ಗೋಪಾಲ ವಾಜಪೇಯಿ ಕಾಲಂ : ಹಿಂದಕ್ಕೆ ‘ದೂಡಿ’ದವರು…

ಸುಮ್ಮನೇ ನೆನಪುಗಳು- 28

ಮೊದಲ ನಾಟಕದಿಂದಲೇ ‘ಅಭಿನಯ ಭಾರತಿ’ ದೊಡ್ಡ ಪ್ರಮಾಣದಲ್ಲಿ ಜನರ ಮೆಚ್ಚುಕೆ ಪಡೆಯಿತೇನೋ ನಿಜ. ಆದರೆ ಆ ಮೆಚ್ಚುಕೆಯನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕಲ್ಲ… ಅದು ಗುರುತರ ಕಾರ್ಯ. ಹಾಗಾಗಬೇಕೆಂದರೆ ತಂಡ ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಬೇಕು. ಅದಕ್ಕೂ ಮೊದಲು ಸದೃಢವಾಗಿ ನಿಲ್ಲಬೇಕು. ಅದಕ್ಕೆ ಅನೇಕ ಕೈಗಳು ಕೂಡಬೇಕು. ತಂಡದಲ್ಲಿದವರು ನಾವೇ ಮೂರು ಜನ : ಎಂಕ, ನಾಣಿ, ಶೀನ… ”ಬನ್ನಿ, ನಾಟಕ ಆಡೋಣ,” ಎಂದು ಕರೆದರೆ ”ನನಗೆ ಮುಖ್ಯ ಪಾತ್ರವಿದ್ದರೆ ಹೇಳಿ. ಬರುತ್ತೇನೆ…” ಎನ್ನುತ್ತಿದ್ದ ನಟರೇ ಜಾಸ್ತಿ. ನಾಲ್ಕು ಜನರ ಕಣ್ಣಿಗೆ ಬೀಳುವಂಥ ಪಾತ್ರ ಮಾಡಬೇಕು… ನಾಲ್ಕು ಜನರ ಶಹಬ್ಬಾಸಗಿರಿ ಗಿಟ್ಟಿಸಬೇಕು… ಎಂಬ ಆಸೆ ಇರುವುದು ತಪ್ಪಲ್ಲ. ಅಂಥ ಆಸೆಯಿಂದ ತಾನೇ ನಾವು ಕೂಡ ರಂಗಭೂಮಿಗೆ ಬಂದದ್ದು? ಆದರೆ, ಕೇವಲ ‘ಬಣ್ಣ ಹಚ್ಚಿಕೊಳ್ಳುವ ಮುಖ’ಗಳಿಂದ ನಾಟಕವಾಗುವುದಿಲ್ಲ ; ತಂಡದ ಸಂಘಟನೆಯೇ ಮುಂತಾಗಿ ನೇಪಥ್ಯದಲ್ಲಿ ‘ದುಡಿಯುವ ಕೈ’ಗಳೂ ಬೇಕಾಗುತ್ತವೆ ಎಂಬುದನ್ನು ಆಗಿನ ಬಹುತೇಕ ರಂಗಕರ್ಮಿಗಳಿಗೆ ಯಾರೂ ತಿಳಿಸಿಕೊಟ್ಟಿರಲಿಲ್ಲ…

ನಾಟಕ ತಂಡದ ಸಂಘಟನೆ ಎಂಬುದು ಒಂದು ರೀತಿಯಲ್ಲಿ ಪಲ್ಲಕ್ಕಿ ಹೊರುವ ಕೆಲಸ. ಎಲ್ಲರೂ ‘ಉತ್ಸವ ಮೂರ್ತಿ’ಗಳಾಗಿ ಪಲ್ಲಕ್ಕಿಯಲ್ಲಿ ಕೂರಲು ಬಯಸುವವರೆ… ಸಂಘಟಕರ ಹೆಗಲ ಭಾರವನ್ನು ಒಂದಿಷ್ಟಾದರೂ ಕಡಿಮೆ ಮಾಡೋಣ ; ಒಂದಿಷ್ಟು ನಾವೂ ಹೆಗಲು ಕೊಡೋಣ ಎಂದು ಮುಂದೆ ಬರುವಂಥವರು ಇಲ್ಲವೇ ಇಲ್ಲವೆನ್ನುವಷ್ಟು ಕಮ್ಮಿ. ಈಗಲೂ ಸ್ಥಿತಿ ಹಾಗೆಯೇ ಇದೆಯೋ ಏನೋ… !

ಮೂವತ್ತು-ನಲವತ್ತು ವರ್ಷಗಳ ಹಿಂದೆ ರಂಗದ ಹಿಂದಿನ ಕೆಲಸಗಳನ್ನು ಮಾಡುವುದರ ಮೂಲಕವೇ ಹವ್ಯಾಸಿ ರಂಗಭೂಮಿಯಲ್ಲಿ ಪ್ರವೇಶ ಪಡೆಯಬೇಕಿತ್ತು. ನನ್ನನ್ನು ಹಾಗೆ ನೇಪಥ್ಯದ ಕೆಲಸಕ್ಕೆ ದೂಡಿದವರು ವಿರೂಪಾಕ್ಷ ನಾಯಕರು. ತಮ್ಮ ತಾರುಣ್ಯದಲ್ಲಿಯೇ ರಂಗಭೂಮಿಯ ಸೆಳೆತಕ್ಕೆ ಸಿಕ್ಕ ನಾಯಕರು ಒಂದು ರೀತಿಯಲ್ಲಿ ‘ರಂಗಭೂಮಿಯ ಸವ್ಯಸಾಚಿ’ಯೇ. ಧಾರವಾಡದ ‘ಕರ್ನಾಟಕ ಕಲೋದ್ಧಾರಕ ಸಂಘ’ದ ಬೆನ್ನೆಲುಬಾಗಿ ಅವರು ಬಹಳ ಕೆಲಸ ಮಾಡಿದರು. ಅವರದು ಅಖಂಡ ಐವತ್ತು ವರ್ಷಗಳ ಬಹುಮುಖೀ ರಂಗ ಸೇವೆ. ತಾವಷ್ಟೇ ಏಕೆ, ಜತೆಗೆ ಹೆಂಡತಿ-ಮಕ್ಕಳಿಗೂ ರಂಗದೀಕ್ಷೆ ನೀಡಿದ ಮಹಾನುಭಾವ ಅವರು. ಉಳಿದವರು ತಮ್ಮ ಮಕ್ಕಳ ಬಗ್ಗೆ ‘ಅಂಥ ಕೆಲಸದಲ್ಲಿದ್ದಾನೆ, ಇಂಥ ಹುದ್ದೆಯಲ್ಲಿದ್ದಾನೆ’ ಅಂತ ಹೇಳಿಕೊಂಡು ಹೆಮ್ಮೆಪಟ್ಟುಕೊಂಡರೆ, ನಾಯಕರಿಗೆ ತಮ್ಮ ಮಗ ಯಾವ ನಾಟಕದಲ್ಲಿ ಎಂಥ ಪಾತ್ರ ಮಾಡಿದ ಎಂದು ಹೇಳಿಕೊಳ್ಳುವುದರಲ್ಲೇ ಖುಷಿ. ಹೌದು, ನಾಯಕರು ಪಾತ್ರ ಮಾಡಿದ್ದು ಕಡಿಮೆ, ಇತರರಿಂದ ಮಾಡಿಸಿ ನೋಡಿ, ಆನಂದಿಸಿದ್ದೇ ಹೆಚ್ಚು. ಮೊನ್ನೆ ಮೊನ್ನೆಯತನಕ ‘ರಂಗತೋರಣ’ ಎಂಬ ರಂಗಭೂಮಿ ಮಾಸಿಕವನ್ನು ಸಂಪಾದಿಸಿದ ನಾಯಕರನ್ನು ನಾನು ‘ಹವ್ಯಾಸಿ ರಂಗಭೂಮಿಯ ಮಾಹಿತಿ ಕೋಶ’ ಎಂದೇ ಕರೆಯಲಿಚ್ಚಿಸುತ್ತೇನೆ. ಇದೀಗ 85ನೆಯ ವಯಸ್ಸಿನಲ್ಲೂ ನಾಟಕವೆಂದರೆ ಮತ್ತೆ ತರುಣರಾಗಿ ಕುಣಿಯತೊಡಗುತ್ತಾರೆ. ತಮ್ಮ ವಯಸ್ಸನ್ನೂ ಮರೆತು ಮಾತಿಗೆ ಕೂಡುತ್ತಾರೆ.

”ರಂಗದ ಮೇಲೆ ‘ದನಿ’ಯೇರಿಸುವುದಕ್ಕಿಂತ, ರಂಗದ ಹಿಂದೆ ‘ತೋಳೇರಿಸಿ’ ದುಡಿಯುವುದು ಬಹಳ ಮುಖ್ಯ…” ಎಂಬುದನ್ನು ನಾನು ಅರಿತದ್ದು ಈ ನಾಯಕರಿಂದಲೇ.

1975ರಲ್ಲಿ ‘ಕರ್ನಾಟಕ ಕಲೋದ್ಧಾರಕ ಸಂಘ’ ತನ್ನ ಹುಬ್ಬಳ್ಳಿಯ ಶಾಖೆಯನ್ನು ಆರಂಭಿಸಲು ಯೋಚಿಸಿತು. ಆ ಉದ್ದೇಶದಿಂದ ಅದು ಕೈಗೆತ್ತಿಕೊಂಡದ್ದು ಶ್ರೀರಂಗರ ‘ಹುಟ್ಟಿದ್ದು ಹೊಲೆಯೂರು…’ ನಾಟಕವನ್ನು. ಅದರಲ್ಲಿದ್ದ ನಟವರ್ಗದವರೆಲ್ಲ ಹುಬ್ಬಳ್ಳಿಯವರೇ… ನಾನಿನ್ನೂ ‘ಪೈಲಾ ಪಂಚ್ವೀಸ್’ನೊಳಗಿನವ. ನಮ್ಮ ಹಿರಿಯ ಸಹೋದ್ಯೋಗಿ ಧ್ರುವರಾಜ ಮುತಾಲಿಕ ದೇಸಾಯಿಯವರು ಶ್ರೀರಂಗರ ನಾಟಕಗಳ ಭಕ್ತ. ‘ಹುಟ್ಟಿದ್ದು ಹೊಲೆಯೂರು…’ ನಾಟಕಕ್ಕೆ ಅವರದೇ ನಿರ್ದೇಶನ. ಅದೊಂದು ಸಂಜೆ ನನ್ನನ್ನೂ ತಾಲೀಮಿಗೆ ಕರೆದೊಯ್ದರು. ಹೊಸಬನಾದ್ದರಿಂದ ನಾನು ‘ರಂಗದ ಹಿಂದಿನ ಕೆಲಸ’ಕ್ಕೆ ನಿಲ್ಲಬೇಕಾಯಿತು.

ಶಿಬಿರವೊಂದರ ಸಮಾಲೋಚನೆಯಲ್ಲಿ ವಿರೂಪಾಕ್ಷ ನಾಯಕರೊಂದಿಗೆ…

ಆ ಸಂಜೆ ‘ಹುಟ್ಟಿದ್ದು ಹೊಲೆಯೂರು…’ ನಾಟಕದ ಗ್ರಾಂಡ್ ರಿಹರ್ಸಲ್. ಮೇಕಪ್ಪು ಒಂದನ್ನು ಬಿಟ್ಟರೆ ಉಳಿದಂತೆ ಎಲ್ಲವೂ ನಿಜವಾದ ರಂಗಪ್ರಯೋಗವೇ… ಅದನ್ನು ‘ಡ್ರೆಸ್ ರಿಹರ್ಸಲ್’ ಎಂದೂ, ‘ರನ್ ಥ್ರೂ’ ಎಂದೂ ರಂಗಕರ್ಮಿಗಳು ಕರೆಯುವುದುಂಟು. ನನಗೆ ಕೊಟ್ಟಿದ್ದ ಕೆಲಸ ವೇಷಭೂಷ ಮತ್ತು ರಂಗದ ಮೇಲೆ ನಟರ ಜೊತೆ ಇರಬೇಕಾದ ವಸ್ತು-ಉಪಕರಣಗಳ ವ್ಯವಸ್ಥೆ (Costumes and Hand properties). ಅದರಲ್ಲೊಬ್ಬ ಪತ್ರಕರ್ತನ ಪಾತ್ರ ಬರುತ್ತದೆ. ಜುಬ್ಬಾ-ಪಾಯಿಜಾಮ ಆತನ ವೇಷ. ಆತನ ಬಗಲಿಗೊಂದು ತೂಗು ಚೀಲ, ಕೈಯಲ್ಲಿ ನೋಟ್ ಬುಕ್ ಮತ್ತು ಪೆನ್ನು ಹಾಗೂ ಕೊರಳಲ್ಲೊಂದು ಕ್ಯಾಮರಾ…

ಉಳಿದೆಲ್ಲ ಜೋಡಣೆಯಾಗಿತ್ತು. ಆದರೆ ಕ್ಯಾಮರಾ…?! ಆಗ ಅದು ಸಾವಿರಕ್ಕೊಬ್ಬನ ಬಳಿ ಇದ್ದಿರಬಹುದಾದ ಬಹುಮೂಲ್ಯದ ವಸ್ತು. ಹುಡುಕಿದರೆ ಬಾಕ್ಸ್ ಕ್ಯಾಮರಾ ಏನೋ ಸಿಗಬಹುದು. ಆದರೆ,”ಪಕ್ಕಾ ವೃತ್ತಿಪರ ಫೋಟೋಗ್ರಾಫರನ ಬಳಿ ಇರುವಂಥ ಕ್ಯಾಮರಾನೇ ಆಗಬೇಕು…” ಎಂದು ಹಠ ಹಿಡಿದಿದ್ದರು ಆ ಪಾತ್ರ ವಹಿಸಿದ್ದ ಸಂಜೀವ ದೇಶಪಾಂಡೆ (ಇವರ ಬಗ್ಗೆ ಪ್ರತ್ಯೇಕವಾಗಿಯೇ ಬರೆಯಬೇಕು. ಅಂಥ ವರ್ಣರಂಜಿತ ವ್ಯಕ್ತಿತ್ವ ಸಂಜೀವ ದೇಶಪಾಂಡೆಯದು).

ಹತ್ತಾರು ಜನರ ಹತ್ತಿರ ಕೇಳಿ ”ಇಲ್ಲ”ವೆನ್ನಿಸಿಕೊಂಡು ಬಂದ ನಾನು ಕೊನೆಯ ಪ್ರಯತ್ನವೆಂದು ನಮ್ಮ ಪರಿಚಯದ ಫೋಟೋಗ್ರಾಫರ್ ಮನೆಗೆ ಹೋದೆ. ನಾಲ್ಕಾರು ಬಾರಿ ವಿನಂತಿಸಿಕೊಂಡೆ. ಊಹೂಂ… ಆತ ಜಪ್ಪೆನ್ನಲಿಲ್ಲ. ಅವನದೂ ತಪ್ಪಲ್ಲ ಬಿಡಿ… ಯಾರೇ ಆಗಲಿ, ತನ್ನ ವೃತ್ತಿಸಂಬಂಧದ ಮುಖ್ಯ ಉಪಕರಣವನ್ನು ಹಾಗೆಲ್ಲ ಕಡ ಕೊಡಲು ಹೇಗೆ ಸಾಧ್ಯ?

ಇನ್ನೇನು ನಾನು ಅಲ್ಲಿಂದ ಏಳಬೇಕು. ಆತ, ”ಊಂ… ಬೇಕಾದ್ರs…” ಅಂತ ಮಾತು ತುಂಡರಿಸಿದ. ಬೆಟ್ಟದಾಚೆ ಏನೋ ಬೆಳಕು ಕಂಡಂತಾಯಿತು… ಆತನ ಮುಖವನ್ನೇ ನೋಡತೊಡಗಿದೆ…

”ಬೇಕಾದ್ರs ಈಗ ಕ್ಯಾಮರಾದ ಕೇಸ್ ಕೊಡ್ತೀನಿ… ಅದನ್ನಿಟಗೊಂಡು ತಾಲೀಮು ಮಾಡ್ರಿ. ನಾಳೆ ನಾನs ಕ್ಯಾಮರಾ ಸಮೇತ ಬರ್ತೀನಿ… ಆತs…?” ಎಂದ.

ಹೆಚ್ಚು ಜಗ್ಗಿದರೆ ಹರಿಯುತ್ತದೆ. ‘ಹೂಂ’ ಅನ್ನೋದೇ ವಾಸಿ.

-೦-೦-೦-೦-೦-

ಸರಿ. ‘ರನ್ ಥ್ರೂ’ ಶುರುವಾಯಿತು. ನಾನು ಸಂಜೀವ ದೇಶಪಾಂಡೆಗೆ ಕ್ಯಾಮರಾದ ಕೇಸ್ ಕೊಟ್ಟೆ. ಅದನ್ನವರು ಕೊರಳಿಗೆ ಹಾಕಿಕೊಂಡರು. ”ಹಾಕ್ಕೊಂಡಂಗ ಅನಿಸೋದs ಇಲ್ಲಲೋ…? ಅಕ್ಕಡೆ ಇಕ್ಕಡೆ ತೂಗ್ಯಾಡಬಾರ್ದು. ನೋಡಿದವ್ರಿಗೆ ಒಳಗ ಕ್ಯಾಮರಾ ಅದ ಅನ್ನೋ ಫೀಲಿಂಗ್ ಬರಬೇಕು… ಹಂಗ್ ಮಾಡಿಕೊಡು,” ಅಂತ ಕೇಸ್ ವಾಪಸ್ಸು ಕೊಟ್ಟರು.

ಅದು ಆರ್ಡರ್. ನಾನೋ ಜ್ಯೂನಿಯರ್ ಮೋಸ್ಟ್ ರಂಗಕರ್ಮಿ. ಅಂದ ಮೇಲೆ ಅನುಭವಸ್ಥರು ಹೇಳಿದಂತೆ ಕೇಳಲೇಬೇಕು…

ಸಂಜೀವ ದೇಶಪಾಂಡೆಯ ಸೀನ್ ಬಂತು. ನನ್ನ ಮುಂದೆ ಬಾಗಿದರು. ಅವರ ಕೊರಳಿಗೆ ಮಾಲೆಯಂತೆ ಕ್ಯಾಮರಾ ಕೇಸ್ ಹಾಕಿದೆ. ಅದರ ತೂಕ ತೃಪ್ತಿ ತಂದಿರಬೇಕು.

ನನ್ನ ಕಡೆ ಒಮ್ಮೆ ನಗೆ ಬೀರಿ ರಂಗಪ್ರವೇಶ ಮಾಡಿದರು.

ರಂಗ ತಾಲೀಮು ರಂಗೇರಿತ್ತು. ಅದಕ್ಕಿಂತ ಹೆಚ್ಚು ರಂಗನ್ನೇರಿಸಿಕೊಂಡವರು ನಮ್ಮ ಸಂಜೀವ ದೇಶಪಾಂಡೆ. ಅವರು ಯಾವಾಗಲೂ ಹಾಗೆಯೇ. ತುಂಬಾ ಉತ್ಸಾಹದಿಂದಲೇ ರಂಗವನ್ನು ಪ್ರವೇಶಿಸುತ್ತಿದ್ದರು. ಅಲ್ಲಿ ಹೋದ ಮೇಲೆ ಮೈಮರೆತು ಬಿಡುತ್ತಿದ್ದರು. ಇಲ್ಲವೇ ತಾವು ಕನ್ಫ್ಯೂಜ್ ಮಾಡಿಕೊಂಡು ಇತರರನ್ನೂ ಗೊಂದಲಕ್ಕೀಡುಮಾಡಿಬಿಡುತ್ತಿದ್ದರು.

ಆದರೆ ಯಾರೂ ಅವರ ಮೇಲೆ ಕೋಪಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. ಅಷ್ಟು ಮುಗ್ಧ ಮನುಷ್ಯ ಆತ.

ಅವತ್ತೂ ಹಾಗೆ ಆಯಿತು. ಪ್ರಮುಖ ಪಾತ್ರಧಾರಿಯೊಂದಿಗೆ ಮಾತಾಡುತ್ತ ಕೆಲವು ಟಿಪ್ಪಣಿ ಮಾಡಿಕೊಂಡು, ಆ ಪತ್ರಕರ್ತ, ಒಂದೆರಡು ಫೋಟೋಗಳನ್ನು ತೆಗೆದುಕೊಳ್ಳಬೇಕು. ಅದು ಸನ್ನಿವೇಶ. ಆದರೆ, ತಾವು ಕೊರಳಲ್ಲಿ ಹಾಕಿಕೊಂಡದ್ದು ಕೇವಲ ಕ್ಯಾಮರಾದ ಖಾಲಿ ಕೇಸು ಎಂಬುದನ್ನು ಮರೆತೇಬಿಟ್ಟರು ಆ ಪುಣ್ಯಾತ್ಮ.

ವಿಂಗಿನಲ್ಲಿ ನಿಂತು ನೋಡುತ್ತಲೇ ಇದ್ದೆ. ಪಾತ್ರದ ಆವೇಶದಲ್ಲಿ ದೇಶಪಾಂಡೆ ನಾನು ಒತ್ತಿ ಇಟ್ಟಿದ್ದ ಕ್ಯಾಮರಾ ಕೇಸಿನ ಬಟನ್ನನ್ನು ಓಪನ್ ಮಾಡಿಬಿಟ್ಟರು ! ತಗೋ, ಅವರ ಪಾದದ ಮೇಲೆ ಒಂದು ರಿನ್ ಗಾತ್ರದ ಕಲ್ಲು ಧೊಪ್ಪೆಂದು ಬಿದ್ದು ಶುರುವಾಯಿತು ಕುಯ್ಯೊಂ ಮರ್ರೋ…

ನಿಂತಲ್ಲಿಯೇ ಕುಸಿದು ಕೂತು ಪೆಟ್ಟು ಬಿದ್ದ ಪಾದವನ್ನು ಒತ್ತಿ ಹಿಡಿದುಕೊಂಡು ಸಂಕಟಪಡತೊಡಗಿದರು ದೇಶಪಾಂಡೆ. ತಾಲೀಮು ನಿಂತು ಹೋಯಿತು. ಎಲ್ಲರೂ ರಂಗದ ಮೇಲೆ ಓಡಿಬಂದರು. ಆ ಕಲ್ಲನ್ನು ನೋಡಿದ ವಿರೂಪಾಕ್ಷ ನಾಯಕರು ನನ್ನತ್ತ ಕಣ್ಣು ತಿರುಗಿಸಿದರು. ಇನ್ನೇನು ಹೊಡೆದೇಬಿಡುತ್ತಾರೆ ಎನ್ನುವಂತಿತ್ತು ಅವರ ನೋಟ. ನಾನು ಪೂರ್ಣ ಬೆವೆತುಬಿಟ್ಟೆ…

ಅವಸರದಿಂದ ನನ್ನ ಬಳಿ ಬಂದ ನಾಯಕರು ಭುಜದ ಮೇಲೆ ಕೈ ಇರಿಸಿ, ಒತ್ತಿ ಆ ಕಡೆ ಹೋದರು. ಅಷ್ಟೇ ಸಮಾಧಾನ ನನಗೆ. ಅವರೇನು ಮಾಡುತ್ತಾರೆಂದು ನೋಡಿದರೆ, ನಾಯಕರು ಒಂದು ಬಾಕ್ಸ್ ತಂದರು. ”ಬಾ…” ಎನ್ನುತ್ತ ಸಂಜೀವ ದೇಶಪಾಂಡೆಯ ಕಡೆ ನಡೆದರು. ಅಲ್ಲಿ ಕೂತು ಬಾಕ್ಸನ್ನು ಬಿಚ್ಚಿದರು. ನಾನು ಅಚ್ಚರಿಯಿಂದ ನೋಡುತ್ತಲೇ ಇದ್ದೆ. ಅದರಲ್ಲಿ ಪ್ರಥಮ ಚಿಕಿತ್ಸೆಯ ಎಲ್ಲ ಸಾಮಗ್ರಿಗಳಿದ್ದವು.

ಜೊತೆಗೆ ಒಂದು ಮೊಂಬತ್ತಿ, ಒಂದು ಬೆಂಕಿಪೊಟ್ಟಣ, ಸೂಜಿ, ದಾರದ ರೀಲು ಇತ್ಯಾದಿ…

ರಂಗದ ಮೇಲಿರುವವ ಮೈಮರೆತರೂ ಪರದೆಯ ಹಿಂದಿರುವವ ಮೈಮರೆಯಬಾರದು, ಹಾಗೂ, ಎಂಥ ಸಂದರ್ಭಕ್ಕೂ ಸಿದ್ಧನಾಗಿರಬೇಕು ಎಂಬ ಪಾಠವನ್ನು ನಾನವತ್ತು ನಾಯಕರಿಂದ ಕಲಿತಿದ್ದೆ.

-೦-೦-೦-೦-೦-

ರಂಗದ ಮೇಲೆ ಮೈಮರೆತುದರಿಂದ ಆದ ಇನ್ನೊಂದು ಅವಘಡದ ಪ್ರಸಂಗವನ್ನು ನಿಮಗೆ ಹೇಳಲೇಬೇಕು.

‘ಅಭಿನಯ ಭಾರತಿ’ ನಾಟಕ ತಂಡವನ್ನು ಚಟುವಟಿಕೆಯಿಂದ ಇಡುವ ಪ್ರಯತ್ನವಾಗಿ ನಾವು ‘ಹೀಂಗೊಂದೂರಾಗ ಒಬ್ಬ ರಾಜಾ…’ ನಾಟಕದ ಪ್ರಯೋಗಗಳನ್ನು ಬೇರೆ ಬೇರೆ ಕಡೆ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಂಡೆವು. (ಈ ನಾಟಕದ ಬಗ್ಗೆ ಈ ಹಿಂದೆಯೇ ನಿಮಗೆ ವಿವರಿಸಿದ್ದೇನೆ.) ಹೇಗೂ ‘ತಿಂಗಳಿಗೊಂದು ರಂಗಪ್ರಯೋಗ’ ಎಂಬ ಯೋಜನೆಯನ್ನು ಹಾಕಿಕೊಂಡಿದ್ದೆವಲ್ಲ… ನಮ್ಮ ದೇಶದ ಅದ್ಭುತ ರಂಗ ಪ್ರತಿಭೆ ಎನಿಸಿದ ನಟ ಉತ್ಪಲ ದತ್ ಬರೆದ ಮೂಲ ಬಂಗಾಳಿ ನಾಟಕ ‘ಎಬಾರ್ ರಾಜಾರ್ ಪಾಲಾ..’ ಕನ್ನಡ ರೂಪಾಂತರ ಈ ‘ಹೀಂಗೊಂದೂರಾಗ ಒಬ್ಬ ರಾಜಾ…’ ನಿರ್ದೇಶಕನಾಗಿ ಕನ್ನಡ ರಂಗಭೂಮಿಗೆ ತನ್ನದೇ ಆದ ರೀತಿಯ ಸೇವೆ ಸಲ್ಲಿಸಿದ ಚಿತ್ತರಂಜನ ಚಟರ್ಜೀ ಅವರ ನೆರವಿನಿಂದ ಈ ಕನ್ನಡ ರೂಪಾಂತರವನ್ನು ಮಾಡಿದ್ದ ನನಗೆ ಎಲ್ಲ ಅದರ ಪಾತ್ರಗಳೂ ಚಿರಪರಿಚಿತವೇ. ಹೀಗಾಗಿ ಯಾರೇ ಗೈರುಹಾಜರಾದರೂ ಆತನ ಪಾತ್ರಕ್ಕೆ ನಾನೇ ‘ಬದಲೀ ನಟ’…

ಸಾಮಾನ್ಯವಾಗಿ ‘ಹೀಂಗೊಂದೂರಾಗ ಒಬ್ಬ ರಾಜಾ…’ ನಾಟಕದಲ್ಲಿ ನಾನು ಚೌರದ ಶಿವಣ್ಣ ಎಂಬ ಪಾತ್ರವನ್ನು ವಹಿಸುತ್ತಿದ್ದೆ. ನಾಪಿತನಾದ ಈ ಶಿವಣ್ಣ ಒಂದು ಕಂಪನಿಯಲ್ಲಿ ನಟನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಅದೇ ಕಂಪನಿಯ ವೆಂಕೂ ಎಂಬಾತ ಆ ರಾಜ್ಯದ ದೊರೆಯಾದಾಗ ಚೌರದ ಶಿವಣ್ಣನೂ ಒಬ್ಬ ಮಂತ್ರಿಯಾಗುತ್ತಾನೆ. ಆದರೆ ಮುಂದೊಮ್ಮೆ ದೊರೆಯ ಧೋರಣೆ ಆತನಿಗೆ ಸರಿಬರದೇ ಆತನನ್ನು ಟೀಕಿಸತೊಡಗುತ್ತಾನೆ. ಇದರಿಂದ ಕೋಪಗೊಂಡ ದೊರೆ ಚೌರದ ಶಿವಣ್ಣನನ್ನು ಆತನ ಚೌರದ ಕತ್ತಿಯಿಂದಲೇ ತಿವಿದು ಕೊಲ್ಲುತ್ತಾನೆ. ಹೀಗೆ ಶಿವಣ್ಣನ ಬೆನ್ನಿಗೆ ದೊರೆ ಚೂರಿ ಹಾಕುವಲ್ಲಿಗೆ ಆ ದೃಶ್ಯ ಮುಗಿಯುತ್ತದೆ.

ಈ ದೃಶ್ಯದಲ್ಲಿ ನಾನು ಸಾಮಾನ್ಯವಾಗಿ ಒಂದು ಮೊಂಡುಗತ್ತಿಯನ್ನು ಬಳಸುತ್ತಿದ್ದೆ. ಆಯಾ ಪ್ರಯೋಗದ ಮಟ್ಟಿಗೆ ಅದನ್ನು ಪರಿಚಯದ ನಾಪಿತನಿಂದ ತರುವುದು ವಾಡಿಕೆ. ಆದರೆ ಅದೊಂದು ದಿನ ಈ ವಸ್ತು ಜೋಡಣೆಯ ಕೆಲಸಕ್ಕೆ ನಿಂತಾತ ಹೊಸ ಹುಡುಗ. ಆತ ತಂದ ಚೌರದ ಕತ್ತಿ ಬೇರೆ ಯಾವುದೋ ನಾಪಿತನಿಂದ ಪಡೆದದ್ದು.

ನಾನದರ ಕಡೆ ಗಮನ ಕೊಟ್ಟಿರಲಿಲ್ಲ. ಆ ನಾಟಕದಲ್ಲಿ ದೊರೆ ವೆಂಕೂನ ಪಾತ್ರ ಮಾಡುತ್ತಿದ್ದವರು ಅರವಿಂದ ಕುಲಕರ್ಣಿ. ಆವೊತ್ತು ಅವರಿಗೆ ಅದೇನು ಆವೇಶವೋ… ಆ ಚೌರದ ಕತ್ತಿಯನ್ನು ನನ್ನ ಬೆನ್ನಿಗೆ ಇರಿಯುವಂತೆ ನಟಿಸುವಾಗ ಅದನ್ನು ಪೂರ್ತಿ ಹಿರಿದಿದ್ದಾರೆ. ನಟನೆಯ ಭರದಲ್ಲಿ ಅದು ತಾಗಿ, ನನ್ನ ಬಲ ಮೊಳಕೈಗೆ ಗಾಯವಾಗಿದೆ. ರಕ್ತ ಸುರಿಯತೊಡಗಿದೆ. ಆ ನೋವು, ಸಂಕಟಗಳನ್ನು ತಡೆಯಲಾರದೇ ನಾನು ‘ಅಯ್ಯೋ’ ಎಂದು ಕೂಗಿಕೊಂಡದ್ದು ಆ ಸಂದರ್ಭದ ಹಿನ್ನೆಲೆ ಸಂಗೀತ ಮತ್ತು ಪ್ರೇಕ್ಷಕರ ಕರತಾಡನದಲ್ಲಿ ಕರಗಿ ಹೋಗಿದೆ…

ಆ ನೋವನ್ನು ನುಂಗಿಕೊಳ್ಳುತ್ತ ಗಾಯವನ್ನು ಒತ್ತಿ ಹಿಡಿದುಕೊಂಡೇ ನಾನು ವಿಂಗು ಸೇರಿದೆ.

ಅಲ್ಲಿಯೇ ನಿಂತಿದ್ದ ಆಪದ್ಬಾಂಧವ ಗಜಾನನ ಮಹಾಲೆಯ ಪ್ರಸಂಗಾವಧಾನವನ್ನು ಮೆಚ್ಚಲೇಬೇಕು… ಕೂಡಲೇ ಅದೇನೋ ನಂಜುನಿರೋಧಕಗಳನ್ನು ಮೆತ್ತಿ, ಶುಭ್ರ ಬಟ್ಟೆ ಸುತ್ತಿ, ನನ್ನನ್ನು ಸಮೀಪದ ಕ್ಲಿನಿಕ್ಕಿಗೆ ಕರೆದೊಯ್ದಿದ್ದಾರೆ ಆ ಹಿರಿಯ. ಮೊಳಕೈಗೆ ಆದದ್ದು ಸ್ವಲ್ಪ ಆಳವಾದ ಗಾಯವೇ. ಪರೀಕ್ಷಿಸಿದ ಡಾಕ್ಟರು ಗಾಯವನ್ನು ತೊಳೆದು, ನಂಜುನಿರೋಧಕ ಚುಚ್ಚುಮದ್ದನ್ನು ನೀಡಿ ಒಂದಷ್ಟು ಮಾತ್ರೆಗಳನ್ನು ಬರೆದುಕೊಟ್ಟಿದ್ದಾರೆ.

ಈಗಲೂ ಬಲ ಮೊಳಕೈಯಲ್ಲಿ ಆ ಗಾಯದ ಕಲೆ ಇದೆ. ಅದನ್ನು ನೋಡಿಕೊಂಡಾಗಲೆಲ್ಲ ಅಲ್ಲಿ ಅರವಿಂದ ಕುಲಕರ್ಣಿಯ ಮುಖ ಕಾಣುತ್ತದೆ.

ನಾಟಕೋತ್ಸವ ಉದ್ಘಾಟನೆ : ಹೆಗ್ಗೋಡಿನ ಕೆ. ವಿ. ಸುಬ್ಬಣ್ಣ ದೀಪ ಬೆಳಗುವಾಗ, ಎದುರು ಬಾಗಿ ನಿಂತಿರುವವರೆ ಸಂಜೀವ ದೇಶಪಾಂಡೆ.

-೦-೦-೦-೦-೦-

ರಂಗದ ಮೇಲಿರುವವ ಮೈಮರೆತರೂ ಪರದೆಯ ಹಿಂದಿರುವವ ಮೈಮರೆಯಬಾರದು ಎಂಬ ಪಾಠವನ್ನಾಗಲೇ ನಾಯಕರಿಂದ ಕಲಿತಿದ್ದೆನಷ್ಟೇ. ಒಬ್ಬ ರಂಗಕರ್ಮಿಗೆ ‘ಶಿಸ್ತು’, ‘ಸಿದ್ಧತೆ’ ಮತ್ತು ‘ಬದ್ಧತೆ’ಗಳು ಎಷ್ಟು ಮುಖ್ಯ ಎಂಬುದನ್ನು ನಾನು ಅರಿತುಕೊಂಡದ್ದು ಅದೇ ವಿರೂಪಾಕ್ಷ ನಾಯಕರಿಂದ.

ರಂಗಕರ್ಮಿಯಾದವನಿಗೆ ‘ಬದ್ಧತೆ’ ಇರದಿದ್ದರೆ ಏನಾಗಬಹುದು?

ಈ ಮುಂದಿನ ಪ್ರಸಂಗ ಈ ಪ್ರಶ್ನೆಗೆ ಸೂಕ್ತ ಉತ್ತರವಾಗಬಹುದು.

‘ಹೀಂಗೊಂದೂರಾಗ ಒಬ್ಬ ರಾಜಾ…’ ನಾಟಕದ ಬಗ್ಗೆ, ಬೇರೆ ಬೇರೆ ಕಡೆ ಅದರ ಪ್ರಯೋಗಗಳನ್ನು ನೀಡುವ ನಮ್ಮ ಯೋಜನೆಯ ಬಗ್ಗೆ ನಿಮಗೆ ಈ ಮೊದಲೊಮ್ಮೆ ಹೇಳಿದೆನಲ್ಲ…

ಹುಬ್ಬಳ್ಳಿಯಲ್ಲಿ ಈ ನಾಟಕವನ್ನು ನೋಡಿದ್ದ ಜಮಖಂಡಿಯ ಮಿತ್ರರೊಬ್ಬರು ತಮ್ಮ ಊರಲ್ಲಿಯೂ ಒಂದು ಭಾನುವಾರ ಪ್ರಯೋಗ ಆಗಲಿ ಎಂದು ಬಯಸಿದರು. ಒಂದು ಹೊಸ ತಂಡಕ್ಕೆ ಇದಕ್ಕಿಂತ ಖುಷಿಯ ವಿಚಾರ ಇನ್ನಾವುದಿದ್ದೀತು?

ಸರಿ, ತಾಲೀಮು ಶುರುವಾಯಿತು. ನಾನು ಉಳಿದ ತಯಾರಿ ಮತ್ತು ತಾಲೀಮಿನ ಉಸ್ತುವಾರಿ ವಹಿಸಿಕೊಂಡೆ.

ಇನ್ನೇನು ಎರಡು ದಿನಕ್ಕೆ ಜಮಖಂಡಿಯಲ್ಲಿ ಶೋ… ಕಚೇರಿಯಲ್ಲಿದ್ದ ನನಗೆ ಒಂದು ಫೋನ್ ಕರೆ. ”ಹಲೋ…” ಎಂದೆ.

ಆ ಕಡೆ ನಮ್ಮ ನಾಟಕದ ಮುಖ್ಯ ಪಾತ್ರಧಾರಿ ಅರವಿಂದ ಕುಲಕರ್ಣಿ.

”ಧಾರವಾಡಕ್ಕ ಅಮೋಲ್ ಪಾಲೇಕರ್ ಬರ್ಲಿಕ್ಕತ್ತಾರ…ಅದಕ್ಕs… ”

”ಹೂಂ… ಮುಂದೇನು…?”

”ನನಗ ಜಮಖಂಡಿ ಶೋಕ್ಕ ಬರಲಿಕ್ಕಾಗೂದಿಲ್ಲಾ…”

ನಾನು ಫೋನ್ ಕಟ್ ಮಾಡಿದೆ. ಅದು ಮತ್ತೆ ರಿಂಗಣಿಸಿತು.

”ಹಲೋ…”

”ಮತ್ತs… ನೀವು ಹ್ಯಾಂಗ್ ಮಾಡ್ತೀರಿ…?” ಅಂತ ಅದೇ ಅರವಿಂದ ಕುಲಕರ್ಣಿ.

”ಅದೆಲ್ಲಾ ನಿಮಗ್ಯಾಕ ಬೇಕು? ಬರಲಿಕ್ಕಾಗೂದಿಲ್ಲಾ ಅಂದ್ರೆಲ್ಲಾ… ಮುಗೀತು…”

ನಾನು ಫೋನ್ ಕಟ್ ಮಾಡಿ ರಿಸೀವರ್ ಎತ್ತಿ ಪಕ್ಕಕ್ಕೆ ಇಟ್ಟುಬಿಟ್ಟೆ.

-೦-೦-೦-೦-೦-

ಸ್ವಲ್ಪ ದೂರದ ಊರಿಗಾದರೆ ಹಿಂದಿನ ರಾತ್ರಿಯೇ, ರಿಹರ್ಸಲ್ ಮುಗಿದಮೇಲೆ, ಹಾಗಿಂದ ಹಾಗೆಯೇ ಟೆಂಪೋ ಏರುವುದು ನಮ್ಮ ರೂಢಿ. ಸಾಮಾನು-ಸರಂಜಾಮುಗಳನ್ನು ಏರಿಸಿಕೊಂಡು ಟೆಂಪೋ ಸಿದ್ಧವಾಗಿರುತ್ತಿತ್ತು.

ಅವತ್ತು ಹಾಗೆ ತಡರಾತ್ರಿಯಲ್ಲಿ ಹುಬ್ಬಳ್ಳಿಯಿಂದ ಹೊರಟು ಬೆಳಕು ಹರಿಯುವ ಮುನ್ನವೇ ಜಮಖಂಡಿಯನ್ನು ತಲಪಿದಾಗ ಜನ ಆಗಲೇ ವಾಕಿಂಗಿಗೆ ತೊಡಗಿದ್ದರು. ನಮ್ಮನ್ನು ಎದುರುಗೊಳ್ಳಲು ಸಂಘಟಕರ ಕಡೆಯವರು ಪುರಪ್ರವೇಶ ದ್ವಾರದಲ್ಲೇ ಕಾದು ನಿಂತಿದ್ದರು.

”ಸರs… ಸೊಲ್ಪು ನೀವೊಬ್ರs ಕೆಳಗ ಬರ್ರಿ…” ಅಂತ ದೇಶಾವರಿ ನಗೆ ಬೀರಿದರು.

ಕೆಳಗಿಳಿದ ನನ್ನನ್ನು ಸ್ವಲ್ಪ ದೂರ ಕರೆದುಕೊಂಡು ಹೋದ ಅವರು ‘ನಾಟಕದ ಜಾಗ ಮತ್ತು ಟೈಮು’ ಎರಡೂ ಬದಲಾದ ವಿಚಾರವನ್ನು ಹೇಳಿದರು.

ಅದು ಮತ್ತೊಂದು ಆಘಾತ. ನಾಟಕವನ್ನು ನಾವು ಆಡಬೇಕಾಗಿದ್ದದ್ದು ಒಂದು ಸಿನೆಮಾ ಥೇಟರಿನಲ್ಲಿ…! ಅದೂ ಮುಂಜಾನೆ 10.30 ಕ್ಕೆ…! ನಮ್ಮ ನಾಟಕ ಮುಗಿದ ಮೇಲೆ ಅಲ್ಲಿ ಮತ್ತೆ ಮೂರು ಸಿನೆಮಾ ಪ್ರದರ್ಶನಗಳಾಗಬೇಕು…

ವಾಚು ನೋಡಿಕೊಂಡೆ. ಆಗಲೇ ಬೆಳಗಿನ 6.00…!

ಟೆಂಪೋ ಬಳಿ ಬಂದವನೇ ”ಎಲ್ಲಾರೂ ಫ್ರೆಶ್ ಆಗಿ, ಟಿಫಿನ್ ಮುಗಿಸಿ, ಸೀದಾ ಮೇಕಪ್ಪಿಗೆ ಕೂಡ್ರಿ. ಮುಂಜೇನೆ 10.30 ಕ್ಕಂತ ನಾಟಕ…!” ಎಂದೆ… ಮತ್ತು, ಅವರು ‘ಅಪಸ್ವರ’ವೆತ್ತುವ ಮೊದಲೇ, ”ಇದು ನಮ್ಮ ತಂಡದ ಮರ್ಯಾದಿ ಪ್ರಶ್ನಿ… ತ್ರಾಸಾದ್ರೂ ಮಾಡsಬೇಕು… ನಾಟಕ ಮುಗದ ಮ್ಯಾಲೆ ನಿಮ್ಮ ಸ್ನಾನಾ-ಗೀನಾ…” ಅಂತ

ನನ್ನ ಸೀಟಿನಲ್ಲಿ ಕೂತೆ.

ನಾವು ನಾಟಕ ಆಡಬೇಕಾಗಿದ್ದ ಜಾಗ ಒಂದು ಹಳೆಯ ರಂಗಮಂದಿರವೇ. ಜಮಖಂಡಿಯ ಸಂಸ್ಥಾನಿಕರ ಕಾಲದಲ್ಲಿ ಕಟ್ಟಿಸಿದ್ದು. ಮುಂದೆ ಅದನ್ನೇ ಸಿನಿಮಾ ಮಂದಿರವನ್ನಾಗಿ ಬದಲಾಯಿಸಲಾಗಿತ್ತು. ನಾವು ಅಲ್ಲಿಗೆ ಹೋದಾಗ ಬಿಳಿಯ ಪರದೆಯನ್ನು ಬಿಚ್ಹುವ ಕೆಲಸ ನಡೆದಿತ್ತು. ಅಬ್ಬಾ… ನಮ್ಮ ರವೀಂದ್ರ ಕಲಾಕ್ಷೇತ್ರದ ರಂಗ ವೇದಿಕೆಯಷ್ಟೇ ವಿಶಾಲವಾಗಿದ್ದ ವೇದಿಕೆ. ಆದರೆ, ಬೆಳ್ಳಿ ಪರದೆಯ ಹಿಂದೆ ಹದಿನೈದು ಅಡಿ ಅಂತರದಲ್ಲಿ ನಟ್ಟನಡುವೆ ಫಿಕ್ಸ್ ಮಾಡಿದ್ದ ದೊಡ್ಡ ಗಣಪತಿಯಂಥ ಆ ಸೌಂಡ್ ಬಾಕ್ಸ್ ಇತ್ತಲ್ಲ… ಅದರಿಂದ ಮುಂದಿನ ಜಾಗವನ್ನೇ ನಾವು ‘ಅಭಿನಯ ಕ್ಷೇತ್ರ’ವಾಗಿ ಬಳಸಬೇಕಾದ ಅನಿವಾರ್ಯತೆ.

ಅದಕ್ಕೂ ದೊಡ್ಡ ಸಮಸ್ಯೆಯ ಅರಿವು ನಮಗಾದದ್ದು ಆ ವೇದಿಕೆಯನ್ನು ಏರಿದಾಗಲೇ. ಅಲ್ಲೆಲ್ಲ ಪಾದದೆತ್ತರ ದೂಳು… ಮೈ-ಕೈಗೆ ಮುತ್ತಿಕ್ಕುವ ಜೇಡರ ಬಲೆಗಳು… ಕಾಲ ಮೇಲಿಂದಲೇ ಓಡಿ ಹೋಗುವ ಬೆಕ್ಕಿನಷ್ಟೆತ್ತರದ ಹೆಗ್ಗಣಗಳು… ಇವಲ್ಲದೆ ಕಣ್ಣಿಗೆ ಕಾಣದ ಮಾತ್ಯಾವ್ಯಾವ ಜೀವಿಗಳು ಅಲ್ಲಿದ್ದವೋ…

ಅಂಥದರಲ್ಲೇ ನಮ್ಮ ಸೆಟ್ ಹಾಕಿ, ಲೈಟುಗಳನ್ನು ಫಿಕ್ಸ್ ಮಾಡಿ, ನಾನು ಮೇಕಪ್ಪಿಗೆ ಹೋದೆ. ಅರವಿಂದ ಕುಲಕರ್ಣಿಯ ಕಾರಣದಿಂದಾಗಿ ಮುಖ್ಯ ಪಾತ್ರವನ್ನು ನಾನೇ ಮಾಡಬೇಕಾದ ಅನಿವಾರ್ಯತೆ ಉಂಟಾಗಿತ್ತಲ್ಲ…

ಆಪದ್ಬಾಂಧವ ಗಜಾನನ ಮಹಾಲೆ

ಗಜಾನನ ಮಹಾಲೆ ನನ್ನ ಮೀಸೆಯನ್ನು ಹೆರೆದ. ಬಣ್ಣ ಬಳಿದ. ವೆಂಕೂನ ಪಾತ್ರಕ್ಕಾಗಿ ಪೊದೆ ಮೀಸೆಯನ್ನು ಅಂಟಿಸಿದ… (ನಂತರದ ಒಂದು ದೃಶ್ಯದಲ್ಲಿ ನನಗೆ ಹಿಟ್ಲರ್ ಮೀಸೆ ಇರುತ್ತದೆ…)

ಮೇಕಪ್ ಮುಗಿಸಿ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳುತ್ತಿದ್ದ ಹಾಗೆಯೇ ನನ್ನ ಬೆನ್ನ ಹಿಂದೆ ಅರವಿಂದ ಕುಲಕರ್ಣಿಯ ಮುಖ ಕಾಣಿಸಿತು…!

ತಿರುಗಿ ನೋಡಿದೆ. ಆತ ‘ಹೆಹೆಹೆ’ ಎಂದ…

ನನ್ನ ಪಾಡಿಗೆ ನಾನು ವಿಂಗಿನ ಕಡೆ ನಡೆದೆ…

‍ಲೇಖಕರು G

December 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. ಈಶ್ವರ ಕಿರಣ

    ಇನ್ನಷ್ಟು ನಿಮ್ಮ ನೆನಪುಗಳನ್ನ ಓದಬೇಕೆನ್ನಿಸುವಷ್ಟು ಆಪ್ತ ಬರಹ ಗೋಪಾಲ್ ಸರ್.
    ರಂಗದ ಮೇಲೆ ‘ದನಿ’ಯೇರಿಸುವುದಕ್ಕಿಂತ, ರಂಗದ ಹಿಂದೆ ‘ತೋಳೇರಿಸಿ’ ದುಡಿಯುವುದು ಬಹಳ ಮುಖ್ಯವೆನ್ನುವುದು ಎಂತಹ ಮಾತು!! ಸುಪರ್.

    ಪ್ರತಿಕ್ರಿಯೆ
  2. umesh desai

    ಅಬ್ಬಾ ಎಂಥಾ ಎಂಥಾ ಅನುಭವ ಗುರುಗಳ..
    ನಿಜಕ್ಕೂ ನೀವು ಬರೆಯುತ್ತಿರೋ ಈ ಸರಣಿ ಕಳೆಗಟ್ಟುತ್ತಿದೆ…

    ಪ್ರತಿಕ್ರಿಯೆ
  3. N Rekha pradeep

    ನಿಮ್ಮ ಲೇಖನಗಳಿಂದ ರಂಗಭೂಮಿಯ ಶಿಷ್ಟಚಾರಗಳೂ , ಧುತ್ತೆಂದು ಎದುರಾಗುವ ಗ್ರಹಚಾರಗಳೂ , ಅದನ್ನು ಪರಿಹರಿಸಲು ಇರುವ ಸಹಚಾರಿಗಳ ಅನುಭವ ಆಗುತ್ತಾ ಇದೆ, ಒಟ್ಟಿನಲ್ಲಿ ನಿಮ್ಮ ಬರಹಗಳು ಬಹಳ ಅರ್ಥಪೂರ್ಣ ಹಾಗೂ ವೈವಿಧ್ಯಮಯ

    ಪ್ರತಿಕ್ರಿಯೆ
  4. pramod

    ನಿಮ್ಮ ಬದ್ಧತೆ ಕಂಡು ನಿಜಕ್ಕೂ ಸೋಜಿಗವಾಯಿತು ಸರ್., ಎಂತಹ ಸಂದರ್ಭವಾದರೂ ಸರಿಯೇ., ಎಲ್ಲರೆದುರು ತಲೆತಗ್ಗಿಸುವ ಸಂದರ್ಭ ತಂದುಕೊಳ್ಳುವುದು ಸಲ್ಲವೆಂದು ಮುಖ್ಯ ಪಾತ್ರವನ್ನು ನೀವೇ ವಹಿಸಿದ್ದು ನಿಜಕ್ಕೂ ಸ್ಪೂರ್ತಿದಾಯಕ., ಮುಂದಿನ ಸಂಚಿಕೆಗೆ ಕಾದಿರುತ್ತೇನೆ. ಶುಭವಾಗಲಿ.

    ಪ್ರತಿಕ್ರಿಯೆ
  5. ramesh kulkarni

    ಸರ್…ನಿಮ್ಮ ಬರವಣೆಗೆಯ ಬುತ್ತಿ ಭಾಳ ಸವಿರುಚಿಯಿಂದ ಕೂಡಿದೆ..ಎಳ್ಳ ಅಮಾಸಿ ಚರಗ ಚಲ್ಲುವಾಗ,ಬಂಡಿ ಕಟ್ಕೊಂಡು ಹೋಗಿ,ಹೋಲ್ದಾಗ ಉಂಡಷ್ಟು ಖುಷಿ ಆಗ್ತದ ರೀ ಸರ್..ನಿಮ್ಮ ಬರವಣಿಗೆಯ ಬಂಡಿ,ಬುತ್ತಿ ನಮಗೆ ದಕ್ಕುತ್ತಿರಲಿ..ಶುಭಮಸ್ತು..

    ಪ್ರತಿಕ್ರಿಯೆ
  6. Swarna

    ಮಹಾಲೆ ಅವರ ಬಗ್ಗೆ ಓದಿ ಖುಷಿಯಾಯಿತು

    ಪ್ರತಿಕ್ರಿಯೆ
  7. Atmananada Vasan

    Mahale sir!!! nanage makeup kalsidde avru! eeglu, Dharwadadlli, nataka ittu andre, tamma Cycle eri horate bidtaare!!!

    ಪ್ರತಿಕ್ರಿಯೆ
  8. Gopaal Wajapeyi

    ಈ ಮಹಾಲೆಗೆ ಈಗ ಎಂಬತ್ತು ತುಂಬಿ ಎಂಬತ್ತೊಂದು ನಡೆಯುತ್ತಿದೆ. ಆದರೂ ಸೋಲರಿಯದ ಜೀವ ಅದು…

    ಪ್ರತಿಕ್ರಿಯೆ
  9. Paresh Saraf

    ಬರಹ ಬಹಳ ಆಪ್ತವಾಯಿತು. ನಾಟಕವನ್ನೇ ಉಸಿರಾಗಿಸಿದ ಜೀವನ ನಿಮ್ಮದು. ಇನ್ನಷ್ಟು ನೆನಪುಗಳು ಲೇಖನಗಳಾಗಿ ಬರಲಿ

    ಪ್ರತಿಕ್ರಿಯೆ
  10. Amita Ravikirana

    ಮಹಾಲೆ ಮಾಮ ಎಂದರೆ ನನಗೆ ಭಕ್ತಿ ಪೂರ್ವಕ ಗೌರವ.ಧಾರವಾಡದಲ್ಲಿ ಬಿ ಮ್ಯುಸಿಕ್ ಮೊದಲ ವರಶದಲ್ಲಿರುವಾಗ ನನ್ನ ಮೊದಲ ಸಂಗೀತ ಕಚೇರಿಗೆ ಅವರೆ ಹಾರ್ಮೊನಿಂ ನುಡಿಸಿದ್ದು ,ನಾನು ಆಲಾಪವನ್ನು ಮಾಡುವಾಗ ಆಕಾರದ ಬದಲು ಅ ಕಾರ ಹಾಡುತ್ತಿದ್ದೆ ಅದನ್ನು ಪ್ರೀತಿಯಿಂದ ತಿದ್ದಿದವರು ಅವರೇ. ಅದೆಷ್ಟೇ ಚಿಕ್ಕ ಕಲಾವಿದರಾದರು ಪ್ರೀತಿಯಿಂದ ಅವರ ಬೆನ್ನು ತತ್ತಿ ನಗುಮೊಗದಿಂದ ಸಾಥಿ ಮಾಡುತ್ತಿದ್ದರು .ಅಂತ ಒಬ್ಬ ಅಪರೂಪದ ವ್ಯಕ್ತಿತ್ವವನ್ನು ನಿಮ್ಮ ಲೇಖನದಲ್ಲಿ ಮತ್ತೊಮ್ಮೆ ರಂಗಕ್ಕೆ ತಂದಿದ್ದು ಖುಷಿ ಆಯಿತು ವಾಜಪೇಯಿ ಜೀ

    ಪ್ರತಿಕ್ರಿಯೆ
  11. ಸವಿತ ಇನಾಮದಾರ್

    ನಿಮ್ಮ ನೆನಪಿನ ಬುತ್ತಿ ಗಂಟು ಬಿಚ್ಚಿದಾಗಿನಿಂದ ಬ್ಯಾರೆ ಊಟಾ ಹಿಡಸವಲ್ಲತು. ನಿಮ್ಮ ಅನುಭವಾಮೃತ ಮುಂಬರುವ ಪೀಳಿಗೆಗೆ ದಾರಿ ದೀಪ.

    ಪ್ರತಿಕ್ರಿಯೆ
  12. Gopaal Wajapeyi

    ಈ ಅಂಕಣದಲ್ಲಿ ನನ್ನ ಪ್ರೀತಿಯ ಮಹಾಲೆಯ ಬಗ್ಗೆಯೇ ಒಂದು ಕಂತು ಬರೆಯಬೇಕು ಅಮಿತಾ ಜಿ… ನನಗೆ ಸತತ ಇಪ್ಪತ್ತು ವರ್ಷ ಮೇಕಪ್ ಮಾಡಿದ ಮಹಾನುಭಾವ ಈತ.

    ಪ್ರತಿಕ್ರಿಯೆ
  13. hipparagi Siddaram

    ಸರ್, ನಿಮ್ಮ ಅನುಭವ ಹೇಳಿತ್ತಾ…ಒಂದೆಡೆ ನೀವು ಹೇಳಿರುವ ”ರಂಗದ ಮೇಲೆ ‘ದನಿ’ಯೇರಿಸುವುದಕ್ಕಿಂತ, ರಂಗದ ಹಿಂದೆ ‘ತೋಳೇರಿಸಿ’ ದುಡಿಯುವುದು ಬಹಳ ಮುಖ್ಯ…” ಎಂಬುದನ್ನು ನಾನು ಅರಿತದ್ದು ಈ ನಾಯಕರಿಂದಲೇ…ಎಂಬ ಮಾತು ನಿಜವಾಗಲೂ ರಂಗಭೂಮಿಯ ಸುಭಾಷಿತದಂತಿದೆ. ಇಂದಿಗೂ ನಮ್ಮ ನಡುವೆ ಇರುವ ವಿರೂಪಾಕ್ಷ ನಾಯಕರು ಎಂದೂ ಮಾಸದ ನಗುಮೊಗದ ‘ಸವ್ಯಸಾಚಿ’ಯಂತೆ ಕಂಗೊಳಿಸುತ್ತಿರುವುದು ನಮ್ಮೆಲ್ಲರ ಭಾಗ್ಯ. ನಿಜವಾಗಲೂ ನಿಮ್ಮ ಅನುಭವ ಕಥಾನಕಗಳು ಆಗಿನ ಕಾಲದ ಹುಬ್ಬಳ್ಳಿ-ಧಾರವಾಡ ರಂಗಭೂಮಿಯ ರಂಗಚರಿತ್ರೆ ಎಂದರೆ ತಪ್ಪಾಗಲಿಕ್ಕಿಲ್ಲ. ನಿಮ್ಮ ಲೇಖನಗಳಲ್ಲಿ ಎಂಥೆಂಥಾ ಅತಿರಥ-ಮಹಾರಥರು ಜೊತೆ ಮಹಾಕಂಟಕರು ಬಂದು ಹೋಗುತ್ತಾರೆಂದರೆ ಅದೊಂದು ವಿಸ್ಮಯ ಜಗತ್ತೇ ಸರಿ. ಧನ್ಯವಾದಗಳು ಸರ್….ಶುಭದಿನ !

    ಪ್ರತಿಕ್ರಿಯೆ
  14. Dhananjaya Kulkarni

    Kaleda 30 varshagalinda mahale avarannu tumbaa hattiradinda nodiddene, avarondige oota maadiddene, orooru alediddeve….Nanna nirdeshanada ella naatakagala modala vimarshaka Mahale avaru…adondu adbhuta jeeva..ebhattara ili vayassinallioo sana jeevana preetiyannu ittu kondiruva aparoopada vyakti…

    ಪ್ರತಿಕ್ರಿಯೆ
  15. ಮಂಜುಳಾ ಬಬಲಾದಿ

    ನಾಟಕದ ಬಗ್ಗೆ ಅಷ್ಟೇನೂ ತಿಳಿಯದ ನಮಗೂ ನಾಟಕದ ಗುಂಗು ಹಿಡಿಯೂ ಹಂಗ ಬರೀತೀರಿ. “ದನಿ ಏರಿಸೂಕಿಂತ ತೋಳೇರಿಸೋದು..” ಎಂಥಾ ಮಾತು..! ನಿಮ್ಮ ಸರಣಿಯಿಂದ, ನಾಟಕಾಸಕ್ತರ ಸಂಖ್ಯೆ ಹೆಚ್ಚಲಿದೆ.. ಅವು ನಿಮ್ಮ ನಾಟಕಗಳಾಗಿದ್ದರಂತೂ ಯಶಸ್ಸು ಖಂಡಿತ 🙂

    ಪ್ರತಿಕ್ರಿಯೆ
  16. Santhosh

    ನಾಟಕಗಳನ್ನೇ ನೋಡಿರದ ಅವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದ ನಾನೇ ಈ ಪೂರ್ತಿ ಲೇಖನವನ್ನು ಒಂದು ಗುಕ್ಕಿನಲ್ಲಿ ಓದಿ ಮುಗಿಸಿಬಿಟ್ಟೆ.
    ಅಷ್ಟೊಂದು ಸ್ವಾರಸ್ಯಕರವಾಗಿದೆ!!

    ಪ್ರತಿಕ್ರಿಯೆ
  17. kirandesai

    nimma lekhana nanage nanna tandeya naataka nirdeshanada nenapu maadi kottitu. adakke nanna dhanyavaadagalu. nimmalli adara bagge kelabekendu maadidde, neeve nanage uttaravannu kottiddira.huttidduholeyooru naataka nanage masuku masukaagi nenapide.e vishavannu tandege heluve avaru tumbasantoshpaduttare.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: