ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ..

ಕುಶ್ವಂತ್ ಕೋಳಿಬೈಲು

ನನ್ನ ಮನೆಯ ಆ ಕೋಣೆಯೊಳಗೆ
ನಾನು ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ..
ಅಮ್ಮ , ಹೆಂಡತಿ ಇಬ್ಬರೂ ಆಪ್ತರೆ
ಆದರೆ ಆ ಕೋಣೆಯೊಳಗೆ ಇಣುಕುವಷ್ಟಲ್ಲ..
ಅಲ್ಲಿ ನಾನು ನನ್ನಷ್ಟಕ್ಕೆ ನಕ್ಕರೂ
ಹುಚ್ಚಾ ಎನ್ನುವವರಿಲ್ಲ…
ಅಲ್ಲಿ ನನ್ನ ಬಿಕ್ಕಳಿಕೆಗಳಿಗೆ
ಲೆಕ್ಕ ಕೇಳುವವರಿಲ್ಲ!!
ನನ್ನೊಳಗೆ ನಡೆಯುತ್ತಿರುವ
ಯುದ್ದಗಳ ರಣಕೇಕೆಯನ್ನು
ಅಲ್ಲಿ ಕದ್ದು ಕೇಳಿಸಿಕೊಳ್ಳುವವರಿಲ್ಲ..
ಎಲ್ಲ ಮುಖವಾಡಗಳನ್ನು
ಕಳಚಿ ಕುಂತಾಗ
ನನ್ನ ಮುಖವನ್ನು ದಿಟ್ಟಿಸುವವರಿಲ್ಲ.

ಆ ಕೋಣೆಯೊಳಗೆ ಮಾತ್ರ
ನಾನು ನನ್ನನ್ನು ಬೇಟಿಯಾಗುತ್ತೇನೆ,
ಸಾರ್ವಜನಿಕವಾಗಿ ನನಗೆ ನಾನೆಲ್ಲಿ ಸಿಗುತ್ತೇನೆ?!!
ಆನೆಯನ್ನು ಹಗ್ಗ, ಕಂಬ, ಹಾಳೆಯೆಂದು
ಭ್ರಮಿಸಿದ ನೂರಾರು ಜನರು
ನನ್ನನ್ನೂ ಮುಟ್ಟಿ ತೀರ್ಪಿತ್ತಾಗ, ನಾನೂ ನಗುತ್ತೇನೆ!!..
ನನ್ನ ಮನೆಯ ಆ ಕೋಣೆಯಲ್ಲಿ
ನಾನು ಹೂತಿಟ್ಟ ಕನಸುಗಳಿವೆ..
ಕೇಳುತ್ತವೆ ಅವು, ನಮ್ಮನ್ನು ಮುಂದೇನು ಮಾಡುತ್ತೀಯ..
ಹೇಳಲೇ ಆಗದ ಸತ್ಯಗಳಿಗೆ
ಸುಳ್ಳಿನ ಲೇಪವನ್ನು ಹಚ್ಚಿಟ್ಟಿದ್ದೇನೆ ಅಲ್ಲಿ..
ಕೇಳುತ್ತವೆ ಅವು, ನಮ್ಮನೆಲ್ಲಿ ಮಾರುತ್ತೀಯ!!!
ನನ್ನ ಮನಸ್ಸಿನೊಳಗೂ ಅಂತಹ ಕೋಣೆಯಿದೆ
ಅಲ್ಲಿಯೂ ನಾನು ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ..
ಅಮ್ಮ , ಹೆಂಡತಿ ಇಬ್ಬರೂ ಆಪ್ತರೆ
ಆದರೆ ಆ ಕೋಣೆಯೊಳಗೆ ಇಣುಕುವಷ್ಟಲ್ಲ!!!

‍ಲೇಖಕರು Avadhi

1 June, 2021

3 Comments

  1. Smitha Amrithraj.

    Kavite chendide kushvanth

  2. SUDHA SHIVARAMA HEGDE

    ಎಷ್ಟು ಚಂದ!

  3. km vasundhara

    ಒಳ್ಳೆಯ ಕವಿತೆ… ಎಲ್ಲರೊಳಗೊಂದು ಆಪ್ತ ಕೋಣೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading