‘ಚಿಕ್ಕ’ಮಗಳೂರು ತುಂಬಾ ಸುಂದರ

ಭರತ್‌ ವಿನಯ

ಬಿಸಿಲಿನ ಬೇಗೆಯನ್ನು ಕೊಡವಿ ಮುಂಗಾರು ಪ್ರವೇಶಿಸುವ ಕಾಲ… ನನ್ನ ಸಹೋದ್ಯೋಗಿಗಳ ಜೊತೆ ಸೇರಿ ಪ್ರವಾಸ ಕ್ಕೆ ಹೋಗೋ ಹಂಬಲ. ಇದರ ಮಧ್ಯೆ ಕೆಲಸದ ಕೋಲಾಹಲ.. ಪ್ರವಾಸಕ್ಕೆ ಎಲ್ಲರನ್ನೂ ಹೊರಡಿಸುವುದು ತುಂಬಾ ಸುಲಭವೇನಲ್ಲ ಬಿಡಿ… ನಮ್ಮದು ೬ ಜನರ ಒಂದು ಪುಟ್ಟ ತಂಡ, ಇದರ ಜೊತೆಗೆ ಕೆಲವೇ ತಿಂಗಳ ಹಿಂದೆಯಷ್ಟೇ ಚಿಕ್ಕಮಗಳೂರಿನ ಕಂದ ಇರ್ಫಾನ್ ಸೇರಿಕೊಂಡಿದ್ದ…

ಕೆಲಸದ ಗುಂಗಲ್ಲಿ ಮುಳುಗಿದ್ದ ನಮಗೆಲ್ಲ ಪ್ರವಾಸದ ಬೆಳಕನ್ನು ಚೆಲ್ಲಿದ್ದು ನಮ್ಮ ತಂಡದ ಚಂದು… ಹಾಗೂ ಇರ್ಫಾನ್… ಇದ್ದಕ್ಕಿದ್ದಂತೆ ಎಲ್ಲರನ್ನು ಒಪ್ಪಿಸುವ ಗೋಜಿಗೆ ಇಳಿದೇ ಬಿಟ್ಟಿದ್ದರು… ಯಾವುದೇ ಯೋಜನೆಗೆ ಮೊದಲ ಸಮ್ಮತಿ ನಮ್ಮ ಗುರುಗಳದು (ವಿನಯ್ ಜಾಗ್ವಾರ್)… ಈ ಬಾರಿ ಆಶ್ಚರ್ಯ ಪಡುವಂತೆ ಒಪ್ಪಿಗೆ ಸೂಚಿಸಿದ್ದು ಮಾತ್ರ ಸಹನಾ…

ಆ ಕಾಲಕ್ಕೆ ಮಲ್ಲೇಶ್ವರದ ಪಾವತಿಸುವ ವಸತಿ ಗೃಹದಲ್ಲಿ ನೆಲೆಸಿದ್ದ ನಾನು, ವಾರಾಂತ್ಯಕ್ಕೆ ನನ್ನ ಊರಿಗೆ ಬೇಟಿ ನೀಡಲು ಯೋಚಿಸಿದ್ದರಿಂದ ಈ ಪ್ರವಾಸಕ್ಕೆ ಬರಲು ಹಿಂದೇಟು ಹಾಕಿದ್ದೆ. ನಮ್ಮ ತಂಡದ ಅತ್ಯಂತ ಕಾರ್ಯ ನಿರತ ವ್ಯಕ್ತಿ ಸೈಯದ್, ಪ್ರವಾಸದ ಮಾತನ್ನು ಕಿವಿಗೆ ಹಾಕಿಕೊಳ್ಳಲೆ ಇಲ್ಲ…ಸತತ ಪರಿಶ್ರಮದ ಫಲವಾಗಿ ಇರ್ಫಾನ್, ಚಂದು ಹಾಗೂ ಗುರುಗಳು ಸೇರಿಕೊಂಡು ನನ್ನನ್ನು ಹೇಗೋ ಒಪ್ಪಿಸಿದ್ದರು…

ಈ ಬಾರಿಯ ನಮ್ಮ ಪ್ರವಾಸ ಇರ್ಫಾನ್ ತವರೂರಾದ ಹಚ್ಚ ಹಸಿರಿನಿಂದ ಕಂಗೊಳಿಸುವ ಚಿಕ್ಕಮಗಳೂರು. ಜುಲೈ ೧೬ ೨೦೧೬ ಶನಿವಾರ, ಮುಂಜಾನೆಯ ಚುಮು ಚುಮು ಚಳಿಗೆ ಬೆಚ್ಚಗಿನ ಹಾಸಿಗೆಯ ಮೇಲೆ ಪ್ರವಾಸದ ಪರಿವೇ ಇಲ್ಲದೆ ಗಾಢ ನಿದ್ರೆಗೆ ಜಾರಿದ್ದ ನನಗೆ ಇರ್ಫಾನ್ ಕರೆ ಮಾಡುವ ವರೆಗೂ ಎಚ್ಚರವೇ ಇಲ್ಲ….!

ಇರ್ಫಾನ್ ಆಗಲೇ ನನ್ನ ಪಿಜಿ ಬಳಿ ಬಂದು ಒಂದೆರಡು ಬಾರಿ ಕರೆ ಮಾಡಿದ್ದ, ನಿದ್ದೆಯ ಮಂಪರಿನಲ್ಲಿ ನಾನು ಯಾವುದೋ ಅಲಾರಂ ಇರಬೇಕು ಎಂದು ಅದನ್ನು ನಿದ್ದೆಗಣ್ಣಿನಲ್ಲೆ ನಿಶಬ್ಧಿಸಿದ್ದೆ. ಇರ್ಫಾನ್ ಬಿಡದೆ ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನಿಸುತ್ತಲೇ ಇದ್ದ. ಸರಿ ಸುಮಾರು ಆರನೇ ಬಾರಿಗೆ ನಿದ್ರಾ ಲೋಕವನ್ನು ಅಗಲಿ ಇಹಲೋಕಕ್ಕೆ ವಾಪಸಾಗುವ ಹೊತ್ತಿಗೆ ಸಮಯ ೫:೫೦, ಎದ್ದ ತಕ್ಷಣ ಹಲ್ಲು ತಿಕ್ಕಿ, ಮುಖ ತೊಳೆದು, ಟೀಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಏರಿಸಿಕೊಂಡು ೬ ಗಂಟೆಗೆ ಇರ್ಫಾನ್ ಮುಂದೆ ಪ್ರತ್ಯಕ್ಷನಾದೆ. (ಗಮನಿಸಿ: ಜಳಕ ಮಾಡದೆ ನಾನು ಹೊರಟ ಮೊದಲ ಹಾಗೂ ಏಕೈಕ ಪ್ರವಾಸ ಇದು)

ಯೋಜನೆಯ ಪ್ರಕಾರ ಇರ್ಫಾನ್ ತನ್ನ ಕಾರ್ ನಲ್ಲಿ ಮೊದಲು ನನ್ನನು ಹತ್ತಿಸಿಕೊಂಡು ಸಹನಾ, ವಿನಯ್ ಹಾಗೂ ಚಂದು ವನ್ನು ಕರೆದುಕೊಂಡು ಹೊರಡುವುದು ಎಂದು…! ಎಂದಿನಂತೆ ಕೊನೇ ಕ್ಷಣದಲ್ಲಿ ಸಹನಾ ಪ್ರವಾಸಕ್ಕೆ ಕೈ ಕೊಟ್ಟರು, ವಿನಯ್ ಹಾಗೂ ಚಂದುವಿನ ಜೊತೆ ನಮ್ಮ ಪ್ರವಾಸ ಬೆಂಗಳೂರಿನಿಂದ ನೆಲಮಂಗಲ ಮಾರ್ಗದಲ್ಲಿ ಶುರುವಾಗಿ ರಾಷ್ಟ್ರೀಯ ಹೆದ್ದಾರಿ ೭೫ರ ಮೂಲಕ ಚಿಕ್ಕಮಗಳೂರನ್ನು ತಲುಪುವುದಾಗಿತ್ತು.

ಇರ್ಫಾನ್ ಕಾರ್ ಓಡಿಸುವ ವೇಗಕ್ಕೆ ೭ ಗಂಟೆಗಾಗಲೆ ಕುಣಿಗಲ್ ಬೈಪಾಸ್ ದಾಟಿ ಬೆಳ್ಳೂರು ಕ್ರಾಸ್ ಬಳಿ ಇರುವ ಕೆಫೆ ಕಾಫಿ ಡೇ ತಲುಪಿದ್ದೆವು. ಬೆಳಗಿನ ಆ ತಂಪಾದ ವಾತಾವರಣದಲ್ಲಿ ಒಂದು ಕಪ್ ಕಾಫಿ ಕುಡಿಯುವ ಮಜವೇ ಬೇರೆ ಅಲ್ವಾ…! ತಲಾ ಒಂದೊಂದು ಕಪ್ ಕಾಫಿ ಕುಡಿದು, ಒಂದೆರಡು ಫೋಟೋ ಕ್ಲಿಕ್ಕಿಸಿ  ಕಾರ್ ಹತ್ತಿ ಕುಳಿತೆವು. ಕಾಂಕ್ರೀಟ್ ಕಾಡಿನಲ್ಲಿ ವಾಸಿಸುವ ನಮ್ಮ ಮನಸ್ಸುಗಳು ಹಚ್ಚ ಹಸಿರಿನ ತಾಣಗಳನ್ನು ಕಂಡಾಗಲೆಲ್ಲ ರೆಕ್ಕೆ ಬಿಚ್ಚಿ ಹಾರಲು ಹಾತೊರೆಯುತ್ತಿತ್ತದೆ… ಹಾಸನ ಸಮೀಪವಾಗುತಿದ್ದಂತೆ ರಸ್ತೆಯ ಎರಡೂ ಬದಿಗಳಲ್ಲಿ ಇದ್ದ ಹೊಲ ಗದ್ದೆ ಹಾಗೂ ತೋಟಗಳನ್ನು ನೋಡುತ್ತಾ ನಮ್ಮ ಕಣ್ಣು ತುಂಬಿಕೊಳ್ಳಲು ಇರ್ಫಾನ್ ಆಗಾಗ ಅಲ್ಲಲ್ಲಿ ನಿಲ್ಲಿಸಿ ನಮ್ಮನ್ನು ಉತ್ತೇಜಿಸುತಿದ್ದ.

ಹಾಗೇ ಮುಂದುವರೆದು ಚಿಕ್ಕಮಗಳೂರಿನ ಪ್ರಕೃತಿ ಸೌಂದರ್ಯ ಸವಿಯ ಹೊರಟ ನಮ್ಮನ್ನು ದಾರಿಯಲ್ಲಿ ಕೈ ಬೀಸಿ ಕರೆದದ್ದು ಮಾತ್ರ ‘ಸಿರಿ ಕಾಫಿ – ಚಿಕ್ಕ ಮಗಳ ಮನೆ’ ಎಂಬ ಸುಂದರ ಉಪಹಾರ ಗೃಹ. ಆದರೆ ಆ ದಿನ ನಮ್ಮ ಅದೃಷ್ಟ ಪೂರ್ತಿಯಾಗಿ ನಮ್ಮ ಜೊತೆಯಲ್ಲಿ ಇದ್ದಂತೆ ಕಾಣಲಿಲ್ಲ… ಏಕೆಂದರೆ ಅಲ್ಲಿನ ಉಪಹಾರದ ವ್ಯವಸ್ಥೆ ಇರಲಿಲ್ಲ ಅಲ್ಲಿಗೆ ಹೋಗುವ ಹೋಗುವಷ್ಟರಲ್ಲಿ ನಮ್ಮ ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು… ದುರದೃಷ್ಟವಶಾತ್ ಆ ದಿನ ಚಿಕ್ಕಮಗಳೂರು ಜಿಲ್ಲೆ ಬಂದ್. ಅಂಗಡಿಗಳು ಹಾಗೂ ಉಪಹಾರ ಗೃಹಗಳು ಎಲ್ಲವೂ ಮುಚ್ಚಿದ್ದವು. ಇರ್ಫಾನ್ ತನ್ನ ಗೆಳೆಯರ ಬಳಿ ವಿಚಾರಿಸಿ ಬೆಳಗಿನ  ತಿಂಡಿಗೆ ಚಿಕ್ಕಮಗಳೂರಿನ ವಯ್ಯಾರದ ಅಂಕು ಡೊಂಕಿನ ರಸ್ತೆಯಲ್ಲಿ ಕಾರ್ ಓಡಿಸುತ್ತಾ ನಿಸರ್ಗದ ಚೆಲುವಿನಲ್ಲಿ ನಿರ್ಮಿಸಿದ್ದ ಕಾಫೀ ಪೆಪ್ಪರ್ ಎಂಬ ರೆಸಾರ್ಟ್ ಗೆ ಕರೆತಂದ..

ಅಲ್ಲಿಎಲ್ಲಿನೋಡಿದರೋಹಸಿರೇ ಹಸಿರು, ಅಲ್ಲಿನ ಹುಲ್ಲಿನ ಹಾಸಿಗೆ ನನ್ನನ್ನು ಮಾತ್ರ ನಿದ್ರಾಲೋಕಕ್ಕೆ ಕರೆದೊಯ್ಯುವ ಎಲ್ಲ ಸಾಧ್ಯತೆ ಕಾಣುತಿತ್ತು.. ಬಳ್ಳಿಗಳನ್ನು ಉದ್ದುದ್ದ ಬೆಳೆದ ಅಡಿಕೆ ಜಾತಿಗೆ ಸೇರಿದ ಮರಗಳಿಗೆ ಸುರುಳಿ ಸುತ್ತಿ ಬೆಳೆಸಿದ್ದರು… ಕೆಂಪು ಬಣ್ಣದ ಹೆಂಚಿನ ಮಾಳಿಗೆ ಕಣ್ಣಿಗೆ ಹಬ್ಬ ತರುವಂತೆ ಇತ್ತು. ಅಲ್ಲಿನ ಉಪಹಾರ ಗೃಹಕ್ಕೆ ಬರುತ್ತಿದ್ದಂತೆ ನಮಗೆ ಕಂಡದ್ದು ಗಾಜಿನ ಗೋಡೆಗಳು… ಅಲ್ಲಿ ತಿಂಡಿ ತಿನ್ನಲು ಕುಳಿತವರು ಕೂಡ ಆಚೆಗಿನ ಸೌಂದರ್ಯ ಸವಿಯಲಿ ಎಂದು ಅವುಗಳನ್ನು ನಿಯೋಜಿಸಿದ್ದರು. ಒಟ್ಟಿನಲ್ಲಿ ಅಲ್ಲಿನ ಪರಿಸರದ ನಿರ್ವಹಣೆ ಚೆನ್ನಾಗಿದೆ ಎಂದು ಮನಃ ಪೂರ್ತಿಯಾಗಿ ಹೇಳಬಹುದು.

ಈಗ ತಿಂಡಿಯ ವಿಷಯಕ್ಕೆ ಬರೋಣ.

ನಾವು ಮೊದಲೇ ದಕ್ಷಿಣ ಭಾರತದವರು ಬೆಳಗಿನ ತಿಂಡಿ ಎಂದ ಮೇಲೆ ಮಲ್ಲಿಗೆಯಂತಹ ಇಡ್ಲಿಯೋ, ರುಚಿಯಾದ ಮಸಾಲೆ ದೋಸೆಯೋ, ಬಾಯಿ ಚಪ್ಪರಿಸುವಂತಹ ನಿಂಬೆ ಹಣ್ಣಿನ ಚಿತ್ರಾನ್ನ ವೋ ತಿನ್ನಬೇಕೆಂದು ಹಂಬಲಿಸುವುದು ಸಾಮಾನ್ಯವೇ ಬಿಡಿ… ಆದರೆ ಆ ಉಪಹಾರ ಗೃಹದಲ್ಲಿನ ತಿಂಡಿಗಳ ಆಯ್ಕೆ ಮಾಡಲು ಇಟ್ಟಿದ್ದ ಪಟ್ಟಿ ನೋಡಿ ನಮ್ಮ ಆಸೆಯೆಲ್ಲ ಗಾಳಿಗೆ ಹಾರಿ ಹೋಯ್ತು… ಅಲ್ಲಿ ನಮಗೆ ದೊರೆಯುವುದು ಅಮೆರಿಕಾದ ಪ್ರಸಿದ್ದ ತಿಂಡಿಗಳು ಮಾತ್ರ ಎಂದು ತಿಳಿದಾಗ ಆದ ಬೇಸರ ಹೇಳತೀರದು.

ನಾವೂ ಬೆಂಗಳೂರಿನಲ್ಲಿ ಇದ್ದದ್ದರಿಂದ ಆಗಾಗ ಅಮೆರಿಕಾದ ತಿಂಡಿಗಳಾದ ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್ ಮುಂತಾದವುಗಳನ್ನೆಲ್ಲ ತಿಂದಿದ್ದೇವೆ ಹಾಗಂತ ಯಾವತ್ತೂ ಬೆಳಗಿನ ತಿಂಡಿಯಾಗಿ ತಿನ್ನುವ ಅನಿವಾರ್ಯತೆ ಇರಲಿಲ್ಲ… ಈಗ ಆ ಹೊಸ ಅನಿವಾರ್ಯತೆ ನಮ್ಮೆಲ್ಲರ ಹೆಗಲು ಹತ್ತಿತ್ತು…

ಅಷ್ಟರಲ್ಲಿ ಇರ್ಫಾನ್ ಎಲ್ಲರಿಗೂ ಒಂದೊಂದು ಸ್ಯಾಂಡ್ವಿಚ್ ಹಾಗೂ ಒಂದು ಪೊಟ್ಟಣ ಫ್ರೆಂಚ್ ಫ್ರೈಸ್ ಹೇಳಿದ್ದ.. ಅದನ್ನು ತಿಂದು ಅಲ್ಲಿನ ಪರಿಸರದ ಸವಿಯ ಜೊತೆಗೆ ಫೋಟೋ ಇಲ್ಲದಿದ್ದರೆ ಹೇಗೆ ಅಂತ ಎಲ್ಲರೂ ಫೋಟೋ ತೆಗೆದು ಆ ಜಾಗಕ್ಕೆ ವಿದಾಯ ಹೇಳಿದೆವು… ಅಲ್ಲಿಂದ ನೇರ ಪಯಣ ಮೋಡಗಳಿಗೆ ಸದಾ ಮುತ್ತಿಡುವ ಕರ್ನಾಟಕದ ಅತೀ ಎತ್ತರದ ಬೆಟ್ಟ ಮುಳ್ಳಯ್ಯನ ಗಿರಿಗೆ.

ಈ ನಡುವೆ ನನಗೋ ನಮ್ಮ ಗುರುಗಳಿಗೂ ಸಣ್ಣ ಜಗಳ.. ಕಾರಿನಲ್ಲಿ ಇರ್ಫಾನ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ಪೈಪೋಟಿ…! ನಾವು ಆಗಾಗಲೇ ಚಿಕ್ಕಮಗಳೂರಿಗೆ ನಮ್ಮ ಮುಂಗಾಲುಗಳನ್ನು ಇಟ್ಟಿದ್ದೆವು ಅಂತ ತಿಳಿಸಿದ್ದು ನಮ್ಮ ಬಲ ಹಾಗೂ ಎಡ ಭಾಗದಲ್ಲಿ ಕಂಡ ಮೈ ನಿವಿರಿಳಿಸುವ ದೃಶ್ಯ.. ಅಲ್ಲಿನ ಎತ್ತರದ ಗುಡ್ಡಗಳೆಲ್ಲ ತಮ್ಮ ಮುಖಗಳನ್ನು ಮೋಡಗಳಿಂದ ಒರೆಸಿಕೊಳ್ಳುತ್ತಾ ನಮಗೆ ಸ್ವಾಗತ ಕೊರುವಂತೆ ತೋರುತ್ತಿತ್ತು…! ಮುಳ್ಳಯ್ಯನ ಗಿರಿಯ ರಸ್ತೆಗಳು ಚಿಕ್ಕದಾಗಿದ್ದು ಸಣ್ಣ ವಾಹನಗಳು ಮಾತ್ರ ಓಡಾಡುವಷ್ಟಿದ್ದವು.

ರಸ್ತೆಯುದ್ದಕ್ಕೂ ಮಂಜಿನ ಮುಸುಕು, ಆಗಾಗಲೇ ಗಂಟೆ ಹತ್ತು ಕಳೆದಿದ್ದರೂ ಅಲ್ಲಿನ ಪ್ರಕೃತಿ ಸೂರ್ಯನ ಶಾಖವನ್ನು ಹೀರಿ ತಂಪನ್ನೇ ನಮಗೆರೆಯುತಿತ್ತು. ಹೀಗೇ ಹೋಗುತ್ತಿರುವಾಗ ರಸ್ತೆಯ ಬಲಭಾಗಕ್ಕೆ ಒಂದು ಪುಟ್ಟ ಜಲಧಾರೆ ನಮ್ಮ ಕಣ್ಣಿಗೆ ಬಿತ್ತು. ಇರ್ಫಾನ್ ತಡಮಾಡದೆ ಕಾರ್ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ. ನಾವು ಅದನ್ನು ನೋಡುವುದರಲ್ಲಿ ನಿರತರಾಗಿದ್ದರೆ…! ಚಂದು ಮಾತ್ರ ನಮ್ಮ ಗುರುಗಳಿಗೆ ತನ್ನ ಫೋಟೋ ತೆಗೆಯಲು ತಾಕೀತು ಮಾಡಿದಳು. ಈಗಲೂ ನೆನಪಿದೆ ಆ ಜಾಗದಲ್ಲಿ ಫೋಟೋ ಗಿಟ್ಟಿಸಿಕೊಂಡವಳು ಚಂದು ಒಬ್ಬಳೇ…!

ಆ ದಿನ ಬಂದ್ ಇದ್ದರೂ ಸಹ ಪ್ರವಾಸಿಗರ ಸಂಖ್ಯೆ ಏನೂ ಕಡಿಮೆ ಇರಲಿಲ್ಲ… ರಸ್ತೆ ಚಿಕ್ಕದಿರುವುದರಿಂದ ಕಾರುಗಳು, ಆಟೋಗಳಲ್ಲಿ ಬಂದು ಜನರು ಅಲ್ಲಿ ನೆರೆದಿದ್ದರು. ಇರ್ಫಾನ್ ಕೂಡ ಕಾರನ್ನು ವಾಹನಗಳ ನಿಲುಗಡೆಯಲ್ಲಿ ತಂದು ನಿಲ್ಲಿಸಿದ. ಅಲ್ಲಿಂದ ಬೆಟ್ಟಕ್ಕೆ ಸರಿ ಸುಮಾರು ನೂರರಿಂದ ನೂರ ಇಪ್ಪತ್ತು ಮೆಟ್ಟಲುಗಳು ಇವೆ ಎಂಬುದು ನನ್ನ ಅಂದಾಜು..! ಆ ಮೆಟ್ಟಿಲುಗಳ ಸಂಯೋಜನೆ ಹಾಗೂ ಮೋಡಗಳಲ್ಲಿ ಮುಸುಗಿನಲ್ಲಿದ್ದ ಬೆಟ್ಟದ ತುದಿ ಭೂ ಲೋಕದಿಂದ ಪರ ಲೋಕಕ್ಕೆ ಮಾಡಿಸಿದ್ದ ಮೆಟ್ಟಲುಗಳ ಹಾದಿಯಂತೆ ಕಾಣುತ್ತಿದ್ದು… ಇನ್ನೇಕೆ ತಡ ಹತ್ತಿಯೇ ಬಿಡೋಣ ಎಂದು ದೌಡಾಯಿಸಿ ಮೇಲಕ್ಕೆ ಏರಿದೆವು.

ತಂಪಾದ ಮಂಜು ಮಿಶ್ರಿತ ಗಾಳಿ ನಮ್ಮನ್ನು ಅತ್ತಿಂದಿತ್ತ ತೂಗುತ್ತಿತ್ತು. ಒಂದೊಂದು ಮೆಟ್ಟಿಲು ಹತ್ತಿದಂತೆ ಮನದಲ್ಲಿ ಉಲ್ಲಾಸ ಹೆಚ್ಚುತ್ತಲೇ ಇತ್ತು. ಇದೇ ಕಾರಣಕ್ಕೆ ಇರಬಹುದು ಮುಂಗಾರಿನ ಅವಧಿಯಲ್ಲಿ ಚಿಕ್ಕಮಗಳೂರು ಪ್ರಕೃತಿ ಸಿರಿವಂತಿಕೆಯಿಂದ ಬೀಗುವುದನ್ನು ನೋಡಿ ಮೈಮರೆಯಲು ಜನರು ತಂಡೋಪತಂಡವಾಗಿ ಇಲ್ಲಿಗೆ ಪ್ರವಾಸಕ್ಕೆ ಬರುವುದು.

ಮುಳ್ಳಯ್ಯನ ಗಿರಿಗೆ ಬಂದಮೇಲೆ ಇಲ್ಲಿಯ ಸ್ಥಳ ಪುರಾಣ, ಇತಿಹಾಸ ಹಾಗೂ ಭೌಗೋಳಿಕ ಮಾಹಿತಿ ಇಳಿಯದಿದ್ದರೆ ಹೇಗೆ..? ಇಲ್ಲಿದೆ ಮುಳ್ಳಯ್ಯನ ಗಿರಿಯ ಕಿರು ಪರಿಚಯ: ಮುಳ್ಳಯ್ಯನಗಿರಿಬೆಟ್ಟಕ್ಕೆಹೆಸರು ಬರಲು ಬಹು ಮುಖ್ಯ ಕಾರಣವೆಂದರೆ ಇಲ್ಲಿನ ‘ಮುಳ್ಳಪ್ಪ ಸ್ವಾಮಿ’ ಎಂಬ ಒಬ್ಬ ಸಾಧು ಪುರುಷ, ಇಲ್ಲಿನ ಬೆಟ್ಟದ ತುದಿಯ ಒಂದೆರಡು ಮೀಟರ್ ಹತ್ತಿರದಲ್ಲಿ ಇರುವ ಒಂದು ಗುಹೆಯಲ್ಲಿ ತಪಸ್ಸಿಗೆ ಕುಳಿತಿದ್ದ ಎಂದು ನಂಬಲಾಗಿದೆ ಹಾಗೂ ಅಲ್ಲಿನ ದೇವಾಲಯದ ಗರ್ಭಗುಡಿಗೆ ಗುಹೆಯಿಂದ ನೇರ ಪ್ರವೇಶವೂ ಇತ್ತೆಂದು ಆದರೆ ಅಲ್ಲಿನ ಅರ್ಚಕರ ವೃಂದ ಈಗ ಆ ಗುಹೆಯ ಪ್ರವೇಶವನ್ನು ನಿಷೇಧಿಸಿದ್ದಾರೆ. ಅಲ್ಲಿನ ಶಿವನ ದೇವಸ್ಥಾನದಲ್ಲಿ ಇಂದಿಗೂ ಜನರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಆದರೆ ಇಲ್ಲಿನ ಶಿವನ ದೇವಸ್ಥಾನ ಹಾಗೂ ಅಲ್ಲಿನ ಕೋಟೆಯಂತೆ ಕಟ್ಟಿರುವ ದೇವಸ್ಥಾನದ ಆವರಣ ಯಾರು ಕಟ್ಟಿಸಿದ್ದರೆಂದು ಯಾವ ಕಾಲಕ್ಕೆ ಸೇರಿದ್ದು ಎಂದು ಈವರೆಗೂ ತಿಳಿದು ಬಂದಿಲ್ಲ. ಮುಳ್ಳಯ್ಯನ ಗಿರಿ ಭಾರತದ ಅತ್ಯಂತ ಎತ್ತರದ ಬೆಟ್ಟಗಳ ಸಾಲಿನಲ್ಲಿ ೧೩ ನೇ ಸ್ಥಾನದಲ್ಲಿದ್ದು ೧೯೩೦ ಮೀಟರ್ (೬೩೩೦ ಅಡಿ) ಎತ್ತರದಲ್ಲಿದೆ. ಈ ಬೆಟ್ಟವು ಪಶ್ಚಿಮ ಘಟ್ಟಗಳಲ್ಲಿನ ಚಂದ್ರ ದ್ರೋಣ ಪರ್ವತಗಳ ಸಾಲಿನಲ್ಲಿ ಇದೆ.

ಈ ಬೆಟ್ಟವು ತುಂಬಾ ಎತ್ತರದಲ್ಲಿ ಇರುವುದರಿಂದ ಇಲ್ಲಿ ಪೊಲೀಸ್ ರೇಡಿಯೋ ರಿಲೇ ಸ್ಟೇಷನ್ ಸ್ಥಾಪಿಸಿದ್ದಾರೆ. ಇಲ್ಲಿನ ಬೆಟ್ಟದ ತುದಿಯಲ್ಲಿನ ದೇವಸ್ಥಾನದ ಆವರಣ ಒಂದು ಕೋಟೆಯ ರೀತಿಯಲ್ಲಿಯೇ ರಚಿಸಿದ್ದಾರೆ. ಕಲ್ಲುಗಳಿಂದ ಕೂಡಿದ ಗೋಡೆಗಳು ಯಾವುದೇ ಮಣ್ಣು ಅಥವಾ ಸಿಮೆಂಟ್ ಬಳಸದೆಯೂ ಕಟ್ಟಿರುವುದು ಹಾಗೂ ಅದು ಈಗಿನ ಕಾಲಕ್ಕೂ ಗಾಳಿ ಮಳೆ ಗುಡುಗು ಸಿಡಿಲಿಗೂ ಜಗ್ಗದೆ ಉಳಿದಿರುವುದು ಈಗಿನ ಕಾಲದ ಎಂಜಿನಿಯರ್ ಗಳ ನಿದ್ದೆ ಕೆಡಿಸಿದೆ.

ಸುತ್ತಲ ವಾತಾವರಣ ಸವಿದು ಶಿವಾಲಯದಲ್ಲಿ ದೇವರ ದರ್ಶನ ಮುಗಿಸಿಕೊಂಡು ನಿಧಾನವಾಗಿ ಒಂದೊಂದೇ ಮೆಟ್ಟಿಲು ಇಳಿಯುತ್ತಾ ನಿಸರ್ಗದ ಅಂದ ಚಂದ ಆರಾಧಿಸುತ್ತಾ ನಾವು ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದೆವು. ತಂತ್ರಜ್ಞಾನದ ಆವಿಷ್ಕಾರಗೊಂಡಂತೆ ಕ್ಯಾಮೆರಾ ಗಳನ್ನು ಸ್ಮಾರ್ಟ್ ಫೋನುಗಳು ನುಂಗುತ್ತಿವೆ… ಯಾಕೆಂದರೆ ಡಿಜಿಟಲ್ ಕ್ಯಾಮೆರಾ ದಲ್ಲಿ ಸೆಲ್ಫೀ ತೆಗೆಯೋಕೆ ತುಂಬಾ ಕಷ್ಟ ಪಡಬೇಕಲ್ಲ…! ಇಷ್ಟು ಹೇಳಿದಮೇಲೆ ನಾನು ಏನು ಹೇಳುತ್ತೇನೆ ಅಂತ ನಿಮಗೂ ತಿಳಿದಿರುತ್ತದೆ… ಅದೇ ವಿಚಿತ್ರ ರೀತಿಯಲ್ಲಿ ನಡೆದ ಫೋಟೋ ಸೆಶನ್. ಇದನ್ನೆಲ್ಲ ಮುಗಿಸಿಕೊಂಡು ಕಾರ್ ಹತ್ತಿ ನಮ್ಮ ಮುಂದಿನ ಜಾಗಕ್ಕೆ ಬಂದೆವು… ಅದೇ… ಹೊನ್ನಮ್ಮನ ಹಳ್ಳ ಜಲಧಾರೆ…! ಈ ಜಾಗದ ಬಗ್ಗೆ ನನಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲವಾದ್ದರಿಂದ ನನಗೆ ತಿಳಿದಷ್ಟು ನಿಮ್ಮ ಮುಂದಿಡುತ್ತೇನೆ.

ಹೊನ್ನಮ್ಮನ ಹಳ್ಳ ನಮಗೆ ರಸ್ತೆಯ ಬದಿಯಲ್ಲೇ ಕಾಣಸಿಗುತ್ತದೆ. ಕೆಮ್ಮಣ್ಣು ಗುಂಡಿ ಇಂದ ೨೫ ಕಿಲೋ ಮೀಟರ್ ಹಾಗೂ ಬಾಬಾ ಬುಡನ್ ಗಿರಿ ಇಂದ ಕೇವಲ ಒಂದೇ ಒಂದು ಕಿಲೋ ಮೀಟರ್. ಒಂದು ವಿಷಯ ಹೇಳ ಬಯಸುವುದು ಏನೆಂದರೆ ಇದು ಪ್ರಕೃತಿ ನಿರ್ಮಿತ ಜಲ ಧಾರೆಯಲ್ಲ. ಇದೊಂದು ಮಾನವ ನಿರ್ಮಿತ ಜಲಧಾರೆ ಸಾದ್ಯವಾದರೆ ಭೇಟಿ ನೀಡಿ. ನೆನಪಿಗಾಗಿ ಒಂದೆರಡು ಫೋಟೋ ತೆಗೆದುಕೊಂಡು ಅಲ್ಲಿಂದ ಇರ್ಫಾನ್ ತನಗೆ ಪರಿಚಯದ ಹೋಂ ಸ್ಟೇ ಗೆ ಕರೆತಂದ…

ಮೊದಲೇ ಹೇಳಿದಂತೆ ಚಿಕ್ಕಮಗಳೂರು ಬಂದ್ ಇದ್ದ ಕಾರಣ ಅಲ್ಲಿನ ಯಾವುದೇ ಭೋಜನಾಲಯಗಳು ತೆರೆದಿರಲಿಲ್ಲ.. ಹೀಗಾಗಿ ತನಗೆ ಪರಿಚಯವಿದ್ದ ‘ಗ್ರ್ಯಾಂಡ್ ವ್ಯೂ; ಎಂಬ ಹೆಸರಿನ ಹೋಂ ಸ್ಟೇ ನಲ್ಲಿ ಊಟದ ವ್ಯವಸ್ಥೆ ಏರ್ಪಡಿಸಿದ್ದ… ಏನೋ ಮನಸ್ಸಿಗೆ ಬಂದಂತೆ ಹೋಂ ಸ್ಟೇ ಗೆ ಹೆಸರಿಟ್ಟಿದ್ದಾರೆ ಎಂದು ಮೊದಲಿಗೆ ಎನಿಸಿದರೂ ನಂತರ ಅಲ್ಲಿನ ಸುತ್ತ ಮುತ್ತಲಿನ ಅದ್ಭುತ ನೋಟಕ್ಕೆ ಮಾರಿಹೋದೆನು. ಈ ಹೋಂ ಸ್ಟೇಯ ಒಂದು ದಿಕ್ಕಿನಲ್ಲಿ ಅದ್ಭುತವಾಗಿ ಕಾಣುವ ಪಶ್ಚಿಮ ಘಟ್ಟಗಳ ಸಾಲು ಒಂದೆರಡು ನಿಮಿಷ ನಿಮ್ಮನ್ನು ನಿಬ್ಬೆರಗು ಗೊಳಿಸದೆ ಇರಲಾರದು. ಆಗ ಗ್ರ್ಯಾಂಡ್ ವ್ಯೂ ಅಂತ ಹೆಸರಿಗೂ ಹೆಸರಿಟ್ಟವರಿಗೂ ಮನದಲ್ಲೇ ವಂದಿಸಿದೆ.

ಬಿರಿಯಾನಿ ಎಂದರೆ ಇರ್ಫಾನ್ ಗೆ ಪಂಚ ಪ್ರಾಣ. ಹೀಗಾಗಿ ಆತ   ಹೋಂ ಸ್ಟೇ ನಲ್ಲಿ ಚಿಕನ್ ಬಿರಿಯಾನಿ ನಮಗಾಗಿ ಸಿದ್ಧಪಡಿಸಲು ಹೇಳಿದ್ದ..! ಬೆಳಿಗ್ಗೆ ಸ್ಯಾಂಡ್ವಿಚ್ ತಿಂದು ಅರೆ ಬರೆ ಹೊಟ್ಟೆ ತುಂಬಿಕೊಂಡಿದ್ದ ನಾವು ಬಿರಿಯಾನಿ ತಿಂದು ಸಂತೃಪ್ತರಾದೆವು.

ಈ ಪ್ರವಾಸದ ಸಂಪೂರ್ಣ ನಕ್ಷೆ ಇದ್ದದ್ದು ಇರ್ಫಾನ್ ತಲೆಯಲ್ಲಿ ಮಾತ್ರ… ನಾವು ಹೋಗುವ ವರೆಗೂ ಎಲ್ಲಿಗೆ ಅಂತ ನಮಗೆ ತಿಳಿಯುತ್ತಾ ಇರಲ್ಲಿಲ್ಲ. ಹೋಂ ಸ್ಟೇ ನಲ್ಲಿ ಊಟ ಮುಗಿಸಿ ಹಾಯಾಗಿ ಅಲ್ಲಿನ ಪ್ರಕೃತಿಯ ಚೆಲುವನ್ನು ನೋಡುತ್ತಾ ನಮ್ಮ ದಣಿವನ್ನು ಅಳಿಸಿಕೊಂಡೆವು. ಸ್ವಲ್ಪ ಸಮಯದ ನಂತರ ಅಲ್ಲಿಗೆ ಒಂದು ಜೀಪ್ ಬಂತು… ಇರ್ಫಾನ್ ನೋಡ ನೋಡುತ್ತಲೇ ಹತ್ತಿ ಕುಳಿತು ನಮಗೆ ಹತ್ತುವಂತೆ ಕೈ ಸನ್ನೆ ಮಾಡಿದ.

ಕಾರ್ ಇದ್ದರೂ ಜೀಪ್ ನಲ್ಲಿ ಯಾಕೆ ಎಂಬ ಪ್ರಶ್ನೆ ಬಿಡದೆ ನನ್ನ ಕಾಡುತ್ತಿದ್ದು… ಆಗ ಇರ್ಫಾನ್ ಬಾಯಿ ಬಿಟ್ಟ… ನಾವೀಗ ಹೊರಟಿರುವುದು ಝರಿ ಜಲಪಾತದ ಕಡೆಗೆ ಅಂತ… ಜೀಪ್ ಹತ್ತಿದ ಕೆಲವೇ ಕ್ಷಣಗಳಲ್ಲಿ ತಿಳಿದದ್ದು ಆ ಅದ್ಭುತ ರಸ್ತೆಯ ಏರಿಳಿತಕ್ಕೆ ಸಿಲುಕಿ ನಮ್ಮ ದೇಹವೆಲ್ಲ ಕುಲುಕಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಎತ್ತಿ ಎಸೆಯುತಿತ್ತು.. ನಾನಂತೂ ಜೀಪ್ ನಲ್ಲಿನ ಕಬ್ಬಿಣದ ಕಂಬಿಗಳನ್ನು ಅಯಸ್ಕಾಂತದಂತೆ ಹಿಡಿದು ಕುಳಿತೆ. ನಾನು, ಚಂದು ಹಾಗೂ ಗುರುಗಳು ಹಿಂದೆ… ಇರ್ಫಾನ್ ಡ್ರೈವರ್ ಜೊತೆ ಮುಂದೆ ಕುಳಿತಿದ್ದ…

ಚಂದುಮುಂದೆಇದ್ದಸೀಟನ್ನು, ಗುರುಗಳು ಒಂದು ಕೈನಲ್ಲಿ ಅವರ ಐಷಾರಾಮಿ ಮೊಬೈಲ್ ಅನ್ನು ಹಾಗೂ ಇನ್ನೊಂದು ಕೈ ನಲ್ಲಿ ಸೀಟನ್ನು ಹಿಡಿದು ಭದ್ರವಾಗಿ ಕುಳಿತರು… ಈ ದಾರಿಯಲ್ಲಿ ಕಾರ್ ನಲ್ಲಿ ಬಂದಿದ್ದರೆ ಬೆಂಗಳೂರಿಗೆ ವಾಪಸ್ ಹೋಗುವ ಬದಲು ಮೆಕ್ಯಾನಿಕ್ ಶಾಪ್ ಕಡೆಗೆ ತಿರುಗ ಬೇಕಿತ್ತು..!

ಆ ಪ್ರಕೃತಿದತ್ತವಾದ ಮಣ್ಣಿನ ದಾರಿ ಕೇವಲ ೨ ಜೀಪ್ ಗಳು  ಓಡಾಡು ವಷ್ಟು ಕಿರಿದಾಗಿತ್ತು… ನಮ್ಮ ಜೀಪ್ ಡ್ರೈವರ್  ಜಲಪಾತಕ್ಕೆ ಸುಮಾರು ಇನ್ನೂರು ಮೀಟರ್ ದೂರದಲ್ಲಿ ದಾರಿಯ ಎಡ ಭಾಗದಲ್ಲಿ ನಿಲ್ಲಿಸಿದರು. ಅಲ್ಲಿ ಆಗಾಗಲೇ ಸುಮಾರು ಇಪ್ಪತ್ತು ಜೀಪ್ ಗಳು ಸಾಲಾಗಿ ನಿಲ್ಲಿಸಿದ್ದು ಹತ್ತಕ್ಕೂ ಹೆಚ್ಚು ಜೀಪ್ ಗಳು ವಾಪಸ್ ತಿರುಗಿ ಹೊರಟಿದ್ದು ಅಲ್ಲಿ ನೆರೆದಿರುವ ಜನಸಂಖ್ಯೆಯ ಅಂದಾಜು ನಮಗೆಮನದಟ್ಟುಮಾಡಹೊರಟಿತ್ತು. ನಾವುಜೀಪ್ನಿಂದಕೆಳಗಿಳಿದು ಅಲ್ಲಿನ ಸುತ್ತ ಮುತ್ತಲಿನ ಮರಗಳ ನೈಸರ್ಗಿಕ ಚೆಲುವು ನಮ್ಮನ್ನು ಅಪ್ಪಿಕೊಳ್ಳಲು ಕರೆದಂತೆ ಭಾಸವಾಗುತ್ತಿತ್ತು.

ಅಷ್ಟೋತ್ತರಲ್ಲಾಗಲೆನಮ್ಮಕಿವಿಗೆಕೂಡ ಆ ಝರಿ ಜಲಪಾತದ ಜುಳು ಜುಳು ಸದ್ದು ಕೇಳುತ್ತಿತ್ತು. ಅಲ್ಲಿಂದ ಮುಂದಕ್ಕೆ ನಡೆದು ಜಲಪಾತದ ರಮ್ಯ ರಮಣೀಯ ದೃಶ್ಯ ಸವಿಯಲು ಹಾತೊರೆಯುತ್ತಿದ್ದ ಮನಕ್ಕೆ ಹಾಲೆರೆದಂತೆ ಝರಿ ಜಲಪಾತವು ನಮ್ಮ ಕಣ್ಣೆದುರಿಗಿತ್ತು. ಜಲಪಾತವನ್ನು ನೋಡುತ್ತಾ ನಿಬ್ಬೆರಗಾಗಿ ಹರಿಯುತ್ತಿರುವುದು ಹಾಲೋ ಅಥವಾ ನೀರೋ ಎಂಬುದು ತಿಳಿಯದಷ್ಟು ಚಂದವಾಗಿ ಹರಿಯುವ ಈ ಜಲಪಾತಕ್ಕೆ ಯಾವುದೇ ನದಿಯ ಕೊಡುಗೆ ಇಲ್ಲದಿರುವುದು ಆಶ್ಚರ್ಯ ಉಂಟುಮಾಡಿತ್ತು. ಅಲ್ಲಿನ ಸುತ್ತ ಮುತ್ತಲಿನ ದಟ್ಟ ಕಾಡಿನ ಮೇಲೆ ಬೀಳುವ ಮಳೆಯ ನೀರಿನ ಅಚ್ಚರಿಯ ಕೊಡುಗೆಯೇ ಈ ಝರಿ ಜಲಪಾತ ಎನ್ನಬಹುದು. ನಾನು ಕೇಳಲ್ಪಟ್ಟ ಹಾಗೆ ಬಿರು ಬಿಸಿಲಿನ ಕಾಲದಲ್ಲೂ ಸಣ್ಣದಾಗಿ ಹರಿಯುವ ಈ ಜಲಪಾತ ಚಳಿ ಮತ್ತು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ.

ವಿಜ್ಞಾನಮತ್ತುತಂತ್ರಜ್ಞಾನಎಷ್ಟು ಬೆಳೆದರೂ ಇಂತಹ ಪ್ರಾಕೃತಿಕ ಸೃಷ್ಟಿಯ ಮುಂದೆ ಅದು ತಲೆ ಬಾಗಲೇ ಬೇಕು. ಈ ಜಲಪಾತದಿಂದ ನಮಗೆ ತಿಳಿಯುವ ಅಂಶವೆಂದರೆ ಹೆಚ್ಚು ಮರಗಳು ನೀರನ್ನು ಸದಾಕಾಲ ಮಣ್ಣಿನೊಳಗೆ ಹಿಡಿದಿಟ್ಟು ಕೊಳ್ಳುವುದರಿಂದ ಬಿರು ಬಿಸಿಲಿನ ಬೇಗೆಯಲ್ಲೂ ನೀರಿನ ಉಳಿವು ಜನ ಜೀವನಕ್ಕೆ ಆಸರೆಯಾಗುತ್ತದೆ…

ದಿನದಿಂದ ಹೆಚ್ಚುತ್ತಿರುವ ಜನ ಸಂಖ್ಯೆ ಪ್ರಕೃತಿಯನ್ನು ನಾಶ ಮಾಡುವುದು ಬಿಟ್ಟು ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿತರೆ ಭೂಮಿಯ ಸಕಲ ಜೀವ ರಾಶಿಗಳೂ ಕೂಡ ನಿಮ್ಮದಿಯಿಂದ ಬದುಕಬಹುದು. ಜಲಪಾತವನ್ನು ನೋಡುತಿದ್ದರೆ ಅಲ್ಲಿನ ನೀರಿನಲ್ಲಿ ಆಟ ಆಡಲು ಎಲ್ಲರ ಮನವೂ ಬಯಸುತ್ತದೆ… ಆದರೆ ನಮಗಿದ್ದ ಸಮಯದ ಅಭಾವದಿಂದ ದೂರದಿಂದಲೇ ನೋಡುತ್ತಾ ಹಲವು ಭಂಗಿಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ನೆನಪಿನ ನಾವೆಗೆ ಸಾಕ್ಷಿ ಕಲೆ ಹಾಕಿದೆವು.

ಬಿರಿಯಾನಿ ಚೆನ್ನಾಗಿ ತಿಂದಿದ್ದರೂ ಅಲ್ಲಿನ ತಂಪಾದ ವಾತಾವರಣ ಖಾರವಾದ್ದನ್ನ ತಿನ್ನೋಕೆ ನಾಲಿಗೆ ಹಾತೋರೆಯುತಿದ್ದು. ಅಲ್ಲೇ ಹತ್ತಿರದಲ್ಲಿ ಒಂದು ಜೋಳವನ್ನು ಹುರಿಯುವ ಅಂಗಡಿ ಕಂಡಿತು. ಆ ಅಂಗಡಿಯವನು ತನ್ನ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಕಾರ್ಯದಲ್ಲಿ ನಿರತನಾಗಿದ್ದ.

ಈ ಸಮಯದಲ್ಲಿ ಜೋಳ ತಿನ್ನಲು ಒಪ್ಪಿಗೆ ಸೂಚಿಸಿದವರು ಮೂವರೇ… ಇರ್ಫಾನ್ ಬಿರಿಯಾನಿಯನ್ನು ಕಂಠ ಪೂರ್ತಿ ತಿಂದಿದ್ದರಿಂದ ಜೋಳ ತಿನ್ನುವ ಬಯಕೆಯನ್ನು ಲೀಲಾ ಜಾಲವಾಗಿ ತಳ್ಳಿ ಹಾಕಿದ. ಆಗ ನಮ್ಮ ಗುರುಗಳು ಬುದ್ದಿ ಉಪಯೋಗಿಸಿ ಹುರಿದು ಖಾರ ಸವರಿದ ಒಂದೇ ಒಂದು ಜೋಳ ತಂದು ಚಂದು ಕೈಗೆ ಇಟ್ಟರು… ಒಂದೇ ಜೋಳವನ್ನು ಹಂಚಿ ಮೂವರು ತಿಂದದ್ದು ಒಂದೊಂದು ಜೋಳ ಒಬ್ಬೊಬ್ಬರು ತಿನುವುದಕ್ಕಿಂತಲೂ ಹೆಚ್ಚು ತೃಪ್ತಿ ಕೊಟ್ಟಿತ್ತು.. ನಮ್ಮ ಹೊಟ್ಟೆಯೂ ತುಂಬಿತ್ತು….

ಈ ಕಥನದ ಕೊನೆಯಲ್ಲಿ ಓದುಗರು ಈ ಪ್ರವಾಸದಲ್ಲಿ ಇದ್ದವರು ತಿಂಡಿ ಬಾಕರು ಎಂದು ಅನುಮಾನ ಪಡಬೇಕಿಲ್ಲ….! ಅಲ್ಲಿಂದ ಬಾಬಾ ಬುಡನ್ ಗಿರಿ ತುಂಬಾ ಹತ್ತಿರದಲ್ಲಿ ಇದ್ದರೂ ಅಲ್ಲಿನ ರಸ್ತೆಯ ದುರಸ್ತಿ ಕಾರ್ಯ ನಡೆಯುತ್ತಿದ್ದರಿಂದ ಅಲ್ಲಿಗೆ ಹೊರಡುವ ಯೋಜನೆ ಕೈ ಚೆಲ್ಲಿ ಮತ್ತೆ ಗ್ರ್ಯಾಂಡ್ ವ್ಯೂ ಹೋಂ ಸ್ಟೇ ಗೆ ಬಂದೆವು. ಅಲ್ಲಿನ ಹೋಂ ಸ್ಟೇ ಬಳಿ ನಿಲ್ಲಿಸಿದ್ದ ಕಾರನ್ನು ಇರ್ಫಾನ್ ಅವನ ಮನೆಯ ಕಡೆಗೆ ತಿರುಗಿಸಿದ. ಈ ಚಿಕ್ಕ ಮಗಳೂರಿನ ಕಂದನ ಪೂರ್ತಿ ವಿಧ್ಯಾಭ್ಯಾಸ ಮುಗಿಸಿದ್ದು ಇಲ್ಲಿಯೇ… ದಾರಿಯಲ್ಲಿ ಆತ ಓದಿದ ಸ್ಕೂಲ್ ಹಾಗೂ ಕಾಲೇಜನ್ನು ತೋರಿಸುತ್ತಾ ಮುಂದುವರೆದು ಒಂದೆರಡು ನಿಮಿಷಗಳಲ್ಲಿ ಅವನ ಮನೆ ಮುಂದೆ ನಿಲ್ಲಿಸಿದ್ದ…

ಅವತ್ತು ಅವರ ಮನೆಯಲ್ಲಿ ಯಾರೂ ಇರಲಿಲ್ಲ…! ನಾವು ಕೇಳುವ ಗೋಜಿಗೂ ಹೋಗಲಿಲ್ಲ…! ಇರ್ಫಾನ್ ತನ್ನ ಬಳಿ ಇದ್ದ ನಕಲಿ ಕೀಲಿ ಬಳಸಿ ಮನೆ ಬಾಗಿಲನ್ನು ತೆರೆದ.  ಒಬ್ಬೊಬ್ಬರಾಗಿ ನಾವೆಲ್ಲ ಇರ್ಫಾನ್ ನನ್ನು ಹಿಂಬಾಲಿಸಿದೆವು… ಮನೆಯ ಹಾಲ್ ನಲ್ಲಿ ಇದ್ದ ಸೋಫಾ ಮೇಲೆ ಕುಳಿತೆವು.. ಇರ್ಫಾನ್ ನಮಗೆಲ್ಲ ಚಿಕ್ಕ ಮಗಳೂರಿನ ಸ್ಪೆಷಲ್ ಕಾಫಿ ಮಾಡುತ್ತೇನೆ ಎಂದು ಅಡುಗೆ ಮನೆ ಹೊಕ್ಕ. ನಮ್ಮ ಗುರುಗಳು ಬರುತ್ತಿದ್ದಂತೆ ಟಿವಿಯಲ್ಲಿ ಅದು ಯಾವುದೋ ಹಿಂದಿ ಹಾಡನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಾ ಕುಳಿತಿದ್ದರು. ಅಷ್ಟರಲ್ಲಿ ಇರ್ಫಾನ್ ಕಾಫಿ ಮಾಡಿ ನಮಗೆಲ್ಲ ಒಂದೊಂದು ಕಪ್ ಕೈಗಿತ್ತ. ಕಾಫಿಯನ್ನು ಇರ್ಫಾನ್ ಚೆನ್ನಾಗಿ ಮಾಡಲು ಕಲಿತಿದ್ದ. ನಾವೆಲ್ಲ ಕಾಫಿ ಕುಡಿದು ಆಯಾಸ ಪರಿಹರಿಸಿಕೊಂಡು ಹೊರಡಲು ಸಿದ್ಧರಾದೆವು.

ಅಲ್ಲಿಂದ ನೇರ ಬೆಂಗಳೂರಿನ ಕಡೆಗೆ ಇರುವ ರಾಷ್ಟ್ರೀಯ ಹೆದ್ದಾರಿ ನಮ್ಮ ಬರುವಿಕೆಗೆ ಕಾದಂತೆ ಕಾಣುತಿತ್ತು…  ಪ್ರವಾಸ ಮುಗಿಯುತ್ತಿದೆ. ಮತ್ತೇ ನಮ್ಮ ಊರಿಗೆ ವಾಪಸ್ ಬರುವಾಗ ಆಗುವ ಬೇಸರ ಹೇಳತೀರದು. ಈ ಬೇಸರ ಕಡಿಮೆ ಮಾಡಲು ಸಂಜೆ ಕತ್ತಲಾಗುವ ಮುನ್ನ ಇರ್ಫಾನ್ ಕುಣಿಗಲ್ ಹತ್ತಿರ ಇರುವ ಸ್ವಾತಿ  ಡೆಲಿಕಸಿ ನಲ್ಲಿ ಎಲ್ಲರಿಗೂ ಒಂದೊಂದು ಪ್ಲೇಟ್ ಬೋಂಡಾ ಸೂಪ್ ಕೊಡಿಸಿ ಮನಸಿಗೆ ಸಮಾಧಾನ ಪಡಿಸಿ ಕಾರ್ ಹತ್ತಿಸಿದ. ಇದರೊಂದಿಗೆ ನಮ್ಮ ಪ್ರಯಾಣದ ಹಾದಿ ಬೆಂಗಳೂರಿನ ಕಡೆ ತಿರುಗಿ ಎಲ್ಲ ತಮ್ಮ ತಮ್ಮ ಗೂಡುಗಳನ್ನು ಸೇರಿಕೊಂಡೆವು.

‍ಲೇಖಕರು Avadhi

June 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: