ಸಿಂಗಾಪುರ್ ನಲ್ಲಿ ಅಮ್ಮಾ.. ತಾಯಿ..

 

ಬನಶಂಕರಿಯಿಂದ ಏರ್‌ಪೋರ್ಟ್ ಗೆ ಕಾರಿನಲ್ಲಿ ಹೋಗ್ತಾ ಇದ್ದೆವು. ಚಿತ್ರಕಲಾ ಪರಿಷತ್ ಸಮೀಪ ರೆಡ್ ಸಿಗ್ನಲ್ ಗೆ ಕಾರು ನಿಂತಿತ್ತು. ಹೊರಗಡೆಯಿಂದ ಕಾರಿನ ಬಾಗಿಲಿಗೆ ಏನೋ ಬಡಿಯುವ ಶಬ್ದ. ಪ್ರಾರಂಭದಲ್ಲಿ ಅದರ ಬಗ್ಗೆ ಸೂಕ್ಷ್ಮವಾಗಿ ಗಮನಿಸದ ನಾವು, ಮತ್ತೆ ಮತ್ತೆ ಮುಂದುವರಿದಾಗ ಗ್ಲಾಸ್ ಓಪನ್ ಮಾಡಿ ನೋಡಲೇ ಬೇಕಾಯಿತು. ಭಿಕ್ಷೆ ಕೇಳುವ ನಿಟ್ಟಿನಲ್ಲಿ, ಫುಟ್ ಪಾತ್ ನಿಂದ ಕಾರಿನ ಬಾಗಿಲಿಗೆ ಕಲ್ಲು ಹೊಡೆಯುತ್ತಿರುವ ಓರ್ವ ಮಹಿಳೆ. ತನ್ನ ಕಾಲಿನ ಶಕ್ತಿಯನ್ನು ಕಳೆದುಕೊಂಡಂತೆ, ಚಕ್ರ ಇರೋ ಮಣೆಯಲ್ಲಿ ಕೂತಿದ್ದ ಆಕೆ, ಸಿಗ್ಲಲ್ ನಲ್ಲಿ ನಿಂತಿದ್ದ ಎಲ್ಲಾ ವಾಹನಗಳ ಗಮನ ಸೆಳೆಯಲು ನಡೆಸುತ್ತಿದ್ದ ವೈಖರಿ ಇದು.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ. ಉತ್ತರ ಭಾರತದ ಕೆಲ ಯುವಕರು ಅದರಲ್ಲೂ ಕೈಕಾಲು ಗಟ್ಟಿಯಿರುವವರು, ಹಿಜಡಾಗಳಂತೆ ವೇಷ ಧರಿಸಿ ನಗರದ ಪ್ರಮುಖ ಪಾರ್ಕ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು, ಅವರನ್ನು ಒದೆ ನೀಡಿದ್ದಲ್ಲದೆ, ತಾವು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸುವಂತೆಯೂ ಎಚ್ಚರಿಕೆ ನೀಡಿದರು. ನಗರಗಳಲ್ಲಿ ಕಾಣಸಿಗುವ ಹದಿಹರೆಯದವರು, ಅಮ್ಮಂದಿರು, ಮಲಗಿರುವ ಮಕ್ಕಳನ್ನು ದಾರಿಯುದ್ದಕ್ಕೂ ಒಯ್ಯುತ್ತಾ ಹಣ ವಸೂಲು ಮಾಡೋದು. ಅಂಗ ವೈಖಲ್ಯತೆಯನ್ನು ಪ್ರದರ್ಶಿಸುತ್ತಾ ಭಿಕ್ಷೆ ಬೇಡೋರು..

ಅದೊಂದು ಕಾಲ ಇತ್ತು. ಭವತಿ ಭಿಕ್ಷಾಂ ದೇಹಿ ಅನ್ನುವ ಪದ. ಪುರಾಣಗಳಲ್ಲಿ ಭಿಕ್ಷೆ ಕೇಳೋರು, ಮಹಾನ್ ಶ್ರೇಷ್ಟರು ಎಂದೇ ಖ್ಯಾತಿ. ಭಿಕ್ಸೆ ನೀಡೋದು ಕೂಡ ಪುಣ್ಯದ ಕೆಲಸವಾಗಿ ಬಿಂಬಿತವಾಗಿತ್ತು. ಆದರೆ ಈಗಿನ ಲೆಕ್ಕಾಚಾರಗಳೇ ಬೇರೆ.  ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆನ್ನೋದೇನು ನಿಜ. ಆದರೆ ಸಂಪೂರ್ಣ ಮುಖವಾಡದಲ್ಲಿ ಮುಳುಗಿರುವ ಈಗಿನ ಸಮಾಜದಲ್ಲಿ ನಿಜವಾದ ಫಲಾನುಭವಿಗಳನ್ನು ಹುಡುಕುವುದೇ ಒಂದು ಸಾಹಸ.

ಅದರಲ್ಲೂ ಇಂದಿನ ದಿನಗಳಲ್ಲಿ “ಭಿಕ್ಷೆ” ಅನ್ನುವ ಪದ ನಿಜವಾದ ತಾತ್ಪರ್ಯವನ್ನೇ ಕಳೆದುಕೊಂಡಿದೆ. ಹಲವಾರು ಕಥೆಗಳು, ವಿಭಿನ್ನ ಹೇಳಿಕೆಗಳು ಈ ಪದವನ್ನು ಸುತ್ತುವರಿದಿದೆ.  ಇತ್ತೀಚೆಗಂತೂ ವ್ಯಾಪಾರ, ದಂಧೆ, ಲಾಭ ಗಳಿಸುವ ಉದ್ಯೋಗ ಎಂಬುದೇ ಖ್ಯಾತಿ. ನಿಜವಾಗಿ ಕಷ್ಟದಲ್ಲಿರೋರುವ ಬಗ್ಗೆಯೂ ಅನುಮಾನ ಪಡುವಂತಾಗಿದೆ. ಮಕ್ಕಳ ಅಪಹರಣ, ಅವುಗಳಿಗೆ ನೀಡೋ ಚಿತ್ರಹಿಂಸೆ, ಕನಿಕರ ಪಡುವಷ್ಟರ ಮಟ್ಟಿಗೆ ವೇಷ- ಭೂಷಣಗಳು, ಸಾಮಾನ್ಯ ಜನರನ್ನು ನಂಬಿಸುವಷ್ಟು ಹಾವ- ಭಾವಗಳು. ವಿಚಿತ್ರವೆಂದರೆ ಇವರುಗಳ ಮಧ್ಯೆಯೂ ಅದೆಷ್ಟೋ ರಾಜಕೀಯಗಳು. ಎಷ್ಟೇ ಕನಿಕರ ಪಟ್ಟರೂ, ಇವರದ್ದು ಒಂದು ಗ್ಯಾಂಗ್ ಇರುತ್ತೆ ಅನ್ನೋದನ್ನು ಮಾತ್ರ ಮರಿಯಬಾರದು.

ಕುತೂಹಲದ ಸಂಗತಿ ಅಂದರೆ, ಸಿಂಗಾರಪುರದಲ್ಲಿ ಭಿಕ್ಷೆ ಬೇಡುವುದು ಕಾನೂನು ಬಾಹಿರ. ಭಿಕ್ಷೆ ಬೇಡುವವರು ಸಾರ್ವಜನಿಕ ವಾತಾವರಣಕ್ಕೆ ತೊಂದರೆ ಕೊಡುವವರು ಎಂದೇ ಇಲ್ಲಿ ಬಿಂಬಿತ. ಸಿಂಗಾಪುರದಲ್ಲಿ ಕಾಗೆ ಕಂಡರೆ ಹೇಗೆ ಪ್ರತಿಕ್ರಿಯೆ ನೀಡ್ತಾರೋ ಅದೇ ರೀತಿ ಭಿಕ್ಷುಕರ ಬಗ್ಗೆಯೂ. ಭಿಕ್ಷುಕರು ಕಣ್ಣಿಗೆ ಬಿದ್ದರೆ ಸಾಕು, ಇಲ್ಲಿನ ನಾಗರಿಕರು ಮೊದಲು ಮಾಡೋ ಕೆಲಸನೇ ಪೊಲೀಸರಿಗೆ ಕರೆ ಮಾಡೋದು. ಇಲ್ಲಾ, ಅವರ ಫೋಟೋ ತೆಗೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವುದು. ಒಂಥರಾ ಬ್ರೇಕಿಂಗ್ ನ್ಯೂಸ್ ಇವ್ರಿಗೆಲ್ಲಾ. ಹೆಜ್ಜೆ ಹೆಜ್ಜೆಗೂ ಭಿಕ್ಷುಕರನ್ನು ಕಾಣುವ ನಮಗೆ, ಇವರ ವರ್ತನೆಯೇ ಕೆಲವೊಮ್ಮೆ ವಿಚಿತ್ರ ಅನಿಸುವುದು ಇದೆ. ಹಾಡುವಿಕೆ, ಆಡುವ, ಪ್ರದರ್ಶಿಸುವ, ಮಾರಾಟಕ್ಕಾಗಿ ಏನಾದರೂ ವಸ್ತುಗಳನ್ನು ಹಿಡಿದು ಜನರ ಬಳಿ ಬರುವವರನ್ನು ಒಂದು ರೀತಿಯಲ್ಲಿ ಭಿಕ್ಷುಕರು ಎಂದೇ ಪರಿಗಣಿಸಲಾಗುತ್ತದೆ. ಅಂತವರ ನಡವಳಿಕೆಯ ಮೇಲೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಆದರೆ ಪರವಾನಿಗೆ ಪಡೆದು ಈ ಕಾರ್ಯಕ್ಕೆ ಮುಂದಾದಲ್ಲಿ, ಇಂತವರಿಗೆ ತಕ್ಕ ಮಟ್ಟಿನ ರಿಯಾಯಿತಿ ಕೊಡಲಾಗುತ್ತದೆ.

ಆದರೆ ಯಾರು ಜನರಿಗೆ ಕಿರಿಕಿರಿ ನೀಡುವತ್ತಾ ಮುಗಿದು ಬೀಳುತ್ತಾರೋ ಅಂತವರಿಗೆ ತಕ್ಕ ಮಟ್ಟಿನ ಶಾಸ್ತಿ ತಪ್ಪಿದ್ದಲ್ಲ. ಅದರ ಪ್ರಮಾಣ ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳೋದು ಗ್ಯಾರಂಟಿ. ಸುಮಾರು ೩,೦೦೦ ಡಾಲರ್.  ಅಂದರೆ ಬರೋಬ್ಬರಿ ಒಂದೂವರೆ ಲಕ್ಷ. ಜೊತೆಗೆ ಕನಿಷ್ಟ ೨ ವರ್ಷಗಳಷ್ಟು ಜೈಲುವಾಸ..!  ಭಿಕ್ಷೆ ಸಿಗಲಿ ಬಿಡಲಿ, ದಂಡ ಮಾತ್ರ ಕಟ್ಟಿಯೇ ತೀರಬೇಕು. ಇದು ಈ ದೇಶದ ಕಾನೂನು. ಈ ಭಯದಿಂದಲೋ ಏನೋ ಈ ದೇಶದಲ್ಲಿ ಭಿಕ್ಷುಕರೇ ಕಾಣಸಿಗುವುದಿಲ್ಲ.

ಇಷ್ಟೆಲ್ಲಾ ಕಟ್ಟುನಿಟ್ಟಿನ ಕಾನೂನು ಇದ್ರೂ, ಕೆಲವರು ಚಾಪೆ ಕೆಳಗೆ ನುಸುಳಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆಅದರಲ್ಲೂ ಹೆಚ್ಚಾಗಿ ಹಬ್ಬಗಳ ಸಂದರ್ಭಗಳಲ್ಲಿ ಮಸೀದಿಗಳ ಬಳಿ, ದೇಗುಲಗಳ ಬಳಿ ಭಿಕ್ಷೆ ಬೇಡುವವರು ಕಾಣಸಿಗುವುದಿದೆ. ಆದರೆ ಒಂದೇ ಸ್ಥಳದಲ್ಲಿ ಅವರೆಲ್ಲ ಹೆಚ್ಚು ಹೊತ್ತು ಉಳಿಯೋದಿಲ್ಲ. ಎಲ್ಲಿ ಪೊಲೀಸರ ಅತಿಥಿ ಆಗುತ್ತೇವೋ ಅನ್ನುವ ಭಯ. ಅಂತವರನ್ನು ಬಿಡದ ರೀತಿಯ ಲ್ಲಿ ಕಾನೂನು ರಚಿಸಲಾಗಿದೆ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಸಿಕ್ಕಿ ಬಿದ್ದಲ್ಲಿ, ಅವರನ್ನು ವೆಲ್‌ಫೇರ್ ಹೋಮ್ ಗಳಿಗೆ ಕೊಂಡೊಯ್ಯಲಾಗುತ್ತದೆ. ಇದು ನಿರ್ಗತಿಕಾರಿಗಾಗಿಯೇ ಸರ್ಕಾರದ ವತಿಯಿಂದ ನಿರ್ಮಿಸಲ್ಪಟ್ಟ ಮನೆಗಳಾಗಿವೆ.

ಸ್ವಯಂ ಪ್ರೇರಿತವಾಗಿಯೂ ಕೂಡ ನಿರ್ಗತಿಕರು ಈ ವೆಲ್‌ಫೇರ್ ಮನೆಗಳಿಗೆ ಪ್ರವೇಶ ಪಡೆಯಬಹುದು. ಇವರ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡುವ ಅವಕಾಶಗಳು ಇಲ್ಲಿ ಲಭ್ಯವಿದೆ. ಜೊತೆಗೆ ಇಲ್ಲಿದ್ದುಕೊಂಡೇ ಹೊರಗಡೆ ಕೆಲಸಕ್ಕೆ ತೆರಳುವ ಅನುಮತಿಯೂ ನೀಡಲಾಗುತ್ತದೆ. ಒಮ್ಮೆ ಇದರ ಒಳಗೆ ಪ್ರವೇಶ ಮಾಡಿದ ಮೇಲೆ, ಇಲ್ಲಿನ ರೂಲ್ಸ್ ಗಳನ್ನು ಅನುಸರಿಸೋದು ಕಡ್ಡಾಯ. ಇದೇ ವೇಳೆ , ಇಲ್ಲಿರುವ ಯಾವುದೇ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಯದವರು ಬಂದು,  ಅವರನ್ನು ನೋಡಿಕೊಳ್ಳುವ ಭರವಸೆ ನೀಡಿದ್ದಲ್ಲಿ ಅಂತವರನ್ನು ಮತ್ತೆ ಮನೆಗೆ ಕಳುಹಿಸಲಾಗುತ್ತದೆ. ಆದರೆ ಕಾನೂನು ಬಾಹಿರವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುವವರಿಗೆ ಮಾತ್ರ  ಶಿಕ್ಷೆ ಹಾಗೂ ಜೈಲು ಕಂಬಿ ಇವರ ಸ್ವಾಗತಕ್ಕೆ ಕಾಯುತ್ತಾ ಇರುತ್ತವೆ.

ಒಟ್ಟಿನಲ್ಲಿ ಯಾವುದೇ ಭ್ರಷ್ಟಾಚಾರಗಳಿಲ್ಲದೆ ಬೇರು ಮಟ್ಟದಿಂದ ಅಭಿವೃದ್ಧಿ ಕಾಣಬೇಕು ಅನ್ನೋದು ಇವರ ಧ್ಯೇಯವಾಕ್ಯ. ಅಧಿಕಾರಿಗಳ ಪ್ರಾಮಾಣಿಕತೆ , ಕಟ್ಟುನಿಟ್ಟಿನ ಕಾನೂನು ಇಲ್ಲಿನ ಜನರ ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಭಿಕ್ಷೆಗೆ ಅವಕಾಶವನ್ನೇ ನೀಡದ ರೀತಿಯಲ್ಲಿ ಕಾನೂನು ರಚಿಸಿ, ಅದನ್ನು ಉಲ್ಲಂಘಿಸುವವರಿಗೆ ಕಟ್ಟುನಿಟ್ಟಾಗಿ ದಂಡವನ್ನು ಜಾರಿಗೊಳಿಸಿ ಈ ಮೂಲಕ ಜನರಲ್ಲಿ ಅರಿವು ಮೂಡಿಸುವುದು. ಕಷ್ಟದಲ್ಲಿರುವ ಬಡವರಿಗೆ ನಮ್ಮಲ್ಲಿರುವ ಹಾಗೆ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ನೇರವಾಗಿ ಅವರ ಅವಶ್ಯಕತೆಗಳನ್ನು ಈಡೇರಿಸುವುದು ಸರ್ಕಾರದ ಉದ್ದೇಶ.

‍ಲೇಖಕರು Avadhi

October 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: