ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂಬೆಯ ಅಳಲು

ರಾಜು ಹೆಗಡೆ

ಗೆದ್ದವನೂ ಬಿಟ್ಟ
ಗೆಲ್ಲುತ್ತೇನೆ ಎಂದವನೂ
ಬಿಟ್ಟ
ಆಸೆ ಕನಸುಗಳೆಲ್ಲ
ಕಲಕಿ ಹೋದವು

ಕಾಡಿನ ಬೇಡನ
ಕರತಂದೆ
ನಾಡಿನಲ್ಲಿ ಹೊಡೆಯಲಾರದೇ
ಹೋದ
ತಾಯ ಕೊಂದವನೇ
ಬಂದ
ಸೋತೆ ಎಂದು
ಕೂತ

ಈಗ ಸುತ್ತಲೂ
ಧಗಧಗ ನಗುವ
ಬೆಂಕಿ

ಹೆಣ್ಣೂ ಅಲ್ಲದ
ಗಂಡೂ ಅಲ್ಲದ
ಶಿಖಂಡಿಯೇ ಆಗಬೇಕೇ
ಇದನೆಲ್ಲ ಎದುರಿಸಲು.

ಗಾಳಿ ಮಾತ್ರ

ಒಂದು ನಿತಾಂತ ಮೌನ
ನಿಂತು ಬಿಟ್ಟಿದೆ
ಕತ್ತಲೆಯ ಬೆಳಕಿನಲ್ಲಿ

ಅಲ್ಲಿ
ಚಿಲಿಪಿಲಿಯು ಬಾಲ್ಯ
ಬಲ ಕಳೆದುಕೊಂಡಿದೆ
ಯೈವನದ ದಾಹ
ಬಿಸಿಲಲ್ಲಿ
ಪದ ಕುಸಿದ
ನೆಲದಲ್ಲಿ
ಹಸಿರಾಗಿ ಹಾಡುವಾಗ
ಮಧ್ಯಾಹ್ನ ಮಾತಾಡುತ್ತದೆ
‘ ಅತ್ತಣಿಂದ ಬೇಟೆಗಾರ….’

ಅವಳು ಇವಳು
ಅವನು ಇವನು
ನಾನು ನೀನು
ಅದು ಇದು ಎಲ್ಲ
ಕತ್ತಲೆಯ ಬೆಳಕಿನಲ್ಲಿ
ಗಾಳಿ ಮಾತ್ರ
ಉಸಿರಾಡುತ್ತಿದೆ.

ಮನೆ, ದಾರಿ

ನಮ್ಮನೆಗೆ ಹೋಗಲು
ಮುಖ್ಯವಾಗಿ ಎರಡು ದಾರಿಗಳಿವೆ
ಒಂದು, ಜಟ್ಕನ ಬಲೆಯಲ್ಲಿ
ಇಳಿದು, ರಸ್ತೆಯಂಥ ದಾರಿಯಲ್ಲಿ
ಹಸ್ಲೋರ ಕೇರಿ ಮೇಲಿಂದ
ಮುಂದೆ ಹೋದರೆ
ಗೊಬ್ಬರ ಕುಳಿ, ಅದರ ಹಿಮ್ಮೇಳವಾಗಿರುವ
ಅಪ್ಪಪ್ಪನ ಮನೆ ಕೊಟ್ಟಿಗೆ ಪರಿಮಳ
ಮೂಗಿಗೆ ರಾಚುತ್ತದೆ
ಅಲ್ಲೇ, ಗೆಂಚಿಗೆಯಾಗಿರುವ
ಹಾರುಮನೆಗಳ ನಡುವೆ,
‘ಈಗ ಬಂದ್ಯಾ ಈಗ ಬಂದ್ಯಾ’
ಎನ್ನುವ ಪ್ರಶ್ನೆಗೆ ಉತ್ತರ ಇಡುತ್ತಾ
ಹಿಂದೆ
ಅಡಿಕೆ ತೆಂಗಿನ ತೋಟದಲ್ಲಿ
ಸಂಕ, ಬೇಲಿಗಳನ್ನು ದಾಟುತ್ತಾ ಹೋದರೆ
ಮರಕ್ಕೆ ಸುತ್ತಿದ ಬಳ್ಳಿಯಂತ ಗುಡ್ಡದ ಕೊರಕಲು
ದಾರಿ
ಹತ್ತಿ ಹತ್ತಿ ಹತ್ತಿ
ಕತ್ತೆತ್ತಿದರೆ ಅಂಗಳದಲ್ಲಿ
ಭೂತದಂಥೆ ಕಾಣುತ್ತದೆ
ನಮ್ಮನೆ!

ಇನ್ನೊಂದು ದಾರಿ,
ತುಸು ಹಿಂದೆಯೇ ಬಸ್ಸಿಳಿದು
ಏಕ್‍ದಂ ಏರಬೇಕಾದ ಗುಡ್ಡದ ರಸ್ತೆ
ಆಚೆ ಈಚೆ ಮರಗಿಡಗಳು
ಮುಳ್ಳುಹಿಂಡು
ಹುರ್ಸಾನ ಹಕ್ಕಿಯ ಕೂಗು, ಸರಕ್ಕನೆ ಹರೆದು
ಹೋಗುವ ಹಾವು ಹರಣೆಗಳು, ಅಪರೂಪಕ್ಕೆ ಜನದನ
ಹೀಗೇ ಹೋಗಿ
ಎಡಕ್ಕಿರುವ ಕರೆಂಟ್ ಬೇಲಿ
ದಾಟಿದರೆ ಗೇರು, ಹಲಸಿನ ಬೇಣ
ಒಣಗಿದ ಎಲೆಗಳಡಿಯಲ್ಲಿ
ಮಲಗಿರುವ ರಸ್ತೆ
ಇಲ್ಲಿಯೂ
ನಮಗೆ ಮೊದಲು ಸಿಗುವುದು
ಗೊಬ್ಬರಕುಳಿ ಕೊಟ್ಟಿಗೆಯೇ!
ಆದರೆ
ಮನೆಯ ಹಿಂಬದಿಗೆ ಬಂದಿದ್ದೇವೆ
ನಾವೀಗ
ಅಲ್ಲಿರುವ ಎಜ್ಜೆಯ ದಾರಿಯಲ್ಲಿ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಪಡಮಾಡಿನ ಕೆಳಗೆ ನಡೆದರೆ
ಮುಳುಗುತ್ತಿರುವ ಹಡಿಗಿನಂತೆ
ಕಾಣುತ್ತದೆ ಮನೆ
ಎದರು
ಚೂಪಾದ ಇನ್ನೊಂದು ಗುಡ್ಡ,
ಕೆಳಗೆ
ಮಂಡೆ ಕೆದರಿ ನಿಂತಿರುವ
ಅಡಿಕೆ, ತೆಂಗುಗಳ ಚಂಡೆ
ಮನಸ್ಸು ಮಾಡಿದರೆ ನಾವು
ಅಲ್ಲೇ ನಿಂತು
ಅದನು ಹಿಡಿದು ಆಡಬಹುದು
ಗಾಳಿಯ ಹಾಗೆ.

ಅಗೋ ನೋಡಿ,
ಆಗಸದಿಂದ ಏನೋ ಇಳಿದು
ಬರುತ್ತಿದೆ
ಆಕಾರ ಬಣ್ಣ ಗುಣಗಳಿಲ್ಲದೆ.

‍ಲೇಖಕರು Avadhi

14 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading