‘ಹನೀಲ್ಯಾಂಡ್’ನಲ್ಲಿ ಪರಿಸರವೂ ಮಾತಾಡುತ್ತೆ!

ಚಿತ್ರಾ ಸಂತೋಷ್

ಈಕೆಯ ಹೆಸರು ಹತೀಝ ಮುರತೋವಾ. ಉತ್ತರ ಮರ್ಸಿಡೋನಿಯಾದ ಪರ್ವತ ಪ್ರದೇಶವೊಂದರಲ್ಲಿ ಅವಳ ಗುಡಿಸಲು. ಜೇನು ಸಾಕುವುದು ಅವಳ ಕುಲಕಸುಬು. ಯುರೋಪ್ ನಲ್ಲಿ ಸಾಂಪ್ರದಾಯಿಕವಾಗಿ ಜೇನುಸಾಕಣೆ ಮಾಡುವವರಲ್ಲಿ ಈಕೆ ಕೊನೆಯವಳು ಎಂದು ಹೇಳಲಾಗಿದೆ.

ಯಾವುದೋ ಸಿನಿಮಾ ಎಂದರೆ ಅದರಲ್ಲಿ ನಟ-ನಟಿಯರು ಅಭಿನಯಿಸುತ್ತಾರೆ ಅಂತ ಹೇಳಿಬಿಡಬಹುದು. ಆದರೆ ಇದರಲ್ಲಿ ಹತೀಝ ಮುರತೋವಾವಳೇ ನಾಯಕಿ. ಅವಳೇ ಬೆಟ್ಟ ಗುಡ್ಡ ಹತ್ತಿ ಜೇನು ತೆಗೆದು ಕಿಮೀಗಟ್ಟಲೆ ದೂರವಿರುವ ಪೇಟಗೆ ನಡೆದುಕೊಂಡು ಹೋಗಿ ಜೇನು ಮಾರಿ ಬರುವಳು.

ಜೇನು ಸಿಕ್ಕರಷ್ಟೇ ಅವಳಿಗೆ ಬದುಕು, ಹೊಟ್ಟೆಗೆ ಹಿಟ್ಟು. ಜೊತೆಗೆ 80 ದಾಟಿರುವ ಅಮ್ಮ. ಅಮ್ಮನಿಗೆ ಮಲಗಿದ್ದಲ್ಲೇ, ಊಟ-ತಿಂಡಿ ಎಲ್ಲವೂ. ಬೆಟ್ಟದ ತುದಿಯಲ್ಲಿರುವ ಗುಡಿಸಲಿನಲ್ಲಿ ಅವರಿಬ್ಬರೇ ಜೊತೆಗೊಂದು ಪ್ರೀತಿಯ ನಾಯಿ. ಅಮ್ಮನ ಆರೋಗ್ಯಕ್ಕಾಗಿ ನಿದ್ದೆಯಿಲ್ಲದ ರಾತ್ರಿಗಳು ಅವಳದು. ಜೊತೆಗೆ ಜೇನು ಸಿಕ್ಕಿಲ್ಲಾಂದ್ರೆ ನಾಳಿನ ಊಟಕ್ಕೇನು ಎನ್ನುವ ಚಿಂತೆ. ಪೇಟೆಯಿಂದ ಅಮ್ಮನಿಗೆ ತಿಂಡಿ ತರುವಳು, ಬಾಳೆಹಣ್ಣು ತಂದು ಸುಲಿದು ಹಲ್ಲಿಲ್ಲದ ಅಮ್ಮನ ಬಾಯಿಗಿಟ್ಟು ಖುಷಿಪಡುವಳು. ಮಗುವಂತಾಗುವ ಅಮ್ಮ, ಅಮ್ಮನಿಗೇ ಅಮ್ಮನಾಗುವ ಮಗಳು!

ಜೇನಿಗಾಗಿ ಅಕ್ಕಪಕ್ಕದವರ ಕಿರಿಕಿರಿ ಅದೂ-ಇದೂ ಇದ್ದಿದ್ದೆ. ಆದರೆ ಇದಾವುದಕ್ಕೂ ಬಗ್ಗದೆ ತನ್ನ ಪಾಡಿಗೆ ಕಾಯಕ ಮುಂದುವರೆಸುತ್ತಾಳೆ. ಕೊನೆಗೆ ಅಮ್ಮ ಒಂದು ದಿನ ಸಾವನ್ಮಪ್ಪುತ್ತಾಳೆ! ಅಮ್ಮನ ಕಾರ್ಯಗಳನ್ನು ಮುಗಿಸುವುದು ಹತೀಝಳೇ. ಅಲ್ಲಿಯವರೆಗೆ ಜೊತೆಗಿದ್ದ ಅಮ್ಮ ಇನ್ನಿಲ್ಲವಾದಾಗ ಅವಳು ಒಂಟಿ, ಮೌನವಾಗಿ ರೋಧಿಸುತ್ತಾಳೆ.

ಇಡೀ ಡಾಕ್ಯುಮೆಂಟರಿಯಲ್ಲಿ ಪ್ರತಿ ಸನ್ನಿವೇಶ, ಭಾವನೆಗಳನ್ನು ಕಟ್ಟಿಕೊಟ್ಟ ರೀತಿ ಅದ್ಭುತ. ಇಲ್ಲಿ ತುಂಬಾ ಚಂದಚಂದ ದೃಶ್ಯಗಳಿವೆ, ಬೆಟ್ಟ, ಗುಡ್ಡ, ಗುಡ್ಡದ ಸಂದಿಗಳಲ್ಲಿ ಗುಂಯಿಗುಡುವ ಜೇನು, ಪರಿಸರ, ಮಳೆ, ಮಂಜು, ಮೌನ ಜೊತೆಗೆ ಮಾತಾಡುವ ಬದುಕು, ಪರಿಸರದ ಭಾವಗಳು, ಮನುಷ್ಯ-ನಿಸರ್ಗದ ಅನುಬಂಧ ಎಲ್ಲವೂ!

ಒಂದೂವರೆ ಗಂಟೆ ಡಾಕ್ಯುಮೆಂಟರಿ ಇದು.ಇದರ ಚಿತ್ರೀಕರಣಕ್ಕೆ ಸುಮಾರು ಮೂರು ವರ್ಷ ಹಿಡಿದಿದೆಯಂತೆ. ಆ ಗ್ರಾಮದಲ್ಲಿ ಬದಲಾಗುತ್ತಿರುವ ಹವಾಮಾನ, ಪ್ರತಿಯೊಂದನ್ನೂ ಚಿತ್ರೀಕರಿಸಲಾಗಿದೆ. ಆಶ್ಚರ್ಯ ಆಗುತ್ತದೆ. ಅಮ್ಮ ಸಾಯುವುದನ್ನು ಕೂಡ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ. ಇಬ್ಬರು ನಿರ್ದೇಶಕರು ಸೇರಿದಂತೆ ಆರು ಮಂದಿ ಮೂರುವರ್ಷ ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಿ ಸುಮಾರು 400 ಗಂಟೆ ಚಿತ್ರೀಕರಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ..

ಈ ಡಾಕ್ಯುಮೆಂಟರಿ ನೋಡಿ ವರ್ಷವೇ ಸರಿದಿದೆ. ಆದರೆ ಹತೀಝ ಸುಮ್ಮನೆ ನೆನಪಾದಳು. ಅಲ್ಲಿನ ಪರಿಸರ ನೆನಪಾಯಿತು. ಹತೀಝ-ಅವಳ ಅಮ್ಮ, ಅವಳು ಪರಿಸರದೊಂದಿಗೆ ಇಟ್ಟುಕೊಂಡಿದ್ದ ಬಾಂಧವ್ಯ ಎಲ್ಲವೂ ಮತ್ತೆ ಮತ್ತೆ ಭಾವನಾತ್ಮಕವಾಗಿ ಕಾಡಿತು! ಸಿಕ್ಕರೆ ನೋಡಿ, ಇಲ್ಲಿ ಮನುಷ್ಯ ಮಾತ್ರವಲ್ಲ ಪರಿಸರವೂ ಬಹಳಷ್ಟು ಮಾತಾಡುತ್ತೆ!

ಗಮನಿಸಿ: ಈ ಡಾಕ್ಯುಮೆಂಟರಿ ಸಾಕಷ್ಟು ಗೌರವಗಳನ್ನೂ ಪಡೆದಿದೆ. ಕಳೆದ ವರ್ಷ ಆಸ್ಕರ್ ಗೂ ನಾಮಿನೇಟ್ ಆಯಿತು. ತದನಂತರ ಹತೀಝ ಬದುಕು ಬದಲಾಯಿತು. ಆಕೆ ಇದ್ದ ಕುಗ್ರಾಮದಿಂದ ನಗರದ ಹೃದಯಭಾಗ ಮರ್ಸಿಡೋನಿಯಾದ ಡೋರ್ ಫುಲ್ ಎಂಬ ಗ್ರಾಮದಲ್ಲಿ ನೆಲೆಸಿದ್ದಾಳಂತೆ!

| ಫೇಸ್ ಬುಕ್ ನಿಂದ ।

‍ಲೇಖಕರು Avadhi

May 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: