ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ

“ಬಿ ಎ ವಿವೇಕ ರೈ”

ಕುವೆಂಪು ಕಡಲ್ಗಿದಿರ್  ಪನಿಗೇಂ ಪ್ರದರ್ಶನಂ
by B A Viveka Rai
ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ  ಪ್ರದರ್ಶನಂ ?’ ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಪಾತ್ರಸೃಷ್ಟಿ -ಕುವೆಂಪು ಅವರ ಬದುಕಿನ ಪೂರ್ಣದೃಷ್ಟಿ . ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ‘ ಎನ್ನುವ ಲೇಖನದಲ್ಲಿ  ಕುವೆಂಪು ಹೇಳುವ ಈ ಮಾತು ಈ  ಆಶಯಕ್ಕೆ ಪೂರಕವಾಗಿದೆ :” ಸದ್ಯ ,ಫಲಾಪೇಕ್ಷೆಗಿಂತಲೂ ಕೀರ್ತಿಮೋಹದಿಂದ  ಹೆಚ್ಚು ಅನಾಹುತವಾಗುತ್ತದೆ. ..ಮಂದಿಯ ಕೈಚಪ್ಪಾಳೆ, ವೃತ್ತಪತ್ರಿಕೆಗಳ ಅಗ್ಗದ ಸ್ತುತಿ, ಬಿರುದು ಬಾವಲಿಗಳ ವ್ಯಾಮೋಹ ಇವುಗಳಿಗೆ ವಶನಾಗದೆ , ತಾನು ಹಿಡಿದ ಕೆಲಸವನ್ನು ಪಟ್ಟು ಹಿಡಿದು ನಿಶ್ಶಬ್ದವಾಗಿ ಮಾಡುವಾತನೇ  ನಿಜವಾದ ಕರ್ಮಯೋಗಿ.”

” ಆತ್ಮಶ್ರೀಗಾಗಿ  ನಿರಂಕುಶಮತಿಗಳಾಗಿ ‘ – ಇದು ಕುವೆಂಪು ಅವರು ಶ್ರೀರಂಗಪಟ್ಟಣದಲ್ಲಿ ಯುವಜನ ಸಮ್ಮೇಳನದಲ್ಲಿ ೧೯೩೫ ರಲ್ಲಿ ಮಾಡಿದ ಭಾಷಣ. ” ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ಧಾರವಿಲ್ಲ.” ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆಯುವ ಮೊದಲು ಎಲ್ಲಕಡೆ ವ್ಯಾಪಿಸಿದ್ದ  ವರ್ಣಾಶ್ರಮ ,ಜಾತಿ ಪದ್ಧತಿ ,ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನ್ಯಾಯಗಳು ಸ್ವಾತಂತ್ರ್ಯದ ಬಳಿಕ ನಿರ್ನಾಮವಾಗುತ್ತವೆ ಎಂದು ಯುವಜನರು ಭಾವಿಸಿದ್ದರು.ಆದರೆ ಅಂತಹ ಯಾವ ಪವಾಡವೂ ನಡೆಯಲಿಲ್ಲ. ಇದಕ್ಕೆ ಕುವೆಂಪು ಕೊಡುವ ಕಾರಣ -ಮತಾಂಧತೆ ,ಮತಭ್ರಾಂತಿ, ಮತದ್ವೇಷ ಮತ್ತು ಮತ ಸ್ವಾರ್ಥತೆ ಇವು ‘ವಿಚಾರವಾದ’ ಮತ್ತು ‘ವೈಜ್ಞಾನಿಕ ದೃಷ್ಟಿ’ ಗಳಿಗೆ ಕೊಟ್ಟ ಕೊಡಲಿಪೆಟ್ಟು. ನಮ್ಮಲ್ಲಿ ಸಂಸ್ಕೃತಿಯ ಹೆಸರಿನಲ್ಲಿ  , ಮತದ ಹೆಸರಿನಲ್ಲಿ , ಧರ್ಮದ ಸೋಗಿನಲ್ಲಿ , ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುಂಟುನೆಪದಲ್ಲಿ ,ಅವಿವೇಕದ ಮೌಡ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ನಕಲಿ ಮುಲಾಮು ಹಚ್ಚಿ , ಜನರನ್ನು ದಿಕ್ಕು ತಪ್ಪಿಸಿ ವಂಚಿಸುವುದನ್ನು ಕುವೆಂಪು ಬೆಟ್ಟುಮಾಡಿ ತೋರಿಸುತ್ತಾರೆ.

ಕುವೆಂಪು ಅವರ ಈ ಭಾಷಣದ ಬಗ್ಗೆ ಆ ಕಾಲದಲ್ಲಿ ಜಾತಿವಾದಿಗಳು ಪತ್ರಿಕೆಗಳಲ್ಲಿ ಉಗ್ರಟೀಕೆಗಳನ್ನು ಮಾಡಿ,ಕನ್ನಡ ಉಪನ್ಯಾಸಕರಾಗಿದ್ದ ಕುವೆಂಪು ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಸರಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯವನ್ನು ಒತ್ತಾಯಿಸಿದರು. ಸರಕಾರವು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಈ ಕುರಿತು ತನಿಖೆ ಮಾಡಿ ವರದಿ ಒಪ್ಪಿಸುವಂತೆ ಕೇಳಿತಂತೆ.ವಿಚಾರಣೆಯ ಕರ್ತವ್ಯ ಆಗ ಅಲ್ಲಿ  ಕನ್ನಡ  ಪ್ರಾಧ್ಯಾಪಕರಾಗಿದ್ದ ಟಿ.ಎಸ.ವೆಂಕಣ್ಣಯ್ಯ ಅವರ ಮೇಲೆ ಬಿತ್ತು. ಈ ಪ್ರಸಂಗದ ಕುರಿತು ಕುವೆಂಪು ಈರೀತಿ ಬರೆದಿದ್ದಾರೆ: ” ಒಂದು ದಿನ ವೆಂಕಣ್ಣಯ್ಯನವರು  ನನ್ನನ್ನು ಕೇಳಿದರು ತಮಗೆ ಬಂದಿದ್ದ ಆಜ್ಞೆಯ ವಿಚಾರ ಏನನ್ನೂ ತಿಳಿಸದೆ, ಲೋಕಾಭಿರಾಮವಾಗಿ ಎಂಬಂತೆ , ‘ಅದೇನಯ್ಯ ನೀನು  ಭಾಷಣ ಮಾಡಿದಿಯಂತೆ ಶ್ರೀರಂಗಪಟ್ಟಣದಲ್ಲಿ ? ತಂದುಕೊಡುತ್ತೀಯೇ  ನನಗೆ ? ‘ ಅಚ್ಚಾಗಿದ್ದ ಕೆಲವು ಪ್ರತಿಗಳು ನನ್ನಲ್ಲಿ ಇದ್ದುವು. ಅವರಿಗೆ ಒಂದನ್ನು ಕೊಟ್ಟೆ.ಅವರು ನನಗೆ ಮುಂದೆ ಯಾವ ವಿಚಾರವನ್ನೂ ಹೇಳಲಿಲ್ಲ. ಆಮೇಲೆ ತಿಳಿದುದನ್ನು ಬರೆಯುತ್ತಿದ್ದೇನೆ.ನನ್ನ ಭಾಷಣವನ್ನು ಓದಿದ ಅವರು ವಿಶ್ವವಿದ್ಯಾನಿಲಯಕ್ಕೆ ಬರೆದ ಕಾಗದದಲ್ಲಿ  ‘ ನಾನು ನನ್ನ ಮಗನಿಗೆ ಬುದ್ಧಿ ಹೇಳಬೇಕಾಗಿ ಬಂದರೆ ಇದಕ್ಕಿಂತಲೂ ವಿಚಾರಪೂರ್ವಕವಾಗಿ ಸೊಗಸಾಗಿ ಸಮರ್ಥವಾಗಿ ಹೇಳಲಾರೆ ‘ ಎಂದು ಬರೆದಿದ್ದರಂತೆ.”

‘ಮಲೆನಾಡಿನ ಯುವಕರಲ್ಲಿ’ ಎಂಬ ಭಾಷಣ ಲೇಖನದಲ್ಲಿ ಕುವೆಂಪು ದೇವರುಗಳ ಆರಾಧನೆಯಲ್ಲಿರುವ ಮೌಡ್ಯ,ಮದ್ಯಪಾನದ ಕೆಡುಕು ,ಕೋರ್ಟು ವ್ಯವಹಾರಗಳಿಂದ ಮನೆ ಹಾಳಾಗುವುದು -ಇವನ್ನು ವಿವರಿಸಿ ತಿಳಿಸುತ್ತಾರೆ. “ಪರೀಕ್ಷೆ ,ವಿಮರ್ಶೆ ,ವಿಚಾರ -ಇವೆಲ್ಲವೂ ನಮ್ಮ ಹುಟ್ಟು ಹಕ್ಕುಗಳು “.ಇದು ಕುವೆಂಪು ಮಂತ್ರ.ದುಂದುವೆಚ್ಚದ ಬಗ್ಗೆ ಕುವೆಂಪು ಕಿವಿಮಾತು : ” ನಿಮ್ಮ ಕನ್ಯೆಯರಿಗೆ ಸೇರು ಬಂಗಾರದ ಕೊರಳಹಾರಕ್ಕಿಂತಲೂ ಮುದ್ದಾದ ಕನ್ನಡ ಅಕ್ಷರಮಾಲೆಯು ರಮಣೀಯತರವಾದ ಅಲಂಕಾರ.'” ವಿದ್ಯಾರ್ಥಿಗಳಿಗೆ ಮತಿ ಗೌರವ ಬೇಕು ಎನ್ನುವ ಕುವೆಂಪು ಅದು ಸಾಧಿತವಾಗುವ ಬಗೆಯನ್ನು ಹೀಗೆ ತಿಳಿಸುತ್ತಾರೆ :  ” ಗ್ರಾಮಸೇವೆ,ಭಾಷಾ ಸೇವೆ,ಜ್ಞಾನಪ್ರಸಾರ,ಸಾಹಿತ್ಯ ಪ್ರಚಾರ,ವೈದ್ಯ ಸಹಾಯ,ರೋಗ ಶುಶ್ರೂಷೆ  ಇತ್ಯಾದಿ ಅಲಘು ಕಾರ್ಯಗಳಲ್ಲಿ ಪಾಲುಗೊಳ್ಳುವ  ವಿದ್ಯಾರ್ಥಿಯ ಮತಿ ಸಜೀವವೂ ಸುಸ್ಪಷ್ಟವೂ ಆಗುತ್ತದೆ. ”  “ವಿದ್ಯೆಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ.ಅಲ್ಲಿ ಯಾರೂ ವಂಚನೆಯಿಂದ ಸಂಪತ್ತು ಗಳಿಸಲಾರರು . ಅಲ್ಲಿ ದುಡಿಮೆಯಂತೆ ಪಡಿ.”

‘ ವಿದ್ಯಾರ್ಥಿಗಳಿಗೇಕೆ  ಆತ್ಮಶ್ರೀ ‘ ಎಂಬ ಕುವೆಂಪು ಉಪನ್ಯಾಸ ಲೇಖನವು ಆಧ್ಯಾತ್ಮಿಕ ಪರಿಕಲ್ಪನೆಯನ್ನು ಮನೋವೈಜ್ನಾನಿಕವಾಗಿ ವಿವರಿಸುತ್ತದೆ.ಧ್ಯಾನ ,ಚಿಂತನೆಗಳಿಂದ ನಮ್ಮ ಮನಸ್ಸು ಹರಿತವಾಗುತ್ತದೆ ,ಗಟ್ಟಿಯಾಗುತ್ತದೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ” ತುಂಬು ಬಾಳಿಗೆ ಬಹಿರ್ಮುಖತೆಯಷ್ಟೇ ಆವಶ್ಯಕ  ಅಂತರ್ಮುಖತೆ. ಬದುಕನ್ನು ಕುರಿತು ಜಾನಿಸುವುದೂ ಚೆನ್ನಾಗಿ ಬದುಕುವುದಕ್ಕೆ ನೆರವಾಗುತ್ತದೆ ” ಎನ್ನುವುದು ಕುವೆಂಪು ಸೂತ್ರ. ಅದಕ್ಕಾಗಿಯೇ ಅವರು ಹೇಳುತ್ತಾರೆ :  ” ಪುಸ್ತಕಗಳಿಂದಲೂ ವ್ಯಕ್ತಿಗಳಿಂದಲೂ ಜೀವನವ್ಯಾಪಾರಗಳಿಂದಲೂ ನಾವು ಪಡೆಯುವ ತಿಳಿವು ನಮ್ಮ ಅನುಭವಕ್ಕೆ ಹಿಡಿಯಬೇಕಾದರೆ ,ಅದರಿಂದ ನಮ್ಮ ಆತ್ಮಶ್ರೀ ಆವಿರ್ಭವಿಸಬೇಕಾದರೆ , ಏಕಾಂತವೂ ಮೌನವೂ ಧ್ಯಾನವೂ ಅತ್ಯಗತ್ಯ. ದಿನದ ದೀರ್ಘ ಜೀವನದಲ್ಲಿ ಸ್ವಲ್ಪ ಕಾಲವನ್ನಾದರೂ ಅದಕ್ಕೆ ಮೀಸಲಾಗಿಸುವುದರಿಂದಲೇ ಬಾಳು ಪರಿಪೂರ್ಣವೂ ಸುಂದರವೂ ಆಗಲು ಸಾಧ್ಯ. ” ತಪಸ್ಸಿನ ಬಗ್ಗೆ ಇನ್ನೊಂದು ಕಡೆ ಕುವೆಂಪು ಕೊಡುವ ವಿವರಣೆ ಧರ್ಮನಿರಪೇಕ್ಷವಾದದ್ದು :  “ನಾವು ಯಾವ ಕೆಲಸ ಉದ್ಯೋಗಗಳನ್ನು ಕೈಕೊಂಡಿದ್ದರೂ  ಅವುಗಳನ್ನು ಶ್ರದ್ಧೆಯಿಂದ ,ಭಕ್ತಿಯಿಂದ ,ನಿಷ್ಠೆಯಿಂದ ,ಗುರಿ ಸಾರುವ ತನಕ ಸಾಧಿಸುವುದೇ ತಪಸ್ಸು. ”

ಇಂದು ಕುವೆಂಪು ಹುಟ್ಟಿದ ದಿನ.ತೊಂಬತ್ತು ವರ್ಷಗಳ ಕಾಲ ಕರ್ನಾಟಕದಲ್ಲೇ  ಇದ್ದು ,ಸಾರ್ಥಕ ಬಾಳನ್ನು ಬದುಕಿ,ಇಡೀ ಇಪ್ಪತ್ತನೆಯ ಶತಮಾನವನ್ನು ತಮ್ಮ ಮೇರು ಬದುಕು ಬರಹಗಳಿಂದ ರೂಪಿಸಿದ ಕುವೆಂಪು ಎಂಬ ‘ ಕಡಲು ‘ ಈಗ ಇಲ್ಲ. ಈ ಕಡಲಿನ ಹೆಸರಿನಲ್ಲಿ ಈಗ ನಡೆಯುತ್ತಿರುವ ‘ ಪನಿ ‘ಗಳ ಪ್ರದರ್ಶನ ಅದು ನಿಜವಾದ ಕುವೆಂಪು ಚಿಂತನೆಯ ಪನಿಗಳಾದರೂ ಆಗಿವೆಯೇ ಎನ್ನುವ ಪ್ರಶ್ನೆಗೆ ಸಕಾರಾತ್ಮಕ ಉತ್ತರ ದೊರೆಯುವುದು ಕಷ್ಟ. ಪ್ರದರ್ಶನ,ಅಗ್ಗದ ಪ್ರಚಾರ ,ಬಿರುದುಬಾವಲಿಗಳು -ಇವುಗಳ ಅಬ್ಬರದಲ್ಲಿ ಕುವೆಂಪು ಹೆಸರು ಒಂದು ಬ್ಯಾನರ್ ಮಾತ್ರ ಆಗುತ್ತಿದೆಯೇ ? ಸತ್ಯಾಗ್ರಹವೂ ಒಂದು ಈವೆಂಟ್ ಮ್ಯಾನೆಜ್ ಮೆಂಟ್ ನ ಭಾಗವಾಗುತ್ತಿರುವ ದಿನಗಳಲ್ಲಿ ,’ಆತ್ಮಶ್ರೀ ‘ ಎಷ್ಟು ಪ್ರಮಾಣದಲ್ಲಿ ಉಳಿದಿದೆ ? ಕುವೆಂಪು ಅವರ ಶ್ರೀರಂಗಪಟ್ಟಣದ  ವೈಚಾರಿಕ  ಭಾಷಣದ ರೀತಿಯ ಭಾಷಣವನ್ನು ಕರ್ನಾಟಕದ  ಯಾವುದೇ ವಿಶ್ವವಿದ್ಯಾನಿಲಯದ ಅಧ್ಯಾಪಕರು ಇವತ್ತು ಮಾಡಿದರೆ ಅವರ ವಿಚಾರಣೆ ನಡೆಸಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಇಲ್ಲವೇ ?ಮತ ಮತ್ತು ಅಧ್ಯಾತ್ಮ ಇವು ಕಲಸುಮೇಲೋಗರ ಆಗಿರುವ ಇಂದಿನ ಸನ್ನಿವೇಶದಲ್ಲಿ ಕುವೆಂಪು ಅವರ ಅಧ್ಯಾತ್ಮ ತತ್ವ ಮತ್ತು ಸೂತ್ರಗಳನ್ನು ಅಸೂಕ್ಸ್ಮ ಮನಸ್ಸುಗಳು ಹೇಗೆ ಗ್ರಹಿಸಬಲ್ಲವು ? ಜಯಚಾಮರಾಜ ಒಡೆಯರಿಗೆ ಖಾಸಗಿ ಟ್ಯೂಶನ್ ಕೊಡಲು ನಿರಾಕರಿಸಿದರು ಕುವೆಂಪು. ನಾವು ಇಂದು ಒಡೆಯರಿಗೆ ಹಾಕುವ ಸಲಾಂ ಯಾವ ಬಗೆಯದು ? ಕುವೆಂಪು ನಿಧನರಾದಾಗ ೧೯೯೪ರಲ್ಲಿ ಕರ್ನಾಟಕದಲ್ಲಿ ಚುನಾವಣೆಯ ಕಾವು ಏರಿತ್ತು.ಒಂದು ಕಡೆ ಕುವೆಂಪು ಅಗಲಿಕೆಯ ಶೋಕಪ್ರದರ್ಶನದಲ್ಲಿ  ‘ವಿಶ್ವಮಾನವ ಸಂದೇಶ ‘ದ ಭಜನೆ ಮಾಡುತ್ತಲೇ , ರಾಜಕೀಯ ಪಕ್ಷಗಳು ತಮ್ಮ ಮತಗಳನ್ನು ‘ಮತ’ ಗಳ ಮೂಲಕ ಜಾತಿಗಳ ಮೂಲಕ ಒಡೆದು ಬಾಚುವ ಕೆಲಸ ಮಾಡಿದವು. ಈ ಪ್ರವೃತ್ತಿಯು  ಈಗ ಕರ್ನಾಟಕದಲ್ಲಿ ‘ಸಾರ್ವಜನಿಕ ನಾಚಿಕೆ’ಯನ್ನು ಮೀರಿ ,ಗೌರವದ ಪಟ್ಟವನ್ನು ಏರಿದೆ.

ಮಲೆನಾಡು ಮಾತ್ರ ಅಲ್ಲ ,ಇಡೀ ಕರುನಾಡಿನಲ್ಲೇ ಕನ್ನಡ ಅಕ್ಷರಮಾಲೆಯನ್ನು ಕೊರಳಿಂದ ಕಿತ್ತೆಸೆದು ,ಇಂಗ್ಲಿಶ್ ಆಲ್ಪಾಬೆಟ್ ನ ನೆಕ್ಲೀಸ್ ನ್ನು ಮಕ್ಕಳಿಗೆ ತೊಡಿಸಲಾಗುತ್ತಿದೆ.ಕುವೆಂಪು ಹೇಳುವ ಮೌನ,ಧ್ಯಾನ ,ಚಿಂತನೆ ಮಾಡುವ ವ್ಯವಧಾನ ,ಮನಸ್ಸು ,ಅವಕಾಶ ಇಲ್ಲದೆ ಕನ್ನಡಿಗರ ಬದುಕು ಉದ್ವೇಗ ,ಆಕ್ರೋಶ , ,ದ್ವೇಷ ,ಜಗಳ,ಪ್ರದರ್ಶನಗಳ ಅಬ್ಬರಸಂತೆಯಲ್ಲಿ  ನಲುಗುತ್ತಿದೆಯೇ ?

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ‘ಹುಲಿಕಲ್ಲು ನೆತ್ತಿ ‘ ಒಂದು ಮಹತ್ವದ ಪ್ರತಿಮೆ.ಅನೇಕ ಮಂದಿ ತಮ್ಮ ಸಾಧ್ಯತೆಗಳ ಆತ್ಮವಿಶ್ವಾಸ ಹೊಂದುವುದು ಹುಲಿಕಲ್ಲುನೆತ್ತಿಯನ್ನು  ಏರುವ ಮೂಲಕ ,ದಾಟುವ ಮೂಲಕ.ಈ ಕಾದಂಬರಿಯ ಸುಬ್ಬಣ್ಣ  ಹೆಗ್ಗಡೆಯ ಪಾತ್ರ  ಒಂದು ಬಗೆಯ  ಆದರ್ಶ ಮತ್ತು ವಾಸ್ತವ.ಕೋಳಿ ಕುರಿ ಹಂದಿಗಳ ಪ್ರಾಕೃತಿಕ ಪರಿಸರದಲ್ಲಿ ಬೆಳೆದ ಸುಬ್ಬಣ್ಣ ಹೆಗ್ಗಡೆ ಎಲ್ಲ ಆಸೆಗಳನ್ನು ಹೊತ್ತುಕೊಂಡು ಹುಲಿಕಲ್ಲು ನೆತ್ತಿಯನ್ನು ಏರುವುದು ಒಂದು ಸಾಹಸ.ಗುತ್ತಿಯೂ ಹುಲಿಕಲ್ಲು ನೆತ್ತಿಯನ್ನು ಏರಿ ಹೋಗುತ್ತಾನೆ.

ಹುಲಿಕಲ್ಲು ನೆತ್ತಿಯಲ್ಲಿ ಒಂದು ಕಲ್ಲು , ಕುವೆಂಪು ಕಡಲಿನಲ್ಲಿ ಒಂದು ಹನಿ -ಇಷ್ಟಾದರೂ ಆಗುವ ನಮ್ಮ ನಿರ್ಧಾರ : ಕುವೆಂಪು ಹುಟ್ಟುದಿನದ ಆಚರಣೆ -ನಮ್ಮ ಮತಿ ಮತಿಯಲ್ಲಿ .

 

‍ಲೇಖಕರು G

December 30, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. A P BHAT

    ಕಡಲಿಗಿಂತಲೂ ಹನಿಗಳ ಅಬ್ಬರವೇ ಜಾಸ್ತ್ಯಾಗಿರುವ ಈ ಕಾಲದಲ್ಲಿ ಕುವೆಂಪು ನೆನಪು ಅಪ್ಯಾಯಮಾನವಾಗಿದೆ ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: