ನಾ ಓದಿದ ಪುಸ್ತಕ ‘ಮುಸ್ಸಂಜೆಯ ನೋಟ’

ವರದೇಂದ್ರ ಕೆ

ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಶ್ರೀಮತಿ ಅರುಣಾ ರಾವ್, ಅವರು ವೃತ್ತಿಯಿಂದ ಪ್ರೌಢ ಶಾಲಾ ಕನ್ನಡ ಶಿಕ್ಷಕಿಯಾಗಿದ್ದು ಪ್ರವೃತ್ತಿಯಿಂದ ಸಾಹಿತ್ಯದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ನಮ್ಮ ‘ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಿಗ್ಗನಾಯಕನಭಾವಿ’ಯ ಶಾಲಾ ಗ್ರಂಥಾಲಯಕ್ಕೆ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ವಿನಂತಿಸಿದ ಮುಖಪುಟದ ಪೋಸ್ಟ್ ನೋಡಿ, ತಮ್ಮದೇ ಸಂಕಲನದ ಮೂರು ಪ್ರತಿಗಳನ್ನು ದೇಣಿಗೆಯಾಗಿ ನಮ್ಮ ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

ಸಹಜವಾಗಿಯೇ ಸಾಹಿತ್ಯಾಸಕ್ತನಾದ ನನಗೆ, ಇವರ ಕವನ ಸಂಕಲನ ಓದುವ ಮನಸಿತ್ತು. ಆದರೆ ಓದುವ ಸಂದರ್ಭ ತಡವಾಗಿಯೇ ದೊರೆಯಿತಾದರೂ ಒಂದೊಳ್ಳೆ ಸಂಕಲನವನ್ನು ಓದಿದ ಖುಷಿ ಅಂತು ಈಗ ಲಭ್ಯವಾಯಿತು. ಅವಕಾಶ ಸಿಕ್ಕೊಡನೆಯೇ ಪುಸ್ತಕ ಕೈಗೆತ್ತಿಕೊಂಡ ಕ್ಷಣ ಮುಖಪುಟ ಮತ್ತು ” ಮುಸ್ಸಂಜೆಯ ನೋಟ” ಶೀರ್ಷಿಕೆ ಆಕರ್ಷಣೀಯವೆನಿಸಿದವು.

ಶ್ರೀಮತಿ ಅರುಣಾ ರಾವ್ ಅವರ ಪ್ರಥಮ ಕವನ ಸಂಕಲನವಾದ ‘ಮುಸ್ಸಂಜೆಯ ನೋಟ’ ಅತ್ಯಂತ ಸರಳವಾದ ಕಾವ್ಯ ಪ್ರಯೋಗ ಎನ್ನಬಹುದಾಗಿದೆ. ಶಿಕ್ಷಕ ವೃತ್ತಿಯಲ್ಲಿರುವ ಅರುಣಾರವರು ಸಹಜವಾಗಿಯೇ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕಾವ್ಯ ರಚನೆಗೆ ತೊಡಗಿದ್ದಾರೆನ್ನಬಹುದು. ಸರಳ ಪದಗಳೊಂದಿಗೆ ವಿಶೇಷ ಮತ್ತು ವಿಭಿನ್ನ ವಿಚಾರಗಳನ್ನು ಓದುಗರಿಗೆ ತಿಳಿಸುತ್ತ ಪ್ರಸ್ತುತ ಮಾನವನ ಮನೋಸ್ಥಿತಿಯನ್ನು ಚಿತ್ರಿಸುತ್ತಾರೆ. ಸೂಕ್ಷ್ಮ ಸಂವೇದನೆಯ ದೃಷ್ಟಿ ಇರುವ ಕವಯಿತ್ರಿ ನಿರ್ಜೀವಿ ವಸ್ತುಗಳಿಗೂ ಜೀವ ತುಂಬಿ ಹೀಗೆ ಹೇಳುತ್ತಾರೆ.

‘ವಾರ್ತೆ ಹಾಡು ಹೊಸ ಸಿನಿಮ ರಿಲೀಸು
 ಎಲ್ಲ ಅವರವರ ತುದಿ ಬೆರಳಲ್ಲೆ |
 ನಾ ಮಾತ್ರ ಮನೆಯ ಅಲಂಕಾರವೆಂಬಂತೆ
 ತೆಪ್ಪಗಾಗಿ ಸೇರಿದೆ ಮೂಲೆ’|

…. ಎಂದು ಟಿ ವಿ ಯ ಮನೋ ವೇದನೆಯನ್ನು ಹೇಳುತ್ತ..

‘ಆಕಾಶವಾಣಿಯ ಕಂಡು ಹಿಂದೊಮ್ಮೆ ನಕ್ಕಿದ್ದೆ
ಇಂದು ತಕ್ಕ ಶಾಸ್ತಿಯಾದಂತೆ ಭಾಸ’ |

ಎಂದು ಅಹಂಕಾರ ಭಾವ ಇರಬಾರದು, ನಮಗೂ ಮುಂದೊಮ್ಮೆ ಅದೇ ಗತಿ, ನಾವೂ ಮೂಲೆ ಸೇರಬೇಕಾದ ದುರ್ಗತಿ ಬರುತ್ತದೆ, ಎಂದು ಬೆಳೆಯುತ್ತಿರುವ ತಂತ್ರಜ್ಞಾನ ತಿಳಿಸುತ್ತಲೇ ಮಾರ್ಮಿಕವಾಗಿ ಮಾನವನ ಅಹಂ ಅನ್ನು ತಾಕಿಬಿಡುತ್ತಾರೆ.

ಓದುಗನನ್ನು ವಿಚಾರಧಾರೆಗೆ ನೂಕದೆ ತಕ್ಷಣವೆ ಕವಿಭಾವವನ್ನು ಅರಿತುಕೊಳ್ಳುವಂತೆ ಮಾಡುವ ಕವಯಿತ್ರಿ ಕಾವ್ಯವನ್ನು ನಾನಾ ರೀತಿಯಲ್ಲಿ ರಚಿಸಬಹುದೆಂದು ತೋರಿಸಿದ್ದಾರೆ. ಸಂಕಲನದ ಶೀರ್ಷಿಕೆಯ ಕವನ ‘ಮುಸ್ಸಂಜೆಯ ನೋಟ’, ಶೀರ್ಷಿಕೆ ಕೇಳಿದೊಡನೆ, ಪರಿಸರ ಕುರಿತಾಗಿ ಇರಬಹುದೆಂಬ ಓದುಗನ ಊಹೆ ತಪ್ಪಾಗುತ್ತದೆ. ವೃದ್ಧಾಶ್ರಮದಲ್ಲಿದ್ದ ವಯೋವೃದ್ಧ ಜೀವದ ನೋವನ್ನು ಹೊರಹಾಕುತ್ತಲೇ…

‘ಮುಸ್ಸಂಜೆಯ ಈ ಇಳಿವಯಸ್ಸಿನಲ್ಲಿ
ಎಂದು ಹಾರಿತೋ ಪ್ರಾಣಪಕ್ಷಿ!
ನನ್ನದೆನ್ನುವ ಬೆಚ್ಚನೆಯ ಗೂಡಿನಲ್ಲಿ
ಕೊನೆಯುಸಿರೆಳೆಯುವ ಬಯಕೆ ನನ್ನಲ್ಲಿ!’

ಇಂದಿನ ಮಕ್ಕಳು ತಮ್ಮ ಸ್ವಾರ್ಥಕ್ಕಾಗಿ, ಸ್ವಾತಂತ್ರ್ಯ ಪಕ್ಷಿಗಳಾಗಿರಲು, ಕನಿಕರ, ಕಾಳಜಿ, ಋಣ ಇಲ್ಲದೆ ಅವರನ್ನು ವೃದ್ಧಾಶ್ರಮಕ್ಕಟ್ಟುತ್ತಿರುವುದರ ಕುರಿತಾಗಿ ವ್ಯಥೆ ವ್ಯಕ್ತಪಡಿಸುತ್ತಾರೆ. ಒಬ್ಬ ಕವಿಯಾದವನು ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸಿ, ಅದಕ್ಕೆ ಅಕ್ಷರ ರೂಪ ಕೊಟ್ಟರೆ ಸಾಲದು. ತಮ್ಮ ಸುತ್ತಲಿನ ವ್ಯಕ್ತಿಗಳನ್ನು, ವ್ಯಕ್ತಿತ್ವಗಳನ್ನು ಆದರಿಸಬೇಕು. ಅಂತೆಯೇ ಅವರನ್ನು ಸಾಹಿತ್ಯದಲ್ಲಿರಿಸಿ ಓದುಗರಿಗೆ ಅವರ ಮಹತ್ವವನ್ನು ತಿಳಿಸಬೇಕು ಆ ದೃಷ್ಟಿಯಿಂದ ಕವಯಿತ್ರಿಯವರು…

‘ದಾರಿದೀಪವೇ ಇಡೀ ಗುರುಕುಲಕೆ
ನೈತಿಕ ಮೌಲ್ಯವ ಬಿತ್ತುವ ಸಂಕಲ್ಪಕೆ
ಬದುಕಾದರ್ಶ ಸಕಲ ಮನುಕುಲಕೆ
ಬೆಳಕೀವ ಸೂರ್ಯ ಜಗದಂಧಕಾರಕೆ’…

ಎಂಬ ‘ಗುರು ವಂದನಾ’ ಕವಿತೆಯನ್ನು ರಚಿಸಿ ಡಾ|| ಗುರುರಾಜ ಕರ್ಜಗಿ ಅವರಿಗೆ ಗೌರವ ಸಮರ್ಪಿಸುತ್ತಲೇ, ಅವರು ಯುವ ಜನತೆಗೆ ದಾರಿದೀಪ, ಜಗದಂಧಕಾರಕೆ ಬೆಳಕೀವ ಸೂರ್ಯ ಎಂದು ಅವರ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ.

ಇಷ್ಟೇ ಅಲ್ಲದೆ ಅವರ ಮೇಲೆ ಪ್ರಭಾವ ಬೀರಿದ ಗಾಂಧಿ, ರಾಷ್ಟಕವಿ ಕುವೆಂಪು, ಮದರ್ ತೆರೆಸಾ, ಮಹಾಭಾರತದ ಕರ್ಣ, ಅಷ್ಟೇ ಏಕೆ ದೈವೀ ಸ್ವರೂಪ ಪುರುಷರಾದ ಹರಿ,ರಾಮ, ಕೃಷ್ಣ, ಹನುಮಂತ ಇವರ ಮೇಲೂ ಬೆಳಕು ಚೆಲ್ಲಿ ಅವರ ಮಹಾ ಮಾನವತ್ವ, ಅವರ ಮಹಿಮೆಯನ್ನು ಸಾರುತ್ತಾರೆ.

ಪ್ರೇಮ ಎಂಬುದು ಜಗದ್ವ್ಯಾಪಿ, ವಯಸ್ಸಿನ ಮಿತಿಯಿಲ್ಲದೆ ಅನುರಾಗದಲೆಯಲ್ಲಿ ತೇಲಾಡುವ ಮನಸಿನ ಕುರಿತಾಗಿ, ‘ನಲ್ಲ’. ಮತ್ತು ಆ ಪ್ರೇಮದ ಪಕ್ಷಿ ದೂರವಿರುವಾಗ ಹುಟ್ಟುವ ‘ವಿರಹ’ ಗೀತೆಯನ್ನೂ ರಚಿಸಿ ಓದುಗನೆದೆಗೆ ತಾಕುತ್ತಾರೆ. ಹಾಗೆಯೇ ಪ್ರಕೃತಿಯ ಪ್ರಾಣಿ ಪಕ್ಷಿಗಳ ಕುರಿತಾಗಿಯೂ, ಬಾಣಂತಿ ಬೆಕ್ಕು, ಮಯೂರ ಉತ್ತಮವಾಗಿವೆ. ಹೀಗೆ ಅರುಣಾ ರಾವ್ ಅವರ ಹತ್ತು ಹಲವು ವಿಭಿನ್ನ ವಿಚಾರ ಧಾರೆಗೆ ಸಾಕ್ಷಿಯಾಗಿ ಈ ಕೃತಿ ನಮ್ಮ ಕಣ್ಣ ಮುಂದಿದೆ.

ಅತ್ಯಂತ ಗಟ್ಟಿ ಕಾವ್ಯ, ಸಾಧಾರಣವಾದ ಓದಿನಲ್ಲಿ ಅರ್ಥವಾಗುವುದಿಲ್ಲ. ವಿಶೇಷ ಗಮನ ಮತ್ತು ಚಿಂತನಾ ಶೀಲರಾಗಿ ಅಧ್ಯಯನ ಮಾಡಬೇಕಾಗುತ್ತದೆ. ಆದರೆ ಶ್ರೀಮತಿ ಅರುಣಾ ರಾವ್ ಅವರ ಕವಿತೆಗಳು ಆ ದಿಕ್ಕಿನಲ್ಲಿರದೆ ಸರಳವಾಗಿ ಮನಕ್ಕಿಳಿಯುವಂತಿವೆ. ಅದರಲ್ಲೂ ಹಲವಾರು ಕವಿತೆಗಳಿಗೆ ಹಾಡಿನ ರೂಪ ಕೊಡಬಹುದೆನಿಸುತ್ತದೆ. ಒಂದು ಉತ್ತಮ ಅನುಭೂತಿ ನೀಡುವ ಸಂಕಲನ ಇದಾಗಿದ್ದರೂ, ಕವಯಿತ್ರಿಯವರು ಮತ್ತಷ್ಟು ಪಳಗಬೇಕಿದೆ.

ಕಾವ್ಯ ರಚನಾ ಶೈಲಿ, ಒಂದು ವರ್ಗದ ಓದುಗರಿಗೆ ಸೀಮಿತವಾಗದೆ, ಗಟ್ಟಿ ಸಾಹಿತ್ಯ ಅಧ್ಯಯನ ಶೀಲರಿಗೂ ಮನ ಮುಟ್ಟುವಂತೆ ಇರಬೇಕಾಗುತ್ತದೆ. ಕವಯಿತ್ರಿಯವರದು ವರ್ತಮಾನಕಾಲಕ್ಕೆ ಸೂಚ್ಯವಾಗಿ ಸುತ್ತಲಿನ ವಸ್ತು, ಪರಿಸ್ಥಿತಿಯ ಅವಲೋಕನ ದೃಷ್ಟಿ ಇದ್ದು, ಸಾಹಿತ್ಯ ರಚನೆಯಲ್ಲಿ ಬಲಗೊಂಡರೆ; ಮುಂದಿನ ಕವನ ಸಂಕಲನಗಳು ಪ್ರಭಾವಿತ ಮತ್ತು ಓದುಗರನ್ನು ಚಿಂತನಾಶೀಲವಾಗಿಸುತ್ತವೆ.

ಆ ನಿಟ್ಟಿನಲ್ಲಿ ಕವಯಿತ್ರಿಯವರು ಬಲಗೊಳ್ಳಲಿ, ಅವರ ಕೃತಿ ಹೆಚ್ಚು ಹೆಚ್ಚು ಓದುಗರನ್ನು ತಲಪಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತ ಮತ್ತು ಒಬ್ಬ ಬರಹಗಾರರ ಕೃತಿಗಳು ಹೆಚ್ಚು ಹೆಚ್ಚು ಜನರ ಓದಿಗೆ ಸಿಕ್ಕು ಅದರಿಂದ ಒಂದಷ್ಟಾದರು ಪರಿಣಾಮಕಾರಿ ಬದಲಾವಣೆ ಓದುಗರಲ್ಲಿ ಸಿಕ್ಕರೆ ಅಥವಾ ಕಡೆಯ ಪಕ್ಷ ಮನೋರಂಜನೆ, ಮನಸಿಗೆ ಮುದ ನೀಡಿದರೂ ಅವರ ಬರಹ‌ಸಾರ್ಥಕ ಅನಿಸುತ್ತದೆ.

‍ಲೇಖಕರು Avadhi

June 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: