ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

ಮೂರು ವಾರಗಳೇ ಸಂದುವು ನನ್ನ ಬ್ಲಾಗಿಲೊಳಗೆ  ಪ್ರವೇಶಮಾಡದೆ. ಈ ಬಾರಿ ಜರ್ಮನಿಯಿಂದ ಊರಿಗೆ ಬಂದವನಿಗೆ ಮಂಗಳೂರಿನ ಮಳೆ -ಸೆಕೆಗಳ ಮಧುರ ದಾಂಪತ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.ಮಂಗಳೂರಲ್ಲಿ ಮೊಗ್ಲಿಂಗ್ ,ಕೊಲ್ಕತ್ತಾದಲ್ಲಿ ಕುವೆಂಪು ಸೆಮಿನಾರ್ ಗಳು ತೃಪ್ತಿ ಕೊಟ್ಟುವು. ಮಂಗಳೂರಲ್ಲಿ ‘ಅಬ್ಬಕ್ಕ ಸಂಕಥನ’ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಭಾಗವಹಿಸಿ  ಕೆಲವು ಭಿನ್ನ ಮಾತುಗಳನ್ನು ಹೇಳಲು ಅವಕಾಶ  ದೊರೆಯಿತು.ಅಕ್ಟೋಬರ ಏಳರಂದು ಪುತ್ತೂರು ಬಳಿಯ ಸವಣೂರಿನಲ್ಲಿ ತುಳು ಸಮ್ಮೇಳನದಲ್ಲಿ ಮೊದಲ ಮಾತುಗಳನ್ನು ಆಡಿ ,ಅದರ ಸಂಭ್ರಮದಲ್ಲಿ ಪಾಲುಗೊಳ್ಳಲಾಗದೆ ಮಿಂಚಿನಂತೆ ಮಾಯವಾದೆ.

ಈಬಾರಿ ಜರ್ಮನಿಯಿಂದ ಕರ್ನಾಟಕಕ್ಕೆ  ಬಂದ ನನ್ನ ಇಬ್ಬರು ಜರ್ಮನ್  ಕನ್ನಡ ವಿದ್ಯಾರ್ಥಿಗಳನ್ನು  ಅವರ ಅಧ್ಯಯನ ಸಂಬಂಧಿ ಕ್ಷೇತ್ರಕಾರ್ಯ ಮತ್ತು ಸಮಾಲೋಚನೆಗಳಿಗೆ ಕರೆದೊಯ್ಯಬೇಕಾಗಿತ್ತು.ಜರ್ಮನ್ ಹುಡುಗಿ ಪೌಲಿನೆಗೆ  ತನ್ನ ಎಂ ಎ ಥೀಸಿಸ್ ಗಾಗಿ ‘ಕರ್ನಾಟಕದ ಮೌಖಿಕ ಮಹಾಕಾವ್ಯಗಳು’ ಎಂಬ ವಿಷಯವನ್ನು ನಾನೇ ಕೊಟ್ಟಿದ್ದೆ.ಆ ಕೆಲಸಕ್ಕಾಗಿ ಅವಳು ನೇರವಾಗಿ ಮಂಗಳೂರಿಗೆ ಬಂದಳು.ತುಳುವಿನ ಸಿರಿ ಮತ್ತು ಕನ್ನಡ ಮಲೆಮಾದೇಶ್ವರ ಕಾವ್ಯಗಳನ್ನು ಅವಳು ವಿಶೇಷವಾಗಿ ಅಧ್ಯಯನ ಮಾಡಿದ್ದಾಳೆ..ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರಕ್ಕೆ (ಅರ.ಅರ.ಸಿ.)ಅವಳನ್ನು ಕರೆದುಕೊಂಡು ಹೋದೆ.ಎಸ .ಎ.ಕೃಷ್ಣಯ್ಯ.ಅಶೋಕ ಆಳ್ವ .ಲಚ್ಚೆಂದ್ರ ತುಂಬಾ ಸಹಕಾರ ಕೊಟ್ಟರು.ಫಿನ್ ಲೆಂಡಿನ ಪ್ರೊ.ಲೌರಿ ಹೊಂಕೋ ಅವರೊಂದಿಗೆ ಇಪ್ಪತ್ತು ವರ್ಷಗಳ ಹಿಂದೆ  ನಾವು ದಾಖಲಿಸಿದ ನೂರಾರು ಗಂಟೆಗಳ ಸಿರಿ ಕಾವ್ಯದ ಅಪಾರ ಸಾಮಗ್ರಿ ಅಲ್ಲಿ ಇದೆ.ಮತ್ತೆ ಅಶೋಕ ಆಳ್ವ ಸಂಗ್ರಹಿಸಿದ ‘ಸಿರಿ ಕಾವ್ಯ ಲೋಕ’ದ ಅದ್ಭುತ  ಹಾಡುಗಾರ್ತಿ ಕರ್ಗಿ ಶೆಡ್ತಿ ಅವರನ್ನು ಬೆಳ್ತಂಗಡಿ ಬಳಿಯ ಅಳದಂಗಡಿಯಿಂದ ಮಂಗಳೂರಿಗೆ ಬರಮಾಡಿಕೊಂಡೆವು.ಅಲ್ಲಿ ದಿನವಿಡೀ ಕರ್ಗಿ  ಶೆಡ್ತಿ ಅವರ ಹಾಡು ಮತ್ತು ಅವರೊಂದಿಗೆ ಮಾತುಕತೆ.ನಾನು ,ಪೌಲಿನೆ,ಅಶೋಕ ಆಳ್ವ ,ಹಿರಿಯ ವಿದ್ವಾಂಸ ಎ.ವಿ.ನಾವಡ ಅಲ್ಲಿ ಇದ್ದೆವು. ಕರ್ಗಿ ಶೆಡ್ತಿ ಅವರ ಹಾಡು ,ಮಾತು ನಾನು ಕೇಳುವುದು ಅದೇ ಮೊದಲ ಬಾರಿ.ತುಂಬಾ ಅಪೂರ್ವ ಆಕರಸಾಮಗ್ರಿ  , ತಿಳುವಳಿಕೆ ಉಳ್ಳವರು ಅವರು.ಅವರೊಡನೆ ನಾನು ಮಾಡಿದ ಸಂದರ್ಶನ ಹಳ್ಳಿಯ ಹೆಣ್ಣುಗಳ ಬದುಕಿನ ಅನೇಕ ದಾರುಣ ಸಂಗತಿಗಳನ್ನು ಅನಾವರಣ ಮಾಡಿತು.ಜನಪದ ಆಚರಣೆಗಳಲ್ಲಿ  ಹೆಣ್ಣುಮಕ್ಕಳ ಒಳಗೊಳ್ಳುವಿಕೆಯ ಒತ್ತಡಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

ಅಕ್ಟೋಬರ ಒಂಬತ್ತರಂದು ಪೌಲಿನೆಯ ಕ್ಷೇತ್ರ ಕಾರ್ಯದ ಉದ್ದೇಶದ ನಮ್ಮ ಯಾತ್ರೆ ಮಲೆಯ ಮಾದೇಶ್ವರ ಬೆಟ್ಟಕ್ಕೆ.ಬೆಂಗಳೂರಿನಿಂದ ಹೊರಟದ್ದು ನಮ್ಮ ಬಹುಸಂಸ್ಕೃತಿಯ ಒಂದು ತಂಡ.ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ಪ್ರೊ.ಹೈದ್ರೂನ್ ಬ್ರೂಕ್ನರ್  ಎರಡು ವಾರಕ್ಕೆ ಮೊದಲೇ ಹಂಪಿಗೆ ಬಂದು ,ತಮ್ಮ ಸಂಶೋಧನಾ ಯೋಜನೆ ‘ಹಂಪಿಯ ಮಹಾನವಮಿ ಆಚರಣೆ’ ಯ ಕ್ಷೇತ್ರ ಕಾರ್ಯ ಮುಗಿಸಿ ,ಬೆಂಗಳೂರಿಗೆ ಬಂದಿದ್ದರು.ಅದೇ ವಿಭಾಗದ ಅಧ್ಯಾಪಕ ಸಹಾಯಕ ,ನನ್ನ ಸಹೋದ್ಯೋಗಿ ಬೆಂಜಮಿನ್ ಹಾನ್ ತಮ್ಮ ಪಿ ಎಚ್ ಡಿ ಸಂಶೋಧನೆಗಾಗಿ ಹೊಸಪೇಟೆ ಬಳಿಯ ಹುಲಿಗಮ್ಮ ದೇವಿಯ ನವರಾತ್ರಿ ಉತ್ಸವದ ಆಚರಣೆಗಳನ್ನು ಸಂಗ್ರಹಿಸಿ ,ಬೆಂಗಳೂರು ಸೇರಿದ್ದರು.ಮಂಗಳೂರಿನಿಂದ ಪೌಲಿನೆಯನ್ನು ಕರೆದುಕೊಂಡು ನಾನು ಮತ್ತು ನನ್ನ ಹೆಂಡತಿ ಕೋಕಿಲ ಬಂದಿದ್ದೆವು.ಬ್ರೂಕ್ನರ್ ಮತ್ತು ನಮ್ಮ ಸ್ನೇಹಿತ ಬೆಂಗಳೂರು ವಾಸಿ ,ಹಿರಿಯ ಕಲಾವಿದ ಬಾಲನ್ ನಂಬಿಯಾರ್ ನಮ್ಮ ಜೊತೆಗೆ ಮಾದೇಶ್ವರ ಬೆಟ್ಟಕ್ಕೆ ಬರುವ ಉತ್ಸಾಹ ತೋರಿಸಿದರು.ಹೀಗೆ ನಾವು ಆರು ಜನ ಬೆಂಗಳೂರಿಂದ ಒಂದು ವಾಹನ ಮಾಡಿಕೊಂಡು ,ಉಘೇ ಉಘೇ ಹೊರಟೆವು.ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪ್ರಾಧ್ಯಾಪಕರಾಗಿ ಇರುವ ಡಾ.ವೆಂಕಟೇಶ ಇಂದ್ವಾಡಿ ಈಗ ಕೊಳ್ಳೇಗಾಲ ಬಳಿಯ ಕುರುಬನಕಟ್ಟೆಯಲ್ಲಿ ‘ದೇಸಿ ಅದ್ಯಯನ ಕೇಂದ್ರ’ದ ಮುಖ್ಯಸ್ಥ ರಾಗಿ ಇದ್ದಾರೆ,ನಮ್ಮ ಮಾದೇಶ್ವರ ಬೆಟ್ಟದ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದವರು ಇಂದ್ವಾಡಿ.

ಕೊಳ್ಳೆಗಾಲದ ದಾರಿಯಲ್ಲಿ ಜರ್ಮನ್ ಸ್ನೇಹಿತರಿಗೆ  ಶಿವನಸಮುದ್ರ ಜಲಪಾತ ತೋರಿಸಲು ಆ ಕಡೆಗೆ ತಿರುಗಿದೆವು.ಅವರಿಗೆ ಅದು ಅದ್ಭುತವಾಗಿಯೇ ಕಾಣಿಸಿತು.ಆದರೆ ನೀರು ಕಡಮೆಯಾಗಿ ಗಂಗಾವತರಣದ ರೌದ್ರ ಅಟ್ಟಹಾಸ ಕಾಣಿಸಲಿಲ್ಲ.ಅದರ ಜೊತೆಗೆ  ಪ್ರವಾಸಿಗರು ಎಲ್ಲೆಲ್ಲೂ ಚೆಲ್ಲಿದ ಕಸದ ರಾಶಿ ,ಜಲಪಾತದ ಸೌಂದರ್ಯ ಆಸ್ವಾದನೆಗೆ ಆಭಾಸ ತಂದಿತು.ಅಲ್ಲಿನ  ಫೋಟೋ ಇಲ್ಲಿ ಕೊಟ್ಟಿದ್ದೇನೆ.

ಕೊಳ್ಳೆಗಾಲದಲ್ಲಿ ವೆಂಕಟೇಶ ಇಂದ್ವಾಡಿ ತಮ್ಮ ಗೆಳೆಯ ಬಸವರಾಜ್ ಜೊತೆಗೆ ನಮ್ಮನ್ನು ಸೇರಿಕೊಂಡು ನಮ್ಮ ಮಾರ್ಗದರ್ಶಕರಾದರು.ಬೆಟ್ಟ ಏರಿ ,ಅತಿಥಿ ಗೃಹದಲ್ಲಿ ಕೋಣೆ ಹಿಡಿದು ,ಮಾದೇಶ್ವರ ದೇವಾಲಯದ ಬಳಿಗೆ ಬರುವಾಗ ಕತ್ತಲೆಯಾಗಿತ್ತು.ಅಲ್ಲಿ ಒಂದು ಜಾತ್ರೆಯ ವಾತಾವರಣವಿತ್ತು.ಅಲ್ಲಿ ತಿರುಗಾಡುತ್ತಿದ್ದ ಕಂಸಾಳೆಯವರಿಂದ ಮಾದೇಶ್ವರ ಕಾವ್ಯದ ಕೆಲವು ಹಾಡು ಹಾಡಿಸಿದೆವು.ಮರುದಿನ ಬೆಳಗ್ಗೆ ಇಂದ್ವಾಡಿ ಬರಹೇಳಿದ್ದ ಕಲಾವಿದ ಹಾಡುಗಾರ ಸಿದ್ಧರಾಜು ತಮ್ಮ ಸಂಗಡಿಗರಾದ ಸಿದ್ದಯ್ಯ ಮತ್ತು ರಾಜಪ್ಪ ಅವರೊಂದಿಗೆ ನಾವು ಇದ್ದಲ್ಲಿಗೆ ಬಂದರು.ತಂಬೂರಿ ,ಗಗ್ಗರ ,ತಾಳ,ದಮ್ಮಡಿ ಸಹಿತ ಮಾದೇಶ್ವರ ಕಾವ್ಯದ ಗಣಸ್ತುತಿಯಿಂದ ಹಾಡುವಿಕೆ ಆರಂಭ ಆಯಿತು.ಮಾದೇಶ್ವರ ಪರಂಪರೆಯ ಹಿರಿಯ ಕಲಾವಿದರಾದ ಕಂಸಾಳೆ ಮಹಾದೇವಯ್ಯ, ಹೆಬ್ಬಣಿ  ಮಾದಯ್ಯ ಮುಂತಾದವರ ಹಾಡು ಕೇಳಿದ್ದೆ.ಆದರೆ ಸಿದ್ಧರಾಜು ಅವರನ್ನು ಕಂಡದ್ದು ,ಕೇಳಿದ್ದು ಅದೇ ಮೊದಲು.ತುಂಬಾ ಉತ್ಸಾಹ ,ಶಕ್ತಿ ,ವೈವಿಧ್ಯ ,ಧಾಟಿ -ಎಲ್ಲ ಬಗೆಯಲ್ಲೂ ಅದ್ಭುತ ಕಲಾವಿದರು .ನೀಲೇಗೌಡ -ಸಂಕಮ್ಮ ಪ್ರಸಂಗವನ್ನು ನಾಟಕೀಯವಾಗಿ ರಸಭರಿತವಾಗಿ ಹಾಡಿದರು.ಬಳಿಕ ಸಿದ್ಧರಾಜು ಅವರೊಂದಿಗೆ ನಮ್ಮ ಮಾತುಕತೆ.ಸಂಕಮ್ಮ ಅವಳ ಸಂಕಷ್ಟ ಗಳ ಬಗ್ಗೆ ನ್ಯಾಯ ಅನ್ಯಾಯದ ಪ್ರಶ್ನೆ ಕೇಳಿದಳು ಪೌಲಿನೆ.ಗಂಡ ನೀಲೇ ಗೌಡ ಮಾಡಿದ್ದು ತಪ್ಪು ಎಂದರು ಸಿದ್ಧರಾಜು.ನಾವು ಗಂಡಸರು ಮೂವರು -ನಾನು ,ಬಾಲನ್,ಬೆಂಜಮಿನ್ -ತಲೆತಗ್ಗಿಸಿ ಕುಳಿತುಕೊಂಡು ಕೇಳುತ್ತಿದ್ದೆವು.ಸಿದ್ಧರಾಜು ಹಾಡುವ ಮತ್ತು ಮಲೆಯ ಮಾದೇಶ್ವರ ಬೆಟ್ಟದ ಫೋಟೋ ಇಲ್ಲಿ ಇದೆ.

ಈಬಾರಿಯ ನನ್ನ ಕರ್ನಾಟಕ ಭೇಟಿಯಲ್ಲಿ ರಾಜ್ಯದ ಪರಿಸ್ಥಿತಿ ತುಂಬಾ ವಿಷಾದವನ್ನು ಉಂಟುಮಾಡಿತು.ಒಂದು ದಿನವೂ ಸಂತಸದ ಸುದ್ದಿ ಕೇಳಲಿಲ್ಲ,ನೋಡಲಿಲ್ಲ.ಇಲ್ಲಿ ಜರ್ಮನಿಯಲ್ಲಿ ನನ್ನ ಕರ್ನಾಟಕದ ಬಗ್ಗೆ ಉತ್ಸಾಹದ ಆದರ್ಶದ ಮಾತುಗಳನ್ನು ಆಡುತ್ತಿದ್ದ ನನಗೆ ಒಂದು ಅರ್ಥದಲ್ಲಿ ಖಿನ್ನತೆ ವೈರಾಗ್ಯ ಆವರಿಸಿತು.ಇದರ ನಡುವೆ ಕೂಡಾ ನನಗೆ ನನ್ನ ನಾಡಿನ ಬಗ್ಗೆ ಹೆಮ್ಮೆ ಅನ್ನಿಸಿದ್ದು -ನಾನು ಈಬಾರಿ ಭೇಟಿಮಾಡಿದ ಜನಪದ ಕಲಾವಿದರಾದ ಕರ್ಗಿ ಶೆಡ್ತಿ ಮತ್ತು ಸಿದ್ಧರಾಜು.ಇಂತಹ ನೂರಾರು ಅನಾಮಧೇಯರು ಉಳಿಸಿಕೊಂಡುಬಂದ ಜನಪದ ಪರಂಪರೆಯನ್ನು ನಮ್ಮ ಹೆಮ್ಮೆ ಎಂದು ಬಿಂಬಿಸುವುದು ಮಾತ್ರ ನಮಗೆ ಉಳಿದಿರುವ ಕರ್ತವ್ಯ.

ಕಳೆದ ವಾರ ಅಕ್ಟೋಬರ ಹತ್ತೊಂಬತ್ತರಂದು ಮತ್ತೆ ಜರ್ಮನಿಯಲ್ಲಿ ಬಂದು ಇಳಿದಾಗ ಎಲ್ಲೆಲ್ಲೂ ಮಂಜು ಮುಸುಕಿದ ನೋಟ.ಸೊನ್ನೆಯಿಂದ ಎಂಟು ಡಿಗ್ರಿ ನಡುವೆ ತೊನೆದಾಡುವ ಚಳಿ.ಮರಗಿಡಗಳ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿ ,ಮತ್ತೆ ಒಣಗಿ ನೆಲದ ಮೇಲೆಲ್ಲಾ ಚೆಲ್ಲುತ್ತಿವೆ.ಮೊದಲಬಾರಿ ೨೦೦೯ರಲ್ಲಿ ಇದೇ ವೇಳೆಗೆ ಇಲ್ಲಿಗೆ ಬಂದಾಗ ಈ ನೋಟಗಳನ್ನು ನೋಡಿ ,ಮರುಗಿ ‘ಎತ್ತಣ ಚಳಿ ,ಎತ್ತಣ ನಾಚಿಕೆ’ಎಂದು ಕವನ ಬರೆದಿದ್ದೆ.ಈಗ ಮೂರನೆಯ ವರ್ಷ ಅದೇ ಮರಗಳು,ಅದೇ ಬಾಡಿದ ಒಣಗಿದ ಉದುರಿದ ಎಲೆಗಳು. ಈಗ ಅದರ ಬಗ್ಗೆ ವಿಷಾದ ಅನುಕಂಪ ಅನ್ನಿಸುತ್ತಿಲ್ಲ.ಮತ್ತೆ ಇವೇ ಮರಗಿಡಗಳು ಇನ್ನು ಒಂದು ತಿಂಗಳು ಕಳೆಯುತ್ತಲೇ ಹಿಮವನ್ನು ಬಣ್ಣದಂತೆ ಮೆತ್ತಿಕೊಳ್ಳುತ್ತವೆ.ಮತ್ತೆ ನಾಲ್ಕು ತಿಂಗಳಲ್ಲಿ ಹಚ್ಚ ಹಸುರಾಗಿ ಸಿಂಗರಿಸಿಕೊಂಡು ಬಣ್ಣಬಣ್ಣದ ಹೂಗಳನ್ನು ಹೆತ್ತು ,ತಮ್ಮ ಚಿರ ಯೌವನವನ್ನು ಸಾರುತ್ತವೆ.ನಾವಾದರೋ ಯೌವನದಲ್ಲೇ ವೃದ್ಧಾಪ್ಯವನ್ನು   ಆವಾಹಿಸಿಕೊಂಡು ಬೋಳು ಮರಗಳಾಗುತ್ತೇವೆ, ಕರಗಲಾರದ ಕಲ್ಲುಗಳಾಗುತ್ತೇವೆ.

ನಿನ್ನೆ ದಿನ ಭಾನುವಾರ ನನ್ನ ಮೆಚ್ಚಿನ ಪುಟ್ಟ ಪಟ್ಟಣ ವ್ಯೂರ್ತ್ಸ್ ಬುರ್ಗ್  ನಲ್ಲಿ ಕೊರೆಯುವ ಚಳಿಯಲ್ಲಿ ಮಾಯಿನ್ ನದಿಯ ದಂಡೆಯಲ್ಲಿ ಒಂದು ಸುತ್ತು ಬಂದೆ.ನನ್ನ ಕ್ಯಾಮರದಲ್ಲಿ ಸೆರೆ ಹಿಡಿದ ಈ ಬಾರಿಯ ಮೊದಲ ಫೋಟೋಗಳು ಮೇಲೆ ಇವೆ.ನದಿ ತಣ್ಣಗೆ ಹರಿಯುತ್ತಿದೆ.ಹಕ್ಕಿಗಳು ನದಿಯ ಪಕ್ಕದಲ್ಲಿ,ನದಿಯ ನಡುವೆ ಮತ್ತು ನದಿಯ ಒಳಗೆ ಸ್ವಚ್ಚಂದವಾಗಿ ವಿಹರಿಸುತ್ತಿವೆ.ಸೂರ್ಯ ಈಗ ತನಗೆ ದೊರೆತ ಅವಕಾಶ ಇನ್ನು ಕೆಲವು ವಾರಗಳ ಬಳಿಕ ಸಿಗಲಾರದು ಎಂದು ಗೊತ್ತಿದ್ದು,ಶಕ್ತಿ ಮೀರಿ ಬೆಳಗಿ ,ಬೆಟ್ಟಗಳ ಅಂಚಿನಲ್ಲಿ ಮರೆಯಾಗುತ್ತಾನೆ. ಅವನ ಬಗೆಗಿನ ಮೋಹದಿಂದ ಮಾಯಿನ್ ನದಿ ಆತನನ್ನು ತನ್ನಲ್ಲಿ ಬೆಳಗಿಸಿಕೊಳ್ಳುತ್ತಾಳೆ . ಮಾರ್ಕೆಟ್ ಬಳಿ  ಮಗುವೊಂದು ಅರಳಿದ ಹೂಗಳನ್ನು ಹಿಡಿಯಲು ಕೈ ಚಾಚುತ್ತದೆ.ಮುಂಜಾನೆ ನಾನು ಕಂಡ ಮಂಜಿನ ಬೆಟ್ಟ ಕರಗಿ  ಹೊಂಬಣ್ಣದ ಓಕುಳಿ ಪಿಸುಗುಟ್ಟುತ್ತದೆ-ನಿನ್ನ ಊರಲ್ಲಿ ಕತ್ತಲೆಯಲ್ಲೂ ದೀಪಾವಳಿ ಬರುತ್ತಿದೆ ಎಂದು.

 

 

‍ಲೇಖಕರು avadhi

October 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    Niivu Germany mattu karnataka da naduve samsmkrika kondiyagiddiri.german Vidyarthi gali ge kannadada desks he koduttiruva nimage abinandanegalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: