ಸಂಡೇ ಸಂದರ್ಶನ: ಜಿ ರಾಜಶೇಖರ್ ಹಾಗೂ ಕೆ ಫಣಿರಾಜ್ ಸಂವಾದ

ಪರಂಪರೆಯ ನಂಟು ಕಳೆದುಹೋದ ಈ ಹೊತ್ತಿನಲ್ಲಿ

ಪ್ರಖರ ಚಿಂತಕರಾದ ಜಿ.ರಾಜಶೇಖರ್ ಅವರು ಮಾತನಾಡುವುದೆಂದರೆ ಅದು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಂಗತಿಗಳ ಮೇಲೆ ಬೀಳುವ ಹೊಸ ಬೆಳಕು; ಹೊಸ ದಿಕ್ಕಿನಲ್ಲಿ,  ಹೊಸ ನೋಟದಲ್ಲಿ ನೋಡಬೇಕೆಂದು ಒತ್ತಾಯಿಸುವ ಬೌದ್ಧಿಕ ಒತ್ತಡ.  

ರಾಜಶೇಖರ್ ಅವರ ಆಪ್ತರಾದ ಕೆ. ಫಣಿರಾಜ್ ನಡೆಸಿದ ಚುಟುಕು ಮಾತುಕತೆಯ ಭಾಗ ಇಲ್ಲಿದೆ.

ಕೆ.ಫಣಿರಾಜ್:  1992ರ ಡಿಸೆಂಬರ್ 7ರಂದು, ಕನ್ನಡ ಸಾಹಿತ್ಯ ಲೋಕದ ಇಬ್ಬರು ಗಣ್ಯರು ಪು.ತಿ. ನರಸಿಂಹಾಚಾರ್ ಹಾಗೂ ಪಿ.ಲಂಕೇಶ್ ಬೆಂಗಳೂರಿನ ಗಾಂಧಿ ಪ್ರತಿಮೆ ಎದಿರು ಒಂದು ದಿನದ ಸತ್ಯಾಗ್ರಹ ಮಾಡಿದರು; ಬಾಬ್ರಿ ಮಸೀದಿಯ ಧ್ವಂಸವು ಅಪವಿತ್ರ ಹಾಗೂ ಅನ್ಯಾಯುತವೆಂದು ಸಾರ್ವಜನಿಕವಾಗಿ ಸಾರಿದರು.

ಇಬ್ಬರೂ, ಸ್ವತಂತ್ರಪೂರ್ವ ಕಾಲದಲ್ಲಿ ಹುಟ್ಟಿ ಬೆಳೆದವರು; ಇಬ್ಬರ ಸಾಂಸ್ಕೃತಿಕ- ಸಾಮಾಜಿಕ ಒಲವುಗಳು ಭಿನ್ನವಾಗಿದ್ದರೂ, ಆ ಹೊತ್ತಿಗೆ ಒಂದು ಪ್ರತಿರೋಧದ ದನಿಯನ್ನು ಎತ್ತಬೇಕು ಎಂದು ಇಬ್ಬರಿಗೂ ಅನಿಸಿ ಒಟ್ಟಾಗಿ ಪ್ರತಿಭಟಿಸಿದರು. ಆದರೆ, ಒಂದು ಎಡಬಿಡಂಗಿ ನ್ಯಾಯ ನಿರ್ಣಯದನ್ವಯ, ಅದೇ ಮಸೀದಿ ಧ್ವಂಸ ಭೂಮಿಯಲ್ಲಿ, ಒಂದು ಖಾಸಗಿ ಟ್ರಸ್ಟಿಗೆ ಮಂದಿರ ನಿರ್ಮಾಣದ ಅವಕಾಶ ನೀಡಲಾಯಿತು.

ಅದಕ್ಕಾಗಿ ರಚಿಸಿದ ಖಾಸಗಿ ಟ್ರಸ್ಟಿನ ರಚನೆಯನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಿದಾಗ, ಮಸೀದಿ ಧ್ವಂಸದಲ್ಲಿ ಭಾಗಿಯಾದ ಪಕ್ಷವು ಅಧಿಕಾರದಲ್ಲಿದ್ದು, ಅದು ಮಸೀದಿ ನಾಶದಲ್ಲಿ ಭಾಗಿಯಾದ ಸಂಘಟನೆಗಳವರನ್ನ್ನೇ ಬಹುಪಾಲು ಸೇರಿಸಿ ಟ್ರಸ್ಟ್ ರಚಿಸಿತು; ಮತ್ತೂ ಆಗಸ್ಟ್ 5,2020ರಂದು, ಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಉತ್ತರ ಪ್ರದೇಶದ ರಾಜ್ಯ ಸರಕಾರ ಹಾಗೂ ದೇಶದ ಪ್ರಧಾನ ಮಂತ್ರಿಗಳೂ ಎಗ್ಗಿಲ್ಲದೆ ಭಾಗವಹಿಸಿ, ಅದನ್ನು ‘ಚಾರಿತ್ರಿಕ ದಿನ’ವೆಂದು ಮಾತನಾಡಿದರು.

ಅದಕ್ಕೆ, ಕನ್ನಡದ ಸಾಹಿತ್ಯವಲಯದಿಂದ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗಲಿಲ್ಲ! ಸಂಸ್ಕೃತಿಯು ಸಮಾಜಕ್ಕೆ ಹೊರಗಿನದಲ್ಲವೆಂಬುದನ್ನು, ನಿಮ್ಮ ಮೆಚ್ಚಿನ ಸಾಹಿತಿ-ಚಿಂತಕ ರೇಮಂಡ್ ವಿಲಿಯಮ್ಸ್ ಹಲವು ಬಗೆಯಲ್ಲಿ ನಿರೂಪಿಸಿರುವನು. ಇಂತಾಗಿ, 1992, ಡಿಸೆಂಬರ್ 7 ಹಾಗೂ ಆಗಸ್ಟ್ 5, 2020ರ ನಡುವಿನ  ಇಪ್ಪತ್ತೆಂಟು ವರ್ಷಗಳ ನಡುವಿನ ಕಾಲಾವಧಿಯಲ್ಲಿ, ನಮ್ಮ ಸಮಾಜ- ಸಂಸ್ಕೃತಿಯಲ್ಲಿ ಕಾಣಿಸುವ ಈ ವೈದೃಶ್ಯದ ಬಗ್ಗೆ ನಿಮ್ಮ ಟೇಕ್ ಯಾನೆ ಕಣ್ಣೋಟವೇನು?

ಜಿ.ರಾಜಶೇಖರ್ : ಬಾಬ್ರಿ ಮಸೀದಿ ಧ್ವಂಸದ ಘಟನೆಯ ಜೊತೆಗೆ ನಾವು, ಆ ನಂತರ ಸತತ ನಾಲ್ಕು ತಿಂಗಳು ಮುಂಬೈಯಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರವನ್ನೂ ನೆನೆಸಿಕೊಳ್ಳಬೇಕು; ನನಗಂತೂ ಮಸೀದಿ ನಾಶಕ್ಕಿಂತ ಜೀವನಾಶವು ಹೆಚ್ಚು ಕ್ರೂರವಾದುದ್ದಾಗಿದೆ. ಲಂಕೇಶ್-ಪುತಿನ ಇಬ್ಬರೂ ಈ ಜೀವನಾಶವನ್ನೂ ಖಂಡಿಸಿದ್ದರು.

ಇವರಲ್ಲಿ ಲಂಕೇಶ್ ಎಡಪಂಥೀಯರು-ನಿಮ್ಮ precise ನುಡಿಗಟ್ಟಲ್ಲಿ radical liberal; ಅವರು ಪ್ರತಿಭಟಿಸಿದ್ದು ಸಹಜವಾಗಿ ಕಾಣುತ್ತದೆ. ಆದರೆ, ಪುತಿನ ಒಬ್ಬ ಆಸ್ತಿಕ-ಅಧ್ಯಾತ್ಮಿ-ಭಾಗವತದ ಕವಿ; ಅವರಿಗೆ ಪರಂಪರೆಯ ಬಗ್ಗೆ ಆಳವಾದ ಶ್ರದ್ಧೆ ಇತ್ತು. ಇಬ್ಬರ ಈ ಭಿನ್ನತೆಗಳ ನಡುವೆಯೂ ಇಬ್ಬರೂ ಪ್ರತಿಭಟಿಸಿದರು.

ಯಾಕೆಂದರೆ ಅವರಿಗೆ ಜನರ ಬದುಕಿನ ಜೊತೆ ಒಂದಲ್ಲ ಒಂದು ಬಗೆಯ ನೆಂಟಸ್ತಿಕೆ ಇತ್ತು; ಅವರು ಪರಂಪರೆಯನ್ನು ಭಿನ್ನ ಬಗೆಯಲ್ಲಿ ಅರ್ಥ ಮಾಡಿಕೊಂಡಿದ್ದರೂ, ಪರಂಪರೆಗೂ ಜೀವನಕ್ಕೂ ಸಂಬಂಧ ಇರುವುದನ್ನು ಗುರುತಿಸ ಬಲ್ಲವರಾಗಿದ್ದರು.

ಇವರಿಬ್ಬರೇ ಯಾಕೆ, ಬಸವಣ್ಣನಿಂದ ಹಿಡಿದು ಲಂಕೇಶರವರೆಗೂ ಕನ್ನಡ ಸಾಹಿತ್ಯದಲ್ಲಿ ಈ ನಮೂನೆಯ ಅರಿವನ್ನು ಕಾಣಬಹುದಲ್ಲವಾ? ಹೀಗಾಗಿ, ಅವರ ಪ್ರತಿಭಟನೆಯನ್ನು ನಾನು ವಿವರಿಸಬಲ್ಲೆ. ಆದರೆ, ಅಗಸ್ಟ್ 5, 2020ರ ಮಂದಿರ ಭೂಮಿ ಪೂಜೆಯ ಘಟನೆಯನ್ನು ಇಂದು ಇರುವ ’ಪ್ರಗತಿಶೀಲ’ ಸಾಹಿತಿಗಳೂ ಹಾಗೂ ಯುವ ಸಾಹಿತಿಗಳೂ ಆ ಬಗೆಯಲ್ಲಿ ಹಚ್ಚಿಕೊಳ್ಳಲು ಸಾಧ್ಯವಾಗಿಲ್ಲ ಎಂದು ನೀವು ಹೇಳುವುದು ನಿಜ. ಯಾಕೆ? ಅಂದರೆ, ನನಗೆ ತೋಚುವುದು ’ವರ್ತಮಾನದ ಜನ ಜೀವನಕ್ಕೂ ಪರಂಪರೆಗೂ ನಡುವೆ ಸಂಬಂಧ ಕಡಿದು ಹೋಗಿದೆ, ಒಂದು ದೊಡ್ಡ ಕಂದರ ಏರ್ಪಟ್ಟಿದೆ’ ಅನ್ನುವುದಷ್ಟೇ.

ಕೆ.ಫಣಿರಾಜ್: ’ವರ್ತಮಾನದ ಜನ ಜೀವನಕ್ಕೂ ಪರಂಪರೆಗೂ ನಡುವೆ ಸಂಬಂಧ ಕಡಿದು ಹೋಗಿದೆ…’ ಅಂದ್ರೆ ಏನು…?

ಜಿ.ರಾಜಶೇಖರ್ : ಅಂದ್ರೆ ನಾನು ಮೊದಲೇ ಹೇಳಿದಂತೆ, ಜನಕ್ಕೆ ತಮ್ಮ ಪರಂರೆಯ ಜೊತೆಗಿನ ನಂಟು ಕುಸಿದು ಹೋಗಿದೆ. ಪರಂಪರೆ ಎಂದರೆ ಮತಶ್ರದ್ಧೆ, ಮತಾಚರಣೆಗಳು ಮಾತ್ರವಲ್ಲ ಅವುಗಳ ಜೊತೆಗಿನ ಜಗಳವೂ ಹೌದು, ಅಂಥದ್ದರಿಂದ ದೊರಕುವ ವಿವೇಕವೂ ಹೌದು ಎಂದು ನೀವೆ ಅನೇಕ ಸಾರಿ ನನ್ನ ಜೊತೆ ವಾದ ಮಾಡಿರುವಿರಿ; ಅದನ್ನು ನಾನೂ ಒಪ್ಪುತ್ತೇನೆ. ಅದನ್ನೇ ಕನ್ನಡ ಸಾಹಿತ್ಯ ಲೋಕಕ್ಕೆ ಇದ್ದ ಪರಂಪರೆಯ ಜೊತೆಗಿನ ನಂಟು ಎನ್ನುವುದು. ಅದು ಜನರಿಗೂ ಇತ್ತು, ಸಾಹಿತ್ಯಕ್ಕೂ ಇತ್ತು.

1980ರ ದಶಕದವರೆಗೂ, ಕನ್ನಡದ ಸಾಹಿತಿಗಳು ’ಸಾರ್ವಜನಿಕ ಬೌದ್ಧಿಕರೂ’-public intellectuals- ಆಗಿದದ್ದು ಆಕಸ್ಮಿಕವಲ್ಲ; ವಿದ್ಯಾವಂತರು ಸಾಮಾಜಿಕ, ರಾಜಕೀಯ ಚಳುವಳಿಗಳ ಜೊತೆ ಸಹಮತ-ಭಿನ್ನಮತದ ನಂಟನ್ನು ಇಟ್ಟುಕೊಂಡವರಾಗಿರುತ್ತಿದ್ದರು; ಆ ಕಾರಣಕ್ಕೆ ಸಾಂಸ್ಕೃತಿಕ ವಿದ್ಯಮಾನಗಳು ಒಂದು ಸಮೂಹ ಚಟುವಟಿಕೆಗಳಾಗಿ ಇರುತ್ತಿದ್ದವು;

1980ರ ನಂತರ ಅಂಥದ್ದು ಇಲ್ಲದೆ ವಿದ್ಯಾವಂತರು ತಾವುಂಟೋ ಮೂರ್ಲೋಕವುಂಟೋ ಎಂಬಂತೆ atomized Neo liberal ಗಳಾಗಿದ್ದರೆ…ಇತ್ಯಾದಿ ಚರ್ಚೆಯನ್ನು ನೀವೆ ನನ್ನ ಜೊತೆ ಮಾಡಿರುವಿರಿ. ಅದನ್ನೇ ಮುಂದುವರೆಸಿ ನಾನು ’ವರ್ತಮಾನದ ಜನ ಜೀವನಕ್ಕೂ ಪರಂಪರೆಗೂ ಕಂದರ ಉಂಟಾಗಿದೆ’ ಎನ್ನುತ್ತಿದ್ದೇನೆ. You use to quote an Arab poet….

ಕೆ.ಫಣಿರಾಜ್: ಮೊಹಮ್ಮದ್ ದರ್ವೀಷ್. ’ಸಾಹಿತ್ಯವು ಜಗತ್ತನ್ನು ಬದಲಾಯಿಸುತ್ತದೆ ಎನ್ನುವುದು ಭ್ರಮೆ; ಸಾಹಿತ್ಯವು ಸಾಹಿತಿಯನ್ನು ಮಾತ್ರವೇ ಬದಲಾಯಿಸುತ್ತದೆ! ಆದರೆ, ಸಾಹಿತಿಗೆ ಲೋಕದ ಜೊತೆ ನೆಂಟಸ್ತಿಕೆ ಹಚ್ಚಿಕೊಳ್ಳಲು ಇಂಥ ಭ್ರಮೆ ಅನಿವಾರ್ಯ…’….Is this the one?

ಜಿ.ರಾಜಶೇಖರ್ : ಯಸ್ಸ್! ಲೋಕದ ಜೊತೆ ನಂಟು…ಜಗಳದ ನಂಟಾದ್ರೂ ಸರಿ….ಅದು ಕಳೆದು ಹೋಗಿದೆ.

ಕೆ.ಫಣಿರಾಜ್: ಇರುವೆಡೆಯಿಂದಲ್ಲೇ, ಇರುವಷ್ಟು ಜ್ಞಾನ ಸಂಪನ್ಮೂಲದಿಂದಲೇ, ಲೋಕದ ಆಗು ಹೋಗುಗಳನ್ನು ಗ್ರಹಿಸಿ, ಅದರ ಬಗ್ಗೆ ಬರೆದವರು ನೀವು; ಊರಲ್ಲಿ ಆದ ಅನ್ಯಾಯಗಳನ್ನು ಬೀದಿಗಿಳಿದು ಪ್ರತಿಭಟಿಸಿ, ದೇಶ-ಲೋಕದ ಅನ್ಯಾಯಗಳನ್ನೂ ಕಾಣಲು ಪ್ರಯತ್ನಿಸಿದವರು ನೀವು.

ಉಡುಪಿಯ ಕಾಲಾಂತರದ ಸ್ಥಿತ್ಯಾಂತರಗಳನ್ನು ಹೇಗೆ ವಿವರಿಸುವಿರಿ? ಉಡುಪಿಯೂ ಲೋಕಾತೀತವಾಗಿ ಇರಲು ಸಾಧ್ಯವಿಲ್ಲವಾಗಿ, ಈ ಊರ ಸ್ಥಿತ್ಯಂತರಗಳನ್ನು ಲೋಕ ಸ್ಥಿತ್ಯಂತಗಳ ಜೊತೆ ಹೇಗೆ ಹೆಣೆಯುವಿರಿ? ಈ ಸ್ಥಿತ್ಯಾಂತಗಳು, ನಿಮ್ಮ ಬದುಕಿನ ಕಲ್ಪನೆಗೆ ಆತಂಕ ಒಡ್ಡುವಂತಿವೆ. ನಿಮ್ಮ ಬದುಕಿನ ನ್ಯಾಯಾನ್ಯಾಯ ಕಲ್ಪನೆಯನ್ನು ನಿರೂಪಿಸಿದ ಅನೇಕ ಸಾಮಾಜಿಕ-ಸಾಂಸ್ಕೃತಿಕ ಆಗು ಹೋಗುಗಳು, ಪಠ್ಯಗಳೂ ಇವೆ. ಈಗ ಪ್ರಸ್ತುತವೆನಿಸುವ ಕೆಲವನ್ನು ರೂಪಕ ಕಥನವಾಗಿ ದಯವಿಟ್ಟು ನೆನೆಯಿರಿ.

ಜಿ.ರಾಜಶೇಖರ್ : 1990ರ ನಂತರ ಉಡುಪಿ ಬದುಕು ಕೋಮು ವೈಷಮ್ಯದ ವಿಕಾರ ಪಡೆದಿದೆ. ’ಅದಿ ಉಡುಪಿ ಬೆತ್ತಲೆ ಪ್ರಕರಣ’ವನ್ನೇ ಸಾಕ್ಷಿಯಾಗಿಟ್ಟುಕೊಂಡು ಹೇಳುತ್ತೇನೆ [2004ರಲ್ಲಿ ಹಾಜಬ್ಬ ಹಾಗು ಹಸನಬ್ಬ ಎಂಬ ತಂದೆ ಮಗನನ್ನು, ಅಕ್ರಮ ದನ ಸಾಗಾಟದ ನೆಪ ಒಡ್ಡಿ, ಉಡುಪಿಯ ಸಾರ್ವಜನಿಕ ಸ್ಥಳದಲ್ಲಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರೆಂಬ ’ಅಪರಾಧ ಆರೋಪ’ದ ಪ್ರಕರಣ]. ಅದರ ಆರೋಪಿಗಳು ಯಾರೇ ಆಗಿದ್ದರೂ (ಅವರೇನೂ ಕ್ಷಮಗೆ ಅರ್ಹರಲ್ಲ!) ಉಡುಪಿಯ ಜನಕ್ಕೆ ಈ ಹಿಂಸೆಯ ಬಗ್ಗೆ ಇನಿತೂ ಪಶ್ಚಾತಾಪವಿಲ್ಲದ, ಸಹಮತವಿತ್ತು ಎಂದೇ ನನ್ನ ನಂಬಿಕೆ.

ಆ ಪ್ರಕರಣದ ಕೋರ್ಟು ಕೇಸಿನ ಪ್ರತಿ ವಿಚಾರಣೆಯನ್ನೂ ನಾನು ಎಡೆಬಿಡದೆ ಹಾಜರಾಗಿ ಗಮನಿಸಿದ್ದೇನೆ. ಆ ನಡಾವಳಿಗಳು, ಹಿಂಸೆಗೆ ತುತ್ತಾದವರನ್ನು ಅಪಮಾನಕ್ಕೆ ಈಡು ಮಾಡಿದ ಬಗೆ, ಎಲ್ಲ ಆರೋಪಿಗಳ ಬೇಷರತ್ತ್ ಖುಲಾಸೆ, ಖುಲಾಸೆಯಾದ ಮರುಕ್ಷಣವೇ (ಆರೋಪಿ ಗಣವು) ಆಚರಿಸಿದ ಸಾರ್ವಜನಿಕ ಸಂಭ್ರಮ-ಇದು ಉಡುಪಿ ಕುಸಿದಿರುವ ವಿಕಾರ ಸ್ಥಿತಿಯಲ್ಲದೇ ಮತ್ತೇನು!

ಹಾಗಂತ, 1990ಕ್ಕಿಂತ ಹಿಂದೆ, ಉಡುಪಿಯ ಜನ ಪ್ರಗತಿಶೀಲರಾಗಿದ್ದರೋ ಎಂದು ನೀವು ಕೇಳುತ್ತಿರುವಿರಿ. ಖಂಡಿತ ಇಲ್ಲ. ನನ್ನ ಬದುಕಿನಲ್ಲಿ ಕಂಡಂತೆ, ಉಡುಪಿಯು ಯಾವತ್ತೂ ಮಠಗಳ ಯಜಮಾನಿಕೆಯ, ಉಳ್ಳವರ ದೊಡ್ಡಸ್ತಿಕೆಯ ಜಾತಿಪೀಡಿತ ಶಟ ಸಮಾಜವೇ ಆಗಿತ್ತು. ಆದರೆ, ಈ ನಮೂನೆಯ ವಿಕಾರತೆ ತೋರುತ್ತಿರಲಿಲ್ಲ ಎನ್ನುವುದು ವಿರೋಧಾಭಾಸ. ಬಿಡಿ ಬಿಡಿಯಾದ ಕೆಲವು ನೆನಪುಗಳನ್ನು ಹೇಳುತ್ತೇನೆ.

ಉಡುಪಿಯಲ್ಲಿ ಕಮ್ಯುನಿಷ್ಟರು ಚುರುಕಾಗಿದ್ದರು; ಅವರ ಸಭೆಗಳು ಅಷ್ಟಮಠಗಳ ನಡುವಿನ ರಥಬೀದಿಯಲ್ಲೇ ನಡೆಯುತ್ತಿದ್ದವು; ಮೈಕಿಗೆ ಬೇಕಾದ ಕರೆಂಟು ಸರಬರಾಜನ್ನು ಅವರು ಪಕ್ಕದ ಮಠಗಳ ಪವರ್ ಕನೆಕ್ಷನಿಂದಲೇ ವಿನಂತಿಸಿ ಪಡೆದುಕೊಳ್ಳುತ್ತಿದ್ದರು ಹಾಗೂ ಅಂಥ ಸಭೆಗಳಲ್ಲಿ ಮಠದ ಕರ್ಮಟತೆಯನ್ನು ಕಟುವಾಗಿ ಟೀಕಿಸುತ್ತಿದ್ದರು! ಈ ರಥಬೀದಿಯಲ್ಲಿ ಇ.ಕೆ.ನಂಬೂದ್ರಿಪಾದ್, ನಾಯನಾರ್ ರಂಥ ನಾಯಕರು ಭಾಷಣಗಳನ್ನು ಮಾಡಿದ್ದಾರೆ, ಜನಗಳು ಯಾವ ತಕರಾರು ಇಲ್ಲದೆ ಕೇಳಿದ್ದಾರೆ.

ಉಡುಪಿಯ ಕಮ್ಯುನಿಷ್ಟರ ನಾಯಕರಾದ ಕೆ.ದಾಸು ಪೂಜಾರಿಯವರು ಬಡತನ, ಜಾತಿ ದಬ್ಬಾಳಿಕೆಗಳಿಗೆ ಈಡಗಿದ್ದ ಬಿಲ್ಲವ ಸಮಾಜದಿಂದ ಬಂದವರು; ಅವರು ಸದಾ ಇಸ್ತ್ರಿ ಹಾಕಿದ ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು, ಕಾಲಿಗೆ ಮೆಟ್ಟು ಹಾಕಿಕೊಂಡು ಎದೆ ಎತ್ತಿ ಓಡಾಡುತ್ತ ಇದ್ದದ್ದು, ಬಿಲ್ಲವ ಸಮುದಾಯಕ್ಕೆ ಘನತೆ-ಸ್ವಾಭಿಮಾನಗಳ ಪಾಠವಾಗಿತ್ತು. ಭೂಸುಧರಣಾ ಚಳುವಳಿಯಲ್ಲಿ ಎಲ್ಲ ಅಧಿಕಾರಸ್ತರನ್ನು ಎದಿರು ಹಾಕಿಕೊಂಡು ಕಮ್ಯುನಿಷ್ಟರು ಹೋರಾಟ ಮಾಡಿ, ಬಿಲ್ಲವ ಸಮುದಾಯವರಿಗೆ ಉಳುವ ಭೂಮಿ ಸಿಗುವಂತೆ ಮಾಡಿದರು.

ಆದರೆ, ಒಂದೇ ಒಂದು ಚುನಾವಣೆಯಲ್ಲೂ, ಅವರು ಗೆದ್ದು ಬರಲಾಗಲಿಲ್ಲ ಎಂದರೆ, ಬಂಡುಕೋರತನವನ್ನು ಉಡುಪಿಯವರು ಸೋಲಿಸುತ್ತಿದ್ದರೆಂದೇ ಅರ್ಥವಲ್ಲವಾ!. ಆದರೆ, ಪ್ರಜಾ ಸೋಷಿಯಲಿಸ್ಟ್ ಪಕ್ಷ (ಪಿ.ಎಸ್.ಪಿ.)ದವರು ಉಡುಪಿಯ ಕಾಪು ಮತ್ತು ಬ್ರಹ್ಮಾವರ ಶಾಸನ ಸಭಾ ಕ್ಷೇತ್ರಗಳಲ್ಲಿ ಎರಡು ಮೂರು ಸಾರಿ ಜಯ ಪಡೆದಿದ್ದರು; ಮಲೆನಾಡಿನಂತೆ ಪಿ.ಎಸ್.ಪಿ.ಯು  ಉಡುಪಿಯಲ್ಲಿ ಜಾತಿ ಅಸಮಾನತೆ ಹಾಗೂ ಭೂ ಹಂಚಿಕೆಗಾಗಿ ಹೋರಾಡಿದ್ದು ನಗಣ್ಯ! ಪಿ.ಎಸ್.ಪಿ.ಯ ನಾಯಕರಾಗಿದ್ದ ಎಸ್.ವಿ.ಆಚಾರ್ಯ ಅವರಿಗೆ ಮಠಗಳ ಜೊತೆ ತುಂಬ ಒಳ್ಳೆಯ ನಂಟು ಇತ್ತು!

ಆರ್.ಎಸ್.ಎಸ್. ಉಡುಪಿಯಲ್ಲಿ ಬಹಳ ಚುರುಕಾಗಿಯೇ ಇತ್ತು; ಆದರೆ, ಅವರು ಶಾಖೆಗಳ ಸಂಘಟನೆ ಕಾರ್ಯಾಚರಣೆಯಲ್ಲಿ ತೊಡಗಿದ್ದರೆ ಹೊರತು, ಬಹಿರಂಗ ಸಭೆಗಳನ್ನು ಮಾಡಿದ್ದು ನಾನು ಹೆಚ್ಚು ಕಾಣೆ. ಆರ್.ಎಸ್.ಎಸ್.ನ ಉಡುಪಿ ಪ್ರಮುಖರಾಗಿದ್ದವರು ಶಂಭುಶೆಟ್ಟಿಯವರು. ಶಾಲೆಯಲ್ಲಿ ಅವರು ನನಗೆ ಮೇಷ್ಟ್ರಾಗಿದ್ದರು-ಒಳ್ಳೆಯ ಮೇಷ್ಟ್ರಾಗಿದ್ದರು ಮಾತ್ರವಲ್ಲ, ಶಿಷ್ಯಾಭಿಮಾನಿಯೂ ಆಗಿದ್ದರು. ನಾನು ಎಡ ಸಂಘಟನೆಗಳಲ್ಲಿ ತೊಡಗಿದ ನಂತರವೂ, ಅವರ ಆಫೀಸಿಗೆ ಹೋಗಿ ಮಾತನಾಡಿಸುತ್ತಿದೆ. ಅವರು ಯಾವತ್ತೂ ನನ್ನ ಜೊತೆ ರಾಜಕೀಯ ಚರ್ಚಿಸುತ್ತಿರಲಿಲ್ಲ.

ಉಡುಪಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಲಿತರು ಇದ್ದಾರೆ. ದಾಸು ಪೂಜಾರಿಯವರು ಪೌರ ಕಾರ್ಮಿಕರಾದ ದಲಿತರನ್ನು ಸಂಘಟಿಸುತ್ತಿದ್ದರು. ಆದರೆ, ದಲಿತ ಸಂಘರ್ಷ ಸಮಿತಿಯು ಇಲ್ಲಿ ಸಂಘಟಿತವಾಗುವವರೆಗೂ, ಊರಲ್ಲಿ ಅಂಬೇಡ್ಕರರ ಬದುಕು-ವಿಚಾರಗಳ ಬಗ್ಗೆ ಯಾರೂ ಸಾರ್ವಜನಿಕವಾಗಿ ಮಾತನಾಡಿದ್ದನ್ನು ಕೇಳಿದ ನೆನಪು ನನಗಿಲ್ಲ. ಮೇಲ್ಜಾತಿಯವರಿಂದ ಅಂಬೇಡ್ಕರರ ನಿಂದನೆಯನ್ನು ಮಾತ್ರ ಸಾಕಷ್ಟು ಕೇಳಿದ ನೆನಪಿದೆ.

ಉಡುಪಿಯಲ್ಲಿ 1990ರ ವರೆಗೂ ಚುನಾವಣೆಗಳಲ್ಲಿ ಕಾಂಗ್ರಸ್ ಗೆಲ್ಲುತ್ತಾ ಬಂದಿದೆ. ಆದರೆ ಅವರು ಗಾಂಧಿ ಅಥವಾ ನೆಹರು ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಯಾವ ಮಹತ್ವದ ಕೆಲಸಗಳನ್ನೂ ಮಾಡಿದ್ದನ್ನು ಕಂಡಿಲ್ಲ. ಉಡುಪಿಯ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ಜನಗಳಿಗೆ ಗಾಂಧಿ-ನೆಹರು ಇಬ್ಬರೂ ಅಪಥ್ಯವಾಗಿದ್ದರು.

ಗಾಂಧೀಜಿ ಹತ್ಯೆಯಾದಾಗ ’ಪೀಡೆ ತೊಲಗಿತು’ ಎಂದು ಆಡಿಕೊಂಡವರೆ ಜಾಸ್ತಿ. ಗಾಂಧೀಜಿ 1934ರಲ್ಲಿ ಉಡುಪಿಗೆ ಬಂದಾಗ, ದಲಿತರಿಗೆ ಪ್ರವೇಶವಿಲ್ಲವೆಂಬ ಕಾರಣಕ್ಕೆ ಪ್ರತಿಷ್ಠಿತ ಶ್ರೀ ಕೃಷ್ಣ ದೇವಸ್ಥಾನಕ್ಕೆ ಕಾಲಿಡಲು ನಿರಾಕರಿಸಿದರು. ಆದರೆ, ಅದೊಂದು ನೆನಪಾಗಿಯೂ ಉಳಿದಿಲ್ಲ.

ಕೆ.ಫಣಿರಾಜ್: ಇದನ್ನೆಲ್ಲ ಕೇಳುತ್ತಿದ್ದರೆ, ನಮ್ಮಂಥವರು ಎಡಪಂಥಕ್ಕೆ ಒಲಿಯುವ ಚೋದಕ ವಾತಾವರಣವೇನು ಇದ್ದಂತೆ ಕಾಣುವುದಿಲ್ಲ. ನೀವು ಎಡಕ್ಕೆ ಒಲಿಯಲು ಕಾರಣಗಳಾದರೂ ಏನು?

ಜಿ.ರಾಜಶೇಖರ್ : ನಾನು ಎಡಪಂಥಕ್ಕೆ ಒಲಿಯಲು ಮುಖ್ಯ ಕಾರಣ ನನ್ನ ಅಣ್ಣ ಜಿ.ವಾಸುದೇವ. ಆತ LICಯಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಯ ನೌಕರರ ಸಂಘಟನೆ AIIEU ನ ಮುಂದಾಳುವಾಗಿ ಬೆಳೆದ. ಹಾಗೆ ಅವನು ಬೆಳೆಯಲು, ಉಡುಪಿಯ ಮಹಾತ್ಮ ಗಾಂಧಿ ಮೆಮೋರಿಯಲ್ (MGM) ಕಾಲೇಜಿನಲ್ಲಿ ಅವನಿಗೆ ಗುರುಗಳಾಗಿದ್ದ ಯು.ಎಲ್.ಆಚಾರ್ಯರು.

ಅವರು ಕಟು ಸಂಪ್ರದಾಯ ವಿರೋಧಿ ಲಿಬರಲ್ ಆಗಿದ್ದು ’ತಲೆ ಕೆಟ್ಟ ಜನ’ ಎಂದೇ ಖ್ಯಾತರಾಗಿದ್ದರು; ಕನ್ನಡ ಹಾಗೂ ಯುರೋಪಿನ ಸಾಹಿತ್ಯವನ್ನು ಓದಲು ತನ್ನ ವಿದ್ಯಾರ್ಥಿ ವೃಂದವನ್ನು ಪ್ರೇರೇಪಿಸುತ್ತಾ ಯು.ಎಲ್.ಆಚಾರ್ಯರು ಸ್ವತಂತ್ರ ಮನೋಭಾವದ ಯುವ ಪಡೆ ಕಟ್ಟಿಕೊಳ್ಳಲು ಕಾರಣವಾದರು; ನನ್ನ ಅಣ್ಣ ಅಂಥವರಲ್ಲೊಬ್ಬ.

ಜೊತೆಗೆ MGM ಕಾಲೇಜಿನಲ್ಲಿ ಅಷ್ಟೇ ಪ್ರಖರ ಬಂಡಾಯ ಮನೋಭಾವದ ವಿಜ್ಞಾನ ಉಪನ್ಯಾಸಕ ಬಿ.ಎಲ್. ಆಚಾರ್ಯರು ಇದ್ದರು; ಅವರು, ದಿನವೂ, ಉಡುಪಿಯ ಸಮೀಪದ ಬ್ರಹ್ಮಾವರದಿಂದ ದೋಣಿಯಲ್ಲಿ ಎರಡು ಹೊಳೆಗಳನ್ನು ದಾಟಿ ಬರುತ್ತಿದ್ದರು; ದೋಣಿಯಲ್ಲಿ ದೊಡ್ಡ ಕೊಡೆ ಬಿಚ್ಚಿ ಹಿಡಿದುಕೊಂಡು ನಿಂತುಕೊಂಡೇ ಬರುತ್ತಿದ್ದ ಅವರ ಘನ ವೈಖರಿಯು ನಮ್ಮೆಲ್ಲರ ಬುದ್ಧಿಯಲ್ಲಿ ಅಚ್ಚು ಒತ್ತಿಕೊಂಡು ನಮಗೆ ಭಿನ್ನಮತೀಯ ಮೂರ್ತಿಯಾಗಿದ್ದರು.

ನನ್ನ ಅಣ್ಣ ಇವರಿಂದ ಪ್ರಭಾವಿಯಾಗಿ, ಸ್ವತಂತ್ರ ಭಿನ್ನಮತೀಯನಾಗಿ ಬೆಳೆದ; ಅವನ ಸಾಹಿತ್ಯದ ಓದು ಹಾಗೂ ಭಿನ್ನ ಮನೋಭಾವವು ನನ್ನನ್ನೂ ಸಾಹಿತ್ಯದ ಓದಿಗೆ, ಭಿನ್ನ ವಿಚಾರಗಳಿಗೆ ತೆರೆಯಿತು. ಅದಲ್ಲದೆ, ನಾನು MGM ಸೇರಿದಾಗ, ಉಡುಪಿಯ ಸ್ವತಂತ್ರ ಆಧುನಿಕ ಪ್ರವೃತ್ತಿಯ ಸಾಂಸ್ಕೃತಿಕ ಸಂಘಟಕ, ಬರಹಗಾರ ಕು.ಶಿ.ಹರಿದಾಸ್ ಭಟ್ಟರು ನನಗೆ ಗುರುವಾಗಿ ದೊರಕಿದರು. ಅವರು MGM ಕಾಲೇಜಿನಲ್ಲಿ ಒಂದು ಅದ್ಭುತ ಪುಸ್ತಕ ಭಂಡಾರ ಸ್ಥಾಪಿಸಿ, ವಿಶ್ವದ ಉತ್ತಮ ಕೃತಿ ಪ್ರಪಂಚವನ್ನು ನಮಗೆ ತೆರೆದರು.

ದೇಶ ವಿದೇಶಗಳ ವಿದ್ವಾಂಸರನ್ನು ಕರೆಸಿ ಕಾರ್ಯಕ್ರಮ ಸಂಘಟಿಸುತ್ತಿದ್ದರು. ಹರಿದಾಸ ಭಟ್ಟರು ಮೂಲ ಇಟಾಲಿಯನ್ ಭಾಷೆಯಿಂದ ಇನ್ಯಾತ್ಸಿಯೋ ಸಿಲೋನೆಯ ಖ್ಯಾತ ಫ್ಯಾಸಿಸ್ಟ್ ವಿರೋಧಿ ಉಜ್ವಲ ಕೃತಿ ’ಫಾಂತೊಮಾರ’ವನ್ನೂ, ಆರ್ಥರ್ ಕ್ಯಾಸ್ಲರನ ಸ್ಟಾಲಿನ್ ಸರ್ವಾಧಿಕಾರ ವಿರೋಧಿಸುವ ಕೃತಿ ’ನಡು ಹಗಲ ಕತ್ತಲೆ’ಯನ್ನೂ ಕನ್ನಡಕ್ಕೆ ತಂದು ನಮಗೆ ಹೊಸ ಲೋಕ ಕಾಣಿಸಿದವರು.

ಇಂಥ ಸ್ವತಂತ್ರ ಮನೋಭಾವದ, ಮಠಮಾನ್ಯಗಳಿಂದ ದೂರವಿರುತ್ತಿದ್ದ ವ್ಯಕ್ತಿಗಳು ಪ್ರಕಾಶ್ ಶೆಟ್ಟಿ ಎಂಬುವವರು ಸ್ಥಾಪಿಸಿದ ಪ್ರಕಾಶನ ಸಂಸ್ಥೆ ’ನವಯುಗ’ದ ಕಛೇರಿಯನ್ನು ಕೇಂದ್ರ ಮಾಡಿಕೊಂಡಿದ್ದರು. ಪುಸ್ತಕದ ಮಳಿಗೆಯೂ ಇದ್ದ ’ನವಯುಗ’ ಕಟ್ಟಡವು (ಹತ್ತು ವರ್ಷಗಳ ಹಿಂದೆ) ಮುಚ್ಚುವವರೆಗೂ, ಉಡುಪಿಯ ಸ್ವತಂತ್ರ ಪ್ರಗತಿಶೀಲ ಮನೋಭಾವದವರ ಪ್ರತಿಮೆಯಾಗಿತ್ತು.

ಈ ಪ್ರಭಾವದಲ್ಲೇ ಅನೇಕ ಲಿಬರಲ್ ವಿದ್ಯಾವಂತ ಯುವಕರು ತಮ್ಮ ವ್ಯಕ್ತಿತ್ವ ಕಟ್ಟಿಕೊಂಡದ್ದು, ಉಪಾಧ್ಯಾಯರುಗಳಾಗಿ ತಮ್ಮ ಶಿಷ್ಯ ಬಳಗವನ್ನು ಕಟ್ಟಿದ್ದೂ ಬಹುಶಃ ಉಡುಪಿಯಲ್ಲಿ ಒಂದು ನಮೂನೆಯ ಎಡಪಂಥೀಯ ಅಲೋಚನೆಗಳನ್ನು ಪೋಷಿಸಿತು ಎನ್ನಬಹುದು. ಅದು ಈಗ ಗತದ ಸಂಗತಿಯ ಹಾಗೆ ಕಾಣುತ್ತಿದೆ.

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

3 ಪ್ರತಿಕ್ರಿಯೆಗಳು

  1. Shyamala Madhav

    ‘.ಉಡುಪಿಯ ಉಳ್ಳವರು ದೊಡ್ಡಸ್ತಿಕೆ ಯು ಜಾತಿಪೀಡಿತ ಶಟಸಮಾಜ’ ದ ಸರಿಯಾದ ಚಿತ್ರಣವನ್ನೇ ನೀಡಿದ್ದೀರಿ. ಅಯೋಧ್ಯೆಯಲ್ಲಿ ವಿವಾದಿತ ಸ್ಥಳದಲ್ಲಿ ಮಂದಿರ ಶಂಕುಸ್ಥಾಪನೆ ಇದ್ದುದನ್ನು ನಾವು ಫೇಸ್ ಬುಕ್ಕಿನಲ್ಲಿ ಪ್ರತಿಭಟಿಸುತ್ತಲೇ ಬಂದಿದ್ದೇವೆ.

    ಪ್ರತಿಕ್ರಿಯೆ
  2. T S SHRAVANA KUMARI

    ಉತ್ತಮ ವಿಚಾರ ಪ್ರಚೋದಕ ಸಂದರ್ಶನ

    ಪ್ರತಿಕ್ರಿಯೆ
  3. ಬಿ.ಸುರೇಶ

    ಆಹಾ! ಅದ್ಭುತ!
    ನನ್ನ ಪಾಲಿನ ಇಬ್ಬರು ಮೇಷ್ಟುಗಳ ಮಾತು ಇಲ್ಲಿ ಸಿಗುತ್ತಿರುವುದು ನನಗಂತೂ ಮಹಾ ಸಂತೋಷದ ವಿಷಯ.
    ಹೀಗೆ ಯಾವುದನ್ನಾದರೂ ರೋಮ್ಯಾಂಟಿಸೈಸ್ ಮಾಡುವುದನ್ನು ಈ ನನ್ನ ಇಬ್ಬರು ಮೇಷ್ಟರುಗಳೂ ವಿರೋಧಿಸುತ್ತಾರೆ. ಆದರೂ ನನಗೆ ಇದು ಮತ್ತೊಂದು ಕಲಿಕೆಯ ಅವಕಾಶ ಎಂಬ ಆನಂದ ಎನ್ನಲೇಬೇಕು.
    “ಪರಂಪರೆ ಎಂದರೆ ಮತಶ್ರದ್ಧೆ, ಮತಾಚರಣೆಗಳು ಮಾತ್ರವಲ್ಲ ಅವುಗಳ ಜೊತೆಗಿನ ಜಗಳವೂ ಹೌದು” – ಎಂಬ ಜಿ.ರಾಜಶೇಖರ ಅವರ ಮಾತು ನಿಜಕ್ಕೂ ಕಣ್ಣು ತೆರೆಸುವಂತಹದು.
    “ಸಾಹಿತ್ಯವು ಜಗತ್ತನ್ನು ಬದಲಾಯಿಸುತ್ತದೆ ಎನ್ನುವುದು ಭ್ರಮೆ; ಸಾಹಿತ್ಯವು ಸಾಹಿತಿಯನ್ನು ಮಾತ್ರವೇ ಬದಲಾಯಿಸುತ್ತದೆ!” ಮೊಹಮ್ಮದ್ ದರ್ವೀಷ್ ಅವರ ಮಾತಿನ ಮುಂದರಿಕೆಯಾಗಿ ಹೇಳಿದ “ಆದರೆ, ಸಾಹಿತಿಗೆ ಲೋಕದ ಜೊತೆ ನೆಂಟಸ್ತಿಕೆ ಹಚ್ಚಿಕೊಳ್ಳಲು ಇಂಥ ಭ್ರಮೆ ಅನಿವಾರ್ಯ’ ಎಂಬ ಮಾತು ಸಹ ನೆನಪಿನ ಖಜಾನೆಯಲ್ಲಿ ಇರಲೇಬೇಕಾದ್ದು.
    ಈ ಮಾತುಕತೆಯ ಮುಂದಿನ ಭಾಗಕ್ಕೆ ಕಾಯುವೆ.
    – ಬಿ.ಸುರೇಶ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: