಎಂದು ನನಗೆ ಖಚಿತವಿಲ್ಲ.” ಎಂದಳು.
ಮಾತುಕತೆ ಮುಗಿದ ನಂತರ ಈಶಾನ್ ಬಹಳ ಹೊತ್ತು ಫೋನ್ ಕೈಯಲ್ಲೇ ಹಿಡಿದು ಕುಳಿತಿದ್ದ.ಅವನ ತಂದೆ ಯಾವುದೋ ವಿಷಯವನ್ನು ಮರೆಮಾಚಿದ್ದರು ಎಂಬುದು ಈಗ ಸ್ಪಷ್ಟವಾಗುತ್ತಿತ್ತು. ಆದರೆ ಅದು ಮಗನನ್ನು ರಕ್ಷಿಸಲು ಮಾಡಿದ ಪ್ರಯತ್ನವೇ, ಅಥವಾ ತಮ್ಮದೇ ತಪ್ಪನ್ನು ಮುಚ್ಚಿಹಾಕಲು ಮಾಡಿದ ಕೆಲಸವೇ ಎಂಬುದು ತಿಳಿಯುತ್ತಿರಲಿಲ್ಲ.
ರಾತ್ರಿ ಒಂಬತ್ತು ಗಂಟೆಗೆ ವಿನಯ್ ಮತ್ತೊಮ್ಮೆ ಕರೆ ಮಾಡಿದ.“ಈಶಾನ್, ಹಳೆಯ ಕಡತಗಳಲ್ಲಿರುವ ಒಂದು ದಿನಾಂಕವನ್ನು ಪರಿಶೀಲಿಸಿದ್ದೇನೆ. ಅದು ನಿನ್ನ ತಂದೆಯ ಹಳೆಯ ಕಚೇರಿ ವಿಳಾಸಕ್ಕೆ ಸಂಬ೦ಧಿಸಿದೆ. ಆ ಅವಧಿಯಲ್ಲಿ ಅವರು ಧಾರವಾಡದ ಒಂದು ಶೈಕ್ಷಣಿಕ ಸಂಸ್ಥೆಯೊ೦ದಿಗೆ ಸಂಪರ್ಕ ಹೊಂದಿದ್ದರು ಎಂಬ ಸುಳಿವು ಸಿಕ್ಕಿದೆ. ಆದರೆ ಅವರ ಪಾತ್ರವೇನು ಎಂಬುದು ತಿಳಿದಿಲ್ಲ.” ಎಂದ ವಿನಯ್.
“ಅವರು ಮ್ಯೂಸ್ ಯೋಜನೆಯಲ್ಲಿ ಭಾಗವಹಿಸಿದ್ದರಾ?” ಕೇಳಿದ ಈಶಾನ್.
“ಇದೀಗ ಹಾಗೆ ಹೇಳಲು ಸಾಧ್ಯವಿಲ್ಲ. ಆದರೆ ಅವರ ಹೆಸರು ನೇರವಾಗಿ ಕಾಣಿಸದಿದ್ದರೂ, ಒಂದು ಸಂಪರ್ಕ ದಾಖಲೆಯಲ್ಲಿ ಅವರ ಹಳೆಯ ಇಮೇಲ್ ವಿಳಾಸದ ಭಾಗವಿದೆ” ಪರಿಶೀಲಿಸಿ ಹೇಳಿದ ವಿನಯ್
ಈಶಾನ್ ತಕ್ಷಣ ಕುರ್ಚಿಯಿಂದ ಎದ್ದ.“ನೀನು ಅದನ್ನು ಸೇವ್ ಮಾಡಿದ್ದೀಯಾ?” ಎಂದ.
“ಹೌದು. ಆದರೆ ಅದನ್ನು ಅಧಿಕೃತವಾಗಿ ಪರಿಶೀಲಿಸಬೇಕು. ನಾಳೆ ಸೈಬರ್ ಅಪರಾಧ ವಿಭಾಗಕ್ಕೆ ನೀಡುವ ವರದಿಯಲ್ಲಿ ಈ ಅಂಶವನ್ನೂ ಸೇರಿಸಬಹುದು.” ಎಂದ ವಿನಯ್.
ಕರೆ ಮುಗಿದ ನಂತರ ಈಶಾನ್ ತನ್ನ ತಂದೆಯ ಹಳೆಯ ಪತ್ರಗಳನ್ನು ಹೊರತೆಗೆದ. ಅವುಗಳಲ್ಲಿ ಕೆಲವು ಈಗಾಗಲೇ ಓದಿದ್ದವು. ಮತ್ತೆ ಪ್ರತಿಯೊಂದನ್ನೂ ಎಚ್ಚರಿಕೆಯಿಂದ ಪರಿಶೀಲಿಸಿದ.ಒಂದು ಪತ್ರದ ಹಿಂಭಾಗದಲ್ಲಿ ಮಸುಕಾದ ಮುದ್ರೆಯಿತ್ತು. ಅದರಲ್ಲಿ ಸಂಸ್ಥೆಯ ಹೆಸರು ಸಂಪೂರ್ಣವಾಗಿ ಕಾಣಿಸಲಿಲ್ಲ. ಕೇವಲ ಮೂರು ಪದಗಳು ಸ್ಪಷ್ಟವಾಗಿದ್ದವು:
Centre for Memory Studies.
ಅದರ ಕೆಳಗೆ ಒಂದು ದೂರವಾಣಿ ಸಂಖ್ಯೆ ಬರೆಯಲಾಗಿತ್ತು. ಸಂಖ್ಯೆ ಹಳೆಯದಾಗಿತ್ತು. ಈಗ ಕಾರ್ಯನಿರ್ವಹಿಸುತ್ತದೆಯೇ ಎಂಬುದು ಗೊತ್ತಿರಲಿಲ್ಲ.ಪತ್ರದ ದಿನಾಂಕವನ್ನು ನೋಡಿದಾಗ ಈಶಾನ್ನ ಕಣ್ಣುಗಳು ಅಗಲವಾದವು.ಅದು ಅನಿರುದ್ಧ ಕಾಣೆಯಾಗುವ ಕೆಲವು ವಾರಗಳ ಹಿಂದಿನ ದಿನಾಂಕವಾಗಿತ್ತು.
ಅವನು ಪತ್ರವನ್ನು ವಿನಯ್ಗೆ ಕಳುಹಿಸಲು ಅದರ ಚಿತ್ರ ತೆಗೆದ. ನಂತರ ಆ ಪತ್ರದ ಹಿಂಭಾಗದಲ್ಲಿ ಇನ್ನೇನಾದರೂ ಇದೆಯೇ ಎಂದು ಬೆಳಕಿಗೆ ಹಿಡಿದು ನೋಡಿದ. ಕಾಗದದ ಮೇಲೆ ಒತ್ತಿ ಬರೆದಿದ್ದ ಅಕ್ಷರಗಳ ಗುರುತುಗಳು ಮಸುಕಾಗಿ ಕಾಣಿಸಿದವು. ಅವನು ಪೆನ್ಸಿಲ್ನ ಬದಿಯನ್ನು ಕಾಗದದ ಮೇಲೆ ನಿಧಾನವಾಗಿ ಉಜ್ಜಿದ. ಕೆಲವು ಅಕ್ಷರಗಳು ಹೊರಹೊಮ್ಮಿದವು.
“ನಾಲ್ಕನೇ ಬಳಕೆದಾರನಿಗೆ ಮಾಹಿತಿ ನೀಡಬಾರದು.”
ಈಶಾನ್ ಉಸಿರು ಬಿಗಿಹಿಡಿದ.ಆ ಸಾಲಿನ ಕೆಳಗೆ ಮತ್ತೊಂದು ವಾಕ್ಯದ ಭಾಗವಿತ್ತು.“ಅವನು ಈಗಾಗಲೇ ಮಕ್ಕಳ ಕಥೆಯೊಳಗೆ ಪ್ರವೇಶಿಸಿದ್ದಾನೆ.”ಕಾಗದದ ಉಳಿದ ಭಾಗ ಹರಿದಿತ್ತು.ಯಾರೋ ಆ ವಾಕ್ಯದ ಮುಂದಿನ ಸಾಲನ್ನು ಉದ್ದೇಶಪೂರ್ವಕವಾಗಿ ಕಿತ್ತುಹಾಕಿದಂತೆ ಕಾಣುತ್ತಿತ್ತು.
ಅದೇ ರಾತ್ರಿ, ಈಶಾನ್ ತನ್ನ ಕಂಪ್ಯೂಟರ್ ಅನ್ನು ಚಾಲನೆ ಮಾಡದೆ, ಬೇರೆ ಸಾಧನದಲ್ಲಿ ಹೊಸದಾಗಿ ಸಿದ್ಧಪಡಿಸಿದ್ದ ಟಿಪ್ಪಣಿಗಳನ್ನು ಪರಿಶೀಲಿಸುತ್ತಿದ್ದ. ತನ್ನ ಎಲ್ಲಾ ಅನುಮಾನಗಳನ್ನು ಪ್ರತ್ಯೇಕವಾಗಿ ಬರೆದಿದ್ದ. ಯಾವುದೇ ಸಾಕ್ಷ್ಯವಿಲ್ಲದ ಸಂಗತಿಯನ್ನು ಸತ್ಯವೆಂದು ದಾಖಲಿಸಬಾರದೆಂದು ಅವನು ನಿರ್ಧರಿಸಿದ್ದ.ಆದರೆ ಆ ನಿಯಮವನ್ನು ಪಾಲಿಸುವುದು ಸುಲಭವಾಗಿರಲಿಲ್ಲ.
ಅವನ ಬಾಲ್ಯದ ನೆನಪುಗಳು ಈಗ ದಾಖಲೆಗಳ ರೂಪದಲ್ಲಿ ಅವನ ಮುಂದೆ ನಿಂತಿದ್ದವು. ಅವುಗಳಲ್ಲಿ ಕೆಲವು ಅವನು ಮರೆತಿದ್ದ. ಕೆಲವು ಅವನಿಗೆ ನೆನಪಿದ್ದರೂ ಅವುಗಳ ಅರ್ಥ ಬದಲಾಗುತ್ತಿತ್ತು. ಇನ್ನೂ ಕೆಲವು ತನ್ನದೇ ನೆನಪುಗಳೇ ಎಂಬ ಅನುಮಾನ ಹುಟ್ಟಿಸುತ್ತಿದ್ದವು.
ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಅವನ ಮೊಬೈಲ್ಗೆ ಒಂದು ಇಮೇಲ್ ಬಂತು.ಕಳುಹಿಸಿದವರ ಹೆಸರು ಇರಲಿಲ್ಲ.ವಿಷಯದ ಸಾಲಿನಲ್ಲಿ ಹೀಗೆ ಬರೆಯಲಾಗಿತ್ತು. “ನೀವು ಮೂವರನ್ನು ಕಂಡಿದ್ದೀರಿ. ನಾಲ್ಕನೆಯವನನ್ನು ಹುಡುಕುವ ಮೊದಲು ಇದನ್ನು ಓದಿ.”
ಈಶಾನ್ ಇಮೇಲ್ ತೆರೆಯಲು ಹಿಂಜರಿದ. ವಿನಯ್ ಅಪರಿಚಿತ ಲಿಂಕ್ಗಳನ್ನು ತೆರೆಯಬಾರದೆಂದು ಹೇಳಿದ್ದ. ಆದರೆ ಈ ಇಮೇಲ್ನಲ್ಲಿ ಲಿಂಕ್ ಇರಲಿಲ್ಲ. ಕೇವಲ ಒಂದು ಪಠ್ಯ ಕಡತ ಲಗತ್ತಿಸಲಾಗಿತ್ತು.ಅವನು ಅದನ್ನು ನೇರವಾಗಿ ತೆರೆಯದೆ, ಸುರಕ್ಷಿತವಾಗಿ ಪರಿಶೀಲಿಸಲು ವಿನಯ್ಗೆ ಕಳುಹಿಸುವುದೆಂದು ನಿರ್ಧರಿಸಿದ. ಆದರೆ ಲಗತ್ತಿನ ಹೆಸರನ್ನು ಮಾತ್ರ ಗಮನಿಸಿದ.A.N_LAST_NOTE.txtಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ –. ಅನಿರುದ್ಧನ ಕೊನೆಯ ಟಿಪ್ಪಣಿ?ಅವನೊಳಗೆ ಏನೋ ಕುಸಿದಂತೆ ಅನಿಸಿತು. ಹನ್ನೆರಡು ವರ್ಷಗಳಿಂದ ಕಾಣೆಯಾಗಿದ್ದ ಸ್ನೇಹಿತನ ಧ್ವನಿ ಮತ್ತೆ ಕೇಳಿಬರುವ ಸಾಧ್ಯತೆ ಅವನನ್ನು ಸೆಳೆಯುತ್ತಿತ್ತು. ಅದೇ ಸಮಯದಲ್ಲಿ ಅದು ಬಲೆಯಾಗಿರಬಹುದೆಂಬ ಅರಿವೂ ಇತ್ತು.ಅವನು ಕಡತವನ್ನು ತೆರೆಯಲಿಲ್ಲ. ಬದಲಿಗೆ ಇಮೇಲ್ನ ಸಂಪೂರ್ಣ ವಿವರಗಳನ್ನು ಉಳಿಸಿ, ವಿನಯ್ಗೆ ಕಳುಹಿಸಿದ. ನಂತರ ಸಾರಾಳನ್ನು ಎಬ್ಬಿಸಿದ.
“ಏನಾಯಿತು?” ಎಂದು ಅವಳು ಕೇಳಿದಳು.
“ಅನಿರುದ್ಧನ ಹೆಸರಿನಲ್ಲಿ ಒಂದು ಕಡತ ಬಂದಿದೆ.” ಎಂದ.
ಅವಳು ಸಂಪೂರ್ಣ ಎಚ್ಚರಗೊಂಡಳು.“ತೆರೆದೆಯಾ?” ಕೇಳಿದಳು.
“ಇಲ್ಲ.” ಎಂದ.
“ಒಳ್ಳೆಯದು. ವಿನಯ್ ಪರಿಶೀಲಿಸುವವರೆಗೆ ಕಾಯೋಣ.”
ಈಶಾನ್ ತಲೆಯಾಡಿಸಿದ. ಆದರೆ ಅವನ ದೃಷ್ಟಿ ಮೊಬೈಲ್ ಪರದೆಯ ಮೇಲೆಯೇ ಇತ್ತು. ಇಮೇಲ್ನ ಕೊನೆಯಲ್ಲಿ, ಲಗತ್ತಿನ ಹೆಸರಿನ ಕೆಳಗೆ, ಕಳುಹಿಸಿದವನು ಒಂದು ಸಾಲು ಬರೆದಿದ್ದ.“ಈಶಾನ್, ನೀನು ಅವನನ್ನು ಮರೆತಿಲ್ಲ. ನಿನಗೆ ಅವನನ್ನು ನೆನಪಿಸಿಕೊಳ್ಳಲು ಅನುಮತಿ ಇರಲಿಲ್ಲ.” ಅದನ್ನು ಓದಿ ಈಶಾನ್ನ ದೇಹದಲ್ಲಿ ನಡುಕ ಹರಡಿತು.ಆ ವಾಕ್ಯವನ್ನು ಓದಿದಾಗ ಅವನಿಗೆ ಯಾವುದೋ ಹಳೆಯ ದೃಶ್ಯ ನೆನಪಾಗಲು ಪ್ರಯತ್ನಿಸಿತು. ಮಳೆಯ ಶಬ್ದ. ಕತ್ತಲಾದ ಕೋಣೆ. ನೆಲದ ಮೇಲೆ ಬಿದ್ದಿದ್ದ ಕಾಗದಗಳು. ಅನಿರುದ್ಧನ ಧ್ವನಿ. ಎಲ್ಲವೂ ನೆನಪಾಗಿದ್ದವು. ಮತ್ತು ಮತ್ತೊಬ್ಬ ವ್ಯಕ್ತಿಯ ಕೋಪಭರಿತ ಮಾತು.“ಇದನ್ನು ಯಾರಿಗೂ ಹೇಳಬಾರದು. ನೀನು ಮರೆತರೆ ಮಾತ್ರ ಎಲ್ಲರೂ ಸುರಕ್ಷಿತವಾಗಿರುತ್ತಾರೆ.”ಈಶಾನ್ ತಕ್ಷಣ ಕಣ್ಣು ಮುಚ್ಚಿದ. ನೆನಪು ಮತ್ತೆ ಮಾಯವಾಯಿತು.ಆದರೆ ಈ ಬಾರಿ ಅದು ಸಂಪೂರ್ಣವಾಗಿ ಕಣ್ಮರೆಯಾಗಲಿಲ್ಲ. ಅದರ ಕೊನೆಯ ಭಾಗ ಮಾತ್ರ ಸ್ಪಷ್ಟವಾಗಿ ಉಳಿಯಿತು.ಒಂದು ಬಾಗಿಲು ಮುಚ್ಚಿಕೊಳ್ಳುತ್ತಿತ್ತು.ಬಾಗಿಲಿನ ಆಚೆ ಯಾರೋ ನಿಂತಿದ್ದರು.ಅವರ ಮುಖ ಕಾಣಿಸಲಿಲ್ಲ.ಆದರೆ ಅವರ ಕೈಯಲ್ಲಿ ಕಪ್ಪು ಬಣ್ಣದ ಕಡತವಿತ್ತು.






0 Comments