‘Hair cut’ ಎಂದರೆ 350 ಕಿಲೋಮೀಟರುಗಳ ಒಂದು ಸುದೀರ್ಘ ಪ್ರಯಾಣ!

 `ಕತ್ತರಿ’ ಪ್ರಯೋಗದ ಸುತ್ತ

 

”ಹುಡುಕಿದರೆ ಭಗವಂತನೇ ಸಿಕ್ಕಿಬಿಡುತ್ತಾನಂತೆ. ಆದರೆ ನನಗೆ ಕ್ಷೌರದಂಗಡಿ ಮಾತ್ರ ಸಿಕ್ಕಲಿಲ್ಲ”, ಅನ್ನುತ್ತಿದ್ದರು ನನ್ನ ಸಹೋದ್ಯೋಗಿಯಾದ ಸಿಂಗ್.

ವೀಜ್ ಗೆ ಬಂದ ಹೊಸತರಲ್ಲಿ ಕಂಡಿದ್ದೆಲ್ಲವೂ ಅಚ್ಚರಿಯಾಗಿದ್ದ ನಮಗೆ ಕ್ರಮೇಣ ಎಲ್ಲವೂ ಕೂಡ ದಿನಚರಿಯಂತೆ ಬದಲಾಗಿದ್ದವು. ಆದರೆ ಭಾರತವನ್ನು ಬಿಟ್ಟು ಬಂದ ಒಂದು ತಿಂಗಳಲ್ಲೇ ನಮಗೆ ಕ್ಷೌರದ ನೆನಪಾಗಿತ್ತು. ನಾವು ಕೂದಲನ್ನು ಮರೆತುಬಿಟ್ಟರೂ ಕೂದಲು ತನ್ನ ಬೆಳೆಯುವ ಪ್ರಕ್ರಿಯೆಯನ್ನು ನಿಲ್ಲಿಸಿಬಿಡುವುದಿಲ್ಲವಲ್ಲಾ!

ಹೀಗೆ ದುಭಾಷಿಯೊಂದಿಗೆ ಕ್ಷೌರದಂಗಡಿಯ ತಲಾಶೆಯಲ್ಲಿ ಹೊರಟಿದ್ದ ನನ್ನ ಸಹೋದ್ಯೋಗಿಗೆ ಎಲ್ಲೆಲ್ಲೂ ಅಚ್ಚರಿಯೇ ಕಾದಿತ್ತು. ಬಹಳಷ್ಟು ಮಂದಿಗೆ ಈ ಬಗೆಯ ಕೂದಲನ್ನು ಕತ್ತರಿಸುವ ವಿಧಾನವೇ ಗೊತ್ತಿಲ್ಲದಿದ್ದ ಪರಿಣಾಮವಾಗಿ ಇದು ನಮ್ಮಿಂದಾಗೋ ಕೆಲಸವಲ್ಲ ಎಂದು ಹೇಳಿ ಹಿಂದೇಟು ಹಾಕಿದ್ದರು. ಹೀಗೆ ಕ್ಷೌರಕ್ಕೆಂದು ಬಂದ ಹಿರಿಯ ಭಾರತೀಯ ಗ್ರಾಹಕನನ್ನು ವಾಪಾಸು ಕಳಿಸಿದ ಕ್ಷೌರದಂಗಡಿಗಳ ಸಂಖ್ಯೆ ಹತ್ತಕ್ಕೆ ಎಂಟರಷ್ಟಾಗಬಹುದು.

ನಾಳೆ ವೀಜ್ ನ ಮತ್ತೊಂದು ಭಾಗದಲ್ಲಿ ಪ್ರಯತ್ನಿಸಿದರಾಯಿತು ಎಂದು ತಮ್ಮನ್ನು ತಾವೇ ಸಂತೈಸಿಕೊಂಡ ಅವರಿಗೆ ದುರಾದೃಷ್ಟವಶಾತ್ ಮುಂದಿನ ದಿನಗಳಲ್ಲೂ ಸಕಾರಾತ್ಮಕ ಫಲಿತಾಂಶಗಳು ದೊರೆಯಲಿಲ್ಲ. ಹೀಗೆ ಇದೇ ಕಥೆಯು ಮುಂದಿನ ನಾಲ್ಕೈದು ದಿನಗಳವರೆಗೂ ಪುನರಾವರ್ತನೆಯಾಯಿತು.

ಈ ಬೆಳವಣಿಗೆಯನ್ನೆಲ್ಲಾ ಗಮನಿಸುತ್ತಿದ್ದ ನಾನು ಸಹಜವಾಗಿಯೇ ಪೇಚಿಗೆ ಬಿದ್ದಿದ್ದೆ. ನಮ್ಮ ಕೇಶವು ಆಫ್ರಿಕನ್ನರಿಗಿಂತ ಭಿನ್ನವಾಗಿರುವುದು ನಿಜವಾಗಿದ್ದರೂ ಅದೇನು ಮಟ್ಟಸವಾಗಿ ಕತ್ತರಿಸಲಾಗದಷ್ಟು ದೊಡ್ಡ ಸಾಹಸವೇ ಎಂಬುದು ನಿಜಕ್ಕೂ ನನ್ನನ್ನು ಯೋಚಿಸುವಂತೆ ಮಾಡಿತ್ತು. ”ಲುವಾಂಡಾಗೆ ಹೋಗಿ ಮಾಡಿಸಿದರಾಯಿತು ಬಿಡಿ. ಅಷ್ಟು ದೊಡ್ಡ ಶಹರದಲ್ಲಿ ಎಲ್ಲಾದರೂ ಮಾಡರ್ನ್ ಸಲೂನ್ ಗಳಿರುತ್ತವೆ”, ಎಂದು ಅವರಿಗೆ ಸಲಹೆಯನ್ನು ನೀಡಿದೆ ನಾನು.

ಆದರೆ ಸದ್ಯ ವೀಜ್ ನಿಂದ ಲುವಾಂಡಾದತ್ತ ತೆರಳಲು ಅಂಥಾ ಯಾವುದೇ ಮುಖ್ಯ ಕಾರಣಗಳು ನಮ್ಮೊಂದಿಗಿರಲಿಲ್ಲ. ವೀಜ್ ನಿಂದ ಸಾಕಷ್ಟು ದೂರವಿದ್ದ ಲುವಾಂಡಾಗೆ ಪ್ರಯಾಣಿಸುವುದಾದರೆ ಅದು ತಿಂಗಳಿಗೊಮ್ಮೆ ಮಾತ್ರ ಎಂದು ನಾವು ಮೊದಲೇ ಲೆಕ್ಕಹಾಕಿದ್ದೆವು. ಮೇಲಾಗಿ ಕೇವಲ ಕ್ಷೌರ ಮಾಡಿಸಿಕೊಳ್ಳಲು ಮುನ್ನೂರೈವತ್ತು ಚಿಲ್ಲರೆ ಕಿಲೋಮೀಟರುಗಳನ್ನು ಕ್ರಮಿಸುವುದು ಎಂದರೆ ನಿಜಕ್ಕೂ ಅದೊಂದು ವ್ಯರ್ಥಸಾಹಸವಾಗಿತ್ತು.

ನನ್ನ ಸಲಹೆಯನ್ನು ಯಾವುದಕ್ಕೂ ಇರಲಿ ಎಂದು ಸದ್ಯಕ್ಕೆ ಲೆಕ್ಕಕ್ಕಿಟ್ಟುಕೊಂಡ ಸಿಂಗ್ ನಾಲ್ಕೈದು ದಿನ ಕಷ್ಟಪಟ್ಟು ಹೇಗೋ ಕಾದರು. ಲುವಾಂಡಾದ ನಮ್ಮ ಮುಂದಿನ ಪ್ರಯಾಣಕ್ಕೆ ಕಮ್ಮಿಯೆಂದರೂ ಇಪ್ಪತ್ತು-ಇಪ್ಪತ್ತೈದು ದಿನಗಳು ಬಾಕಿಯಿದ್ದವು. ಆದರೆ ತಲೆಯ ಮೇಲಿರುವ ಕೂದಲು ಕ್ಯಾಲೆಂಡರ್ ನೋಡಿಕೊಂಡು ಬೆಳೆಯುವುದಿಲ್ಲವಲ್ಲಾ? ಈ ಜಂಜಾಟದಲ್ಲೇ ಒಂದು ವಾರವು ವ್ಯರ್ಥವಾದ ನಂತರ ಬೇಸತ್ತು ಹೋದ ಸಿಂಗ್ ಸಾಹೇಬರು ಅಂದು ನನ್ನೆದುರು ಘೋಷಿಸಿಯೇಬಿಟ್ಟರು: ”ಆದದ್ದಾಗಲಿ, ನಾನಿಂದು ಎಲ್ಲಾದರೂ ಹೋಗಿ ಕ್ಷೌರ ಮಾಡಿಸಿಕೊಂಡೇ ಬರುತ್ತೇನೆ”, ಎಂದು. ಈ ಬಾರಿ ಏನು ಮಾಡಬೇಕೆಂದು ತೋಚದ ನಾನು ಅಸ್ತು ಎಂದೆ.

ಆದರೆ ಮುಂದಿನ ಸರದಿಯು ನನ್ನದು ಎಂಬ ಸತ್ಯವೇ ನನ್ನನ್ನು ಮತ್ತಷ್ಟು ಇರಿಸುಮುರುಸಾಗಿಸುತ್ತಿತ್ತು. ಪ್ರವಾಸ ಎಂದರೆ ಎಷ್ಟೆಲ್ಲಾ ತಯಾರಿಗಳನ್ನು ನಾವು ಮಾಡುತ್ತೇವೆ. ಚಿಕ್ಕಪುಟ್ಟ ಸಂಗತಿಗಳ ಬಗ್ಗೆಯೂ ಗಮನವಿಟ್ಟು ಸಿದ್ಧರಾಗುತ್ತೇವೆ. ಆದರೆ ಕ್ಷೌರದಂತಹ ಅಗತ್ಯವೂ ಕೂಡ ನಮ್ಮೆದುರು ಹೀಗೆ ಸವಾಲಾಗಿ ನಿಲ್ಲಬಹುದು ಎಂಬ ಕಲ್ಪನೆಯಾದರೂ ನಮಗೆಲ್ಲಿತ್ತು?

ಆ ದಿನ ಸಿಂಗ್ ಸಾಹೇಬ್ರು ಭಾರತವನ್ನು ಬಿಟ್ಟ ನಂತರ ಮೊದಲ ಬಾರಿ ಅಂಗೋಲಾದ ವೀಜ್ ನಲ್ಲಿ ಕ್ಷೌರ ಮಾಡಿಸಿಕೊಂಡು ಬಂದಿದ್ದರು. ಕಟ್ಟಿಂಗ್ ಮಾಡಿಸಿಕೊಂಡು ಮನೆಗೆ ಮರಳಿದ ಅವರನ್ನು ಕಂಡ ನನಗೆ ಈ ಹೊಸ ಕೇಶಶೈಲಿಯು ಹೇಗಿದೆ ಎಂಬ ಅನಿಸಿಕೆಯನ್ನು ನೀಡುವ ಅವಶ್ಯಕತೆಯೇ ಬರಲಿಲ್ಲ. ನಾನು ಮಾತನ್ನಾರಂಭಿಸುವ ಮುನ್ನವೇ ”ಇನ್ನೇನು ಮಾಡುವುದು. ಹೇಗೋ ತಲೆಯ ಭಾರವನ್ನು ಇಳಿಸಿಬಿಟ್ಟೆ”, ಎಂದರವರು. ಅವರ ಮಾತನ್ನು ಕೇಳಿದ ನಾನು ಜೋರಾಗಿ ನಕ್ಕರೆ ಅವರೋ ಪೆಚ್ಚಾಗಿ ನಕ್ಕರು. ಆದರೆ ಇತ್ತ ನನ್ನ ತಲೆಯೂ ಕೂಡ ನಿಧಾನವಾಗಿ ಭಾರವಾಗುತ್ತಿತ್ತು. ಸಿಂಗ್ ಸಾಹೇಬ್ರ ಕ್ಷೌರ ಮಾಡಿಸಿಕೊಂಡ ತಲೆಯನ್ನು ನೋಡಿದ ನಾನು ಒಂದಂತೂ ನಿರ್ಧರಿಸಿದ್ದೆ: ‘ಹೇಗೋ ತೆವಳಿಕೊಂಡಾದರೂ ಲುವಾಂಡಾ ಸೇರುತ್ತೇನೆ. ಆದರೆ ಇಲ್ಲಿಯ ಕ್ಷೌರಿಕರ ಬಳಿ ತಪ್ಪಿಯೂ ಹೋಗುವುದಿಲ್ಲ’.

ಬಹುಷಃ ಸಿಂಗ್ ಸಾಹೇಬರ ಭಾರತೀಯ ಕೂದಲನ್ನು ಕಂಡ ವೀಜ್ ನ ಕ್ಷೌರಿಕ ನಿಜಕ್ಕೂ ಗೊಂದಲಕ್ಕೊಳಗಾಗಿದ್ದ. ಬುರುಡೆಗೆ ಅಂಟಿಕೊಂಡಂತಿರುವ ಆಫ್ರಿಕನ್ನರ ಪುಟ್ಟ ಕೂದಲುಗಳಂತಿರದೆ ಈ ಕೂದಲು ಭಿನ್ನವಾಗಿತ್ತು. ದಿನಕ್ಕೆರಡು ಬಾರಿ ತೆಂಗಿನೆಣ್ಣೆಯ ಸಖ್ಯವನ್ನೂ ಹೊಂದಿ ಹುಲುಸಾಗಿ ಬೇರೆ ಇತ್ತು. ಇಂಥಾ ಕೂದಲುಗಳನ್ನು ಆತ ಸಿನೆಮಾಗಳಲ್ಲೋ, ಅಕ್ಕಪಕ್ಕದ ಕೆಲ ವಿದೇಶೀಯರಲ್ಲೋ ಗಮನಿಸಿದ್ದರೂ ಕೂಡ ಈ ಬಗೆಯ ಕೂದಲನ್ನು ಹೇಗೆ ಮಟ್ಟಸವಾಗಿ ಕ್ಷೌರ ಮಾಡಬಹುದು ಎಂಬ ಕಲ್ಪನೆಯಾಗಲೀ ಅನುಭವವಾಗಲೀ ಅವನಿಗಿರಲಿಲ್ಲ.

ಹೀಗಾಗಿ ಆತ ತಲೆಯ ತುಂಬಾ ಕಟ್ಟಿಂಗ್ ಮಷೀನ್ ಅನ್ನು ಓಡಿಸಿ ಅವುಗಳನ್ನು ಒಂದೇ ಏಟಿಗೆ ಬಹುತೇಕ ಮಾಯವಾಗಿಸಿದ್ದ. ಹುಲುಸಾಗಿ ಬೆಳೆದ ಕೂದಲು ಏಕಾಏಕಿ ಗಿಡ್ಡವಾದ ನಂತರ ಕತ್ತರಿಯನ್ನು ಬಳಸುವ ಅವಶ್ಯಕತೆಯೇ ಆತನಿಗೆ ಕಂಡಿರಲಿಲ್ಲ. ಮುಂದೆ ಉಳಿದ ಕೂದಲುಗಳನ್ನು ರೇಜರ್ ಬ್ಲೇಡಿನಿಂದ ಅಲ್ಲೊಮ್ಮೆ ಇಲ್ಲೊಮ್ಮೆ ತಾಗಿಸುತ್ತಾ ಎಲ್ಲಾ ಕೂದಲುಗಳು ಮೇಲ್ನೋಟಕ್ಕೆ ಒಂದೇ ಎತ್ತರದಲ್ಲಿರುವಂತೆ ಮಾಡಿ ತನ್ನ ಕರ್ತವ್ಯವನ್ನು ಆತ ಮುಗಿಸಿದ್ದ. ಇನ್ನು `ಹಾಗೆ ಮಾಡಿ, ಹೀಗೆ ಮಾಡಿ’ ಎಂದು ಸಲಹೆಗಳನ್ನು ಕೊಡೋಣವೆಂದರೆ ಸಿಂಗ್ ಸಾಹೇಬ್ರಿಗೆ ಭಾಷೆಯ ಸಮಸ್ಯೆಯು ಎದುರಾಗಿತ್ತು! Crop, style ಗಳ ಮನೆ ಹಾಳಾಗಲಿ. ಕನಿಷ್ಠ ಪಕ್ಷ ಅದು presentable ಅನ್ನುವಂತೆಯೂ ಕೂಡ ಇರಲಿಲ್ಲ. ಕ್ಷೌರದ ಕೊನೆಯ ಫಲಿತಾಂಶವು ಬಹುತೇಕ ಅಮೀರ್ ಖಾನನ ‘ಘಜಿನಿ’ಯನ್ನು ನೆನಪಿಸುತ್ತಿತ್ತು. ಸಹಜವಾಗಿಯೇ ನಾವು ನಿರಾಶರಾಗಿದ್ದೆವು.

ಕ್ಷೌರಕ್ಕೆಂದು ಕೂರುವ ಮುನ್ನವೇ ”ನಾನೀಗ ಹೇಗಿದ್ದೇನೋ ಹಾಗೆಯೇ ಕ್ಷೌರ ಮಾಡಪ್ಪಾ. ನಾನು ಘಜಿನಿಯ ಅಭಿಮಾನಿಯೂ ಅಲ್ಲ, `ಸೂಪರ್’ ಚಿತ್ರದ ಉಪ್ಪಿಯ ಅಭಿಮಾನಿಯೂ ಅಲ್ಲ” ಎಂದು ಹೇಳಿಯೇ ಕೂರಬೇಕು ಎಂದು ನಾನು ಲೆಕ್ಕ ಹಾಕಿದೆ. ಏಕೆಂದರೆ ದಿನಗಳು ಸುಮ್ಮನೆ ಉರುಳುತ್ತಾ ನನ್ನ ತಲೆಯಲ್ಲೂ ಕೇಶರಾಶಿಯು ಹುಲುಸಾಗಿ ಬೆಳೆದಿತ್ತು. ಹೀಗಾಗಿ ಆದಷ್ಟು ಬೇಗ ಕ್ಷೌರವನ್ನು ಮಾಡಿಸದೆ ವಿಧಿಯಿರಲಿಲ್ಲ. ಆದರೆ ಸಿಂಗ್ ಸಾಹೇಬರ ಕ್ಷೌರವನ್ನು ಕಂಡ ನಂತರವಂತೂ ಅದೇನೇ ಆಗಲಿ, ವೀಜ್ ನ ಕ್ಷೌರಿಕರಿಗೆ ತಲೆಯನ್ನು ಒಪ್ಪಿಸುವುದಿಲ್ಲ ಎಂದು ಮನದಲ್ಲೇ ಪಣತೊಟ್ಟಿದ್ದೆ.

ನಾನು ಸ್ವತಃ ಕ್ಷೌರ ಮಾಡಿದರೂ ಅದಕ್ಕಿಂತ ಚೆನ್ನಾಗಿ ಮಾಡಬಲ್ಲೆನೆಂಬ ಭಾವವು ನನ್ನಲ್ಲಿ ಮೂಡತೊಡಗಿತ್ತು. ತಮಾಷೆಯ ವಿಷಯವೆಂದರೆ ನನ್ನೊಂದಿಗಿದ್ದ ಬಿಳಿಯ ಬೆಲ್ಜಿಯನ್ ಸಹೋದ್ಯೋಗಿಯೊಬ್ಬರು ತಮ್ಮ ಕೂದಲನ್ನು ತಾವೇ ಕ್ಷೌರ ಮಾಡಿಕೊಳ್ಳುತ್ತಿದ್ದರು. ಅರವತ್ತೆರಡರ ಹಿರಿಯರೂ, ಒಂದು ಕಾಲದಲ್ಲಿ ಜ್ಯೂಡೋ ಪಟುವಾಗಿದ್ದವರೂ ಆದ ಇವರು ವೀಜ್ ಗೆ ಬಂದಾಗಿನಿಂದ ಇದೇ ಅಭ್ಯಾಸವನ್ನು ಮುಂದುವರಿಸುತ್ತಾ ಬಂದಿದ್ದರಂತೆ.

ಹೀಗೆ ತಲೆಯ ಭಾರವನ್ನು ಇಳಿಸಿ ಸಿಂಗ್ ಸಾಹೇಬ್ರು ಹಾಯಾಗಿದ್ದರೆ ಚಿಂತೆಯಿಂದ ತಲೆಕೆರೆದುಕೊಳ್ಳುವ ಸರದಿ ಮಾತ್ರ ನನ್ನದಾಗಿತ್ತು. ಭಾರತದ ಗೆಳೆಯರೊಂದಿಗೆ ಮಾಡಿದ್ದ ಒಂದೆರಡು ವೀಡಿಯೋಕರೆಗಳಲ್ಲಿ ನನ್ನನ್ನು ಕಂಡವರು ”ಏನಿದು ಅವತಾರ?” ಎಂದು ಕೇಳಿ ಹೊಟ್ಟೆ ತುಂಬಾ ನಕ್ಕಿದ್ದರು. ಏಕೆಂದರೆ ನನಗೆ ಬುದ್ಧಿ ಬಂದಾಗಿನಿಂದ ಹೊಸ ಕೇಶಶೈಲಿಗಳನ್ನು ಪ್ರಯತ್ನಿಸುವ ಸಾಹಸವನ್ನೇ ನಾನು ಮಾಡಿದವನಲ್ಲ. ಇನ್ನು ಸಿನೆಮಾ ನಟರನ್ನು ಅನುಕರಿಸಿ ವಿಚಿತ್ರ ಕೇಶಶೈಲಿಗಳನ್ನು ಮಾಡುವ ರೂಢಿಯೆಲ್ಲಾ ನಮ್ಮ ಮನೆಯಲ್ಲಿರಲಿಲ್ಲ. ಆದರೆ ಈ ಬಾರಿ ರಾಜಧಾನಿಗೆ ತೆರಳಿ ಕ್ಷೌರ ಮಾಡಿಸಿಕೊಳ್ಳುವ ಒಂದೇ ಒಂದು ಕಾರಣದಿಂದ ಕೂದಲನ್ನು ಹಾಗೇ ಬಿಡಬೇಕಾದ ಸಂದಿಗ್ಧವು ಎದುರಾಗಿತ್ತು. “ಆಯ್ತಪ್ಪಾ, ನಗೋರೆಲ್ಲಾ ನಕ್ಕುಬಿಡಿ. ನನ್ನ ಕಷ್ಟ ನನಗೇ ಗೊತ್ತು”, ಎಂದು ನಿಡುಸುಯ್ದೆ ನಾನು.

ಆದರೆ ನನ್ನ ಪ್ರಯತ್ನಗಳೇನೂ ಕಮ್ಮಿಯಿರಲಿಲ್ಲ. ವೀಜ್ ನಲ್ಲೇ ಆಗುವುದಾದರೆ ಇಲ್ಲೇ ಆಗಲಿ ಎಂಬ ಆಶಾಭಾವ ನನ್ನದು. ಮೇಲಾಗಿ ಅಂಥದ್ದೊಂದು ಜಾಗವು ಸಿಕ್ಕಿಬಿಟ್ಟರೆ ಮುಂದೆಯೂ ಅಲ್ಲೇ ಹೋಗಿ ನಿಯಮಿತವಾಗಿ ಕ್ಷೌರವನ್ನು ಮಾಡಿಸಿಕೊಳ್ಳಬಹುದು ಎಂಬ ದೂರಾಲೋಚನೆಯೂ ಕೂಡ. ಈ ನಿಟ್ಟಿನಲ್ಲಿ ನನ್ನ ಜೊತೆಗಿದ್ದ ಕೆಲ ಐರೋಪ್ಯರನ್ನು, ಪೋರ್ಚುಗೀಸರನ್ನು ಕೇಳಿ ನೋಡಿದೆ. ಎಲ್ಲರದ್ದೂ ಇದೇ ವ್ಯಥೆಯಾಗಿತ್ತು. ಕೆಲವರು ಬೇರೆ ಆಯ್ಕೆಯಿಲ್ಲವೆಂದು ವೀಜ್ ನಲ್ಲೇ ಕೆಟ್ಟದಾಗಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದರೆ, ಆ risk ಅನ್ನು ತೆಗೆದುಕೊಳ್ಳಲು ಇಚ್ಛಿಸದವರು ಲುವಾಂಡಾದವೆರೆಗೆ ಹೋಗಿಬರುತ್ತಿದ್ದರು.

ಮಾಜಿ ಜ್ಯೂಡೋ ಪಟು ಮತ್ತು ಇಲ್ಲಿಯ ವಸತಿ ಕೇಂದ್ರದ ಮುಖ್ಯಸ್ಥ ಮೊದಲೇ ಹೇಳಿದಂತೆ ತನ್ನ ಕೂದಲಿಗೆ ತಾನೇ ಕತ್ತರಿ ಹಾಕುತ್ತಿದ್ದ. ”ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದೇನೂ ಬೇಡ. ಕ್ಷೌರ ಮಾಡಿದ ಒಂದೆರಡು ವಾರ ಕೆಟ್ಟದಾಗಿ ಕಾಣುತ್ತದಷ್ಟೇ. ಕೂದಲು ಹುಲುಸಾಗಿ ಬೆಳೆದ ನಂತರ ಮತ್ತೆ ಮೊದಲಿನಂತೆಯೇ ಸಾಮಾನ್ಯವಾಗಿ ಕಾಣುತ್ತದೆ”, ಎಂಬ ಸಲಹೆಯೂ ಕೆಲ ಸ್ಥಳೀಯ ಹಿತೈಷಿಗಳಿಂದ ಕೇಳಿ ಬಂದಿತು. ಸಮಾಧಾನವೇ ಇಲ್ಲದಿದ್ದರೆ ಹೊಂದಿಕೊಂಡು ಹೋಗುವುದಲ್ಲದೆ ಇನ್ನೇನು ಮಾರ್ಗವಿದೆ?

ಹಟಹಿಡಿದು ಇಷ್ಟು ದಿನ ಕಾದ ಮೇಲೆ ಇನ್ನೊಂದೆರಡು ದಿನ ಕಾಯುವುದಕ್ಕೇನು ಧಾಡಿ? ಅಂತೂ ಲುವಾಂಡಾಗೆ ತೆರಳುವ ದಿನವು ಬಂದೇಬಿಟ್ಟಿತ್ತು. ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ದಿನಗಳ ಈ ಅವಧಿಯ ಸಂಶೋಧನೆಯಲ್ಲಿ ಒಂದು ಸಂಗತಿಯಂತೂ ನನಗೆ ಸ್ಪಷ್ಟವಾಗಿತ್ತು. ಭಾರತೀಯ ಶೈಲಿಯ ಕೂದಲಿಗೆ ನ್ಯಾಯವನ್ನು ಒದಗಿಸುವಂತಹ ಸಲೂನ್ ವೀಜ್ ನಲ್ಲಿಲ್ಲ ಎಂಬುದು. ವೀಜ್ ನಿಂದ ಆರೂವರೆ-ಏಳು ತಾಸುಗಳ ಕಾಲ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಕೊನೆಗೂ ಒಂದು ಮಾಡರ್ನ್ ಸಲೂನನ್ನು ಈ ಮಹಾನಗರಿಯಲ್ಲಿ ಹುಡುಕುವಷ್ಟರಲ್ಲಿ ನಾನು ಹೈರಾಣಾಗಿದ್ದೆ.

ಹೊಸ ಭೂಭಾಗವೊಂದನ್ನು ಕಂಡುಹಿಡಿದಾಗ ಕೊಲಂಬಸ್ ಹೇಗೆ ಸಂತಸದಿಂದ ಕುಣಿದಿರಬಹುದೋ ಅಂಥದ್ದೇ ಸಮಾಧಾನವು ನನ್ನಲ್ಲೂ ಅಂದು ಮನೆ ಮಾಡಿತ್ತು.

”ನೋಡಪ್ಪಾ, ಕೇವಲ ಕ್ಷೌರಕ್ಕಾಗಿ ಅಷ್ಟು ದೂರದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಅದ್ಯಾವ ಪ್ರಯೋಗವೂ, ಹೊಸ ಹೇರ್ ಸ್ಟೈಲೂ ನನಗೆ ಮಾಡಬೇಡ. ಕ್ಷೌರ ಎಂದರೆ ಹೀಗ್ಹೀಗಿರಬೇಕು. ಅಷ್ಟೇ! ಕೊನೆಗೆ ಕನ್ನಡಿಯೆದುರು ನಿಂತರೆ ಮುಖವು ನೋಡುವಂತಿರಬೇಕು”, ಎಂದು ನನ್ನ ಬೇಡಿಕೆಯನ್ನು ಸ್ಪಷ್ಟವಾಗಿ ದುಭಾಷಿಯ ಮೂಲಕವಾಗಿ ಕ್ಷೌರಿಕನಿಗೆ ಹೇಳಿಸಿದೆ. ”ನೀವೇನೂ ತಲೆಕೆಡಿಸಿಕೊಳ್ಳಬೇಡಿ ಸಾರ್. ಭಾರತ, ಪಾಕಿಸ್ತಾನ ಸೇರಿದಂತೆ ಬಹಳಷ್ಟು ದಕ್ಷಿಣ ಏಷ್ಯಾದ ಗ್ರಾಹಕರು ನಮ್ಮಲ್ಲಿಗೆ ಬರುತ್ತಾರೆ. ಹೀಗಾಗಿ ಈ ಬಗೆಯ ಕೂದಲನ್ನು ಸಂಭಾಳಿಸುವುದು ಹೇಗೆಂದು ನನಗೆ ಗೊತ್ತಿದೆ”, ಎಂದು ಪೋರ್ಚುಗೀಸ್ ಭಾಷೆಯಲ್ಲಿ ಹೇಳಿದ ಆತ. ದುಭಾಷಿಯ ನೆರವಿನಿಂದ ಆತನ ಭರವಸೆಯನ್ನು ಅರ್ಥಮಾಡಿಕೊಂಡ ನಾನು ನಿರಾಳನಾದೆ. ಕೊನೆಗೂ ಕೇಶಮುಕ್ತಿಯ ಸಮಯವು ಬಂದೊದಗಿತ್ತು.

ಕ್ಷೌರದ ಮೊದಲ ಭಾಗದಿಂದಲೇ ಕತ್ತರಿಯನ್ನು ಕೈಗೆತ್ತಿಕೊಂಡ ಆತನನ್ನು ಕಂಡ ನನ್ನಲ್ಲಿ ನಿರಾಳತೆಯ ಭಾವ. ಈತನ ವಿಧಾನಗಳು ಭಾರತೀಯ ಕ್ಷೌರಿಕರಿಗಿಂತ ಕೊಂಚ ಭಿನ್ನವಾಗಿದ್ದರೂ ಫಲಿತಾಂಶವಂತೂ ಸಮಾಧಾನಕರವಾಗಿತ್ತು. ಆಯ್ಕೆಗಳೇ ಇಲ್ಲದಿದ್ದ ದುರ್ಗಮ ಸ್ಥಳಗಳಲ್ಲಿ ಪರಿಪೂರ್ಣತೆಯನ್ನು ಬಯಸುವುದು ಮೂರ್ಖತನ. ಕೊನೆಗೆ ಆತನಿಗೊಂದು ದೊಡ್ಡ ನಮಸ್ಕಾರವನ್ನು ಧನ್ಯವಾದದೊಂದಿಗೆ ಕೊಟ್ಟು ಅಲ್ಲಿಂದ ಹೊರಬಿದ್ದೆ. Of course, ಇನ್ನು ಮುಂದೆಯೂ ನಿಮ್ಮಲ್ಲಿಗೇ ಬರುತ್ತೇನೆ ಎಂಬ ಭರವಸೆಯೊಂದಿಗೆ.

ಅಂದಿನಿಂದ ಕಳೆದೆರಡು ವರ್ಷಗಳಿಂದ ಅಂಗೋಲಾದಲ್ಲಿ ಇದೇ ನನ್ನ ಮಾಮೂಲು ಕ್ಷೌರದಂಗಡಿಯಾಗಿದೆ. ಇಂದಿಗೂ ‘Hair cut’ ಎಂದರೆ ನನಗೆ ಮುನ್ನೂರೈವತ್ತು ಚಿಲ್ಲರೆ ಕಿಲೋಮೀಟರುಗಳ ಒಂದು ಸುದೀರ್ಘ ಪ್ರಯಾಣ!

‍ಲೇಖಕರು avadhi

December 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: