ನನ್ನ ಹೆತ್ತಬ್ಬೆಗೆ
ಯಮುನಾ ಗಾಂವ್ಕರ್, ಕಾರವಾರ

ಹೆತ್ತಬ್ಬೆಗೆ
ನನ್ನಬ್ಬೆ ತನ್ನಬ್ಬೆಗೆ ಹೇಳಿದ್ದಳು
ಅಬ್ಬೆ ನನ್ನನ್ನು ಬೇಗ ದೊಡ್ಡವಳಾಗಿಸು !
ಘಟ್ಟ-ಅಟ್ಟ ಏರಿಳಿದು,
ಬಾವಿ-ಬಣಿವೆ-ಮರವ ಹತ್ತಿಳಿದು
ಬೆಟ್ಟ ಕಣಿವೆಯಲಿ ಮೋಡಗಳ ಸೀಳಿ
ಏರ ಏರುವೆ
ಕತ್ತಲ ಏಕಾನದ ಸುಳಿ ಮಾರ್ಗದಲಿ
ಬೆಳಕ ಅರಸುವೆ, ಜಗವ ಸುತ್ತುವೆ
ಅಬ್ಬೆ ನನ್ನನ್ನು ಬೇಗ ದೊಡ್ಡವಳಾಗಿಸು !
ನಾನು ನನ್ನಬ್ಬೆಗೆ ಹೇಳಿದೆ
ಅಬ್ಬೆ ನಾನೊಂದು ಮಗು
ಮನುಷ್ಯನ ಮಾಡದಿರು!
ಕಣ್ಬಿಟ್ಟು, ಬಾಯ್ಬಿಟ್ಟು,
ಮನಬಿಚ್ಚಿ ನೋಡದಿರಲಿ
ಜಗವ ನೋಡದಿರಲಿ.
ಊರು-ಕೇರಿ-ಬಯಲು-ಬಸ್ಸು
ಕಾಡು-ಕಾರು-ರೈಲು-ಶಾಲೆ ಎಲ್ಲೆಂದರಲ್ಲಿ
ಬೇಡ ನನ್ನ ಮೇಲೊಂದು ಅತ್ಯಾಚಾರ
ಹಗಲಾಗಲೀ ರಾತ್ರಿಯಾಗಲಿ
ಕತ್ತಲೆಯ ಕಾಟ ತಪ್ಪದು!
ಅಬ್ಬೆ, ಮಗುವ ಮನುಷ್ಯನ ಮಾಡದಿರು!
ಆದರೆ, ನನ್ನೊಂದಿಗೆ ಭ್ರೂಣ ಮಾತಾಡುತ್ತಿದೆ
ಅಬ್ಬೆ, ನಾನು ಬರೀ ಭ್ರೂಣವಲ್ಲ
ಹಸಿದು ನೀರಡಸಿದ ಸೋತ ದೇಹದ
ಅಭದ್ರ ನಿತ್ರಾಣ ಗರ್ಭದಾಚೆ ಹೊರಬರುವೆ
ಪ್ರಪಂಚಿಗರ ಪ್ರಭಂಜನಕ್ಕೆ ಸಿಕ್ಕು
ನನ್ನನ್ನು ಪರೀಕ್ಷಿಸದಿರು !
ಅಬ್ಬೆ ಇಲ್ಲದ ಜಗವ ಸೃಷ್ಠಿಸದಿರು, ಅಬ್ಬೆ!







Chennagide
addilro!
ಖಂಡಿತ ಒಳಗೊಳಗಿನ ವಾಸ್ತವದ ,ತಲ್ಲನಗಳ ಕಟ್ಟಾದ ಅನಾವರಣ