ಅಂತ:ಸತ್ವ ಕಳೆದುಕೊಳ್ಳುತ್ತಿರುವ ಗಜಲ್ ಕಾವ್ಯ ಪ್ರಕಾರ…

ಸಿದ್ಧರಾಮ ಕೂಡ್ಲಿಗಿ

ಇದೀಗ ಕನ್ನಡ ಕಾವ್ಯಲೋಕದಲ್ಲಿ ಹೊಸ ಟ್ರೆಂಡ್ ಎಂಬಂತೆ ಗಜಲ್ ಜನಪ್ರಿಯವಾಗಿದೆ. ಮೂಲತ: ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಲು ಯತ್ನಿಸಿ, ಅಧ್ಯಯನ ನಡೆಸಿ ಕನ್ನಡದಲ್ಲಿ ಗಜಲ್ ತಂದವರು ಗಜಲ್ ಪಿತಾಮಹ ಎನಿಸಿಕೊಂಡ ಶಾಂತರಸರು. ನಂತರ ಅವರ ಜಾಡಿನಲ್ಲಿ ಗಜಲ್ ಬಗ್ಗೆ ಸಂಪೂರ್ಣ ಅರಿತುಕೊಂಡು ಕನ್ನಡದಲ್ಲಿ ಮೊದಲ ಬಾರಿಗೆ ಪರಿಶುದ್ಧ ಗಜಲ್ ಸಂಗ್ರಹ ಪ್ರಕಟವಾದುದು 2002ರಲ್ಲಿ ಶಾಂತರಸರ ಮಗಳು ಎಚ್.ಎಸ್.ಮುಕ್ತಾಯಕ್ಕನವರ ’ನಲವತ್ತು ಗಜಲುಗಳು’. ಆನಂತರ ಶಾಂತರಸರ ‘ಗಜಲ್ ಮತ್ತು ಬಿಡಿ ದ್ವಿಪದಿ’ ಎಂಬ ಸಂಗ್ರಹ 2004ರಲ್ಲಿ ಪ್ರಕಟವಾಯಿತು.

ಇಲ್ಲಿ ನಾನೊಂದು ವಿಷಯವನ್ನು ಪ್ರಸ್ತಾಪಿಸಲೇಬೇಕಿದೆ. ಶಾಂತರಸರು ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟ ಪ್ರದೇಶದವರು. ರಾಯಚೂರಿನ ಹೆಂಬೇರಾಳಿನವರು. ಆಗ ಶಿಕ್ಷಣದ ಮಾಧ್ಯಮ ಉರ್ದು ಆಗಿತ್ತು. ಹೀಗಾಗಿ ಶಾಂತರಸರು ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪಡೆದು ಪದವಿಯನ್ನೂ ಸಹ ಉರ್ದು ಮಾಧ್ಯಮದಲ್ಲಿಯೇ ಪೂರ್ಣಗೊಳಿಸಿದವರು. ಹೀಗಾಗಿ ಅವರಲ್ಲಿ ಉರ್ದು ಭಾಷೆಯ ಬಗೆ ಪಾಂಡಿತ್ಯವಿತ್ತು. ಸಾಕಷ್ಟು ಉರ್ದು ಕೃತಿಗಳನ್ನು ಅಧ್ಯಯನ ಮಾಡಿದರು. ಅಲ್ಲದೇ ಬಹು ಮುಖ್ಯವಾಗಿ ಉರ್ದು ಭಾಷೆಯಲ್ಲಿದ್ದ ’ಉಮರಾವ್ ಜಾನ್ ಅದಾ’ ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದರು. ಇದಕ್ಕೆ ಎಷ್ಟು ಅಧ್ಯಯನ ಮಾಡಿರಬೇಕು ಯೋಚಿಸಿ.

ಇಂಥ ಶಾಂತರಸರು ಉರ್ದು ಕಾವ್ಯ ಪ್ರಕಾರವಾದ ಗಜಲ್ ಬಗ್ಗೆ ಮಾರುಹೋದರಾದರೂ ಅದನ್ನು ಕನ್ನಡಕ್ಕೆ ತರಬೇಕೆಂಬ ತುಡಿತ ಇದ್ದಿತಾದರೂ ಧೈರ್ಯ ಮಾಡಲಾಗಲಿಲ್ಲ. ಯಾಕೆಂದರೆ ಅದರ ಅಂತ:ಸತ್ವವೇ ಹಾಗಿತ್ತು. ಆದರೂ ಎಲ್ಲೋ ಒಂದೆಡೆ ಇದನ್ನು ಕನ್ನಡಕ್ಕೆ ತರಬೇಕೆಂಬ ಹುಮ್ಮಸ್ಸು ಇದ್ದೇ ಇತ್ತು. ಅಂತೂ ಅವರು ಗಜಲ್ ನ್ನು ಕನ್ನಡಕ್ಕೆ ತರಲು ಮೊದಲ ಬಾರಿಗೆ ಯತ್ನಿಸಿದರು.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕು ’ಶಾಂತರಸರು ಉರ್ದುವಿನಲ್ಲೇ ಅಭ್ಯಾಸ ಮಾಡಿದ್ದರೂ, ಅದರ ಬಗ್ಗೆ ಪಾಂಡಿತ್ಯ ಹೊಂದಿದ್ದರೂ, ಉರ್ದು ಕಾವ್ಯ ಪ್ರಕಾರವಾದ ಗಜಲ್ ನ್ನು ಕನ್ನಡಕ್ಕೆ ತರಬೇಕಾದರೆ ಸುದೀರ್ಘ ಒಂದು ವರ್ಷದವರೆಗೂ ಅವರು ಈ ಕುರಿತು ಅಧ್ಯಯನ ಮಾಡುತ್ತಾರೆ.’ ಇದರ ಮೇಲೆ ನಾವು ಯೋಚಿಸಬೇಕು ಗಜಲ್ ಕಾವ್ಯ ಪ್ರಕಾರ ಕನ್ನಡಕ್ಕೆ ತರುವಲ್ಲಿ ಎಷ್ಟು ಕಷ್ಟಪಟ್ಟಿದ್ದರೆಂದು. ಆದರೂ ಅವರು ತಮ್ಮ ಕೃತಿಯಲ್ಲಿ ಹೀಗೆ ಹೇಳಿಕೊಳ್ಳುತ್ತಾರೆ ’ನನ್ನ ಗಜಲ್ ಗಳು ಸಂಪೂರ್ಣ ಉರ್ದು ಗಜಲ್ ಗಳ ಅನುಕರಣೆ ಅಲ್ಲ,. ಉರ್ದು ಗಜಲಿನ ಪರಂಪರೆ, ರಚನೆ, ಅದರ ಅಂತ:ಸತ್ವ ಇವುಗಳನ್ನುಳಿಸಿಕೊಂಡು ಕನ್ನಡ ಜಾಯಮಾನಕ್ಕೆ ತಕ್ಕಂತೆ ಗಜಲ್ ಗಳನ್ನು ರಚಿಸಿದ್ದೇನೆ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ’ ಎಂದಿದ್ದಾರೆ.

ಸ್ವತ: ಗಜಲಿನ ಪಿತಾಮಹ ಎನಿಸಿಕೊಂಡ ಶಾಂತರಸರೇ ಹೀಗೆ ಹೇಳಿದಾಗ ಈಗ ಬರುತ್ತಿರುವ, ಬರೆಯುತ್ತಿರುವ ಗಜಲ್ ಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಶಾಂತರಸರು, ಎಚ್.ಎಸ್.ಮುಕ್ತಾಯಕ್ಕನವರ ಗಜಲ್ ಸಂಗ್ರಹ ಬಂದ ನಂತರ ಮುಂದೆ ಕೆಲವರು ಬರೆದಂತಹ ಗಜಲ್ ಗಳು ಒಂದು ಸರಿಯಾದ ಮಾರ್ಗ ಕ್ರಮಿಸಿದ್ದವು. ಆದರೆ ನಂತರ ಶುರುವಾಯ್ತು ನೋಡಿ ಅವರು ಬರೆದರೆಂದು ಇವರು ಇವರು ಬರೆದರೆಂದು ಅವರು ಆರಂಭಗೊಂಡು ಗಜಲ್ ನ ದಾರಿ ತಪ್ಪಿಸಿಬಿಟ್ಟರು. ಯಾವುದು ಆಗಬಾರದಿತ್ತೋ ಅದೇ ಆಗಿಬಿಟ್ಟಿತು. ಯಾವಾಗ ಗಜಲ್ ಗೆ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಒಂದು ಗಟ್ಟಿಯಾದ ನೆಲೆ ಸಿಗತೊಡಗಿತೋ, ಯಾವಾಗ ಗಜಲ್ ಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಒಂದು ಗೋಷ್ಠಿಯಾಗುವಷ್ಟು ಗೌರವ ಸಿಗತೊಡಗಿತೋ, ಯಾವಾಗ ಅದಕ್ಕೂ ಪ್ರತ್ಯೇಕವಾಗ ಒಂದು ವೇದಿಕೆ ಸಿಗತೊಡಗಿತೊ ಆಗ ಗಜಲ್ ಗಳ ಮೇಲೆ ದಾಳಿ ಆರಂಭವಾಯಿತು. ನಟ್ಟ ನಡುರಸ್ತೆಯಲ್ಲಿಯೇ ಗಜಲ್ ನ ಮೇಲೆ ಅತ್ಯಾಚಾರ ಆರಂಭವಾಗಿಬಿಟ್ಟಿತು. ಅದುವರೆಗೂ ಅತ್ಯಂತ ಗೌರವಯುತ ಸ್ಥಾನ ಹೊಂದಿದ್ದ ಗಜಲ್ ಯಾರ ಯಾರದೋ ಕೈಗೆ ಸಿಕ್ಕು ನಲುಗಿಹೋಯಿತು. ಗಜಲ್ ನ ರಚನೆ ಹಾಗಿರಲಿ ಅದರ ಅಂತ:ಸತ್ವವನ್ನೇ ಗಾಳಿಗೆ ತೂರಿ ಗಜಲ್ ಗಳು ಮಹಾಪೂರ ಹರಿಯತೊಡಗಿತು.

ತುಂಬಾ ಬೇಸರದ ಸಂಗತಿಯೆಂದರೆ ಪರಿಶುದ್ಧ ಗಜಲ್ ಗಳನ್ನ ಹೊಂದಿರುವ ಕೃತಿಗಳನ್ನು ಯಾರೂ ಓದಲು ಸಿದ್ಧರಿಲ್ಲ, ಯಾರು ಮೊದಲು ಆರಂಭಿಸಿದರು ಎಂಬುದೂ ಬೇಕಿಲ್ಲ, ಅವರಿಗೆ ಬೇಕಿರುವುದು ’ನಾನೂ ಗಜಲ್ ಬರೆಯಬಲ್ಲೆ, ಸಾವಿರಾರು ಗಜಲ್ ಗಳನ್ನು ಬರೆಯುತ್ತೇನೆ ಹಾಗೂ ಕೃತಿಯನ್ನು ಹೇಗಾದರೂ ತಕ್ಷಣ ಪ್ರಕಟಿಸಬೇಕು, ವೇದಿಕೆ ಸಿಗಬೇಕು, ಸನ್ಮಾನ, ಪ್ರಶಸ್ತಿ ದೊರೆಯಬೇಕೆಂಬ’ ಹುಚ್ಚಿಗೆ ಬಿದ್ದು ಬರೆಯತೊಡಗಿದರು. ಈಗ ನೋಡಿ ಯಾರು ಬೇಕಾದರೂ ಗಜಲ್ ಬರೆಯಬಲ್ಲರು. ನನ್ನ ವಿಚಾರ ಇಷ್ಟೇ, ಗಜಲ್ ನ್ನು ಬರೆಯುವುದರ ಬಗ್ಗೆ ನನ್ನ ತಕರಾರಿಲ್ಲ ಬರೆಯಿರಿ ಆದರೆ ಪರಿಪೂರ್ಣವಾಗಿ ಅದರ ಬಗ್ಗೆ ತಿಳಿದು ಬರೆಯಿರಿ. ಅವರು ಬರೆದರೆಂದು ಇವರು, ಇವರು ಬರೆದರೆಂದು ಅವರು ಈ ರೀತಿ ಮಾಡಬೇಡಿರೆಂದು ಹೇಳುವುದು.

ಈಗ ಆಗುತ್ತಿರುವುದು ಇದೇ. ಗಜಲ್ ನ ಬಗ್ಗೆ ಏನೆಂದರೆ ಏನೂ ತಿಳಿಯದವರು, ಏನೇನೋ ಬರೆದೂ ಗಜಲ್ ಗಳೆಂಬ ಹಣೆಪಟ್ಟಿ ಅಂಟಿಸಿ, ಹಿರಿಯ ಗಜಲ್ ಕಾರರಾಗುತ್ತಿದ್ದಾರೆ. ದಾಖಲೆಗಳ ಸಂಖ್ಯೆಯಲ್ಲಿ ಗಜಲ್ ಕೃತಿಗಳನ್ನು ಪ್ರಕಟಿಸಿದ್ದಾರೆ ಹಾಗೂ ಪ್ರಶಸ್ತಿಗಳನ್ನೂ ಬಾಚಿಕೊಂಡಿದ್ದಾರೆ. ಇದೇ ದೊಡ್ಡ ದುರಂತ. ಇವರನ್ನೇ ಉಳಿದವರೂ ಅನುಕರಿಸಿ ಅದಕ್ಕಿಂತಲೂ ಕಳಪೆ ಗಜಲ್ ಗಳನ್ನು ಪ್ರಕಟಿಸುತ್ತಿದ್ದಾರೆ. ಕೆಲವರಂತೂ ಸಾವಿರ ಸಾವಿರ ಸಂಖ್ಯೆಯಲ್ಲಿ ಬರೆದು ’ದಾಖಲೆ ವೀರರು’ ಆಗ ಹೊರಟಿರುವುದು ನೋಡಿದರೆ ನಿಜಕ್ಕೂ ವಿಶಾದವೆನಿಸುತ್ತದೆ.

ಗಜಲ್ ಸಾವಿರ ಸಂಖ್ಯೆಯಲ್ಲಿ ಬರೆಯುವುದಲ್ಲ, ದಾಖಲೆಗಾಗಿ ಬರೆಯುವುದಲ್ಲ, ಅದೊಂದು ಮಧುರವಾದ ಹೃದಯದ ನಿವೇದನೆ. ನಮ್ಮೊಳಗನ್ನು, ನಮ್ಮೊಳಗಿನ ಪ್ರೇಮವನ್ನು, ನಮ್ಮೊಳಗಿನ ನೋವನ್ನು, ನಮ್ಮೊಳಗಿನ ಕಾಣ್ಕೆಯನ್ನು ಅಭಿವ್ಯಕ್ತಿಗೊಳಿಸುವ ಒಂದು ಸುಂದರ ಮಾಧ್ಯಮ. ಗಜಲ್ ಪ್ರೇಮದೊಂದಿಗೇ ದೈವತ್ವಕ್ಕೇರುವ, ದೈವತ್ವದೊಂದಿಗೆ ಅನುಸಂಧಾನ ಏರ್ಪಡಿಸುವ ಒಂದು ಮಾಧ್ಯಮ. ಅದೊಂದು ಕನ್ನಡಕ್ಕೆ ಬಂದ ಒಂದು ಮಧುರ ಹೃದಯ. ಇದೆಲ್ಲ ಯಾರಿಗೆ ಬೇಕಿದೆ ? ಕಟ್ಟೆಯ ಮೇಲೆ ಕುಳಿತು ಅವಸರಕ್ಕೆ ಹಗ್ಗ ಹೊಸೆದಂತೆ ಹೊಸೆದು ಹೊಸೆದು ಗಜಲ್ ಗಳೆಂಬ ಹಣೆಪಟ್ಟಿ ಅಂಟಿಸುವವರ ಬಗ್ಗೆ ನಿಜಕ್ಕೂ ಬೇಸರ ಉಂಟಾಗುತ್ತದೆ.

ವಿಚಿತ್ರ ನೋಡಿ ಗಜಲ್ ಗಳ ಬಗ್ಗೆ ನಮ್ಮ ಪತ್ರಿಕೆಗಳಿಗೂ ಗೊತ್ತಿಲ್ಲ. ದಿನಪತ್ರಿಕೆಗಳು ಪ್ರತಿ ಭಾನುವಾರ ಸಾಹಿತ್ಯ ಪುರವಣಿಯನ್ನು ಹೊರಡಿಸುತ್ತವೆ. ಅಲ್ಲಿ ಸಾಹಿತ್ಯದ ಬಗ್ಗೆ ಅರಿವು ಇರುವವರೇ ಸಂಪಾದಕರಾಗಿರುತ್ತಾರೆ. ಕಾವ್ಯ ಪ್ರಕಾರಗಳು, ಸಾಹಿತ್ಯ ಪ್ರಕಾರಗಳನ್ನು ತಿಳಿದವರೇ ಅಲ್ಲಿದ್ದು, ಅಂಥವರೇ ಪ್ರತಿ ವಾರ ಆಯ್ಕೆಯಾದ ಬರಹಗಳನ್ನೋ, ಕತೆಗಳನ್ನೋ, ಕವನಗಳನ್ನೋ ಪ್ರಕಟಿಸುತ್ತಾರೆ. ದುರಂತವೆಂದರೆ ಇಷ್ಟೆಲ್ಲವನ್ನು ಮಾಡುವ ಈ ಪತ್ರಿಕೆಗಳ ಸಾಹಿತ್ಯ ಪುರವಣಿಗಳ ಸಂಪಾದಕರಿಗೆ ಗಜಲ್ ಗಳ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ, ಗೊತ್ತುಮಾಡಿಕೊಳ್ಳುವ ಪ್ರಯತ್ನಕ್ಕೂ ಹೋಗಲಿಲ್ಲ.

ಹೀಗಾಗಿ ಯಾರೆ ’ಗಜಲ್ ’ ಎಂದು ಬರೆದು ಕವನ ಕಳಿಸಿದರೂ ಅದನ್ನು ಅತ್ಯಂತ ಶ್ರದ್ಧೆಯಿಂದ ಪ್ರಕಟಿಸುವ ಪತ್ರಿಕೆಗಳು ಈಗಲೂ ಇವೆ. ಇವರಿಗೆ ಆ ಕುರಿತು ತಿಳಿದುಕೊಳ್ಳುವ ಹುಮ್ಮಸ್ಸಾಗಲಿ, ಆಸಕ್ತಿಯಾಗಲಿ ಮೊದಲೇ ಇಲ್ಲ. ಪ್ರಮುಖ ಕವಿಗಳು, ಹೆಸರಾಂತ ಕವಿಗಳು ’ಗಜಲ್’ ಎಂದು ಬರೆದದ್ದನ್ನೂ ಪ್ರಕಟಿಸಿಬಿಡುತ್ತಾರೆ. ತಲೆ ಕೆಡಿಸಿಕೊಳ್ಳಲೇ ಹೋಗುವುದಿಲ್ಲ. ಇದನ್ನು ನಾನು ಹೇಳುತ್ತಿಲ್ಲ ಶಾಂತರಸರೇ ಹೇಳಿದ್ದಾರೆ. ಈ ಕುರಿತು ಅವರು ಪತ್ರಿಕೆಗಳಿಗೂ ತಿಳಿಸಿದ್ದಾರೆ, ಗಜಲ್ ಎಂದು ಪ್ರೇಮಗೀತೆಗಳನ್ನು ಬರೆದು ಕೃತಿಗಳನ್ನು ಪ್ರಕಟಿಸಿದ ಮಹಾಶಯರಿಗೂ ಹೇಳಿದ್ದಾರೆ. ಅವರೆಲ್ಲ ನಕ್ಕು ಅಲಕ್ಷ್ಯ ತೋರಿದರು ಎಂದು ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಈಗ ಗಜಲ್ ಕಾವ್ಯ ಪ್ರಕಾರ ನಾಡಿನಾದ್ಯಂತ ಹರಡಿದೆ. ’ನಾನೂ ಒಂದು ಕೈ ಯಾಕೆ ನೋಡಬಾರದು’ ಎಂಬುವವರೇ ಈಗ ಗಜಲ್ ಕಾವ್ಯ ಲೋಕದಲ್ಲಿ ಬೇರು ಬಿಡುತ್ತಿದ್ದಾರೆ. ಇವರೆಲ್ಲ ಹೆಸರಿಗೆ, ಪ್ರಶಸ್ತಿಗಳಿಗೆ, ದಾಖಲೆಗಳಿಗಾಗಿ ಬರೆಯುತ್ತಿರುವುದು ಎಂಬುದು ಸ್ಪಷ್ಟವಾಗಿದೆ. ಹೇಳಲು ಹೋದರೂ ’ಹೀಗೇ ಬರೀಬೇಕು ಎಂದು ರೂಲ್ಸ್ ಇದೆಯಾ ?’ ಎಂದೂ ಗರ್ವದಿಂದ ಪ್ರಶ್ನಿಸಿದ್ದಾರೆ. ’ಊಟವನ್ನು ಬಾಯಿಂದಲೇ ಮಾಡಬೇಕು’ ಎಂಬುದು ರೂಲ್ಸ್ ಅಲ್ಲ. ಅದು ಸಹಜ ಕ್ರಿಯೆ. ಬೇರೆ ಕಡೆಯಿಂದ ಊಟ ಮಾಡುತ್ತೇನೆಂದರೆ ಆಯ್ತು ಎನ್ನುತ್ತೇವೆ. ಅದನ್ನು ಸಾಹಿತ್ಯ ಲೋಕ ಗಮನಿಸುತ್ತಲೇ ಇರುತ್ತದೆ. ಅಂತ:ಸತ್ವ ಇರುವವು ಉಳಿದುಕೊಳ್ಳುತ್ತವೆ ಉಳಿದವುಗಳೆಲ್ಲ್ ಹಾರಿಹೋಗುತ್ತವೆ.

ಖಂಡಿತ ಆಸಕ್ತಿ ಇರುವ ಎಲ್ಲರೂ ಗಜಲ್ ಬರೆಯಲಿ. ಬೇಡ ಅನ್ನುವುದಿಲ್ಲ. ನನ್ನ ಕಳಕಳಿ ಇಷ್ಟೇ ’ನಾನೂ ಯಾಕೆ ಬರೆಯಬಾರದು’ ಎಂದೋ ’ನಾನೂ ಯಾಕೆ ಒಂದು ಗಜಲ್ ಸಂಗ್ರಹ ಪ್ರಕಟಿಸಬಾರದು ?’ ಎಂದೋ, ’ನಾನೂ ಯಾಕೆ ಸಾವಿರ ಸಂಖ್ಯೆಯಲ್ಲಿ ಬರೆದು ಬಿಸಾಕಬಾರದು?’ ಎಂದೋ, ’ಎಷ್ಟೋ ಬರಹಗಳನ್ನು ಬರೆದಿದ್ದೇನೆ ಇದ್ಯಾವ ಮಹಾ ?’ ಎಂದೋ, ’ಗಜಲ್ ಬರೆದರೇ ನನಗೆ ಸಾಕಷ್ಟು ಪ್ರಸಿದ್ಧಿ ಪ್ರಶಸ್ತಿ ಸಿಗಲು ಸಾಧ್ಯ’ ಎಂದೋ ದಯವಿಟ್ಟು ಬರೆಯಬೇಡಿ. ಗಜಲ್ ನ್ನು ಕುರಿತು ಹಿರಿಯ ಗಜಲ್ ಕಾರರ ಕೃತಿಗಳನ್ನು ಓದಿ, ಗಜಲ್ ನ ನಾಡಿಮಿಡಿತವನ್ನು ಅರಿಯಿರಿ, ಅದರ ರಚನೆಯನ್ನು ತಿಳಿದುಕೊಳ್ಳಿ ಬಹಳ ಮುಖ್ಯವಾಗಿ ಗಜಲ್ ನ ಅಂತರಾತ್ಮದಲ್ಲಿರುವ ಪ್ರೇಮವನ್ನು, ಪ್ರೀತಿಯನ್ನು ಅರಿಯಿರಿ. ಗಜಲ್ ನ್ನು ಅಪ್ಪಿಕೊಂಡು ಪ್ರೀತಿಸಿ ಖಂಡಿತ ಗಜಲ್ ಒಲಿಯುತ್ತದೆ. ಗಜಲ್ ನ್ನು ಬಲವಂತದಿಂದ ಅತ್ಯಾಚಾರ ಮಾಡಬೇಡಿ. ಇದು ನನ್ನ ಮನವಿ.

ಹೆಚ್ಚಿನ ಮಾಹಿತಿ ಬೇಕಿದ್ದರೆ ಶಾಂತರಸರ ’ಗಜಲ್ ಮತ್ತು ಬಿಡಿ ದ್ವಿಪದಿ’ ಕೃತಿ, ಎಚ್.ಎಸ್.ಮುಕ್ತಾಯಕ್ಕನವರ ’ನಲವತ್ತು ಗಜಲುಗಳು’, ಓದಿರಿ. ಪ್ರಪ್ರಥಮ ಬಾರಿಗೆ ಗಜಲ್ ಏನು, ಹೇಗೆ, ರಚನೆ ಹೇಗೆ, ಎಷ್ಟು ಪ್ರಕಾರಗಳಿವೆ, ಎಲ್ಲ ಪ್ರಶ್ನೆಗಳಿಗೂ ಉತ್ತರ ಈ ಕೃತಿಗಳಲ್ಲಿ ದೊರೆಯುತ್ತದೆ. ಅಲ್ಲದೆ ಕನ್ನಡದಲ್ಲಿ ಗಜಲ್ ಗಳನ್ನು ಹೇಗೆ ಬರೆಯಬೇಕೆಂಬುದಕ್ಕೆ ಅವೇ ಬುನಾದಿಗಳಾಗಿವೆ. ಆದರೆ ನಂತರ ಬಂದ ಕೃತಿಗಳಲ್ಲಿ ಅನೇಕ ಕವಿಗಳು ಶಾಂತರಸ ಹಾಗೂ ಮುಕ್ತಾಯಕ್ಕನವರ ’ಗಜಲ್ ರಚನೆ’ ಕುರಿತ ವಿವರಗಳನ್ನು ಅನಾಮತ್ತು ಎತ್ತಿ ಕಾಪಿ ಮಾಡಿ ತಾವೇ ಅದನ್ನು ಅಧ್ಯಯನ ಮಾಡಿ ಬರೆದವರೆಂಬಂತೆ ಬಿಂಬಿಸಿಕೊಂಡಿದ್ದಾರೆ. ಅವರದೆಲ್ಲ ಈ ಕೃತಿಗಳ ಕಾಪಿ ಪೇಸ್ಟ್ ಹೊರತು ಅಧ್ಯಯನದ ಮಾತುಗಳಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ.

ಮೇಲಿನ ಎರಡೂ ಕೃತಿಗಳ ನಂತರ ಅದೇ ಪರಂಪರೆಯಲ್ಲಿ ನಾವು ಸಾಗಿದ್ದೇವೆಯೇ ಹೊರತು, ಅವರನ್ನು ಮೀರಿ ನಾವೂ ಬರೆಯಬಲ್ಲೆವು ಅಂತಲ್ಲ. ಯಾಕೆಂದರೆ ನಮ್ಮಲ್ಲಿ ಅಧ್ಯಯನವಿಲ್ಲ. ಅನುಕರಣೆ ಇದೆ ಅಷ್ಟೆ ಇದನ್ನು ಎಲ್ಲರೂ ಅರಿತುಕೊಳ್ಳಬೇಕು.

‍ಲೇಖಕರು Admin

June 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: