ಕುಂಬಾರನ ಹೆಂಡತಿಯ ಮೂರ್ತಿ ಹುಡುಕುತ್ತ…

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟ ಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಆ ನಾಲ್ಕೈದು ಮಕ್ಕಳು ಎದ್ದೆನೋ ಬಿದ್ದೆನೋ ಎಂಬಂತೆ ನಮ್ಮ ಕಾರಿನ ಮುಂದೆ ಓಡುತ್ತಿದ್ದರು. ಹೇಳಿಕೇಳಿ ರಾಜಸ್ಥಾನ, ಮಟಮಟ ಮಧ್ಯಾಹ್ನ ಬಿಸಿಲೋ ಬಿಸಿಲು. ʻಅರೆ, ನಿಲ್ರೋ ಮಕ್ಕಳೇ… ಕಾರು ಹತ್ತಿ, ಯಾರಾದರಿಬ್ಬರುʼ ಎಂದರೆ, ʻಬೇಡ ಬೇಡ, ಇಲ್ಲೇ ಬಂತು ನೋಡಿʼ ಎಂದು ಸ್ವಲ್ಪ ಮುಂದೆ ಹೋಗಿ ಗಕ್ಕನೆ ನಿಂತರು, ಹಿಂದೆ ನಾವೂ.

ಅದೊಂದು ಪುಟಾಣಿ ಎಂದರೆ ಪುಟಾಣಿ ಹಳ್ಳಿ. ಎಲ್ಲೋ ಐದಾರು ಮನೆ ಒಂದು ಮೂಲೆಯಲ್ಲಿ. ಇನ್ನೊಂದೈದಾರು ಮನೆ ಮತ್ತೊಂದು ಮೂಲೆಯಲ್ಲಿ. ಇವೆರಡಕ್ಕೆ ಸಂಬಂಧವೇ ಇಲ್ಲವೆಂಬಂತೆ ತನ್ನ ಪಾಡಿಗೆ ದಿಗಂತದೆಡೆಗೆ ತಣ್ಣಗೆ ಉದ್ದಕ್ಕೆ ಚಾಚಿ ಚುಕ್ಕಿಯಾಗಿ ಮರೆಯಾಗುವ ರಸ್ತೆ. ನಾವು ಆ ರಸ್ತೆಯ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ನಾಲ್ಕೈದು ಬಾರಿ ಓಡಾಡಿದೆವು.

‘ಅದೊಬ್ಬ ಕುಂಬಾರನ ಹೆಂಡತಿ ತಿರುಗಿ ನೋಡುತ್ತಿರುವಂತಹ ಮೂರ್ತಿಯಿದೆಯಂತೆ, ಅದೆಲ್ಲಿದೆ?ʼ ಎಂದು ಸಿಕ್ಕಿಸಿಕ್ಕಿದ ಅವೇ ನಾಲ್ಕೈದು ಮನೆಗಳ ಮುಂದೆ ಪದೇ ಪದೇ ನಿಲ್ಲಿಸುತ್ತಾ, ಎಷ್ಟು ಸುತ್ತಿದರೂ ಮೂರ್ತಿ ಕಾಣದೆ, ʻಹೋಗ್ಲಿ ಅತ್ಲಾಗೆʼ ಅಂತ ಕೈಚೆಲ್ಲಲೂ ಮನಸ್ಸಾಗದೆ ಆ ಬಿರುಬಿಸಿಲಿನಲ್ಲಿ ಅಬ್ಬೇಪಾರಿಗಳಂತೆ ಅಲೆದಿದ್ದೆವು. ಆ ಮೂಲೆಯ ಹಳ್ಳಿಯಲ್ಲಿ ಕೇಳಿದಾಗ, ʻಅದಾ, ಅದು ಓ ಅಲ್ಲಿ ನೋಡಿ. ಹೆಚ್ಚು ದೂರವಿಲ್ಲʼ ಎಂದು ಈ ಕಡೆಗೆ ಕೈತೋರುತ್ತಿದ್ದರು. ಈ ಕಡೆಗೆ ಬಂದರೆ ಆ ಕಡೆಗೆ ಕೈ. ʻಎಲಾ, ಇದೊಳ್ಳೆ ತಮಾಷೆಯಾಯ್ತಲ್ಲ! ರಸ್ತೆ ಬದಿಯಲ್ಲೇ ಇದ್ಯಾ?ʼ ಎಂದರೆ, ʻಹುಂ, ಅಲ್ಲೇ ರಸ್ತೆಗೇ ಕಾಣಿಸತ್ತೆ ನೋಡಿ, ಎಡಬದಿಯಲ್ಲಿʼ ಎಂದು ಕೈತೋರಿಸಿ ಸುಲಭದಲ್ಲಿ ಮಾತು ಮುಗಿಸುತ್ತಿದ್ದರು.

ʻಅಷ್ಟೇ, ಸಿಕ್ಕೇ ಬಿಟ್ಟಿತುʼ ಎಂದು ನಾವೂ ಕೂಡಾ ಅವರು ಕೈತೋರಿದ ಜಾಗಕ್ಕೆ ಬಂದರೆ, ಊಹೂಂ, ಕುರುಹೂ ಇಲ್ಲ. ಒಳ್ಳೆ ಹಾವು ಏಣಿ ಆಟವಾಯ್ತಲ್ಲ ಇದು ಎನ್ನುತ್ತಾ ಮತ್ತೆ ಕೊನೇ ಪ್ರಯತ್ನ ಎಂಬಂತೆ, ʻಕರೆಕ್ಟಾಗಿ ಎಲ್ಲಿ ಬರುತ್ತೆ ಹೇಳಿʼ ಎಂದು ಮೂರನೇ ಸಾರಿ ಅದೇ ಮನೆ ಮುಂದೆ ಕಾರು ನಿಲ್ಲಿಸಿದ್ದೆವು. ನಮ್ಮ ಅವಸ್ಥೆ ನೋಡಿ ʻಅಯ್ಯೋ, ಪಾಪʼ ಅಂತ ಆಮೇಲೆ ಅನಿಸಿರಬೇಕು. ನಾವು ಹೊರಟು ಸ್ವಲ್ಪ ದೂರ ಹೋದ ಮೇಲೆ ಕಾರಿನ ಕನ್ನಡಿಯಲ್ಲಿ ಮಕ್ಕಳೆಲ್ಲ ನಮ್ಮ ಹಿಂದಿಂದೆ ಓಡಿ ಬರುತ್ತಿರುವುದು ಕಾಣಿಸಿ, ಕೈಚೆಲ್ಲಿ ಹೊರಡಲಿದ್ದ ನಮಗೆ ಭರವಸೆಯ ಬೆಳಕು ಕಾಣಿಸಿತ್ತು.

ನಿಲ್ಲಿಸಿದ ಕಾರನ್ನು ಹತ್ತದೆ, ಏದುಸಿರು ಬಿಡುತ್ತಾ ಮುಂದೆ ಹೋಗಿ, ಇಲ್ಲೇ, ಬನ್ನಿ ಎಂದು ಕರೆದ ಆ ಮಕ್ಕಳ ಹಿಂದೆ ಕೊಂಚ ಮರಳದಾರಿಯಲ್ಲಿ ಹತ್ತಿಳಿದು ನಡೆದರೆ ಒಂದು ಮೂರ್ನಾಲ್ಕು ಅಡಿ ಎತ್ತರದ ಮೈಲುಗಲ್ಲಿನಂತ ಕಲ್ಲು. ಅದರಲ್ಲೊಂದು ಹೆಂಗಸಿನ ಕೆತ್ತಿದ ಉಬ್ಬುಚಿತ್ರ. ʻಇದಾ?ʼ ಅಂದೆ ರಾಗವಾಗಿ ನಿರಾಸೆಯಿಂದ. ʻಹುಂ ಇಷ್ಟೇʼ ಅಂದರು ಮಕ್ಕಳು. ʻಮತ್ತೆ ಮೂರ್ತಿ ಇದೆʼ ಅಂದರು ಎಂದೆ.

ʻಇದೇ ಮೂರ್ತಿ! ಕುಂಬಾರನ ಹೆಂಡತಿಯ ಮೂರ್ತಿʼ ಎಂದರು. ಒಂದೆರಡು ಕ್ಲಿಕ್ಕು. ಮಕ್ಕಳೂ ಪೋಸು ಕೊಟ್ಟರು. ನಾವು ನಾಲ್ಕಾರು ಬಾರಿ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಿ, ದಾರಿಹೋಕರಿಗೆಲ್ಲ ಕೇಳಿ, ಆ ಪುಟ್ಟ ಹಳ್ಳಿಯಲ್ಲಿ ಜಗಜ್ಜಾಹೀರಾಗಲು ನಿಮಿಷ ಸಾಕಿತ್ತು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ʻನಾನೂ ನೋಡೇ ಇರಲಿಲ್ಲ, ನಮ್ಮೂರಿನದ್ದಾದರೂ. ಎಲ್ಲಿದೆ ತೋರಿಸಿʼ ಎಂದು ಇನ್ನೂ ಒಂದಿಬ್ಬರು ಬಂದು ನೋಡಿಕೊಂಡು ಹೊರಟರು. ಮಕ್ಕಳಿಗೆಲ್ಲ ಕೈತುಂಬ ಹಣ್ಣು ಸಿಕ್ಕಿ ಮುಖವರಳಿತ್ತು.

ಇಷ್ಟಕ್ಕೂ ಆ ಕುಂಬಾರನ ಹೆಂಡತಿಯ ಮೂರ್ತಿ ಹುಡುಕಲು ಕಾರಣವಿದೆ. ಒಂದು ಕಚೋಡಿಯ ನೆಪದಿಂದ ಪಾಕಿಸ್ತಾನಕ್ಕೆ ತಾಗಿಕೊಂಡಿರುವ ರಾಜಸ್ಥಾನದ ಬಾಡ್‌ಮೇರ್‌ ಎಂಬ ಸಣ್ಣ ಪಟ್ಟಣಕ್ಕೆ ಬಂದಾಗಿತ್ತು. ಬರೋದೇನೋ ಬಂದಾಗಿದೆ. ಇಲ್ಲಿ ಏನಾದರೊಂದರೊಂದು ಇರಲೇಬೇಕಲ್ಲ ಎಂದು ತಡಕಾಡಿದಾಗ ಗೊತ್ತಾಗಿದ್ದು ಈ ಕಿರಾಡು ಬಗ್ಗೆ. ಅದರ ಹಿಂದಿದ್ದ ಆಸಕ್ತಿದಾಯಕ ಕಥೆಯೊಂದು ನಮ್ಮನ್ನಲ್ಲಿಗೆ ಎಳೆದು ತಂದಿತ್ತು. ಯಾರೆಂದರೆ ಯಾರೂ ಅಷ್ಟಾಗಿ ಕಾಲಿಡದ, ಇಂಥದ್ದೊಂದು ಅದ್ಭುತ ಐತಿಹಾಸಿಕ ಜಾಗವಿದೆ ಎಂಬ ಅರಿವಿಗೂ ಬರದಂತೆ ಮರಳುಗಾಡಿನಲ್ಲಿ ಕಳೆದುಹೋಗಿರುವ ಈ ಕಿರಾಡು ಶಾಪಗ್ರಸ್ಥವಾಗಿ ಯಾಕೆ ಉಳಿದುಬಿಟ್ಟಿತಪ್ಪ!  

ನಮ್ಮ ಭಾರತದಲ್ಲಿ ಶಾಪಗ್ರಸ್ಥ ಊರುಗಳಿಗೇನೂ ಕಡಿಮೆಯಿಲ್ಲ. ದೆವ್ವ ಮೆಟ್ಟಿದ ಊರುಗಳಾಗಿ ಬದಲಾಗಿ ಹೋದ ಕಥೆಗಳಿಗೂ ಬರವಿಲ್ಲ. ಹುಡುಕ ಹೊರಟರೆ ಇಂಥ ಸಾಲು ಸಾಲು ಇಂಟರೆಸ್ಟಿಂಗ್‌ ಕಥೆಗಳು ಸ್ಪರ್ಧೆಗೆ ನಿಲ್ಲುತ್ತವೆ. ಅಂಥ ಒಂದು ಮೈನವಿರೇಳಿಸುವ ಜನಪದ ಕಥೆಯೂ ಇರುವ, ಬಾಡ್‌ಮೇರಿನಿಂದ ೩೫ ಕಿಮೀ ದೂರದಲ್ಲಿರುವ ಥಾರ್‌ ಮರುಭೂಮಿಯೊಳಗಿರುವ ಪುಟಾಣಿ ಊರಿದು.

ಗೇಟು ತೆಗೆದು ಟಿಕೆಟು ಪಡೆದು ಒಳಗೆ ಕಾಲಿಡುತ್ತಿರುವಾಗಲೇ ಆತ ಸ್ಪಷ್ಟವಾಗಿ ಹೇಳಿಬಿಡುತ್ತಾನೆ, ʻಎಷ್ಟು ಹೊತ್ತು ಬೇಕಾದರೂ ಒಳಗೆ ತಿರುಗಾಡಿ. ಆದರೆ ಗಂಟೆ ಆರು ದಾಟಬಾರದು!ʼ ಈ ʻಬಾರದುʼ ʻಕೂಡದುʼಗಳೆಲ್ಲ ಬಹಳ ಆಕರ್ಷಕ ಪದಗಳು. ಅದಕ್ಕೇನೋ ಒಂದು ಮಾಂತ್ರಿಕ ಸೆಳೆತವಿದೆ. ಅರೆ, ಯಾಕೆ ಸಂಜೆ ಆರರ ಮೇಲೆ ಹೋಗಬಾರದು? ಹೋದರೆ ಏನಾಗುತ್ತದೆ? ಪ್ರಶ್ನೆಗಳ ತಿರುಗು ಬಾಣ ರೆಡಿ ಮಾಡಿಬಿಡುತ್ತೇವೆ. ಈ ಜಾಗದ ಕುರಿತೂ ಆಗಿದ್ದು ಅದೇ. ಯಾಕೆ ಆರರ ಮೇಲೆ ಇಲ್ಲಿ ಪ್ರವೇಶವಿಲ್ಲ ಎಂದರೆ, ನಮ್ಮ ನೆಲದಲ್ಲಿ ಇನ್ನೇನಿದ್ದೀತು? ಯೆಸ್!‌ ಅದೇ ದೆವ್ವದ ಕಥೆ.

ಇಲ್ಲಿಯೂ ಅಂಥದ್ದೇ ದೆವ್ವದ ಕಥೆಯಿದೆ. ಈ ದೆವ್ವಗಳಿಗೂ, ಕುಂಬಾರನ ಹೆಂಡತಿಗೂ, ಇಲ್ಲಿರುವ ಅತ್ಯದ್ಭುತ ವಾಸ್ತುಶಿಲ್ಪಕ್ಕೂ ಇರುವ ನಂಟಾದರೂ ಏನದು ಎಂದರೆ, ಒಂದೊಂದೇ ಕಥೆ ತೆರೆದುಕೊಳ್ಳುತ್ತದೆ.

ಇತಿಹಾಸಕ್ಕೂ ಜನಪದಕ್ಕೂ ಇಲ್ಲೊಂದು ಕಥೆಯ ಸೇತುವೆಯಿದೆ. ೧೨ನೇ ಪರಮಾರ ಸಾಮ್ರಾಜ್ಯದ ರಾಜ ಸೋಮೇಶ್ವರ ಈ ಕಿರಾಡುವನ್ನು ಆಳುತ್ತಿದ್ದ. ಆಗಷ್ಟೇ ಯುದ್ಧವೊಂದರಿಂದ ಜರ್ಝರಿತವಾಗಿದ್ದ ಸಾಮ್ರಾಜ್ಯದ ಸಂತೋಷಕ್ಕಾಗಿ ಹಾಗೂ ಜನರ ಮಾನಸಿಕ ಸ್ಥೈರ್ಯವನ್ನು ಗಟ್ಟಿಗೊಳಿಸುವುದಕ್ಕಾಗಿ ಸ್ವಾಮೀಜಿಯೊಬ್ಬರನ್ನು ತನ್ನ ಊರಿಗೆ ಕರೆಸಿಕೊಂಡ. ಈ ಗುರುಗಳು ತನ್ನ ಶಿಷ್ಯರೊಂದಿಗೆ ಆಗಮಿಸಿ ರಾಜನ ಆಸ್ಥಾನದಲ್ಲಿ ಪ್ರವಚನಗಳನ್ನು ಮಾಡಿ, ಆತನ ಆದರಾತಿಥ್ಯಗಳನ್ನು ಸ್ವೀಕರಿಸಿ, ತನ್ನ ಶಿಷ್ಯರನ್ನು ಕೆಲವು ದಿನ ಕಿರಾಡುವಿನಲ್ಲೇ ಬಿಟ್ಟು,  ತಾನು ಕೆಲ ಕಾಲದ ನಂತರ ಬರುವುದಾಗಿ ಹೇಳಿ ಹಿಂತಿರುಗುತ್ತಾರೆ.

ಇತ್ತ ರಾಜ್ಯ ಸುಭಿಕ್ಷವಾದಾಗ,  ಯಾವುದೇ ಅಡ್ಡಿ ಆತಂಕಗಳು ಇಲ್ಲವಾದಾಗ ಎಲ್ಲರೂ ಈ ಶಿಷ್ಯಂದಿರ ಉಪಚಾರ ಮರೆತುಬಿಟ್ಟರು. ಒಂದು ದಿನ ಶಿಷ್ಯನೊಬ್ಬನಿಗೆ ಆರೋಗ್ಯ ಹದಗೆಟ್ಟಾಗ, ಆತನ ಶುಶ್ರೂಷೆ ಮಾಡಲು ಯಾರೂ ಮುಂದೆ ಬರದಂತ ಪರಿಸ್ಥಿತಿಯೂ ನಿರ್ಮಾಣವಾಗಿ ಬಿಡುತ್ತದೆ. ಊರಿನ ಬಡ ಕುಂಬಾರನೊಬ್ಬನ ಮಡದಿಯೊಬ್ಬಳು ಆತನ ಸೇವೆ ಮಾಡಿ ಆತ ಮರಳಿ ಮೊದಲಿನಂತಾಗುವಲ್ಲಿ ಸಹಾಯ ಮಾಡುತ್ತಾಳೆ.

ಕಿರಾಡುವಿಗೆ ಹಿಂತಿರುಗಿದ ಗುರುಗಳಿಗೆ ಇಂಥ ಸುದ್ದಿ ಕೇಳಿ ಆಘಾತವಾಗಿ ‌ʻಮಾನವೀಯತೆ ಇಲ್ಲದ ಊರಿನಲ್ಲಿ ಮನುಷ್ಯರೇ ಇಲ್ಲವಾಗಿ ಹೋಗಲಿʼ ಎಂದು ಶಾಪಕೊಟ್ಟುಬಿಟ್ಟರು. ಶಾಪದ ಪರಿಣಾಮ ಊರಿಗೆ ಊರೇ ಶಿಲೆಯಾಗಿ ಬಿಡುತ್ತದೆ. ಒಬ್ಬಳನ್ನು ಹೊರತುಪಡಿಸಿ. ತನ್ನ ಶಿಷ್ಯನಿಗೆ ಸಹಾಯ ಮಾಡಿದ ಕುಂಬಾರನ ಮಡದಿಗೆ ಮಾತ್ರ ಈ ಶಾಪದಿಂದ ವಿನಾಯಿತಿ. ಆದಷ್ಟು ಬೇಗ ಊರು ಬಿಟ್ಟು ಹೋಗು, ಹಿಂತಿರುಗಿ ನೋಡಬೇಡ. ನೋಡಿದರೆ ಶಾಪ ನಿನಗೂ ತಟ್ಟುತ್ತದೆ ಎನ್ನುತ್ತಾನೆ.

ಊರಿಗೆ ಊರೇ ಶಾಪಗ್ರಸ್ಥವಾಗಿ ಶಿಲೆಯಾದಾಗ ಕಂಗಾಲಾಗಿ ಕುಂಬಾರನ ಮಡದಿ ಊರಿನಿಂದ ಹೊರಟುಬಿಡುತ್ತಾಳೆ. ತನ್ನ ಊರು, ಮನೆ, ಕಸುಬು ಎಲ್ಲ ಬಿಟ್ಟು ಬರಿಗೈಯಲ್ಲಿ ಹೊರಡುವಾಗ, ಕೊನೆಗೊಮ್ಮೆ ಊರನ್ನು ಕಣ್ತುಂಬಿಕೊಳ್ಳುವ ಬಯಕೆಯಿಂದ ಸ್ವಾಮೀಜಿಗಳ ಶಾಪವನ್ನು ಒಂದರೆ ಕ್ಷಣ ಮರೆತು, ತಡೆಯಲಾಗದೆ ಕೊನೇ ಸಾರಿ ಎಂಬಂತೆ ಹಿಂತಿರುಗಿ ನೋಡಿಬಿಡುತ್ತಾಳೆ. ಅಷ್ಟೇ. ಅದೇ ಕೊನೇ ನೋಟ. ಆ ಕ್ಷಣವೇ ಆಕೆಯೂ ಅಲ್ಲಿ ಶಿಲೆಯಾಗಿ ಬಿಡುತ್ತಾಳೆ.

ಆಕೆಯ ಹಿಂತಿರುಗಿ ನೋಡುವಂಥ ಮುಖವಿರುವ ಮೂರ್ತಿ ಕಿರಾಡು ದೇವಾಲಯಗಳ ಸಮುಚ್ಛಯದಿಂದ ಒಂದೆರಡು ಕಿಮೀ ದೂರದಲ್ಲಿ ಇದೆ ಎಂದು ಇಲ್ಲಿ ಮಾತಿಗೆ ಸಿಕ್ಕವರೆಲ್ಲ ಹೇಳುತ್ತಾರೆ. ಕಾವಲುಗಾರನೂ ಅದನ್ನೇ ಹೇಳಿದ. ನಿಜಕ್ಕೂ ಹೀಗೊಂದು ಮೂರ್ತಿ ಇರೋದು ಹೌದಾ ಎಂಬ ಹುಡುಕಾಟದಲ್ಲಿ ನಮಗೆ ಕಂಡಿದ್ದು ಒಂದು ಮೈಲುಗಲ್ಲಿನಂತಹ ರಚನೆ ಮಾತ್ರ.

ಅದೆಲ್ಲಾ ಸರಿ, ಈ ಶಾಪಕ್ಕೂ ದೆವ್ವಗಳಿಗೂ ಸಂಬಂಧ ಏನು? ರಾತ್ರಿ ಇಲ್ಲಿ ಸಂಚರಿಸಿದರೆ ಏನಾಗುತ್ತದೆ ಎಂದರೆ, ಗುರುಗಳ ಶಾಪದಿಂದಾಗಿ ೮೦೦ ವರ್ಷಗಳಿಂದ ಈ ಊರು ಹಾಳು ಬಿದ್ದಿದೆ. ಮನುಷ್ಯರಿಲ್ಲ ಎಂದರೆ ಯಾರು ಬರ್ತಾರೆ? ಹಾಗೇ ಆಗಿದ್ದು, ದೆವ್ವಗಳು ಮೆಟ್ಟಿವೆ. ಜೊತೆಗೆ ಇಲ್ಲಿ ರಾತ್ರಿ ಸಂಚರಿಸಿದರೆ ಅವರು ಜೀವ ಸಹಿತ ಬೆಳಗ್ಗೆ ಬರೋದು ಡೌಟು ಎಂಬ ಉತ್ತರ ಎಲ್ಲರಿಂದ ನಿರಾಯಾಸವಾಗಿ ಸಿಕ್ಕಿಬಿಡುತ್ತದೆ. ಎಲ್ಲ ದೆವ್ವಗಳ ಕಥೆಗಳಂತೆಯೇ.

ಪುರಾತತ್ವ ಇಲಾಖೆಯಿಂದ ನೇಮಿಸಲ್ಪಟ್ಟ ಕಾವಲುಗಾರ ಕೂಡ ಇದನ್ನೇ ಹೇಳಿದ. ʻನಾವೆಲ್ಲ ೬ ಗಂಟೆಗೆ ಕರೆಕ್ಟಾಗಿ ಬಾಗಿಲು ಹಾಕಿ ಬಿಡುತ್ತೇವೆ. ಆಮೇಲಿನ ಸುದ್ದಿಗೆ ನಾವಿಲ್ಲʼ ಎಂದ. ʻಹಾಗಾದರೆ, ರಾತ್ರಿ ಇಲ್ಲಿಗೆ ಬರಬೇಕೆಂದರೆ?ʼ ಎಂದೆ. ʻಅದಕ್ಕೆ ಅನುಮತಿ ಬೇಕು. ಅನುಮತಿ ಸಿಗುವುದೂ ಇಲ್ಲ ಬಿಡಿʼ ಎಂದ.

ಆತ ಹೇಳುವ, ಊರವರು ಹೇಳುವ ಈ ಕಥೆಯೆಲ್ಲ ಅಲ್ಲಿನ ಬೋರ್ಡಿನಲ್ಲಿ ಸಿಗುವುದಿಲ್ಲ. ಇಂಥವೆಲ್ಲ ತೆರೆಯ ಹಿಂದಿನ ಕಥೆಗಳು. ಹಾಗಾದರೆ, ಎಲ್ಲೆಲ್ಲೂ ಚದುರಿ ಬಿದ್ದ ಮೂರ್ತಿಗಳು, ಮುರಿದ ಗೋಪುರ, ಕೈಯಿಟ್ಟಲ್ಲಿ, ಕಾಲಿಟ್ಟಲ್ಲಿ, ಎಡವಿದಲ್ಲಿ ತೊಡರುವ ಅಪರೂಪದ ಶಿಲ್ಪಕಲಾಕೃತಿಗಳು ಮಾತ್ರ ಬೇರೆಯದೇ ಕಥೆಯನ್ನೇನೋ ಹೇಳುತ್ತಿವೆಯಲ್ಲ… ಎಂದು ಅನಿಸಿದರೆ, ಇಲ್ಲಿನ ಚುಟುಕು ವಿವರಗಳಲ್ಲಿ ಅದಕ್ಕೂ ಕಾರಣ ದೊರೆಯುತ್ತದೆ. ಭಾರತದ ಎಲ್ಲ ನತದೃಷ್ಟ ದೇವಾಲಯಗಳಂತೆ ಇವೂ ಕೂಡ ದಾಳಿಗಳಲ್ಲಿ ಮುಸ್ಲಿಂ ದಾಳಿಕೋರರ ಕೈಯಲ್ಲಿ ನಲುಗಿದವುಗಳೇ.

ಕಿರಾಡು ದೇವಾಲಯಗಳನ್ನು ೧೧ ಹಾಗೂ ೧೨ನೇ ಶತಮಾನಗಳ ನಡುವೆ ಕಿರಾಡ್‌ ಎಂಬ ರಜಪೂತ ವಂಶಸ್ಥರು ಕಟ್ಟಿದರು ಎಂದು ಹೇಳಲಾಗುತ್ತದೆ. ಆದರೆ, ಇನ್ನೂ ಕೆಲವು ಆಧಾರಗಳ ಪ್ರಕಾರ, ಇದನ್ನು ಕಟ್ಟಿದ ಕೀರ್ತಿ ಚಾಲುಕ್ಯ (ಸೋಲಂಕಿ) ದೊರೆಗಳಿಗೆ ಸಲ್ಲಬೇಕು ಎಂಬ ವಾದವೂ ಇದೆ. ಇಲ್ಲಿ ೧೦೮ ಶಿವ ಹಾಗೂ ವಿಷ್ಣು ದೇವಾಲಯಗಳಿದ್ದವು, ಆದರೆ ಇವೆಲ್ಲವೂ ಆಗ ದಂಡೆತ್ತಿ ಬಂದ ಮುಸ್ಲಿಂ ರಾಜರುಗಳ ಕೈಗೆ ಸಿಕ್ಕಿ ನಾಶವಾಗಿವೆ ಎಂಬ ವಿವರಣೆಗಳೂ ದಕ್ಕುತ್ತದೆ.

ಸದ್ಯ ಇರುವುದು ಐದು ದೇವಾಲಯಗಳು ಮಾತ್ರ. ಅದರಲ್ಲಿ ಸೋಮೇಶ್ವರ ದೇವಾಲಯ ಇದ್ದುದರಲ್ಲಿ ಪೂರ್ಣ ಸ್ಥಿತಿಯಲ್ಲಿ ಗೋಚರಿಸುತ್ತದೆ ಬಿಟ್ಟರೆ, ಉಳಿದ ನಾಲ್ಕೂ ದೇವಾಲಯಗಳು ಸಾಕಷ್ಟು ಶಿಥಿಲಾವಸ್ಥೆಯಲ್ಲಿವೆ. ಮಧ್ಯಪ್ರದೇಶದ ಖಜುರಾಹೋ ನೋಡಿದವರಿಗೆ, ಈ ಕಿರಾಡೋ ಕೂಡಾ ಅದೇ ಥರ ಇದೆಯಲ್ಲ ಅನಿಸದಿರದು. ಖಜುರಾಹೋ ಗೆ ಯಾವುದರಲ್ಲೂ ಕಡಿಮೆಯಿಲ್ಲ ಎಂಬ ವಾಸ್ತುಶಿಲ್ಪ. ಎಲ್ಲಿ ನೋಡಿದರೂ ಶೃಂಗಾರಮಯ ಸನ್ನಿವೇಶಗಳ ಶಿಲ್ಪಕಾವ್ಯ. ಅದಕ್ಕೇ ಇದು ರಾಜಸ್ಥಾನದ ಖಜುರಾಹೋ ಎಂದೂ ಕರೆಯಲ್ಪಡುತ್ತದೆ.

ಖಜುರಾಹೋಗೂ ಇದಕ್ಕೂ ಇರುವ ತಾಳಮೇಳಗಳನ್ನು ತುಲನೆ ಮಾಡುತ್ತಾ ಇದ್ದಾಗ ಅಲ್ಲಿಗೆ, ಪಕ್ಕಾ ರಾಜಸ್ಥಾನಿ ದಿರಿಸಿನಲ್ಲಿ ತಲೆಗೆ ಸಾಂಪ್ರದಾಯಿಕ ಮುಂಡಾಸು ಸುತ್ತಿ, ಬಿಳಿ ಜುಬ್ಬಾ ಪಂಚೆಯಲ್ಲಿದ್ದ ಕೋಶಾರಾಮ್‌ ಆಗಮನವಾಯ್ತು. ನಾನು ಫೋಟೋ ತೆಗೆಯುವುದನ್ನೇ ಗಮನಿಸಿ ಪೋಸು ಕೊಟ್ಟ್ರು ಫೋಟೋ ಹೊಡೆಸಿಕೊಂಡು, ಹರಟೆ ಹೊಡೆದು, ʻಬರೀ ಫೋಟೋ ಮಾತ್ರ ಯಾಕೆ ತೆಗೀತೀರಿ? ಬನ್ನಿ, ಇದೆಲ್ಲ ನೀವು ವಿಡಿಯೋ ಮಾಡಿಡಬೇಕು. ಭಾರತ ಶಿಲ್ಪಕಲೆಯ ಅಮೂಲ್ಯ ಆಸ್ತಿ ಇದು. ಶಿಲ್ಪಕಲೆಯ ಮೂಲಕ ಆಗಿನ ಕಾಲದಲ್ಲಿ ಜನರಿಗೆ ಹೇಗೆ ತಿಳಿವಳಿಕೆ ಮೂಡಿಸುತ್ತಿದ್ದರು ನೋಡಿ. ನೋಡಿದರೆ ಸಾಕು ಎಲ್ಲ ಅರ್ಥವಾಗುತ್ತದೆʼ ಎಂದು ಮೆಲ್ಲಗೆ ಶುರು ಮಾಡಿದರು. ತಿರುಗಿ ನೋಡಿದರೆ ನಾನೂ ಕುಂಬಾರನ ಹೆಂಡತಿಯಂತೆ ಎಲ್ಲಿ ಕಲ್ಲಾಗಿ ಬಿಡುವೆನೋ ಎಂಬಂತೆ ಒಮ್ಮೆಯೂ ತಿರುಗದೆ ಮೆಲ್ಲನೆ ಕಾಲ್ಕಿತ್ತೆ.

‍ಲೇಖಕರು ರಾಧಿಕ ವಿಟ್ಲ

January 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: