ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಹೊಟ್ಟೆಯನ್ನು ಸೀಳಿ ಮಗು ಹೊರಗೆ ಬರುತ್ತಾ?

(ಇಲ್ಲಿಯವರೆಗೆ…)

ಕತೆ ಬರೆದಾದ ಮೇಲೆ ಚಿಟ್ಟಿಗೆ ಜ್ವರ ಬಂತು. ಯಾಕೆ ಅತ್ತೆ ತನ್ನೊಳಗೆ ತನ್ನಲ್ಲಿದ್ದ ಕಥೆಗಾರ್ತಿಯನ್ನು ಕಳಿಸಿದ್ದಕ್ಕಾ ಚಿಟ್ಟಿಗೆ ಅರ್ಥ ಆಗಲಿಲ್ಲ. ಅಮ್ಮ ಹೊಸಿಲ ಮೇಲೆ ಕೂಡಿಸಿ, ಅಡುಗೆ ಮನೆಯಲ್ಲಿ ಕೂಡಿಸಿ ನೀವಾಳಿಸಿ ದೃಷ್ಟಿ ತೆಗೆದಿದ್ದಳು. ಹೀಗೆ ದೃಷ್ಟಿ ತೆಗೆಯುವಾಗ ‘ಮನುಷ್ಯನ ಕಣ್ಣಿಗೆ ಮರವೇ ಸೀಯುತ್ತಂತೆ. ಇನ್ನು ಮನುಷ್ಯರ್ಯಾವ ಲೆಕ್ಕ ಚಿಟ್ಟಿ? ನೀನು ನೋಡಿದ್ರೆ ಎಲ್ಲಾರ್ ಕಣ್ಣಿಗೂ ಹೀಗ್ ಬೀಳ್ತಾ ಇದೀಯ?’ ಎಂದಿದ್ದಳು.
ಹಾಗಂತ ಅಮ್ಮನಿಗೆ ಅವಳು ಯಾರ ಕಣ್ಣಿಗೂ ಬೀಳಬಾರದು ಅಂತ ಏನೂ ಇರಲಿಲ್ಲ ಎನ್ನುವುದು ಅವಳ ಮುಖವನ್ನು ನೋಡಿದರೆ ಗೊತ್ತಾಗುತ್ತಿತ್ತ್ತು. ಉಪ್ಪು, ಮೆಣಸಿನ ಕಾಯಿ, ಸಾಸುವೆ, ಮೆಣಸು ಎಲ್ಲವೂ ಒಲೆಯೊಳಗೆ ಚಟಪಟ ಸಿಡಿಯುತ್ತಿದ್ದರೆ ಅಮ್ಮ ಚಿಟ್ಟಿಯ ಮುಖಕ್ಕೆ ತನ್ನ ಕೈಗಳನ್ನು ಆಡಿಸಿ ನೆಟಿಕೆ ತೆಗೆದಿದ್ದಳು ಅದೂ ಲಟಪಟ ಸದ್ದು ಮಾಡಿತ್ತು.
ಮಲಗಿದ್ದ ಚಿಟ್ಟಿಗೆ ಯಾಕೋ ಅತ್ತೆ ತನ್ನ ಪಕ್ಕ ಇದ್ದಾಳೆ ಅನ್ನಿಸುತ್ತಿದ್ದುದು ಮಾತ್ರ ವಿಚಿತ್ರ. ಬದುಕಿದ್ದಾಗ ತನ್ನ ಬಗ್ಗೆ ಯಾವ ಪ್ರೀತಿಯನ್ನು ತೋರಿಸದ ಅತ್ತೆ ಸತ್ತ ಮೇಲೆ ತನ್ನ ಜೊತೆ ಹೀಗೆ ಇರುವುದಾದರೂ ಯಾಕೆ ಯೋಚಿಸಿದಳು. ಅವಳಿಗೆ ಭಯ ಆಗಲಿಲ್ಲ, ಅತ್ತೆ ದೆವ್ವ ಆಗಿ ತನ್ನ ಜೊತೆ ಇಲ್ಲ ಕಥೆಯಾಗಿ ಇದ್ದಾಳೆ, ಅವಳ ಶಕ್ತಿ ಮಾತ್ರ ತನ್ನಲ್ಲಿ ಉಳಿದಿದೆ ಎನ್ನುವ ಭಾವ ಅವಳಲ್ಲಿ ಮೂಡಿ ಮನಸ್ಸಿಗೆ ಸಮಾಧಾನ ಆಯಿತು.
ತಾನು ಬರೆದ ಕಥೆಯನ್ನು ಚಿಟ್ಟಿ ನಾಕು ಜನಕ್ಕೆ ಓದಿ ಕೇಳಿಸಿದಳು. ಬಸವರಾಜಪ್ಪ ಮೇಷ್ಟ್ರು ಅದನ್ನ ಸಮಾಧಾನದಿಂದ ಕೇಳಿಸಿಕೊಂಡು ‘ಭೇಷ್ ಚಿಟ್ಟಿ, ನನಗೆ ಗೊತ್ತಿತ್ತು ನಿನಗೆ ಹೀಗೇ ಏನೋ ಒಂದು ಶಕ್ತಿ ಇದೆ ಅಂತ’ ಎಂದು ಶಹಬಾಸ್‌ಗಿರಿಯನ್ನು ಕೊಟ್ಟರು. ರಾಮಣ್ಣ ಮೇಷ್ಟ್ರು ‘ಕಥೆ ಬರೆದು ಕವಿ ಆಗ್ತಾಳಂತೆ, ಕಪಿ. ಏನ್ ಮಹಾ ಸಂಚಿಹೊನ್ನಮ್ಮ ಇವಳು’ ಎಂದು ಹಂಗಿಸಿದ್ದರು. ಚಿಟ್ಟಿಗೆ ರಾಮಣ್ಣ ಮೇಷ್ಟ್ರ ಮಾತಿಂದ ನೋವಾದರೂ ಯಾಕೋ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು  ಅನ್ನಿಸಲಿಲ್ಲ. ಒಳಗೆ ಭರಿಸಲಾರದ ಸಂತಸ ಇತ್ತು. ಈ ನಡುವೆ ಅವರಿವರು ಹೇಳುವ ಕಥೆಗೆ ತಾನು ಕಿವಿಯಾಗಿ ಅದನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುವ ಹುಚ್ಚು ಅವಳ ತಲೆಗೆ ಹತ್ತಿತ್ತು.
ಅಜ್ಜಿ ತನ್ನ ಕಥೆಯನ್ನು ಬರೀ ಚಿಟ್ಟಿ ಎಂದು ಅವಳನ್ನು ದಿನಪೂರ್ತಿ ಎದುರಿಗೆ ಕೂಡಿಸಿಕೊಂಡು ಹೇಳಿದ್ದೇ ಹೇಳಿದ್ದು. ‘ಅಯ್ಯೋ ಅದೇ ಹಳೇ ಕಥೆ ಅಜ್ಜಿ ಅಜ್ಜನ ಬಿಳಿ ಕುದುರೆ, ಕುದುರೆ ಸಾಬು, ಅದರ ಮಾಲೀಶು, ಅರಬ್ಬದಿಂದ ನಿಂಗೆ ಬರ್ತಾ ಇದ್ದ ಸೆಂಟು, ಅಜ್ಜನ ರಾತ್ರಿಯ ಸರ್ಕೀಟು ಎಲ್ಲ ಬಿಡು ಬೇರೆ ಏನಾದ್ರೂ ಇದ್ರೆ ಹೇಳು’ ಕೇಳಿದಳು.
ಚಿಟ್ಟಿ ಅಜ್ಜಿಗೆ ಕೋಪ ಬಂತು ಹೋಗೇ ಎಂದು ಬೈದಳು. ಚಿಟ್ಟಿಯ ತುಟಿಯಂಚಲ್ಲಿ ನಗುವಿತ್ತು. ‘ಅಜ್ಜಿ ನೀನು ನನ್ನಷ್ಟಿದ್ಯಲ್ಲಾ ಆಗ ಏನಾಯ್ತು? ದೊಡ್ಡವಳಾದ ಮೇಲೆ ಏನಾಯ್ತು? ಮದ್ವೆ ಮಕ್ಕಳಾದ ಮೇಲೆ . . . . ಅದನ್ನ ಹೇಳು?’ ಎಂದಳು. ಇದ್ದಕ್ಕಿದ್ದ ಹಾಗೆ ಅಜ್ಜಿ ಗಂಭೀರವಾದಳು. ಅಜ್ಜಿಯ ಮುಖದಲ್ಲಿ ಇದ್ದಕ್ಕಿದ್ದ ಹಾಗೇ ಆವರಿಸಿದ ಗಾಂಭೀರ್ಯವನ್ನು ನೋಡಿ ಚಿಟ್ಟಿಗೆ ಅಚ್ಚರಿಯಾಯಿತು. ತನ್ನೆಲ್ಲಾ ತುಂಟತನವನ್ನೂ ಪಕ್ಕಕ್ಕೆ ಇಟ್ಟು ಅಜ್ಜಿಯ ಮಾತನ್ನು ಕೇಳಿದಳು. ಅಜ್ಜಿ ಸ್ವಾತಂತ್ರ್ಯದ ಕಥೆಯನ್ನು ಹೇಳಿದಳು. ಬೆಳಗ್ಗೆ ಎದ್ದು ಹಾಡನ್ನು ಹೇಳುತ್ತಾ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುತ್ತಿದ್ದ ತನ್ನ ಬಾಲ್ಯದ ಬಗ್ಗೆ ಹೇಳಿದಳು. ತನ್ನ ಹೂವಿನ ಜಡೆ, ನಾಗರ ಕುಚ್ಚು, ಕೈಯ್ಯ ಬಳೆ ಎಲ್ಲ ಎಲ್ಲದರ ಬಗ್ಗೆ, ಬ್ರಿಟೀಷರ ಬಗ್ಗೆ, ಸ್ವತಂತ್ರ ಹೋರಾಟದ ಬಗ್ಗೆ, ಅಕ್ಕ ಪಕ್ಕದ ಮನೆಯ ವಯಸ್ಸಿನ ಹುಡುಗರು ಇದ್ದಕ್ಕಿದ್ದ ಹಾಗೇ ಮಾಯವಾಗುತ್ತಿದ್ದುದರ ಬಗ್ಗೆ ಎಲ್ಲವನ್ನೂ ಹೇಳಿದ್ದಳು. ಹಾಡನ್ನು ಹಾಡಿದಳು ಭಗಿನಿ ರಾಟೆಗಳೇ ನಮ್ಮ ಜೀವನವು ಹತ್ತಿ ತಂದು ಅರಳೆ ಮಾಡಿ ಚಿಕ್ಕ ತಂಗಿಯರೆಲ್ಲರೂ ನೂಲುವುದೇ ನಮ್ಮ ಜೀವನವು ನೇಯುವುದೇ ನಮ್ಮ ಜೀವನವು. . . . ಮತ್ತೆ ಹಾಡಿದಳು ಎಂಥಾ ಭಾರತ ದೇಶವು ನಮ್ಮೀ ದೇಸ ಎಂಥಾ ಭಾರತ ಮಾತೆಯು ಕೊಹಿನೂರೆಂಬೊಂದೊಜ್ರವಿಲ್ಲಿತ್ತು ಅದೇ ದೇಶದ ಸಂಪತ್ತು ಇಂದದು ಬಿದ್ದಿದೆ ಲಂಡನ್ ನಗರದಿ ಎಂಥಾ ಭಾರತ ದೇಶವು . . . . ಅಜ್ಜಿಯ ತನ್ಮಯತೆಯಿಂದ ಹಾಡುತ್ತಿದ್ದರೆ ಚಿಟ್ಟಿ ಕಣ್ಣ ಮುಚ್ಚದೆ ನೋಡುತ್ತಾ ಕೇಳುತ್ತಾ ಕೂತಳು. ಅವಳಿಗದು ಅದ್ಭುತವಾದ ಜಗತ್ತು. ‘ಅಜ್ಜಿ ನಿಜ ಇದೆಲ್ಲಾ ತುಂಬಾ ಚೆನ್ನಾಗಿದೆ.
ನೀನು ಸ್ವತಂತ್ರ ಚಳುವಳೀಲಿ ಭಾಗವಹಿಸಿದ್ಯಾ? ಅದನ್ನ ಹೇಳು’ ಎಂದಳು. ಅಜ್ಜಿ ನಕ್ಕು, ನಮ್ಮ ಮನೇಲಿ ಹೆಣ್ಣು ಮಕ್ಕಳನ್ನ ಹೊರಗೆ ಬಿಡ್ತಾ ಇರ್ಲಿಲ್ಲ. ನಿಮ್ಮ ಮುತ್ತಜ್ಜ ತುಂಬಾ ಕಟ್ಟುನಿಟ್ಟು. ಅಕ್ಕಪಕ್ಕದವರು ಪರಿಚಯಸ್ಥರು ಆಗೀಗ ಹೇಳ್ತಾ ಇದ್ದಿದ್ದನ್ನ ಕೇಳುತ್ತಿದ್ದುದು ಅಷ್ಟೇಕಣೆ’ ಎಂದಳು ಅಜ್ಜಿ. ಚಿಟ್ಟಿಗೆ ಇದೆಲ್ಲಕ್ಕಿಂತ ಆಸಕ್ತಿ ಇದ್ದುದ್ದು ತನ್ನ ಇನ್ನೊಬ್ಬ ಅತ್ತೆಯ ಬಗ್ಗೆ ಅವಳನ್ನು ತಾನು ನೋಡೇ ಇಲ್ಲ. ಈಗಲೂ ಎಲ್ಲೋ ದೂರದ ಡೆಲ್ಲಿಯಲ್ಲಿ ತನ್ನ ಇಂಜಿನಿಯರ್ ಗಂಡನ ಜೊತೆ ಇದ್ದಾಳೆ ಅಂತ ಕೇಳಿದ್ದಿದ್ದು ಅಷ್ಟೆ. ‘ಅಜ್ಜಿ ನಿನ್ನ ಜೀವನದಲ್ಲಿ ನಡೆದದ್ದು ಇಷ್ಟೇನಾ? ಎಂದಳು. ಅಜ್ಜಿ ಗೂಢವಾಗಿ ಚಿಟ್ಟಿಯ ಕಡೆಗೆ ನೋಡಿದಳು. ‘ಇಷ್ಟೇ ಕಣೆ ಆಮೇಲೆ ನಿಮ್ಮ ತಾತನ್ನ ಮದ್ವೇ ಆದೆ ಮಕ್ಕಳಾದವು ಇನ್ನೇನು ಹೇಳಲಿ ನಿಂಗೆ’ ಎಂದಳು. ಚಿಟ್ಟೀಗೆ ಕೆಣಕುವ ಮನಸ್ಸಿದ್ದರೂ ಕೆಣಕಲಿಲ್ಲ.
‘ನಿಮ್ಮ ಅಜ್ಜೀನೇ ಹೋಗು ಅಂತ ಕಳಿಸಿಕೊಟ್ಟಿದ್ದಂತೆ. ಇಲ್ಲ ಅಂದರೆ ಮೂವತ್ತು ವರ್ಷಗಳ ಹಿಂದೆ ಇಂಥಾ ಸಾಹಸ ಯಾರಿಗಾದರೂ ಸಾಧ್ಯಾನಾ? ನಿಮ್ಮತ್ತೆ ಒಳ್ಳೆ ಚಂದುಳ್ಳಿ ಚೆಲುವೆ ಥೇಟ್ ನಿನ್ನ ಹಾಗೇ. ಪುಟ್ಟ ಗೌರಿಯ ಹಾಗೆ ಮನೇಲಿ ಓಡಾಡುತ್ತಿದ್ದ ಅವಳನ್ನ ಪಕ್ಕದ ಮನೆಯ ಲಿಂಗಾಯಿತರ ಹುಡುಗ ಇಷ್ಟಪಟ್ಟು ಹಿಂದೆ ಬಿದ್ದಿದ್ದನಂತೆ. ನಿನ್ನ ಅತ್ತೆ ಕೂಡಾ ಅವನ ಜೊತೆ ಒಡನಾಟ ಇಟ್ಟುಕೊಂಡಿದ್ದಳಂತೆ. ಹಾಗೇ ಒಂದು ದಿನ ಅವಳನ್ನ ನೋಡಿದ ನಿನ್ನಜ್ಜಿ ಅವಳನ್ನ ಎಳೆದುಕೊಂಡು ಬಂದು ಚಚ್ಚಿಟ್ಟಿಳಂತೆ. ಕೊನೆಗೆ ಆ ಹುಡುಗನೇ ಬಂದು ಅಜ್ಜಿಯನ್ನ ಇನ್ನಿಲ್ಲದಂತೆ ಕೇಳಿದನಂತೆ. ಅವನ ಮಾತಿಗೆ ಅಜ್ಜಿಯ ಮನಸ್ಸು ಕರಗಿತೋ, ಮಗಳ ಸುಖ ಮುಖ್ಯ ಅನ್ನಿಸಿತೋ ಅಥವಾ ನಮ್ಮ ಬ್ರಾಹ್ಮಣದಲ್ಲಿ ಇಷ್ಟು ಓದಿದ ಚಂದದ ಹುಡುಗ ಸಿಗ್ತಾನೋ ಇಲ್ಲವೋ, ನನ್ನ ಮಗಳು ಚೆನ್ನಾಗಿರ್ತಾಳೋ ಇಲ್ಲವೋ ಎಲ್ಲಾ ಗೊಂದಲಗಳೂ ಕಾಡಿತೋ, ಅಥವಾ ಇಪ್ಪತ್ತನಾಲ್ಕನೇ ವಯಸ್ಸಿಗೆ ತನ್ನನ್ನ ಆವರಿಸಿದ ವೈಧವ್ಯವನ್ನು ನೆನೆದೋ ಅಂತೂ ಮಧ್ಯರಾತ್ರಿ ಮಗಳ ಕೈಗೆ ಎರಡು ಸೀರೆಯನ್ನು ಕೊಟ್ಟು ತನ್ನ ಹತ್ತಿರ ಇದ್ದ ಒಂದೆರಡು ಒಡವೆಗಳನ್ನು ಕೊಟ್ಟು ‘ನನ್ನ ಬದುಕು ಆದ ಹಾಗೇ ನಿನ್ನ ಬದುಕು ಆಗೋದು ಬೇಡ’ ಅಂತ ಕಳಿಸಿದ್ದಳಂತೆ. ಈಗ ಆ ಅತ್ತೆಗೆ ಮೂವರು ಮಕ್ಕಳು. ಅವೂ ತೊಳೆದ ಮುತ್ತುಗಳು ಎಂದು ಊರವರು ಹೇಳಿದ್ದನ್ನ ಕೇಳಿದ್ದ ಚಿಟ್ಟಿಗೆ ಅಜ್ಜಿಯ ಬಾಯಿಂದ ಆ ಕಥೆಯನ್ನು ಕೇಳಬೇಕು ಎನ್ನುವ ಆಸೆ. ಆದರೆ ಅಜ್ಜಿ ಅದ್ಯಾವುದೂ ತನಗೆ ಗೊತ್ತೇ ಇಲ್ಲ ಎನ್ನುವ ಹಾಗೇ ಸ್ವತಂತ್ರ, ಹೂವಿನ ಜಡೆ ಹೀಗೇ ಏನೇನೋ ಹೇಳುತ್ತಿದ್ದಳು.
‘ಚಿಟ್ಟಿ ಇದನ್ನೆಲ್ಲಾ ಹೇಗೆ ಬರೆದೆ?’ ಸರೋಜಾ ಕೇಳಿದ್ದಳು. ‘ಹೇಗೆ ಅಂದ್ರೆ ಕೇಳಿಸಿಕೊಂಡೆ ಕೇಳಿಸಿಕೊಂಡಿದ್ದನ್ನು ನನಗೆ ತೋಚಿದ ಹಾಗೆ ಬರೆದೆ’ ಎಂದಳು ಚಿಟ್ಟಿ. ‘ಇನ್ನೊಬ್ಬರು ಹೇಳಿದ್ದನ್ನು ಕೇಳಿಸಿಕೊಂಡು ಬರೆಯೋ ಕಥೆ ಎಂಥಾ ಕಥೆ ಬಿಡು’ ಎಂದಳು ಮಂಗಳ. ಸ್ಕೂಲಲ್ಲಿ, ಹೊರಗೆ, ಸ್ನೇಹಿತರ ಜೊತೆಯಲ್ಲಿ ಚಿಟ್ಟಿಯೇ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿದ್ದಕ್ಕೆ ಅವಳಿಗೆ ಬೇಜಾರಿತ್ತು. ಅಸೂಯೆಗೆ ಅವಮಾನಕ್ಕೆ ಚಿಟ್ಟಿ ಕಂಗಾಲಾದಳು. ‘ಹೌದಾ ನಾನು ಬರೆದದ್ದು ಏನೂ ಅಲ್ಲವಾ’ ಕೇಳಿದ್ದಳು. ನಕ್ಕತ್ತು ರೇಗಿದ್ದಳು ‘ತನಗೆ ಆಗಲ್ಲ ನೋಡು ಅದಕ್ಕೆ ಹೀಗೆ ಹೊಟ್ಟೆ ಉರಿ ಪಡ್ತಾ ಇದ್ದಾಳೆ. ಕಥೆ ಯಾರೇ ಹೇಳಲಿ ಬಿಡೆ ಇಷ್ಟು ಚೆನ್ನಾಗಿ ಬರೀಲಿಕ್ಕಾಗುತ್ತಾ ಅಂತ ಕೇಳಿದ್ರೆ ನನ್ನ ಕೈಲಂತೂ ಆಗಲ್ಲಪ್ಪ ಚಿಟ್ಟಿ ನಿನ್ನ ನೋಡಿದ್ರೆ ಸಂತೋಷ ಆಗುತ್ತೆ ಕಣೆ’ ಎಂದಿದ್ದಳು. ಚಿಟ್ಟಿಗೆ ಅವಳ ಮಾತಿಂದ ಸ್ವಲ್ಪ ಸಮಾಧಾನವಾಯ್ತು. ಇದೆಲ್ಲಾ ನಡೆಯುತ್ತಿದ್ದಾಗಲೂ ಚಿಟ್ಟಿಯ ಒಳಗೆ ಅವಳಿಗೆ ತಿಳಿಯದೆ ಸಂತಸ ಮನೆ ಮಾಡಿಕೊಂಡಿತ್ತು. ಅವಳಿಗೆ ಅರ್ಥವಾಗಿದ್ದ ಸಂಗತಿ ಒಂದೇ ನನ್ನ ಒಳಗೆ ಬರೆಯುವ ಶಕ್ತಿ ಇದೆ ಎಂದು. ಮುಂದೆ ತಾನು ದೊಡ್ದ ಕವಿಯಾಗಬಹುದು ತನ್ನ ಪದ್ಯಗಳನ್ನೂ, ಕಥೆಗಳನ್ನೂ, ಸ್ಕೂಲಲ್ಲಿ ಮಕ್ಕಳು ಪಾಠ ಕೇಳಬಹುದು ಎನ್ನುವ ಊಹೆ ಅವಳ ಹೆಗಲಲ್ಲಿ ರೆಕ್ಕೆಗಳು ಮೂಡಿಸಿದ್ದವು. ಅವಳ ಮಾತಲ್ಲಿ ನಡೆಯಲ್ಲಿ ಎಲ್ಲದರಲ್ಲೂ ಹಗುರವಾಗುವ ಗುಣ ಕಾಣಿಸಿತ್ತು. ಆಗಲೇ ಸರೋಜಾ ಒಂದು ಮಾತನ್ನು ಹೇಳಿದಳು ‘ನೀನು ಹಕ್ಕಿ ಆಗಬೇಕಿತ್ತು’ ಅಂತ. ಚಿಟ್ಟಿಗೆ ಅಚ್ಚರಿಯಾಗಿ ಸರೋಜಾಳ ಕಡೆಗೆ ನೋಡಿದಳು.
ಸರೋಜಾ ನಕ್ಕು ‘ನಿನ್ನೊಳಗಿನ ಖುಷಿ ನನಗ್ಯಾಕೆ ಸಾಧ್ಯ ಆಗ್ತಾ ಇಲ್ಲ. ಇದು ನಿಂಗೆ ಮಾತ್ರ ಹೇಗೆ ಸಾಧ್ಯ?!’ ಎಂದಳು. ಚಿಟ್ಟಿ ಸ್ಕೂಲಲ್ಲಿ ಹೇಳಿಕೊಟ್ಟ ಹಾಡೊಂದನ್ನು ಗೊಣಗಿಕೊಂಡಳು ‘ಹಾಡು ಹಕ್ಕಿಗಳೇ ಹಾರಿ ಬಾನಿಗೆ ಮರದ ಗೂಡಿನಿಂದ. ಕೂಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ ಒಳಗಿನ ಆನಂದ , ಬಣ್ಣ ತಳೆದಿರಿ ಕಣ್ಣನು ತಳೆದಿರಿ ರೆಕ್ಕೆಪುಕ್ಕ ಮಾಟ, ಕಾಲು ಬಲಿಯಿತು ಕಾಲ ಸಂದಿತು ಇನ್ನು ಹಾರುವಾಟ’ ಎಂದು. ತನ್ನ ಹೆಗಲಿಗೆ ರೆಕ್ಕೆ ಕಟ್ಟಿಕೊಂಡಿದ್ದೇನೆ ಹಗುರಾಗಿದ್ದೇನೆ. ಅವಳದ್ದೀಗ ಒಂದೇ ಪ್ರಾರ್ಥನೇ ರೆಕ್ಕೆ ಕಳಚಿ ಕೆಳಕ್ಕೆ ಬೀಳದಿರಲಿ ತನ್ನ ಹಾರುವಾಟ ಕೊನೆಯಾಗದಿರಲಿ. ಅದಕ್ಕಾಗಿ ಚಿಟ್ಟಿ ಹೊಸ ಕಥೆಗಳನ್ನು ಹುಡುಕತೊಡಗಿದಳು. ಇಲ್ಲದಿದ್ದರೆ ಕಟ್ಟ ತೊಡಗಿದಳು. ಇತ್ತಕಡೆ ಮಂಜಣ್ಣನವರ ಕ್ಲಬ್ಬು ದಿನೇ ದಿನೇ ಜನರನ್ನು ತನ್ನ ಕಡೆಗೆ ಆಕರ್ಷಿಸುತ್ತಾ ಬೆಳೆಯತೊಡಗಿತ್ತು. ಚಿಟ್ಟಿಗೆ ಈಗ ಕ್ಲಬ್ಬಿನ ಬಗ್ಗೆ ಅಂಥಾ ಊಹಾಪೋಹಗಳು ಇಲ್ಲವಾದರೂ ಅಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮಾತ್ರ ಅವಳಿಗೆ ಆಸಕ್ತಿಯ ಕೇಂದ್ರ ಅನ್ನಿಸುತ್ತಿತ್ತು. ಭಾರತಿಯನ್ನು ಈಗ ಹಿಡಿಯುವುದು ಕಷ್ಟವೇ ಆಗಿತ್ತು. ಒಂದು ದಿನ ನಕ್ಕತ್ತು, ಸರೋಜಾ, ಆರೋಗ್ಯ, ಚಿಟ್ಟಿ ಎಲ್ಲರೂ ಕುಂಟಾಪಿಲ್ಲೇ ಆಡುವಾಗ ಚಿಟ್ಟಿ ತಪ್ಪಿ ಬೇರೆ ಮನೆಗೆ ಬಚ್ಚಾವನ್ನು ಎಸೆದಿದ್ದಳು. ಉಫಿಟ್ ಎನ್ನುವಾಗಲೇ ಭಾರತಿ ಬಂದಳು. ಅವಳ ಬಟ್ಟೆ, ಬಣ್ಣ, ನೋಟ ಎಲ್ಲದರ ಗತ್ತು ಈಗ ಹೇಳುವ ಹಾಗೇ ಇಲ್ಲ. ತಲೆಯಲ್ಲಿ ಕೊಂಡುತಂದಿದ್ದ ಮಲ್ಲಿಗೆ ಹೂವಿನ ದಂಡೆಯಿತ್ತು.

ಅಣ್ಣ ಬಾಂಬೆಯಿಂದ ಬಂದಿದ್ದಾನೆ. ಬಾಂಬೆಯಲ್ಲಿ ಹೋಟಲಿಟ್ಟು ಸಾಕಷ್ಟು ದುಡ್ಡು ಮಾಡಿಕೊಂಡು ಬಂದಿದ್ದ ಸೋಮಣ್ಣ ಇರುವ ಒಬ್ಬ ತಂಗಿಗಾಗಿ ಶಾಂಪು, ಸೋಪು, ಸೆಂಟು ಎಲ್ಲಾ ಎಲ್ಲಾ ತಂದಿದ್ದ. ಜೊತೆಗೆ ಒಂದಿಷ್ಟು ಬಟ್ಟೆಗಳನ್ನು ಕೂಡಾ. ಆನೆ ಕಿವಿಯ ತೋಳಿನ ಅಂಗಿಯಂತೂ ಅವಳಿಗೆ ತುಂಬಾ ಒಪ್ಪುತ್ತಿತ್ತು. ಎಲ್ಲರೂ ಅವಳ ಬಟ್ಟೆಯನ್ನು ಮುಟ್ಟಿ ನೋಡಿ… ನೋಡಿ ತಮಗೆ ಇಂಥಾ ಬಟ್ಟೆ ಇಲ್ಲವಲ್ಲಾ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದರು. ಚಿಟ್ಟಿಗೆ ಅವಳ ಆ ಡ್ರಸ್‌ಅನ್ನು ತಾನು ಹಾಕಿಕೊಂಡರೆ ಹೇಗಿರುತ್ತಿದ್ದೆ ಎನ್ನುವ ಕಲ್ಪನೆ ಕಣ್ಣನ್ನು ತುಂಬಿದ್ದವು. ಭಾರತಿಯ ಜಾಗದಲ್ಲಿ ತನ್ನನ್ನು ತಾನು ಕಂಡಿದ್ದು ರಾಜಕುಮಾರಿಯೇನೋ ಎನ್ನುವ ಭ್ರಮೆಯನ್ನು ಮನಸ್ಸಿಗೆ ತಂದುಕೊಂಡಳು. ‘ನನಗೆ ಬಿಡುವಿಲ್ಲ ನಾನು ಹೋಗಬೇಕು’ ಎನ್ನುತ್ತಾ ಏಳುವಾಗ ಅವಳ ಆನೆಯ ಕಿವಿಯ ತೋಳನ್ನು ಹಿಡಿದು ಚಿಟ್ಟಿ ‘ಇನ್ನೂ ಸ್ವಲ್ಪ ಹೊತ್ತು ಇರೇ ಭಾರತಿ’ ಎಂದು ಎಳೆದುಬಿಟ್ಟಳು. ಆ ತೋಳು ಪರ್ರ್ ಎನ್ನುವ ಶಬ್ದದ ಜೊತೆ ಹರಿದುಹೋಗಿತ್ತು. ಭಾರತಿಗೆ ದುಃಖ ತಡೆಯಲಾಗಲಿಲ್ಲ. ನಮ್ಮಣ್ಣ ಪ್ರೀತಿಯಿಂದ ತಂದುಕೊಟ್ಟಿದ್ದು ನೀನು ಹೀಗೆ ಮಾಡಿದ್ಯಲ್ಲಾ ಎಂದು ಅಳಲಿಕ್ಕೆ ಶುರು ಮಾಡಿದಳು. ಚಿಟ್ಟಿಗೆ ತನ್ನ ಕೆಲಸದಿಂದ ಬೇಸರವಾಗಿದ್ದಕ್ಕೆ ಬೇಕಾಗಿ ಮಾಡಲಿಲ್ಲ ಕಣೆ ಎನ್ನುತ್ತಾ ಅಲವತ್ತುಕೊಳ್ಳತೊಡಗಿದಳಾದರೂ ಭಾರತಿಯ ಕೋಪ ಆರಲಿಲ್ಲ ನಿನಗೆ ಅಣ್ಣ ಇಲ್ಲ. ಅದಕ್ಕೆ ನಿಂಗೆ ಗೊತ್ತಾಗಲ್ಲ. ಎಷ್ಟು ಪ್ರೀತಿಯಿಂದ ತಂದುಕೊಟ್ಟಿದ್ದ ಗೊತ್ತಾ? ನಿಂಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ ಎನ್ನುತ್ತಾ ಅಳತೊಡಗಿದ್ದಳು. ಚಿಟ್ಟಿ ಅದನ್ನು ತಾನು ಜೀನತ್ ಹತ್ತಿರ ತೆಗೆದುಕೊಂಡು ಹೋಗಿ ಹೊಲಿಸಿಕೊಡುತ್ತೇನೆ. ಅಳಬೇಡ ಅಂತ ಎಂದು ಎಷ್ಟು ಹೇಳಿದರೂ ಭಾರತಿಗೆ ಸಮಾಧಾನ ಆಗಲಿಲ್ಲ. ನನಗೂ ಒಬ್ಬ ಅಣ್ಣ ಇದ್ದಿದ್ದರೆ ಈ ಭಾರತಿಗೆ ಸರಿಯಾಗಿ ಬುದ್ಧಿ ಕಲಿಸ್ತಾ ಇದ್ದೆ ಎಂದುಕೊಂಡಳಾದರೂ ಇಲ್ಲದಿದ್ದ ಅಣ್ಣನನ್ನು ತರುವುದು ಎಲ್ಲಿಂದ?
‘ಏನೆ ಚಿಟ್ಟಿ ಕಥೆ ಬರೆದಿದ್ದೀಯಂತೆ’ ಎಂದಳು ಜೀನತ್ ಬಟ್ಟೆಯನ್ನು ಮಿಷನ್ನಿನ ಮಧ್ಯೆ ಇಟ್ಟು ಸೂಜಿಗೆ ದಾರವನ್ನು ಪೋಣಿಸುತ್ತಾ. ಅವಳ ಹೊಟ್ಟೆ ದಪ್ಪಗೆ ಎದ್ದು ಕಾಣುತ್ತಿತ್ತು. ‘ಹು ಅಕ್ಕಾ ಈ ಬಟ್ಟೆಯನ್ನು ಒಂದು ಚೂರು ಹೊಲಿದುಕೊಟ್ಟುಬಿಡು. ಭಾರತಿ ಅಳ್ತಾ ಇದ್ದಾಳೆ’ ಎಂದಳು ಚಿಟ್ಟಿ. ‘ಕುತ್ಕೊಳ್ಳೆ ಇದೊಂದ್ ಚೂರು ಹೊಲೆದು ಆಮೇಲೆ ನಿನ್ನ ಬಟ್ಟೆಯನ್ನು ತೆಗೆದುಕೊಳ್ತೀನಿ’ ಎಂದಳು ಜೀನತ್. ಕುಳಿತ ಚಿಟ್ಟಿಗೆ ಜೀನತ್ ಹೊಟ್ಟೆಯಲ್ಲಿ ಎಷ್ಟು ಮಕ್ಕಳಿರಬಹುದು ಎನ್ನುವ ಶಂಕೆ ಬಂತು. ಬಟ್ಟೆಯನ್ನು ಹೊಲೆಯುತ್ತಾ ಸೊಂಟ ಕಳಕ್ ಅಂತು ಎನ್ನುವ ಹಾಗೆ ಹಾ ಎಂದಳು ಜೀನತ್. ಅಷ್ಟರಲ್ಲಿ ಅಲ್ಲಿಗೆ ಅದ್ದು ಬಂದ. ಅದ್ದುವನ್ನು ಸ್ಕೂಲಿಗೆ ಹೋಗ್ತಾ ದಾರಿಯಲ್ಲಿದ್ದ ಶೆಡ್ ಮನೆಯಲ್ಲಿ ನೋಡಿದ್ದ ಚಿಟ್ಟಿಗೆ ಸ್ವಲ್ಪ ಕುತೂಹಲ ಅನ್ನಿಸಿತು. ಅದ್ದು ಜೀನತಳನ್ನು ರೇಗಿದ ‘ಜೀನತ್ ಈಗ ನೀನು ಹೊಲೆಯೋದು ಬೇಕಾ?’ ಎಂದು. ‘ಮಗು ಆದ್ಮೇಲೆ ಈ ಕೆಲ್ಸ ಎಲ್ಲಾ ಶುರು ಮಾಡೋಕ್ಕೆ ಟೈಂ ಬೇಕಾಗುತ್ತೆ ಈಗ್ಲೂ ಬೇಡ ಅಂದ್ರೆ ಹೇಗೆ?’ ಎಂದಳು ಜೀನತ್. ತುಂಬಿಕೊಂಡಿದ್ದ ಅವಳ ಕೆನ್ನೆಯನ್ನು ಸವರುತ್ತಾ ‘ನಿನ್ನ ಥರದ ಒಂದು ಮಗು ಆಗ್ಬಿಟ್ರೆ ಸಾಕು ಆ ನಬೀಲಾ ಹೊಟ್ಟೆ ಉರಿದುಕೊಳ್ಳಬೇಕು ಹಾಗೆ ನೋಡ್ಕೋತೀನಿ’ ಎಂದ ಅದ್ದುವಿನ ಕೈಯ್ಯನ್ನು ಚಿಟ್ಟಿ ಇದ್ದಾಳೆ ಎನ್ನುವ ಕಾರಣಕ್ಕೆ ಪಕ್ಕಕ್ಕೆ ತಳ್ಳುತ್ತಾ ‘ಜೀ ಒಳಗೆ ಟೀ ಮಾಡಿಟ್ಟಿದ್ದೀನಿ ಕುಡೀರಿ’ ಎಂದಳು. ಅದ್ದುವಿಗೆ ಚಿಟ್ಟಿ ಯಾವ ಲೆಕ್ಕ. ಮದುವೆಯಾದ ಹೆಂಡತಿಯನ್ನೇ ಬಿಟ್ಟು ಜೀನತ್‌ನ ಹಿಂದೆ ಬಿದ್ದವನು. ಅಲ್ಲೆ ಲಲ್ಲೆ ಹೊಡೆಯುತ್ತಾ ಕೂತ. ಜೀನತ್ ಚಿಟ್ಟಿಗೆ ‘ಆಮೇಲೆ ಬಾ ಚಿಟ್ಟಿ. ನಿನ್ನ ಕಥೆಯನ್ನೂ ನಾನು ಕೇಳಬೇಕು ಹೊಲೆದದ್ದಕ್ಕೆ ನೀನೇನು ದುಡ್ಡು ಕೊಡಬೇಕಾಗಿಲ್ಲ’ ಎಂದು ನಕ್ಕಳು. ಭಾರತಿಯ ದುಃಖ ತುಂಬಿದ ಮುಖವನ್ನು ನೆನೆಸಿಕೊಳ್ಳುತ್ತಾ ‘ಅವಳಿಗೆ ಈಗ ಏನು ಹೇಳಲಿ?’ ಎಂದು ಹೊರಟಳು.
ಜೀನತ್ ಅದ್ದುವಿನ ಎರಡನೆ ಹೆಂಡತಿ. ಅವರ ಜನದಲ್ಲಿ ಹೆಚ್ಚು ಮದುವೆ ಮಾಡಿಕೊಳ್ಳುವುದು ಮಾಮೂಲಿನ ಸಂಗತಿಯೇ ಆದರೂ ಅದ್ದುವಿನ ಕಥೆ ಮಾತ್ರ ವಿಚಿತ್ರ. ಮೊದಲ ಹೆಂಡತಿಗೆ ಮಕ್ಕಳು ಆಗಿಲ್ಲ ಅಂತ ಎರಡನೆ ಮದುವೆ ಮಾಡಿಕೊಳ್ಳಲು ಮನೆಯ ಹಿರಿಯರೆಲ್ಲಾ ಬಲವಂತ ಮಾಡಿದರೂ ಒಪ್ಪದವನು ಪೀರಲ ಹಬ್ಬದ ದಿನ ಜೀನತ್ ಮಾಡಿಕೊಂಡ ಅಲಂಕಾರಕ್ಕೆ ಮರುಳಾಗಿ ಹೋಗಿದ್ದ. ‘ಕಡೆದರೆ ನಾಕು ಆಳಾಗುವ ಅದ್ದುವಿಗೆ ಜೀನತ್ ಬಿದ್ದಿದ್ದರಲ್ಲಿ ಅಚ್ಚರಿಯೇ ಇಲ್ಲ’ ಅಂತ ಊರವರೆಲ್ಲಾ ಮಾತಾಡುತ್ತಿದ್ದರು. ಗಂಡ ಹೀಗೆ ಮಾಡಿದ್ದಕ್ಕೆ ಮೊದಲ ಹೆಂಡತಿ ನಬೀಲಾ ಗೋಳಾಡಿ ನಾಕುದಿನ ಊಟ ಬಿಟ್ಟು ಸೊರಗಿದ್ದನ್ನ ಬಿಟ್ಟರೆ ಬೇರೆ ಬದಲಾವಣೆಗಳೇನೂ ಆಗಲಿಲ್ಲ. ಜೀನತ್ ಅನ್ನು ಮದುವೆಯಾದ ಅದ್ದು ಮಾತ್ರ ಯಾಕೋ ಇಬ್ಬರು ಹೆಂದತಿಯರ ಜೊತೆ ಒಂದೇ ಮನೆಯಲ್ಲಿ ಸಂಸಾರ ಮಾಡಲಿಕ್ಕೆ ಮನಸ್ಸು ಮಾಡದೆ ಬೇರೆ ಮನೆಗಳಲ್ಲಿ ಉಳಿಸಿದ್ದ. ಅವನ ತಮ್ಮ ರೆಹಮಾನ ಮೊದಲ ಅತ್ತಿಗೆಯ ಪರವಾಗಿ ಮಾತಾಡುತ್ತಾ ಊರೆಲ್ಲಾ ಸುತ್ತುತ್ತಿದ್ದ. ಇದೆಲ್ಲಾ ಇದ್ದಿದ್ದೆ ಎಂದು ಊರವರು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಹರಿದ ಅಂಗಿಯನ್ನು ಹಿಡಿದು ಯೋಚನೆ ಮಾಡುತ್ತಾ ಮನೆಯ ಕಡೆಗೆ ಹೊರಟ ಚಿಟ್ಟಿಗೆ ಶಿವಮ್ಮನ ಮನೆಯ ಹತ್ತಿರ ಜಗಳ ಆಗುತ್ತಿದ್ದುದು ಕಾಣಿಸಿತು. ಎಲ್ಲರೂ ಅವಳನ್ನ ಕೂಡಿಸಿ ಸಮಾಧಾನ ಮಾಡಲಿಕ್ಕೆ ಪ್ರಯತ್ನಿಸುತ್ತಿದ್ದರು. ಶಿವಮ್ಮ ತನ್ನ ಮೈಮೇಲಿನ ಪರಿವೆಯೇ ಇಲ್ಲದೆ ಆವೇಶದಿಂದ ಕೂಗುತ್ತಿದ್ದಳು. ಶಿವಣ್ಣ ಎಣ್ಣೆ ಹೊಡೆದು ರಂಗುರಂಗಾಗಿ ಯಾವುದು ತನಗಲ್ಲವೇನೋ ಎನ್ನುವಂತೆ ಬಾಗಿಲಲ್ಲಿ ಕೂತಿದ್ದ. ‘ರಾತ್ರಿಯೆಲ್ಲಾ ಇಸ್ಪೇಟು ಹಗಲೆಲ್ಲಾ ಎಣ್ಣೆ ನಾನು ಈ ಮನುಷ್ಯನ ಜೊತೆ ಹೇಗೆ ಬಾಳ್ವೆ ಮಾಡಲಪ್ಪೋ’ ಎನ್ನುತ್ತಾ ಕೂಗುತ್ತಿದ್ದ ಶಿವಮ್ಮನನ್ನು ಜನ ಸಮಾಧಾನ ಮಾಡಲು ನೋಡುತ್ತಿದ್ದರು. ಅವಳ ಮೈಮೇಲಿನ ಸೆರಗು ಜಾರಿ ಕೆಳಗೆ ಬಿದ್ದಿದ್ದು ಕೂಡಾ ಅವಳ ಗಮನಕ್ಕೆ ಇರಲಿಲ್ಲ. ಅಲ್ಲಿದ್ದ ಪುಂಡ ಹುಡುಗರು ಅದನ್ನು ಬಗ್ಗಿ ನೋಡಿದಾಗ ಚಿಟ್ಟಿಗೆ ಮುಜ್ಜುಗರ ಅನ್ನಿಸಿ ಈ ಶಿವಮ್ಮ ಸೆರಗನ್ನು ಸರಿಮಾಡಿಕೊಂಡು ಜಗಳ ಆಡಬಾರದೇಕೆ ಅನ್ನಿಸಿತ್ತು. ‘ಶಿವಮ್ಮ ಗಂಡ ಹೆಂಡತಿ ಅಂದಮೇಲೆ ಇದೆಲ್ಲಾ ಇದ್ದಿದ್ದೆ ಇದೇನು ನಿಂಗೆ ಹೊಸದಾ? ಮೂರು ಮಕ್ಕಳಾಗಿವೆ ಇಷ್ಟು ದಿನ ಇಲ್ಲದ್ದು ಗಂಡನ ಮೇಲೆ ಯಾಕೆ ಜಗಳ ಮಾಡ್ತೀಯ?’ ಎನ್ನುತ್ತ ಸಮಾಧಾನ ಹೇಳುತ್ತಿದ್ದವರ ಎದುರು ಸೆಟೆದು ನಿಂತಿದ್ದಳು. ‘ಇನ್ನು ಮುಂದೆ ನನ್ನ ಶಿವಮ್ಮ ಅಂತ ಯಾರೂ ಕರೀಬೇಡಿ. ಈ ಮೂಳನ ಜೊತೆ ನನ್ನ ಸಂಬಂಧ ಕಡೆದುಹೋಯಿತು. ನಾನು ಇವನ ಹೆಂಡತಿ ಶಿವಮ್ಮ ಅಲ್ಲ ನಾನು ಬಾಳಕ್ಕ. ಎಲ್ಲಾ ನನ್ನ ಇನ್ನು ಮುಂದೆ ಹಾಗೇ ಕರೀರಿ’ ಎಂದು ಎದುರಿಗಿದ್ದವರ ತಪ್ಪನ್ನು ತಿದ್ದುವಂತೆ ಮಾತಾಡುತ್ತಿದ್ದಳು. ಚಿಟ್ಟಿಗೆ ಅಚ್ಚರಿಯಾಯಿತು, ತನ್ನ ಹಿಂದಿನ ಹೆಸರನ್ನೇ ಇಟ್ಟುಕೊಂಡು ಬಿಟ್ಟರೆ ಈಗಿರುವ ಸಂಬಂಧ ಹೊರಟು ಹೋಗಿ ಬಿಡುತ್ತಾ? ಕುಂಟಾಬಿಲ್ಲೆ ಆಡುವಾಗ ಅಪ್ಪಿ ತಪ್ಪಿ ಮನೆಯನ್ನು ಬಿಟ್ಟು ಆಡಿದರೆ ‘ಉಫಿಟ್ ಉಫಿಟ್’ ಅಂತ ಹೇಳ್ತೀವಲ್ಲ ಹಾಗೇ. ಮತ್ತೆ ಮದುವೆ ಹೆಣ್ಣಿಗೆ ಜೀವನದಲ್ಲಿ ಒಂದೇ ಸಾರಿ ಅಂತಾರಲ್ಲಾ? ಶಿವಮ್ಮ ಮದುವೆಯ ತಪ್ಪನ್ನು ಉಫಿಟ್ ಅಂತಿದ್ದಾಳೆ. ಇದು ಸಾಧ್ಯಾನಾ? ಚಿಟ್ಟಿಯ ತಲೆಯಲ್ಲಿ ತನ್ನ ಆಟ, ಆಟದ ಜೊತೆಗೆ ಜೀವನ ಎಲ್ಲವೂ ಸೇರಿಕೊಂಡು ಕಲಸಮೇಲೋಗರ ಆಗುತ್ತಿತ್ತು.
ಅವತ್ತು ರಾತ್ರಿ ಶಿವಣ್ಣನಿಗೆ ಮನೆಯಲ್ಲಿ ಜಾಗ ಇರಲಿಲ್ಲ. ‘ನನ್ನ ಮನೆ ನೀನು ಬಿಟ್ಟು ಹೋಗು’ ಎಂದು ಎಗರಿ ಬಂದ ಅವನಿಗೆ ‘ನಾನು ಈ ಮನೆ ಬಿಟ್ಟು ಹೋಗೋಕ್ಕೆ ಆಗಲ್ಲ’ ಎಂದು ಬಾಳಕ್ಕ ಆಗಿ ಎದುರು ನಿಂತು ವಾದಿಸಿದ್ದಳು ಶಿವಮ್ಮ. ಶಿವಣ್ಣ ಅವಳ ಮೇಲೆ ಕೈ ಮಾಡಲು ಹೋಗಿ ‘ಸೂಳೆ ಮುಂಡೆ’ ಎಂದು ಬೈದುಬಿಟ್ಟಿದ್ದ. ‘ಯಾವನ ಜೊತೆ ನನ್ನ ಬಿಟ್ಟು ಬಂದಿದ್ದೆ? ನನ್ನ ಅನ್ನೋಕ್ಕೇ ಬರ್ತೀಯಾ? ನ್ಯಾಯವಾಗಿ ನಿನ್ನ ಜೊತೆ ಸಂಸಾರ ಮಾಡ್ತಾ ಇದೀನಲ್ಲ ಅದಕ್ಕಾ ಹೀಗೆಲ್ಲಾ ಮಾತಾಡೋದು? ಎಲ್ಲಿ ಈಗ ಮಾತಾಡು ನೋಡೋಣ’ ಎನ್ನುತ್ತಾ ಅವನ ಕೈಗಳನ್ನು ತಿರುಚಿಬಿಟ್ಟಿದ್ದಳು ಶಿವಮ್ಮ ಉರುಫ್ ಬಾಳಕ್ಕ. ತನ್ನ ಹಟವನ್ನು ಬಿಡದ ಶಿವಣ್ಣ ಊರವರನ್ನು ಬಾಳಕ್ಕನ ಹಿರಿಯರನ್ನು ಕರೆಸಿ ಮನೆಬಿಟ್ಟು ಹೋಗುವಂತೆ ಪಂಚಾಯಿತಿ ಮಾಡಿದಾಗ ‘ಹೋಗುತ್ತೇನೆ ಅದರೆ ನನ್ನ ಮದುವೆಗೆ ಮುಂಚೆ ಇದ್ನಲ್ಲಾ ಹಾಗೇ ಮಾಡಲಿ, ಆಗಿರುವ ತಪ್ಪಿಗೆ ಸಾಕ್ಷಿಯಾದ ಈ ಮೂರೂ ಮಕ್ಕಳನ್ನೂ ಇಲ್ಲವಾಗಿಸಲಿ ಎಲ್ಲ ಮಾಡಿ ನನ್ನ ಮನೆ ಬಿಟ್ಟು ಹೋಗು ಎಂದರೆ ಯಾಕೆ ಹೋಗಬೇಕು? ಬೇದ ಅನ್ನಿಸಿದರೆ ಅವನೇ ಹೋಗಲಿ’ ಎಂದು ಪ್ರತಿಯಾಗಿ ಸವಾಲನ್ನು ಒಡ್ಡಿದ್ದಳು. ಶಿವಣ್ಣನ ಹಾರಾಟ ರೇಗಾಟ ಎಲ್ಲಾ ಮುಗಿದು ಹೋಗಿತ್ತು. ಇನ್ನು ಮುಂದೆ ಇಸ್ಪೇಟು ಆಟಕ್ಕೆ ಹೋಗಲ್ಲ ಅಂತ ಆಣೆ ಪ್ರಮಾಣ ಮಾಡಿದ್ದ. ಅಂತೂ ಹೋರಾಟದಲ್ಲಿ ಗೆದ್ದ ಶಿವಮ್ಮ ಚಿಟ್ಟಿಯ ಕಣ್ಣಲ್ಲಿ ದೊಡ್ದ ಬೆರಗನ್ನು ಮೂಡಿಸಿದ್ದಳು. ಶಿವಮ್ಮ ಶಿವಮ್ಮನೇ ಆಗದೆ ಮತ್ತೆರಡು ಕೈಗಳು, ಉದ್ದನಾಲಗೆಯ, ಕೆಂಪಾದ ಕಣ್ಣಿನ ಹಣೆಯ ಮೇಲೆ ದೊಡ್ಡ ಕುಂಕುಮದ ದೇವತೆಯೋ, ರುಂಡಮಾಲಾಧಾರಿಯಾದ ರಾಕ್ಷಸಿಯೋ ಅರ್ಥವಾಗದೆ ಹೋಯಿತು.
ಇಷ್ಟೆಲ್ಲಾ ಆದರೂ ಭಾರತಿಯ ಕೋಪ ಮಾತ್ರ ತೀರಿಲಿಲ್ಲ. ರತ್ನಮ್ಮ ‘ಹೋಗಲಿ ಬಿಡೇ ನಿನ್ನ ಫ್ರಂಡೇ ತಾನೆ?’ ಎಂದರು ‘ಅದೆಲ್ಲಾ ನಂಗೆ ಹೊತ್ತಿಲ್ಲ ಇದನ್ನು ಮೊದಲಿದ್ದ ಹಾಗೇ ಮಾಡಿಕೊಂಡು ಬಾ‌ ಇಲ್ಲದಿದ್ದರೆ ನನಗೆ ಮುಖ ತೋರಿಸಬೇಡ’ ಎಂದು ಚಿಟ್ಟಿಗೆ ತಾಕೀತು ಮಾಡಿದಳು. ದಾರಿಯಲ್ಲಿ ಸಿಕ್ಕ ನಕ್ಕತ್ತು ಬಿಕ್ಕೆಕಾಯನ್ನು ತಿನ್ನುತ್ತಾ ‘ಬೇಕೇನೇ?’ ಎಂದಳು. ‘ಹೋಗೇ ನೀನು ತಿಂದ ಎಂಜಲಿನ ಹಣ್ಣನ್ನು ನಾನು ತಿನ್ನಲಾ’ ಎಂದು ಚಿಟ್ಟಿ ಅಲ್ಲಿಂದ ಹೊರಟಳು.
ಮಾರನೆ ದಿನ ಜೀನತ್ ಬಟ್ಟೆಯನ್ನು ಹೊಲಿಯುತ್ತಾ ಕೂತಿದ್ದಳು. ಅಲ್ಲಿಗೆ ಭಾರತಿಯ ಅಂಗಿಯನ್ನು ತನ್ನ ಎಲ್ಲಾ ಕೋಪದೊಂದಿಗೆ ತಂದು ‘ಹೊಲೆದುಕೊಡ್ತೀಯೋ ಇಲ್ಲವೋ’ ಎಂದು ಮುಂದೆ ಹಾಕಿದಳು. ಜೀನತ್ ನಕ್ಕು ‘ಯಾಕೆ ಚಿಟ್ಟಿ ನನ್ನ ಮೇಲೆ ಕೋಪಾನಾ?’ ಎಂದಳು. ‘ಮತ್ತೆ ನೆನ್ನೆ ಸುಮ್ಮನೆ ಒಂದು ಹೊಲಿಗೆ ಹಾಕಿಬಿಟ್ಟಿದ್ದರೆ ಆ ಭಾರತಿಯ ಹತ್ತಿರ ಬೈಸಿಕೊಳ್ಳೋದು ತಪ್ತಾ ಇತ್ತಲ್ಲ’ ಎಂದು ಮುಖ ಊದಿಸಿಕೊಂಡಳು. ‘ಹೌದಾ ಅಷ್ಟು ಗಲಾಟೆ ಮಾಡಿದ್ಲಾ ಅವ್ಳು? ಅವ್ಳು ನಿನ್ನ ಸ್ನೇಹಿತೆ ಅಲ್ವಾ?’ ಎಂದಳು ಜೀನತ್. ‘ಆಗಿದ್ಲು ಆದ್ರೆ ಈಗಲ್ಲ. ಅವಳಿಗೆ ಈಗ ಒಳ್ಳೆ ಬಟ್ಟೆ ಉಗುರು ಬಣ್ಣ ಕಿವಿಗೆ ಓಲೆ ಮುಡಿಲಿಕ್ಕೆ ಹೂವು ಎಲ್ಲಾ ಸಿಕ್ಕಿದೆಯಲ್ಲಾ ಅದಕ್ಕೆ ನಮ್ಮನ್ನೆಲ್ಲಾ ಒಂಥರಾ ನೋಡ್ತಾಳೆ’ ಎಂದಳು. ಜೀನತ್ ನಕ್ಕು ‘ಒಂಥರಾ ಎಂದರೆ’ ಎಂದಳು ತಿಳಿ ಹಾಸ್ಯದಲ್ಲಿ. ಚಿಟ್ಟಿಗೆ ಸಹನೆ ಮುಗಿಯುತ್ತಾ ಬಂದಿತ್ತು ‘ಒಂಥರಾ ಅಂದರೆ ನಾವೆಲ್ಲಾ ಕಡಿಮೆ ತಾನೇ ಜಾಸ್ತಿ ಅನ್ನೋ ಹಾಗೆ ಹೋಗ್ಲಿ ಬಿಡಿ ಇದನ್ನ ಹೊಲೆದುಕೊಟ್ಟುಬಿಡಿ’ ಎನ್ನುತ್ತಾ ಅಂಗಿಯನ್ನು ಮುಂದಕ್ಕೆ ನೂಕಿದಳು. ತೆಗೆದುಕೊಳ್ಳಲು ಚಾಚಿದ ಜೀನತ್ ‘ಹಾ’ ಎಂದು ಸ್ಟೂಲಿನಿಂದ ನೆಲಕ್ಕೆ ಬಿದ್ದಳು. ಏನಾಗುತ್ತಿದೆ ಚಿಟ್ಟಿಗೆ ಗೊತ್ತಾಗಲಿಲ್ಲ. ‘ಅಕ್ಕಾ’ ಎನ್ನುತ್ತಾ ಅವಳನ್ನು ಮೇಲೆತ್ತಲಿಕ್ಕೆ ನೋಡಿದಳು. ಅವಳ ಎಳೆಯ ಕೈಗಳಿಗೆ ಅಷ್ಟು ಬಲ ಇರಲಿಲ್ಲ. ಜೀನತ್ತಳ ಕಾಲಿನಿಂದ ಕೆಂಪುಮಿಶ್ರಿತ ನೀರು ಹರಿಯತೊಡಗಿತು.
ಹೊಟ್ಟೆಯನ್ನು ಹಿಡಿದುಕೊಂಡು ಕಷ್ಟಪಟ್ಟು ನೋವು ತಿನ್ನುತ್ತಾ ‘ಇನ್ನು ಸ್ವಲ್ಪ ಹೊತ್ತಿಗೆ ಮಗು ಹುಟ್ಟುತ್ತದೆ. ನಾನೇನಾಗ್ತೀನೋ ಗೊತ್ತಿಲ್ಲ. ಬೇಗ ತನ್ನ ಗಂಡನನ್ನು ಕರೆದು ಬಾ’ ಎಂದು ಚಿಟ್ಟಿಯನ್ನು ಕೇಳಿಕೊಂಡಳು. ಬಟ್ಟೆ ಹೊಲಿಸಿಕೊಳ್ಳಲು ಬಂದು ಇದೇನೋ ಆಗ್ತಾ ಇದ್ಯಲ್ಲ ಇವತ್ತು ಆಗಿಲ್ಲ ಅಂದ್ರೆ ಭಾರತಿ ನನ್ನನ್ನು ಬಿಟ್ಟಾಳೆಯೇ? ಎಂದು ಯೋಚಿಸಿದಳು. ಜೀನತ್ಳ ಆಕ್ರಂದ ಜಾಸ್ತಿ ಆಗುತ್ತಿದ್ದಂತೆ ತನ್ನ ಕೈಲಿರುವ ಭಾರತಿಯ ಅಂಗಿಯನ್ನು ಎಲ್ಲಿಡಲಿ ಎಂದು ಹುಡುಕಾಡಿದಳು. ಜೀನತ್ ಕಷ್ಟ ಪಡುತ್ತಲೇ ಇದ್ದಳು. ಅವಳನ್ನೇ ನೋಡುತ್ತಾ ಮಗು ಹುಟ್ಟುವಾಗ ಇಷ್ಟೆಲ್ಲಾ ನರಳುತ್ತಾರಾ? ಮಗು ಹೇಗೆ ಹೊರಗೆ ಬರುತ್ತದೆ ಹೊಟ್ಟೆಯನ್ನು ಸೀಳಿಕೊಂಡಾ? ಆಗ ಹೊಟ್ಟೆಯಿಂದ ರಕ್ತ ಬರುತ್ತದಾ? ಆಮೇಲೆ ಹೊಟ್ಟೆಯನ್ನು ಸರಿ ಮಾಡುವವರು ಯಾರು? ಹೊಟ್ಟೆಯನ್ನು ಸೀಳಿಕೊಂಡು ಬರುವ ರಕ್ಷಸ ಕಂದಮ್ಮಗಳು ಭೂಮಿಗೆ ಬಂದ ತಕ್ಷಣ ಅಯ್ಯೋ ಅನ್ನುವ ಹಾಗೇ ಇರುವುದಾದರೂ ಹೇಗೆ? ಎಲ್ಲರೂ ಮದುವೆ ಆಗುವುದು ಮಕ್ಕಳಾಗುವುದು ಸಹಜ ಎನ್ನುವ ಹಾಗೇ ಮಾತಾಡುತ್ತಾರಲ್ಲವೇ? ಈಗ ನೋಡಿದರೆ ಜೀನತ್ ಅಕ್ಕ ತನ್ನ ಜೀವ ಹೋಗ್ತಾ ಇದೆ ಎನ್ನುವ ಹಾಗೇ ಮಾತಾಡ್ತಾ ಇದ್ದಾಳಲ್ಲ?! ಚಿಟ್ಟಿಗೆ ಗಾಬರಿ ಈಗ ಬಂದೆ ಎನ್ನುತ್ತಾ ಅದ್ದುವನ್ನು ಕರೆದುಕೊಂಡು ಬರಲು ಅಲ್ಲಿಂದ ಓಡಿದಳು.
(ಮುಂದುವರೆಯುವುದು…)
 

‍ಲೇಖಕರು G

October 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: