'ಆದ್ರೆ ಇನ್ನೊಂದ್ಸಲ ಆ ಸುಷ್ಮಾಗೇನಾದ್ರೂ ಸಹಾಯ ಮಾಡೋಕೋದ್ರೋ..'!!

ಪರೋಪಕಾರಾರ್ಥಂ….!

ಎಸ್.ಜಿ.ಶಿವಶಂಕರ್

‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಸಂಸ್ಕೃತ ಉಕ್ತಿಯೊಂದಿದೆ. ಅಂದರೆ ಈ ಶರೀರ ಇರುವುದು ಪರರ ಉಪಕಾರಕ್ಕೆ! ಏನು? ಹಾಗಾದರೆ ನಮ್ಮ ಶರೀರ ಇರುವುದು ನಮ್ಮ ಉಪಯೋಗಕ್ಕಲ್ಲವೆ? ಎಂಬ ಗಾಬರಿ ಸಹಜವಾಗಿ ಮೂಡುವುದು! ’ಇಲ್ಲ..!’ ಎಂಬುದೇ ಈ ಉಕ್ತಿಯ ಅರ್ಥ! ಇದು ’ನಿನ್ನ ಶರೀರವನ್ನು ಪರರ ಉಪಕಾರಕ್ಕಾಗಿ ಬಳಸು’ ಎಂದು ಸ್ಪಷ್ಟವಾಗಿ ಹೇಳುತ್ತದೆ.

ರಾಮರಾಜ್ಯದಲ್ಲೇನೋ ಈ ಮಾತು ಸರಿ ಹೋಗುತ್ತದೆ…ಆದರೆ ರಾವಣರ ರಾಜ್ಯದಲ್ಲಿ ಈ ಮಾತು ಬಂದರೆ ಇದರ ಪ್ರಸ್ತುತತೆ ಏನು? ಇಂದಿನ ದಿನಗಳಲ್ಲಿ ಇಎಷ್ಟು ಅನ್ವಯವಾಗುತ್ತದೆ? ಸತ್ಪ್ರಜೆಯೊಬ್ಬ ಮಾಡಬೇಕಾದ ಕರ್ತವ್ಯಗಳಲ್ಲಿ ಪರೋಪಕಾರವೂ ಒಂದು. ಇದರಲ್ಲಿ ಎರಡನೆಯ ಮಾತಿಲ್ಲ. ಒಳ್ಳೆಯವರಾಗಬೇಕು, ಸತ್ಪ್ರಜೆಗಳಾಗಬೇಕೆಂಬ ಹಂಬಲವುಳ್ಳವರೆಲ್ಲರೂ ಉಪಕಾರ ಬುದ್ಧಿಯನ್ನು ಸಹಜವಾಗಿಯೇ ಹೊಂದಿರುತ್ತಾರೆ. ಆದರೆ ಈ ಉಪಕಾರ ಎಷ್ಟರಮಟ್ಟಿಗೆ ಇರಬೇಕು? ಎಷ್ಟು ಮಾಡಿದರೆ ಸರಿ, ಎಷ್ಟು ಮಾಡಿದರೆ ಕಡಿಮೆ? ಇವುಗಳ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲದಿರುವುದರಿಂದ ತಾನು ಮಾಡಿದ್ದೇ ಸರಿ ಎಂದು ಪ್ರತಿಯೊಬ್ಬರೂ ಹೇಳುವುದಕ್ಕೆ ವಿಪುಲ ಅವಕಾಶವಿದೆ-ನಮ್ಮ ಕಾನೂನುಗಳು ಮತ್ತು ಸರ್ಕಾರೀ ನಿಯಮಗಳಂತೆ! ಇಲಾಸ್ಟಿಕ್ಕಿನಂತೆ ಎಷ್ಟು ಬೇಕಾದರೂ ಎಳೆದು ಹಿಗ್ಗಿಸಬಹುದು…ಬೇಡವೆಂದರೆ ಅಣುವಿನಷ್ಟು ಕುಗ್ಗಿಸಬಹುದು! ಇದು ಲಾಯರುಗಳು ಮತ್ತು ಅವರು ಕಕ್ಷಿದಾರರ ಜೇಬು ಅಂದಾಜು ಮಾಡಿ ನಿಗದಿಸುವ ಫೀಜನ್ನು ಅವಲಂಬಿಸಿರುತ್ತವೆ!

ಇಂತಾ ಪರೋಪಕಾರಕ್ಕೆ ತೊಡಗಿದಾಗ ಎಷ್ಟೋ ಸಲ ತೊಡಕಿನಲ್ಲಿ ಸಿಕ್ಕಿಕೊಳ್ಳುವುದೂ ಅನಿವಾರ್ಯವಾಗಿಬಿಡುತ್ತದೆ! ಬರೀ ತೊಡಕೇನು..? ಮಾನ-ಪ್ರಾಣಗಳ ಹರಣವೂ ಆಗಬಹುದು! ಹಾಗೆಂದು ಪರೋಪಕಾರ ಮಾಡದೆ ಸುಮ್ಮನಿರಲಾಗುತ್ತದೆಯೇ..? ’ಉಳ್ಳವರು ಶಿವಾಲಯವ ಮಾಡುವರಯ್ಯ’ ಎಂದು ಭಕ್ತಿ ಭಂಡಾರಿ ಬಸವಣ್ಣ ಹೇಳಿದ್ದಾರೆ! ಪರೋಪಕಾರಿ ಎನಿಸಿಕ್ಕೊಳ್ಳಲು ಹಾತೊರೆಯುವವರೂ ಇದ್ದಾರೆ! ಸಾಮಾನ್ಯವಾಗಿ ಇವರೆಲ್ಲ ಉಳ್ಳವರೇ! ಇಂಥವರು ತಾವು ಮಾಡಿದ ಉಪಕಾರಕ್ಕೆ ಹೆಸರನ್ನೋ ಬಿರುದನ್ನೋ ಅಪೇಕ್ಷಿಸುವುದು ಸಹಜ! ಇದನ್ನು ಸಮಾಜ ಉಪೇಕ್ಷಿಸಬಾರದು! ಹಾಗೆ ಉಪೇಕ್ಷಿಸಿದರೆ ಇವರು ತಾವು ಮಾಡಿದನ್ನೆಲ್ಲಾ ತಮಟೆ ಹೊಡೆದು ಸಾರಲು ಶುರು ಮಾಡಿಬಿಡುತ್ತಾರೆ.

ಪರೋಪಕಾರದ ಹುಚ್ಚು ವಿಶ್ವನಿಗೆ ಇತ್ತೀಚೆಗೆ ಹಿಡಿದದ್ದು; ಸುಮಾರು ಆರು ತಿಂಗಳಿಂದ ಎನ್ನಿ. ಇದಕ್ಕೆ ಮುನ್ನ ಅವನು ಕವಿಯಾಗಲು ಹವಣಿಸಿದ್ದ! ಅವನ ಕವನ ವಾಚನಕ್ಕೆ ಹೆದರಿ ಜನರು ಅವನನ್ನು ಕಂಡ ತಕ್ಷಣ ಮುಖ ಮುಚ್ಚಿಕ್ಕೊಳ್ಳುವುದು ಇಲ್ಲವೇ ತುಂಬಾ ಅವಸರದಲ್ಲಿರುವವರಂತೆ ನಟಿಸುವುದನ್ನು ಕಂಡು ಕವನ ರಚನೆಗೆ ತಿಲಾಂಜಲಿಯನ್ನಿತ್ತಿದ್ದ. ಈಗ ಪರೋಪಕಾರದ ಸಂಸ್ಕೃತ ಶ್ಲೋಕವನ್ನು ಉಚ್ಚರಿಸಲು ಶುರು ಮಾಡಿದ್ದಾನೆ. ಇದರಿಂದ ಒಂದೇನೋ ಒಳ್ಳೆಯದಾಯಿತು. ಅದೆಂದರೆ ವಿಶ್ವ ಜೀವಮಾನದಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಕಲಿತಂತಾಯಿತು!

ವಿಶ್ವನ ಈ ಹೊಸ ಅವತಾರ ಅವನ ಮನೆಯವರಿಗೇನೂ ಹೊಸದಲ್ಲ. ಸದಾ ಏನಾದರೊಂದು ಉಸಾಬರಿ ಹಚ್ಚಿಕೊಳ್ಳುವ ಹವ್ಯಾಸ ವಿಶ್ವನದು. ವಿಶ್ವ ಕವನ ರಚನೆಯನ್ನು ಬಿಟ್ಟಾಗ ತುಂಬಾ ಖುಷಿಯಾಗಿದ್ದು ಬಹುಶಃ ಅವನ ನಾಯಿಗೆ. ವಿಶ್ವ ಪ್ರತಿ ದಿನ ಬೆಳಿಗ್ಗೆ ತಾನು ರಚಿಸಿದ ಕವನಗಳನ್ನು ವರಾಂಡದಲ್ಲಿ ಕುಳಿತು ವಾಚಿಸುತ್ತಿದ್ದ. ಈ ಸಮಯದಲ್ಲಿ ವಿಶ್ವನ ಮನೆಯವರೆಲ್ಲ ಎಚ್ಚರವಾಗಿದ್ದರೂ ಮುಸುಕೆಳೆದು ಮಲಗಿಬಿಡುತ್ತಿದ್ದರು-ಅವನ ಕವನ ವಾಚನ ಮುಗಿಯುವವರೆಗೂ! ಆದರೆ ಪಾಪ ಜಿಮ್ಮಿ, ಮನೆಯ ಬಾಗಿಲು ತೆರೆದಾಕ್ಷಣ ಒಳಗೆ ಬಂದುಬಿಡುತ್ತಿತ್ತು! ಬಂದಮೇಲೆ ಗೊತ್ತಲ್ಲ..?ವಿಶ್ವನ ಕವನ ವಾಚನ ಕೇಳಬೇಕಾಗುತ್ತಿತ್ತು!

ಈಗ ವಿಶ್ವ ಬದಲಾಗಿದ್ದಾನೆ. ಬರೆಯುತ್ತಿದ್ದ ಪ್ಯಾಡು, ಪೆನ್ನು ಮತ್ತು ರೀಮುಗಟ್ಟಲೆ ಪೇಪರನ್ನು ಮಕ್ಕಳಿಗೆ ಕೊಟ್ಟುಬಿಟ್ಟಿದ್ದಾನೆ. ಈಗವನ ಮನಸ್ಸು ಆಧ್ಯಾತ್ಮದತ್ತ ಹೊರಳಿದೆ. ಸತ್ಪ್ರಜೆಯಾಗಿ ದೀನ-ದಲಿತರ ಸೇವೆ ಮಾಡುವ ಹಂಬಲ ಹೊತ್ತಿದ್ದಾನೆ. ’ನಿನ್ನ ನೆರೆಯವರನ್ನು ಪ್ರೀತಿಸು’ ಎಂಬ ಯೇಸುವಿನ ಮಾತು ಬಹಳ ಹಿಡಿಸಿದೆ. ’ಸದುವಿನಯವೇ ಸದಾಶಿವನೊಲುಮೆ’ ಎಂಬ ಬಸವಣ್ಣನವರ ಮಾತನ್ನು ಮನಸ್ಸಿನಲ್ಲಿಯೇ ಮೆಲುಕು ಹಾಕಿತ್ತಾನೆ. ಸಹಜವಾಗಿಯೇ ಮನಸ್ಸು ಪರೋಪಕಾರ ಮಾಡುವ ಸದ್ಭುದ್ದಿ ಸಹ ಅವನಲ್ಲಿ ತುಂಬಿದೆ.

ಮನೆಯಲ್ಲಿರುವಾಗ ಭಿಕ್ಷೆ ಬೇಡಲು ಬಂದವರ ಕಷ್ಟ ಸುಖ ವಿಚಾರಿಸುತ್ತಾನೆ. ಮನೆಯ ಕೆಲಸದಾಕೆಯ ಸಂಸಾರದ ಬಗೆಗೂ ಆಗೀಗ ವಿಚಾರಿಸುತ್ತಾನೆ. ವಿಶ್ವನ ಸಹೋದ್ಯೋಗಿಯೊಬ್ಬರು ಸಾವಿನಂಚಿನಲ್ಲಿದ್ದ ತಂದೆಯನ್ನು ನೋಡಲು ಊರಿಗೆ ಹೋಗಿದ್ದಾಗ ವಿಶ್ವ ಅವರ ಮನೆಯ ರಕ್ಷಣೆಯನ್ನು ಹೊತ್ತಿದ್ದ-ಸ್ವಇಚ್ಛೆಯ ಮೇರೆಗೆ! ಆ ಘಟನೆ ನಡೆದ ಮೇಲೆ ಒಂದು ದಿನ ತನ್ನ ಮನೆಯ ಮುಂದೆಯೇ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ತನ್ನ ಕಾರಿನಲ್ಲಿಯೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಪೋಲೀಸರನ್ನು ಕರೆದು ಉಳಿದ ಕ್ರಮ ಜರುಗಿಸಲು ಎಲ್ಲ ಅನುಕೂಲ ಮಾಡಿಕೊಟ್ಟ! ಇದರಿಂದ ಕೆಲವು ಸಲ ಪೋಲೀಸ್ ಠಾಣೆಗೂ ಕೋರ್ಟಿಗೂ ತಿರುಗಿದ್ದನೆನ್ನಿ!

ಹೀಗೆ, ತಿಂಗಳೊಪ್ಪತ್ತಿನಲ್ಲಿ ವಿಶ್ವನಾಥ್ ’ಪರೋಪಕಾರಿ ವಿಶ್ವಣ್ಣ’ನಾಗಿ ಬದಲಾಗಿದ್ದ! ಇದು ಬಡಾವಣೆಯ ಜನರಿಗೂ ತಿಳಿದುಹೋಗಿತ್ತು! ಒಂದು ದಿನ ಬೆಳಿಗ್ಗೆ ಏಳರ ಸುಮಾರಿಗೆ ವಿಶ್ವನ ಮೊಬೈಲು ರಿಂಗಾಯಿತು. ಪೋನು ರಿಸೀವ್ ಮಾಡಿದ ವಿಶ್ವನಿಗೆ ಅಚ್ಚರಿ ಕಾದಿತ್ತು! ಫೋನು ಮಾಡಿದ್ದು ಮೂರೆನೆಯ ಮನೆಯ ಡಾಕ್ಟರ್ ಬ್ಯಾನರ್ಜಿ ಪತ್ನಿ! ಅರೆ..ಇವರು ನನಗೇಕೆ ಪೋನು ಮಾಡಿದ್ದಾರೆ ಎಂದು ಒಂದು ಕ್ಷಣ ವಿಶ್ವನಿಗೆ ಗಲಿಬಿಲಿಯಾಯಿತು. ಕಾರಣ ಎಂದೂ ಬ್ಯಾನರ್ಜಿಯಾಗಲೀ ಅವರ ಮನೆಯವರಾಗಲೀ ಯಾರೊಂದಿಗೂ ಬೆರೆತವರೇ ಅಲ್ಲ. ವಿಶ್ವ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಆ ಹೊಸ ಬಡಾವಣೆಯಲ್ಲಿ, ಕರ್ನಾಟಕದ ಎಲ್ಲ ಊರುಗಳಿರುವಂತೆ ಬಹುತೇಕ ಹೊರರಾಜ್ಯದ ಜನರೇ ಹೆಚ್ಚಾಗಿದ್ದರು.

ಬ್ಯಾನರ್ಜಿಗಳು, ಚಟರ್ಜಿಗಳು, ಶರ್ಮಾ ವರ್ಮಾಗಳು, ಮಲೆಯಾಳಿಗಳು, ತಮಿಳರು – ಎಲ್ಲಾ ಸೇರಿ ಅದು ಕರ್ನಾಟಕವೋ ಇಲ್ಲಾ ಇನ್ಯಾವುದಾದರೂ ರಾಜ್ಯವೋ ಎಂಬ ಅನುಮಾನ ಹುಟ್ಟಿಸುತ್ತಿತ್ತು! ಕನ್ನಡಿಗರೂ ಅಲ್ಪ ಪ್ರಮಾಣದಲ್ಲದ್ದರು. ಅವರಲ್ಲಿ ವಿಶ್ವನೂ ಒಬ್ಬ. “ನಾನು ವಿಶ್ವನಾಥ ಬೈಯ್ಯಾ ಅವರ ಹತ್ರ ಮಾತಾಡ್ತಿದ್ದೀನಾ..?” ಸ್ತ್ರೀದನಿ ಇಂಗ್ಲಿಷಿನಲ್ಲಿ ಉಲಿಯಿತು. “ಹೌದು..ನೀವು ಯಾರು..?” ಕಕ್ಕಾಬಿಕ್ಕಿಯಾಗಿ ವಿಶ್ವ ಕೇಳಿದ. ತಾನು ಡಾಕ್ಟರ್ ಬ್ಯಾನರ್ಜಿಯ ಪತ್ನಿ ಎಂದು ಪರಿಚಯಿಸಿಕೊಂಡ ಹೆಣ್ಣು, ತನ್ನ ಮನೆಯ ಕುಕಿಂಗ್ ಗ್ಯಾಸು ಮುಗಿದು ಹೊಗಿರುವುದಾಗಿಯೂ ತನ್ನ ಪತಿ ಕೆಲಸಕ್ಕೆ ತುರ್ತಾಗಿ ಹೋಗಿರುವುದರಿಂದ ಅರ್ಜೆಂಟಾಗಿ ತನಗೆ ಓದು ಸಿಲಿಂಡರ್ ಕೊಡಿಸಿ ಉಪಕಾರ ಮಾಡಬೇಕೆಂದು ಕೋರಿದಳು ಆ ಮಹಿಳೆ.

ಶಾಲೆಗೆ ಹೊರಡುತ್ತಿರುವ ಮಕ್ಕಳೂ, ಮೈತುಂಬಾ ಕೆಲಸ, ಜೊತೆಗೆ ಗ್ಯಾಸು ಕೈಕೊಟ್ಟಿದೆ! ಗಂಡ ಮನೆಯಲ್ಲಿ ಇಲ್ಲದ ಪರಿಸ್ಥಿತಿಯಲ್ಲಿ ಹೀಗಾದರೆ ಮಹಿಳೆಗೆಷ್ಟು ತೊಂದರೆಯಾಗುವುದೆಂದು ನೆನೆದು ವಿಶ್ವನ ಮನಸ್ಸು ಬೆಣ್ಣೆಯಂತೆ ಕರಗಿಹೋಯಿತು. ವಿಶ್ವನ ಪರೋಪಕಾರಿ ಮನಸ್ಸು ತಕ್ಷಣ ಕಾರ್ಯಪ್ರವೃತ್ತವಾಯಿತು. ಮುಂದಿನ ಬೀದಿಯಲ್ಲಿದ್ದ ತನ್ನ ಸಹೋದ್ಯೋಗಿ ಪರಮೇಶಿಯನ್ನು ಬೇಡಿ ಒಂದು ಸಿಲಿಂಡರ್ ತಂದು ಬ್ಯಾನರ್ಜಿ ಮನೆಗೆ ಕೊಟ್ಟು ತೃಪ್ತಿಪಟ್ಟುಕೊಂಡ ವಿಶ್ವ. ಇಂತಾ ಸಹಾಯಗಳನ್ನು ಮಾಡಿದಾಗಲೆಲ್ಲಾ ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾಭಾವ ತುಂಬಿ ಆನಂದವಾಗುತ್ತಿತ್ತು ವಿಶ್ವನಿಗೆ.

ಮಧ್ಯಾನ್ಹ ಆಫೀಸಿಗೆ ಹೆಂಡತಿ ಫೋನಾಯಿಸಿ ಗ್ಯಾಸು ಮುಗಿದಿದೆ ಎಂದಾಗ ವಿಶ್ವನಿಗೆ ಗಾಬರಿಯಾಯಿತು! ಗ್ಯಾಸ್ ಏಜೆನ್ಸಿಗೆ ಫೋನು ಮಾಡಿ ತಾನು ಬುಕ್ ಮಾಡಿದ ಗ್ಯಾಸ್ ಸಿಲಿಂಡಿರಿನ ಗತಿ ಏನಯಿತೆಂದು ವಿಚಾರಿಸಿದ. ಇನ್ನೂ ಹತ್ತು ದಿನ ಕಾಯಬೇಕಾಗುತ್ತದೆ ಎಂದಾಗ ವಿಶ್ವನಿಗೆ ಸಿಡಿಲು ಬಡಿದಂತಾಯಿತು! ಇನ್ನಿಬ್ಬರು ಸ್ನೇಹಿತರನ್ನು ವಿಚಾರಿಸಿದ. ಎಲ್ಲ ಕಡೆಯಲ್ಲೂ ’ಇಲ್ಲ’ ಎಂಬ ಉತ್ತರ ಕೇಳಿ ಹರಕೆಯ ಕುರಿಯಂತೆ ’ಬ್ಯಾ’ ಎಂದು ಕೂಗುವಂತಾಯಿತು. ವಿಶ್ವನ ಮೈಬಿಸಿಯಾಗಿ ಹಣೆಯಲ್ಲಿ ಬೆವರ ಹನಿಗಳು ಮೂಡಿದವು. ಇನ್ನು ವಿಶಾಲೂ ತನ್ನನ್ನು ಸುಮ್ಮನೆ ಬಿಟ್ಟಾಳೆಯೇ? ನೆನಸಿ ದಿಗಿಲಾಯಿತು. ಬೆಳಿಗ್ಗೆ ಪರಮೇಶಿಯನ್ನು ಬೇಡಿ ಬ್ಯಾನರ್ಜಿ ಮನೆಗೆ ಸಿಲಿಂಡರ್ ಕೊಡಿಸಿದರೆ ಈಗ ತನ್ನ ಮನೆಗೇ ಇಲ್ಲ! ಬೆಳಿಗ್ಗೆ ಆ ಕೆಲಸ ಮಾಡದಿದ್ದರೆ ಪರಮೇಶಿಯ ಸಿಲಿಂಡರ್ ತನ್ನ ಮನೆಗೆ ತಂದುಕ್ಕೊಳ್ಳಬಹುದಿತ್ತು!

’ಇಲೆಕ್ಟ್ರಿಕ್ ಸ್ಟೌ ಉಪಯೋಗಿಸುತ್ತಿರು, ಏನಾದರೂ ವ್ಯವಸ್ಥೆ ಮಾಡುತ್ತೇನೆ’ ಎಂದು ಮಡದಿಗೆ ಆಶ್ವಾಸನೆ ಕೊಟ್ಟರೂ, ಸಂಜೆಯೊಳಗೆ ಸಿಲಿಂಡರ್ ಸಿಗುತ್ತದೆಂಬ ವಿಶ್ವಾಸವಿರಲಿಲ್ಲ! ಸಂಜೆ ಸೋತ ಮುಖದೊಂದಿಗೆ ವಿಶ್ವ ಮನೆಗೆ ಬಂದ! ಇದ್ದ ಸ್ನೇಹಿತರನ್ನೆಲ್ಲಾ ಕೇಳಿದರೂ ಗ್ಯಾಸ್ ಸಿಲಿಂಡರ್ ಸಿಕ್ಕಿರಲಿಲ್ಲ. ಕಾಫಿಯೊಂದಿಗೆ ಬಂದ ಹೆಂಡತಿಯ ಮುಖ ನೋಡಲು ಧೈರ್ಯ ಬರಲಿಲ್ಲ.

“ಬ್ಯಾನರ್ಜಿ ಮನೇಗೆ ಹೇಗಾದ್ರೂ ಹೊಂದಿಸಿ ಸಿಲಿಂಡರ್ ಎತ್ತಿಕೊಂಡು ಹೋಗಿ ಕೊಡೋದಕ್ಕಾಗುತ್ತೆ..? ಸ್ವಂತಕ್ಕೆ ಮಾಡೋಕಾಗೊಲ್ಲವಾ..? ಇಂತಾ ಪರೋಪಕಾರ ಮಾಡ್ತಾ ಕೂತರೆ ಮನೆ ಉದ್ಧಾರವಾಗೊಲ್ಲ..ಇವತ್ತು ರಾತ್ರಿ ಅಡಿಗೆಗೆ ಅದೇನು ವ್ಯವಸ್ಥೆ ಮಾಡ್ತೀರೋ ಮಾಡಿ! ಆ ನಿಮ್ಮ ಇಲೆಕ್ಟ್ರಿಕ್ ಸ್ಟೌ ಕೂಡ ಕೆಟ್ಟು ಕೂತಿದೆ! ಇಷ್ಟೇ ನಿಮ್ಮ ಕೈಲಾಗೋದು” ವಿಶಾಲೂ ಕುಟುಕಿದಳು. “ಲೇ ವಿಶಾಲೂ ಒಂದಿಷ್ಟು ಪರರ ಬಗೆಗೆ ಅನುಕಂಪ ಇರಬೇಕು. ಬೇರೆಯವರಿಗೆ ಒಂದಿಷ್ಟು ಸಹಾಯ ಮಾಡಿದರೆ ನಮ್ಮ ಗಂಟೇನು ಹೋಗುತ್ತೆ..?’ ದಿಫೆನ್ಸ್ ಲಾಯರಿನಂತೆ ವಾದ ಮುಂದಿಟ್ಟ.

“ಏನು ಗಂಟು ಹೋಗೋದಾ..? ಮಧ್ಯಾನ್ಹದಿಂದ ಗಂಟಲು ಹರಿಯೋ ಹಾಗೆ ಹೇಳ್ತಿದ್ದೀನಿ ಗ್ಯಾಸಿಲ್ಲಾಂತ! ನೀವು ನೋಡಿದ್ರೆ ಗಂಟೇನು ಹೋಗುತ್ತೆ ಅಂತಿದ್ದೀರ! ಯಾವಾಗ್ಲೂ ಹೀಗೆ ಗ್ಯಾಸು ಮುಗಿದಾಗ ಪರಮೇಶಿ ಮನೇಲಿದ್ದ ಸ್ಪೇರ್ ಸಿಲಿಂಡರನ್ನು ತರ್ತಿದ್ದೋ..ಬೆಳಿಗ್ಗೆ ಅದನ್ನ ಆ ಮಿಟುಕಲಾಡಿ ಬ್ಯಾನರ್ಜಿ ಹೆಂಡತಿ ಸುಷ್ಮಾಗೆ ಕೊಡಿಸಿದ್ದೀರಲ್ಲ..? ಅದೇನು ಅವಳ ಮೇಲೆ ಅಷ್ಟೊಂದು ಆಸಕ್ತಿ..?” ವಿಶಾಲೂ ಮಾತಿಗೆ ವಿಶ್ವ ಸುಸ್ತಾದ! ಬವಳಿ ಬೆಂಡಾದ! ತಾನು ಮಾಡಿದ ಉಪಕಾರ ಈ ಅರ್ಥವನ್ನು ತೆಗೆದುಕೊಳ್ಳುತ್ತದೆ ಎಂದವನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ! ಅಲ್ಲ…ತಾನು ಬ್ಯಾನರ್ಜಿಯ ಹೆಂಡತಿಯನ್ನು ನೋಡಿ ಸಹಾಯ ಮಾಡಿದೆನೆ..? ಇಲ್ಲ! ಖಂಡಿತಾ ಇಲ್ಲ! ಛೆ..ಛೆ..ಇದು ವಿಪರೀತಕ್ಕಿಟ್ಟುಕೊಂಡಿತಲ್ಲ? ವಿಶಾಲೂ ಪ್ರಹಾರಕ್ಕೆ ಪ್ರತಿ ಅಸ್ತ್ರವಿಲ್ಲದೆ ವಿಶ್ವ ತತ್ತರಿಸಿದ.

ರಾತ್ರಿ ಹೇಗೋ ಕಳೆಯಿತು. ಮೊದಲು ಹೆದರಿಸಿದಂತೆ ವಿಶಾಲೂ ಮನೆಮಂದಿಯನ್ನು ಉಪವಾಸ ಕೆಡವಲಿಲ್ಲ! ’ಹೇಗೆ ನಿಭಾಯಿಸಿದ” ಎಂದು ಕೇಳುವ ಮನಸ್ಸಾದರೂ ಧೈರ್ಯ ಸಾಲಲಿಲ್ಲ! ಮರುದಿನ ಬೆಳಿಗ್ಗೆ ಉಪಹಾರವೂ ಸಿಕ್ಕಿತು. ಅದು ಗೊಜ್ಜವಲಕ್ಕಿ! ಏನಾದರಾಗಲೀ ಅಷ್ಟಾದರೂ ಆಯಿತಲ್ಲ! ಮುಂದೇನು ಎನ್ನುವ ಪ್ರಶ್ನೆ ವಿಶ್ವನ ಮುಂದೆ ದೊಡ್ಡದಾಗಿತ್ತು! ಅಷ್ಟಕ್ಕೆ ಹೆದರಿದ್ದಾಗ ಪರಮೇಶಿಯ ಹೆಂಡತಿ ಫೋನು ಮಾಡಿ ತಮ್ಮ ಮನೆಯಲ್ಲಿ ಗ್ಯಾಸು ಮುಗಿದಿದೆಯೆಂದೂ ತಮ್ಮ ಸಿಲಿಂಡರ್ ವಾಪಸ್ಸು ಮಾಡುವಂತೆ ಕೇಳಿಕೊಂಡಳು!

’ನೀರೊಳಗಿರ್ದು ಬೆಮರ್ದನುರಗಪತಾಕಂ!’ ಎಂಬ ರನ್ನನ ಕಾವ್ಯವಾಣಿಯಂತೆ ನವಂಬರಿನ ಬೆಳಗಿನ ಚಳಿಯಲ್ಲಿ ಬೆವರಿ ಬಸವಳಿದ ವಿಶ್ವ! ಒಂದು ಸಿಲಿಂಡರಿಗೇ ತಾಪತ್ರಯವಾಗಿರುವಾಗ ಈಗ ಎರಡೆರಡು ಸಿಲಿಂಡರಿನ ಚಿಂತೆ! ಒಂದು ತನ್ನ ಮನೆಗೆ, ಮತ್ತೊಂದು ಪರಮೇಶಿಯಿಂದ ಎರವಲು ಪಡೆದದ್ದು ಹಿಂದಿರುಗಿಸಲು! ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡೆನಲ್ಲ ಎಂದು ವಿಶ್ವ ಪೇಚಾಡಿದ! ಆದರೇನು ಬೇರಾವ ದಾರಿಯೂ ಕಾಣಿಸಲಿಲ್ಲ. “ಏನ್ರೀ..ಈಗ ಎರಡು ಸಿಲಿಂಡರು ಬೇಕಲ್ಲ..? ಇವತ್ತಂತೂ ಗ್ಯಾಸು ಬರದಿದ್ದರೆ ನಾನೂ ನನ್ನ ಮಕ್ಕಳೂ ಬ್ಯಾನರ್ಜಿ ಮನೆ ಮುಂದೆ ಸತ್ಯಾಗ್ರಹ ಹೂಡೋದು ಗ್ಯಾರಂಟಿ” ವಿಶಾಲೂ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿಬಿಟ್ಟಳು!

“ಮಧ್ಯಾನ್ಹದೊಳಗೆ ಏನಾದರೂ ಮಾಡ್ತೀನಿ” ವಿಶಾಲೂಗೂ ಮತ್ತು ಪರಮೇಶಿ ಹೆಂಡತಿಗೂ ಹೇಳಿ ವಿಶ್ವ ಎಂದಿಗಿಂತಲೂ ಬೇಗನೆ ಆಫೀಸಿಗೆ ಹೊರಟ. ಆಫೀಸಿಗೆ ಹೋಗುವ ಮುಂಚೆ ಗ್ಯಾಸಿನಂಗಡಿ ಮಾಲೀಕನಿಗೆ ಎರಡು ಸಿಲಿಂಡರಿಗಾಗಿ ದುಂಬಾಲು ಬಿದ್ದ! ಮಾಲೀಕ ಅಚ್ಚರಿಯಿಂದ ವಿಶ್ವನನ್ನು “ ಅಲ್ಲಾ ಸಾರ್, ಎಲ್ಲಾ..ಓಂದೇ ಒಂದು ಸಿಲಿಂಡರ್ ಕೊಡೀಂತ ಗೋಗರೆದರೆ ನೀವು ಎರಡು ಕೇಳ್ತೀರಲ್ಲ..? ಏನು ಎರಡು ಸಂಸಾರವೇ..?” ಎಂದು ಕೇಳಿ ಮುಸಿಮುಸಿ ನಕ್ಕ! ವಿಶ್ವನಿಗೆ ನಖಶಿಖಾಂತ ಉರಿದು ಹೋಯಿತು! “ರೀ..ನಿಮ್ಮಿಂದ ಆಗೋದಾದ್ರೆ ಕೊಡಿ..ಇಲ್ಲದ್ದು ಕೇಳಬೇಡಿ” ಎಂದು ರೇಗಿದ.

“ಹಾಗಾದ್ರೆ ಇನ್ನೊಂದು ವಾರ ಸಿಲಿಂಡರ್ ಇಲ್ಲ ಸಾರ್” ಖಡಾಖಂಡಿತವಾಗಿ ಹೇಳಿಬಿಟ್ಟ! “ನಾನು ಗ್ಯಾಸ್ ಕಂಪೆನಿಗೆ ಕಂಪ್ಲೈಂಟ್ ಮಾಡ್ತೀನಿ” ವಿಶ್ವ ಹೆದರಿಸಿದ. “ಮಾಡಿ ಸಾರ್..ಅದು ನಿಮ್ಮ ಸ್ವಾತಂತ್ರ್ಯ! ಅದರೆ ಅದರಿಂದ ಏನೂ ಆಗೊಲ್ಲ ಅನ್ನೋದು ತಿಳಿದಿದ್ದರೆ ಒಳ್ಳೇದು” ಮತ್ತದೇ ಕೆಟ್ಟ ಮುಸಿಮುಸಿ ನಗೆಯೊಂದಿಗೆ ಮಂಗಳ ಹಾಡಿಬಿಟ್ಟ! ದುರ್ದಾನ ತೆಗೆದುಕೊಂಡವನಂತೆ ವಿಶ್ವ ಅಲ್ಲಿ ನಿಲ್ಲದೆ ಆಫೀಸಿಗೆ ಹೊರಟ! ಇಡೀ ದಿನ ಆಫೀಸಿನ ಸಮಯವನ್ನು ದುಗುಡ, ದುಮ್ಮಾನದಿಂದ ಕಳೆದ ವಿಶ್ವ. ಕೆಲಸದಲ್ಲೂ ಮನಸ್ಸು ನಿಲ್ಲದೆ ಬಾಸಿನಿಂದಲೂ ಬೈಸಿಕೊಂಡ!

’ಛೆ…ಒಂದು ಗ್ಯಾಸ್ ಸಿಲಿಂಡರ್ ತನ್ನನ್ನು ಇಂತಾ ಸಂಕಟಕ್ಕೆ ಸಿಕ್ಕಿಸಿತ್ತಲ್ಲಾ’ ಎಂದು ಪೇಚಾಡಿದ. ಹೀಗಾಗುತ್ತೆ ಎಂದು ತಿಳಿದಿದ್ದರೆ ಪರಮೇಶಿ ಮನೆಯ ಸಿಲಿಂಡರನ್ನು ಬ್ಯಾನರ್ಜಿ ಮನೆಗೆ ಕೊಡುತ್ತಿರಲಿಲ್ಲ! ಈಗ ಈ ವಿಷಯ ಇನ್ನೊಂದು ತಿರುವು ಪಡೆದಿತ್ತು. ತಾನು ಬ್ಯಾನರ್ಜಿ ಹೆಂಡತಿಯ ರೂಪಕ್ಕೆ ಮಾರುಹೋಗಿರುವೆ ಎಂದು ವಿಶಾಲೂ ಮಾತಾಡುತ್ತಿದ್ದಾಳಲ್ಲ? ವಿಶ್ವನ ತಳಮಳಕ್ಕೆ ತಳವೇ ಇಲ್ಲದಂತಾಗಿತ್ತು!

ಸಂಜೆಯೊಳಗೆ ಏನೂ ಸಾಧಿಸಲಾರದೆ ಅಳುಕು ಮನಸ್ಸಿನಿಂದ ಮನೆಯೊಳಕ್ಕೆ ಕಾಲಿಟ್ಟ! ವಿಶಾಲೂ ಮೌನ ಸ್ವಾಗತಿಸಿತು. ಅವಳ ಮೌನ ಅಪಾಯಕಾರಿಯಾಗಿ ಕಂಡಿತು! ಯಾವಾಗಲಾದರೂ ಸಿಡಿಯುವ ಅಗ್ನಿಪರ್ವತದಂತೆ ಕಂಡಳು ವಿಶಾಲು. ಯಾವಾಗ ಸ್ಫೋಟವಾಗುವುದೋ ಎಂದು ಬೆದರಿ ಹಾಲಿನ ಸೋಫಾದಲ್ಲಿ ಮೆಲ್ಲನೆ ಆಸೀನನಾದ. ಕಾಫಿ ಬಂತು. ಸದ್ದಿಲದೆ ಕಾಫಿ ಮುಗಿಸಿದ. ಎದುರಿನ ಸೋಫಾದಲ್ಲಿ ವಿಶಾಲೂ ಕೂತಳು. ವಿಶ್ವ ವೃತ್ತಪತ್ರಿಕೆಯಲ್ಲಿ ಮುಖ ಹುದುಗಿಸಿದ, ಅವಳ ಮುಖ ನೋಡುವ ಧೈರ್ಯ ಸಾಲದೆ. “ಸಿಲಿಂಡರಿಗೇನು ಮಾಡಿದಿರಿ..?”ಕೊನೆಗೂ ಅಗ್ನಿಪರ್ವತ ಸ್ಫೋಟಗೊಂಡಿತು! “ಹೋಗಿ ಬ್ಯಾನರ್ಜಿ ಮನೇಲಿ ಕೇಳಿ ಬರ್ತೀನಿ” ವಿಶ್ವನ ಮುಖ ಇಂಗುತಿಂದ ಮಂಗನಂತಾಗಿತ್ತು!

“ಆ ಶೂರ್ಪನಖಿ ಮುಖ ನೋಡೋಕೆ ನೀವೇನು ಹೋಗೋದು ಬೇಡ! ನಾನಾಗಲೇ ಹೋಗಿ ಕೇಳಿ ಬಂದೆ” ವಿಶ್ವ ಕಣ್ಣರಳಿಸಿ, ಬೆರಗಾಗಿ ವಿಶ್ವದ ಹನ್ನೊಂದನೆಯ ಅದ್ಭುತವನ್ನು ನೋಡುವನಂತೆ ವಿಶಾಲೂ ಮುಖ ನೋಡಿದ. “ಇನ್ನೇನು ನೀವಿಂತ ತರಲೆ ಮಾಡಿದ್ರೆ ಸುಮ್ಮನಿರೋಕಾಗುತ್ತೇನು..? ಬ್ಯಾನರ್ಜಿ ಹೆಂಡತಿ ಎಂತಾ ಕಿಲಾಡಿ ಗೊತ್ತಾ..? ನಿಜವಾಗಿ ಗ್ಯಾಸು ಮುಗಿದಿರಲಿಲ್ಲವಂತೆ! ಮುಗಿಯೋ ಹಂತದಲ್ಲಿತ್ತಂತೆ! ಮುಂಜಾಗ್ರತೆಯಾಗಿ ನಿಮ್ಮನ್ನ ಕೇಳಿದ್ದು! ಹೆಣ್ಣೂಂದ್ರೆ ಹಲ್ಕಿರಿಯೋ ನಿಮ್ಮಂತ ಗಂಡಸರನ್ನ ಈ ರೀತಿ ಉಪಯೋಗಿಸ್ಕೋತಾರೆ ಈ ಮಿಟುಕಲಾಡಿಯರು” ವಿಶ್ವನ ತಲೆ ನೆಲ ನೋಡಿತು! ತಾನು ಕೈಯಿಟ್ಟ ಕೆಲಸಗಳೇಕೆ ಎಡವಟ್ಟಾಗುತ್ತವೆ ಎಂದು ಆಶ್ಚರ್ಯಪಟ್ಟ!

“ಮತ್ತೇನು ಮಾಡಿದೆ..?” “ದಭಾಯಿಸಿ ವಾಪಸ್ಸು ತರಿಸಿದೆ! ಇನ್ನೊಂದ್ಸಲ ಇಂತಾ ಕೆಲಸಕ್ಕೆ ಆಕೆ ಕೈಹಾಕಬಾರದು ಹಾಗೆ ಮಾಡಿದ್ದೀನಿ..” ರಣೋತ್ಸಾಹದಿಂದ ನುಡಿದಳು ವಿಶಾಲು. “ಲೇ..ನೀನೇನು ಕಿತ್ತೂರು ಚೆನ್ನಮ್ಮಾನಾ..? ಇಲ್ಲಾ ಒನಕೆ ಓಬವ್ವಾನಾ? ನೆರೆಹೊರೆಯವರ ಜೊತೆ ಪ್ರೀತಿ, ಸೌಹಾರ್ದದಿಂದ ಇರಬೇಕು. ಅದು ಬಿಟ್ಟು ಹೀಗೆ ಜಗಳವಾಡ್ತಿದ್ದರೆ ಜನ ನಮ್ಮನ್ನ ಏನನ್ತಾರೆ..?” ವಿಶ್ವನಿಗೆ ಕಿರಿಕಿರಿಯಾಗಿತ್ತು. ’ಒಂದಿಷ್ಟೂ ಪರೋಪಕಾರದ ಬುದ್ದಿಯೇ ಇಲ್ಲವಲ್ಲ ಈ ಹೆಣ್ಣಿಗೆ’ ಎಂದು ಹಲುಬಿದ. “ಜನಕ್ಕೆ ಹೆದರಿದರೆ ನಾವೇ ಮಂಗಗಳಾಗ್ತೀವಿ! ನಮ್ಮನೇಲಿ ಗ್ಯಾಸು ಮುಗಿದಾಗ ಜನ ನಮಗೆ ಅನುಕಂಪ ತೋರಿಸಿ ಊಟ-ತಿಂಡಿ ತಂದ್ಕೊಡ್ತಾರೇನು? ನಿಮ್ಮ ನೆರೆ-ಹೊರೆ ಪ್ರೀತಿ ನನ್ಗೆ ಯಾಕೋ ಅನುಮಾನ ಬರ್ತಿದೆ! ನೆರೆ-ಹೊರೆ ಅಂದ್ರೆ ಆ ಸುಷ್ಮಾನೇನಾ..? ಇನ್ಯಾರೂ ಇಲ್ಲವಾ..?”

ವಿಶಾಲೂ ಮಾತಿಗೆ ವಿಶ್ವನ ಬಾಯಿ ಕಟ್ಟಿತು! ತಲೆ ಕೆಟ್ಟಿತು! ಛೆ..ನನ್ನ ಸದುದ್ದೇಶಗಳಿಗೂ ಇಂಥ ಆಡಚಣೆಗಳೇಕೆ..? ಕೆಟ್ಟ ಕೆಲಸ ಮಾಡಿ ಹೀಗಾದರೆ ಒಪ್ಪಬಹುದು. ಆದರಿದು..? ’ನಿನ್ನ ನೆರೆಯನ್ನು ಪ್ರೀತಿಸು’ ಎನ್ನಲಿಲ್ಲವೆ ಮಹಾತ್ಮ ಏಸು? ’ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವುದು ಬರೀ ಓದಿ, ಮೆಚ್ಚಿ ತಲೆದೂಗುವುದಕ್ಕೆ ಮಾತ್ರವೇ..? ವಿಶ್ವ ಗಹನವಾದ ಚಿಂತೆಯಲ್ಲಿ ಮುಳುಗಿದ.

“ಗ್ಯಾಸ್ ಏಜನ್ಸಿಯವನ ಜೊತೆ ಯಾಕೆ ಜಗಳವಾಡಬೇಕಿತ್ತು..? ನಾಳೆ ನಮ್ಮ ಸಿಲಿಂಡರ್ ಬರುತ್ತಂತೆ..ನಿಮ್ಮ ಸ್ನೇಹಿತ ಪರಮೇಶಿಗೆ ಕೊಟ್ಟುಬಿಡಿ. ಪಾಪ ಅದೆಷ್ಟು ಸಲ ನಮಗೆ ಸಹಾಯ ಮಾಡಿದ್ದಾರೆ. ಆದ್ರೆ ಇನ್ನೊಂದ್ಸಲ ಆ ಸುಷ್ಮಾಗೇನಾದ್ರೂ ಸಹಾಯ ಮಾಡೋಕೋದ್ರೋ..ನಾನು ಸುಮ್ಮನೆ ಇರೊಲ್ಲ!” ಚಿಂತೆಯಲ್ಲಿ ಮುಳುಗಿದ್ದ ವಿಶ್ವನನ್ನು ವಿಶಾಲೂ ವಾಸ್ತವಕ್ಕೆಳೆದಳು. ಸುದೀರ್ಘ ನಿಟ್ಟುಸಿರೊಂದು ವಿಶ್ವನ ದೇಹದಿಂದೀಚೆ ಬಂತು!

‍ಲೇಖಕರು avadhi

April 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: