ಶ್ರೀನಿಧಿ ಹೆಚ್ ವಿ
ಮೆಟ್ರೋ ರೈಲಿನಲ್ಲಿ, ಸಿಟಿ ಬಸ್ಸಿನಲ್ಲಿ
ಕಾಲೇಜು ಬ್ಯಾಗನ್ನು ಮುಂಭಾಗಕ್ಕೆ
ಹಾಕಿಕೊಂಡ ಹುಡುಗಿಯರನ್ನು ನೋಡಿದಾಗ
ಆಶ್ಚರ್ಯವಾಗುತ್ತಿತ್ತು, ಇದ್ಯಾವ ಹೊಸ ಪರಿ ಎಂದು,
ಆದರೆ ಕಾಮಂಧನೊಬ್ಬ ಕಣ್ಣಲ್ಲೇ ಕೊಲ್ಲದಿರಲೆಂದು,
ಎದೆಗೆ ಮೈ ಸೋಕದಿರಲೆಂದು ಈ ಅಭ್ಯಾಸವೆಂದು
ತಿಳಿದ ಮೇಲೆ, ಅಸಹಾಯಕತೆ ಮೈದುಂಬಿಕೊಂಡಿದೆ
ಹೇಳಬೇಕೆನಿಸಿದೆ ನನಗೂ ಮಿಟೂ ಎಂದು

ರಾತ್ರಿ ರೈಲಿನಲ್ಲಿ, ಸೈಡ್ ಸ್ಲೀಪರ್ ಸೀಟು ಸಿಕ್ಕಿತೆಂದು
ಭಯದ ಮುದ್ರೆಯನ್ನಿಕ್ಕಿಕೊಂಡು
ಊರ ಬರುವವರೆಗೆ ಎಚ್ಚರದಿಂದಿರುವ ಅಕ್ಕನನ್ನು ಕಂಡಾಗ,
ಹುಡುಗನೊಬ್ಬ ಬಂದು ಪಕ್ಕ ಮಲಗಿದನೆಂದು ಎಸಿ ಬಸ್ಸಿನಲ್ಲೂ ನಿದ್ದೆ ಬಾರದೆ ತಂಗಿ ಒದ್ದಾಡುವಾಗ,
ಹೇಳಬೇಕೆನಿಸಿದೆ ನನಗೂ ಮಿಟೂ ಎಂದು
ಕಾಲೇಜಿಗೆ, ಆಫೀಸಿಗೆ ಸಲ್ವಾರ್ ಧರಿಸುವ ಸುಂದರಿ
ಫೇಸ್ಬುಕ್ಕಿನಲ್ಲಿ ಮಾತ್ರ ಮನೆಯಲ್ಲಿ ಸ್ಕರ್ಟು ತೊಟ್ಟು ಫೋಟೋ ಹಾಕಿದಾಗ
ಅವಳ ಕಬೋರ್ಡಿನ ತುಂಬಾ ಇಸ್ತ್ರಿ ಮಾಡಿಟ್ಟ ತೊಡದ ಬಟ್ಟೆಗಳ ರಾಶಿಯನ್ನು ಪ್ರತಿ ರಾತ್ರಿ ಆಕೆ ನೋಡಿ ಕಣ್ತುಂಬಿಕೊಳ್ಳುವಾಗ
ಹೇಳಬೇಕೆನಿಸಿದೆ ನನಗೂ ಮಿಟೂ ಎಂದು
ಒಳ ಉಡಪುಗಳ ಕೊಳ್ಳುವಾಗ ಎದುರುನಿಂತ
ಮಾರುವವನ ಕಣ್ಣಿನಾಳದ ಕ್ರೂರ ನೋಟಕ್ಕೆ,
ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಅದ್ಯಾವುದನ್ನೊ ಆರಿಸಿ, ಧರಿಸಿ
ಸ್ತನ ಕ್ಯಾನ್ಸರ್ ಗೆ ಗುರಿಯಾಗುತ್ತಿದ್ದಾರೆಂಬ ಸುದ್ದಿ ಓದಿದಾಗ, ಅದು ಸುದ್ದಿಯಾಗುಳಿಯದೆ ಕಣ್ಣು ತೇವಗೊಳಿಸಿದೆ
ಹೇಳಬೇಕೆನಿಸಿದೆ ನನಗೂ ಮಿಟೂ ಎಂದು

ತಂದೆಯೆ ಮಗಳ ಮೇಲೆ ಅತ್ಯಾಚಾರ ಮಾಡಿದಾಗ;
ಗೆಳೆಯರೊಡನೆ ಮಾತಾಡಿದರೆ, ಶೀಲವಿಲ್ಲದವಳು ಎಂದಾಗ;
ಕುಡಿದು ಬಂದ ಗಂಡ, ಹೆಂಡತಿಗೆ ಜಾಡಿಸಿ ಒದ್ದಾಗ;
ಬಡಿದರು, ಅಂದರು, ಕೊಂದರು, ಆಕೆ ಮಾತೆ ಆಡದಿದ್ದಾಗ
ಹೇಳಬೇಕೆನಿಸಿದೆ ನನಗೂ ಮಿಟೂ ಎಂದು

ತಪ್ಪೋ ಸರಿಯೋ; ಸುಳ್ಳೋ ಸತ್ಯವೋ
ತಾರೆಗಳ ವರ್ಚಸ್ಸು ಬೀದಿಗಿಳಯುತ್ತಿದೆ,
ನಾನಾ ಕ್ಷೇತ್ರಗಳಲ್ಲಿ ನ ಹೊಲಸು ಮುಖಗಳ
ಪ್ರದರ್ಶನ ಮನೆ ಮನೆಯಲ್ಲಾಗುತ್ತಿದೆ,
ಕೊನೆಗೂ ಮಾತಿಗೊಂದು ಮಾಧ್ಯಮ ಸಿಕ್ಕಿದೆ,
ಈಗ ಹೇಳಬೇಕಿನಸಿದೆ ಅಮ್ಮನಿಗೆ, ಅಕ್ಕನಿಗೆ, ತಂಗಿಗೆ, ಗೆಳತಿಗೆ, ನಿನ್ನೊಡನೆ ನಾವೆಲ್ಲರೂ ಇದ್ದೀವಿ ಎಂದು
ವಿ ಟೂ ಎಂದು.






0 Comments