ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

Loving Vincent ಚಿತ್ರಕ್ಕೆ…

ಸೌರಭಾ ರಾವ್ 

ನೆನಪಿನಲ್ಲೇಕೋ ಎಲ್ಲವೂ ನಿರ್ವರ್ಣವಾಗಿಬಿಡುತ್ತದೆ
ನೆನಪುಗಳೂ ಬಣ್ಣಬದಲಿಸುತ್ತವೆಂದೇ?
ಕಪ್ಪು, ಬಿಳುಪು, ಮತ್ತು ನಡುವಿನ ಅನಂತ ಭೇದಗಳ ಹರಹು
ವರ್ತಮಾನಕ್ಕೆ ಮಾತ್ರ ಬಣ್ಣಗಳ ಬೆಳಕು
ಸ್ಥಿರಚಿತ್ರಗಳು ಒಂದರಹಿಂದೊಂದರಂತೆ ಓಡುತ್ತವೆ
ಸಾವಿರದ ಹಿಂದೆ ಸಾವಿರ ಸಾವಿರ ತೈಲಚಿತ್ರ ಸಾಗುತ್ತಾ ಭೂತಕಾಲದ ಕಥೆಯೊಂದಕ್ಕೀಗ ಚಲನೆ

ಕಲಾವಿದನೊಬ್ಬನ ಅಂತರಂಗವ ಹೀಗೆ ತಡಕುತ್ತೇವೆ, ಅವನು ಸತ್ತ ಮೇಲೆ
ಅಲ್ಲಲ್ಲಿ ಕಲೆಯನ್ನೇ ಉಸಿರಾಗಿಸಿಕೊಂಡ ಜೀವಗಳು ಹೀಗಾದರೂ ಕಲೆಯುತ್ತವೆ
ಅವನ ಕಲೆಯನ್ನೇ ಅನುಕರಿಸುತ್ತಾ ಹೀಗೊಂದು ಶ್ರದ್ಧಾಂಜಲಿ ಸಲ್ಲಿಸುತ್ತವೆ
ಬದುಕಿನುದ್ದಕ್ಕೂ ಖಿನ್ನನಾಗಿಯೇ ಇದ್ದರೂ ಬಣ್ಣಗಳ ಮೂಲಕವೇ ತನ್ನೊಳಗಿನ ದಿವ್ಯಬೆಳಕ ಹಂಚಿಹೋದ ಅವನು
ಸಾವಿನ ನಂತರ ಜಗತ್ತಿನ ಅಂತರಂಗವ ಹೊಕ್ಕಿ ಅವನ ಚಿತ್ರಗಳಷ್ಟೇ ಅಚಲವಾಗಿಬಿಡುತ್ತಾನೆ

ಬಣ್ಣಗಳಲ್ಲೇ ಅವನ ಕಥೆಯಲ್ಲಿರುವವರೆಲ್ಲರೂ ನಗುತ್ತಾರೆ, ಅಳುತ್ತಾರೆ
ಮರುಗುತ್ತಾರೆ, ಶೋಕದಲ್ಲಿ ಮತ್ತೂ ಮಾನವೀಯರಾಗಿಬಿಡುತ್ತಾರೆ
ಕಡೆಗೂ ಅವನ ಅಂತ್ಯಕ್ಕೆ ಸ್ಪಷ್ಟತೆ ಸಿಗುವುದಿಲ್ಲ
ಆ ಸಂಕೀರ್ಣ ವ್ಯಕ್ತಿತ್ವದ ಆಳ ತಡಕಿದಷ್ಟೂ ಆಳ, ಗಾಢ, ತೀವ್ರ
ಬಾಲ್ಯದಲ್ಲೇ ಒಂಟಿಯಾಗಿಬಿಡುವ ಎಷ್ಟು ಜೀವಗಳು ಹೀಗೆ ಕಡೆವರೆಗೂ ಹೋರಾಡುತ್ತವೆಯೋ
ಮನುಷ್ಯರಿಂದ ಅಷ್ಟು ನೋಂದರೇ
ಜೀವನದ ಇತರ ವಿವರಗಳ ಬಗ್ಗೆ ಅದಮ್ಯ ಆಸಕ್ತಿ, ಪ್ರೀತಿ ಹುಟ್ಟುವುದೇನೋ
ಜೀವಸಂಕುಲದ ಚಿಕ್ಕಪುಟ್ಟ ವಿವರಗಳೇ ಅಂಥ ಅಗಾಧ ಒಂಟಿತನಕ್ಕೆ ಸಂಗಾತಿಗಳೇನೋ
ಸೂರ್ಯಕಾಂತಿ, ಚುಕ್ಕಿಗಳ ಚಾದರ ಹೊದ್ದ ರಾತ್ರಿಯಾಗಸ, ಭತ್ತದ ಗದ್ದೆಯ ಹೊನ್ನ ಬಣ್ಣ…

ಕಡೆಗೆ ಅವನೇ ಕಂಡಂತೆ ಅವನ ಮುಖ
ಯಾವ ಭಾವವೂ ಅಭಿವ್ಯಕ್ತವಾಗದ ಮುಖ
ಹೇಳಬಲ್ಲವರಾರು?
ಬದುಕಿದ್ದಾಗ ಕಲಾವಿದರ ಘನತೆಯಿಂದ ನಡೆಸಿಕೊಳ್ಳದ ಜಗತ್ತು
ಅವನು ಹೋದಮೇಲೆ ಮರಣೋತ್ತರ ಗೌರವಗಳ ಸಲ್ಲಿಸುತ್ತವೆ

ಕಲೆಯ ನಂಬಿ ಬದುಕುವ ಜೀವಗಳಿಗೆಲ್ಲ ಕಾಲಕ್ಕೆ ತಕ್ಕ ಅಕ್ಕರೆ ಸಿಗಲಿ
ಕಲೆಗೆ ತಕ್ಕ ಗೌರವ ಸಿಗಲಿ
ಕಲಾವಿದನಿಗೂ, ಕಲೆಹುಟ್ಟುವ ಕ್ಷಣಗಳ ಹೊರತುಪಡಿಸಿದರೂ
ತಾನು ತೀವ್ರವಾಗಿ ತಾನೇ ಆಗಿರುವ ಮನುಷ್ಯನಿಗೂ ಸಾಮ್ಯತೆ ಇದ್ದರೆ
ಆ ವಿರಳತೆ ನಿಜವೇ ಆದರೆ
ಯಾವ ಕಲಾವಿದನೂ ಅವನ ಕಾಲದಲ್ಲಿ ಅನಾಥವಾಗದಿರಲಿ

ಕಥೆ ಹೇಳುತ್ತಾ, ಕಥೆ ಕೇಳುತ್ತಾ ಕಥೆಯಾಗಿಬಿಡುವವರು ನಾವು
ವಿನ್ಸೆಂಟ್,
ನಿನ್ನನ್ನು ಅಂದು ಗುರುತಿಸದ ಜಗತ್ತಿನ ಮೇಲೆ ಕ್ಷಮೆಯಿರಲಿ
ನಿನ್ನ ನಿಶ್ಯಬ್ದ, ನಿಶ್ಚಲ ಬಣ್ಣಗಳು ನಮ್ಮಲ್ಲಿ ಕಲಕಿ ಜೀವಂತಗೊಳಿಸುತ್ತಿರಲಿ –
ಜೀವನಪ್ರೀತಿಯನ್ನು, ಮನುಜಶಕ್ತ ಮಮತೆ, ಘನತೆಯನ್ನು

‍ಲೇಖಕರು avadhi

14 October, 2019

3 Comments

  1. ರೇಣುಕಾ ರಮಾನಂದ

    ಒಂದೊಳ್ಳೆಯ ಕವಿತೆ

  2. Suma Anil

    ಸೌರಭ

  3. Amba

    ಆ ಚಲನ ಚಿತ್ರ ನನಗೆ ತುಂಬಾ ಇಷ್ಟವಾದ ಚಲನ ಚಿತ್ರಗಳ್ಳಲ್ಲಿ ಒಂದು. ವಿನ್ಸೆನ್ಟ್ ಗೊಗ್ನ ವರ್ಣಚಿತ್ರಗಳಿಂದಲೇ ಅವನ ಜೀವನ ಕಥೆ ಹೇಳುವ ಚುತ್ರವನ್ನ ನಾನು ಎರಡೆರಡು ಬಾರಿ ನೋಡಿದ್ದೇ. ಚಿತ್ರ ನೋಡಿದವರಿಗೆ ಆಗುವ ಅನುಭವವನ್ನು ನೀವು ನಿಮ್ಮ ಕವಿತೆಯಲ್ಲಿ ತುಂಬಾ ಸೊಗಸಾಗಿ ಕಟ್ಟಿಕೊಟ್ಟಿದ್ದರೀ ಸೌರಭ. ಯಾವ ಚಿತ್ರ ವಿಮರ್ಶಕನು ಇಷ್ಟು ಚನ್ನಾಗಿ ಆ ಚಿತ್ರದ ಬಗ್ಗೆ ಬರೆದ್ದದ್ದು ನನಗೆ ಗೊತ್ತಿಲ್ಲ. ಯಾಕೆಂದರೆ ಅವರೆಲ್ಲಾ ಬರಿಯ ಚಿತ್ರ ವಿಮರ್ಶಕರು. ನಿಮ್ಮಂತೆ ಕವಯತ್ರಿ (ಅಥವಾ ಕವಿಗಳು) ಅಲ್ಲವಲ್ಲ!

Trackbacks/Pingbacks

  1. Thanks to ‘Avadhi’ for publishing my poem for the movie, Loving Vincent – Silkworm Slumbers - […] Loving Vincent ಚಿತ್ರಕ್ಕೆ… […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading