ಆಚಾರ್ಯರ ಮೂಲ ಚಿತ್ರಿಕೆಗಳ ಪ್ರದರ್ಶನ!

ಸಂಕೇತದತ್ತ

ನಾಡಿನ ಖ್ಯಾತ ಚಿತ್ರಕಲಾವಿದರಲ್ಲಿ ಅಗ್ರಪಂಕ್ತಿಯಲ್ಲಿರುವ ಚಂದ್ರನಾಥ ಆಚಾರ್ಯರು ತಮ್ಮ ಮೂಲ ಚಿತ್ರಕೃತಿಗಳನ್ನು ಪ್ರರ್ದಶಿಸುತ್ತಿದ್ದಾರೆ!

ಮೂಲದ ಚಿತ್ರಗಳನ್ನೇ ಪ್ರದರ್ಶನ ಮಾಡುವುದಲ್ಲವೇ? ಆದರೆ ಈ ಪ್ರದರ್ಶನದಲ್ಲಿ ‘ಮೂಲದ್ದು’ ಎಂದು ಪ್ರತ್ಯೇಕವಾಗಿ ಹೇಳಿದ್ದು ಯಾಕಿರಬಹುದು? ಅದರಲ್ಲೇನು ಅಂತಹ ವಿಶೇಷ!

ಹೌದು, ಸಾಮಾನ್ಯವಾಗಿ ಇಂತಹ ಕುತೂಹಲ ಬರುವುದು ಸಹಜವೇ ಸರಿ!

ಆಚಾರ್ಯರ ಈ ಚಿತ್ರಿಕೆಗಳು ಮಹಾಭಾರತದ ಘಟನಾವಳಿಗಳನ್ನಾಧರಿಸಿದ್ದಾಗಿವೆ. ಇವೆಲ್ಲವೂ ಹಲವಾರು ವರ್ಷಗಳ ಹಿಂದೆ ಮುದ್ರಣಗೊಂಡು ಜನಪ್ರಿಯವಾಗಿವೆ. ಆಗ ಮುದ್ರಣವಾದ ಚಿತ್ರಗಳನ್ನೇ ಈಗಿನವರು ನೇರ ನೋಡಲೆಂದು ಆವೇ ಮೂಲ ಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಮಹಾಭಾರತಕ್ಕೆ ಸಂಬಂಧಿಸಿದ ಈ ಚಿತ್ರಕೃತಿಗಳಲ್ಲಿ ಆಯಾಯ ಪಾತ್ರಗಳನ್ನು ಎದುರಿಗೇ ಕೂರಿಸಿಕೊಂಡು ಚಿತ್ರಿಸಿದ್ದಾರೇನೋ ಎಂಬಷ್ಟು ಕರಾರುವಕ್ಕಾಗಿ, ಯಥಾವತ್ತಾಗಿ ಆಯಾಯ ಸಂದರ್ಭಕ್ಕೆ ತಕ್ಕುದಾದ ಹಿನ್ನೆಲೆಯ ಸಮೇತ ರಚಿಸಿದ್ದಾರೆ. ಇವು ನೈಜತೆಯಿಂದ ಕೂಡಿವೆ!

ಇವೆಲ್ಲವೂ ಜಲವರ್ಣದ ಮಾಧ್ಯಮದಲ್ಲಿ ರಚಿತವಾಗಿದ್ದು ಜಲವರ್ಣವನ್ನು ಹೀಗೇ ಬಳಸಬೇಕು ಹಾಗೂ ಹೀಗೂ ಬಳಸಿಕೊಳ್ಳಬಹುದು ಎಂಬಷ್ಟು ನಿಖರವಾಗಿವೆ. ಈ ಸರಣಿಯ ಚಿತ್ರಕೃತಿಗಳ ರಚನೆಯ ಮೂಲಕ ಆಚಾರ್ಯರು ಈ ಟೆಕ್ನಿಕ್ ಅನ್ನು ತೋರಿಸಿ ಕೊಟ್ಟಿದ್ದಾರೆ.

ಇವೆಲ್ಲವೂ ಸರಿಸುಮಾರು ಮೂರು ದಶಕಗಳ ಹಿಂದೆ ನಾಡಿನ ಖ್ಯಾತ ವಾರಪತ್ರಿಕೆ ‘ಸುಧಾ’ಗಾಗಿ ಬರೆದವು. ಆಗ ಪ್ರತಿವಾರವೂ ಈ ಚಿತ್ರಗಳು ‘ಮಹಾಭಾರತ’ ಧಾರಾವಾಹಿಯ ಕತೆಯೊಂದಿಗೆ ಪ್ರಕಟವಾಗುತ್ತಿದ್ದವು. ಸರಿಸುಮಾರು ವರ್ಷ ಪೂರ್ತಿಯೂ ಪ್ರತಿ ವಾರವೂ ಈ ಸರಣಿಯ ಚಿತ್ರಗಳು ಬರುತ್ತಿದ್ದವು ಎಂಬುದು ಆಚಾರ್ಯರ ನುಡಿ.

ಓದುಗರಿಗೆ ಕತೆಯ ಕಡೆ ಒಲವಾದರೆ, ಕಲಾಸಕ್ತರಿಗೆ ಆಚಾರ್ಯರ ವೈವಿಧ್ಯಮಯ ವರ್ಣಚಿತ್ರಗಳನ್ನು ನೋಡುವುದೇ ಆನಂದ! ಆಗ ಮಹಾಭಾರತ ಕತೆಗೆ ರಚಿಸಿದ್ದ ಈ ಚಿತ್ರಗಳನ್ನು ಆ ದಿನಮಾನದವರು ಮುದ್ರಣ ರೂಪದಲ್ಲಿ ನೋಡಿದ್ದರು. ನನ್ನಲ್ಲೂ ಸೇರಿದಂತೆ ಹಲವರಲ್ಲಿ ಆ ಕಾಲದ ಈ ಚಿತ್ರಗಳ ಮುದ್ರಣದ ಪ್ರತಿಯು ಈಗಲೂ ಸಂಗ್ರಹದಲ್ಲಿದೆ ಎಂದರೆ ಈ ಕೃತಿಗಳ ಮಹತ್ವವು ಅರ್ಥವಾಗಬಹುದು!

ಈಗಿನ ಈ ದಿನಮಾನದವರಿಗಾಗಿ ಅದೇ ಮೂಲ ಚಿತ್ರಿಕೆಗಳನ್ನು ಇಲ್ಲಿ ಪ್ರದರ್ಶನ ಮಾಡುತ್ತಿರುವುದು ವಿಶೇಷ!

ಒಂದೇ ಬಾರಿಗೆ ಕುಳಿತು ಅಷ್ಟೂ ಚಿತ್ರಗಳನ್ನೂ ರಚಿಸಿದ್ದಾರೇನೋ ಎಂಬಷ್ಟು ಸಾಮ್ಯತೆಯು ಈ ಎಲ್ಲಾ ಚಿತ್ರಗಳಲ್ಲೂ ಕಾಣುತ್ತದೆ.

ಮೂವತ್ತು ವರ್ಷಗಳಷ್ಟು ಹಿಂದಿನವು ಇವು ಎಂದು ಆಚಾರ್ಯರೇ ಹೇಳಿದರೂ ನಂಬಲಾಗದು!

ಈಗಷ್ಡೇ ಮುಗಿಸಿ ಬ್ರಶ್ ತೊಳೆದು ಎದ್ದಿದ್ದಾರೇನೋ ಎಂಬಷ್ಟು ನಳನಳಿಪ ಹೊಳಪು ಈ ಪ್ರದರ್ಶನದ ಎಲ್ಲಾ 53 ಚಿತ್ರಿಕೆಗಳಲ್ಲೂ ಗೋಚರಿಸುತ್ತದೆ!

ಈ ಪ್ರದರ್ಶನದ ಗ್ಯಾಲರಿಯಲ್ಲಿ ಓಡಾಡುತ್ತಿದ್ದ ಆಚಾರ್ಯರು ಕೂಡ ಅಷ್ಟೆ ಹುರುಪು-ಉಲ್ಲಾಸಗಳಲ್ಲಿ ತಮ್ಮ ಈ ಕೃತಿಗಳ ರಚನೆ, ಆ ಸಮಯದಲ್ಲಿ ಎದುರಿಸಿದ ಸವಾಲುಗಳನ್ನು ವಿವರಿಸುತ್ತಿದ್ದರು. ಆಚಾರ್ಯರು ಅತಿ ಸಡಗರದಿಂದ ಪ್ರತಿ ನೋಡುಗನನ್ನೂ ಆದರಿಸಿ ಬರ ಮಾಡಿಕೊಂಡು ಕಿರಿಯ ವಿದ್ಯಾರ್ಥಿಯಂತೆ ತಮ್ಮ ಕೃತಿಗಳ ರಚನೆಯ ಬಗ್ಗೆ ವಿವರಿಸುತ್ತಿದ್ದರು!

ಈ ಕೃತಿ ರಚನೆಯ ಸಮಯದಲ್ಲಿ ಆಚಾರ್ಯರು ಅನಾರೋಗ್ಯದ ಕಾರಣ ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದರಂತೆ. ಆದರೂ ಈ ಇಲ್ಯುಸ್ಟ್ರೇಶನ್ ಕೆಲಸ ನಿಲ್ಲಬಾರದೆಂಬ ನಿಲುವು ಹಾಗೂ ಕಾಯಕದ ಮೇಲಿನ ಶ್ರದ್ಧೆಯಿಂದ ಆಸ್ಪತ್ರೆಯಲ್ಲೇ ಕೆಲವು ಚಿತ್ರಗಳನ್ನು ರಚಿಸಲಾಗಿತ್ತು ಎಂದೂ ಗುರುಪತ್ನಿ ತಿಳಿಸಿದರು. ಅಲ್ಲದೇ ಎಂತಹ ಪರಿಸ್ಥಿತಿಯಲ್ಲೂ ಚಿತ್ರ ರಚನೆಯನ್ನು ನಿಲ್ಲಿಸದೇ ಅಷ್ಟೇ ತಾದಾನ್ಯತೆಯಿಂದ ಚಿತ್ರಗಳನ್ನು ರಚಿಸಿದ್ದ ದಿನಗಳನ್ನು ಅವರು ನೆನೆದರು!

ಆದರೆ ಈ ಚಿತ್ರಿಕೆಗಳ ರಚನೆಯ‌ ಕಾಲದಲ್ಲಿ ಎಷ್ಟೆಲ್ಲಾ ಎಡರುತೊಡರುಗಳಿದ್ದರೂ ಅದರ ಛಾಯೆಯು ಈ ಕೃತಿಗಳಲ್ಲಿ ಕಾಣುತ್ತಿಲ್ಲ! ಅಪೂರ್ಣ ಎನ್ನಿಸುವಂತಹ ಒಂದೂ ಚಿತ್ರಗಳಿಲ್ಲಾ! ಅದೇ ಕಲಾವಿದನ ಕೈಚಳಕ!

ಕಲಾಕಾರನ ನೋವು-ಸಂಕಷ್ಟಗಳು ಕಲಾಕೃತಿಯಲ್ಲಿ ಕಾಣದು ಎಂಬುದಕ್ಕೆ ಈ ಕೃತಿಗಳೇ ಸಾಕ್ಷಿ.

ಎಲ್ಲಾ ಕೃತಿಗಳೂ ಒಂದಕ್ಕೊಂದು ಪೈಪೋಟಿಗೆ ಬಿದ್ದು ‘ಸೈ’ ಎನಿಸಿಕೊಂಡಿವೆ!

ನಾಡಿನ ಖ್ಯಾತ ಪತ್ರಿಕೆ ಪ್ರಜಾವಾಣಿ ಬಳಗದ ಸುಧಾ ಹಾಗೂ ಮಯೂರದಲ್ಲಿ ಹಿರಿಯ ಕಲಾವಿದರಾಗಿದ್ದು ಈಗ ನಿವೃತ್ತಿ ಜೀವನದಲ್ಲಿರುವ ಚಂದ್ರನಾಥ್ ಆಚಾರ್ಯ ಅವರ ಈ 53 ಜಲವರ್ಣದ ಮೂಲ ಕಲಾಕೃತಿಗಳು ಜೂನ್ 10 ರಿಂದ ಬೆಂಗಳೂರಿನ ಬಸವನಗುಡಿಗೆ ಹೊಂದಿಕೊಂಡಂತಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಆವರಣದ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಈ ಪ್ರದರ್ಶನವು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯತೆ ಪಡೆದುಕೊಂಡು ಹೆಚ್ಚೆಚ್ಚು ಕಲಾಸಕ್ತರನ್ನು ಸೆಳೆಯುತ್ತಿವೆ.

ನಿಗಧಿಯ ಪ್ರಕಾರ ಜೂನ್ 16ಕ್ಕೆ ಮುಗಿಯಬೇಕಿತ್ತು. ಆದರೆ ನೋಡುಗರ ಮಹಾಪೂರ ಹಾಗೂ ಕಲಾಸಕ್ತರ ಒತ್ತಾಯದ ಮೇರೆಗೆ ಮತ್ತೊಂದು ವಾರಕ್ಕೆ (ಜೂನ್ 23ರ ವರೆಗೆ) ಮುಂದುವರಿದಿದೆ.

ಈ ಪ್ರದರ್ಶನವು ಹಲವಾರು ಕಲಾಪ್ರೇಮಿಗಳ, ಕಲಾಸಕ್ತರ, ಕಲಾವಿದರ, ಚಂದ್ರನಾಥ್ ಆಚಾರ್ಯರಿಗೇ ತಿಳಿಯದಂತೆ ಅವರ ಕಲಾಕೃತಿಗಳನ್ನು ನೋಡುತ್ತಾ, ಅಭ್ಯಾಸಿಸುತ್ತಾ ಏಕಲವ್ಯರಂತೆ ಬೆಳೆದು ಬಂದಿರುವ ಎಲ್ಲಾ ಕಲಾ ಸಂಕುಲಗಳು ಈ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ನೇರಾನೇರ ನೋಡಲು ಗ್ಯಾಲರಿಗೆ ಬಂದವರು ಮೂಲ ಕೃತಿಗಳ ಹತ್ತಿರಕ್ಕೆ ಮುಖವಿಟ್ಟು ಕಣ್ಣನ್ನು ನೆಟ್ಟು, ಇಂಚಿಂಚೂ ಆಸ್ವಾದಿಸುತ್ತಿದ್ದಾರೆ.

ಗ್ಯಾಲರಿಗೆ ಬರದೇ ಇರುವವರು, ನಾಡಿಂದ ಹಾರಿ ಹೋಗಿ ಸಮುದ್ರದಾಚೆಯ ಬೀಡಲ್ಲಿ ಬೀಡು ಬಿಟ್ಟಿರುವ ಕೆಲವು
ಏಕಲವ್ಯರು ಅಲ್ಲಿಂದಲೇ ಈ ಗ್ಯಾಲರಿಯ ವಿಡಿಯೋ ಹಾಗೂ ಚಿತ್ರಿಕೆಗಳನ್ನು ಝೂಮ್ ಮಾಡಿ ನೋಡಿ ತೃಪ್ತರಾಗುತ್ತಿದ್ದಾರೆ.

ಕನ್ನಡ ಕಲಾಲೋಕದ ಈ ದಿನಮಾನದ ದ್ರೋಣಾಚಾರ್ಯರಲ್ಲಿ ಚಂದ್ರನಾಥ್ ಆಚಾರ್ಯರ ಪಟ್ಟ ಅಗ್ರಸ್ಥಾನದಲ್ಲಿದ್ದಾರೆ ಎಂಬುದಕ್ಕೆ ಈ ಪ್ರದರ್ಶನ. ಉದಾಹರಣೆಯಂತಿದೆ.

ಆಚಾರ್ಯರು ಹಲವಾರು ಏಕವ್ಯಕ್ತಿ ಹಾಗೂ ಗುಂಪು ಕಲಾಕೃತಿಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಆದರೆ ಈ ಪ್ರದರ್ಶನದಲ್ಲಿ ಸಿಕ್ಕ ಪ್ರತಿಕ್ರಿಯೆಯೇ ಬೇರೆ ವಿಧದ್ದು!

ಪುರಾಣ ಕತೆಗೆ ಪೂರಕವಾದ ಈ ಚಿತ್ರಗಳ ಪ್ರದರ್ಶನಕ್ಕೆ ಈ ಗ್ಯಾಲರಿಯೂ ಅಷ್ಟೇ ಪೂರಕವಾಗಿದೆ ಎನ್ನಲಡ್ಡಿಯಿಲ್ಲ!

ಚಪ್ಪಲಿ-ಶೂಗಳ ಸಮೇತ ಒಳಗಡಿ ಇಡುವ ಮುನ್ನ ಮನಸ್ಸು ಹಿಂಜರಿಯುವಂತೆ ಮಾಡುತ್ತೆ. ಒಂದು ರೀತಿಯ ಸಕಾರಾತ್ಮಕ ಕಂಪನ ಏರ್ಪಡುತ್ತೆ!

ಅತ್ಯುತ್ತಮ ಕಲಾಕೃತಿಗಳನ್ನು ತಗುಲಿಸಿಕೊಂಡು ಭೀಗುತ್ತಿರುವ ಈ ಗ್ಯಾಲರಿಯ ಗೋಡೆಗಳು ಮುಂದಿನ ವಾರ ಖಾಲಿಯಾಗಲಿವೆ. ಈ ಮಟ್ಟದ ಹಾಗೂ ಈ ಕಲಾಕೃತಿಗಳನ್ನು ನೋಡಿ ಸ್ಫೂರ್ತಿಗೊಂಡ ಏಕಲವ್ಯ ಸಂಕುಲವು ಇದೇ ಸ್ಫೂರ್ತಿ ಹಾಗೂ ಅತ್ಯುತ್ಸಾಹದಲ್ಲಿ ಒಂದಿಷ್ಟು ಕಲಾಕೃತಿಗಳನ್ನು ರಚಿಸಿ ಇಲ್ಲಿ ಪ್ರದರ್ಶಿಸಲಿ ಎಂಬ ಆಶಯವನ್ನು ಈ ಗೋಡೆಗಳು ಹೊತ್ತಿವೆ!

ಆಚಾರ್ಯರೇ ಹೇಳುವಂತೆ ಇವೆಲ್ಲಾ ಚಿತ್ರಿಕೆಗಳು ಕಲಿಕೆಗೆ ಅನುವಾಗಲಿ. ನಾವು ಕಲಿತದ್ದನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಆಗಷ್ಟೆ ಕಲಿಕೆಗೆ ಬೆಲೆ ಬರುವುದು!

‍ಲೇಖಕರು Admin

June 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: