ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡ್ಯ ರಮೇಶ್ ಕಾಲಂ : ದಬಕ್ ದಬಕ್ ಗುಲ್ಟೋರಿಯೋ…

ನಮ್ಮಪ್ಪನಿಗೆ ಬೆಳ್ಳೂರಿನಿಂದ ವರ್ಗವಾಗಿ ನಾಗಮಂಗಲಕ್ಕೆ ಬಂದಾಗ ನಾನು 3ನೇ ಕ್ಲಾಸು ಪಾಸಾಗಿ ನಾಲ್ಕಕ್ಕೆ ಸೇರಬೇಕಾಗಿತ್ತು. ಇಡೀ ಊರೆಲ್ಲಾ ತಡಕಾಡಿ ನಮ್ಮಮ್ಮ ಅಂತೂ ಇಂತೂ ಗಾಣಿಗರ ಬೀದಿಯಲ್ಲಿ ಒಂದು ಮನೆ ಹಿಡಿದರು. ಆಗಿನ ಕಾಲಕ್ಕದು 5 ಸ್ಟಾರ್ ಮನೆ. ಮನೆಯ ನೆಲ ಕೆಂಪುಗಾರೆಯದು, ಮನೆಯಲ್ಲೊಂದು ದೊಡ್ಡ ತೊಟ್ಟಿಯಿತ್ತು. ಅದು ಪೂರ್ಣ ನೀರಿನಿಂದ ತುಂಬಿದ್ದನ್ನು ನಾನು ನೋಡಿದ್ದು ಕಡಿಮೆ, ನಮ್ಮಮ್ಮ ಅದನ್ನು `ಮುಂಡೆದು ಖತಿಟಟಟಿರ ಠಿಠಠಟ ಇದ್ದಂಗಿದೆ’! ಅಂತಾ ಕೊಚ್ಚಿಕೊಳ್ಳುತಿದಿದ್ದು ನೆನಪು. ಹೆಂಚಿನ ಮನೆ. ಎಡಪಕ್ಕದಲ್ಲಿ ಓನರ್ ಇದ್ರು. ಎದುರುಗಡೆ ಸುತ್ತ ಮುತ್ತಲೆಲ್ಲಾ ಬರೀ ಗಾಣಿಗರು ಇದ್ದರು. ಈಚೆ ಕಡೆಯಿಂದ ಇಷ್ಟೊಂದು ಅಚ್ಚುಕಟ್ಟಾಗಿ ಕಾಣುತ್ತಿದ್ದ ಆ ಮನೆಯಲ್ಲಿ ಕಕ್ಕಸ್ಮನೆಯ ಸ್ಥಿತಿ ಮಾತ್ರ ಹೃದಯ ವಿದ್ರಾವಕವಾಗಿತ್ತು.
ಹಿತ್ತಲಲ್ಲಿ ಗರಿಕಡ್ಡಿ ಕಟ್ಟಿ ಕೆಳಗೆ ಆಳವಾದ ಗುಂಡಿ ತೆಗೆದು ಎರಡು ಚಪ್ಪಡಿ ಕಲ್ಲನ್ನು ಹಾಕಿ ಮಧ್ಯದಲ್ಲಿ ಜಾಗ ಬಿಟ್ಟಿದ್ದರು. ನಾನು ಹೆಚ್ಚಿನ ದಿನಗಳಲ್ಲಿ ಹಿತ್ತಲಿನ ಕೊಣಮಾವಿನ ಬೇಲಿಯನ್ನು ಹಾರಿ ಕೊಳದ ಕಟ್ಟೆಯನ್ನು ದಾಟಿದರೆ ಹಿರೀಕೆರೆ ಇತ್ತು. ಕೆರೆ ಬಯಲಲ್ಲಿ ವರ್ಷದ ಬಹುತೇಕ ನೀರಿರುತ್ತಿರಲಿಲ್ಲ. ಇದ್ದರೂ ಅಲ್ಲೊಂದಿಷ್ಟು ಇಲ್ಲೊಂದಿಷ್ಟು! ವಿಶಾಲ ಬಯಲಲ್ಲಿ ಕೂತು ಎಲ್ಲಾ ಮುಗಿಸಿ…. ನಿಂತ ನೀರಲ್ಲಿ ಅಂಡು ತೊಳೆದು ಬಂದರೇ…. ಅದೆಂಥದ್ದೊ ಸುಖ! ಆಗೀಗ ಯಾರೋ ಸೇದಿ ಎಸೆದಿದ್ದ ಬೀಡಿ ತುಂಡುಗಳನ್ನು ಕದ್ದು ಸೇದಿದ್ದ ನೆನಪು ಇದೆ.
ಮನಸ್ಸು ಬಂದಾಗಲೆಲ್ಲಾ ಎದುರು ಮನೆಯವರ ಹಿತ್ತಲಲ್ಲಿದ್ದ ಗಾಣದಲ್ಲಿ ಕೂರುತಿದ್ದೆ. ಎಣ್ಣೆ ತೆಗೆಯುತಿದ್ದುದ್ದನ್ನು ತುಂಬಾ ಆಸಕ್ತಿಯಿಂದ ನೋಡುತ್ತಿದ್ದೆ. ಹುಚ್ಚೆಳೆಣ್ಣೆಯನ್ನೆ ಅವರು ತೆಗೆಯುತಿದದ್ದು. ಹುಚ್ಚೆಳ್ಳು ಹಿಂಡಿಯನ್ನು ಆಗೀಗ ಮುರಿದು ತಿನ್ನುತ್ತಿದ್ದೆ. ವಿಚಿತ್ರ ಸಿಹಿ ರುಚಿ! ನಮ್ಮ ಮನೆ ಸುತ್ತಲಲ್ಲಿದ್ದ ಗಾಣಿಗರ ಬದುಕಿನ ನಡುವೆ ಬಹುತೇಕ ಮಂದಿ ಕೆಳ ಮಧ್ಯಮ ವರ್ಗ, ಬಡವರು. ಸ್ಥಿತಿವಂತರು ಕಡಿಮೆ ಇದ್ದರು. ನಮ್ಮ ಮನೆಯ ಮಾಲೀಕರ ಕಾಯಕ ಸಂತೆ, ಜಾತ್ರೆಗಳಲ್ಲಿ ಸಿಹಿತಿಂಡಿ, ಕಾರ, ಬೂಂದಿ, ಜಿಲೇಬಿ, ಮೈಸೂರು ಪಾಕು, ಬೆಂಡು, ಬತ್ತಾಸು, ಕಲ್ಯಾಣಸೇವೆ ಇವುಗಳನ್ನೆಲ್ಲಾ ಮಾರುವುದು. ಮನೆಯಲ್ಲೆ ಎಲ್ಲಾ ತಯಾರು ಮಾಡುತ್ತಿದ್ದರು. ದೊಡ್ಡ ಬಾಣಲೆಯಲ್ಲಿ ಜಿಲೇಬಿ ರೂಪುಗೊಳ್ಳುತಿದ್ದುದ್ದನ್ನು, ರಾಶಿರಾಶಿ ಕಾರ ಶೇವೆ, ಗೋಪುರ ರೀತಿಯಲ್ಲಿ, ಮೈಸೂರು ಪಾಕು, ಲಾಡುಗಳನ್ನು ದೊಡ್ಡ ಅಲ್ಯುಮಿನಿಯಂ ತಟ್ಟೆಗಳಲ್ಲಿ ಜೋಡಿಸಿಡುತ್ತಿದ್ದರು. ಅಪಾರ ಶ್ರಮಜೀವಿಗಳು ರಾತ್ರಿಯಲ್ಲಾ ದುಡಿಯುತ್ತಿದ್ದರು. ಒಮ್ಮೆ ಹಿತ್ತಲಲ್ಲಿ ಹಾವು ಬಂತು. ನಾನು ನೋಡುನೋಡುತಿದ್ದಂತೆ ಅದನ್ನು ಹಿಡಿದರು. ತಲೆ ಕತ್ತರಿಸಿ ತೆಗೆದು ಉದ್ದದ ಆ ಹಾವಿನ ಬಾಲದವರೆಗೂ, ಅದರ ಚರ್ಮವನ್ನು ಸೀಳಿ ತೆಗೆದರು. ಅದರ ಇಡೀ ಒಳಭಾಗ ಬೆಳ್ಳಗಿತ್ತು, ಅದನ್ನು ತುಂಡು ತುಂಡು ಮಾಡಿ, ಅನ್ನದ ಜೊತೆ ಉಂಡೆ ಮಾಡಿ-ಎತ್ತುಗಳಿಗೆ ತಿನ್ನಿಸಿದರು. `ಅದ್ಯಾಕೆ ಹಾಗೆ’ ಅಂತಾ ಕೇಳಿದೆ. ನಗುತ್ತಾ ‘ಮುಚ್ಕಂಡ್ ಓಗ್ಲಾ…. ನಿಂಗವೆಲ್ಲಾ ಅರ್ಥ ಆಗಕ್ಕಿಲ್ಲ’ ಅಂದ್ರು! ಕನ್ನಡದ ಸುಪ್ರಸಿದ್ಧ ಬೈಗುಳಗಳೆಲ್ಲಾ ಕರತಲಾಮಲಕವಾಗಿದ್ದು, ನನಗೆ ಬಾಲ್ಯದಲ್ಲೇ. ಬೆಳಬೆಳಿಗ್ಗೆಯೇ ಮನೆ ಮುಂದಿನ ಗುಂಡಿಯಲ್ಲಿ ನೀರಿಗೆ ಜಗಳವಾಗುತ್ತಿದ್ದುದರಿಂದ ಹಿಡಿದು ರಾತ್ರಿ ಎಣ್ಣೆ ಹಾಕಿ ಬಂದ ಗಂಡ-ಹೆಂಡಿರ ಜಗಳದ ಪದಗಳಂತೂ…. ಅಬ್ಬಬ್ಬಾ!. ತುಂಬಾ ಜನಗಳಿಗೆ ತಮ್ಮ ಮಕ್ಕಳು ಪೋಲಿ ಅಲೆಯುವುದು ಬೇಡ, ದೊಡ್ಡ ವ್ಯಾಪಾರಸ್ಥರಾಗಲಿ ಅನ್ನುವ ಆಸೆ ಬಲವಾಗಿತ್ತು. ಅದಕ್ಕಾಗಿ ಸೈಕಲ್ನ ನಾಲ್ಕು ಚಕ್ರಗಳನ್ನು ಬಳಸಿ ಒಂದು ತಳ್ಳೋಗಾಡಿ ಮಾಡಿಸಿ, ಕಳ್ಳೆಕಾಯಿ ರಾಶಿ ಸುರಿದು, ವ್ಯಾಪಾರ ಮಾಡಲು ಕಳಿಸುತ್ತಿದ್ದರು. ಹುಡುಗರು ವ್ಯಾಪಾರ ಮಾಡಿ ಬಂದ ದುಡ್ಡಲ್ಲಿ ರಾತ್ರಿ ಚೆನ್ನಾಗಿ ಎಣ್ಣೆ ಹಾಕಿ ಅಪ್ಪ ಅಮ್ಮನ ಮೇಲೆ, ಅಕ್ಕ ಪಕ್ಕದವರ ಮೇಲೆ ಕೂಗಾಡುತ್ತಿದ್ದರು, ಬೆಳಿಗ್ಗೆ ಎದ್ದು ನೋಡಿದರೇ `ಅವ್ರೆನಾ’ ಅನ್ನುವಷ್ಟು ಮುಗ್ಧರಾಗಿರುತ್ತಿದ್ದರು. ಜಗಳಕ್ಕೆ ಇಂತಹ ಹೊತ್ತು-ಗೊತ್ತು ಅಂತೇನೂ ಇರುತ್ತಿರಲಿಲ್ಲ. ದುಡಿದು ತಾರದ ಗಂಡ, ಅಡ ಇಡುವ ವ್ಯವಹಾರ, ಕಳ್ಳ ಸಂಬಂಧಗಳು, ಮನೆಯಲ್ಲೇ ದುಡ್ಡು ಕದಿಯುವ ಮಗ, ಕದ್ದು ಸಿನಿಮಾಕ್ಕೆ ಹೋಗುವ ಹೆಂಡತಿ, ಹುಟ್ಟಿಗೆ, ಸಾವಿಗೆ, ಮದುವೆಗೆ, ಮೈನೆರೆದದ್ದಕ್ಕೆ ಎಲ್ಲಕ್ಕೂ ಮೈ ತುಂಬಾ ಸಾಲ ಮಾಡಿಕೊಂಡದ್ದು…. ಕಿತ್ತಾಟಕ್ಕೆ ಗ್ರಾಸವಾಗುತ್ತಿದ್ದದ್ದು, ಸಾಮಾನ್ಯವಾಗಿತ್ತು. ನಮ್ಮ ಗಾಣಿಗರ ಬೀದಿಯಲ್ಲಿ ಯಾರಾದರೂ ಸತ್ತರೆಂದರೇ…! ಆಗ ನೋಡಬೇಕು ವೈಭವ!! ದೊಡ್ಡ ಚಪ್ಪರ ಹಾಕಿಸಿ, ಮೈಕ್ ಹಾಕಿ ಜನರನ್ನೆಲ್ಲಾ ಸೇರಿಸಿ ಕಲಾತ್ಮಕವಾಗಿ ಚಟ್ಟಕಟ್ಟುತ್ತಿದ್ದರು, ಚಟ್ಟವೆಂದರೇ ಬರೀ ಚಟ್ಟವಲ್ಲ ಅದು ಬಿದಿರಿನ ಮಂಟಪ, ಗೋಪುರವನ್ನು ಬಿದಿರಲ್ಲೇ ಕಟ್ಟಿ ಮಂಟಪದ ಸುತ್ತ ಬಾಳೇಕಂದು ಬಿಗಿದು, ಬಗೆ ಬಗೆಯ ಹೂವಿನ ಹಾರಗಳಿಂದ ಅಲಂಕರಿಸುತ್ತಿದ್ದರು. ಮಂಟಪಕ್ಕೆ ನಾಲ್ಕು ಕಡೆ ಸಿಪ್ಪೆ ಸುಲಿಯದ ತೆಂಗಿನ ಕಾಯಿಗಳನ್ನು ಕಟ್ಟುತ್ತಿದ್ದರು. ಹೆಣಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ, ವಿಭೂತಿ ಬಳಿದು, ಚಕ್ಕಳಮಕ್ಕಳ ಹಾಕಿ ಕೂರಿಸಿ ತಲೆವಾಲದಂತೆ ಬಟ್ಟೆಯಿಂದ ಕಟ್ಟಿ, ಹಾರ ಹಾಕಿ, ಗಂಧದ ಕಡ್ಡಿಯ ರಾಶಿಯನ್ನೆ ಹಚ್ಚಿ, ಮೆರೆವಣಿಗೆ ಹೊರಟಿತ್ತೆಂದರೆ ಸಂಭ್ರಮಕ್ಕೆ ಸತ್ತವನೂ ಎದ್ದುಕುಣಿಯಬೇಕು! ಮನೆ ಮುಂದೆ ಹಾಕಿದ ಬೆಂಕಿಯನ್ನು ಕಾಯಿಸುತ್ತಾ ಕುಳಿತು, ಬೀಡಿ ಸೇದುವವರನ್ನೆಲ್ಲಾ ಎಬ್ಬಿಸಿಕೊಂಡು ಢಕ್ ಢಕ್ಣ್ ಣಕ್ಣಣ್ ಣಕಣ್! ಢಕ್ ಢಕ್ಣ್ ಣಕ್ಣಣ್ ಣಕಣ್! ಎಂದು ತಮಟೆ ಬಾರಿಸುತ್ತಾ, ಸಾಗಿಸುತ್ತಿರುವ ಶವದ ಮೇಲೆ ಕಳ್ಳೇಪುರಿ, ಕಾಸು ಎರೆಚುತ್ತಾ ಸಾಗುತ್ತಿರುವ ಜನಸ್ತೋಮದಲ್ಲಿ ತೀರಾ ಹತ್ತಿರದವರು ಬಿಟ್ಟರೆ ಮಿಕ್ಕವರೆಲ್ಲಾ ಆರಾಮಾಗಿರುತ್ತಿದ್ದರು.
ಎಂಥಾ ಬಡವನಿಗೂ ಸಾವಿನಲ್ಲಿ ಸಂಭ್ರಮದ ಬೀಳ್ಕೊಡುಗೆ ಸಿಗುತ್ತಿದ್ದುದನ್ನು ಕಂಡಾಗ ಅಚ್ಚರಿಯಾಗುತಿತ್ತು! ಅಕ್ಕಪಕ್ಕದ ಮನೆಯ ಕೋಳಿಗಳು ನಮ್ಮ ಹಿತ್ತಲ ಬಾಗಿಲಿನಿಂದ ಮನೆಯ ಒಳಗೆ ಬಂದು ಬಿಡುತ್ತಿದ್ದವು. ಅದನ್ನು ಓಡಿಸುವುದೇ ಒಂದು ಹರ ಸಾಹಸವಾಗುತ್ತಿತ್ತು. ಯಾವುದೇ ಎಗ್ಗಿಲ್ಲದೆ ಮನೆಯ ಒಳಗೆಲ್ಲಾ ಕೋಳಿಗಳು ಕಕ್ಕ ಮಾಡಿ ಹೋಗುತ್ತಿದ್ದವು. ನಮ್ಮಮ್ಮನಿಗೆ ಈ ಗಲೀಜನ್ನು ಕಂಡರಾಗುತ್ತಿರಲಿಲ್ಲ. `ಮೊದಲೇ ನೀರಿಗೆ ಬರ! ಮುಂಡೇವು ಇಲ್ಲೆ ಬಂದು ಸಾಯ್ತವೆ’ ಅಂತಾ ಬೈಯುತ್ತಿದ್ದರು.
ವರ್ಷದ ಕೆಲ ತಿಂಗಳುಗಳಲ್ಲಿ ಹಲವು ಮನೆಗಳಲ್ಲಿ ಶನಿದೇವರ ಕಥೆಯನ್ನು ಓದಿಸುತ್ತಿದ್ದರು. ಇಡೀ ರಾತ್ರಿ ಪಾರಾಯಣ ಇರುತ್ತಿತ್ತು. ಅಪಾರ ಶ್ರದ್ಧೆ ಭಕ್ತಿಗಳಿಂದ ಕೇರಿಯ ಜನರೆಲ್ಲಾ ಕುಳಿತು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಚಿಗಳಿಉಂಡೆಯ ಆಸೆಗಾಗಿ ಹೋಗುತ್ತಿದ್ದ ನಾನು, ವಿಕ್ರಮರಾಜನಿಗೆ ಶನಿ ಹೆಗಲೇರಿದ ಪರಿಯನ್ನು ಪ್ರತಿ ಸಾರಿ ಕೇಳಿದಾಗಲೂ ತತ್ತರಿಸುತ್ತಿದ್ದೆ. ನಿದ್ರೆ ಬಂದರೂ ಕಣ್ಮುಚ್ಚುವಂತಿಲ್ಲ. ಮಧ್ಯದಲ್ಲಿ ಎದ್ದು ಹೋದರೆ? ಅವಕೃಪೆಗೆ ಒಳಗಾಗುತ್ತೇನೆಂದು ಭಯ-…ಒದ್ದಾಡುತ್ತಿದ್ದೆ. ಇದೇ ಥರದ ಭಯವನ್ನು ಸಂತೇ ಮಾಳದ ದೊಂಬರಾಟ ನೋಡಿದಾಗಲೂ ಅನುಭವಿಸುತ್ತಿದ್ದೆ. ಅವರ ಆಟ, ಮ್ಯಾಜಿಕ್, ಬಗೆಬಗೆಯ ಹಾವು, ಸರ್ಕಸ್ಗಳನ್ನು ತೀರಾ ಕುತೂಹಲದಿಂದ ನೋಡುತಿದ್ದ ನನಗೆ, ಅವರು `ದುಡ್ಡು ಕೊಡದೇ ಮಧ್ಯದಲ್ಲಿ ಹೋದರೆ, ನಿಮ್ಮ ಬೆರಳು ಮಡಚಲಿಕ್ಕೆ ಸಾಧ್ಯವಿಲ್ಲ! ನಿಮಗೆ ನಾಗರಾಜನ ಶಾಪವಿದೆ. ನೀವು ಹಾಳಾಗಿ ಹೋಗ್ತೀರಿ….’ ಅಂತೆಲ್ಲಾ ಹೆದರಿಸಿ ಬಿಡುತ್ತಿದ್ದ, ಆ ದೊಂಬರಾಟದವ.
ಊರನ್ನು, ಕೇರಿಯನ್ನು ಸದಾ ಜೀವಂತವಾಗಿಡುತ್ತಿದ್ದುದ್ದು ಹಬ್ಬಗಳು. ವಿಶೇಷವಾಗಿ ದೇವಾಲಯಗಳು, ಅದೆಷ್ಟೊಂದು ದೇವಾಲಯಗಳು!! ದೊಡ್ಡ ಗುಡಿ ಅಂತಾ ಕರೀತಿದ್ದ ಸೌಮ್ಯ ಕೇಶವ ದೇವಾಲಯ ಇತ್ತು. ಅದರ ಮೇಲೆ ಹತ್ತಿ ಊರನ್ನೆಲ್ಲಾ ನೋಡುವುದೇ ಚೆಂದ. ಅಲ್ಲೆಲ್ಲಾ ಆಡುತ್ತಿದ್ದೆವು. ಕೇಶವ ದೇವಸ್ಥಾನದ ಮುಂದೆ ಎಲ್ಲೂ ಕಂಡಿರದ ಗರುಡ ಗಂಬ, ಅದಕ್ಕೊಂದು ವಿಶಾಲ ಕಟ್ಟೆ, ಊರಿನ ಕೇಂದ್ರ ಸ್ಥಳ ಅಂದರೇ ಆವಾಗ ಅದೇ! ಅಪರೂಪದ ಸುಗ್ರೀವನ ದೇವಸ್ಥಾನ! ಪೂಜೆ ಇಲ್ಲದೇ-ಸಿವಿಲ್ ನ್ಯಾಯಾಲಯವನ್ನಾಗಿ ಬಳಸುತ್ತಿದ್ದರು. ದೊಡ್ಡ ಗುಡಿಯ ಹಿಂದೆ ನಮ್ಮ ಕಾಮರ್ೆಂಟ್ (ಅಠಟಿತಜಟಿಣ)! ಯಾವುದೇ ಕ್ಷಣದಲ್ಲೂ ಛಾವಣಿ ಕುಸಿದು ಬೀಳುವ ಹಂತದಲ್ಲಿತ್ತು. ಆರಂಭದಲ್ಲಿ ಕಿತ್ತು ಹೋದ ಬರೀ ಗಾರೆನೆಲ, ಆಮೇಲೆ ಅಂಡೂರಲು ಮಣೆ ಬಂತು, ಪ್ರತಿ ಶನಿವಾರ ಕಡೇ ಪಿರಿಯಡ್ಡು, ಸಾಂಸ್ಕೃತಿಕ ಕಾರ್ಯಕ್ರಮ, ನಾನೇ ಲೀಡ್ರು, ಎಲ್ರನ್ನೂ ಹೆದರುಸ್ತಿದ್ದೆ-ಯಾರಾದ್ರೂ ರೋಪ್ ಹಾಕಿ ಬಿಟ್ರೆ ನಾನೇ ಹೆದರ್ಕೋತ್ತಿದ್ದೆ! ಅಲ್ಲಿ ಹಾಡಿದ ಹಾಡುಗಳು, ಆಡಿದ ನಾಟಕಗಳು ಇವತ್ತಿಗೂ ನೆನಪಿದೆ. ಬೊಳ್ಳಮ್ಮ, ಪಾರ್ವತಿ ಟೀಚರ್, ಮಾಯಾಂಟಿಚಂದ್ರಶೇಖರ್, ಚಂದ್ರಿಕಾ ಟೀಚರ್, ಮೀನಾಕ್ಷಿ ಟೀಚರ್, ಜಯಶ್ರೀ ಮುಂತಾದ ಟೀಚರ್ಗಳು ನನಗೆಷ್ಟು ಮುಖ್ಯ ಅನಿಸಿತ್ತೋ ಅಷ್ಟೇ ಊರಿನ ಎಂ.ಆರ್.ಎನ್. ಶಾಸ್ತ್ರಿಗಳು, ಕೋಟೆಬೆಟ್ಟದ ಸುಬ್ರಾಯರು, ಮಾಗಡಿ ರಾಮಶಾಸ್ತ್ರಿಗಳು, ಚಿಕ್ಕಣ್ಣ, ಊರಿನ ಅನೇಕ ಮುಖ್ಯಸ್ಥರು ಕೂಡ ವಿಶೇಷವಾಗಿ ಕಾಣುತ್ತಿದ್ದರು. ನಾಗೇಶ, ಸತೀಶ, ಚಿದಂಬರ, ಕೇಶಿ, ಚಿದ, ಸೀನಿ, ಬಕ್ರೀ ಸತೀಶ, ಉಮೇಶ, ಸ್ವಾಮಿ, ಆಚಾರಿವಸಂತ, ಕಾಕಾಸುರೇಶ, ರುದ್ರೇಶ, ವಿಜಯಕುಮಾರ, ಹೋಟ್ಲು ರಾಘವೇಂದ್ರ, ಗೋಪಿ, ಚೆನ್ನಿಗರಾಯಿ…. ನನ್ನ ಓರಗೆಯ ಅನೇಕರನ್ನು ಕಟ್ಟಿಕೊಂಡು ನಾಟಕ ನೋಡುತ್ತಿದ್ದುದ್ದು, ಮಾಡುತ್ತಿದ್ದುದ್ದು, ಕಣ್ಣಿಗೆ ಕಟ್ಟಿದೆ. ಸೀರೆಯೇ ಸೈಡ್ವಿಂಗ್, ಜಮಖಾನವೇ ಪರದೆ, ಕುರಿ ತುಪ್ಪಟವೇ ಮೀಸೆ-ಗಡ್ಡ, ಸೈಕಲ್ ಪಂಕ್ಚರ್ ಸಲ್ಯೂಷನ್ನೇ ಸ್ಪಿರಿಟ್ ಗಮ್ಮು, ಸೀಮೆಸುಣ್ಣದ ಪುಡಿಯೇ ವಿಭೂತಿ, ಕುಂಕುಮ ಅರಿಶಿನವೇ ಮುಖದ ಬಣ್ಣಗಳು, ಇಜ್ಜಿಲೇ ಕಣ್ಣಕಪ್ಪು, ಖಾಲಿ ಎಳನೀರು ಬುಂಡೆಯೇ ಗದೆ….
ಆಡಿದ್ದೇ ಆಟ! ನಾಲ್ಕನೇ ಕ್ಲಾಸಿನಲ್ಲಿ ಮೋಹಿನಿ ಭಸ್ಮಾಸುರದಲ್ಲಿ ಮೋಹಿನಿಯಾಗಿದ್ದೆ, ಸ್ಟೇಜಿನ ಮೇಲೆ ಸೀರೆ ಬಿಚ್ಚೋಗಿದ್ದು, ನೆನಪಿದೆ! ಅರನೇ ಕ್ಲಾಸಿನಲ್ಲಿ ನಾನೇ ನಾಟಕ ಬರೆದು, ಮುಖ್ಯ ಪಾತ್ರ ಮಾಡಿ ಟಿಕೆಟ್ ಪ್ರಿಂಟ್ ಮಾಡಿಸಿ, ಮಾರಿ ಬಂದ ಟಿಕೆಟ್ನಲ್ಲಿ ಶಿವರಾತ್ರಿ ಜಾಗರಣೆ ಮಾಡಿ, ಚರ್ಪು ಹಂಚಿ, ತಿಂದದ್ದೆಲ್ಲಾ ಈಗಲೂ ಹಸಿ ನೆನಪೇ…. `ಕೌರವನ ಗರ್ವ ಭಂಗ’ ನಾಟಕ ನೋಡಲು ಬಂದ ಜನರು ‘ಹೌಸ್ಫುಲ್’ ಬೋಡರ್್ ನೋಡಿ ದಂಗಾದರು. ಅರವತ್ತು ಜನಕ್ಕಿಂತ ಜಾಸ್ತಿ ಕುಳಿತುಕೊಳ್ಳಲು ಜಾಗ ಇರಲಿಲ್ಲ!
ದೊಡ್ಡಗುಡಿ ಮುಂದೆ ವರ್ಷಕ್ಕೊಂದು ಸಲ ರಾಜಸೂಯಯಾಗ, ಕುರುಕ್ಷೇತ್ರ, ಸಂಪೂರ್ಣ ರಾಮಾಯಣ, ಅಲ್ಲದೇ ಶನಿಪ್ರಭಾವ ನಾಟಕ ಪ್ರದರ್ಶಿಸುತ್ತಿದ್ದರು.
ದಿವಸವಿಡೀ ಅವರು ಸ್ಟೇಜ್ ಹಾಕುತ್ತಿದ್ದ ರೀತಿ, ಕಂಬಿಗಳು, ಪರದೆ, ಬಣ್ಣ ಬಣ್ಣದ ಲೈಟು, ಮೇಕಪ್ಪು, ಬಿಲ್ಲು, ಚಕ್ರ, ಗದೆ, ರಥ, ಹಂಸ, ನವಿಲು, ಮೋಡ, ಲೆಗ್ ಹಾರ್ಮೋನಿಯಂ, ಆ ಗುಂಡಿ, ಮೇಷ್ಟ್ರೂ, ತಬಲ ಬಾರಿಸುವ ಎಣ್ಣೆ ಮಾಸ್ಟ್ರು! ಫ್ರಿಲ್ಗಳು, ಟಾರ್ಪಾಲ್ಗಳು…. ಎಲ್ಲವನ್ನು ಸಿದ್ದ ಮಾಡುತ್ತಿದ್ದುದನ್ನು ಎವೆ ಇಕ್ಕದೇ ಕಣ್ತುಂಬಿಕೊಳ್ಳುತ್ತಿದ್ದೆ. ರಾತ್ರಿ ಹತ್ತಾದೊಡನೇ ಅಲ್ಲಿ ಸೃಷ್ಠಿಯಾಗುತ್ತಿದ್ದ ಲೋಕ ನೋಡಿ ವಿಸ್ಮಯಗೊಳ್ಳುತ್ತಿದ್ದೆ. ಇಡೀ ರಾತ್ರಿ ನಾಟಕ ನೋಡಿ ಮಾರನೇ ದಿನ ಸ್ಕೂಲಿಗೆ ಚಕ್ಕರ್ ಹೊಡಿಯುವುದು ಅಭ್ಯಾಸವಾಗಿಬಿಟ್ಟಿತ್ತು.

ಊರಿನಲ್ಲಿ ಜನರು ಹೆಚ್ಚು ಹೆದರುತ್ತಿದ್ದುದು, ನರಸಿಂಹಸ್ವಾಮಿ ದೇವಸ್ಥಾನಕ್ಕೆ. ಒಳಗೆ ಹೋದರೇನೆ ಭೀತಿ ಬರುತಿತ್ತು. ಅಗಾಧಮೌನ…. ಬಾವಲಿಗಳ ವಾಸನೆ. ಗೌವ್ವೆನ್ನುವ ಒಳಪ್ರಾಂಗಣ, ಈಗಲೂ ಸರ್ಪ ಬಂದು ಹಾಲು ಕುಡಿಯುತ್ತದೆ ಎನ್ನುವ ಪ್ರತೀತಿ, ಭುವನೇಶ್ವರಗುಡಿ, ಕಾಳಿಕಾಂಬ ಗುಡಿ, ವೀರಭದ್ರನ ಗುಡಿ, ರಾಮಮಂದಿರ, ವರ್ಷಕ್ಕೊಂದು ಬಾರಿ ಜಾತ್ರೆ ಆಗುತ್ತಿದ್ದ ಊರ ಹೊರಗಿನ ಬಡಗುಡಮ್ಮನ ಗುಡಿ, ಆಂಜನೇಯನ ಗುಡಿ…. ಅದೆಷ್ಟು ಪುರಾಣದ ದೇವಸ್ಥಾನಗಳು ನಾಗಮಂಗಲದಲ್ಲಿಯೋ ಆಯಾ ದೇವರುಗಳೇ ಬಲ್ಲರು! ಎಲ್ಲಕ್ಕೂ ಒಂದೊಂದು ಕಥೆ ಇದೆ! ಆಕರ್ಷಣೆ ಇದೆ. ಬಡಗುಡಮ್ಮನ ಜಾತ್ರೆಯಲ್ಲಿ ಮೈ ಮೇಲೆ ದೇವರು ಬಂದು ಪೂಜಾರಿ, ಕೈಗಿತ್ತ ಕುರಿ ಕತ್ತನ್ನು ಹಲ್ಲಿನಿಂದ ಸಿಗಿದು ಹಸಿ ರಕ್ತವನ್ನು ಹೀರುತ್ತಿದ್ದುದನ್ನು ಕಂಡು ಭೀತರಾಗಿ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಿದ್ದ ಹೈಕಳು ಅದೆಷ್ಟೋ!.
ಊರಿನ ದೊಡ್ಡ ಗಣಪತಿ ಸಮಿತಿಯವರು ಪ್ರತಿವರ್ಷವು ರಾಜ್ಕುಮಾರ್ ಬರ್ತಾರೆ ಅಂತ ಅನೌನ್ಸ್ ಮಾಡೋರು; ಕಡೇ ಕ್ಷಣದಲ್ಲಿ ಬರ್ತಾಯಿಲ್ಲ ಅಂತ ಹೇಳುವುದು ಸವರ್ೇ ಸಾಮಾನ್ಯವಾಗಿತ್ತು. ಗಣಪತಿ ಬಿಡೋ ಕಡೆ ದಿನ ಉತ್ಸವ ಮಾತ್ರ ಅದ್ಧೂರಿ! ತರಹೇವಾರಿ ಪಟಾಕಿ ಆರ್ಭಟ…. ಅಬ್ಬಾಬ್ಬ…. ತುಂಬಾ ಚೆನ್ನಾಗಿರೋದು.
ಕಲಾಸಂಘದವರು ಒಂದ್ಸಾರಿ `ಮೃತ್ಯು ಸಿಂಹಾಸನ’ ನಾಟ್ಕ ಪ್ರಾಕ್ಟಿಸ್ ಮಾಡ್ತಿದ್ದರು. ಒಂದೀಡಿ ದಿನ ಕಿಟಿಕೀಲಿ ಅರ್ಧ ಅಂಡಲ್ಲಿ ಕೂತು ಕಂಬಿ ಹಿಡಿದು ನೋಡುತ್ತಿದ್ದೆ. ಬಹಳ ಚನ್ನಾಗಿ ನಟಿಸೋರು, ಶಿಖರೇಶ್, ಶಲ್ಲಪ್ಪನ್, ಆದಿಶೇಷ್, ಹೋಟ್ಲುಮೂರ್ತಿ, ಲಿಂಗಪ್ಪ, ಮುಂತಾದವರೆಲ್ಲ ಇದ್ದರು. ನಾಟ್ಕದ ದಿನ ಜೋರಾಗಿ ಮಳೆ ಬಂದು…. ಕೊಚ್ಚೆ ಆಗದಿರಲಿ ಅಂತ ನೆಲಕ್ಕೆ ಲಾರಿಗಟ್ಟಲೆ ಭತ್ತದ ಜೊಳ್ಳು ತಂದು ಹರಡಿದ್ರು. ನಾವೆಲ್ಲ ಒಬ್ಬರಿಗೊಬ್ಬರು ತಲೆಮೇಲೆ ಸುರಿದುಕೊಂಡು ಕೇಕೆ ಹಾಕುತ್ತಿದ್ದೆವು. ಲಗೋರಿ, ಗುಲ್ಟೋರಿಯೋ, ಐಸ್ಪೈಸ್, ಕಡ್ಡಿ-ಕಲ್ಲು, ಟಿಕ್ಕಿ, ಕಳ್ಳ-ಪೋಲೀಸ್, ಅದೆಷ್ಟೊಂದು ಆಟಗಳನ್ನು ಆಡುತ್ತಿದ್ದೆವು. ಊರಿನಲ್ಲಿ ನಾಟಕ, ಹರಿಕಥೆ, ಗಮಕ, ಆರ್ಕೇಷ್ಟ್ರಾ, ಅಂದ್ರೆ ಎಲ್ಲ ಬುಟ್ಟು ಸ್ಟೇಜಿನ ಮುಂದೆ ವತ್ತಾರೆನೆ ತಿಕ-ಮುಕ ತೊಳಿದೇನೆ ಹಾಜರಾಗಿಬಿಡುತ್ತಿದ್ದೊ.
ಸುಬ್ರಾಯರ ಮಗ ಸತೀಶ ಮನೆಯಿಂದ ದುಡ್ಡೆತ್ಕಬಂದು ಗೋಲಿ ಸೋಡ, ಜಾತ್ರೆ ಷರಬತ್ತು, ಕೊಬ್ರಿಮಿಠಾಯಿ, ಬೋಟಿಸಂಡಿಗೆ, ಖಾರದಕಳ್ಳೆಕಾಯಿಬೀಜ, ಬಟಾಣಿ…. ಹಾಳೂಮೂಳು ಎಲ್ಲಾ ತಿನ್ನಿಸುತ್ತಿದ್ದ. ಹೊಟ್ಟೆ ಕೆಡ್ಸಿಕೊಂಡು ಬಂದು ಕ್ಲಾಸಿನಲ್ಲಿ ಮಗ್ಗಿ ಕೇಳುವಾಗ ಸದ್ದಿಲ್ಲದೆ ಹೂಸು ಬುಟ್ಟು ಬೈಸ್ಕೋತಿದ್ದ ಮೋಹನ…. ಒಳಪೆಡ್ಲು ಸೈಕಲ್ ಕಲಿಯಕ್ ಹೋಗಿ ಕಲ್ಲಿಗೆ ಗುದ್ದಿ ಮೋರಿಗೆ ಬಿದ್ದು ಮುಖವೆಲ್ಲಾ ಕೆಸರಾಗಿ, ಮನೆಹಿತ್ಲು ಬಾಗ್ಲಿಂದ ಕದ್ದು ಒಳಗ್ನುಗ್ಗಿ, ನೀರಿಲ್ಲದ ಊರಿನಲ್ಲಿ ಮೂರ್ನೇ ಸ್ನಾನ ಮಾಡಿ ಮನೆಯಲ್ಲಾ ಗಬ್ಬೆಬ್ಬಿಸಿ, ಉಗಿಸಿಕೊಳ್ಳದಿದ್ದರೆ ತಿಂದ ಅನ್ನ ಜೀರ್ಣವಾಗುತ್ತಿರಲಿಲ್ಲ!
ಬಕ್ರಿ ಸತೀಶ ನಮಗಿಂತ ನಾಲ್ಕಾರು ವರ್ಷ ಕಿರಿಯೋನು. ಆಟಕ್ಕೆ, ನಾಟ್ಕಕ್ಕೆ, ಅವನನ್ನ ಸೇರ್ಸಕೋಬೇಕು ಅಂದ್ರೆ ಷರತ್ತು ಹಾಕೋವು. ಅವ್ರು ಹೋಟ್ಲು ಇಟ್ಟಿದ್ರು. ತಿಂಡಿ ಎತ್ಕೊಂಡ್ ಬಂದು ಕೊಡಬೇಕು. ಅವ್ನು ಆಸೆ ಪಟ್ಟು ಅವ್ರ ಅಪ್ಪ ಆ ಕಡೆಗೆ ತಿರ್ಗ್ದಾಗ ಹೋಟ್ಲಿಂದ ಚಕ್ಲಿ, ಇಡ್ಲಿ, ಹಾಳಾಗೋಗ್ಲಿ, ಉಪ್ಪಿಟ್ಟು, ಕೇಸರಿಬಾತು, ಚಿತ್ರಾನ್ನನ ಒಂದೇ ಜೇಬ್ನ್ಲ್ಲಿ ಹಾಕ್ಕೊಂಡುಬಂದು ಕೊಡೋನು. ಚಡ್ಡಿ ಜೇಬಲ್ಲಿರೋ ಹಳೇ ಚೂರು ಕಾಗದ, ಗಾಜಿನ ಬಳೆಚೂರು, ಟಿಕ್ಕಿ, ಬಳಪ…. ನೂಲು ಕೂಡ ಕಿತ್ತು ಕೊಡೋನು. ಒಂದ್ಸಾರಿ ಚಡ್ಡಿ ತುತಾಗ್ಬುಟ್ಟು ಎಲ್ಲಾ ಚೆಲ್ಕಂಡ್ಬಂದ್ದವ್ನೆ! ಎಲ್ರೂ ಸೇರಿ ದನಕ್ ಬಡ್ದಂಗ್ಗೆ ಬಡ್ದಿದ್ದೋ… ಅವ್ನು ಮನೆಲಿ ಹೇಳೋಹಂಗಿಲ್ಲ, ಯಾಕೇಂದ್ರೆ ಕದ್ಗೊಂಡ್ ಬರೋನಲ್ವಾ?
ಕರಿಯ ಸೀದರ್ ಮೂತರ್ಿಗೆ ನಾಟ್ಕದಲ್ಲಿ ರಾಜ ನರ್ತಕಿ ಪಾತ್ರ.! ಎಲ್ಲಾ ಸಿದ್ಧತೆ ಮಾಡ್ಕೊಂಡಿದ್ದೊ. ಅವ್ನು ಅವತ್ತೇ ಜಾತ್ರೆಗೆ ಹೋಗಿ ದೇವ್ರಿಗೆ ಮುಡಿ ಕೊಟ್ಟು ಬುಂಡೆ ಮಾಡಸ್ಕಂಡ್ ಬಂದಿದ್ದ, ಸರಿ ಹುಡ್ಗಿ ಡ್ರೆಸ್ ಹಾಕಿ ಎದೆಗೆ ಎಲ್ಡು ಕಂಟ (ತೆಂಗಿನ ಚಿಪ್ಪು) ಸಿಗಿಸಿ ಬುಂಡೆ ತಲೇಲೆ ಡ್ಯಾನ್ಸ್ ಮಾಡ್ಸಿದ್ದೊ…. ಅದಕ್ಕೇ ಅವ್ರ ಅವ್ವ `ನನ್ ಮಗಿಗೆ ದುಷ್ಟಿ (ದೃಷ್ಠಿ) ಆಗದೆ’ ಅಂತ ಇಳಿ ತೆಗ್ದಿದ್ದಳು.
ಗಾಣಿಗರ ಬೀದಿಗೆ ಅಂಟಿಕೊಂಡೇ ಇದ್ದ ಕೊಳದ ಬೀದಿಯಲ್ಲಿದ್ದ ಶಿವರಾಮಯ್ಯನವರ ಎಂಟಂಕಣದ ಮನೆ, ಮುಂದಿದ್ದ ತುಳಸೀ ಕಟ್ಟೆ, ಪಕ್ಕದ ಕೊಳ, ನೆರೆಯಲ್ಲಿ ನವಗ್ರಹ ಗುಡಿ… ಒಂದಕ್ಕಿಂತ ಒಂದು ಚೆನ್ನಾಗಿತ್ತು, ಶಿವರಾಮಯ್ಯನವರ ಮಗ ಉಮೇಶ `ಕುರುಕ್ಷೇತ್ರ’ ನಾಟಕ ಬರ್ದು ನನಗೆ ಸಾತ್ಯಕಿ ಪಾತ್ರ ಕೊಟ್ಟಿದ್ದ! ಅವ್ರ ಮನೆ ಅಟ್ಟದ ಮೇಲೆ ತಾಲೀಮು. ಬಡೈಕ್ಳೂ ಯಾರೂ ಸರಿಯಾಗಿ ಪ್ರಾಕ್ಟೀಸ್ಗೆ ಬರ್ದೇ ಮೂರ್ ದಿನಕ್ಕೆ ನಾಟ್ಕ ನಿಂತು ಹೋಯಿತು! ಅವರ ಮನೆ ಪಕ್ಕದ ಗುಡಿಯನ್ನ ಆಕ್ರಮಿಸಿಕೊಂಡಿದ್ದ ಉದ್ದ ಗಡ್ಡದ ಕಳ್ಳ ಸ್ವಾಮಿ ಮೈಮೇಲೆ ಶನಿದೇವರು ಬರುತ್ತೇಂತ ಎಲ್ಲರನ್ನೂ ನಂಬಿಸಿ ರಾತ್ರೋರಾತ್ರಿ ಹುಂಡಿಯನ್ನೇ ಹಾರಿಸಿಕೊಂಡು ಓಡಿಹೋಗಿದ್ದ. ಅದ್ಕ್ ಮುಂಚೆ ನಮ್ಮ ಮನೆಯಲ್ಲಿದ್ದ ಪುಟ್ಟ ಮೊಲವನ್ನು `ಶನಿದೇವರು ಕೇಳಿದೆ’ ಅಂತ ನಾನಿಲ್ಲದಾಗ ಬಂದು, ಒಯ್ದುಬಿಟ್ಟಿದ್ದ. ನಂತರ ನಾನು ಅರಚಾಡಿ ರಂಪ ಮಾಡಿ ಮೊಲ ವಾಪಸ್ಸ್ ಪಡೆದಿದ್ದೆ.
ಪ್ರತೀ ವರ್ಷದ ಮೊಹರಂನಲ್ಲಿ ಸಾಬ್ರ ರಸ್ತೆಯಲ್ಲಿ ರಾತ್ರಿ ವೇಳೆ ಹುಲಿ ಕುಣಿತ; ನಮ್ಮ ಕೌನ್ಸಿಲರ ಚಿಕ್ಕಣ್ಣ ಬಲೇ ಪಸಂದಾಗಿ ಕುಣಿಯೋರು! ಬಣ್ಣ, ಆರ್ಭಟ, ಮೈಮೇಲೆ ಚಿಣಿಕಿ-ಮಿಣಿಕಿ ಲೈಟ್ ಹಾಕಿರೋರು.
ಪ್ರತೀ ಶುಕ್ರವಾರ ಸಂತೆ ಮಾಳದಲ್ಲಿ ಅದೆಷ್ಟೊಂದು ಬಣ್ಣಗಳು ಅಂದ್ರೆ, ಅಲ್ಲಿ ಸಿಕ್ಕದ ವಸ್ತುಗಳೇ ಇಲ್ಲ! ಸೊಪ್ಪು ಸದೆಯಿಂದ ಹಿಡಿದು `ಗುಳ’ದವರೆಗೆ. `ಲಾಳ’ ಕಟ್ಟೋದರಿಂದ ಹಿಡಿದು, ದನ-ಮನೆ ಯಾಪಾರಕ್ಕೂ ಅವತ್ತೇ ಬರೋರು, ಗಿಜಿಗಿಜಿ ಅನ್ನೋದು ಸಂತೆ. ಸಂಜೆ ಹೊತ್ಗೆ ನೊಣ ಹೊಡೆಯಕ್ಕೂ ಜನ ಇರ್ತಿರ್ಲಿಲ್ಲ!
ಪಕ್ಕದಲ್ಲೇ ಸಿನೆಮ ಟೆಂಟ್ ಇತ್ತು. ಕಾಸು ಇಲ್ದೆ ಇದ್ದಾಗ್ಲೆಲ್ಲಾ ಟಿ.ಬಿ. ರಸ್ತೆಯ ಪಕ್ಕದಲ್ಲಿದ್ದ ನಾರಾಯಣಶಾಸ್ತ್ರಿಗಳ ತೋಟದಿಂದ ಕದ್ದ ಎಳನೀರು, ಪರಂಗಿಹಣ್ಣು, ಸೀಬೆಹಣ್ಣು ಇತ್ಯಾದಿಗಳನ್ನು ಗೇಟ್ಕೀಪರ್ಗೆ ಕೊಟ್ಟು ವೀರಕೇಸರಿ, ಬಾಂಧವ್ಯ, ಮಕ್ಕಳ ರಾಜ್ಯ, ಸಂತತುಕಾರಾಮ್ ಚಿತ್ರಗಳನ್ನು ನೋಡಿದ್ದು ನೆನಪಿದೆ.
ವೆಂಕಟೇಶ್ವರ ಟಾಕೀಸ್ ಆರಂಭವಾದಾಗ `ಶ್ರೀನಿವಾಸ ಕಲ್ಯಾಣ’ ನೋಡಿ ಚಪ್ಪಲಿ ಬಿಟ್ಟು ನಾನು ನನ್ನ ಗೆಳೆಯರೆಲ್ಲ ಪರದೆಗೆ ಅಡ್ಡ ಬಿದ್ದು ನಮಸ್ಕಾರ ಮಾಡಿದ್ದು ನೆನಸ್ಕೊಂಡ್ರೆ ಈಗ ನಗು ಬರುತ್ತೆ! `ಮಯೂರ’ ನೋಡಿ ಬಂದು ಆ ಮನೆ ತಾರಸಿಯಿಂದ ಈ ಮನೆಗೆ ಹಗ್ಗ ಹಿಡಿದು ನೇತಾಡಿ ನಾವೂ `ರಾಜಕುಮಾರ್’ ಆಗಲು ಹೋಗಿ ಬಿದ್ದು ಕಾಲು ಉಳುಕಿತ್ತು.
ನಾಗೇಶನ ಮನೇಲಿ ಬಳಪದ ಕಲ್ಲಿನಲ್ಲಿ ನಾವೇ ಲಿಂಗಕೆತ್ತಿ, ದೇವಸ್ಥಾನ ಅಂತ ನಾಯಿಗೂಡು ಕಟ್ಟಿ, ಲಿಂಗಕ್ಕೆ ಹಾಲು-ಬೆಣ್ಣೆ, ತುಪ್ಪ. ಎಲ್ಲಾ ಸುರಿದು ಸಂಜೆ ಹೊತ್ಗೆ ನಾವೇ ನೆಕ್ಕಿಕೊಳ್ಳೋವು! ಕೇಶಿ ಮನೆ ಮುಂದಿದ್ದ ರೂಂನಲ್ಲಿ `ಶಿವಶಂಕರ ಸಮಿತಿ’ ಅಂತಾ ಸಂಘಕಟ್ಟಿ ದಿನ ಇಡೀ `ಕೌರವನ ಗರ್ವಭಂಗ’ ನಾಟ್ಕ ಪ್ರಾಕ್ಟೀಸ್ ಮಾಡಿ ಅಕ್ಕಪಕ್ಕದ ಮನೆಯವರೆಲ್ಲಾ `ಮುಂಡೇವಕ್ಕೆ ಬೇರೆ ಕ್ಯಾಮೆ ಇಲ್ಲ’ ಅಂತಾ ಉಗಿಸಿಕೊಳ್ಳೋವು. ಮಾತೆತ್ತಿದರೇ ಗಾಂಧಿ-ಭವನದ ಮುಂದೆ ನಾಟಕಗಳಾಗುತ್ತಿತ್ತು. ದಿನಕ್ಕೊಂದು ಸಂಘ ಹುಟ್ಟಿ, ನಾಟ್ಕದ ಮಾರನೇ ದಿನ ಮಲಗಿಬಿಡುತಿತ್ತು. ಅದರ ನಡುವೆ ನಾ.ಸು. ನಾಗೇಶ ಮತ್ತು ಅವರ ಗೆಳೆಯರು ಕಟ್ಟಿದ `ಕನ್ನಡ ಸಂಘ’ದ ಉದ್ಘಾಟನೆಗೆ ಆಗ ತ.ರಾ.ಸು ಬಂದಿದ್ದರು ಅಂತಾ ನನಗೆ ನೆನಪು.
ಊರಿನಲ್ಲಿ ಅವಾಗವಾಗ ಅನೇಕ ಸಾಬ್ರು ಹುಡುಗರು ಬೊಮ್ಮನ್ ಹುಡುಗೀರ್ನ ಪಟಾಯಿಸುತ್ತಿದ್ದದು, ನಮ್ಮ ಟೀಚರ್ರ ಪ್ರೇಮ ಪ್ರಕರಣಗಳು, ಮುಂತಾದ ಅವಘಢಗಳಿಗೆ ಊರೇಕೆ ಇಷ್ಟೊಂದು ತೀವ್ರವಾಗಿ ಪ್ರತಿಕ್ರಯಿಸುತ್ತೆ? ಅಂತ ಸದಾ ಆಟ, ಉತ್ಸವ, ನಾಟಕ, ತರ್ಲೆ ಅಂತಾ ಮಾಡಿಕೊಂಡಿದ್ದ ನಮಗೆ ಅರ್ಥವಾಗುತ್ತಿರಲಿಲ್ಲ!.
ಇವತ್ತಿಗೂ ಒಂದ್ಸಾರಿ ಕೋಟೆ ಬೆಟ್ಟದ ಜಾತ್ರೆಗೋಗಿ, ಕಳ್ಳೇಪುರಿ ತಿನ್ತಾ, ಬಣ್ಣದ ಶರಬತ್ತು ಕುಡೀಬೇಕು ಅನ್ಸುತ್ತೆ, ಅವ್ರಿವರ ಮನೆ ಬೊಂಬು-ಗಳ ಕದ್ಕೊಂಬಂದು ಒಟ್ಟ್ಹಾಕಿ `ಕಾಮಣ್ಣ ಮಕ್ಕಳು ಕಳ್ಳಸೂಳೆ ಮಕ್ಕಳು….’ ಅಂತಾ ಬೆಂಕಿ ಸುತ್ತ ಕುಣೀಬೇಕು ಅನ್ಸುತ್ತೆ. ಶಂಕರ ಜಯಂತಿ ಸಮಾರಾಧನೆಯ ತಿಳಿಸಾರಿನ ರುಚಿ, ಸಂಕ್ರಾಂತಿ ದಿನ ಕಿಚ್ಚು ಹಾಯಿಸುವಾಗ ದನದ ಜೊತೆಗೆ ನಾವು ಬೆಂಕಿಯನ್ನ ಹಾರುತ್ತಿದ್ದ ರೋಮಾಂಚನ, ಸಂತೆಮಾಳದ ರಸ್ತೇಲಿ ಉದ್ದಕ್ಕೆ ಕುರಿಮಾಂಸ ನೇತಾಕಿ, ಅದರ ಮೇಲೆ ಚಿನ್ನಾರಿ ಪೇಪರ್ ಅಂಟಿಸಿರುವುದರ ಜರಿ ಜರಿ, ಉಪ್ಪಾರಳ್ಳಿ ಮೂಗನ ಜಾಗಟೆ ಸೌಂಡು, ಮಾದರಿ ಸ್ಕೂಲ್ ಮುಂದೆ ಮಲಗುತಿದ್ದ ಹುಚ್ಚನ ವಿಚಿತ್ರ ಶಬ್ದ, ಕಬ್ಬಡ್ಡಿ ಟೂರ್ನ್ಮೆಂಟ್ನ ಕೇಕೆ, ಎಂ.ಆರ್.ಎನ್. ಶಾಸ್ತ್ರಿಗಳ ಭಾಷಣ, ದೊಡ್ಡ ಗುಡಿಯ ಕಣ್ಣೈಂಗಾರ್ರ ಘಂಟೆ ಸದ್ದು, ಸಂತೆ ಮುಗಿದ ನಂತರದ ಸಂಜೆಯ ಮೌನ….
ಈಗಲೂ ಕಿವಿಯಲ್ಲಿ ನಿನಾದಿಸುತ್ತಲೇ ಇದೆ.
 
(`ದಬಕ್ ದಬಕ್ ಗುಲ್ಟೋರಿಯೋ’ ಅನ್ನುವುದು ಆಟದ ನಡುವೆ ನನ್ನೊಡನಾಡುತ್ತಿದ್ದ ಹೈಕಳ ಆಟದ ಕೇಕೆ!)
 
 
 

‍ಲೇಖಕರು avadhi

1 July, 2013

4 Comments

  1. vijayendra kulkarni

    good article-vijayendra gulbarga

  2. GURURAJ KATHRIGUPPE

    RAMESHANNA, good start as columist.It is my fortune,that you have started your article with your memories of NAGAMANGALA. Being a non resident Nagamangalan,reading your article brings NOSTALGIC feeling in me,at the same time i felt that you have written a ‘bit’ of your memory of NAGAMANGALA.I know you have much more Nagamangala in your memory,you can write more about people,culture, politics, and fragrance of my home town.I am eagerly waiting, please don’t disappoint me.keep on writing ANNA.

  3. prasanna kumar jm

    Ankana bareyo nim shaily tumba ista aytu sir. . .elloo bore hodeyolla. . . Nanna chik vayasalli bala iladada koti tara adiddu. . . Nan tarle nodi nagesh sir hunumanta antiddu. . A.c.m sir anjuneya anta addesrittiddu. . Nam kannada madam pralayantaka antaga nan scope takoltididdu ela nenpagtide. . .

  4. Sripathi manjanabailu

    Ramesha, good. keep itup.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading