Doughnut ಮತ್ತು ಉದ್ದಿನವಡೆಯ ಸುತ್ತ..

Doughnut ಮತ್ತು ಉದ್ದಿನವಡೆಯ ಸುತ್ತ : ನಾವು ಜೀವನವನ್ನು ಗ್ರಹಿಸುವ ರೀತಿ

ಕಿರಣ ಕಾಟವಾ

ನಾನು ಇಂಗ್ಲೆಂಡ್ ನಲ್ಲಿದ್ದಾಗ ಅಲ್ಲಿಯ ನಿವಾಸಿಯೇ ಆಗಿದ್ದ ನನ್ನ ಸಹೋದ್ಯೋಗಿಗೆ ಇಂಡಿಯನ್ ರೆಸ್ಟೋರೆಂಟ್ ಗೆ ಊಟಕ್ಕೆ ಕರೆದೊಯ್ದಿದ್ದೆ. ಇಡ್ಲಿ, ಉದ್ದಿನವಡೆ (ತೂತುವಡೆ) ಆರ್ಡರ್ ಮಾಡಿದ್ದೆ. ಅವನಿಗೆ ಆ ವಡೆ ಇಷ್ಟವಾಯಿತು. ‘ವ್ಹಾ! ಇದು ಮಸಾಲಾ ಡೊನೆಟ್ (Doughnut) ತರಹ ಇದೆ’, ಎಂದು ಉದ್ಗರಿಸಿದ. 

ಕೆಲದಿ ವಸಗಳಾದ ಬಳಿಕ ನಾನು ಭಾರತಕ್ಕೆಮರಳಿದೆ. ಇವೆಲ್ಲವೂ ಮರತೇ ಹೋಗಿತ್ತು. ಅದೊಂದು ದಿನ, ಹಳ್ಳಿಯಲ್ಲಿರುವ ನಮ್ಮ ದೊಡ್ಡಮ್ಮ ನಮ್ಮ ಮನೆಗೆ ಬಂದಿದ್ದರು. ನಾನು ಮನೆಗೆ ಹೋಗುವಾಗ ಬೇಕರಿಗೆ ಹೋಗಿ ಸ್ವಲ್ಪ ಕಾರಾ-ತಿಂಡಿ ಕಟ್ಟಿಸಿಕೊಂಡು, ಜೊತೆಗೆ ಒಂದೆರಡು Doughnut ಗಳನ್ನೂ ತೆಗೆದುಕೊಂಡು ಹೋದೆ. ಎಲ್ಲರೂ ಸೇರಿ, ಮನೆಯ ವಿಚಾರಗಳನ್ನು ಮಾತಾಡಿ ನಾನು ತಂದಿದ್ದ ತಿಂಡಿಯನ್ನು ಸವಿಯುತ್ತಾ ಕುಳಿತಿದ್ದೆವು. ನಮ್ಮ ದೊಡ್ಡಮ್ಮ Doughnut ನ್ನು ಕುತೂಹಲದಿಂದ ತಿಂದರು. ‘ವ್ಹಾ! ಈ ಸಿಹಿ ವಡೆ ಚೆನ್ನಾಗಿದೆ’ ಅಂತಾ ಉದ್ಗರಿಸಿದರು

ಒಂದುವಡೆ, ಒಂದು Doughnut ಎದುರಿಗೆ ಇಟ್ಟು ಇವನ್ನು ವಿಶ್ಲೇಷಿಸಿ ಅಂದರೆ, ನಮ್ಮ ದೊಡ್ಡಮ್ಮ -‘ಇದು ವಡೆ, ಅದು (Doughnut) ಸಿಹಿವಡೆ’ ಎಂದು ಹೇಳುತ್ತಾರೆ, ಅದೇ ನನ್ನ ವಿದೇಶಿ ಗೆಳೆಯ – ‘ಇದು Doughnut, ಅದು (ವಡೆ) ಮಸಾಲೆ Doughnut’ ಎಂದು ಹೇಳುತ್ತಾನೆ. ಇದರಲ್ಲಿ ಯಾರು ಸರಿ? ಯಾರು ತಪ್ಪು? 

ತಾತ್ಪರ್ಯದಲ್ಲಿ ತಿಳಿಯುವುದೇನೆಂದರೆ, ನಾವು ನಮ್ಮ ಅನುಭವಗಳ ಪರಧಿಯಲ್ಲಿಯೇ ಬೇರೆ ವಿಚಾರಗಳನ್ನು ನೋಡುತ್ತಿರುತ್ತೇವೆ, ಗ್ರಹಿಸುತ್ತಿರುತ್ತೇವೆ. ಇದು ವಿಷಯ ಗ್ರಹಿಕೆಯ ಅಂತರ, ಹೊರತಾಗಿ ಸರಿ-ತಪ್ಪುಗಳ ಮಾತಲ್ಲ. ಆದರೆ, ಬಹಳಷ್ಟು ಸಲ, ಇದನ್ನು ಸರಿ-ತಪ್ಪುಗಳ ದಿಕ್ಕಿನಲ್ಲೇ ಕೊಂಡೊಯುತ್ತೇವೆ.  

ಇದೆ ರೀತಿಯ ಒಂದೆರಡು ವಿಚಾರಗಳನ್ನು ನೋಡುವ… ಬಹಳಷ್ಟು ಸಲ ಕೇಳಿಬರುವ -‘ನಮ್ಮಕಾಲದಲ್ಲಿ ಹಾಗಿತ್ತು, ಈಗೆಲ್ಲಾ ಸರಿಯಿಲ್ಲ ಬಿಡಿ’ ಅನ್ನುವ ವಿಚಾರ. ನನಗೆ ಆಗಿನ ಕಾಲದ ಅನುಭವ ಇತ್ತು ಎಂದರೆ, ಅದನ್ನು ತುಲನೆಯಲ್ಲಿಟ್ಟೆ ಈಗಿನ ಜೀವನ ಶೈಲಿಯನ್ನು ನೋಡುತ್ತೇನೆ! ಈಗಿನ ಎಷ್ಟೋ ರೀತಿ-ನೀತಿಗಳು, ಜೀವನ ಶೈಲಿ, ಪರಿಸರ ಆಗಿನ ಹಾಗಿಲ್ಲ.

ಸಾಕಷ್ಟು ಬದಲಾವಣೆಯನ್ನು ಕಾಣುವ ನಾನು, ನನ್ನ ಮೂಲ, ಮೊದಲ ಅನುಭವಗಳನ್ನು ಕಳೆದುಕೊಳ್ಳುತ್ತಿರುತ್ತೇನೆ. ಅದೇ ನಾನು, ಈಗಿನ ಕಾಲದವನಾಗಿದ್ದರೆ (ಇದರ ಅನುಭವ ನನ್ನ ಮೊದಲ ಅನುಭವವಾಗಿದ್ದಾಗ), ಆಗಿನ ಕಾಲ ಸರಿಯಿರಲಿಲ್ಲ, ಈಗೆ ಎಷ್ಟೋ ಚೆನ್ನಾಗಿದೆ ಅನಿಸುತ್ತೆ – ಈಗಿರುವ ಅವಕಾಶಗಳು, ಕಡಿಮೆಯಾಗುತ್ತಿರುವ ಶೈಕ್ಷಣಿಕ ಮತ್ತು ಆರ್ಥಿಕ ಅಂತರಗಳು, ಸಂಪರ್ಕ ಸಾಧನಗಳು, ಎಷ್ಟೊಂದು ಆಗ ಇರಲಿಲ್ಲ, ಜನ ಹೀಗಾದರೂ ಜೀವನ ಮಾಡುತ್ತಿದ್ದರೋ ಅನಿಸುತ್ತೆ.  ಹೀಗಾಗಿ, ‘ನಮ್ಮ ಕಾಲದಲ್ಲಿ ಹಾಗಿತ್ತು, ಈಗೆಲ್ಲಾ ಸರಿಯಿಲ್ಲ ಬಿಡಿ’ ಅನ್ನುವ ವಿಚಾರ, ನೀವು ಯಾವ ಕಾಲ, ಪ್ರದೇಶಕ್ಕೆ ಸೇರಿದವರು ಅನ್ನುವ ಮಾತಿನ ಮೇಲೆ ನಿರ್ಭರಿಸಿರುತ್ತೆ. 

ಇಲ್ಲಿ ಕೇವಲ ಕಾಲ, ಪ್ರದೇಶ ಅಷ್ಟೇ ಅಲ್ಲದೆ ನಮ್ಮ ವಿದ್ಯಾಭ್ಯಾಸದ ಮಟ್ಟ, ಆರ್ಥಿಕ ಪರಿಸ್ಥಿತಿ ಹೀಗೆ ಬೇರೆ-ಬೇರೆ ಅಂಶಗಳನ್ನು ಬೆರೆಸುತ್ತಾ ಹೋಗಬಹುದು. ಏಕೆಂದರೆ, ಇವೆಲ್ಲ ನಮಗೆ ಅನುಭವಗಳನ್ನು ಕೊಡುತ್ತವೆ.

‘ಈಗಿನ ಸೊಸೆಯಂದಿರು ಬಿಡಿ, ಬರಿ ಡವಲು (ಸ್ಟೈಲ್ಮಾಡೋದು) ಮಾಡೋದೇ ಆಯಿತು’ ಎನ್ನುವ ಅತ್ತೆಯರ ಮಾತುಗಳು… ಅತ್ತೆಯ ಅನುಭವದಲ್ಲಿ ನಿಂತು ನೋಡಿದರೆ ಅದು ಸರಿಯೇ. ಅವರ ಕಾಲದಲ್ಲಿ ಮುಖಕ್ಕೆ ಪೌಡರ್ ಹಚ್ಹೋದೆ ದೊಡ್ಡ ವಿಷಯ. ಆದರೆ, ಈಗಿನ ಕಾಲ ಅದೇ ರೀತಿಯಿದೆಯಾ? ಈಗಿನ ಇಂಟರ್ನೆಟ್ ಜಮಾನಾ ಆಗಿತ್ತಾ? ಇವತ್ತು ನಾವು ಫೇಸ್ಬುಕ್ ನಲ್ಲೋ, ವಾಟ್ಸಪ್ ನಲ್ಲೋ ಕ್ಷಣಕ್ಷಣಕ್ಕೆ ನನ್ನ ಬಗ್ಗೆ, ನನ್ನ ವಿಚಾರಗಳ ಬಗ್ಗೆ, ನನ್ನ ಸುಂದರ ನೆನಪುಗಳ ಬಗ್ಗೆ, ನನ್ನ ಸೌಂದರ್ಯದ ಬಗ್ಗೆ ಹೇಳಿಕೊಳ್ಳಬಹುದು. ಸೌಂದರ್ಯವಾಗಿ ಕಾಣಲು ಸಾಕಷ್ಟು ಅವಕಾಶಗಳಿವೆ – ಪಾರ್ಲರ್, ಬ್ಯೂಟಿಷಿಯನ್ಸ್ ಒಂದೇ, ಎರಡೇ!? ಅದಲ್ಲದೆ ಬಹಳಷ್ಟು ಹೆಂಗಸರು ಕೆಲಸಕ್ಕೆ ಹೊರಗೆ ಹೋಗುತ್ತಾರೆ. ತಮ್ಮನ್ನು ತಾವು ಸುಂದರವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಇದೊಂದು ರೀತಿಯ ಅಭಿವ್ಯಕ್ತತೆ. ಈಗಿನ ಕಾಲ, ದೇಶ, ವಿದ್ಯಾಭ್ಯಾಸ, ಆರ್ಥಿಕ ಪರಿಸ್ಥಿತಿಯಲ್ಲಿ ನೋಡಿದರೆ, ಇದು ಸರಿ. 

‘ನಮ್ಮ ಅತ್ತೆ ಬಾರಿ ಕಂಜೂಸು, ಹಳೆ ಕಾಲದ ಯೋಚನೆ ಇರೋಳು’, ಎನ್ನುವ ಸೊಸೆಯಂದಿರಿಗೂ, ‘ಈ ಹಳೆ ಜಮಾನಾದ ರೀತಿ-ರೀವಾಜುಗಳು ಒಂದು ಅರ್ಥ ಆಗೋಲ್ಲ’ ಎಂದು ತಾತ್ಸಾರ ತೋರಿಸೊ ಈಗಿನ ಪೀಳಿಗೆಯವರಿಗೂ ಇದು ಅನ್ವಯ.

ಅದಕ್ಕೆ ಒಂದು ವಿಷಯದ ಬಗ್ಗೆ ಮಾತಾಡುವಾಗ, ಕೇವಲ ಅದನ್ನಷ್ಟೇ ಹಿಡಿದುಕೊಳ್ಳದೆ ಅದರ ಸುತ್ತಲಿರುವ ಪರಿಸ್ಥಿತಿಯನ್ನು ತಿಳಿದುಕೊಂಡು ಮಾತನಾಡಿ, ಯೋಚಿಸಿ. ಆವಾಗ, ವಿಷಯದ ಸಂಪೂರ್ಣ ಗ್ರಹಿಕೆಯಾಗುವುದು. 

ಇನ್ನು ಆಳವಾಗಿಯೂ, ಈ ವಿಚಾರವನ್ನು ಒಯ್ಯಬಹುದು. ಬಹಳ ಸಲ ನಾವು ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿ ಕೀಳರಿಮೆಯನ್ನೂ ಪಡುತ್ತಿರುತ್ತೇವೆ. ನಾನು ಮಾರ್ಕ್ ಝುಕರ್ ಬರ್ಗ್ ಆಗಬೇಕಿತ್ತು, ಸುಂದರ್ ಪಿಚೈ ತರಹ ಆಗಬೇಕಿತ್ತು , ಅವನ ತರಹ ಬಿಸಿನೆಸ್ ಮ್ಯಾನ್ ಆಗಬೇಕಿತ್ತು, ಸ್ಪೋರ್ಟ್ಸ್ ‌ಮ್ಯಾನ್ ಆಗಬೇಕಿತ್ತು. ಕೆಲವೊಮ್ಮೆ, ನಮ್ಮನ್ನು ಇನ್ನೊಬ್ಬರಿಗೆ ಹೋಲಿಸಿ ಹೆಮ್ಮೆಯನ್ನು ಪಡುತ್ತಿರುತ್ತೇವೆ. ಇವೆಲ್ಲಾ, ಸ್ವಂತ ನಮ್ಮ ಬಗ್ಗೆ ಆಗಿರಬಹುದು, ಅಥವಾ ನಮ್ಮ ಗಂಡ-ಹೆಂಡತಿ-ಮಕ್ಕಳು, ಕೆಲವೊಮ್ಮೆ ನಮ್ಮ ತಂದೆ-ತಾಯಿಯ ಬಗ್ಗೆಯೂ ಆಗಿರಬಹುದು. 

ಇನ್ನೊಬ್ಬರ ಜೊತೆ ಹೋಲಿಸುವಾಗ ಎಲ್ಲವನ್ನೂ ಹೋಲಿಸಿ – ನಿಮ್ಮ ಮನೆಯಲ್ಲಿರುವ ಸಂಬಂಧಗಳ ಪರಿಸ್ಥಿತಿ, ಆರ್ಥಿಕ ಸ್ಥಿತಿ, ವಿದ್ಯಾಭ್ಯಾಸ, ಶಾಲೆ, ಗೆಳೆಯರು, ಸಾಮಾಜಿಕ ಪರಿಸ್ಥಿತಿ, ನಿಮ್ಮ ಮೇಲಿದ್ದ ಜವಾಬ್ದಾರಿಗಳು, ನಿಮ್ಮಲಿದ್ದ ಆಸಕ್ತಿ, ಛಲ, ಜಾಣ್ಮೆ, ಆಸೆ-ದುರಾಸೆಗಳು, ಯೌವ್ವನದ ಬಯಕೆಗಳು. ಹೋಲಿಕೆಯೇ ಮಾಡುವುದಾದರೆ ಎಲ್ಲವನ್ನೂ ಹೋಲಿಸಿ ನೋಡಿ, ಆಜಾಗದಲ್ಲಿ ನಿಂತು ಹೋಲಿಸಿ. ಆಗ ಕಾಣುವುದೇ ಬೇರೆ. ಕೇವಲ ರಿಸಲ್ಟ್ಸ್ (ಮಾರ್ಕ್ ಝುಕರ್ ಬರ್ಗ್ ಎನ್ನುವ ಬಿಸಿನೆಸ್ ಮ್ಯಾನ್, ಸುಂದರ್ ಪಿಚೈ ಎನ್ನುವ ಸಿಇಓ, ಸಕ್ಸೆಸ್ಫುಲ್ ಆಟಗಾರ, ನಟ) ಜಾಗದಲ್ಲಿ ನಿಂತು ನೋಡುವುದಾದರೆ, ಆಗ ಕಾಣುವುದೇ ಬೇರೆ. ನೀವು ಎಲ್ಲಿ ನಿಂತು ಈ ಹೋಲಿಕೆಯ ನಡೆಸುತ್ತಿದ್ದೀರಾ ಎನ್ನುವುದರ ಮೇಲೆ ನಿಮಗೆ ಬೇರೆ-ಬೇರೆಯದಾಗಿಯೇ ಕಾಣಿಸುತ್ತದೆ. 

ನೀವು ಇದು ವಡಾ, ಅದು (doughnut) ಸಿಹಿವಡಾ ಅಂದ್ರು ಸರಿಯೇ; ಇದು doughnut, ಅದು (ವಡಾ) ಮಸಾಲಾ doughnut ಅಂದ್ರು ಸರೀನೇ. ಒಟ್ಟಾರೆ, ನೀವು ಎಲ್ಲಿದಿರಿ? ಯಾವ ಅನುಭವಗಳ ಮೂಲಕ ನಿಮ್ಮೆದುರಿಗಿರುವ ವಿಷಯವನ್ನು ನೋಡುತ್ತಿದ್ದೀರಿ ಎಂದು ಒಮ್ಮೆ ನೋಡಿ ಮುಂದುವರೆಸಿ. ಏಕೆಂದರೆ, ಮೂಲ ವಿಷಯವಿರುವುದು ಅಲ್ಲಿ!  ಹಾಗಿದ್ದಲ್ಲಿ, ವಿಷಯ ಗ್ರಹಿಕೆ ಸರಿಯಾಗಿ ಆಗುವುದರಲ್ಲಿ ಸಹಾಯವಾಗುತ್ತದೆ ಹಾಗೂ ನಮ್ಮಲ್ಲಿ ಅನುಭೂತಿಯನ್ನು (empathy) ಬೆಳೆಸುತ್ತದೆ. 

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: