Breaking News: ಸಾ ಶಿ ಮರುಳಯ್ಯ ಇನ್ನಿಲ್ಲ

 

ಹೋಗಿ ಕವನ ವಾಚಿಸಿ. ನಂದನವನದಲ್ಲೂ ಒಂದು ಕವಿತೆಯ ತುಣುಕಿರಲಿ.. 

ಆಗ ಮೊಬೈಲ್ ಫೋನ್ ಅನ್ನೋದು ಯಾರೂ ಕೇಳಿರಲಿಲ್ಲ. ಆ ಥರಾ ಒಂದು ಮುಂದೆ ಬರುತ್ತೆ ಅಂದ್ರೆ ನಂಬುವವರೂ ಇರಲಿಲ್ಲ. ಮನೆಗೆ ಒಂದು ಫೋನ್ ಅನ್ನೋ ಕಲ್ಪನೆಯೂ ಇರಲಿಲ್ಲ. ಹಾಗಿರುವಾಗ ನಮ್ಮ ಎದುರು ಮನೆಯವರು ಬಂದು ನಿನಗೆ ಒಂದು ಫೋನ್ ಇದೆ ನೋಡು ಅಂದ್ರು. ಇಡೀ ಬೀದಿಗೆ ಒಂದೇ ಫೋನ್ ಇದ್ದ ಕಾಲ ಅದು. ಯಾರಿಗೆ ಬೇಕಾದರೂ ನಂಬರ್ ಕೊಡ್ತಿದ್ವಿ. ಯಾರದ್ದು ಅಂತ ಕೇಳಿದೆ. ಗೊತ್ತಿಲ್ಲ ಅಂದ್ರು. ಫೋನ್ ಇರೋ ಮನೆಯವರಿಗೆ ನಮಗೆ ಯಾರ್ ಫೋನ್ ಮಾಡ್ತಾರೆ ಅನ್ನೋದು ಅವರ ದನೀಲೆ ಗುರುತು ಹಿಡಿದು ಬಿಡೋರು. ಅವರ ಮುಂದೇನೆ ಫೋನ್ ನಲ್ಲಿ ಮಾತಾಡಬೇಕಾಗಿದ್ದರಿಂದ ನಾವು ನುಲಿಯೋದರಲ್ಲೇ ಆ ಕಡೆ ಇರೋರ ಜೊತೆ ನಮ್ದೇನು ಈಕ್ವೆಶನ್ ಅನ್ನೋದು ಅರ್ಥ ಆಗ್ತಿತ್ತು. ಹಾಗಾಗಿ ಅವರು ಯಾರೋ ಗೊತ್ತಿಲ್ಲ ಅಂದಾಗ ನನಗೂ ಆಶ್ಚರ್ಯ ಆಯ್ತು. ಸರಿ ಎದ್ದೂ ಬಿದ್ದೂ ಹೋಗಿ ಫೋನ್ ತಗೊಂಡೆ.  ಆ ಕಡೆಯಿಂದ ಒಂದು ಗಂಭೀರ ದನಿ ‘ನೀವು ದೂರದರ್ಶನದಲ್ಲಿ ಕವಿತೆ ಓದಬೇಕಲ್ಲಾ’ ಅಂತ.

sa shi marulaiah with awardಆಗ ಇದ್ದದ್ದು ದೂರದರ್ಶನ ಮಾತ್ರ. ದೂರದರ್ಶನ ಅಂದರೆ ನಿಜಕ್ಕೂ ಒಂದು ಮ್ಯಾಜಿಕ್ ಬಾಕ್ಸೇ ಆಗಿತ್ತು ನಮಗೆ. ಅಂತಹ ಸಮಯದಲ್ಲಿ ಇದ್ಯಾರು ಹೀಗೆ ನನ್ನನ್ನ.. ಅದೂ ಆಗ ತಾನೇ ಡಿಗ್ರಿಗೆ ಕಾಲಿಟ್ಟಿದ್ದ ನನ್ನನ್ನ ಕರೀತಿದ್ದಾರೆ ಅಂತ ಆಶ್ಚರ್ಯ ಆಯ್ತು. ಜೊತೆಗೆ ಇದು ಯಾರ ಮನೆಗೋ ಹೋಗೋ ಬದಲು ಇಲ್ಲಿಗೆ ಬಂತಾ ಅಂತ ದೌಟ್ ಆಯ್ತು. ‘ಸರ್ ನಾನು ಈಗ ತಾನೇ ಬರೀತಾ ಇದ್ದೀನಿ’ ಅಂದೆ. ಹೌದು  ಕವಿತೆಗಳೊಂದಿಗೆ ಬನ್ನಿ ಮನೆಗೆ ಅಂದರು. ಅವರು ಸಾ ಶಿ ಮರುಳಯ್ಯ.

ಪೋಲೀಸ್ ಅಧಿಕಾರಿ, ಸಾಹಿತಿ ಪಿ ಎಸ್ ರಾಮಾನುಜಂ ಅವರ ಮಲ್ಲೇಶ್ವರದ ಮನೆಯಲ್ಲಿ ನಾನು ಓಲಗದ ಮರೆಯಲ್ಲಿ ಎನ್ನುವ ಕವಿತೆಯನ್ನು ಕ್ಯಾಮೆರರಾ ಕಣ್ಣಿಗೆ ಒಡ್ಡಿದೆ. ನಾನು ಮತ್ತು ಈಗ ದೂರದರ್ಶನವೇ ತಾನು ಎಂಬಂತೆ ಆಗಿ ಹೋಗಿರುವ ಎಚ್ ಎನ್ ಆರತಿ ದೂರದರ್ಶನ ಎನ್ನುವ ಮಾಯಾ ಪೆಟ್ಟಿಗೆ ಒಳಗೆ ಹೊಕ್ಕಿದ್ದು ಹೀಗೆ..

ಈಗ ಸದಾ ಟಿ ವಿ ಲೋಕದಲ್ಲೇ ಇರುವ, ಆ ಸಂತೆಯ ಒಳಗೇ ಒಂದು ಮನೆ ಮಾಡಿರುವ, ಯಾವಾಗ ಬೇಕಾದರೂ ಪರದೆಯ ಮೇಲೆ ನಮ್ಮ ಮುಖಗಳನ್ನು ರಾಚಿಕೊಳ್ಳುವ ಎಲ್ಲಾ ಅವಕಾಶ ಇದ್ದರೂ ಯಾಕೋ ‘ಎಲ್ಲಿ ಹೋದಾವು ಗೆಳೆಯ ಆ ಕಾಲ..’ ಎನ್ನುವಂತೆ ಮೊದಲ ಬಾರಿಗೆ ಟಿ ವಿ ಯೊಳಗೆ ಹೊಕ್ಕ ಆ ದಿನವನ್ನೇ ಮನಸ್ಸು ಜಗಿಯುತ್ತಿದೆ. ಹಾಗೆ ಟಿ ವಿ ಯೊಳಗೆ ಕೈ ಹಿಡಿದು ನಡೆಸಿಕೊಂಡು ಹೋದ ಆ ಸಾ ಶಿ ಮರುಳಯ್ಯ ನವರುರನ್ನೂ ನೆನೆಯುತ್ತಿದೆ.

ಸಾ ಶಿ ಮರುಳಯ್ಯ ಎಂದರೆ ಇನ್ನೊಬ್ಬ ನಿಸಾರ್. ಅವರದ್ದು ‘ಜೋಗದ ಸಿರಿ ಬೆಳಕಿನಲ್ಲಿ’ ಆದರೆ ಇವರದ್ದು ‘ಸುರಸುಂದರ ತರು ಲತೆಗಳ ಬೃಂದಾವನ ಲೀಲೆ’.  ಒಂದಕ್ಕೊಂದು ಮಿಗಿಲು ಎನ್ನುವಂತೆ ಎಲ್ಲರ ಮನದಲ್ಲಿ ತಾವು ಪಡೆದ್ದಿದ್ದ ದಿನಗಳು ಅವು.

ಸಾ ಶಿ ಮರುಳಯ್ಯ ಎಂದರೆ ಕನ್ನಡ ಸಾಹಿತ್ಯವನ್ನ ರಸ ಪಾಕದಲ್ಲಿ ಅದ್ದಿ ವಿದ್ಯಾರ್ಥಿಗಳಿಗೆ ಬಡಿಸುತ್ತಾರೆ ಎನ್ನುವುದು ಎಲ್ಲರೂ ಆಡುತ್ತಿದ್ದ ಮಾತು. ಇದು ಹೌದು ಎನ್ನುವಂತೆ ಮರುಳಯ್ಯನವರು ತಮ್ಮ ಕಂಚಿನ ಎತ್ತರದ ಕಂಠದಲ್ಲಿ ಪ್ರತೀ ಕವಿತೆಯ, ಗದ್ಯದ ಲಯ ಹಿಡಿದು ಬಡಿಸುತ್ತಿದ್ದರು.

ಸಾ ಶಿ ಮರುಳಯ್ಯ ಅವರ ಮನೆಗೆ ಮತ್ತೆ ಮತ್ತೆ ಹೋಗಿದ್ದೇನೆ. ನಾನು ಎರಡನೆಯದಾಗಿ ಮ್ಯಾಜಿಕ್ ಬಾಕ್ಸ್ ಹೊಕ್ಕಿದ್ದು ಈ ಟಿವಿ ಯಲ್ಲಿ. ಕನ್ನಡ ಸಾಹಿತ್ಯ ಎನ್ನುವುದು ಕ್ರೈಮ್ ಲೋಕದಲ್ಲಿ ಅಂಚಿಗೆ ದಬ್ಬಲ್ಪಟ್ಟಿದ್ದಾಗ, ಅದರಲ್ಲೂ ಟಿ ಆರ್ ಪಿ ಇದೆ ಎನ್ನುವುದನ್ನು ಸಾಧಿಸಿ ತೋರಿಸಿಬಿಡಲು ಟೊಂಕ ಕಟ್ಟಿದ್ದ ದಿನಗಳು ಅವು. ಹಾಗಾಗಿ ಪ್ರತೀ ಸಾಹಿತ್ಯ ಸಮ್ಮೇಳನ ಬಂದರೆ ಕ್ಯಾಮೆರಾ ಕಣ್ಣಿನ ಜೊತೆಗೆ ಅವರ ಮನೆ ಬಾಗಿಲು ಬಡಿಯುತ್ತಿದ್ದೆ.

ಮೊನ್ನೆ ಮೊನ್ನೆ ಶ್ರವಣಬೆಳಗೊಳದಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ಸಾ ಶಿ ಮರುಳಯ್ಯ ಅವರ ಪಕ್ಕದಲ್ಲಿ ನಾನು, ಆರತಿ ಕುಳಿತಿದ್ದೆವು. ಮೂವರೂ ಮತ್ತೆ ಅದೇ ದಿನಗಳಿಗೆ ಜಾರಿದ್ದೆವು. ಹೌದಲ್ಲಾ ಚಕ್ರ ಹೇಗೆ ಸುತ್ತುತ್ತದೆ! ಮತ್ತೆ ಕವಿತೆಯ ಕಾರಣಕ್ಕಾಗಿಯೇ ನಾವು ಮೂವರೂ ಸೇರಿದ್ದೇವೆ ಎಂದು ಆ ಗದ್ದಲದ ನಡುವೆಯೂ ಗುಸು ಗುಸು ಮಾಡುತ್ತಿದ್ದೆವು

ಸಾ ಶಿ ಮರುಳಯ್ಯ ಅವರಿಗೆ ಸದಾ ಇವತ್ತಿಗೆ ಅಪ್ಡೇಟ್ ಆಗುವ ತಹತಹವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಯುವ ಮನಸ್ಸುಗಳ ಜೊತೆ ಇದ್ದು ಯುವಕರಾಗಿ ಬಿಡುವ ಖುಷಿ ಇತ್ತು. ಇವತ್ತಿನ ಎಷ್ಟೋ ಐ ಎ ಎಸ್, ಕೆ ಎ ಎಸ್ ಗೆ ಅಧಿಕಾರಿಗಳು ಇವರು ಕೊಟ್ಟ ಕನ್ನಡ ದೀಕ್ಷೆಯಿಂದಲೇ ಗೆದ್ದು ಬಂದವರು. ಕಾಡು ಬಾ ಎನ್ನುವ ಸಮಯದಲ್ಲೂ ಕಾಡುವ ಹಾಗೆ ಬದುಕಬಹುದು ಹೇಗೆ ಎಂದು ಕಲಿಸಿಕೊಟ್ಟವರು.

ಸಾ ಶಿ ಅವರಿಗೆ ಈಗ ಕರೆ ಬಂದಿದೆ ದೂರ… ದರ್ಶನದಿಂದ. ಹೋಗಿ ಕವನ ವಾಚಿಸಿ. ನಂದನವನದಲ್ಲೂ ಒಂದು ಕವಿತೆಯ ತುಣುಕಿರಲಿ..

-ಜಿ ಎನ್ ಮೋಹನ್ 

 

oil lamp

ಸಾ.ಶಿ. ಮರುಳಯ್ಯ

೨೮-೧-೧೯೩೧

ಸಾ.ಶಿ.ಮ.ರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮ. ತಂದೆ ಶಿವರುದ್ರಯ್ಯ, ತಾಯಿ ಸಿದ್ದಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು  ಸಾಸಲು ಗ್ರಾಮದಲ್ಲಿ. ಶೆಟ್ಟಿ ಕೆರೆಯಲ್ಲಿ ಮಾಧ್ಯಮಿಕ, ಹೈಸ್ಕೂಲು ಸೇರಿದ್ದು ತಿಪಟೂರು. ಕಾಲೇಜು ಓದಿದ್ದು ಚಿತ್ರದುರ್ಗ. ಇಂಟರ್ ಮುಗಿಸಿ ಮ್ಯಾಂಗನೀಸ್ ಗಣಿಯ ಕಂಟ್ರಾಕ್ಟರ್ ಬಳಿ ಗುಮಾಸ್ತೆ ಕಲಸ. ಕೂಡಿಟ್ಟ ಹಣದಿಂದ ಸ್ನಾತಕೋತ್ತರ ಪದವಿ ಪಡೆಯಲು ಮೈಸೂರಿಗೆ ಪ್ರಯಾಣ.

ಆನರ್ಸ್‌ನಲ್ಲಿ ಡಿ.ಎಲ್.ಎನ್., ದೇಜಗೌ., ತ.ಸು.ಶಾ., ಎಸ್.ವಿ. ರಂಗಣ್ಣ, ಎಸ್.ವಿ. ಪರಮೇಶ್ವರ ಭಟ್ಟರು ಮುಂತಾದ ವಿದ್ವಾಂಸರ ಮಾರ್ಗದರ್ಶನ. ಎಂ.ಎ. ಓದಲು ಅಡಚಣೆ. ಪುನಃ ಉದ್ಯೋಗ. ಚಾಮರಾಜನಗರ ಕಾಲೇಜಿನ ಅರೆಕಾಲಿಕ ಉಪಾಧ್ಯಾಯ ವೃತ್ತಿ.

ಎಂ.ಎ. ಮುಗಿಸುತ್ತಿದ್ದಂತೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಕಾಲೇಜಿನಲ್ಲಿ ಬೋಧನಾ ವೃತ್ತಿ. ಬೆಂಗಳೂರಿಗೆ ವರ್ಗಾವಣೆ. ಬಡ್ತಿ ಪಡೆದು ಪುನಃ ತುಮಕೂರು, ಚೆನ್ನಪಟ್ಟಣ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆ. ಅಲ್ಲಿಂದ ಮಂಗಳೂರು, ನಂತರ ಬೆಂಗಳೂರಿಗೆ-ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನೇಮಕ. ಆರು ವರ್ಷದ ನಂತರ ನಿವೃತ್ತಿ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ೧೯೯೫-೧೯೯೮ರವರೆಗೆ. ಚಿತ್ರದುರ್ಗ ಕಾಲೇಜಿನಲ್ಲಿದ್ದಾಗಲೇ ಸಾಹಿತ್ಯ ಬರವಣಿಗೆ ಪ್ರಾರಂಭ. ಹಲವಾರು ಗ್ರಂಥಗಳ ಸಂಪಾದನೆ. ವಿಶ್ವಕೋಶದ ಪ್ರಧಾನ ಸಂಪಾದಕರು. ರಚಿಸಿದ ಕೃತಿಗಳು ಸುಮಾರು ಅರವತ್ತು. ಶಿವತಾಂಡವ, ಕೆಂಗನಕಲ್ಲು, ರಾಸಲೀಲೆ, ರೂಪಸಿ (ಕಾವ್ಯ) ; ಪುರುಷಸಿಂಹ, ಹೇಮಕೂಟ, ಸಾಮರಸ್ಯದ ಶಿಲ್ಪ (ಕಾದಂಬರಿ) ; ವಿಜಯವಾತಾಪಿ, ಎರಡು ನಾಟಕಗಳು, ಮರೀಬೇಡಿ ಮುಂತಾದ ನಾಟಕಗಳು ; ನೆಲದ ಸೊಗಡು-ಕಥಾಸಂಕಲನ. ವಚನ ವೈಭವ, ಸ್ಪಂದನ, ಅವಲೋಕನ ಮುಂತಾದ ಸಂಶೋಧನಾ ಕೃತಿಗಳು. ಮಾಸ್ತಿಯವರ ಕಾವ್ಯಸಮೀಕ್ಷೆ, ಅಭಿವ್ಯಕ್ತ, ಅನುಶೀಲನ ಮೊದಲಾದ ವಿಮರ್ಶಾ ಕೃತಿಗಳು.

ಸಂದ ಪ್ರಶಸ್ತಿಗಳು ಹಲವಾರು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಎಚ್.ನರಸಿಂಹಯ್ಯ ಪ್ರಶಸ್ತಿ ಮುಖ್ಯವಾದವುಗಳು. ‘ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಹಿತೈಷಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಇಷಾಂಶು ಮತ್ತು ಅಭಿಜ್ಞ’

 – ವೈ.ಎನ್. ಗುಂಡೂರಾವ್‌

ಮೂಲ- ‘ಕಣಜ’

‍ಲೇಖಕರು Admin

February 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. kumbar Veerabhadrappa

    ಸಾ ಶಿ ಮರುಳಯ್ಯ ದೊಡ್ಡ ಮನುಷ್ಯ, ಇ ದೊಡ್ಡ ಮನುಷ್ಯ ಭೌತಿಕವಾಗಿ ನಮ್ಮ ಜೊತೆ ಇಲ್ಲ ಅಂದ್ರೆ ನಂಬುವುದಕ್ಕಾಗ್ತಿಲ್ಲ, ಯಾಕೆಂದರೆ ಇವರು ಅಪ್ಪಟ ಸಸ್ಯಾಹಾರಿ ಅಂದರಕಿ ಮಂಚಿವಾಡು, ನಾನು ಕಂಡಂತೆ ಇವರು ಇನ್ನಿತರರ ಮೇಲೆ ರೇಗಿದ ಉದಾಹರಣೆಗಳಿಲ್ಲ, ಪ್ರಮಾಣಿಕವಾಗಿ ಒಪ್ಪಿಕೊಳ್ಳುವದಾದರೆ ನಾನು ಅಂದಕಾಲಿತ್ತಲ್ ಇವರ ಕವಿತೆಗಳಲ್ಲಿನ ಏಳೆಂಟು ಸಾಲುಗಳನ್ನು ಕದ್ಸು ಕವಿತೆ ಬರೆದು ಕವಿ ಎಂದು ಬೀಗುತ್ತಿದ್ದೆ, ಸಾರ್ ಎಂದು ಹೇಳಿದಾಗ ಅವರು ನಕ್ಕು ಪ್ರೋತ್ಸಾಹಿಸಿದ್ದರು, ಸಾ ಶಿ ಮರುಳಯ್ಯ ಎಲ್ಲಾ ಅರ್ಥಗಳಲ್ಲು ದೊಡ್ಡ ಮನುಷ್ಯರಿದ್ದರು. ಇಂಥವರು ಲಿಂಗೈಕ್ಯರಾಗುವುದೆಂದರೆ? ಇಲ್ಲ ಕಣ್ರಿ ಇಂಥ ದೊಡ್ಡ ಮನುಷ್ಯರು ಸಾಯುವುದಕ್ಕೆ ಸಾಧ್ಯವಿಲ್ಲ
    ಕುಂವೀ

    ಪ್ರತಿಕ್ರಿಯೆ
  2. ಉಷಾ ರೈ

    ಹೌದು, ಕುಂವೀ ಯವರು ಹೇಳುವಂತೆ ಸಾಶೀ ಮರುಳಯ್ಯನವರಂಥ ವ್ಯಕ್ತಿಗಳಿಗೆ ಸಾವಿಲ್ಲ. ಅವರಷ್ಟು ಸರಳ, ಸಜ್ಜನ, ನಿರಹಂಕಾರಿ ವ್ಯಕ್ತಿಗಳು ಬಹಳ ಬಹಳ ಅಪರೂಪ. ಎಲ್ಲರಿಗೂ ಮೇಷ್ಟ್ರು, ಎಲ್ಲರಿಗೂ ಮಾರ್ಗದರ್ಶಕರು, ಎಲ್ಲರ ಪ್ರೀತಿಗೆಪಾತ್ರರು. ಇಂತಹ ವ್ಯಕ್ತಿ ಸಾಯುವುದು ಸಾಧ್ಯವಿಲ್ಲ. ಎಲ್ಲರ ಮನದಲ್ಲೂ ನೆಲೆಸಿರುತ್ತಾರೆ.

    ಪ್ರತಿಕ್ರಿಯೆ
  3. Dr. M.S. Nagabhushana Rao

    IN MEMORIAM:
    DR. SA. SHI. MARULAIAH (1931-2016)
    A GREAT KANNADA LITERARY FIGURE AND A GREAT PERSONAL FRIEND.
    We were colleagues in Sahyadri College, Shimoga between 1958-66. We collaborated on building a very successful Artistic Enterprise called United Artists. UA helped recruit and promote young talent like Shimoga Subbanna and B.K. Sumitra. Marulaiah was the creative mind behind the production of many socially relevant Plays. In the early 1960s, together we produced a State funded patriotic presentation and toured all over Karnataka! In 1966, my career brought me to the United States. But we kept in touch and collaborated in many more projects…… In 2009, on my visit to India, I produced a number of Videos and one of them, thankfully, was an interview with one of my closest friends, S.S. Marulaiah (please find the link below). Dr. Marulaiah, A.R. Mitra, and Dr. N.S. Lakshminarayana Bhatta honored me by their presence on the Stage for the release of a 500-page hardcover documentation of the literary works produced by my talented sisters in multiple languages. Our last unfinished project with my title, “Naanena Helali, Naanobba Arulu Marulaiah!” in DVG style “Manku Thimmana Kagga.”
    Memories! More memories!! Those wonderful memories will always keep us in eternally transcendental communication, oh my good friend!!!!!!
    -Dr. Nag Rao, Chicago, Illinois, USA
    LINK:
    Dr. Nag Rao Presents Dr. S.S. Marulaiah

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: