ನಾ ದಿವಾಕರ
ಮಹಿಳೆಯನ್ನು ಭೋಗದ ವಸ್ತುವಿನಂತೆ ನೋಡುವುದು ಪುರುಷ ಪ್ರಧಾನ ಸಮಾಜ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ಸಾರ್ವತ್ರಿಕ ಗುಣ. ಏಕೆ ಹೀಗೆ ಎಂಬ ಪ್ರಶ್ನೆ ಎದುರಾದಾಗ ಹೊಳೆಯುವ ಉತ್ತರಗಳು ಹಲವಾರು. ಪುರುಷರ ಅಭಿಪ್ರಾಯದಲ್ಲಿ ಇದು ತಮ್ಮೊಳಗಿನ ಪ್ರಕೃತಿ ಸಹಜ ಗುಣದ ಅಭಿವ್ಯಕ್ತಿ. ಸಂಪ್ರದಾಯವಾದಿಗಳಿಗೆ ಇದು ಚಿಂತೆಗೀಡುಮಾಡುವ ವಿಚಾರವೇ ಅಲ್ಲ. ಏಕೆಂದರೆ ಕಾಲಾನುಕಾಲದಿಂದಲೂ ಇದು ನಡೆದುಕೊಂಡು ಬಂದಿದೆ ಎನ್ನುವ ನಂಬಿಕೆ. ಅಥವಾ ಇದು ಪುರಾಣಗಳನ್ನು ಮುಂದಿಟ್ಟುಕೊಂಡು, ದೈವಸ್ತುತಿ, ದೇವಿ ಆರಾಧನೆಯ ಪರಿಕಲ್ಪನೆಗಳನ್ನು ಮುಂದಿಟ್ಟುಕೊಂಡು ನಿರಾಕರಿಸಲ್ಪಡುವ ಆರೋಪ. “ ಮೊಸರಿನಲ್ಲಿ ಕಲ್ಲು ಹುಡುಕುವ ಕುಹಕವೇಕೆ ” ಎಂದು ಪ್ರಶ್ನಿಸುತ್ತಲೇ ಆವಾಹನೆ, ಆರಾಧನೆ ಮತ್ತು ದೇವೀಸ್ತುತಿಗಳಲ್ಲಿ ಕಂಡುಬರುವ “ಭೋಗದ” ಪರಿಕಲ್ಪನೆಯನ್ನು ಹೊರಸೂಸುವ ಸಾಲುಗಳನ್ನು ಸಮರ್ಥಿಸುವ ಸಾಂಪ್ರದಾಯಿಕರಿಗೆ ಹೆಣ್ಣು ಸದಾ ಪೂಜನೀಯವಾಗಿಯೇ ಕಂಡುಬರುತ್ತಾಳೆ. ಈ ಚೌಕಟ್ಟಿನಲ್ಲೇ ಸ್ತ್ರೀ ಸಂವೇದನೆ ಮತ್ತು ಸ್ತ್ರೀವಾದವನ್ನು ಪ್ರತಿಪಾದಿಸುವವರ ವಾದಗಳನ್ನು ವಿತಂಡ ಎಂದೋ ಅಥವಾ ದಿಕ್ಕು ತಪ್ಪಿಸುವ ವಿಕೃತಗಳೆಂದೋ ಜರಿಯುವ ಪರಂಪರೆಯನ್ನೂ ಕಂಡಿದ್ದೇವೆ. ಮೂಲತಃ ಇದು ಸಾಮಾಜಿಕ ಸಂರಚನೆ ಮತ್ತು ಅದರಲ್ಲಿ ಅಂತರ್ಗತವಾಗಿರುವ ಮೌಲ್ಯಗಳಿಗೆ ಸಂಬಂಧಿಸಿದ ಪ್ರಶ್ನೆ. ಭಾರತದ ಸಾಂಪ್ರದಾಯಿಕ ಸಮಾಜ ಎಷ್ಟೇ ಆಧುನಿಕತೆಯತ್ತ ಹೊರಳುತ್ತಿದ್ದರೂ ಇಂತಹ ವಿಚಾರಗಳಲ್ಲಿ ಪಿತೃಪ್ರಧಾನ ಮೌಲ್ಯಗಳಿಂದ ಹೊರತಾಗಿಲ್ಲ ಎನ್ನುವುದು ಸರ್ವವಿಧಿತ.
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ಸುತ್ತ ನಡೆಯುತ್ತಿರುವ ವಾದವಿವಾದಗಳೇ ಇದಕ್ಕೆ ಸಾಕ್ಷಿ. ಇಲ್ಲಿ ಬಹಳಷ್ಟು ಪುರುಷ ಮನಸುಗಳು ಮೌನಕ್ಕೆ ಶರಣಾಗುವ ಮೂಲಕ ಸಾಂಪ್ರದಾಯಿಕ ಮನಸುಗಳಿಗೆ ಸಾಥ್ ನೀಡುತ್ತವೆ. ಇನ್ನು ಕೆಲವು ಕೆರಳಿದ ಮನಸುಗಳು ಮಹಿಳೆಯರ ದೇಹವನ್ನು ತುಂಡರಿಸುವ ಹೀನ ಮಟ್ಟಕ್ಕೂ ಇಳಿಯುತ್ತವೆ. ಸಮಸ್ತ ಪುರುಷ ವರ್ಗವೂ ಮಹಿಳೆಯನ್ನು ಹೀಗೆಯೇ ನೋಡುತ್ತದೆ ಎಂದು ಹೇಳುವುದು ಬಾಲಿಶವಾಗುತ್ತದೆ ನಿಜ, ಆದರೆ ಹೀಗೆ ನೋಡುವ ಒಂದು ಮನಸ್ಥಿತಿ ಇರುವುದನ್ನು ಒಪ್ಪಿಕೊಳ್ಳಲು ಇದೇ ಮನಸುಗಳು ಹಿಂಜರಿಯುವುದೂ ನಿಜ. ಇಲ್ಲಿ ಸಮಸ್ಯೆ ಇರುವುದು ಮಹಿಳೆಯದ್ದಲ್ಲ ಮನಸ್ಥಿತಿಯದ್ದು. ಸುಪ್ರೀಂಕೋರ್ಟ್ ಸೆಕ್ಷನ್ 497ರ ಬಗ್ಗೆ ನೀಡಿರುವ ತೀರ್ಪು, ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ನೀಡಿರುವ ತೀರ್ಪು ಈ ಮನಸ್ಥಿತಿಯನ್ನೇ ಪ್ರಶ್ನಿಸುತ್ತದೆ. ಹಾಗಾಗಿಯೇ ಪುರುಷ ಸಮಾಜದ ಒಂದು ನಿರ್ದಿಷ್ಟ ವರ್ಗ ಕೆರಳಿ ಕೆಂಡವಾಗಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮೀ ಟೂ ಚಳುವಳಿ ಈ ಮನಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸಿದೆ. ಸ್ವಸ್ಥ ಮನಸು ಸತ್ಯವನ್ನು ಮಾತ್ರ ಬಯಸುತ್ತದೆ ಸತ್ಯದ ಅಭಿವ್ಯಕ್ತಿಯನ್ನಲ್ಲ. ಹಾಗೆಯೇ ಸತ್ಯದ ಅಭಿವ್ಯಕ್ತಿಯ ಕಾಲಘಟ್ಟಗಳೂ ಪ್ರಸ್ತುತ ಎನಿಸುವುದಿಲ್ಲ. ಸದಾ ಜೀವಂತಿಕೆಯನ್ನು ಹೊಂದಿರುವ ಜ್ವಲಂತ ಸತ್ಯಕ್ಕೆ ಅಭಿವ್ಯಕ್ತಿಯ ನಿರ್ದಿಷ್ಟ ಕಾಲಘಟ್ಟ ಇರುವುದೂ ಇಲ್ಲ. ಮಿ,,ಟೂ ಚಳುವಳಿ ಇದನ್ನು ನಿರೂಪಿಸಿದೆ.
ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ತಾವು ಎದುರಿಸಿದ ಮುಜುಗರದ ಸಂದರ್ಭಗಳು, ಲಿಂಗ ತಾರತಮ್ಯ, ಕಿರುಕುಳದ ಸಂದರ್ಭಗಳು, ಪುರುಷ ಸಮಾಜದ ಹಾವ ಭಾವಗಳಿಂದ ತಾವು ಮೌನವಾಗಿಯೇ ಅನುಭವಿಸಿದ ಮಾನಸಿಕ ಕಿರುಕುಳ ಮತ್ತು ಎದುರಿಸಿದ ಬಿಕ್ಕಟ್ಟುಗಳು ಇವೆಲ್ಲವೂ ಮಹಿಳೆಯ ಮನದಾಳದ ವೇದನೆಯ ಒಂದು ಭಾಗವಾಗಿ ಶೂನ್ಯದಲ್ಲೇ ಲೀನವಾಗಿಬಿಡುತ್ತವೆ. ಏಕೆಂದರೆ ಪಿತೃ ಪ್ರಧಾನ ಮೌಲ್ಯಗಳನ್ನು ಪ್ರಶ್ನಾತೀತವಾಗಿ ವೈಭವೀಕರಿಸುವ ಪುರುಷ ಸಮಾಜ ಮಹಿಳೆಯನ್ನು ಸದಾ ಪ್ರಶ್ನೆಯಾಗಿಯೇ ಕಾಣುತ್ತದೆ. ಮೀ ಟೂ ಚಳುವಳಿಯ ಸಂದರ್ಭದಲ್ಲಿ ಪದೇ ಪದೇ ಕೇಳಿಬರುತ್ತಿರುವ ಎರಡು ಆರೋಪಗಳಿವೆ. ಮೊದಲನೆಯದಾಗಿ ಇಂದು ಬಾಲಿವುಡ್ ನಾಯಕರ ಮತ್ತು ಇತರರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪ ಮಾಡುತ್ತಿರುವ ಮಹಿಳೆಯರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ? ಎರಡನೆಯದು ತಮ್ಮ ವಿರುದ್ಧ ಎಂದೋ ನಡೆದ ದೌರ್ಜನ್ಯವನ್ನು ರಂಜನೀಯವಾಗಿ ಬಿತ್ತರಿಸಿ ಪ್ರಚಾರ ಗಳಿಸುತ್ತಿರುವ ಮೇಲ್ವರ್ಗದ ಮಹಿಳೆಯರು (ಸೆಲೆಬ್ರಿಟಿಗಳು) ಕೆಳಸ್ತರದ ಮಹಿಳೆಯರ ಇಂತಹುದೇ ಅನುಭವಗಳ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ?
ಈ ಎರಡೂ ಪ್ರಶ್ನೆಗಳನ್ನು ತಿರಸ್ಕರಿಸಲಾಗುವುದಿಲ್ಲ. ಆದರೆ ಈ ಪ್ರಶ್ನೆಯ ಹಿಂದಿನ ಕುತ್ಸಿತ ಮನೋಭಾವ ಹಾಗೂ ಸಂಕುಚಿತ ದೃಷ್ಟಿಕೋನಗಳು ತಿರಸ್ಕಾರಯೋಗ್ಯ ಎನ್ನಬಹುದು. ಭಾರತದ ಸಮಸ್ಯೆ ಎಂದರೆ ಇಲ್ಲಿ ಕಣ್ಣೋಟಗಳನ್ನು ಮಸೂರಗಳು ನಿರ್ಧರಿಸುತ್ತವೆ. ಮಸೂರಗಳನ್ನು ತೆಗೆದಿಟ್ಟು ನೋಡುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕಿದೆ. ಮೀ ಟೂ ಚಳುವಳಿ ಸಮಾಜದ ಒಂದು ನಿರ್ದಿಷ್ಟ ವರ್ಗದಿಂದ ಬಂದ ಜಾಗೃತಿಯ ಕೂಗು ಇರಬಹುದು. ಆದರೆ ಅದು ಅವರಿಗೇ ಸೀಮಿತವಾದದ್ದಲ್ಲ ಅಲ್ಲವೇ ? ನಿಜ, ಗ್ರಾಮೀಣ ಪ್ರದೇಶಗಳಲ್ಲಿ, ಹೊಲ ಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ, ಷಾಪಿಂಗ್ ಮಾಲ್‍ಗಳಲ್ಲಿ, ಸರ್ಕಾರಿ/ಖಾಸಗಿ ಕಚೇರಿಗಳಲ್ಲಿ, ಪಬ್ ಬಾರುಗಳಲ್ಲಿ ಅಸಹಾಯಕ ಮಹಿಳೆಯರು ದಿನನಿತ್ಯ ಇಂತಹ ದೌರ್ಜನ್ಯಗಳನ್ನು ಎದುರಿಸುತ್ತಲೇ ಇರುತ್ತಾರೆ, ಮೌನವಾಗಿ, ಅಸಹಾಯಕತೆಯಿಂದ ಕೆಲವೊಮ್ಮೆ ಅನಿವಾರ್ಯತೆಯಿಂದ. ಈ ಮೌನ ದನಿಗಳಿಗೆ ದನಿಯಾಗಲು ಸಮಾಜ ಎಷ್ಟೇ ಬಯಸಿದರೂ ಸತ್ಯ ಹೊರಬರುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ನಾಳಿನ ಅನ್ನಕ್ಕಾಗಿ ಈ ಹೊತ್ತು ದುಡಿಯುವ ಶ್ರಮಿಕ ಮಹಿಳೆಯರು, ವಿಶೇಷವಾಗಿ ವಲಸಿಗರು, ಇಂತಹ ದೌರ್ಜನ್ಯವನ್ನು ಹೆಚ್ಚಾಗಿ ಅನುಭವಿಸುತ್ತಿರುವುದು ಕಂಡರೂ ಕಾಣದ ಸತ್ಯ. ಆದರೆ ಈ ಅಸಹಾಯಕ ದನಿಗಳಿಗೆ ಮೀ ಟೂ ಚಳುವಳಿ ಒಂದು ಪ್ರಬಲ ದನಿಯಾಗಿ ಹೊರಹೊಮ್ಮಬಾರದೇಕೆ ಎಂಬ ಪ್ರಶ್ನೆ ಕಾಡಬೇಕಲ್ಲವೇ ?
ಹಾಗೊಮ್ಮೆ ಆಗದಿದ್ದರೆ ಹಾಗಾಗುವಂತೆ ಮಾಡುವುದು, ಈ ದುರ್ಬಲ ವರ್ಗಗಳ ಬಗ್ಗೆ ಕಾಳಜಿ, ಕಳಕಳಿ ಇರುವ ಮನಸುಗಳ ಕರ್ತವ್ಯ ಅಲ್ಲವೇ ? ನಿರ್ಭಯ ಪ್ರಕರಣವಾದ ಸಂದರ್ಭದಲ್ಲೂ ಸಹ “ ಪ್ರತಿಷ್ಠಿತ ನಗರಗಳಲ್ಲಿ ನಡೆದ ಘಟನೆ – ಹಾಗಾಗಿಯೇ ಸುದ್ದಿಯಾಯಿತು ” ಎಂಬ ಕೂಗು ಕೇಳಿಬಂದಿತ್ತು. ದಿನನಿತ್ಯ ಇಂತಹ ಎಷ್ಟೋ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಹಾಗೆಯೇ ಸಮಾಧಿಯಾಗುತ್ತವೆ ಎಂಬ ಕಳಕಳಿಯ ಮಾತುಗಳೂ ಕೇಳಿಬಂದಿದ್ದವು. ಈಗ ಅದೇ ಕೂಗಿನ ಮತ್ತೊಂದು ಸ್ವರೂಪ ನೋಡುತ್ತಿದ್ದೇವೆ. ಮೀ ಟೂ ಚಳುವಳಿಯ ಮೂಲಕ ಪ್ರಚಾರ(?) ಪಡೆಯುತ್ತಿರುವ ಮೇಲ್ವರ್ಗದ, ಉಳ್ಳವರು ಖೈರ್ಲಾಂಜಿಯ ಘಟನೆಯಾದಾಗ ಎಲ್ಲಿದ್ದರು, ಏಕೆ ಉಸಿರೆತ್ತಲಿಲ್ಲ, ಗ್ರಾಮೀಣ ಪ್ರದೇಶದ ದಲಿತ ಹೆಣ್ಣು ಮಕ್ಕಳ ಮೇಲೆ ನಿತ್ಯ ನಡೆಯುವ ದೌರ್ಜನ್ಯವನ್ನು ಏಕೆ ಪ್ರತಿಭಟಿಸುವುದಿಲ್ಲ ಹೀಗೆ ಹಲವು ಪ್ರಶ್ನೆಗಳು ಉಗಮಿಸುತ್ತಿವೆ. ದಲಿತ ಸಂಘಟನೆಯ ಕೆಲವು ಚಿಂತಕರ ಈ ಪ್ರಶ್ನೆಗಳು ತಾರ್ಕಿಕ ಎನ್ನುವುದಾದರೆ, ಕಥುವಾ ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಲ್ಲಿ ಪ್ರತಿಭಟಿಸಿದವರ ವಿರುದ್ಧ ಹರಿಹಾಯ್ದ ಸಂಘಪರಿವಾರದ ಚಿಂತಕರು “ ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಾಗ ಎಲ್ಲಿದ್ದಿರಿ ” ಎಂದು ಕೇಳುವುದನ್ನೂ ತಾರ್ಕಿಕ ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ ಅಲ್ಲವೇ ?
ಇಲ್ಲಿ ಪ್ರಶ್ನೆ ಇರುವುದು ದೌರ್ಜನ್ಯ ಅಥವಾ ಅತ್ಯಾಚಾರ ಅಲ್ಲ. ಪ್ರಶ್ನೆ ಮಹಿಳೆಯರೂ ಅಲ್ಲ. ಪ್ರಶ್ನೆಯಾಗಬೇಕಿರುವುದು ಪುರುಷ ಸಮಾಜದ ಧೋರಣೆ. ಉತ್ತರ ನೀಡಬೇಕಿರುವುದೂ ಪುರುಷ ಸಮಾಜವೇ. ನೂರಾರು ಪತ್ರಕರ್ತರಿಗೆ ಮಾದರಿಯಾಗಿ, ಆದರ್ಶಪ್ರಾಯರಾಗಿ ತಮ್ಮ ವಾನಪ್ರಸ್ಥದಲ್ಲಿ ಸಂಘ ಸಹವರ್ತಿಯಾಗಿರುವ ಎಂ ಜೆ ಅಕ್ಬರ್ ಅವರಂತಹ ಪ್ರಬುದ್ಧ ಪತ್ರಕರ್ತರು ಇಲ್ಲಿಯೂ ಸಹ ತಮ್ಮ ಆತ್ಮಸಾಕ್ಷಿಗೆ ಓಗೊಟ್ಟು ತಮ್ಮ ತಪ್ಪಿಗೆ ಕ್ಷಮೆ ಕೇಳುವ ಮೂಲಕ ಪುರುಷ ಸಮಾಜಕ್ಕೆ ಮತ್ತೊಂದು ಮಾದರಿ ಒದಗಿಸಬಹುದಿತ್ತಲ್ಲವೇ ? ದುರಂತ ಎಂದರೆ ಅಕ್ಬರ್ ಅವರಿಗೆ ತಮ್ಮ ಪ್ರತಿಷ್ಠೆ ಮುಖ್ಯವಾಗಿದೆಯೇ ಹೊರತು ನೊಂದ ಮಹಿಳೆಯರ ವ್ಯಕ್ತಿಗತ, ಸಾಮಾಜಿಕ ಘನತೆ ಮುಖ್ಯವಾಗಿಲ್ಲ. ಇಲ್ಲಿ ಅಕ್ಬರ್ ಏಕಾಂಗಿಯಲ್ಲ ಎನ್ನುವುದನ್ನು ಮತ್ತೊಮ್ಮೆ ಭಾರತದ ಪುರುಷ ಸಮಾಜ ನಿರೂಪಿಸಿದೆ. ಆರೋಪ ಹೊರಿಸಿದ ಸಂತ್ರಸ್ತ ಮಹಿಳೆಯರಾರೂ ಏಕಾಂಗಿಯಲ್ಲ ಎನ್ನುವುದನ್ನು ಮಹಿಳಾ ಸಮುದಾಯ ನಿರೂಪಿಸಬೇಕಿದೆ. ಈ ವಿವಾದವನ್ನು ಶಿಕ್ಷೆ ಅಪರಾಧಗಳ ಭೂಮಿಕೆಯಲ್ಲಿ ಪರಾಮರ್ಶಿಸುವುದಕ್ಕಿಂತಲೂ ಪಾಪ ಪ್ರಜ್ಞೆ ಮತ್ತು ಆತ್ಮಾವಲೋಕನದ ನೆಲೆಯಲ್ಲಿ ಪರಾಮರ್ಶಿಸಿದಲ್ಲಿ ಭಾರತೀಯ ಸಮಾಜ, ವಿಶೇಷವಾಗಿ ಪುರುಷ ಸಮಾಜ, ಪ್ರಬುದ್ಧತೆಯತ್ತ ಒಂದೆರಡು ತಪ್ಪು ಹೆಜ್ಜೆಗಳನ್ನಾದರೂ ಹಾಕುತ್ತಿದೆ ಎಂದು ಸಮಾಧಾನ ಹೊಂದಬಹುದು.
ಆದರೆ ಮಹಿಳೆಯರ ವಿಚಾರಕ್ಕೆ ಬಂದಾಗ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ಸಂತ್ರಸ್ತಳೂ ಮಹಿಳೆಯೇ ಆಗುತ್ತಾಳೆ, ಪ್ರಶ್ನೆಯೂ ಅವಳೇ ಆಗುತ್ತಾಳೆ. ನಿರ್ಭಯ ಇರಲಿ, ಖೈರ್ಲಾಂಜಿ ಇರಲಿ, ಕಥುವಾ ಇರಲಿ, ಉನ್ನಾವೋ ಇರಲಿ ಅಥವಾ ಮೀ ಟೂ ಆಗಿರಲಿ ಮಹಿಳೆಯೇ ಸವಾಲೂ ಆಗುತ್ತಾಳೆ, ಪ್ರಶ್ನೆಯೂ ಆಗುತ್ತಾಳೆ ಕೆಲವೊಮ್ಮೆ ಸಮಸ್ಯೆಯೂ ಆಗಿಬಿಡುತ್ತಾಳೆ. ಇದು ಪುರುಷ ಪ್ರಧಾನ ಸಮಾಜದಲ್ಲಿ ಸಹಜವಾಗಿ ಕಂಡುಬರುವ ಪ್ರವೃತ್ತಿ. ಮೀ ಟೂ ಚಳುವಳಿ ಈ ಪ್ರವೃತ್ತಿಯನ್ನು ಮೀರಿ ಮುನ್ನಡೆಯುವ ಒಂದು ಅವಕಾಶವನ್ನು ಒದಗಿಸಿದೆ. ತಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮಾನ್ಯ ಎಂ ಜೆ ಅಕ್ಬರ್ 97 ವಕೀಲರನ್ನು ನೇಮಿಸಿದ್ದಾರೆ. ನಿಜ, ಆರೋಪ ಸಾಬೀತು ಮಾಡಲು ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ನ್ಯಾಯಾಲಯ ಸಾಕ್ಷಿ ಕೇಳುತ್ತದೆ. ಆತ್ಮ ಸಾಕ್ಷಿಗೆ ಓಗೊಡುವುದಿಲ್ಲ. ಆತ್ಮಸಾಕ್ಷಿ ಇದ್ದವರಿಗೆ ನ್ಯಾಯಾಲಯದ ಕಟಕಟೆ ಬೇಕಿಲ್ಲ.
ಮೀ ಟೂ ಚಳುವಳಿ ಮಹಿಳಾ ಸಂವೇದನೆಗೆ ಮಹತ್ತರವಾದ ತಿರುವು ನೀಡುವುದಿಲ್ಲ ದಿಟ. ಆದರೆ ತಮ್ಮ ನಿತ್ಯ ಜೀವನದಲ್ಲಿ ಭಾರತದ ಸಾಮಾನ್ಯ ಮಹಿಳೆಯರು ಪುರುಷ ಸಮಾಜದಿಂದ ಎದುರಿಸುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಮಾನಸಿಕ ಹಿಂಸೆಯನ್ನು ತಮ್ಮಲ್ಲೇ ಅದುಮಿಟ್ಟುಕೊಳ್ಳದೆ ಹೊರಹಾಕುವ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಒಂದು ಮಾರ್ಗ ಒದಗಿಸಿದೆ. ಇದು ನಮ್ಮ ಸಾಮಾಜಿಕ ಸಾಕ್ಷಿ ಪ್ರಜ್ಞೆಯನ್ನು ಬಡಿದೆಬ್ಬಿಸುವ ಒಂದು ಅಭಿಯಾನವಾಗಲೂ ಸಾಧ್ಯ. ವಿಫಲವಾಗಬಹುದು, ತಣ್ಣಗಾಗಬಹುದು ಆದರೆ ಈ ಅಭಿಯಾನ ಜಡಗಟ್ಟುವುದಿಲ್ಲ. ಏಕೆಂದರೆ ಒಂದು ಮೀ ಟೂ, ಒಬ್ಬ ನಿರ್ಭಯ, ಒಂದು ವರ್ಮ ಆಯೋಗದ ತೀರ್ಪು ಮಾನವನ ಪ್ರಜ್ಞೆಯನ್ನು ಸರಿಪಡಿಸಲಾಗುವುದಿಲ್ಲ. ಇದು ನಿರಂತರವಾಗಿ ನಡೆಯಬೇಕಾದ ಅಭಿಯಾನ. ಜಾತಿ, ಧರ್ಮ, ವರ್ಗಳಿಂದಾಚೆಗೆ ಸಮಸ್ತ ಪ್ರಜ್ಞಾವಂತ ಜನತೆಯೂ ಭಾಗವಹಿಸಬೇಕಾದ ಒಂದು ಅಭಿಯಾನ. ದನಿ ಇಲ್ಲದವರಿಗೆ ದನಿಯಾಗಲು ದನಿ ಏರಿಸುವವರಿದ್ದಾರೆ ಅಲ್ಲವೇ ? ಈ ದನಿಗಳು ಒಂದಾಗಲು ಮೀ ಟೂ ಒಂದು ವೇದಿಕೆಯನ್ನು ನಿರ್ಮಿಸಿದಲ್ಲಿ ಮಹಿಳೆ ಸದಾ ಪ್ರಶ್ನೆಯಾಗಿಯೇ ಉಳಿಯುವ ಸಂದಿಗ್ಧತೆಯಿಂದ ಹೊರಬರಲು ಸಾಧ್ಯ. ಹೊರತರುವ ಹೊಣೆಗಾರಿಕೆ ಪ್ರಜ್ಞಾವಂತ ಪುರುಷ ಸಮಾಜದ್ದೂ ಹೌದು ಅಲ್ಲವೇ ?






0 Comments