ನಾ ದಿವಾಕರ್ ನೇರನುಡಿ : ಅನಾಹುತ ನಿಸರ್ಗ ಪ್ರೇರಿತ -ವಿನಾಶ ಮಾನವ ನಿರ್ಮಿತ

ನಿಸರ್ಗ ಮತ್ತು ಮನುಕುಲದ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಮನುಕುಲದ ಮುನ್ನಡೆಗೆ ಪೂರಕವಾದ ಪರಿಕರಗಳನ್ನು ಒದಗಿಸುವ ನೈಸರ್ಗಿಕ ಸಂಪನ್ಮೂಲಗಳು ಮಾನವನ ಅಭ್ಯುದಯಕ್ಕೆ, ಪ್ರಗತಿಗೆ, ಏಳಿಗೆಗೆ, ಮುನ್ನಡೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಲೇ ತನ್ನ ಒಡಲ ರಕ್ಷಣೆಗಾಗಿ ಕೆಲವು ಸ್ವಯಂ ರಕ್ಷಣೆಯ ವಿಧಾನಗಳನ್ನು ಅಳವಡಿಸಿಕೊಂಡಿರುತ್ತದೆ. ಅರಣ್ಯ, ಬೆಟ್ಟ ಗುಡ್ಡಗಳು, ನದಿಗಳು, ಪರ್ವತಗಳು, ಹಿಮಾಚ್ಚಾದಿತ ಪ್ರದೇಶಗಳು, ಹುಲ್ಲುಗಾವಲು, ಜಲಮೂಲಗಳು, ಖನಿಜಗಳು ಹೀಗೆ ನಿಸರ್ಗ ತನ್ನ ಒಡಲಲ್ಲಿ ಅನೇಕಾನೇಕ ಸಂಪನ್ಮೂಲಗಳನ್ನು ಅಡಗಿಸಿಕೊಂಡಿರುತ್ತದೆ. ಈ ಸಂಪನ್ಮೂಲಗಳಲ್ಲಿ ಕೆಲವನ್ನು ಮಾನವ ಸಮಾಜ ತನ್ನ ಒಳಿತಿಗಾಗಿ, ಉಳಿವಿಗಾಗಿ, ಅಸ್ತಿತ್ವಕ್ಕಾಗಿ ಬಳಸಿಕೊಳ್ಳಲು ನಿಸರ್ಗ ಅವಕಾಶ ಮಾಡಿಕೊಟ್ಟಿರುತ್ತದೆ. ಇನ್ನು ಕೆಲವನ್ನು ತನ್ನ ಒಡಲಲ್ಲೇ ಇರಿಸಿಕೊಳ್ಳಲು ಬಯಸಿರುತ್ತದೆ.
ಮಾನವ ಸಮಾಜ ಬಳಕೆ ಮಾಡುವ ನೈಸರ್ಗಿಕ ಸಂಪನ್ಮೂಲಗಳನ್ನು ಪುನಃ ಉತ್ಪಾದಿಸುವ ಅವಕಾಶವನ್ನೂ ನಿಸರ್ಗ ನೀಡಿರುತ್ತದೆ. ಆದರೆ ಈ ಒಂದು ಅವಕಾಶವನ್ನು ಸಮರ್ಥವಾಗಿ, ಪ್ರಾಮಾಣಿಕವಾಗಿ ಬಳಸಿಕೊಳ್ಳಲು ಮನುಕುಲ ಪ್ರಜ್ಞಾವಂತ ಮನೋಭಾವ ಮತ್ತು ಪ್ರಬುದ್ಧ ಧೋರಣೆ ಹೊಂದಿರಬೇಕಾಗುತ್ತದೆ. ಪರಿಸರ ರಕ್ಷಣೆಯ ಬಗ್ಗೆ ಅತಿಯಾದ ಕಾಳಜಿ ವಹಿಸುವ ಮನುಕುಲ ಈ ಪ್ರಜ್ಞಾವಂತಿಕೆಯನ್ನು ಕಳೆದುಕೊಂಡಿರುವುದೇ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿರುವುದು ಸ್ಪಷ್ಟ. ಉತ್ತರಖಾಂಡದಲ್ಲಿ ಸಂಭವಿಸಿರುವ ಅನಾಹುತ ಮತ್ತು ವಿನಾಶಕಾರಿ ಬೆಳವಣಿಗೆಗಳು ಇದಕ್ಕೆ ಸ್ಪಷ್ಟ ನಿದರ್ಶನ.
ಹವಾಮಾನದ ವೈಜ್ಞಾನಿಕ ಪರಿಕಲ್ಪನೆಯಲ್ಲಿ ಯಾವುದೇ ಪ್ರದೇಶದಲ್ಲಿ ಒಂದು ದಿನ ಮಳೆಯ ಪ್ರಮಾಣ 150 ಮಿಲಿಮೀಟರ್ ಮೀರಿದರೆ ಅದನ್ನು ಅತಿವೃಷ್ಟಿ ಎನ್ನಲಾಗುತ್ತದೆ. ಆದರೆ ಕಳೆದ ಸೋಮವಾರ ಉತ್ತರಖಾಂಡದ ಕೇದಾರನಾಥ-ಬದರಿನಾಥ ಕ್ಷೇತ್ರಗಳಲ್ಲಿ 340 ಮಿಲಿಮೀಟರ್ ಮಳೆಯಾಗಿದೆ. ಈವರೆಗಿನ ಅನಾಹುತದಲ್ಲಿ ಮಡಿದವರ ಸಂಖ್ಯೆ 680ಕ್ಕೆ ಏರಿದೆ. ಇದು ದೊರೆತ ಶವಗಳ ಲೆಕ್ಕವಷ್ಟೆ. ನದಿಯಲ್ಲಿ, ಪ್ರವಾಹದಲ್ಲಿ ಕೊಚ್ಚಿಹೋದ ಕೊಳೆತ ಶವಗಳ ಸಂಖ್ಯೆ ನಿಖರವಾಗಿ ತಿಳಿಯಲು ಸಾಧ್ಯವೇ ಇಲ್ಲ. ಚಾರಣಕ್ಕೆ ಹೊರಟಿದ್ದ ಕೆಲವರ ಅಭಿಪ್ರಾಯದಲ್ಲಿ ದಟ್ಟ ಅಡವಿಗಳಲ್ಲಿ ಸಾವಿರಾರು ಶವಗಳು ಕೊಳೆತು ನಾರುತ್ತಿವೆ. ಬದುಕುಳಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿಗೆ ಅಗೋಚರ ಶವಗಳು ಕಣ್ಣಿಗೆ ಕಾಣದು. ಅಗತ್ಯವೂ ಇರುವುದಿಲ್ಲ. ಕಳೆದು ಹೋದವರು, ಕೊಳೆತು ಹೋದವರು ಅಗೋಚರವಾಗಿಯೇ ಮರೆಯಾಗುತ್ತಾರೆ. ಕೇದಾರ ನಾಥ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ಒಂದೇ ದಿನದಲ್ಲಿ 123 ಶವಗಳು ದೊರೆತಿವೆ. ಭೂಕುಸಿತದಿಂದ ಮಣ್ಣಲ್ಲಿ ಮಣ್ಣಾಗಿ ಹೋದ ಜೀವಗಳೆಷ್ಟೋ ಹೇಳಲಾಗದು.
ಈವರೆಗಿನ ರಕ್ಷಣಾ ಕಾರ್ಯದಲ್ಲಿ 73 ಸಾವಿರ ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ. ಇನ್ನೂ 40 ಸಾವಿರ ಜನರು ಸ್ಥಳಾಂತರಕ್ಕೆ ಕಾಯುತ್ತಿದ್ದಾರೆ. ಕೇದಾರನಾಥ ಕಾಲುದಾರಿಯಲ್ಲಿನ ಕಮರಿಗಳಲ್ಲಿ 2000 ಜನರು ಸಿಲುಕಿದ್ದು ಪರದಾಡುತ್ತಿದ್ದಾರೆ.
ಭಾರತೀಯ ವಾಯುಪಡೆ, ಸೇನಾಪಡೆ ಮತ್ತು ನೌಕಾಪಡೆಯ 6200 ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. 56 ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದ್ದು ದಿನಕ್ಕೆ 220 ಬಾರಿ ಪರಿಹಾರ ಶಿಬಿರಗಳಿಂದ ಸಂತ್ರಸ್ತರಿರುವ ಸಂಕಷ್ಟ ಸ್ಥಳಗಳಿಗೆ ಪಯಣಿಸುತ್ತಿವೆ. ಶನಿವಾರ ಮತ್ತು ಭಾನುವಾರದಂದು 500 ಬಾರಿ ಸಂಚರಿಸುತ್ತವೆ. ಮೈಸೂರಿನ ಸಿಎಫ್ಟಿಆರ್ಐನಿಂದ ಆಹಾರದ ಪೊಟ್ಟಣಗಳನ್ನು ಒದಗಿಸಲಾಗುತ್ತಿದೆ. ಸತ್ತವರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ತಜ್ಞರ ತಂಡವೊಂದನ್ನು ನೇಮಿಸಲಾಗಿದೆ. ಗೌರಿಕುಂಡ ಮತ್ತು ಕೇದಾರನಾಥದಲ್ಲಿ ಸಿಲುಕಿರುವ ಸಾವಿರಾರು ಯಾತ್ರಾರ್ಥಿಗಳ ಬಳಿಗೆ ರಕ್ಷಣಾ ಪಡೆಗಳು ತಲುಪಲು ಸಾಧ್ಯವಾಗಿಲ್ಲ. ಅನೇಕರು ಸುತ್ತಲಿನ ಭೈರವಚೆಟ್ಟಿ, ಗೌರಿಕುಂಡ ಅರಣ್ಯಗಳಲ್ಲಿ ಕಳೆದು ಹೋದ ಸಂಬಂಧಿಕರ ಹೆಣಗಳನ್ನು ಹುಡುಕುತ್ತಿದ್ದು, ಅನ್ನಾಹಾರಗಳಿಲ್ಲದೆ ಸಾವಿನ ನಿರೀಕ್ಷೆಯಲ್ಲಿದ್ದಾರೆ. ಕಾಲ್ನಡಿಗೆಯಲ್ಲಿ ಕೇದಾರನಾಥದಿಂದ ಬರುತ್ತಿರುವವರಿಗೆ ಮಂದಾಕಿನಿ-ಸೋನಾಗಂಗೆ ನಡುವೆ ಹಗ್ಗದ ಸೇತುವೆಗಳನ್ನು ನಿರ್ಮಿಸಲಾಗಿದ್ದು 2500 ಜನರನ್ನು ರಕ್ಷಿಸಲಾಗಿದೆ. ಒರಟು ಕಲ್ಲುಗಳಿರುವುದರಿಂದ ಹಗ್ಗಗಳು ಕಿತ್ತುಹೋಗುತ್ತಿದ್ದು ಬದಲಾಯಿಸುವುದು ಅನಿವಾರ್ಯವಾಗಿರುತ್ತದೆ. ಈ ಸಂಕಷ್ಟಗಳ ನಡುವೆಯೇ ಸೇನಾ ಸಿಬ್ಬಂದಿ ಹಗಲಿರುಳು ಶ್ರಮಿಸಿ ಯಾತ್ರಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ರಕ್ಷಣಾ ಕಾರ್ಯಗಳ ನಡುವೆಯೇ ಮತ್ತೊಮ್ಮೆ ಕುಂಭದ್ರೋಣ ಮಳೆ ಆರಂಭವಾಗಿದ್ದು ರಕ್ಷಣೆಗೆ ಇನ್ನೂ ಹದಿನೈದು ದಿನಗಳು ಬೇಕಾಗಿವೆ ಎಂದು ಹೇಳಲಾಗಿದೆ. ದೊರೆತ ಶವಗಳ ಸಂಖ್ಯೆ 550 ಆಗಿದ್ದರೂ ಐದು ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿರುವ ಸಾಧ್ಯತೆಗಳಿವೆ.

ಕೆಲವು ವಿನಾಶಕಾರಿ ಹಸಿ ಸತ್ಯಗಳು

ಹಲವು ವರ್ಷಗಳ ಹಿಂದೆ ಸಿಎಜಿ ಸಲ್ಲಿಸಿದ್ದ ವರದಿಯ ಪ್ರಕಾರ ಇಲ್ಲಿನ ಅಲಕನಂದಾ ಮತ್ತು ಭಾಗೀರಥಿ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಜಲವಿದ್ಯುತ್ ಉತ್ಪಾದನಾ ಘಟಕಗಳು ಇಂತಹ ಭೀಕರ ಪ್ರವಾಹಕ್ಕೆ ಕಾರಣವಾಗುತ್ತವೆ ಎಂದು ಎಚ್ಚರಿಕೆ ನೀಡಿತ್ತು. ಯಮುನೋತ್ರಿ, ಗಂಗೋತ್ರಿ , ಮಂದಾಕಿನಿ ಇತರ ನದಿಗಳ ಎರಡೂ ಬದಿಗಳಲ್ಲಿ ನಿರ್ಮಿತವಾಗಿರುವ ಕಟ್ಟಡಗಳು, ರೆಸಾರ್ಟ್‌ಗಳು, ಹೋಟೆಲುಗಳು ಮತ್ತು ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳು ಹಿಮಾಲಯ ಪ್ರದೇಶವನ್ನು ಶಿಥಿಲಗೊಳಿಸಿರುವುದು ಸತ್ಯ. ಈ ಪರ್ವತ ಶ್ರೇಣಿಯಲ್ಲಿರುವ ದಟ್ಟ ಅರಣ್ಯಗಳನ್ನು ಅವ್ಯಾಹತವಾಗಿ ಕಡಿದುಹಾಕುತ್ತಿದ್ದು, ವಿದ್ಯುತ್ ಘಟಕಗಳಿಗಾಗಿ, ಪ್ರವಾಸೋದ್ಯಮದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಬೋಳಿಸಲಾಗುತ್ತಿದೆ. ಇದರ ಪರಿಣಾಮ ಪ್ರವಾಹವನ್ನು ತಡೆಗಟ್ಟಲು ನಿಸರ್ಗ ಸೃಷ್ಟಿಸಿಕೊಂಡಿರುವ ರಕ್ಷಣಾ ನೆಲೆಗಳನ್ನು ಮನುಕುಲ ನಾಶಪಡಿಸಿದೆ. ಈ ಪ್ರದೇಶದಲ್ಲಿ ಒಟ್ಟು 70 ಜಲವಿದ್ಯುತ್ ಯೋಜನೆಗಳಿದ್ದು, ಭೂಕುಸಿತ ಸಂಭವಿಸಬಹುದಾದ ಇಳಿಜಾರು ಪ್ರದೇಶಗಳಲ್ಲೇ 37 ಘಟಕಗಳಿವೆ. ಯಾತ್ರಾರ್ಥಿಗಳ ಕಾಲುದಾರಿಯುದ್ದಕ್ಕೂ ಅಂಗಡಿ ಮುಗ್ಗಟ್ಟುಗಳನ್ನು ತೆರೆದಿರುವುದು ಭೂಮಿಯನ್ನು ಮತ್ತಷ್ಟು ಶಿಥಿಲಗೊಳಿಸಿದೆ.
ಜಲಪ್ರಳಯ ಮತ್ತು ಭೂಕುಸಿತದಿಂದ ತಮ್ಮ ದಾರಿ ಕಳೆದುಕೊಂಡ ಸಾವಿರಾರು ಯಾತ್ರಾರ್ಥಿಗಳು ಕಂಗಾಲಾಗಿದ್ದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಗ್ರಾಮಸ್ಥರು ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಸಂತ್ರಸ್ತರು ಅನ್ನಾಹಾರಗಳಿಲ್ಲದೆ ಬಳಲುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಹೋಟೆಲ್ಗಳು, ವ್ಯಾಪಾರಿಗಳು ಅಗ್ಗದ ದರದಲ್ಲೇ ಆಹಾರ ಪದಾರ್ಥಗಳನ್ನು ಒದಗಿಸಿದ್ದಾರೆ. ಊಟ ತಿಂಡಿ ನೀಡಿದ್ದಾರೆ. ಹೃಷಿಕéೇಷದಲ್ಲಿ ಕ್ವಾಲಿಸ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬಕ್ಕೆ ಲಕ್ಷ್ಮಣ್ ಸಿಂಗ್ ಎಂಬ ಸ್ಥಳೀಯ ಚಾಲಕ ದೇವರ ರೂಪದಲ್ಲಿ ಬಂದು ಕಾಪಾಡಿದ್ದಾನೆ. ಬಂಡೆ ಕುಸಿದಿದ್ದ ರಸ್ತೆಯಲ್ಲಿ ಮೂರು ದಿನಗಳು ಉಳಿದು ನಂತರ ಅನ್ಯ ಮಾರ್ಗದಲ್ಲಿ ಕುಟುಂಬವನ್ನು ಕರೆತಂದ ಸಿಂಗ್ 70 ಕಿಮೀ ಸುತ್ತಿಕೊಂಡು ಬರುವ ಮೂಲಕ ಕುಟುಂಬದವರ ಪ್ರಾಣ ಉಳಿಸಿದ್ದಾನೆ. ಇದು ಮಾನವೀಯತೆಯ ಒಂದು ಮುಖ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿ ರಕ್ಷಣೆಗೆ ಮೊರೆ ಇಡುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳು ಇಬ್ಬರನ್ನೂ ಕೊಲೆ ಮಾಡುವ ಮೂಲಕ ಮಾನವ ಸಮಾಜದ ಕರಾಳ ಮುಖವನ್ನೂ ಪರಿಚಯಿಸಿದ್ದಾರೆ. ಇದೇ ಪ್ರದೇಶದಲ್ಲಿ ಬಿಹಾರದ ಮಹಿಳೆಯೊಬ್ಬರ ಮೇಲೂ ಅತ್ಯಾಚಾರ ಎಸಗಲಾಗಿದೆ. ಚೌವಾಸಿ ಗ್ರಾಮದಲ್ಲಿ ವ್ಯಾಪಾರಿಯೊಬ್ಬರಿಂದ 17 ಲಕ್ಷ ರೂಗಳನ್ನು ಲೂಟಿ ಮಾಡಲಾಗಿದೆ. ಕೆಲವು ಮೃತದೇಹಗಳ ಕೈ ಕತ್ತರಿಸಿ ಉಂಗುರಗಳನ್ನು ದೋಚಲಾಗಿದೆ. ನಿರಾಶ್ರಿತ ಪರಿಹಾರ ಶಿಬಿರವೊಂದರಲ್ಲಿ ಬಿಜೆಪಿ ಪರಿಹಾರ ಶಿಬಿರ ಎಂಬ ಫಲಕ ಎದ್ದುಕಾಣುತ್ತಿದೆ. ಇಲ್ಲಿಯೂ ರಾಜಕೀಯ ಲಾಭಕ್ಕಾಗಿ ಹಪಹಪಿ. ಕೇದಾರನಾಥಾ !
ಮಾನವನ ವಿನಾಶಕಾರಿ ಧೋರಣೆ
ಮೇಲೆ ಹೇಳಿದಂತೆ ಉತ್ತರಾಖಾಂಡದ ಅರಣ್ಯ , ನದಿ ಮತ್ತು ಬೆಟ್ಟಗುಡ್ಡಗಳ, ಪರ್ವತಶ್ರೇಣಿಗಳ ಪ್ರದೇಶಗಳಲ್ಲಿ ಆಧುನಿಕ ಮಾನವನ ಸಾಹಸಗಳು ಇಲ್ಲಿನ ನೈಸಗರ್ಿಕ ಸಮತೋಲವನ್ನೇ ಕಂಗೆಡಿಸಿದ್ದು ನಿಸರ್ಗದ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ. ಗುರುತಿಸಲ್ಪಟ್ಟಿರುವ ಸಂಭಾವ್ಯ ವಿಪತ್ತು ಪ್ರದೇಶಗಳಲ್ಲೇ ಅತ್ಯಧಿಕ ಜಲ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿರುವುದು ಇಂದಿನ ವಿನಾಶಕಾರಿ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಮೂರು ವರ್ಷಗಳ ಮುನ್ನವೇ ಮಹಾಲೇಖಾಪಾಲಕರು (ಸಿಎಜಿ) ತಮ್ಮ ವರದಿಯಲ್ಲಿ ಈ ಎಚ್ಚರಿಕೆಯನ್ನು ನೀಡಿದ್ದರು. ಇಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜಲ ವಿದ್ಯುತ್ ಸ್ಥಾವರಗಳು ಎಂದಾದರೂ ಒಂದು ದಿನ ಅಪಾಯ ಒಡ್ಡುತ್ತವೆ ಎಂದು ಸಿಎಜಿ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ ಪ್ರತಿವರ್ಷವೂ ಪರಿಸರ ದಿನವನ್ನು ವೃಕ್ಷಗಳನ್ನು ನೆಡುವ ಮೂಲಕ ಆಚರಿಸುವ ಆಳ್ವಿಕರಿಗೆ, ಆಡಳಿತಗಾರರಿಗೆ ಈ ವರದಿಯನ್ನು ಪರಿಶೀಲಿಸುವ ಪರಿಜ್ಞಾನವೂ ಇಲ್ಲದೆ ಹೋದುದು ಈ ದೇಶದ ದುರಂತ.
ಉತ್ತರಾಖಾಂಡದ ದುರಂತಕ್ಕೆ ಕುಂಭದ್ರೋಣ ಮಳೆ, ಜಲಪ್ರಳಯ, ಮೇಘಸ್ಫೋಟ ಮತ್ತು ಪ್ರವಾಹವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಕೃತಿ ಪ್ರೇರಿತ ಅವಘಡಗಳಿಗೆ ಮಾನವ ಸಮಾಜ ತನ್ನದೇ ಆದ ಕಾಣಿಕೆ ನೀಡಿದೆ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಅರಣ್ಯ ನಾಶ ಅವ್ಯಾಹತವಾಗಿ ಸಾಗಿದೆ. ಓಝೋನ್ ಪದರದ ಸಮಸ್ಯೆಯನ್ನು ಕುರಿತಂತೆ ವಿಶ್ವ ಮಟ್ಟದಲ್ಲಿ ಸಾಕಷ್ಟು ಚರ್ಚೆ, ಸಂವಾದಗಳು ನಡೆಯುತ್ತಿದ್ದರೂ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಅಥವಾ ಕೈಗೊಳ್ಳುತ್ತಿಲ್ಲ. ಆಳುವ ವರ್ಗಗಳ ಪರಿಸರ ಕಾಳಜಿ ಕಾರ್ಪೊರೇಟ್ ಉದ್ಯಮಿಗಳ ಹೊಸ್ತಿಲಲ್ಲಿ ಬಂದು ಮುಗ್ಗರಿಸಿಬಿಡುತ್ತವೆ. ಅಧಿಕೃತ ವರದಿಗಳು ಹಿಮಾಲಯದಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂದು ಹೇಳಿದರೂ ಕೃಷಿ, ನಗರೀಕರಣ ಮತ್ತು ಮಾನವನ ಅತಿಕ್ರಮಣದಿಂದ ಅರಣ್ಯ ಕ್ಷೀಣಿಸುತ್ತಿವೆ. 2001ರಲ್ಲಿ ಶೇ 84.9ರಷ್ಟಿದ್ದ ಅರಣ್ಯ ಪ್ರದೇಶ 2100ರವೇಳೆಗೆ ಶೇ 52.10ರಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದೇ ಅವಧಿಯಲ್ಲಿ ದಟ್ಟ ಅರಣ್ಯ ಪ್ರದೇಶ ಶೇ 74ರಿಂದ ಶೇ 34ರಷ್ಟಾಗುತ್ತದೆ ಎನ್ನಲಾಗಿದೆ. ಈ ದಟ್ಟ ಅರಣ್ಯಗಳು ಮಳೆ ನೀರನ್ನು ಭೂಮಿಗೆ ಬೀಳದಂತೆ ಎಚ್ಚರ ವಹಿಸುತ್ತವೆ. ಮತ್ತು ಭೂಮಿಯನ್ನು ಗಟ್ಟಿಯಾಗಿಸುತ್ತವೆ. ಆದರೆ ಆಧುನಿಕ ಮಾನವನ ಐಷಾರಾಮಿ ಬದುಕಿಗೆ ಹಿಮಾಲಯ ತತ್ತರಿಸುತ್ತಿದೆ.
ಉತ್ತರಖಾಂಡ ಮತ್ತಿತರ ಹಿಮಾಲಯದ ಪ್ರದೇಶಗಳಲ್ಲಿ ಹೆಚ್ಚು ನಗರೀಕರಣ ಪ್ರಕ್ರಿಯೆ ನಡೆಯುತ್ತಿದ್ದು ಕಟ್ಟಡ ನಿರ್ಮಾಣವೂ ಹೆಚ್ಚಾಗುತ್ತಿದೆ. ಅರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಬೆಟ್ಟಗುಡ್ಡಗಳನ್ನು ಕಡಿದು ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಗಂಗೋತ್ರಿ-ಯಮುನೋತ್ರಿ ನದಿಗಳ ಇಕ್ಕೆಲಗಳಲ್ಲಿ ನಲವತ್ತಕ್ಕೂ ಹೆಚ್ಚು ಹೋಟೆಲ್ ಮತ್ತು ರೆಸಾರ್ಟ್‌ಗಳಿರುವುದು ಇದಕ್ಕೆ ಸಾಕ್ಷಿ. ನಿಜ, ಅಲ್ಲಿನ ಜನತೆ ಆರ್ಥಿಕವಾಗಿ ಮುಂದುವರೆಯಬೇಕು, ಒಂದು ನೆಲೆ ಕಾಣಬೇಕು ಆದರೆ ಭೂಮಿಯನ್ನು ಬಳಸುವಲ್ಲಿ ಕೊಂಚ ಎಚ್ಚರವನ್ನೂ ವಹಿಸಬೇಕಾಗುತ್ತದೆ. ಉತ್ತರ ಕಾಶಿಯ ಅಸ್ಸಿ ಮತ್ತು ಭಾಗೀರಥಿ ನದಿ ತೀರದಲ್ಲಿ ಬೃಹತ್ ಕಟ್ಟಡಗಳು, ಹೋಟೆಲುಗಳು ನಿರ್ಮಾಣವಾಗುತ್ತಿದ್ದು ನದಿಗೂ ಮತ್ತು ಸುತ್ತಲಿನ ಮಾನವನ ನೆಲೆಗಳಿಗೂ ಇರುವ ಅಂತರ ಕಡಿಮೆಯಾಗುತ್ತಿದೆ. ಇದರ ಪರಿಣಾಮ ಈಗ ಕಂಡಿದ್ದೇವೆ.
ಉತ್ತರಖಾಂಡದ ದುರಂತದಲ್ಲಿ ಮಡಿದ ಐದು ಸಾವಿರಕ್ಕೂ ಹೆಚ್ಚು ಜನರ ಮೃತದೇಹಗಳ ಹಿಂದೆ ಮಾನವ ಸಮಾಜದ ದುರಾಸೆಯ ಕಥೆ ಇರುವುದನ್ನು ಗಮನಿಸಬೇಕಾಗಿದೆ. ದೇವರ ಶಾಪ, ಪ್ರಕೃತಿ ವಿಕೋಪ ಮುಂತಾದ ರೋಚಕ ಘೋಷಣೆಗಳ ಹಿನ್ನೆಲೆಯಲ್ಲಿ ಮಾನವ ಸಮಾಜ ನಿಸರ್ಗದ ಒಡಲಲ್ಲಿ ವಿಷವೃಕ್ಷಗಳನ್ನು ನೆಡುತ್ತಿರುವುದನ್ನು ಮರೆಮಾಚಲಾಗುವುದಿಲ್ಲ.
 

‍ಲೇಖಕರು avadhi

July 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: