‘Suicidal ಆಗಿ ಕಾಣಿಸುವುದು ಹೇಗೆ?’`

 

 

ಅಕ್ಟೋಬರ್ ೧೦ ಮಾನಸಿಕ ಸ್ವಾಸ್ತ್ಯ ದಿನ. ಅದರ ಅಂಗವಾಗಿ ಈ ಲೇಖನ

 

ಮ್ಲಾನ ಮನಗಳೊಂದಿಗೆ ಒಂದಿಷ್ಟು ಹೊತ್ತು…

ಪ್ರಸಾದ್ ನಾಯ್ಕ್

 

 

 

‘Suicidal ಆಗಿ ಕಾಣಿಸುವುದು ಹೇಗೆ?’

ಕೀನ್ಯಾದ ಗೆಳತಿ ಸೆರಾ ಹೊಸ ಪ್ರಶ್ನೆಯೊಂದನ್ನು ನನ್ನ ಬಳಿ ಎತ್ತಿದ್ದಳು.

ಆಕೆ ನನಗೆ ಕಳಿಸಿದ್ದ ಲೇಖನವನ್ನು ಇನ್ನೇನು ಓದಬೇಕು ಎಂದಾಗ ಅದರಲ್ಲಿ ಫ್ಯಾಷನೇಬಲ್ ಎನ್ನಬಹುದಾದ ತರುಣಿಯೊಬ್ಬಳ ಸುಂದರ ಚಿತ್ರವೊಂದು ನನ್ನ ಕಣ್ಸೆಳೆದಿತ್ತು. ಅಂದಹಾಗೆ ಆ ಚಿತ್ರವು ಮತ್ಯಾವುದ್ದರದ್ದೋ ಅಲ್ಲದೆ ಅದೂ ಕೂಡ ಲೇಖನದ ಭಾಗವೇ ಆಗಿತ್ತು! ನನ್ನ ಸ್ಮಾರ್ಟ್‍ಫೋನಿನಲ್ಲಿ ಇದನ್ನು ನೋಡುತ್ತಿದ್ದ ನಾನು ಬೆರಳ ತುದಿಯಿಂದ ಸ್ಕ್ರೋಲ್ ಡೌನ್ ಮಾಡುತ್ತಾ ಮತ್ತಷ್ಟು ಕೆಳಕ್ಕೆ ಜಾರಿದೆ. ಅಲ್ಲಿ ಮತ್ತೊಂದು ಸುಂದರ ಚಿತ್ರ. ಮುದ್ದು ಮಗುವಿನದ್ದು. ಆಹಾ ಎಂದು ಖುಷಿಯಾಗುತ್ತಾ ಓದುವ ಕೆಲಸವನ್ನು ಮುಂದೂಡಿ ಚಿತ್ರಗಳಿಗಾಗಿ ಮತ್ತೆ ಕೆಳಕ್ಕೆ ಬಂದರೆ ಈ ಬಾರಿ ಸುಖೀಕುಟುಂಬದ್ದೊಂದು ಚಿತ್ರ. ಮತ್ತೂ ಮುಂದಕ್ಕೆ ಹೋದರೆ ಉಲ್ಲಾಸದಿಂದ ಕ್ಯಾಮೆರಾದೆದುರು ಪೋಸ್ ಕೊಡುತ್ತಿದ್ದ ಒಂದು ಯುವ ಜೋಡಿ, ಅಮ್ಮ-ಮಗು… ಹೀಗೆ ಹತ್ತು ಹಲವರು.

ಅವುಗಳು pout, ಫೋಟೋಶಾಪ್, ಎಡಿಟಿಂಗ್ ಗಳಂತಹ ಕೃತಕಾಲಂಕಾರಗಳಿಂದ ದೂರವಿದ್ದ ನಿಜಕ್ಕೂ ಸುಂದರ ಚಿತ್ರಗಳಾಗಿದ್ದವು. ಆದರೆ ತಕ್ಷಣ ನಾನು ಆಘಾತಕ್ಕೊಳಗಾಗಿದ್ದು ಈ ಚಿತ್ರಗಳಿಗೆ ನೀಡಲಾಗಿದ್ದ ಅಡಿಬರಹವನ್ನು ಗಮನಿಸಿದಾಗ. `ಇದು ನನ್ನ ಬಾಯ್-ಫ್ರೆಂಡ್ ಆತ್ಮಹತ್ಯೆ ಮಾಡಿಕೊಳ್ಳುವ ಎರಡು ವಾರಗಳ ಹಿಂದಿನ ನಮ್ಮ ಫೋಟೋ’, `ನಾನು ಆತ್ಮಹತ್ಯೆಗೆ ಮೂರನೇ ಬಾರಿ ಪ್ರಯತ್ನಿಸಿದ ದಿನದ ಏಳು ತಾಸಿನ ಹಿಂದೆ ತೆಗೆದ ನನ್ನ ಚಿತ್ರ’ `ನೇಣುಹಾಕಿಕೊಳ್ಳುವುದು ಹೇಗೆ ಎಂಬುದನ್ನು ಇಂಟರ್ನೆಟ್ಟಿನಲ್ಲಿ ನೋಡಿ ಅಂತೆಯೇ ಮಾಡಿದ ನನ್ನ ಹರೆಯದ ಮಗನ ಚಿತ್ರ, ಸತ್ತ ಎರಡು ದಿನ ಹಿಂದಿನದ್ದು..’

‘… ಹೀಗೆ ಜೀವನಪ್ರೀತಿಯೇ ಮೈವೆತ್ತಂತಿದ್ದ ಈ ಜನಸಾಮಾನ್ಯರ ಚಿತ್ರಗಳಿಗೆ ಎಂಥೆಂಥಾ ಅಡಿಬರಹಗಳು! `ಹ್ಯಾಪೀ ಫ್ಯಾಮಿಲಿ’ಯ ಜಾಹೀರಾತುಗಳಲ್ಲಿ ನಗೆಬೀರುವ ಸುಖೀ ಕುಟುಂಬದಂತಿದ್ದ ಒಂದು ಕುಟುಂಬ, ರೊಮ್ಯಾಂಟಿಕ್ ಚಿತ್ರಗಳ ನಟನಟಿಯರನ್ನು ಮೀರಿಸುವಂತೆ ಕಾಣುತ್ತಿದ್ದ ಯುವಜೋಡಿ, `ರೆಕ್ಸೋನಾ ಮಮ್ಮಿ’ ಥರಾ ಮಗುವಿನೊಂದಿಗೆ ಚೆಂದನೆಯ ಪೋಸ್ ಕೊಡುತ್ತಿದ್ದ ತರುಣಿ ಅಮ್ಮ… ಒಂದೋ ಆ ಚಿತ್ರಗಳು ನನಗೆ ಸುಳ್ಳು ಹೇಳುತ್ತಿದ್ದವು. ಆಥವಾ ನಾನು ನನ್ನದೇ ಆದ ಮೂರ್ಖ ಊಹೆ, ತರ್ಕಗಳಲ್ಲಿ ಕಳೆದುಹೋಗಿದ್ದೆ. `ಇಂಥವರಿಗೂ ಖಿನ್ನತೆಯೇ!’ ಎಂದು ಲೆಕ್ಕಹಾಕುತ್ತಿದ್ದೆ.

ಅಂತೂ ಸುತ್ತಿ ಬಳಸಿ ನಾನು ಮತ್ತು ಸೆರಾ ಮತ್ತದೇ ಪ್ರಶ್ನೆಗೆ ಮರಳಿದ್ದೆವು: `ಹಾಗಾದರೆ suicidal ಆಗಿ ಕಾಣಿಸುವುದು ಅಂದ್ರೇನು?’

ಅಸಲಿಗೆ ಈ ಪ್ರಶ್ನೆಯನ್ನು ಕೇಳಿದ್ದು ಈ ಚಿತ್ರಗಳಲ್ಲಿದ್ದ ಓರ್ವ ತರುಣಿ. ತನ್ನ ವಿಫಲ ಆತ್ಮಹತ್ಯೆ ಯತ್ನಗಳು ಮತ್ತು ಇತರ ಮನೋಸಂಬಂಧಿ ಸಮಸ್ಯೆಗಳನ್ನು ಮನೋವೈದ್ಯರೊಬ್ಬರೊಂದಿಗೆ ಚರ್ಚಿಸಲು ಹೋದಾಗ ಮೊದಲನೋಟಕ್ಕೇ ಅವರು ಹೀಗಂದುಬಿಟ್ಟರಂತೆ: “ನಿನ್ನನ್ನು ನೋಡಿದರೆ ನೀನು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿರುವೆ ಎಂದು ಗೊತ್ತೇ ಆಗ್ತಿಲ್ಲ”.

ತನ್ನ ತಲ್ಲಣಗಳಿಗೆ ಏನಾದರೊಂದು ಉತ್ತರವು ಸಿಕ್ಕೇ ಸಿಗುತ್ತದೆ ಎಂಬ ಆಶಾಭಾವದೊಂದಿಗೆ ಬಂದಿದ್ದ ಅವಳ ನಿರೀಕ್ಷೆಗೆ ಆತನ ಉಡಾಫೆಯ ಮಾತೊಂದು ಕೊಳ್ಳಿಯಿಟ್ಟಿತ್ತು. `ಇಷ್ಟು ಚೆನ್ನಾಗಿದ್ದೀಯಾ, ನಿನಗೆ ಆತ್ಮಹತ್ಯೆ ಬೇರೆ ಧಾಡಿ’ ಎಂದು ಆತ ಪರೋಕ್ಷವಾಗಿ ಅವಳನ್ನು ಅಣಕಿಸಿದಂತಾಗಿತ್ತು. `ಇವನನ್ನುವುದು ಸರಿ. ಏನಾಗಿದೆ ನನಗೆ? ಬಹುಷಃ ನಿಜಕ್ಕೂ ನನಗೆ ಹುಚ್ಚೇ ಹಿಡಿದುಬಿಟ್ಟಿದೆ. ಛೀ, ನೆಟ್ಟಗೆ ಸಾಯೋದಿಕ್ಕೂ ಕೈಲಾಗದವಳು ನಾನು’, ಎಂಬ ಭಾವವನ್ನು ಅವಳಲ್ಲಿ ಆತ ಹುಟ್ಟಿಸಿದ್ದ.

ಇದು ಆತನದ್ದಷ್ಟೇ ಅಲ್ಲ, ಬಹುತೇಕ ಎಲ್ಲರ ಸಮಸ್ಯೆಯೂ ಹೌದು. ಸಾಮಾನ್ಯವಾಗಿ ವಿಷಯವನ್ನು ಅರಿತುಕೊಳ್ಳುವುದಕ್ಕಿಂತ ಹೆಚ್ಚಿನ ಅವಸರವು ನಮಗೆ ತೀರ್ಪು ಕೊಡುವುದರಲ್ಲಿರುತ್ತದೆ. “ಡಿಪ್ರೆಷನ್ನಾ? ಆದರೆ ನಿನ್ನನ್ನು ನೋಡಿದ್ರೆ ಹಾಗೇನೂ ಅನ್ನಿಸ್ತಿಲ್ಲಲ್ವೇನೇ”, ಅಂದ್ರೇನು ಅರ್ಥ? ಸೂಸೈಡಲ್ ಅನ್ನಿಸಿಕೊಳ್ಳಲು ಒಂದು ಪ್ರತ್ಯೇಕವಾದ ವೇಷಭೂಷಣ ಕೂಡ ಇದೆಯೇ? ಕಣ್ಣುಗಳು ನಿದ್ದೆಯಿಲ್ಲದೆ ಕೆಂಪಗಿರಬೇಕೇ? ಕೂದಲು ಕೆದರಿರಬೇಕೇ? ಅತ್ತು ಅತ್ತು ಮುಖವು ಬಣ್ಣಗೆಟ್ಟಿರಬೇಕೇ? ಕೈಗಳಲ್ಲಿ ರೇಜರ್ ಬ್ಲೇಡಿನಿಂದ ಕುಯ್ದ ಹಳೆಯ ಗೀರುಗಳಿರಬೇಕೇ? ಕಪ್ಪುಕಾಡಿಗೆಯನ್ನು ಸರಿಸಿ ಹೊರಬಂದ ಕಣ್ಣೀರು ಕೆನ್ನೆಯ ಮೇಲೆ ತನ್ನ ಕಲೆಗಳನ್ನು ಮೂಡಿಸಿರಬೇಕೇ? ಕೈಯಲ್ಲೊಂದು ಆತ್ಮಹತ್ಯಾ ಪತ್ರವೋ, ಮಾತ್ರೆಗಳ ಡಬ್ಬಿಯೋ ಇರಬೇಕೇ? ಇವೆಲ್ಲವೂ suicidal ಅನ್ನಿಸಿಕೊಳ್ಳಲು ಗುರುತೇ? ಅಥವಾ ಇವಿಷ್ಟೇ ನೋಡಿದಾಕ್ಷಣ ಈತ/ಈಕೆ suicidal ಮನಸ್ಥಿತಿಯವನು/ಳು ಎಂದು ಲೆಕ್ಕಹಾಕಲು ಇರುವ ಮಾನದಂಡವೇ?

ಮಾನಸಿಕ ವ್ಯಾಧಿಗಳಿಂದ ಬಳಲುತ್ತಿರುವ ಲಕ್ಷಾಂತರ ಮಂದಿ ಇವುಗಳನ್ನೇ ನಮ್ಮೆಲ್ಲರಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕೇಳುತ್ತಿದ್ದಾರೆ. ತನ್ನೊಳಗಿನ ಅರ್ಥವಾಗದ ತಳಮಳಗಳನ್ನೆಲ್ಲಾ ಹೇಗಾದರೂ ಮಾಡಿ ಇವತ್ತು ಹೇಳಿಕೊಂಡು ತನ್ನ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇನೆ ಎಂದು ಕಳೆದ ಆರು ತಿಂಗಳಿನಿಂದ ಪ್ರಯತ್ನಿಸುತ್ತಿರುವ ಆಪ್ತ ಗೆಳತಿ ನಿಮ್ಮ ಯಾವುದೋ ಒಂದು ಉಡಾಫೆಯ ಮಾತಿನಿಂದಾಗಿ ಕ್ಷಣಾರ್ಧದಲ್ಲಿ ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳುತ್ತಾಳೆ. ಯೋಚಿಸಿದಂತೆಯೇನೂ ಆಗಲಿಲ್ಲ, ಇನ್ಯಾರಲ್ಲಿ ಹೇಳಿಕೊಳ್ಳಲಿ ಎಂದು ಒಳಗೊಳಗೇ ಮತ್ತಷ್ಟು ನರಳುತ್ತಾಳೆ. ನಾನಿವೆಲ್ಲವನ್ನೂ ಹೇಳಿಕೊಂಡರೆ ನನ್ನ ಆಪ್ತನು ಭಯಪಟ್ಟು ದೂರ ಸರಿದರೆ? ನನ್ನನ್ನು ವ್ಯಂಗ್ಯಕ್ಕೀಡುಮಾಡಿದರೆ? ನಾನೊಬ್ಬ ಅಪಾಯಕಾರಿ ಸೈಕೋಪಾತ್ ಎಂದು ಲೆಕ್ಕಹಾಕಿದರೆ? ಹೀಗೆ ಮುಗಿಯದ ಪ್ರಶ್ನೆಗಳೊಂದಿಗೆ ಸಮಸ್ಯೆಯು ಅಲ್ಲೇ ಉಳಿದು ಮತ್ತಷ್ಟು ಸಂಕೀರ್ಣವಾಗುತ್ತದೆ. ಹೊರಬರಲಾಗದ ವಿಚಿತ್ರ ಚಕ್ರವ್ಯೂಹದಲ್ಲಿ ತಿಂಗಳಾನುಗಟ್ಟಲೆ ವರ್ಷಗಟ್ಟಲೆ ನಲುಗಿ ಮುಕ್ತಿಯನ್ನು ಪಡೆಯಲು ಬಯಸುತ್ತದೆ. ಅವಶ್ಯಕ ನೆರವು ಸಿಕ್ಕದೇ ಹೋದಲ್ಲಿ ಇನ್ನು ನನ್ನ ಕೈಯಿಂದಾಗೋಲ್ಲ ಎಂಬ ಒಂದು ತೀರಾ ಅಸಹಾಯಕ ಕ್ಷಣದಲ್ಲಿ ಎಲ್ಲವನ್ನೂ ಮರೆತು ಆತ್ಮಹತ್ಯೆಗೆ ಶರಣಾಗಿಬಿಡುತ್ತದೆ.

ವಸ್ತುಗಳಿಗೆ `Handle with care’ ಎಂಬ ಲೇಬಲ್ ಹಚ್ಚಿ ಬೀಗುವ ನಾವು ನಮ್ಮ ಸುತ್ತಮುತ್ತಲಿನವರೊಂದಿಗೆ ಅಷ್ಟೇ ಕಾಳಜಿಯಿಂದ ಏಕೆ ಬೆರೆಯುತ್ತಿಲ್ಲ? ನಿಜಕ್ಕೂ ಚಿಂತನಾರ್ಹ ವಿಷಯವಿದು!

“ಯಾರನ್ನಾದರೂ ಸಂತೈಸುವ ಸಂದರ್ಭದಲ್ಲಿ `ನಿನ್ನ ಸಂಕಟ ನನಗೆ ಅರ್ಥವಾಗುತ್ತಿದೆ’ ಎಂದು ನೀವು ಯಾರಲ್ಲಾದರೂ ಹೇಳಿದ್ದುಂಟೇ? ಹೀಗೆ ನಿಮಿಷಕ್ಕೊಮ್ಮೆ ನೀವು ಹೇಳುವವರೇ ಆಗಿದ್ದರೆ ತಕ್ಷಣ ಈ ಅಭ್ಯಾಸವನ್ನು ನಿಲ್ಲಿಸಿಬಿಡಿ. ಏಕೆಂದರೆ ನಿಮ್ಮೆದುರಿಗಿರುವ ವ್ಯಕ್ತಿ ಅದೆಷ್ಟು ದುಃಖದಲ್ಲಿ ಮುಳುಗಿದ್ದಾನೆ ಎಂಬ ಬಗ್ಗೆ ನಿಮ್ಮಾಣೆಗೂ ನಿಮಗೆ ಗೊತ್ತಿಲ್ಲ…”

ಮಾನಸಿಕ ಆರೋಗ್ಯ, ಸಂವಹನ ಕಲೆ, ಮನೋವಿಜ್ಞಾನ… ಹೀಗೆ ಹತ್ತುಹಲವೆಡೆ ಜೊತೆಜೊತೆಗೇ ಕೈಯಾಡಿಸುತ್ತಾ ಮೊದಲೇ ಗೊಂದಲದಲ್ಲಿದ್ದ ನನಗೆ ಇದನ್ನು ಓದಿ ಮತ್ತೊಮ್ಮೆ ಆಘಾತ! ಆದರೆ ಈ ವಿಷಯದ ಮತ್ತಷ್ಟು ಆಳಕ್ಕಿಳಿದ ನನಗೆ ಇದರಲ್ಲಿ ಸತ್ಯಾಂಶವು ಕಂಡಿದ್ದಂತೂ ಹೌದು. ಅಷ್ಟಕ್ಕೂ ಇಂತಹ ಸಂಭಾಷಣೆಗಳಲ್ಲಿ ಆಗುವುದೇನೆಂದರೆ ನಾವು ನಮಗರಿವಿಲ್ಲದಂತೆಯೇ ಸಂಭಾಷಣೆಯ ಕೇಂದ್ರಬಿಂದುವನ್ನು ದುಃಖಿತ ವ್ಯಕ್ತಿಯಿಂದ ನಮ್ಮತ್ತ ತಿರುಗಿಸಿರುತ್ತೇವೆ. ನಮ್ಮ ಜೊತೆಗಿದ್ದ ವ್ಯಕ್ತಿ ತಮ್ಮ ಕಷ್ಟಗಳ ಬಗ್ಗೆ ಹೇಳುತ್ತಾ ಹೋಗುತ್ತಿದ್ದರೆ, ನಾವು ಮಧ್ಯದಲ್ಲೇ ತುಂಡರಿಸಿ “ಹೌದ್ಹೌದು, ನನಗೂ ಅರ್ಥವಾಗುತ್ತದೆ. ಇದೆಲ್ಲಾ ನನ್ನ ಜೊತೆಯೂ ಆಗಿತ್ತು…” ಅಂತೆಲ್ಲಾ ಹೇಳುತ್ತಾ ನಮ್ಮದೇ ಕತೆಯನ್ನು ಶುರುಹಚ್ಚಿಬಿಡುತ್ತೇವೆ. ಸದ್ಯ ದುಃಖದಲ್ಲಿರುವ ವ್ಯಕ್ತಿಗೆ ಸಿಗಬೇಕಿರುವ ಸಂಪೂರ್ಣ ಗಮನವನ್ನು ತಮ್ಮತ್ತ ಸೆಳೆಯಲು ನಾವು ನಮಗರಿವಿಲ್ಲಂತೆಯೇ ಮುಂದಾಗಿರುತ್ತೇವೆ.

ಅಷ್ಟಕ್ಕೂ ಇದ್ಯಾಕಾಗುತ್ತೆ ಎಂದರೆ ನಾವು ಎದುರಿಗಿದ್ದವನ ದುಃಖವನ್ನು ತಮ್ಮದೇ ದೃಷ್ಟಿಕೋನಗಳು, ಅನುಭವಗಳು, ನೆನಪುಗಳು ಇತ್ಯಾದಿ ಮಾನಸಿಕ ಸಿದ್ಧಮಾದರಿಗಳೊಂದಿಗೆ ತಾಳೆ ಮಾಡಿ ಕ್ಷಣಾರ್ಧದಲ್ಲಿ ತೀರ್ಪುಕೊಡುವುದಕ್ಕೆ ತಯಾರಾಗಿಬಿಡುತ್ತೇವೆ. ಇನ್ನು ನಮ್ಮ ಆ ಕ್ಷಣದ ಮೂಡ್ (ಮನಸ್ಥಿತಿ) ಗಳೂ ಕೂಡ ಇವುಗಳಿಗೆ ಮತ್ತಷ್ಟು ಇಂಬನ್ನು ಕೊಡುತ್ತವೆ. ಹೀಗಾಗಿ ಜೊತೆಗಿದ್ದ ವ್ಯಕ್ತಿಯೊಬ್ಬನ ದುಃಖದ ವಿವರಣೆಗಳು ನಮಗೆ ತಟ್ಟಬೇಕಾದಷ್ಟು ತೀವ್ರತೆಯಲ್ಲಿ ತಟ್ಟದೇ ಹೋಗಬಹುದು. ಉದಾಹರಣೆಗೆ ಸನ್ನಿವೇಶವೊಂದನ್ನು ಕಲ್ಪಿಸಿಕೊಳ್ಳೋಣ. ಅಂದು ನಿಮ್ಮ ದಿನವಿಡೀ ಪಿಕ್ನಿಕ್, ಊಟ, ತಿರುಗಾಟಗಳಲ್ಲಿ ಚೆನ್ನಾಗಿ ಕಳೆದಿರುತ್ತದೆ. ಆದರೆ ಸಂಜೆ ಗೆಳತಿಯೊಬ್ಬಳು ಬಂದು ನನ್ನ ಬಾಯ್ ಫ್ರೆಂಡ್ ನನಗೆ ಕೈಕೊಟ್ಟುಬಿಟ್ಟ ಎಂದು ಭೋರೆಂದು ಅಳತೊಡಗುತ್ತಾಳೆ. ನೀವು ಸದ್ಯ ನಿಮ್ಮ ಮೋಜಿನ ಮನಸ್ಥಿತಿಯಲ್ಲೇ ಇರುವುದರಿಂದ `ಛೇ, ಇವಳದ್ದೆಂಥದ್ದು ವೃಥಾ ಗೋಳು’ ಎಂದು ಒಳಗೊಳಗೇ ಒಮ್ಮೆಯಾದರೂ ಯೋಚಿಸುತ್ತೀರಿ.

ಕೊನೆಗೆ ಏನಾದರೂ ಹೇಳಬೇಕಲ್ಲಾ ಎಂಬ ಮುಲಾಜಿಗೆ ಬಿದ್ದು, “ಇವೆಲ್ಲಾ ಇದ್ದಿದ್ದೇ ಮಾರಾಯ್ತೀ, ನಿನ್ನ ಸಂಕಟ ನನಗರ್ಥವಾಗುತ್ತೆ. ನನಗೂ break-up ಆದಾಗ ಹೀಗೇ ಆಗಿತ್ತು. ಸ್ವಲ್ಪ ದಿನ ಹಾಯಾಗಿರು. ಸಮಯ ಕಳೆದಂತೆ ಸರಿಹೋಗುತ್ತೆ ಬಿಡು”, ಎಂದು ಹೇಳಿ ಎದ್ದುಹೋಗುತ್ತೀರಿ. ಅಥವಾ ನಿಮ್ಮ break-up ದಿನಗಳು ನಿಮ್ಮ ಗೆಳತಿಗಿಂತ ಎಷ್ಟು ಪಟ್ಟು ಹೆಚ್ಚು ದುಃಖದ್ದಾಗಿದ್ದವು ಮತ್ತು ಅವುಗಳಿಂದ ಹೇಗೆ ಹೊರಬಂದಿರಿ ಎಂದು ಅವಳಿಗೆ ಒಂದೂವರೆ ತಾಸು ಭಾಷಣ ಕೊಡುತ್ತೀರಿ (ಅದನ್ನು ಕೇಳಿಸಿಕೊಳ್ಳಲು ಆಕೆಗೆ ನಿಜಕ್ಕೂ ತಾಳ್ಮೆ, ಆಸಕ್ತಿಗಳು ಇವೆಯೇ ಅನ್ನುವುದು ಬೇರೆ ಪ್ರಶ್ನೆ). ಅಂತೂ ದುಃಖದಲ್ಲಿರುವ ಗೆಳತಿಯನ್ನು ಸಂತೈಸಿದೆ ಎಂಬ ಭಾವವು ಕೊನೆಗೆ ನಿಮ್ಮಲ್ಲಿ ಮೂಡಿ ತಕ್ಷಣ ಧನ್ಯತಾಭಾವವೊಂದು ಆವರಿಸಿಕೊಳ್ಳುತ್ತದೆ. ಆ ರಾತ್ರಿಯ ನಿದ್ದೆ ಬಲುನಿರಾಳ. ಕನಸಿನಲ್ಲಿ ಮತ್ತದೇ ಪಿಕ್ನಿಕ್, ಸಿನೆಮಾ, ತಿರುಗಾಟಗಳ ಮರುಪ್ರಸಾರ.

ಮ್ಯಾಕ್ಸ್ ಪ್ಲಾಂಕ್ ಗೆಸೆಲ್ಶಾಫ್ಟ್ ಸಂಸ್ಥೆಯ `ಮಾನವ ಅರಿವು ಮೆದುಳು ವಿಜ್ಞಾನ’ ವಿಭಾಗದಲ್ಲಿ ವಿಜ್ಞಾನಿಯಾಗಿದ್ದ ಡಾ. ತಾನಿಯಾ ಸಿಂಗರ್ ರ ನೇತೃತ್ವದಲ್ಲಿ ಪ್ರಯೋಗವೊಂದು ನಡೆದಿತ್ತಂತೆ. ಈ ಪ್ರಯೋಗದಲ್ಲಿ ಭಾಗವಹಿಸಿದ್ದ ಇಬ್ಬರನ್ನು ಪ್ರತ್ಯೇಕವಾಗಿ ಕುಳ್ಳಿರಿಸಿ ದೃಶ್ಯವೊಂದನ್ನು ತೋರಿಸಲಾಯಿತು. ಮೊದಲನೇ ದೃಶ್ಯದಲ್ಲಿದ್ದಿದ್ದು ಒಂದು ಮುದ್ದು ನಾಯಿಮರಿ. ಎರಡನೇ ದೃಶ್ಯದಲ್ಲಿದ್ದಿದ್ದು ಮೃತದೇಹಗಳಲ್ಲಿ ಜಮೆಯಾಗುವ ಕೀಟಗಳು. ನಾಯಿಮರಿಯನ್ನು ನೋಡಿದಾಗ ಅದರ ಮೃದುವಾದ ರೋಮಗಳು ಮೈಯೆಲ್ಲಾ ಸವರಿದಂತೆ ಭಾಸವಾದರೆ, ಹುಳುಗಳನ್ನು ಕಂಡಾಗ ಹುಳುಗಳು ಮೈಮೇಲೆ ಹರಿದಂತೆ ಹೇವರಿಕೆಯ ಭಾವನೆಯನ್ನು ಮೂಡುವಂತೆ ದೃಶ್ಯಗಳನ್ನು ಸಿದ್ಧಪಡಿಸಲಾಗಿತ್ತು. ಏಕೆಂದರೆ ತೀರಾ ಸಾಮಾನ್ಯ ದೃಶ್ಯಗಳನ್ನಷ್ಟೇ ಇಟ್ಟಿದ್ದರೆ ಅದನ್ನು ಬುದ್ಧಿಯ ಮಟ್ಟದಲ್ಲಷ್ಟೇ ನೋಡಿ ಮರೆತುಬಿಡುವ ಸಾಧ್ಯತೆಗಳು ಹೆಚ್ಚು. ಆದರೆ ದೃಶ್ಯವೊಂದು ಸ್ಪರ್ಶಭಾವವನ್ನೂ ಮೂಡಿಸಿದ್ದೇ ಆದರೆ ಹೆಚ್ಚಿನ ಪರಿಣಾಮಗಳನ್ನು ಮೆದುಳಿನಲ್ಲಿ ಮೂಡಿಸಬಹುದು ಎಂಬ ಲೆಕ್ಕಾಚಾರ ಈ ತಜ್ಞರದ್ದು. ಮುಂದೆ ದೃಶ್ಯಗಳನ್ನು ನೋಡಿದ ನಂತರ ಈ ಇಬ್ಬರೂ ಕೂಡ ತಮ್ಮ ತಮ್ಮ ಅನುಭವಗಳನ್ನು ಪರಸ್ಪರರಲ್ಲಿ ಹೇಳಿಕೊಂಡು ಭಾವನೆಗಳ ತೀವ್ರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು.

ಹೀಗೆ ಅನುಭವಗಳನ್ನು ಹೇಳಿಕೊಳ್ಳುವ ಹಂತದಲ್ಲಿ ತಜ್ಞರಿಗೆ ಸಿಕ್ಕ ಅಂಶಗಳು ನಿಜಕ್ಕೂ ಸ್ವಾರಸ್ಯಕರವಾದವುಗಳು. ಒಂದೇ ದೃಶ್ಯಗಳನ್ನು (ಪ್ರತ್ಯೇಕವಾಗಿ) ಕಂಡು ಸ್ಪರ್ಧಿಗಳು ಪರಸ್ಪರ ಮಾತನಾಡತೊಡಗಿದಾಗ ಇಬ್ಬರೂ ಮತ್ತೊಬ್ಬರ ಸುಖದುಃಖಗಳನ್ನು ಬಹುತೇಕ ಏಕರೂಪದಲ್ಲಿ ಸ್ವೀಕರಿಸಿದ್ದರು. ನಾಯಿಮರಿಯ ಸ್ಪರ್ಶದಲ್ಲಿರುವ ಹಾಯೆನಿಸುವಿಕೆ ಮತ್ತು ಹುಳುಗಳ ಸ್ಪರ್ಶದಿಂದಾಗುವ ಕಿರಿಕಿರಿಗಳು ಇಬ್ಬರಲ್ಲೂ ಒಂದೇ ರೂಪದಲ್ಲಿತ್ತು. ಆದರೆ ಬದಲಾವಣೆಗಳು ಕಾಣಬಂದಿದ್ದು ಇಬ್ಬರೂ ಬೇರೆ ಬೇರೆ ದೃಶ್ಯಗಳನ್ನು ನೋಡಿ ಬಂದು ಪರಸ್ಪರ ಮಾತುಕತೆಗೆ ಕುಳಿತುಕೊಂಡಾಗ. ಈ ಬಾರಿ ಹುಳುಗಳ ದೃಶ್ಯವನ್ನು ಕಂಡು ಮುಖ ಕಿವುಚಿದ್ದ ವ್ಯಕ್ತಿಯ ಅನುಭವಗಳು ತಟ್ಟಬೇಕಾದಷ್ಟು ತೀವ್ರತೆಯಲ್ಲಿ ನಾಯಿಮರಿಯ ದೃಶ್ಯವನ್ನು ಕಂಡು ಖುಷಿಯಾಗಿದ್ದ ವ್ಯಕ್ತಿಗೆ ದಕ್ಕಿರಲಿಲ್ಲ. ಅಂತೆಯೇ ನಾಯಿಮರಿಯ ದೃಶ್ಯವನ್ನು ಕಂಡು ಖುಷಿಯಾಗಿದ್ದ ವ್ಯಕ್ತಿಯ ಸಂತಸದ ಪೂರ್ಣ ಅನುಭೂತಿಯು ಹುಳುಗಳನ್ನು ಕಂಡು ಹೇವರಿಕೆಯಲ್ಲಿದ್ದ ವ್ಯಕ್ತಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ. ನಮ್ಮದೇ ಭಾವನೆಗಳು ಮತ್ತು ಮನಸ್ಥಿತಿಗಳು ನಮ್ಮ ಸಹಾನುಭೂತಿಯ ಮಟ್ಟದಲ್ಲಿ ದೊಡ್ಡ ಮಟ್ಟಿನ ವ್ಯತ್ಯಾಸವನ್ನು ತರಬಹುದು ಎಂಬುದನ್ನು ಈ ಪ್ರಯೋಗವು ಪ್ರಮಾಣಿಸಿ ತೋರಿಸಿತ್ತು. ಅಲ್ಲದೆ ನಮ್ಮ ಸ್ವಂತದ ಭಾವನೆಗಳನ್ನು ಇತರರ ಭಾವನೆಗಳಿಂದ ಪ್ರತ್ಯೇಕಿಸುವ `ಸುಪ್ರಾಮಾರ್ಜಿನಲ್ ಗೈರಸ್’ ಎಂಬ ಹೆಸರಿನ ಮೆದುಳಿನ ಪುಟ್ಟ ಭಾಗವು ಇದರ ಹಿಂದಿದೆ ಎಂಬುದನ್ನೂ ತಜ್ಞರು ಗುರುತಿಸಿದ್ದರು.

ಇತರರ ದುಃಖವನ್ನು ನಿಮ್ಮ ದುಃಖದೊಂದಿಗೆ, ಅನುಭವಗಳೊಂದಿಗೆ ಹೋಲಿಸಿ ಯಾವತ್ತೂ ನೋಡಬೇಡಿ. ಏಕೆಂದರೆ ಪ್ರತೀ ಅನುಭವಗಳು ಕೂಡ ತೀರಾ ವೈಯಕ್ತಿಕವಾದವುಗಳು ಎನ್ನುತ್ತಾರೆ ಮನೋವಿಜ್ಞಾನಿಗಳು. ಹೀಗಾಗಿ ಇಂತಹ ಆಪ್ತ ಸಂಭಾಷಣೆಗಳಲ್ಲಿ ತಮ್ಮನ್ನು ತಾವು ಕೇಂದ್ರಬಿಂದುವಾಗಿಸುವ ಮುನ್ನ, ಅವಸರದ ತೀರ್ಪುಗಳಿಗೆ ಬರುವ ಮುನ್ನ ತಾಳ್ಮೆಯಿಂದ ಈ ದನಿಗಳಿಗೆ ಕಿವಿಯಾಗುವುದು ಮುಖ್ಯವಾಗುತ್ತದೆ. ಅದೇನೇ ಆದರೂ ನಾನು ನಿನ್ನೊಂದಿಗಿದ್ದೇನೆ ಎಂಬ ಭಾವವನ್ನು ಈ ಅಸಹಾಯಕ ಮನಸ್ಸುಗಳಲ್ಲಿ ಮೂಡಿಸುವುದು ತಕ್ಷಣದ ಅಗತ್ಯವಾಗಿರುತ್ತದೆ. ಸಂಭಾಷಣೆಯೆಂದರೆ ಕೇವಲ ಮಾತನಾಡುವುದಷ್ಟೇ ಅಲ್ಲ, ಕೇಳಿಸಿಕೊಳ್ಳುವುದೂ ಕೂಡ ಎಂಬುದನ್ನು ನಾವಿಂದು ತಿಳಿದುಕೊಳ್ಳಬೇಕಿದೆ. ಈ ಕೇಳುವಿಕೆಯೆಂಬ ಕ್ರಿಯೆಯನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರಷ್ಟೇ ಸಂಭಾಷಣೆಗಳಿಗೊಂದು ಅರ್ಥ ಬರಬಲ್ಲದು.

ಮಡಿಮೈಲಿಗೆಗಳನ್ನು ತೊರೆದು ಮಾನಸಿಕ ಆರೋಗ್ಯದ ಬಗ್ಗೆ ನಮ್ಮಲ್ಲಿಂದು ಮುಕ್ತ ಚರ್ಚೆಗಳು ನಡೆಯಬೇಕಿವೆ. ವಿವಿಧ ಹಂತಗಳಲ್ಲಿ ಜನಜಾಗೃತಿಗಳು ಆಗಬೇಕಿವೆ. ಇನ್ನಾದರೂ “ನೋಡೋಕೆ ಗುಂಡುಕಲ್ಲಿದ್ದಂಗಿದೀಯಾ… ನಿನಗೇನು ಮಣ್ಣಾಂಗಟ್ಟಿ ಡಿಪ್ರೆಷನ್?” ಅಂತಲೋ “ನನಗರ್ಥವಾಗುತ್ತೆ ಬಿಡು, ಎರಡು ಪೆಗ್ ಇಳಿಸಿದ್ರೆ ಸರಿಹೋಗುತ್ತೆ” ಎಂದೋ ಪೊಳ್ಳು ಭರವಸೆಯನ್ನು ನೀಡುವ ಮುನ್ನ ಮತ್ತೊಮ್ಮೆ ಯೋಚಿಸೋಣ. ಮನೋರೋಗಗಳಿಂದ ಬಳಲುತ್ತಿರುವವರಿಗೆ ನಾವು ನೆರವಾಗುವಷ್ಟು ಶಕ್ತರಾಗದಿದ್ದರೂ ಅವರಲ್ಲಿ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಭರವಸೆಯ ಕಿರಣಗಳನ್ನೂ ಕಸಿಯುವ ಚೇಷ್ಟೆಗಳನ್ನು ಮಾಡದಿರೋಣ.

ಮಾತುಗಳು ತೂಕವಿಲ್ಲದ ವ್ಯರ್ಥ ಶಬ್ದಗಳ ತುಣುಕಿನಂತೆ ಬಿದ್ದುಹೋದರೆ ಕಷ್ಟ!

‍ಲೇಖಕರು avadhi

October 11, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. gurumurthy

    lekhana interesting aagiddu padagala thooka uthamavagide. its very easiest to convey the matter.

    ಪ್ರತಿಕ್ರಿಯೆ
  2. G Narayana

    excellent analysis of a tormented mind. My best friend who committed suicide at age 30 did not leave any reason for such action. Now I understand that instead of understanding his problems we friends used to criticise his actions. May be if we had this insight then, he would be alive today. Let us understand Communication includes listening intently. Thanks for this wonderful article Mr Prasad Naik. I am sharing this article with my friiends, with your permission

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: