ಅನುಪಮಾ ಪ್ರಸಾದ್ ಓದಿದ ‘ಕೈದಿಗಳ ಕಥನ’

ಪತ್ರಕರ್ತ, ಲೇಖಕ ಗಣೇಶ ಅಮೀನಗಡ ಬರೆದಿರುವ ಪುಸ್ತಕ ಕುರಿತು
ಅನುಪಮಾ ಪ್ರಸಾದ್‌ ಅವರು ಅಂದು ಓದಬೇಕೆಂದುಕೊಂಡಿದ್ದ ಪುಸ್ತಕ ಇಂದು ಓದುತ್ತ..

ಅನುಪಮಾ ಪ್ರಸಾದ್

ಎಷ್ಟೋ ಪುಸ್ತಕಗಳನ್ನು ಓದಬೇಕೆನಿಸುವ ಕಾಲಕ್ಕೆ ಓದಲಾಗದೆ, ನಿಧಾನವಾಗಿ ಮರೆವೆಗೆ ಸರಿಯುತ್ತದೆ.  

ಕೈದಿಗಳ ಕಥನ ಪುಸ್ತಕ ಬಂದಿದ್ದು 2008ರಲ್ಲಿ. ಮರು ಮುದ್ರಣವಾಗಿದ್ದು 2011ರಲ್ಲಿ. ಈ ಪುಸ್ತಕದ ಬಗ್ಗೆ, ಕೈದಿಗಳು ಆಡಿದ ನಾಟಕದ ಬಗ್ಗೆ ವಿಮರ್ಶೆ ಓದಿದ್ದೆ. ಪುಸ್ತಕ ಓದಲಾಗಿರಲಿಲ್ಲ. ಈಗ ಅಂತಹ ಸಮಯ ಒದಗಿತು. ಸುಮಾರು ಇಪ್ಪತ್ತಾಲ್ಕು ಕೈದಿಗಳು ತಮ್ಮ ಬಗ್ಗೆ ಮಾತಾಡಿದ್ದನ್ನು ಓದಿ ಮುಗಿಸಿ ಪುಸ್ತಕ ಕೆಳಗಿಟ್ಟಾಗ ಗಾಢವಾಗಿ ಮತ್ತೆ ಕಾಡಿದ್ದು ಜೈಲ್ ರಸ್ತೆ.

ಮಂಗಳೂರಿನಲ್ಲಿ ಓಡಾಡುತ್ತಿದ್ದಾಗಲೆಲ್ಲ ಸೆಂಟ್ರಲ್ ಜೈಲ್ ಮುಂದಿನ ರಸ್ತೆಯಲ್ಲಿ ಹಾದು ಹೋಗುವಾಗ ತಟ್ಟನೆ ಜೀವದೊಳಗೆ ನೀರವ ವಿಷಾದ ತುಂಬಿಕೊಳ್ಳುತ್ತಿತ್ತು. ಆ ಎತ್ತರದ ಗೋಡೆಯಾಚೆ ಏನು ನಡೆಯುತ್ತಿರಬಹುದು.. ಏನು ನಡೆದಿರಬಹುದು.. ಅಪರಾಧ ಮಾಡಿದವರು.. ಮಾಡದವರು.. ಹೋರಾಟ, ಚಳವಳಿಗಳಲ್ಲಿ ಭಾಗವಹಿಸಿದವರು.. ಇವರೆಲ್ಲರ ಉಸಿರು ಹಿಡಿದಿಟ್ಟುಕೊಂಡಿರಬಹುದಾದ ಆ ಗೋಡೆಯನ್ನು ನೋಡುತ್ತ ಮನಸ್ಸು ತಳಮಳಗೊಳ್ಳುತ್ತಿತ್ತು.

ಪುಸ್ತಕ ಓದುತ್ತ ಮತ್ತೆ ಆ ತಳಮಳಕ್ಕೆ ಮುಖಾಮುಖಿಯಾದೆ. ಇದರಲ್ಲಿ ಇಂತಹ ಎಲ್ಲ ಬಗೆಯ ಕೈದಿಗಳ ಒಳಲೋಕವಿದೆ. ಜೈಲು ಹಾಗು ಅದರೊಳಗಿರುವ ಕೈದಿ ಸ್ವಸ್ಥ ಸಮಾಜಕ್ಕೆ ಅಪರಾಧಿಗಳ ಲೋಕ. ಆದರೆ, ಜೈಲೊಳಗಿರುವ ಪ್ರತಿಯೊಬ್ಬ ಕೈದಿಯೊಳಗೂ ಒಂದೊಂದು ಸಮಾಜವಿದೆ ಎಂಬುದನ್ನ ಇಲ್ಲಿಯ ಅಪರಾಧ ವೃತ್ತಾಂತಗಳು ಕಾಣಿಸುತ್ತವೆ.

ಒಳ್ಳೆಯ ಹೆಸರು ಮಾಡಿದ ಕಲಾವಿದರೊ, ಸಾಹಿತಿಗಳೊ, ವಿಜ್ಞಾನಿಗಳೊ ಅಥವಾ ರಾಜಕಾರಣಿಗಳೊ-ಒಟ್ಟಿನಲ್ಲಿ ಸಮಾಜದಲ್ಲಿ ಪ್ರಸಿದ್ದಿ ಪಡೆದವರು ನಮ್ಮೂರಿನವರು ಎನ್ನುವಾಗ ಅಥವಾ ಅವರ ಕಾರಣಕ್ಕಾಗಿ ನಮ್ಮೂರುಗಳ ಹೆಸರು ಕೇಳುವಾಗ ನಮ್ಮೊಳಗೊಂದು ಸಂತೋಷ ಮೊಳೆಯುತ್ತದೆ. ಆದರೆ, ಅಪರಾಧಿಗಳ ಕಾರಣಕ್ಕಾಗಿ ಊರ ಹೆಸರು ಬಂದಾಗ ಆಗುವ ಅನುಭವ ಒಂತರಾ ಕಸಿವಿಸಿ.

ಕೈದಿಗಳ ಕಥನದಲ್ಲಿ ಬರುವ ಉಜಿರೆ ಎಂಬ ಸಣ್ಣ (ಆ ದಿನಗಳಲ್ಲಿ) ಊರಿನ ಹೆಸರು, ಆ ಕೈದಿ ತನ್ನ ಕಥೆ ಹೇಳುತ್ತ ಪ್ರಸ್ತಾಪಿಸಿದ ಕೆಲವು ಹುಡುಗರ ಹೆಸರುಗಳನ್ನು ಓದಿದಾಗ ಅದೇ ಅನುಭವ. ಆ ಹುಡುಗರು ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೆಚ್ಚು ಕಡಿಮೆ ನನ್ನ ಆಸು ಪಾಸು ತರಗತಿಯಲ್ಲೆ ಇದ್ದವರು.

ರಂಗಭೂಮಿ ನಂಟಿನಿಂದ ಕೈದಿಗಳು ಬದಲಾದ ಬಗೆ ತೆರೆದಿಡುವ ಲೇಖಕರ ಉದ್ದೇಶದಂತೆಯೇ, ಕೈದಿಗಳು ತಮ್ಮ ಕಥೆ ಹೇಳುವ ರೀತಿಯಲ್ಲೆ ನಾಟಕದ ಮೂಲಕ ಪಡೆದುಕೊಂಡ ಅರಿವಿನ ಪ್ರಜ್ಞೆ ಕಾಣಿಸುತ್ತದೆ. ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳ ರಂಗಭೂಮಿ ನಂಟಿನಿಂದಾಗಿ ಬದಲಾದ ಬಗೆಯ ಕುರಿತೇ ಈ ಪುಸ್ತಕವಿರುವುದರಿಂದ ಇಲ್ಲಿ ಲೇಖಕರು ನಾಟಕ ಶಿಬಿರದಲ್ಲಿ ಭಾಗವಹಿಸಿದವರ ಕಥನ ಮಾತ್ರ ಆಯ್ದುಕೊಂಡಿರುವುದು ಸಹಜ. ಒಂದು ವೇಳೆ ಇದರಲ್ಲಿ ಶಿಬಿರದಲ್ಲಿ ಭಾಗವಹಿಸದವರ ಕಥನವನ್ನೂ ಕೊಡಲು ಸಾಧ್ಯವಾಗಿದ್ದರೆ ತುಲನಾತ್ಮಕ ನೋಟ ಸಿಗುತ್ತಿತ್ತು.

ಸ್ವಸ್ಥ ಸಮಾಜಕ್ಕೆ ಪಿಡುಗಾಗಿ ಕಾಡುವ ಅಪರಾಧ ಜಗತ್ತಿನ ಬಗ್ಗೆ, ಅಪರಾಧ ಎಸಗುವಂತೆ ಮಾಡುವ ಕ್ರಿಯೆಗಳ ಬಗ್ಗೆ ಅಥವಾ ಶಕ್ತಿ ಕೇಂದ್ರದ ಬಗ್ಗೆ, ಅಪರಾಧ ಎಸಗಿ ಕೈದಿಗಳಾಗಿರುವವರ ಮನ ಪರಿವರ್ತನೆಯ ಸಾಧ್ಯತೆಗಳ ಬಗ್ಗೆ ಯೋಚಿಸುವಂತೆ ಮಾಡುವ ಹೊತ್ತಗೆ ಕೈದಿಗಳ ಕಥನ. ಈ ಕೈದಿಗಳೆಲ್ಲ ಈಗ ಹೇಗಿದ್ದಾರೆ ಎಂದು ಗಣೇಶ ಅಮೀನಗಡರನ್ನು ಕೇಳಿದಾಗ ಎಲ್ಲರೂ ಬಿಡುಗಡೆಯಾಗಿದ್ದಾರೆ. ಒಂದಿಬ್ಬರು ತೀರಿಕೊಂಡಿದ್ದಾರೆ ಅಂದರು.

ಪುಸ್ತಕದ ಕೊನೆಯಲ್ಲಿರುವ ಜೈಲ್ ಡೈರಿ ಇಲ್ಲಿ ಕಥೆ ಹೇಳಿಕೊಂಡ ಕೈದಿಗಳಿಗೆ ಜೈಲಿನೊಳಗೆ ನಾಟಕ ಶಿಬಿರ ಮಾಡುವಾಗಿನ ಆರಂಭದಿಂದ ಕೊನೆಯವರೆಗಿನ ಪ್ರಕ್ರಿಯೆಯನ್ನು ದಾಖಲಿಸುತ್ತದೆ. ಜೈಲುಗಳಿಗೆ ಪರಿವರ್ತನಾ ಶಿಬಿರ ಎಂದು  ಮರು ನಾಮಕರಣ ಮಾಡಬೇಕಾದ ಅಗತ್ಯ ಹಾಗು ಅದರ ಸಾರ್ಥಕತೆ ಏನೆಂಬುದು ಈ ಡೈರಿ ಓದುವಾಗ ಸ್ಪಷ್ಟವಾಗುತ್ತದೆ.

‍ಲೇಖಕರು Admin

October 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: