ನಂದಿನಿ ಹೆದ್ದುರ್ಗ
ಹಾಗೆ ಅಂದುಕೊಂಡ
ಮೊದಲ ದಿನ
ಅದು.
ಮಾಮೂಲಿನಂತಿದ್ದೆ
ಮೂರನೇ ದಿನ
ಬರೀ ಹುಃಗುಟ್ಟೆ
ಮನಸ್ಸೆಲ್ಲಿದೆ ಎಂದ
ಆರನೇ ದಿನ
ನಡುನಡುವೆ
ಆಕಳಿಸಿದೆ
ಆರಾಮಿಲ್ಲವೇ ಎಂದ
‘ಚಿನ್ನಾ ಮುದ್ದು ಪುಟ್ಟು’
ಎಂದ
ಸೊಟ್ಟಗೆ ನಕ್ಕೆ
ಆತ್ಮವೆಂದ
ಆಯಾಸವೆಂದೆ
ವಿಧಿಚಿತ್ತವೆಂದ
ವಿಷಯಾಂತರಗೈದೆ

ಹತ್ತನೇ ದಿನಕ್ಕೆ
ರೆಕ್ಕೆ ಬಲಿಯಿತು
ಎಂದೆ
ಏನು ಮಾಡಲಿ ಎಂದ
ಬಿಡುವಿಲ್ಲವೆಂದೆ
ಕಾಯುತ್ತೇನೆ ಎಂದ
ಖಾಲಿ ಮಾಡಿದೆ ಎಂದೆ
ತಿಂಗಳು
ತುಂಬುವಷ್ಟರಲ್ಲಿ
ತಣ್ಣಗಾದ.
ಕಣ್ಣೀರಾದ
ಸಾವರಿಸಿಕೊಂಡ
ಸಂಕಟವ ಹೇಳಿದ
ಸುಳ್ಳಾಡಬೇಡೆಂದ
ಮೆಟ್ಟಿಲುಗಳಲೀಗ
ಹೊಸಹಾಡು ಎಂದೆ
ಕಡಿದ ಬಾಳೆಯಂತಾದ
ಮರೆಯಲಾರೆ ಎಂದ
ಮೀಸಲು ನಿನಗೆಂದ

ಎಲ್ಲಕ್ಕೂ ಇಲ್ಲ
ಎಂದೆ
ನಲ್ಲೆ ಎಂದ
ಒಲ್ಲೆ ಎಂದೆ
ಕೊಂದೆ ಎಂದ
ವೃಥಾ
ಬಂಧವೆಂದೆ
ಅಯ್ಯೋ
ನನ್ನ ಹುಚ್ಚೇ…
ಅವನಿರದ ದಿನಗಳಲಿ
ಖರೆ ನನ್ನಿರುವು
ತಿಳಿಯಬೇಕಿತ್ತು
ಸಾಸಿವೆ ಹೊಲದಲ್ಲಿ
ಸಾಲಕ್ಕೆ
ಮುಟಿಗೆ ಸಾವು
ಕೇಳಬೇಕಿತ್ತು






ಚಂದದ ಕವಿತೆ…….ನಂದಿನಿಯವರೆ.