Waiting for Godot – ಹೀಗೊಂದು ಅಸಂಗತ ನಾಟಕ…


ಸದಾಶಿವ ಫಡ್ನೀಸ್

ಇಸ್ವಿ ೧೯೫೭. ನವೆಂಬರ್ ತಿಂಗಳು. ಸ್ಯಾನ್ ಕ್ವೆಂಟ್ಇನ್ ಕಾರಾಗ್ರಹದಲ್ಲಿನ ಅಂದಿನ ಕೈದಿಗಳಿಗೆ ಆಧುನಿಕ ನಾಟಕ ಜಗತ್ತಿನ ಅಭಿಮಾನಿಗಳು ಋಣಿಯಾಗಿರಬೇಕಾದ್ದು ಬಹಳ ಆವಶ್ಯಕ ಎನಿಸುತ್ತದೆ. ನಡೆದದ್ದು ಸಾಮಾನ್ಯ ಘಟನೆಯೇ ಆದರೂ ಅಸಾಮಾನ್ಯ ಇರಲಿಕ್ಕೂ ಇರಬಹುದು ಎಂದು ಹಲವರ ಅನಿಸಿಕೆ.
ಸ್ಯಾನ್ ಫ್ರಾನ್ಸಿಸ್ಕೋ ದ ನಾಟಕ ತಂಡವೊಂದು ಅಂದು ಸಂಜೆ ಸೆರೆಮನೆಯ ಕೈದಿಗಳಿಗೆ ನಾಟಕ ಪ್ರದರ್ಶನಕ್ಕೆಂದು ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಪರಿಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಇಡೀ ತಂಡವೇ ಆತಂಕಗೊಂಡಿತ್ತು. ಪ್ರೇಕ್ಷಕ ವರ್ಗ ಅಸಾಮಾನ್ಯವಾಗಿತ್ತು.
ನುಸುಗತ್ತಲೆಯ ಮುಸುಕು ಆವರಿಸುತ್ತಿತ್ತು. ಸಂಜೆಯ ಹವೆ ಹಿತವಾಗಿತ್ತು. ಕೈದಿಗಳು ತಮ್ಮ ಮನರಂಜನೆಗಾಗಿ ಕಾಯುತ್ತಿದ್ದರು. ನಾಟಕದ ನಿರ್ದೇಶಕರು ರಂಗದ ಮೇಲೆ ಬಂದು ನಾಟಕದ ಸಿದ್ಧತೆಯ ಬಗ್ಗೆ ಮಾತನಾಡತೊಡಗಿದರು. ನುಸುಗತ್ತಲಲ್ಲಿ ನೂರಾರು ಉರಿಯುವ ಸಿಗರೇಟಿನ ತುದಿಗಳು ಅಲುಗಾಡುತಿದ್ದದ್ದು ಕಾಣುತಿತ್ತು. ಕೈದಿಗಳ ಸಹನೆಯ ಪರೀಕ್ಷೆ ಆಗುತ್ತಿತ್ತು. ಮಾತು ಮುಗಿಸಿ ಸ್ವಲ್ಪ ಸಮಯದ ನಂತರ ನಿರ್ದೇಶಕರು ಹಿಂದೆ ಸರಿದರು. ಅಂಕಪರದೆ ಮೇಲೆದ್ದಿತು. ಮಾತುಗಳಿಗೆ ವಿರಾಮ ಬಿತ್ತು.
ರಂಗಮಂಚ ಬಹುಮಟ್ಟಿಗೆ ಖಾಲಿ. ಮೂಲೆಯಲ್ಲೊಂದು ಒಣಗಿದ ಮರ ಮತ್ತು ಹರಕು ಬಟ್ಟೆ ತೊಟ್ಟ ನಿರ್ಗತಿಕರಂತೆ ಕಾಣುವ ಎರಡು ಪಾತ್ರಗಳು. ಪಾತ್ರಗಳು ‘ಅ’ ಮತ್ತು ‘ಕ’ ಇರಬಹುದು. ರಂಗದ ತುಂಬೆಲ್ಲ ನೀರಸ ಬೆಳಕು. ‘ಅ’ ಪಾತ್ರ ಒಂದು ಕಾಲಿನ ಬೂಟು ತೆಗೆಯುವ ವ್ಯರ್ಥ ಪ್ರಯತ್ನ ಮಾಡಿ ಕೊನೆಗೆ ಬೇಸತ್ತು ಬಿಟ್ಟು ಬಿಟ್ಟಂತೆ ಕಾಣಿಸಿತು.

ಎಂದಿನಂತೆ ಸಿನಿಮಾ ಸಂಗೀತ, ಸಾಮಾನ್ಯ ಹಾಸ್ಯ, ಬ್ಯಾಂಡು, ಥಳಕು ಬೆಳಕು ಇವಾವವೂ ಕಾಣದೇ ಕೈದಿಗಳು ನಿರಾಶೆಗೊಂಡರು. ರಂಗಮಂದಿರದಿಂದ ಹೊರಗೆ ಹೋಗುವ ಬಾಗಿಲಿನತ್ತ ಸರಿಯತೊಡಗಿದ್ರು.
ರಂಗದ ಮೇಲಿನಿಂದ ಮಾತು ಪ್ರಾರಂಭವಾಯಿತು.
ಅ: ಮಾಡ್ಲಿಕ್ಕೆ ಏನೂ ಇಲ್ಲಾ…. ಬ್ಯಾಸರಾಗಿ ಈ ಬೂಟ ಕಿತ್ತಿ ಒಗಿಬೇಕು ಅಂದರss . ಅವನೌನ … ಬರssವೊಲ್ಲದು. ಸಾಕಾಗಿ ಬಿಟ್ಟದ.
ಕ: ಅದಕ ನಾ ಹೇಳಕೊಂತ ಇರತೆನಿ. ಕಾಯಕವೇ ಕೈಲಾಸ. ಹೋರಾಟ ಮಾಡ್ಕೊತನss ಇರಬೇಕು. ನಿರಾಶ ಆಗಬಾರದು. ಆಸೆಯೇ ಸುಖಕ್ಕೆ ಮೂಲ. ( ‘ಅ’ ನಡೆಗೆ ನೋಡುತ್ತಾ ) ಇಲ್ಲಿ ಇದ್ದೀಯ?
ಅ: ನಾ ಅದೀನ್ಯಾss?
ಕ: ನೀ ಹೋಗೇಬಿಟ್ಟಿ ಅಂತ ಮಾಡಿದ್ನಿ.
ಅ: ನಾನೂ ಹಂಗss ಮಾಡಿದ್ನಿ.
ಕ: ಮತ್ತ ಭೆಟ್ಟಿ ಆದದ್ದು ಭಾಳ ಆನಂದ ಆತು ನೋಡು. ಬಾರಪಾss ಬಾ…. ಒಬ್ಬರ ಹೆಗಲಾಗ ಒಬ್ಬರು ಕೈ ಹಾಕೂಣು. ಜೀವದ ಗೆಳೆತನಾ ಮಾಡೂಣು. ಬಾss..
ಅ: ಏ, ಹೋಗಲೇ ಹೋಗು. ಬಂದಪಾss…. ಸುದಾಮನ ಮೊಮ್ಮಗಾ.
ಕ: (ಅಣಕಿನಿಂದ) : ನಿನ್ನೆ ರಾತ್ರಿ ಶ್ರೀಮಂತ ಬಾಜಿರಾವ್ ರ ಸವಾರಿ ಎಲ್ಲಿ ಹೋಗಿತ್ತು?
ಅ: ಇಲ್ಲೇ ಇದೇ ತೆಗ್ಗಿನ್ಯಾಗ ಬಿದ್ದಿದ್ದೆ … ಒದಿಸಿಕೊಂಡು .
ಕ: ಮತ್ತ ಅದ ಮಂದಿ ಕಡೀ ?
ಅ: ಅವರೇ ಇದ್ದರೋ ಬ್ಯಾರೆ ಇದ್ದರೋ? ಯಾರ ಒದ್ದರ ಏನು, ಒದಿಕೀ ಅದss.
(ಮತ್ತೆ ಬೂಟು ತೆಗೆಯುವ ಪ್ರಯತ್ನ ) ಈ ಸುಡುಗಾಡು ಬೂಟು… ಇದರಕಿಂತಾ ಜರಕಿ ಚಪ್ಪಲ ಇದ್ದಿದ್ದರ……
ಕ: ಬಾಜಿರಾವ್, ಕಾಲಿನ ತಪ್ಪು ಬೂಟಿನ ಮ್ಯಾಲೆ ಹಾಕ್ತಿ?
ಮಾತಿನ ಚಕಮಕಿ ಕೈದಿಗಳಲ್ಲಿ ಸ್ವಲ್ಪ ಕುತೂಹಲ ಹುಟ್ಟಿಸಿದಂತೆ ಇತ್ತು. ಇನ್ನೂ ಐದು ನಿಮಿಷ ಏನಾಗುವದು ನೋಡಿ ಹೋಗೋಣ ಎಂದು ಬಹಳಷ್ಟು ಜನ ನಿಂತರು ಬಹುಶಃ. ರಂಗಮಂಚದ ಮೇಲೆ ‘ಅ’ ಮತ್ತು ‘ಕ’ ನಾಟಕವನ್ನ ತ್ವರಿತ ಗತಿಯಲ್ಲಿ ಅನಾವರಣಗೊಳಿಸಲು ತೊಡಗಿದರು. ಅವರ ಮಾತುಗಳಿಂದ ಯಾರಿಗೋ ಅಥವಾ ಯಾವುದಕ್ಕೋ ಕಾಯುತ್ತಿರುವ ಹಾಗೆ ಇತ್ತು. ‘ಅ’ ನಿಗೆ ಹಾಗೆಂದು ಅನಿಸಿತ್ತು. ‘ಕ’ ನಿಗೆ ಅದು ‘Godot’ ಎಂಬ ವ್ಯಕ್ತಿ ಇರಬಹುದೆಂಬ ಅನುಮಾನ. ಇದೇ ಜಾಗದಲ್ಲಿ ಕಾಯಬೇಕಿತ್ತೇ? ಯಾವದೂ ನಿಶ್ಚಿತವಿದ್ದಂತೆ ಇರಲಿಲ್ಲ.
ಅ: ನಡೀ ಹೋಗೂಣು
ಕ: ಹೋಗಲಿಕ್ಕೆ ಬರೂಹಂಗ ಇಲ್ಲಾ.
ಅ: ಯಾಕ?
ಕ: Godot ಬರ್ತಾನ. ಈ ಸ್ವಾತಂತ್ರ್ಯದಿಂದ ಬಿಡುಗಡೆ ಮಾಡ್ತಾನ.
ಅ: ನಾ ನಿದ್ದಿ ಮಾಡ್ತೀನಿ. ಕನಸಿನ್ಯಾಗ ಬಂದ್ರ ನಿನ್ನೂ ಕರೀತೀನಿ.
ಕ: (ಸಿಟ್ಟಿನಿಂದ) ಚಾಷ್ಟಿ ಮಾಡಬ್ಯಾಡ.
ಅ: ನೀ Godot ಗ ಏನಾದ್ರೂ ಬೇಡಿಕೊಂಡಿ?
ಕ: ಇಂಥಾದss ಅಂತ ಏನೂ ಇಲ್ಲಾ…..
ಅ: ಮಂತ್ರಾಕ್ಷತಿ ..?
ಕ: ಬರೋಬ್ಬರಿ ಹೇಳಿದಿ
ಅ: ಕೊಡ್ತೀನಿ ಅಂದಾ?
ಕ: ನೋಡೋಣ ಅಂತ ಅಂದ.
ಅ: ವಿಚಾರ ಮಾಡಿ ಹೇಳ್ತೀನಂದಾ?
ಕ: ಈಗss ಏನೂ ಹೇಳಲಿಕ್ಕೆ ಬರೂದಿಲ್ಲಂತ ಅಂದ.
ಅ: ಮನ್ಯಾಗ ಕೇಳಿ ಹೇಳ್ತೀನಂದಾ?
ಕ: ಮಠದಾಗ ಕೇಳಿ ಹೇಳ್ತೀನಿ ಅಂದ.
ಅ: ರೀತ್ಸರ ಎಲ್ಲಾ ಮಾಡಬೇಕಾಗ್ತದ ಅಂದಾ?
ಕ: ಬ್ಯಾಂಕ ಬ್ಯಾಲನ್ಸ್ ನೂ ನೋಡಬೇಕಾಗ್ತದ ಅಂದ.
ಅ: ಬರೋಬರಿ ಅದ ಅವಂದು.

ಕೈದಿಗಳಿಗೆ ಹಗುರಾಗಿ ಎಲ್ಲೋ ಅನಿಸಿತು. ‘ಅ’ ಮತ್ತು ‘ಕ’ ನಂತೆ ತಾವೂ ಯಾವುದಕ್ಕೋ ಕಾಯುತ್ತಿದ್ದೆವೆಂದು. ದಿನವೂ ಕಾಯುವಿಕೆಯ ಅಸಹನೀಯತೆಯನ್ನು ಅನುಭವಿಸುತ್ತಿದ್ದೇವೆಂದು. ಇನ್ನೂರು ಪೌಂಡಿನ ದೇಹಗಳು ನಿಧಾನವಾಗಿ ಮತ್ತೆ ರಂಗಮಂದಿರದ ಒಳಗೆ ಸರಿದವು. ಅವರಿಗೆ ನಾಟಕದ ತುಂಡು ತುಂಡಾದ ಒರಟಾದ ಸಂಭಾಷಣೆಯ ಬಗ್ಗೆ ಕುತೂಹಲ ಹುಟ್ಟಿತ್ತು. ಕಾಣದ Godot ನ ಬಗ್ಗೆ ಕುತೂಹಲ ಹುಟ್ಟಿತ್ತು.
ರಂಗದ ಮೇಲೆ ಇನ್ನೆರಡು ಪಾತ್ರಗಳು ಪ್ರವೇಶಿಸಿದ್ದವು. ಒಬ್ಬ ಗೌಡ ಮತ್ತು ಇನ್ನೊಬ್ಬ ಅವನ ಆಳು. ಆಳು ಹೆಗಲ ಮ್ಯಾಲೆ ಒಂದು ಖುರ್ಚಿ ಮತ್ತು ಕೈಯಲ್ಲಿ ಒಂದು ಛತ್ರಿ ಹಿಡಿದುಕೊಂದಿದ್ದಾನೆ. ಗೌಡನನ್ನ ಹಿಂಬಾಲಿಸುತ್ತಿದ್ದಾನೆ. ‘ಅ’ ಮತ್ತು ‘ಕ’ ಹೆದರಿ ರಂಗದ ಮೂಲೆ ಸೇರಿದ್ದಾರೆ.
ಅ: (ಹೆದರುತ್ತ ದೊಡ್ಡ ದನಿಯಲ್ಲಿ) ಯಾರಂವಾ? Godot ಏನು?
ಕ: (ಪಿಸುದನಿಯಲ್ಲಿ) ಹೌದು. ಹೌದು.
ಗೌಡ: (ಗಡಸು ದನಿಯಲ್ಲಿ) ನಾ ಗೌಡ, ನಿಮ್ಮ ಮುಂದ ಹಾಜರ್ ಆಗೀನಿ.
ಕ: ಅಲ್ಲ.. ಅಲ್ಲ…
ಅ: Godot ಅಂಧಂಗ ಇತ್ತಲ್ಲ. (ಗೌಡನನ್ನ ಉದ್ದೇಶಿಸಿ) Godot ಅಂದ್ರ ನೀವ ಏನು?
ಗೌಡ: (ಗಡಸು ದನಿಯಲ್ಲಿ) ನಾ ಗೌಡ … (ಎಲ್ಲರೂ ಸ್ತಬ್ಧರಾಗುತ್ತಾರೆ) ಗೌಡ…. (ಮತ್ತೆ ಮೌನ). ಗೌಡ ಅನ್ನೋ ಹೆಸರು ಕೇಳಿದರ ನಿಮಗ ಏನೂ ಅನಿಸೂದೇ ಇಲ್ಲೇನು?
ಕ: (ನೆನಪಿಸಿಕೊಳ್ಳುತ್ತಾ) ಗೋ.. ಗೋಡ… ಗಾವುಡ… ಯಾಕೋ ಏನೂ ಅನಿಸವೊಲ್ಲದು. ಯಾಕ….
ಅ: ನಾವು ಈಕಡೀಯವ್ರು ಅಲ್ಲರಿ.
ಗೌಡ: (ಕಣ್ಣು ಕಿರಿದು ಮಾಡಿ ನೋಡುತ್ತಾ): ನೋಡಿದ್ರ ನಿಮ್ಮದು ಮನುಷ್ಯ ಜಾತಿ ಇದ್ದಾಂಗss ಅದ. ಅಗದೀ ನನ್ನ ಹಾಂಗ. ಹುಬೇ ಹೂಬ್ ನನ್ನ ಹಾಂಗ.
ಕ: ಇದರಾಗ ನಮ್ಮದೇನೂ ತಪ್ಪಿಲ್ಲರಿ ….
ಗೌಡ: Godot ಅಂದ್ರ ಯಾರು?
ಕ: ಗೊತ್ತಿಲ್ಲರಿ.
ಗೌಡ: ಮತ್ತ ಅವನ ಹಾದಿ ನೋಡ್ಕೂತ್ ನಿಂತಿದ್ರಿ? ಹಾದಿ ಕಾಯ್ಕೊತ್ …. ನಿಂತಿದ್ರಿ?
ಅ: ಅದು.. ಅದು..ಹೀಂಗ ಕನಸಿನ್ಯಾಗಿನ ಗುರ್ತೂ….
ಗೌಡ: (ಗದರಿಸುತ್ತಾ) ಇಲ್ಲೇ, ನನ್ನ ಜಮೀನಿನ ಮ್ಯಾಲೆ ಕಾಯ್ಲಿಕ್ಕೆ ಹತ್ತಿದ್ದಿರಿ ?
ಅ: ಅದು .. ಸುಮ್ಮನ …
ಕ: ನಾವು ಕೆಟ್ಟ ಮಾಡಬೇಕಂತ ನಿಂತದ್ದಲ್ಲ…. ಸುಮ್ಮನ…..
ಗೌಡ: (ತಣ್ಣಗೆ) ರಸ್ತೆ ಸಮಸ್ತ ಜನತೆಗೆ ಸೇರಿದ್ದು. ನಿಮ್ಮ ತಪ್ಪೇನೂ ಇಲ್ಲ ಇದರಾಗ.
ಕ: ನಾವೂ ಹಂಗss ವಿಚಾರ ಮಾಡಿದ್ವಿ.
ಗೌಡ: ಯಾರೂ ಏನೂ ಮಾಡುವ ಹಾಂಗಿಲ್ಲ. ನಾ ಅಂದದ್ದೆಲ್ಲಾ ಮರತುಬಿಡ್ರಿ… ಹಂ. ನಾ ಏನು ಅಂದಿದ್ದೆ?….. ಸಜ್ಜನರೆ ನಿಮ್ಮ ಭೆಟ್ಟಿಯಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಅನಬೇಕು. (ಆಳಿನ ಕಡೆ ತಿರುಗಿ)… ಖುರ್ಚಿ ಇಡಲೇ ಬೋಳಿಮಗನ….(‘ಅ’ ಮತ್ತು ‘ಕ’ ಕಡೆಗೆ ತಿರುಗಿ) ನಿಮ್ಮ ಜೋಡಿ ಒಂದು ಗಳಿಗಿ ಸಹವಾಸ ಮಾಡಬೇಕಂತ ಅಪ್ಪಣಿ ಆಗೇದ ಥೇಟ ಶಿವನ ಕಡಿಂದ. ನಿಮ್ಮ ಅಭ್ಯಂತರ ಇಲ್ಲಾಂದರ…..ಬದುಕಿನ ಹಾದಿ ಭಾಳ ದೂರ ಅದ. ಅದಕ….ಆಗಾಗ ರೆಸ್ಟ್ …(ಆಳಿನ ಕಡೆಗೆ ತಿರುಗಿ) ಛತ್ರಿ ಹಿಡೀಲೆ…ಸೂ…(‘ಅ’ ಮತ್ತು ‘ಕ’ ಕಡೆಗೆ ತಿರುಗಿ) ಬ್ಯಾಸಿಗಿ ರಣಾ ರಣಾ ಬಿಸಿಲು ಎಷ್ಟು ತಂಪು ಅನಿಸಲಿಕ್ಕ ಹತ್ತೆದ ಅಲ್ಲಾ? ಎಲ್ಲಾ ನನ್ನಂಥ ಸಜ್ಜನರ ಪುಣ್ಯಾದ ಲೇ. ಜಗತ್ತಿನ್ಯಾಗ ಮಳೀ ಬೆಳೀ ಆಗ್ತಾವ ತಮ್ಮ ಪ್ರಕಾರ…. ಅದಕs ನಿಮ್ಮ ಪರವಾನಿಗಿ ಇದ್ದರ ನಿಮ್ಮ ಜೋಡಿ ಒಂದು ಗಳಿಗಿ ಇದ್ದು …. ಒಂದು ಚುಟ್ಟಾ ಸೇದಿ…..(ಆಳನ್ನು ಜೋರಾಗಿ ನೂಕುತ್ತ) ದೂರ.. ದೂರ… ಹೋಗ ಆಕಡೆ. ಹೊಲಸು ನಾರಲಿಖತ್ಯಾನ. ಶರೆ ಕುಡುದಾನ….(ಆಳು ದುಃಖದಿಂದ ಬಿಕ್ಕಳಿಸುತ್ತಾನೆ) ….(‘ಅ’ ಮತ್ತು ‘ಕ’ ನ ಕಡೆಗೆ ನೋಡುತ್ತಾ) .. ನಾ ದಿನಕ್ಕ ಒಂದs ಚುಟ್ಟಾ ಸೇದ್ತಿನಿ ಭಾಳಿಲ್ಲ. ಆ ಹಾ .. ಸ್ವಚ್ಛ ಗಾಳಿ ಚುಟ್ಟಾ ಸೇದಲಿಕ್ಕೆ ಛಲೋ ಇರ್ತದ…. ಏನಂತೀರಿ?….
ಅ: ಒಂದು ಪ್ರಶ್ನ್ಯಾ ?
ಗೌಡ: ಪ್ರಶ್ನ್ಯಾ? ಪ್ರಶ್ನ್ಯಾನ? (ಪ್ರೇಕ್ಷಕರ ಕಡೆಗೆ ನೋಡುತ್ತಾ) ಎಲ್ಲಾರೂ ನನ್ನ ಕಡೆ ನೋಡ್ರಿ…(ಖುರ್ಚಿಯ ಮೇಲೆ ಏರಿ ದೊಡ್ಡ ದನಿಯಲ್ಲಿ) ಎಲ್ಲಾ ನನ್ನ ಕಡೆ ನೋಡ್ಲಿಕ್ಕೆ ತಯಾರಾಗ್ರಿ…. ನಾ ಈಗ ಉತ್ತರಾ ಹೇಳ್ತೀನಿ. ನನಗ ಬರೆ ಖಾಲಿ ಹವಾದಾಗ ಮಾತಾಡ್ಲಿಕ್ಕೆ ಹಿಡಿಸುದಿಲ್ಲಾ. ನಾ ಉತ್ತರಾ ಹೇಳಲಿಕ್ಕೆ ತಯಾರಾಗಿ ನಿಂತೆನಿ. ಎಲ್ಲಾ ನನ್ನ ಕಡೇ ನೋಡ್ಲಿಖತ್ತೀರಿ?…ಹಾಂ… good. (‘ಅ’ ನ ಕಡೆ ತಿರುಗಿ) ಏನು ನಿನ್ನ ಪ್ರಶ್ನ್ಯಾ?
ಅ: ಅದು ಮತ್ತ ನಿಮ್ಮ ಆಳು…
ಗೌಡ: ಬರೇ ಅಡ್ಡ ಬಾಯಿ ಹಾಕಬ್ಯಾಡಲೇ…ಎಲ್ಲಾರೂ ಒಮ್ಮೆಲೇ ಮಾತಾಡಿದರ ಸಮಸ್ಯಾ ಬಗೆಹರಿಯೂದಾದ್ರೂ ಹ್ಯಾಂಗ? . ಹಂ.. ನಾ ಏನು ಅನ್ಲಿಕ್ಕೆ ಹತ್ತಿದ್ದೆ?
ಅ: ಅಳಲಿಕ್ಕೆ ಹತ್ತ್ಯಾನ….(ಆಳಿನ ಕಡೆಗೆ ಬೆರಳು ತೋರಿಸುತ್ತ) ಆವಾ?
ಗೌಡ: ಅದು ಅವನ ಪೆರ್ಸನಲ್ ವಿಷಯ ಅದ…. ನನಗ ತನ್ನ ಮ್ಯಾಲೆ ಕರುಣಾ ಬರಲಿ ಅಂತ ಅಳಲಿಕ್ಕೆ ಹತ್ತಿರಬಹುದು. ಅಥವಾ ನಾ ಅವನ್ನ ಬಿಟ್ಟ ಬಿಡಬಹುದು ಅಂತ ಅಂಜಿರಬಹುದು…. ಯಾರೂ ಅಂಜಬಾರದು. ಯಾರು ಧರ್ಮ ಬಿಟ್ಟು ಹೋಗುವದಿಲ್ಲವೋ ಅವರನ್ನು ಧರ್ಮ ಬಿಟ್ಟು ಹೋಗಲಾರದು. ನಿಮ್ಮ ಖಿಸೆ ಒಳಗೆ ಇಟಗೊಬಹುದು. ……..ಬದುಕಿನ ಹಾದಿ ಭಾಳ ದೂರ ಅದ. ಇರಲಿ ಗೆಳೆಯರೇ ನಾನು ಈಗ ನಿಮ್ಮಿಂದ ಬೀಳ್ಕೋಡುತ್ತೇನೆ.
ಗೌಡ ಆಳು ಹೊರಟು ಹೋಗುತ್ತಾರೆ. Godot ನಾಳೆ ಬಹುಶಃ ಬರಬಹುದು ಎಂಬ ಸಂದೇಶ ಬರುತ್ತದೆ. ನಾಟಕದ ಮೊದಲ ಭಾಗ ಅಂತ್ಯ.
ಎರಡನೇ ಅಂಕ. ಮತ್ತೆ ‘ಅ’ ಮತ್ತು ‘ಕ’ ಒಣಗಿದ ಮರದ ಬಳಿ ನಿಂತಿದ್ದಾರೆ. ಅದೇ ನೀರಸ ಬೆಳಕು. ಅದೇ ಜಗಳ. ಅದೇ ಅಸಹಾಯಕತೆ. ಅದೇ ಅಸಹನೀಯ ಖಾಲಿತನ. ಮಾತು ಬಹುಮಟ್ಟಿಗೆ ಮೊದಲನೆಯ ಅಂಕದ ಹಾಗೆಯೇ. ‘ಕ’ ಮತ್ತು ‘ಅ’ Godot ನಿಗಾಗಿ ಕಾಯುತ್ತ ಇದ್ದಾರೆ. ಗೌಡ ಮತ್ತು ಆಳು ಬರುತ್ತಾರೆ. ಆದರೆ ಗೌಡ ಆಳಿನ ಪಾತ್ರದಲ್ಲಿ ಮತ್ತು ಆಳು ಗೌಡನ ಪಾತ್ರದಲ್ಲಿ. ತಿರುವು ಮುರುವು. ಅಳು ದರ್ಪದಿಂದ ಮಾತನಾಡುವ. ಗೌಡ ಅಳುವ. ಇಬ್ಬರೂ ಕೊನೆಗೆ ನಿರ್ಗಮಿಸುವರು. ‘ಅ’ ನಾವೂ ಹೊರಡೋಣವೇ? ಎಂದು ‘ಕ’ ನನ್ನು ಕೇಳುವ. ‘ಕ’ ನಿಂದ ಆಗಲಿ ಎಂಬ ಉತ್ತರ. ಆದರೆ ಅವರು ಇಬ್ಬರೂ ಬಹಳ ಹೊತ್ತಿನವರೆಗೆ ನಿಂತಲ್ಲಿಂದ ಕದಲುವುದಿಲ್ಲ. ಅಂಕಪರದೆ ಬೀಳುವದು. ಆದರೆ Godot ಮಾತ್ರ ಬರುವುದೇ ಇಲ್ಲ.
ಕೈದಿಗಳು ಈಗ ನಿಂತ ಜಾಗದಿಂದ ಅಲುಗಾಡಲಿಲ್ಲ. ತಮ್ಮ ದಿನನಿತ್ಯ ಅನುಭವದ ಸಾರ ಈ ನಾಟಕದಲ್ಲಿ ಕಂಡಿತ್ತು. ಗೌಡನ narcisism, ದರ್ಪ, ಗರ್ವ, ‘ಅ’ ಮತ್ತು ‘ಕ’ ರ ಗೊಂದಲ, ಆಳಿನ ಕರುಣಾಜನಕ ಸ್ಥಿತಿ ಎಲ್ಲವೂ ತುಂಬಾ ಸುಲಭವಾಗಿ ಅರ್ಥ ಆಗುವಂತೆ ಇತ್ತು. ಅವರು ಪ್ರತಿನಿತ್ಯ ಕಂಡಿದ್ದ ಅನುಭವವೇ. ಬದುಕಿನ ವಿಪರ್ಯಾಸ, ದ್ವಂದ್ವಗಳನ್ನ ನಾಟಕ ಹಸಿಯಾಗಿ ತೆರೆದು ಇಟ್ಟಂತೆ ಇತ್ತು. Godot ಅಂದರೆ ಹೊರಗಿನ ಜಗತ್ತು ಅಂದ ಒಬ್ಬ ಕೈದಿ. ಅಲ್ಲ ಅದು ಈ ಸೆರೆಮನೆಯ ಗೋಡೆ ಅಂದ ಇನ್ನೊಬ್ಬ. ಕತೆಯ ಅಭಾವ ಅವರಿಗೆ ಗೋಚರಿಸಲೇ ಇಲ್ಲ. ಕತೆಯ ಅವಶ್ಯಕತೆಯೇ ಇರಲಿಲ್ಲ.
ಕೆಲ ಕೈದಿಗಳು ನಾಟಕ ಇನ್ನೊಮ್ಮೆ ನೋಡಬೇಕೆನ್ನತೊಡಗಿದರು. ಯಾರೂ ನಿರೀಕ್ಷಿಸದ ರೀತಿಯಲ್ಲಿ ನಾಟಕ ಯಶಸ್ವಿಯಾಯಿತು. ಪ್ಯಾರಿಸ್ ಲಂಡನ್ ಮುಂತಾದ ಪ್ರಸಿದ್ಧ ನಗರದ ಬುದ್ಧಿಜೀವಿಗಳಿಗೆ ಕಬ್ಬಿಣದ ಕಡಲೆ ಆಗಿದ್ದ ನಾಟಕ ಸ್ಯಾನ್ ಕ್ವೆಂಟ್ಇನ್ ನ ಅತೀ ಸಾಮಾನ್ಯ ಕೈದಿಗಳಿಗೆ ನೇರವಾಗಿ ತಟ್ಟಿತು. ಮರುದಿನ ಈ ವಿಲಕ್ಷಣ ಸುದ್ದಿ ಸ್ಯಾನ್ ಫ್ರಾನ್ಸಿಸ್ಕೋ ಪತ್ರಿಕೆಗಳಲ್ಲಿ ವರದಿಯಾಯಿತು. ಇಡೀ ಸ್ಯಾನ್ ಫ್ರಾನ್ಸಿಸ್ಕೋ ನಗರವೇ ಈ ನಾಟಕ ನೋಡಲು ಉತ್ಸುಕವಾಗಿತ್ತು.
ಅಸಂಗತ ನಾಟಕ ಪರಂಪರೆ ಚಿಗುರಿತು.
ವಿ. ಸೂ. : Waiting for Godot ಎಂಬ ಈ ನಾಟಕ ಬರೆದವ ಪ್ರಸಿದ್ಧ ಐರಿಷ್ ನಾಟಕಕಾರ ಬೆಕೆಟ್. ಮೂಲ ನಾಟಕದಲ್ಲಿನ ಸಂಭಾಷಣೆಯನ್ನ ಭಾವಾನುವಾದ ಮಾಡಿದ್ದೇನೆ. Literal translation ಅಲ್ಲ. ನಾಟಕವನ್ನ ಬಲ್ಲವರು ಮತ್ತು ಓದಿದವರು ಸಂಭಾಷಣೆಯಲ್ಲಿ ಚಿಕ್ಕ ಪುಟ್ಟ ವ್ಯಾತ್ಯಾಸಗಳನ್ನ ಮಾಡಿಕೊಂಡಿದ್ದು ಗಮನಿಸಬಹುದು. ಅದರ ಹಿಂದಿನ ಉದ್ದೇಶ ನಾಟಕದ ಮೂಲ ಭಾವವನ್ನ ಉಳಿಸಿಕೊಳ್ಳುವುದೇ ಆಗಿದೆ.

‍ಲೇಖಕರು G

October 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: