ಸಾವು, ತಂಬೂರಕ್ಕ, ಚಿಕನ್ ಗುನ್ಯಾ ಇತ್ಯಾದಿ ಇತ್ಯಾದಿ…

ಕೇಶವರೆಡ್ಡಿ ಹಂದ್ರಾಳ

‘Death is the destination we all share’ – Steve Jobs

ಜೀವ ಜಗತ್ತು ಅತ್ಯಂತ ಭಯಭೀತಗೊಳ್ಳುವುದು, ತಲ್ಲಣಗೊಳ್ಳುವುದು ಸಾವು ಎನ್ನುವ ಪದಕ್ಕೆ. ಸಾವು ನಿಶ್ಚಿತ ಮತ್ತು ಅನಿವಾರ್ಯ ಎಂದು ತಿಳಿದಿದ್ದರೂ ಮನುಷ್ಯ ಸಾವಿಗೆ ಹಿಂಜರಿಯುತ್ತಾನೆ. ಸಾವಿನ ನಂತರದ ಸ್ಥಿತಿ ಏನಿರಬಹುದೆಂದು ಅವನಿಗೆ ಸ್ಪಷ್ಟವಾಗಿ ತಿಳಿಯದಿರುವುದೂ ಕೂಡ ಇದಕ್ಕೆ ಕಾರಣವಿರಬಹುದು. ಸಾವು ಎಂದರೆ ಶಾಶ್ವತವಾಗಿ ಇಲ್ಲವಾಗುವುದು. ಅದೊಂದು ಅಂತಿಮ ಕೊನೆ, ಪೂರ್ಣವಿರಾಮ (full stop). death is an ultimate end.

ಭೂಮಿಯ ಮೇಲೆ ಕೊಟ್ಯಾಂತರ ವರ್ಷಗಳಿಂದ ಮನುಷ್ಯನು ಸೇರಿದಂತೆ ಅಸಂಖ್ಯಾತ ಜೀವರಾಶಿಗಳು ಹುಟ್ಟಿ ಸಾಯುತ್ತಲೇ ಇವೆ. ಅದೊಂದು ಜೈವಿಕ ಕ್ರಿಯೆ. ತಾನು ಸೃಷ್ಟಸಿದ ಎಲ್ಲವನ್ನೂ ನಾಶ ಮಾಡಿ ತನ್ನದೇ ರೂಪ ಕೊಡುವ ಶಕ್ತಿ ಭೂಮಿಯ ಮಣ್ಣಿಗೆ ಮಾತ್ರವೇ ಸಾಧ್ಯ. ಮನುಷ್ಯ ದೇವರು, ಆಧ್ಯಾತ್ಮಿಕ, ವಿಜ್ಞಾನ, ತಂತ್ರಜ್ಞಾನ, ಎಥಿಕ್ಸ್ ಮುಂತಾದವುಗಳ ನಡುವೆಯೂ ಸಾವಿಗೊಂದು ನಿರ್ಧಿಷ್ಟ ವ್ಯಾಖ್ಯಾನವನ್ನು ಹುಡುಕಲು ಇನ್ನೂ ಹೆಣಗಾಡುತ್ತಲೇ ಇದ್ದಾನೆ.

ಮನುಷ್ಯ ಉಸಿರು ಕಳೆದುಕೊಂಡೊಡನೆ ಹೆಸರನ್ನೂ ಕಳೆದುಕೊಳ್ಳುತ್ತಾನೆ. Death is the great leveler. ಜಾತಿ, ಧರ್ಮ, ಶ್ರೀಮಂತಿಕೆ, ಬುದ್ದಿವಂತಿಕೆ, ಅಹಂ, ಸಿದ್ಧಾಂತ ಯಾವುದೂ ಸಾವಿನ ಮುಂದೆ ಬಾಲ ಅಲ್ಲಾಡಿಸುವುದಕ್ಕೆ ಯಾವೊತ್ತಿಗೂ ಆಗುವುದಿಲ್ಲ. ಸಾವು ಯಾವುದಕ್ಕೂ ಮಣಿಯುವುದಿಲ್ಲ. ಸಾವನ್ನು ಮುಕ್ತಿ ಎಂದೂ ಕರೆಯಲಾಗುತ್ತದೆ. ಮನುಷ್ಯನ ಎಲ್ಲಾ ಸಂಕಷ್ಟಗಳಿಗೂ ಸಾವು ಶಾಶ್ವತವಾದ ತೆರೆ ಎಳೆದುಬಿಡುತ್ತದೆ. ಸಹಜ ವಯೋಮಾನದಿಂದ ಬರುವ ಸಾವಿಗೆ ಮನುಷ್ಯ ಅಷ್ಟೇನೂ ದುಃಖ, ಸಂಕಟಗಳನ್ನು ಪಡುವುದಿಲ್ಲ. ಆದರೆ ಆಕ್ಸಿಡೆಂಟ್, ಆತ್ಮಹತ್ಯೆ, ರೋಗಬಾಧೆಗಳಿಂದಾಗುವ ಅಸಹಜ ಮತ್ತು ಆತುರದ ಸಾವುಗಳು ಮಾನವ ಕುಲಕ್ಕೆ ಇನ್ನಿಲ್ಲದಂತೆ ದುಃಖ, ಸಂಕಟಗಳನ್ನು ತಂದೊಡ್ಡುತ್ತವೆ.

ಜಗತ್ತಿನಲ್ಲಿ ಸೃಷ್ಟಿಯೊಂದಿಗೆ ಸಾವೇ ಇಲ್ಲದಿದ್ದರೆ ಅದರ ಅನಾಹುತವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ನನ್ನ ಏಳನೆಯ ತರಗತಿಯಿಂದ ಪಿಯುಸಿ ವರೆಗಿನ ಅವಧಿಯಲ್ಲಿ ನಮ್ಮ ಮನೆಯಲ್ಲಿ ನಮ್ಮಜ್ಜಿ, ನಮ್ಮ ರಾಮರೆಡ್ಡಿ ದೊಡ್ಡಪ್ಪ, ನಮ್ಮಮ್ಮ, ನಮ್ಮ ಹನುಮಂತರೆಡ್ಡಿ ದೊಡ್ಡಪ್ಪ, ರಾಮರೆಡ್ಡಿ ದೊಡ್ಡಪ್ಪನ ಮಗಳು ಮುದ್ದಮ್ಮ ಸತ್ತದ್ದನ್ನು ಹತ್ತಿರದಿಂದ ನೋಡಿದ್ದೇನೆ. ನಾನು ಪಿಯುಸಿಯಲ್ಲಿ ಇದ್ಧಾಗ ನಮ್ಮಮ್ಮ ಗಂಟಲು ಕ್ಯಾನ್ಸರ್ ನಿಂದ ನರಳಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ನನ್ನ ತೊಡೆಯ ಮೇಲೆಯೇ ಪ್ರಾಣಬಿಟ್ಟಿದ್ದಳು. ಅದಾದ ಹದಿನೈದು ದಿನಕ್ಕೆ ನಮ್ಮ ದೊಡ್ಡಪ್ಪ ಹನುಮಂತರೆಡ್ಡಿ ಸತ್ತಿದ್ದ.

ಇದಾಗಿ ವಾರಕ್ಕೆ ಕಾಳ್ರಂಗಮ್ಮಜ್ಜಿಯ ಹೆಣವನ್ನು ಕಿದ್ವಾಯಿ ಆಸ್ಪತ್ರೆಯಿಂದ ಊರಿಗೆ ಕೊಂಡೊಯ್ದಿದ್ದೆವು. ಆಕೆಗೂ ಗಂಟಲು ಕ್ಯಾನ್ಸರ್ ಆಗಿತ್ತು. ಕಾಲ ದಯಾಳು, ಎಲ್ಲವನ್ನೂ ಮರೆಸಿಬಿಡುತ್ತದೆ. out of sight is out of mind. ಅಗಾಧವಾಗಿ ಪ್ರೀತಿಸುವ ಲವ್ವರ್ರುಗಳು ಮದುವೆಯಾದ ಮೇಲೆ ಒಬ್ಬರನ್ನೊಬ್ಬರು ಪೂರ್ತಿಯಾಗಿ ಮರೆವಂತೆ! ಸಾವನ್ನು ಕುರಿತು ಜಗತ್ತಿನ ಅನೇಕ ತತ್ವಜ್ಞಾನಿಗಳು ತಮ್ಮವೇ ಆದ ಭಿನ್ನ ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸಾವನ್ನು ತತ್ವ ಪದಕಾರರು, ಜನಪದರು ಪೂಜಿಸುವ, ಆರಾಧಿಸುವ, ಧ್ಯಾನಿಸುವ, ಲೇವಡಿ ಮಾಡುವ ಪರಿಯಂತೂ ವಿಶಿಷ್ಟವಾಗಿದೆ. ನಮ್ಮೂರ ಮಾದಿಗರ ತಂಬೂರಿ ಈರಕ್ಕನಂತೂ ಗುರು ಬೋಧನೆ ತೆಗೆದುಕೊಂಡ ಮೇಲೆ ಸಾವಿನ ಕುರಿತು ತೆಲುಗು ಮತ್ತು ಕನ್ನಡದಲ್ಲಿ ಅನೇಕ ತತ್ವ ಪದಗಳನ್ನು ಕಲಿತಿದ್ದಳು. ಆಕೆ ತಂಬೂರಕ್ಕ ಎಂದೇ ಹೆಸರುವಾಸಿಯಾಗಿದ್ದಳು.

ಊರಿನಲ್ಲಿ ಯಾರ ಮನೆಯಲ್ಲಿ ಸಾವಾದರೂ ಇಡೀ ರಾತ್ರಿ ಹೆಣದ ಮುಂದೆ ಕುಂತು ತಂಬೂರಿ ಮೀಟುತ್ತಾ ತತ್ವ ಪದಗಳನ್ನು ಹಾಡಿ ನೆರೆದವರ ಮನದಲ್ಲಿ ಸಾವಿನ ಭಯ ಹೋಗಲಾಡಿಸಿ, ಸಾವಿನ ಮೇಲೆ ತಾತ್ಸಾರವನ್ನು ಮೂಡಿಸುತ್ತಿದ್ದಳು ಒಂದು ದಿನದ ಮಟ್ಟಿಗಾದರೂ. ಈರಕ್ಕಜ್ಜಿಗೆ ಈ ಕಾರ್ಯಕ್ಕೆ ಬೇಕಾಗುತ್ತಿದ್ದದ್ದು ಒಂದು ಬಾಟಲಿ ಹೆಂಡವೋ, ಒಂದು ಕ್ವಾರ್ಟರ್ ಸಾರಾಯಿಯೋ ಮಾತ್ರ. ಜೊತೆಗೆ ಅಗಿಯಲು ಒಂದಿಷ್ಟು ಅಡಿಕೆಲೆ, ಹೊಗೆಸೊಪ್ಪು.

ಈಕೆ ಗುರು ಬೋಧನೆ ತೆಗೆದುಕೊಳ್ಳುವುದಕ್ಕೆ ಮೊದಲಿನ ಒಂದು ಸಣ್ಣ ಘಟನೆ ಹೇಳಿ ಬಿಡುತ್ತೇನೆ. ಆಗ ನಾನು ಬೆಂಗಳೂರಿನಲ್ಲಿ ಹೈಸ್ಕೂಲು ಓದುತ್ತಿದ್ದು ದಸರಾ ರಜಕ್ಕೆಂದು ಊರಿಗೆ ಹೋಗಿದ್ದೆ. ಈರಕ್ಕಜ್ಜಿಯ ಮಗಳು ಗಂಡನನ್ನು ಬಿಟ್ಟು ತೌರು ಮನೆಗೆ ಬಂದಿದ್ದಳು. ಮತ್ತೆ ಬಿಲ್ ಕುಲ್ ಗಂಡನ ಮನೆಗೆ ಹೋಗುವುದಿಲ್ಲವೆಂದು ಮಂಡಿಗೆ ಬಿದ್ದಿದ್ಧಳು. ಗಂಡನ ಕಡೆಯವರು ಅವರೂರಿನ ಏಳೆಂಟು ಜನ ಯಜಮಾನರುಗಳನ್ನು ಕರೆದುಕೊಂಡು ನ್ಯಾಯಕ್ಕೆಂದು ನಮ್ಮೂರಿಗೆ ಬಂದಿದ್ದರು. ಆ ವೇಳೆಗೆ ಪಟೇಲರಾಗಿದ್ದ ನಮ್ಮ ರಾಮರೆಡ್ಡಿ ದೊಡ್ಡಪ್ಪ ಸತ್ತು ಹೋಗಿದ್ದರಿಂದ ನಮ್ಮ ಹನುಮಂತರೆಡ್ಡಿ ದೊಡ್ಡಪ್ಪ ಇಂಪಾರ್ಟಿಂಟ್ ಜಗಳಗಳಿದ್ದರೆ ಮಾತ್ರ ನ್ಯಾಯಕ್ಕೆ ಹೋಗುತ್ತಿದ್ದ. ಸರಿ ಅವೊತ್ತು ಚಾವಡಿಯ ಹತ್ತಿರ ಈರಕ್ಕಜ್ಜಿಯ ಮಗಳನ್ನು ಕರೆಸಿ ಮುಖಾಮುಖಿಯಾಗಿ ನ್ಯಾಯ ಶುರುವಾಯಿತು.

ನಮ್ಮ ದೊಡ್ಡಪ್ಪ ಖಡಕ್ ಮನುಷ್ಯನಾಗಿದ್ದನಲ್ಲದೆ ನೇರ ಮಾತಿನವನಾಗಿದ್ದ. ‘ನೀನು ಎಷ್ಟು ಹೇಳಿದ್ರೂ ಅವ್ರ್ ಜೊತೆ ನಾನೊಗಲ್ಲ ದೊಡ್ಡಪ್ಪ.’ ಎಂದು ಈರಕ್ಕನ ಮಗಳು ಜೋರಾಗಿಯೇ ಹೇಳಿಬಿಟ್ಟಿದ್ದಳು. ಸ್ವಲ್ಪ ಮುಂಗೋಪಿಯಾಗಿದ್ದ ನಮ್ಮ ದೊಡ್ಡಪ್ಪ ಅವಳ ಕೆನ್ನೆಗೊಂದು ಏಟು ಬಿಗಿದಿದ್ಧ. ಆಗ ಅಲ್ಲಿಯೇ ನಿಂತಿದ್ದ ಈರಕ್ಕ ಬುಸುಗುಡುತ್ತಾ ಎದ್ದು ನಮ್ಮ ದೊಡ್ಡಪ್ಪನ ಕೈ ಹಿಡಿದು ‘ಯಪ್ಪೊ ರೆಡ್ಡಿ ನನ್ನ ಮಗಳಿಗೆ ಯಾಕ್ ಹೊಡಿತಿಯ, ಮೊದ್ಲು ನ್ಯಾಯಕ್ಕೆ ಬಂದಿರೋ ಆ ಭೋಸುಡಿ ಮಗನ ನಿಕ್ಕರ್ ಬಿಚ್ಚಿಸಿ ನೋಡಿ. ಆರ್ತಿಂಗ್ಳಿಂದ ನನ್ನ ಮಗಳು ಉಸೂರಂತ ಮಲುಗ್ತಾ ಅವ್ಳೆ. ಮದ್ವೆ ಆದಾಗ್ಳಿಂದ ಒಂದೇ ಒಂದ್ ದಪಾನೂ ಪಕ್ಕದಲ್ಲಿ ಮಲಗಿಲ್ಲ ಅಂದ್ರೆ ಅದ್ಯಾತ್ರ ಗಂಡ್ಸು. ನನ್ನ ಮಗಳ ಪಕ್ಕ ನೀನು ಬಂದು ಮಲಗ್ತೀಯೇನಪ್ಪ ರೆಡ್ಡಿ’ ಎಂದು ಅಬ್ಬರಿಸಿದ್ದಳು. ಅಳಿಯ, ಆತನ ಜೊತೆ ನ್ಯಾಯಕ್ಕೆ ಬಂದಿದ್ದವರು ಸೈಕಲ್ಲುಗಳನ್ನು ಹತ್ತಿ ಪರಾರಿಯಾಗಿದ್ದರು. ನಮ್ಮ ದೊಡ್ಡಪ್ಪ ಟವಲ್ ಕೊಡವಿಕೊಂಡು ಬೇಸರದಿಂದ ‘ಥೂ ಇವುನವ್ವುನ್ ಕಿತ್ತೋದ್ ನ್ಯಾಯಾನ ಕೇಯ’ ಎಂದು ಮನೆಯ ಕಡೆ ನಡೆದಿದ್ದ.

ಇಂಥ ಈರಕ್ಕಜ್ಜಿಯನ್ನು 2006ರಲ್ಲಿ ಯವನಿಕ ಸಭಾಂಗಣದಲ್ಲಿ ನನ್ನ ‘ಒಕ್ಕಲ ಒನಪು’ ಪುಸ್ತಕದ ಬಿಡುಗಡೆಗೆ ಕರೆಸಿ ಅರ್ಧ ಗಂಟೆ ಹಾಡಿಸಿ, ಸನ್ಮಾನ ಮಾಡಿದ್ದೆವು. ಅರ್ಧ ಗಂಟೆ ಮಾತ್ರ ಹಾಡಿದ್ದರಿಂದ ಆಕೆಗೆ ಸಮಾಧಾನವಾಗಿರಲಿಲ್ಲ. ಆ ಸಮಯದಲ್ಲಿ ಎಲ್ಲೆಲ್ಲೂ ಚಿಕನ್ ಗುನ್ಯಾದ ಹಾವಳಿಯಿತ್ತು. ಚಿಕನ್ ತಿನ್ನುವುದರಿಂದ ಚಿಕನ್ ಗುನ್ಯಾ ಬರುತ್ತದೆಂದು ಪುಕಾರೆದ್ದು ಮೂರ್ನಾಲ್ಕು ತಿಂಗಳು ಕೋಳಿಫಾರಂ ನವರು, ಚಿಕನ್ ಅಂಗಡಿಗಳವರು ಟಿವಿ ಚಾನೆಲ್, ಕಾರ್ಪೊರೇಷನ್ ಮತ್ತು ಹಾಗೆ ಹೇಳಿದ ಡಾಕ್ಟರುಗಳ ಮೇಲೆ ಹಿಡಿ ಹಿಡಿ ಶಾಪ ಹಾಕಿದ್ದರು. ಆ ಟೈಮಿನಲ್ಲಿ ನಾನು ಊರಿಗೆ ಹೋದಾಗ ಊರಿನಲ್ಲಿಯೂ ಸುಮಾರು ಜನರಿಗೆ ಚಿಕನ್ ಗುನ್ಯಾ ತಗುಲಿರುವುದು ಕಂಡಿತ್ತು.

ಕೈ, ಕಾಲು ಬೆರಳುಗಳ ಕೀಲುಗಳು, ಮೊಣಕಾಲುಗಳು ವಿಪರೀತವಾಗಿ ನೋಯುತ್ತಿದ್ದುದ್ದು ಈ ಕಾಯಿಲೆಯ ದೊಡ್ಡ ಗುಣ. ಮನೆಯ ಹಟ್ಟಿ ಮುಂದೆ ಕುಳಿತಿದ್ದ ಪರಿಕ್ಲಿ ವೆಂಟರೋಣಪ್ಪ ‘ಅಯ್ಯಯ್ಯಪ್ಪ ಎಂಥ ಏಳು ಮಿಂಡ್ರುಗುಟ್ಟಿದ್ ಖಾಯ್ಲೆನಲೇ ಇದು ಅಪ್ಪಯ್ಯ ಕೇಶ್ವ. ಕುಂತ್ರೆ ಏಳಕಾಗಲ್ಲ, ಎದ್ರೆ ಕುಂತ್ಕಂಬಕಾಗಲ್ಲ. ಯಲ್ಡಾಕೆ ಹೋಗೋಕೂ ಇನ್ನಿಲ್ದಂಗೆ ತಾಪತ್ರಯ ಆಗೋಯ್ತು. ನಿಮ್ಗೆನೋ ಅತ್ತ ಕುಂತ್ಕಂಡ್ ಹೇತ್ಕಂಬೊ ಸೌಕರ್ಯ ಐತೆ ಸಿಟಿನಾಗೆ’ ಎಂದು ಗೋಳು ತೋಡಿಕೊಂಡಿದ್ದ.

ಕಾಯಿಲೆ ಬಂದವರು ಪ್ಲಾಸ್ಟಿಕ್ ಚೇರುಗಳ ತಳವನ್ನು ಕುಯ್ದ ಅಗಲವಾದ ತೂತು ಮಾಡಿ ತಿಕಗಳನ್ನು ಅಲ್ಲಿಟ್ಟು ಯಲ್ಡಾ ಮಾಡುತ್ತಿದ್ದರಂತೆ. ಪರಿಕ್ಲಿ ವೆಂಕಟರೋಣಪ್ಪನೂ ಹಾಗೆ ಮಾಡಿದ್ದನಂತೆ. ಆದರೆ ಚೇರಿನ ತಳವನ್ನು ಕುಡುಗೋಲಿನಿಂದ ಕುಯ್ಯುವಾಗ ಗಟ್ಟಿ ಪ್ಲಾಸ್ಟಿಕ್ ಸಿಬಿರೆದ್ದಿರೋದು ನೋಡಿಕೊಂಡಿಲ್ಲದ್ದರಿಂದ ಕೂತಾಗ ಸಿಬಿರು ತರಡು ಬೀಜಕ್ಕೆ ತಗುಲಿ, ಚರ್ಮ ಕಿತ್ತು ಬಂದು ಆಯಿಂಟ್ಮೆಂಟ್ ಹಚ್ಚಿಕೊಂಡಿರುವ ವಿಷಯ ಹೇಳುತ್ತಾ ನಮ್ಮ ಮೂರ್ತಣ್ಣಯ್ಯ ‘ಏನೇ ಆಗ್ಲಿ ಹಳ್ಳಿದು ಬಲು ಅದ್ವಾನದ ಬದುಕು ಬಿಡಲೇ ಕೇಶ್ವಣ್ಣ ಅತ್ತ’ ಎಂದು ಇನ್ನೊಂದು ಸಂಗತಿ ಹೇಳಿ ನಕ್ಕಿದ್ದ. ಚೆನ್ರಾಯಪ್ಪನೋರ ಕೇರಿಯ ಚಿಕ್ಕರಾಮಪ್ಪನಿಗೂ ಚಿಕನ್ ಗುನ್ಯಾ ಬಂದಿತ್ತಂತೆ.

ಇತ್ತೀಚೆಗೆ ಮಗ ವೆಂಕಟೇಶ ಚಿಕ್ಕ ಮನೆಯನ್ನು, ಹೊರಗೆ ಲ್ಯೆಟ್ರಿನ್ ರೂಮನ್ನೂ ಕಟ್ಟಿಸಿಕೊಟ್ಟಿದ್ದ. ಚಿಕನ್ ಗುನ್ಯಾ ಬಂದಿದ್ದರಿಂದ ಯಲ್ಡಾಕೆ ಕೂರಲು, ಆದ ಮೇಲೆ ಏಳಲು ಲ್ಯೆಟ್ರಿನ್ ರೂಮಿನ ಜಂತಿಗೆ ಹಗ್ಗ ಕಟ್ಟಿದ್ದನಂತೆ. ಮೂರು ದಿನದ ಹಿಂದೆ ಸಂಜೆ ಯಲ್ಡಾಕೆ ಕುಂತು ಮೊಣಕಾಲು ನೋವಿನಿಂದ ಮುಲುಕುತ್ತಾ ಹಗ್ಗ ಹಿಡಿದು ಏಳುವಾಗ ಪಕ್ಕದ ಮನೆಯ ಸುಬ್ರಾಯ ಲ್ಯೆಟ್ರಿನ್ನಿನ ಸಣ್ಣ ಕಿಟಕಿಯಲ್ಲಿ ನೋಡಿ ‘ಬರ್ರಪ್ಪೊ ಚಿಕ್ಕರಾಮಪ್ಪ ನೇಣಾಕ್ಕಂತ ಅವ್ನೆ’ ಎಂದು ಜೋರಾಗಿ ಕೂಗಿಕೊಂಡಿದ್ದನಂತೆ. ಎರಡೇ ನಿಮಿಷದಲ್ಲಿ ಕೇರಿಯವರೆಲ್ಲ ಓಡಿಹೋಗಿ ಲ್ಯೆಟ್ರಿನ್ ಬಾಗಿಲು ತಳ್ಳಿದ್ದಾರೆ. ಚಿಕ್ಕರಾಮಪ್ಪ ಇನ್ನೂ ನಿಕ್ಕರ್ ಹಾಕಿಕೊಳ್ಳದೆ ನಿಂತಿದ್ದಾನೆ ಎರಡೂ ಕೈಗಳಲ್ಲಿ ಹಗ್ಗ ಹಿಡಿದು. ಪಾಪ, ನಾನೂ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ. ‘ಹೋಗಲೇ ಅತ್ತ ಯಾವ್ ಸೀಮೆ ಖಾಯ್ಲೆನೋ ಮಾತ್ರೆ ತಗಂಡ್ರೂ ಹೋಗ್ಲಿಲ್ಲ’ ಎಂದು ನಕ್ಕಿದ್ದ.

ಊರಿನಿಂದ ಬಂದ ವಾರಕ್ಕೆ ನನಗೂ ಚಿಕನ್ ಗುನ್ಯಾ ತಗುಲಿಕೊಂಡಿತ್ತು. ಒಂದೂವರೆ ವಾರ ಹೆಣಗಾಡಿದ್ದೆ. ಅದರ ಸಂಕಟ ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಸ್ನೇಹಿತರೇ, ನನ್ನ ಕೆಲವು ಲೇಖನಗಳು ಹಾಸ್ಯದಿಂದ ತುಂಬಿರಬಹುದು. ಅದರ ಹಿಂದೆ ವಿಷಾದವೂ ಕೂಡಾ ಅಷ್ಟೇ ದಟ್ಟವಾಗಿ ಸುತ್ತಿಕೊಂಡಿರುತ್ತದೆಂದು ಅನೇಕರು ಹೇಳುತ್ತಾರೆ. ನಗು -ಅಳು, ಸುಖ- ದುಃಖ, ಕಷ್ಟ- ನಷ್ಟ ಎಲ್ಲವೂ ಒಂದರ ಬೆನ್ನಲ್ಲಿ ಇನ್ನೊಂದು ಸೆರಿಕೊಂಡಿರುವುದು ಸೃಷ್ಟಿಯ, ಪ್ರಕೃತಿಯ ಒಂದು ವಿಚಿತ್ರ ಸ್ವಭಾವವೇ ಸರಿ.

ತಿಂಗಳ ಹಿಂದೆ ಕೊರೊನಾಕ್ಕೆ ಬಲಿಯಾದ ತಿಮ್ಮರಾಜು ಸಂಕಲಗೆರೆ ಮತ್ತು ಕೆಲವು ವರ್ಷಗಳ ಹಿಂದೆ ಆಕ್ಸಿಡೆಂಟ್ ನಲ್ಲಿ ತೀರಿಹೋದ ಅಬ್ಬೂರು ಮರಿಗೌಡ ಎಂಬ ನನ್ನ ಅತ್ಯಂತ ಆತ್ಮೀಯ ಮಿತ್ರರರ ನೆನಪಿಗಾಗಿ ಅಲ್ಲದೆಯೇ ಗೆಳೆಯ ವಿಠ್ಠಲ ಭಂಡಾರಿ ಮೊದಲಗೊಂಡು ಕೊರೊನಾಗೆ ಬಲಿಯಾದ ಕರುನಾಡಿನ ಎಲ್ಲಾ ಆತ್ಮಗಳಿಗೂ ಭಾರವಾದ ಹೃದಯದಿಂದ ಈ ಲೇಖನವನ್ನು ಅರ್ಪಿಸುತ್ತಿದ್ದೇನೆ. ಉದಾಸೀನ ಮುಳುಗಿಸುತ್ತದೆ; ಎಚ್ಚರಿಕೆ ತೇಲಿಸುತ್ತದೆ.

‍ಲೇಖಕರು Avadhi

June 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mallikarjuna Hosapalya

    ಮನಮುಟ್ಟುವ ಬರಹ ಸರ್, ನಗುವನ್ನೂ, ಸಂಕಟವನ್ನೂ ಒಟ್ಟೊಟ್ಟಿಗೆ ಅನುಭವಿಸುವಂತಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: