ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವರೊಳಗಿನ ರಾಕ್ಷಸ ಇಷ್ಟು ಬೃಹದಾಕಾರ ಬೆಳೆಯುತ್ತಿರಲಿಲ್ಲವೆನೋ..’ – ವೈಶಾಲಿ ಹೆಗಡೆ

ಪ್ರಳಯ ಅಂದ್ರೆ ಇದೇ ಅಲ್ಲವೇ?

ವೈಶಾಲಿ ಹೆಗಡೆ

ಸುತ್ತೆಲ್ಲ ಹಲವರು ನಾಳೆ ಜಗತ್ಪ್ರಳಯವಾಗಲಿದೆ ಎಂದು ಹುಯಿಲೆಬ್ಬಿಸುತ್ತಿದ್ದರೆ, ಮತ್ತೆ ಹಲವರು ಹುಳಿನಗೆ ನಕ್ಕು ಗೇಲಿ ಮಾಡುತ್ತಿದ್ದಾರೆ. ಆದರೆ ಮೊನ್ನಿನ ಘಟನೆಯ ಸುದ್ದಿ, ಪೂರ್ತಿ ಓದಲೂ ಆಗದಷ್ಟು ಭೀಕರವಾಗಿದ್ದುದನ್ನು ನೆನೆಸಿಕೊಂಡರೆ, ಜಗತ್ತು ಈಗಾಗಲೇ ಸತ್ತು ಹೋಗಿದೆ. ಮಾನವೀಯತೆಯೆಂಬ ಅರ್ಥವಿಲ್ಲದ ಶಬ್ದ ಸುಮ್ಮನೆ ಒಂದಿಷ್ಟು ಜನರ ಬಾಯಲ್ಲಿ ಹರಿದಾ ಡುತ್ತಿದೆ, ಮಾನವನ ಹೃದಯದ ಶಬ್ದಕೋಶದಿಂದ ಈ ಶಬ್ದವಿರುವ ಪುಟ ಎಂದೋ ಹರಿದು ಹೋಗಿದೆ ಎನಿಸುತ್ತಿದೆ. ಹೆಂಗಸರನ್ನು ಕಂಡು ಕಂಗಳಷ್ಟೇ ಅಲ್ಲ, ಕೈ ಮೈಯೆಲ್ಲಾ ಹರಿಬಿಡುವ ಸಂಸ್ಕೃತಿ ನಮಗೆಲ್ಲಿಂದ ಬಂತೆಂಬುದೇ ಅರ್ಥವಾಗುವುದಿಲ್ಲ. ಹರೆಯದ ಹೆಣ್ಗಳ ನೋಡಿ ಅಷ್ಟೊಂದು ಹಳಿತಪ್ಪುವ ವಿಕೃತಿ ಇದೆಂಥ ಸಂಸ್ಕೃತಿ? ಅದೂ ಕ್ರೌರ್ಯದ ಪರಮಾವಧಿ ಎಂಬಂತೆ ಒಂದು ಹೆಣ್ಣನ್ನು ಥಳಿಸುವಲ್ಲಿ ಮನುಷ್ಯರ ಮಾನಸಿಕ ಅಸ್ಥಿರತೆಯ ಪರಿ ಸಮಾಜದ ಸ್ವಾಸ್ಥ್ಯವನ್ನೇ ಹದಗೆಡಿಸುವ ಮಟ್ಟಿಗೆ ಬೆಳೆದುನಿಂತಿದ್ದು ಹೇಗೆ? ಇವನ್ನೆಲ್ಲ ಪ್ರತಿಭಟಿಸುವ ಗೋಜಿಗೂ ಹೋಗದಿರುವಷ್ಟು ನಾವೆಲ್ಲಾ ದಡ್ಡುಗಟ್ಟಿದ್ದು ಹೇಗೆ?

ಬೀದಿಕಾಮಣ್ಣರ ಕಾಟ ಭಾರತದಲ್ಲಿ ಬೆಳೆದ ಹೆಣ್ಮಕ್ಕಳಿಗೆ ಹೊಸದೇನಲ್ಲ. ನಮ್ಮ ಸಮಾಜದಲ್ಲಿ ಇಂಥ ಹಾದಿಬೀದಿಯ ಅನುಭವಗಳನೆಲ್ಲ ಎಲ್ಲೂ ಹೇಳಿ ಕೊಳ್ಳಬಾರದು. ಸುಮ್ಮನೆ ನಮ್ಮ ಬಗ್ಗೆಯೇ ಜನ ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಭಾವನೆಯಲ್ಲೇ ಹೆಣ್ಣುಮಕ್ಕಳು ಬೆಳೆಯುತ್ತಾರೆ. ಅವರಿಗೆ ಹಿರಿಯರ ಹಿತೋಪದೇಶ ಕೂಡ ಹಾಗೆಯೇ. “ರಸ್ತೆಯಲ್ಲಿ ಯಾರದ್ರೂ ಕಾಡಿದರೆ ಸುಮ್ನೆ ಮನೆಗೆ ಬಾ. ಬಾಯಿ ಮಾಡಲು ಹೋದ್ರೆ ಆಮೇಲೆ ಏನಾದರೂ ಹೆಚ್ಚು ಕಮ್ಮಿ ಮಾಡಿದ್ರೆ ಅವರು?” ಇಂಥ ಹೆದರಿಕೆಗಳೇ ಹರೆಯಕ್ಕೆ ಕಾಲಿಡುವ ಹೆಣ್ಣು ಮಕ್ಕಳ ಪಾಲಿಗೆ. ಆದ್ರೆ ಇಂಥ ಕಂಟಕರು ಸಮಾಜದ ಸಹಜ ಭಾಗ ಎಂದು ಉದಾಸೀನ ಮಾಡುತ್ತ ಸಹಿಸಿಕೊಳ್ಳುವುದು ಮಹಾಪರಾಧ. ಈ ಕಲ್ಪನೆಯನ್ನು ಹದಿವಯ ಹತ್ತುವ ಮೊದಲೇ ಮನಗಾಣಿಸಿದ ಅಮ್ಮನಿಗೆ ನನ್ನ ಸಾವಿರ ಶರಣು. ಬಸ್ಸಲ್ಲಿ ಕಂಡಕಡೆ ಕೈ ಹಾಕುವ, ಬೇಕೆಂತಲೇ ಹಿಂದಿನಿಂದ ಬೀಳುವ ಹೊಲಸು ಮನಗಳಿಗೆ ಸರಿಯಾಗಿ ಹದ ಹಾಕಬೇಕೆನ್ನುವ ರೋಷವೆ ನನ್ನ ಪಾಲಿನ ಗುರಾಣಿ. ಅದರಲ್ಲೂ ತಮ್ಮ ಸಮ ಸಮ ಸೆಡ್ಡು ಹೊಡೆದು ನಡೆವ ಹೆಣ್ಣೆಂದರೆ ಈ ಸಮಾಜಕ್ಕೆ ಅದೇನೋ ಇರಿಸು ಮುರುಸು ಮೊದಲಿಂದಲೂ. ಒಗ್ಗಿಕೊಳ್ಳಲು ಬಹು ಸಮಯವೇ ಬೇಕು. ಆದರೆ ಧೃತಿಗೆಡದೆ ಇಂಥ ಘಟನೆಗಳನ್ನು ಎದುರಿಸಿದ್ದು ನಾನು ಹಲವು ಬಗೆಯಲ್ಲಿ.

ನಾ ಬೆಳೆದ ಚಿಕ್ಕ ಊರಿನಲ್ಲಿ ಕಾಲೇಜ್ಗೆ ಸೈಕಲ್ ತುಳಿದು ಹೋಗುವ ವಿರಳ ತರಳೆಯರಲ್ಲಿ ನಾನೂ ಒಬ್ಬಳು. ನನ್ನ ಸೈಕಲ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಒಂದಿನ ಬೆಲ್ ಮಾಯ, ಇನ್ನೊಂದಿನ ಗಾಲಿಗಳಲ್ಲಿ ಗಾಳಿ ಇಲ್ಲ. ಒಮ್ಮೆ ಸೀಟು ಹರಿದು ಚೂರಾದರೆ ಇನ್ನೊಮ್ಮೆ ಬ್ರೇಕ್ ಲೈನ್ ತುಂಡು. ಒಮ್ಮೆ ಸದಾ ಚುಡಾಯಿಸುತ್ತಿದ್ದ ತಲೆತಿರುಕನೊಬ್ಬ ಕಾಲೇಜಿನಿಂದ ಹಿಂಬಾಲಿಸಿ ನನ್ನ ಸೈಕಲ್ ಅಡ್ಡ ಹಿಡಿದು ನಿಲ್ಲಿಸಿ ಬೆದರಿಸತೊಡಗಿದ. ಹತ್ತೂರು ಕೇಳುವಂತೆ ಜೋರಾಗಿ ಕಿರುಚಿದೆ. ಅಕ್ಕಪಕ್ಕದ ಅಂಗಡಿಯವರು ಓಡಿಬಂದು ವಿಚಾರಿಸುವಷ್ಟರಲ್ಲಿ ಆತ ಪರಾರಿ. ಇನ್ನೊಮ್ಮೆ ನಾವೆಲ್ಲಾ ಸಿನಿಮಾ ಬಿಟ್ಟು ನಗುತ್ತ ಹರಟುತ್ತ ಬರುತ್ತಿರಬೇಕಾದರೆ, ಗೆಳತಿಯೊಬ್ಬಳಿಗೆ ಪಕ್ಕದಲ್ಲಿ ಯಾವೋನೋ ಒಬ್ಬ ಸೈಕಲ್ಲಿನಲ್ಲಿ ಜೋರಾಗಿ ಬಂದು ಚಿವುಟಿ ಹೋದ. ನನಗೆ ಅದಮ್ಯ ಸಿಟ್ಟು. ಅಷ್ಟರಲ್ಲಿ ಅಲ್ಲಿದ್ದ ಅಟೋ ಒಂದನ್ನು ನಿಲ್ಲಿಸಿ ಆತನ ಸೈಕಲ್ ಅಟ್ಟಿಸಿಕೊಂಡು ಹೋಗಿ, ಅದೂ ಕೂಡ ಅವನು ನಮ್ಮ ಮನೆಯ ಮುಂದೆಯೇ ಸಿಕ್ಕಿಬಿದ್ದು, ಅಮ್ಮ, ಅಪ್ಪ ಎಲ್ಲ ಹೊರಬಂದು, ಆ ಗೆಳತಿಯ ಕೈಯಿಂದಲೇ ಅವನಿಗೆ ನಾಲ್ಕು ಬಾರಿಸಿದ್ದೆವು. ಇಂಥ ಒಂದು ಸಂದರ್ಭ ನಾನು ಬೆಂಗಳೂರಿಂದ ಒಮ್ಮೆ ಮನೆಗೆ ಬರುವಾಗ ಬಸ್ಸಲ್ಲಿ ಸ್ವತಹ ಅನುಭವಿಸಿದೆ. ರಾತ್ರಿಯಿಡೀ ಪ್ರಯಾಣ. ಅಕ್ಕಪಕ್ಕದವರು ಸರಿ ಇಲ್ಲದಿದ್ದರೆ ಅದಕ್ಕಿಂತ ನರಕ ಇನ್ನೊಂದಿಲ್ಲ. ಬಸ್ ಹತ್ತಿದೊಡನೆ ನನ್ನ ಸೀಟು ಪರಿಶೀಲಿಸಿದರೆ, ಇದು ಅಗ್ನಿಪರೀಕ್ಷೆಯೇ ಸೈ ಎಂದುಕೊಂಡೆ. ಪಕ್ಕದ ಸೀಟ್ನಲ್ಲೊಬ್ಬ ಹುಡುಗ. ಹಿಂದಿನ ಸೀಟಿನಲ್ಲಿ ಶಿಸ್ತಾಗಿ ಮೇಲ್ವರ್ಗದವರಂತೆ ಬಟ್ಟೆ ಹಾಕಿ ಕುಳಿತ ವ್ಯಕ್ತಿ. ಆತನ ಪಕ್ಕ ತೀರ ಹೆದರಿಕೆ ಎನಿಸುವಂತೆ ಒಬ್ಬ ಗಂಡಸು. ಕಂಡಕ್ಟರ್ನಿಗೆ ಹೇಳಿದರೆ ಬಸ್ ಫುಲ್ ಆಮೇಲೆ ಸೀಟು ಬದಲಿಸಿಕೊಡುವೆ ಎಂದ. ಆಗ ಅನಿಸಿತ್ತು ಎಲ್ಲರಿಗೂ ಇರ್ಲಿ ಮಜಾ ನೋಡುವ ಎಂಬ ಒಳಬಯಕೆಯೆ ಏನೋ ಎಂದು. ಇದೇ ಕಾರಣಕ್ಕೆ “ಅಲರ್ಟ್” ಎಂಬಂತ ಸ್ಥಿತಿಯಲ್ಲಿ ಒಂದು ನಿಮಿಷವೂ ಜಾಗ್ರತೆ ತಪ್ಪದಂತೆ ಕೂತಿದ್ದೆ. ಪಕ್ಕದ ಹುಡುಗ ಏನೋ ಹರಟತೊಡಗಿದ. ಮಾತಾಡುತ್ತ ಮಾತಾಡುತ್ತ, ಆತ ಮೆಡಿಕಲ್ ವಿದ್ಯಾರ್ಥಿ ಎಂದು ತಿಳಿಯಿತು. ನನ್ನ ಇಂಜನಿಯರಿಂಗ್‍ನ ಬಗ್ಗೆ, ಊರು, ಮನೆ, ಕತೆ ಎಂದು ಸಲೀಸಾಗಿ ಮುಜುಗರವಿರದಂತೆ ಹರಟತೊಡಗಿದ ಮೇಲೆ ಸ್ವಲ್ಪ ಹಗುರಾದೆ. ಕೆಲಸಮಯದ ನಂತರ ಹಲುಬಿ ಸುಸ್ತಾಗಿ ನಿದ್ದೆ ಹೋದ ಆತ. ಬೇಡವೆಂದರೂ ನನಗೂ ನಿದ್ರೆ ಒತ್ತರಿಸಿಕೊಂಡು ಬರಹತ್ತಿತ್ತು. ಇನ್ನೇನು ನಿದ್ರೆಗೆ ಜಾರಬೇಕೆನ್ನುವಾಗ ಹಿಂದಿನಿದ ಯಾರೋ ತಡಕಿದಂತೆ. ದಿಗ್ಗನೆದ್ದು ಪಕ್ಕಕ್ಕೆ ತಿರುಗಿದೆ. ಆ ಹುಡುಗ ಗೊರೆಯುತ್ತಿದ್ದ. ಹಿಂದಿನ ಸೀಟಿನತ್ತ ತಿರುಗಿದರೆ ಧಡೂತಿ ಗೋಂಡಪ್ಪನಂತವನೂ ಶಿಸ್ತಿನ ಆಸಮಿಯೋ ನಿದ್ರೆ ಮಾಡುತ್ತಿದ್ದಂತೆಯೇ ಎನಿಸಿತು. ಮತ್ತೆ ಸ್ವಲ್ಪ ಹೊತ್ತಿಗೆ ಅದೇ ಅನುಭವ. ಈಗ ರೊಚ್ಚಿಗೆದ್ದು ಕೂಗಿ ರಂಪ ಮಾಡಬೇಕೆನಿಸಿತು. ಆದರೆ ಕುಕೃತ್ಯ ಯಾರದ್ದೆಂದು ಖಾತ್ರಿಯಿರಲಿಲ್ಲ. ಹಾಗಾಗಿ ಈ ಬಾರಿ ಯೋಚಿಸಿ ಮತ್ತೆ ನಿದ್ರೆಗೆ ಜಾರುತ್ತಿರುವಂತೆ ನಟಿಸಿದೆ. ಹಿಂದಿಂದ ಮತ್ತೆ ಕೈ. ಗಬಕ್ಕನೆ ಬಗ್ಗಿ ಆ ಅನಾಮಿಕ ಕೈ ಗಟ್ಟಿ ಹಿಡಿದುಕೊಂಡೆ. ನನ್ನ ಉಗುರುಗಳಿಂದ ಸಾಧ್ಯವಾದಷ್ಟು ಬಲ ಹಾಕಿ ಜೋರಾಗಿ ಪರಚಿದೆ. ಆ ಕೈ ಮತ್ತೆ ಸರಕ್ಕನೆ ಹಿಂದೆಗೆದುಕೊಂಡಿತು. ಇನ್ನೊಮ್ಮೆ ಬರಲಿಲ್ಲ. ಇನ್ನೊಮ್ಮೆ ಇಂಥದ್ದೇ ಅನುಭವ. ಹಿಂದಿನಿಂದ ಮೆಲ್ಲಗೆ ಕಾಲುಗಳನ್ನು ಮುಂದೆ ತಂದು ಮೀನಖಂಡ ಸವರುವ ಶೂರರು. ಹೀಗೆ ಕಾಲು ಮುಂಬರುವ ಸಂದರ್ಭ ಕಾದು ಸರಕ್ಕನೆ ಎದ್ದು ಚಪ್ಪಲಿಗಳಿಂದ ಜೋರಾಗಿ ಮೆಟ್ಟಿದ್ದೆ. ಒಮ್ಮೆ ಜಾತ್ರೆಯೊಂದರಲ್ಲಿ ನಾನು ನಮ್ಮಪ್ಪ ಇಬ್ಬರೂ ಸೇರಿ ಇಂಥದ್ದೇ ಜಾರುವ ಕೈಗಳ ಒಡೆಯನೊಬ್ಬನನ್ನು ಜಗ್ಗಿ ನಿಲ್ಲಿಸಿ ರಪರಪ ಥಳಿಸಿದ್ದೆವು. ಬಸ್ಸು, ಜನಜಂಗುಳಿಗಳಲ್ಲಿ ಇಂಥ ಅನುಭವಗಳಾದಗ ಅದರಲ್ಲೂ ಆಗಷ್ಟೇ ದೈಹಿಕ ಬದಲಾವಣೆಗಳಿಗೆ ಒಗ್ಗಿಕೊಳುತ್ತಿದ್ದ ದಿನಗಳಲ್ಲಿ, ಇಂಥವೆಲ್ಲ ದೇಹದಿಂದ ಮೆದುಳಿಗೆ ಸರಕ್ಕನೆ ರವಾನೆಯಾಗುತ್ತಿರಲಿಲ್ಲ. ಆದರೆ ಏನೋ ಅಸಹ್ಯ ಎನಿಸುತ್ತಿತ್ತು. ಏನೂ ತಪ್ಪಿಲ್ಲದಿದ್ದರೂ ಏನೋ ಏಲ್ಲೊ ತಪ್ಪಾಗಿದೆ ಎನಿಸುತ್ತಿತ್ತು. ದೊಡ್ಡವಳಾಗುತ್ತ, ಹರಿಬಿಡುವ ಹೊಲಸುಮನಗಳ ಅರಿವು ಹರವಾಗತೊಡಗಿದಂತೆ ರೋಷವೂ ಒಗ್ಗೂಡತೊಡಗಿತು. ತಿರುಗಿಬಿದ್ದು ಝಾಡಿಸುವ ಒಂದು ಸಂದರ್ಭವನ್ನೂ ಅಲ್ಲಿಂದ ಬಿಟ್ಟುಕೊಡಲಿಲ್ಲ. ರಂಪ ಮಾಡಿಯೋ ಇಲ್ಲ ತಣ್ಣಗೆ ಬರೆ ಎಳೆವಂತೆ ಉತ್ತರವನ್ನೂ ಕೊಟ್ಟೇ ಬಸ್ ಇಳಿಯುವುದು ರೂಢಿಯಾಯಿತು. ಅಲ್ಲಿಂದ ಒಂದು ದಿನವೂ ಮನಸ್ಸಿಗೆ ಕಿರಿಕಿರಿಯಾಗಲಿಲ್ಲ.

ಇಂದು ನನ್ನಿಂದ ಬಡಿಸಿಕೊಂಡವ ಮುಂದೆ ಇನ್ನೊಬ್ಬಳಿಗೆ ಕೈ ಹಾಕುವ ಮುಂಚೆ ಯೋಚಿಸುವನೆನೊ ಎಂಬ ಸಮಾಧಾನ. ಇಂಥ ವಿಕೃತರ ಮನದಲ್ಲಿನ ರಾಕ್ಷಸತ್ವವನ್ನು ಪ್ರತಿಭಟಿಸಿದರೆ ಒಂದು ಸ್ವಲ್ಪವಾದರೂ ಹದ್ದುಬಸ್ತಿನಲ್ಲಿಡಬಹುದೆನೊ. ಪ್ರತಿ ಬಾರಿ ಛೇಡಿ ದಾಗಲೂ ಸಹಿಸಿಕೊಂಡಿದ್ದರೆ, ಹುಡುಗಿಯರು ಮರ್ಯಾದೆಗೆ ಹೆದರಿ ಬಾಯಿಮುಚ್ಚಿ ಕೊಂಡಿದ್ದರೆ, ಅವರ ಕುಕೃತ್ಯಕ್ಕೆ ನಾವೇ ಕುಮ್ಮಕ್ಕು ಕೊಟ್ಟಂತೆ ಅಲ್ಲವೇ? ಇಂದು ಬಾಯಲ್ಲಿ ಕೊಳಕು ಮಾತಾಡುವವ ನಾಳೆ ಕಂಡಲ್ಲಿ ಕೈ ಹಾಕುವವನಾಗಿ ಮುಂದೊಮ್ಮೆ ಬಲಾತ್ಕಾರಿಯೂ ಆಗಿ ಬೆಳೆಯಬಹುದೆನೊ. ಇದು ನಮ್ಮ ಆತ್ಮಗೌರವದ ರಕ್ಷಣೆಯ ಜೊತೆಗೆ ಸಮಾಜ ಸುಧಾರಣೆ ಕೂಡ. ದೆಹಲಿಯ ದುರುಳರು ಮುಂಚೆಯೇ ಹೀಗೆ ಎಷ್ಟು ಜನರನ್ನು ಚುಡಾಯಿಸಿದ್ದರೊ. ಅವರಲ್ಲಿ ಹತ್ತಾರು ಹುಡುಗಿಯರಿಂದ ಒಂದಷ್ಟು ಬಾರೀ ಹೊಡೆಸಿಕೊಂಡಿದ್ದರೆ ಅವರೊಳಗಿನ ರಾಕ್ಷಸ ಇಷ್ಟು ಬೃಹದಾಕಾರ ಬೆಳೆಯುತ್ತಿರಲಿಲ್ಲವೆನೊ.

 

‍ಲೇಖಕರು G

24 December, 2012

12 Comments

  1. bharathi

    ನಿಮ್ಮ ಅಭಿಪ್ರಾಯ ನನ್ನದು ಕೂಡಾ ವೈಶಾಲಿ …

  2. Sowmya

    I do agree Vaishali……

  3. bhagyashree

    ನಾನು ಬಸ್ನಲ್ಲಿ ಪ್ರಯಾಣ ಮಾಡುವಾಗ ಸ್ವಲ್ಪ ದಪ್ಪದಾದ ಸೇಫ್ಟಿ ಪಿನ್ ನನ್ನು ಜೊತೆಗೆ ಇಟ್ಟುಕೊಂಡಿರುತ್ತೇನೆ ,ಸರಿಯಾದ ಸಮಯಕ್ಕೆ ಸರಿಯಾಗಿ ಅದನ್ನು ಚುಚ್ಚುತ್ತೇನೆ ಉಹ್ಹು ತುಂಬಾ ಆಕ್ರೋಶದಲ್ಲೇ ಹೆಟ್ಟುತ್ತೆನೆ…

  4. Roopa

    olleya kelasa madiddeera . ee dharya ellaralloo ukkabeku

  5. samyuktha

    olleya lekhana!

  6. Shama Nandibetta

    ಪ್ರಳಯ ಅಂದ್ರೆ ಇದೇ ಅಲ್ಲವೇ? howdu..

  7. Sree

    completely agree!

  8. Sindhu

    Vai..
    in full agreement! last para needs to be underlined.
    ಇಂದು ನನ್ನಿಂದ ಬಡಿಸಿಕೊಂಡವ ಮುಂದೆ ಇನ್ನೊಬ್ಬಳಿಗೆ ಕೈ ಹಾಕುವ ಮುಂಚೆ ಯೋಚಿಸುವನೆನೊ ಎಂಬ ಸಮಾಧಾನ. ಇಂಥ ವಿಕೃತರ ಮನದಲ್ಲಿನ ರಾಕ್ಷಸತ್ವವನ್ನು ಪ್ರತಿಭಟಿಸಿದರೆ ಒಂದು ಸ್ವಲ್ಪವಾದರೂ ಹದ್ದುಬಸ್ತಿನಲ್ಲಿಡಬಹುದೆನೊ. ಪ್ರತಿ ಬಾರಿ ಛೇಡಿ ದಾಗಲೂ ಸಹಿಸಿಕೊಂಡಿದ್ದರೆ, ಹುಡುಗಿಯರು ಮರ್ಯಾದೆಗೆ ಹೆದರಿ ಬಾಯಿಮುಚ್ಚಿ ಕೊಂಡಿದ್ದರೆ, ಅವರ ಕುಕೃತ್ಯಕ್ಕೆ ನಾವೇ ಕುಮ್ಮಕ್ಕು ಕೊಟ್ಟಂತೆ ಅಲ್ಲವೇ? ಇಂದು ಬಾಯಲ್ಲಿ ಕೊಳಕು ಮಾತಾಡುವವ ನಾಳೆ ಕಂಡಲ್ಲಿ ಕೈ ಹಾಕುವವನಾಗಿ ಮುಂದೊಮ್ಮೆ ಬಲಾತ್ಕಾರಿಯೂ ಆಗಿ ಬೆಳೆಯಬಹುದೆನೊ. ಇದು ನಮ್ಮ ಆತ್ಮಗೌರವದ ರಕ್ಷಣೆಯ ಜೊತೆಗೆ ಸಮಾಜ ಸುಧಾರಣೆ ಕೂಡ. ದೆಹಲಿಯ ದುರುಳರು ಮುಂಚೆಯೇ ಹೀಗೆ ಎಷ್ಟು ಜನರನ್ನು ಚುಡಾಯಿಸಿದ್ದರೊ. ಅವರಲ್ಲಿ ಹತ್ತಾರು ಹುಡುಗಿಯರಿಂದ ಒಂದಷ್ಟು ಬಾರೀ ಹೊಡೆಸಿಕೊಂಡಿದ್ದರೆ ಅವರೊಳಗಿನ ರಾಕ್ಷಸ ಇಷ್ಟು ಬೃಹದಾಕಾರ ಬೆಳೆಯುತ್ತಿರಲಿಲ್ಲವೆನೊ.

  9. Anuradha.rao

    ನಿಮ್ಮ ಮೌನ ಪ್ರತಿಭಟನೆ ಎಲ್ಲಾ ಹೆನ್ನುಮಕ್ಕಳಲ್ಲೂ ಜಾಗೃತವಾಗಬೇಕು …ಬಸ್ಸಿನಲ್ಲಿ ನಿಮಗೆ ಆದ ಅನುಭವ ಅನೇಕ ಹೆಣ್ಣು ಮಕ್ಕಳದ್ದು …

  10. Aparna Rao..

    ಒಂದು ವಿಷಾದದ ವಿಷಯವೆಂದರೆ ಎಲ್ಲ ಹೆಣ್ಣುಮಕ್ಕಳೂ ಈ ಧೈರ್ಯ ತೋರಿಸುವಷ್ಟು ಮುಂದುವರೆದಿಲ್ಲವೆಂಬುದು … ಒಳಗೊಳಗೇ ಹಿಂಸೆ ಇಂದ ಮುದುಡುವ ಮೊಗ್ಗುಗಳೇ ಹೆಚ್ಚು.

  11. Shobha

    ಒಳ್ಳೆಯ ಲೇಖನ ವೈಶಾಲಿ. ಸಿನೆಮಾ ನೋಡಲು ಹೋಗುವಾಗ ಸೇಫ್ಟಿ ಪಿನ್ ಇಟ್ಟುಕೊಂಡು ಹೋಗುವುದನ್ನು ನಮಗೆ ಹೇಳಿಕೊಟ್ಟಿದ್ದು ನಮ್ಮ ಚಿಕ್ಕಮ್ಮ. ವಿಕೃತರ ಮನದಲ್ಲಿನ ರಾಕ್ಷಸತ್ವವನ್ನು ಪ್ರತಿಭಟಿಸುವ ಧೈರ್ಯವನ್ನು ತುಂಬುವವರು ಒಬ್ಬರು ಎಲ್ಲಾ ಹೆಣ್ಣುಮಕ್ಕಳ ಜೀವನದಲ್ಲೂ ಅತಿ ಅವಶ್ಯ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading