ಟಿ ಪಿ ಅಶೋಕ ಕಂಡಂತೆ ಮಲ್ಲಿಕಾರ್ಜುನ ಹಿರೇಮಠ ಕಾದಂಬರಿ ‘ಹಾವಳಿ’

ಟಿ ಪಿ ಅಶೋಕ

ಮಲ್ಲಿಕಾರ್ಜುನ ಹಿರೇಮಠ ಅವರ ಹೊಸ ಕಾದಂಬರಿ ಬರೆದಿದ್ದಾರೆ.

ಮನೋಹರ ಗ್ರಂಥಮಾಲಾ ಪ್ರಕಟಿಸಿರುವ ಈ ಕೃತಿಯ ಹೆಸರು – ‘ಹಾವಳಿ’

ಇದಕ್ಕೆ ಖ್ಯಾತ ವಿಮರ್ಶಕರಾದ ಟಿ ಪಿ ಅಶೋಕ ಅವರು ಬರೆದ ಮುನ್ನುಡಿ ಇಲ್ಲಿದೆ.

ತಮ್ಮ ಸಣ್ಣಕತೆ, ಪ್ರಬಂಧ ಹಾಗೂ ‘ಹವನ’ ಎಂಬ ಅಪೂರ್ವ ಕಾದಂಬರಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಮಲ್ಲಿಕಾರ್ಜುನ ಹಿರೇಮಠರ ಮತ್ತೊಂದು ಮಹತ್ವಾಕಾಂಕ್ಷಿ ಕೃತಿ ‘ಹಾವಳಿ’. ಒಂದು ಕುಟುಂಬದ, ಗ್ರಾಮದ ಒಳಗಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ, ಸಾಂದ್ರವಾಗಿ ನಿರೂಪಿಸುತ್ತಲೇ ಅವುಗಳನ್ನೂ ಮೀರಿದ ವಿಶಾಲವಾದ ಸಾಮಾಜಿಕ ಲೋಕವನ್ನೂ ಅದರೆಲ್ಲ ಚಲನಶೀಲತೆಯಲ್ಲಿ ಕಾಣಿಸುವುದು ಹಿರೇಮಠರ ಕಥನಗಳ ಸಾಮಾನ್ಯ ಪ್ರಧಾನ ಲಕ್ಷಣವೆನ್ನಬಹುದು.

ಸ್ಥಳೀಯ ಭಾಷೆ-ಸಂಸ್ಕೃತಿ-ಪರಿಸರಗಳಲ್ಲಿ ಆಳವಾಗಿ ಬೇರು ಬಿಟ್ಟು ಆ ಮೂಲದ್ರವ್ಯದಿಂದಲೇ ಇತಿಹಾಸದ ನಡೆಗಳನ್ನು ಅವಲೋಕಿಸುವುದು ಈ ಲೇಖಕರ ಮುಖ್ಯ ಗುಣ. ಪ್ರಸ್ತುತ ‘ಹಾವಳಿ’ ಕಾದಂಬರಿಯು ಹಿರೇಮಠರ ಸೃಜನಶೀಲ ಪಯಣದ ಅರ್ಥಪೂರ್ಣ ಮುಂದುವರಿಕೆಯಾಗಿದೆ.

ಬಸಾಪುರ ಎಂಬ ಕಾಲ್ಪನಿಕ ಗ್ರಾಮವೊಂದರಲ್ಲಿ ವಿನ್ಯಸ್ತಗೊಂಡಿರುವ ಈ ಕಾದಂಬರಿಯು ಕೇವಲ ಒಂದು ಗ್ರಾಮವೃತ್ತಾಂತವಾಗಿ ಸೀಮಿತಗೊಳ್ಳದೆ ಆಧುನಿಕ ಭಾರತದ ರಾಜಕೀಯ ಇತಿಹಾಸದ ಒಂದು ಮುಖ್ಯ ವಿದ್ಯಮಾನದ ದಾಖಲೆಯೂ ಆಗಿಬಿಟ್ಟಿರುವುದು ಮಹತ್ವದ ಸಂಗತಿಯಾಗಿದೆ. ಹೈದರಾಬಾದ ವಿಮೋಚನಾ ಚಳವಳಿಯ ಸಂದರ್ಭವನ್ನು ಅದರೆಲ್ಲ ಬಹುಮುಖತೆಯಲ್ಲಿ ಕಾಣಿಸುವ ಈ ಕಾದಂಬರಿಯು ಕಾಲಬದ್ಧವಾಗಿದ್ದೂ ಕಾಲಾತೀತ ನೆಲೆಗಳನ್ನು ಸ್ಪರ್ಶಿಸುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತದೆ.

ಇಪ್ಪತ್ತನೆಯ ಶತಮಾನದ ನಲವತ್ತರ ದಶಕದಲ್ಲಿ ಈ ಕಥೆ ನಡೆಯುತ್ತದೆ. ಕ್ವಿಟ್ ಇಂಡಿಯಾ ಚಳುವಳಿ ಆಗಿಹೋಗಿದೆ. ಸ್ವಾತಂತ್ರ್ಯ ಲಭಿಸುವ ಎಲ್ಲ ಸೂಚನೆಗಳು ಸಿಕ್ಕಿವೆ. ಅಷ್ಟೇ ಅಲ್ಲ, ಭಾರತೀಯ ಉಪಖಂಡವು ಮುಂದೆ ನೂರಾರು ದೇಶೀಯ ಸಂಸ್ಥಾನಗಳ ಸಮೂಹವಾಗಿ ಮುಂದುವರೆಯುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪ್ರಜೆಗಳಿಗೆ ಸ್ವಾತಂತ್ರ್ಯವು ವಸಾಹತುಶಾಹಿಯಿಂದ ಮಾತ್ರವಲ್ಲ ರಾಜಪ್ರಭುತ್ವಗಳಿಂದಲೂ ಸಿಗುವಂತಿದೆ. ಅಂದರೆ ಎರಡು ರಾಜಕೀಯ ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆದಿವೆ. ಹಲವು ರಾಜರು, ಮಾಂಡಲಿಕರು, ಪಾಳೇಗಾರರಿಂದ ಆಳಿಸಿಕೊಳ್ಳುತ್ತಿದ್ದ ಪ್ರಜೆಗಳು ಮುಂದೆ ಪರಕೀಯರ ಆಡಳಿತಕ್ಕೂ ಸಿಕ್ಕಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರಷ್ಟೆ.

ಪ್ರಸ್ತುತ ರಾಜಕೀಯ ಸಂದರ್ಭವು ಇಡೀ ಭೂಪ್ರದೇಶವು ಒಂದು ಹೊಸ ರಾಷ್ಟ್ರಪ್ರಭುತ್ವವಾಗಿ ರೂಪುಗೊಳ್ಳುವ ಕೌತುಕವನ್ನು ಎದುರು ನೋಡುತ್ತಿದೆ. ಈ ರಾಷ್ಟ್ರಪ್ರಭುತ್ವವು ಪ್ರಜಾಪ್ರಭುತ್ವವನ್ನು ಹೊಸ ರಾಜಕೀಯ ಮಾದರಿಯಾಗಿ ಸ್ವೀಕರಿಸುವ ಸ್ಪಷ್ಟ ಚಿತ್ರ ಗೋಚರವಾಗುತ್ತಿದೆ. ಈ ಹೊಸ ರಾಷ್ಟ್ರಪ್ರಭುತ್ವದಲ್ಲಿ ವಸಾಹತುಶಾಹಿಯೂ ಇರುವುದಿಲ್ಲ, ದೇಶೀಯ ರಾಜಪ್ರಭುತ್ವಗಳೂ ಇರುವುದಿಲ್ಲ. ಮುಂದೆ ಬರುವುದು ಪ್ರಜಾಸರಕಾರ. ಪ್ರಜೆಗಳಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಹೊಸ ಸರಕಾರದ ಭಾಗವಾಗುವರು. ಇದಕ್ಕೆ ತೊಡಕುಗಳು ಇಲ್ಲವೆಂದಿಲ್ಲ. ಉಪಖಂಡವು ಇಂಡಿಯಾ ಮತ್ತು ಪಾಕಿಸ್ತಾನಗಳಾಗಿ ಒಡೆದುಕೊಳ್ಳುವ ಚಿತ್ರವೂ ಗಟ್ಟಿಯಾಗಿ ಕಟ್ಟಿಕೊಳ್ಳುತ್ತಿದೆ. ಮತ್ತೆ ಕೆಲವು ಸಂಸ್ಥಾನಗಳು ತಾವು ಇಂಡಿಯಾ ಅಥವಾ ಪಾಕಿಸ್ತಾನದ ಭಾಗಗಳಾಗಿರಲು ಬಯಸದೆ ಸ್ವತಂತ್ರವಾಗಿ ಮುಂದುವರೆಯುವ ಅಭೀಪ್ಸೆಯನ್ನು ವ್ಯಕ್ತಪಡಿಸುತ್ತಿವೆ.

ಇಂಡಿಯಾ ಎಂಬ ಹೊಸ ರಾಷ್ಟ್ರಪ್ರಭುತ್ವದ ಉದಯವು ಖಚಿತವಾಗಿದ್ದರೂ ಅದು ಇಂಥ ಹಲವು ತೊಡಕುಗಳನ್ನು ನಿವಾರಿಸಿಕೊಂಡೇ ಮುನ್ನಡೆಯಬೇಕಾಗಿದೆ. ಈ ಕ್ರಿಯೆಯಲ್ಲಿ ಜಯ ಮತ್ತು ಅಪಜಯಗಳ ಎರಡೂ ಸಾಧ್ಯತೆಗಳು ನಿಚ್ಚಳವಾಗಿವೆ. ಭೂಖಂಡವು ಇಂಡಿಯಾ ಮತ್ತು ಪಾಕಿಸ್ತಾನಗಳಾಗಿ ಹೋಳಾಗುವುದು ಖಚಿತವಾಗಿದೆ. ಮತ್ತೆ ಹೋಳಾಗುವುದು ಬೇಡ ಎಂಬ ಭಾವ ದಟ್ಟವಾಗುತ್ತಿದೆ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಚಿತ್ರಿಸುವುದು ಈ ಸಂಕೀರ್ಣ ರಾಜಕೀಯ ಸಂದರ್ಭವನ್ನು.

ಇತಿಹಾಸದ ಇಂಥ ದಟ್ಟವಾದ ಭಿತ್ತಿಯಿದ್ದರೂ ಒಂದು ಸಾಂಪ್ರದಾಯಕ ಐತಿಹಾಸಿಕ ಕಾದಂಬರಿಯನ್ನು ರಚಿಸುವುದು ಹಿರೇಮಠರ ಉದ್ದೇಶವಾಗಿದೆ ಎನಿಸುವುದಿಲ್ಲ. ಒಂದು ಗ್ರಾಮ ಸಮುದಾಯದೊಳಗೆ ಆಧುನಿಕ ಭಾರತೀಯ ಇತಿಹಾಸವು ಪ್ರವೇಶಿಸುವ ಪರಿ ಹಿರೇಮಠರ ಕಾದಂಬರಿಯ ಪ್ರಧಾನ ಆಶಯ. ಹೆಚ್ಚಿನ ಘಟನೆಗಳು ನಡೆಯುವುದು ಕೊಪ್ಪಳದ ಸಮೀಪದ ಬಸಾಪುರ ಎಂಬ ಕಾಲ್ಪನಿಕ ಗ್ರಾಮದಲ್ಲಿ. ಕೊಪ್ಪಳ, ಗುಲಬರ್ಗಾ, ಹೈದರಾಬಾದಿನವರೆಗೂ ಕಥೆ ವ್ಯಾಪಿಸಿಕೊಳ್ಳುತ್ತದೆ. ಆದರೆ ಅಲ್ಲಿ ನಡೆಯುವ ಘಟನೆಗಳೂ ಬಸಾಪುರದ ವ್ಯಕ್ತಿಗಳ ಸುತ್ತಲೇ ನಡೆಯುವಂಥ ವಿನ್ಯಾಸವನ್ನು ಕಾದಂಬರಿಕಾರರು ಕಟ್ಟಿದ್ದಾರೆ.

ಈ ಹೊಸ ಇತಿಹಾಸಕ್ಕೆ ಬಸಾಪುರ ತೆರೆದುಕೊಳ್ಳುವ ಬಗೆಯನ್ನು ಅದರೆಲ್ಲ ಬಹುಮುಖತೆಯಲ್ಲಿ, ಬಹುರೂಪತೆಯಲ್ಲಿ, ಅದರೆಲ್ಲ ಸೂಕ್ಷ್ಮತೆಯಲ್ಲಿ ಚಿತ್ರಿಸುವಲ್ಲಿ ಮಲ್ಲಿಕಾರ್ಜುನ ಹಿರೇಮಠರು ಸಫಲರಾಗಿದ್ದಾರೆ. ಈ ಸಮುದಾಯದಲ್ಲಿ ನಡೆಯುವ ವಿದ್ಯಮಾನಗಳ ಮೂಲಕವೇ ಹೈದರಾಬಾದಿನ ನಿಜಾಮನ ಆಡಳಿತ, ಭಾರತದ ಒಕ್ಕೂಟಕ್ಕೆ ಸೇರದೆ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲು ಮಾಡುವ ಹಟಮಾರೀ ಪ್ರಯತ್ನಗಳು, ಅದಕ್ಕಾಗಿ ಧರ್ಮವನ್ನು ರಾಜಕಾರಣದ ದಾಳವಾಗಿ ಬಳಸಿಕೊಳ್ಳುವ ರೀತಿ, ರಜಾಕಾರರ ಹಾವಳಿ ಇವೆಲ್ಲವನ್ನೂ ಕಾದಂಬರಿ ಗಮನಿಸುತ್ತ ಹೋಗುತ್ತದೆ.

ಈ ಇತಿಹಾಸದ ಪ್ರಮುಖ ಪಾತ್ರಧಾರಿಗಳು-ಮಹಾತ್ಮ ಗಾಂಧಿ, ಸುಭಾಷಚಂದ್ರ ಬೋಸ್, ನೆಹರೂ, ಸರದಾರ್ ಪಟೇಲ್, ಹೈದರಾಬಾದಿನ ನಿಜಾಮ ಮುಂತಾದವರು-ಈ ಕಥಾನಕದಲ್ಲಿ ನೇರವಾಗಿ ಕಾಣಿಸಿಕೊಳ್ಳುವುದಿಲ್ಲ. ಅವರ ವಿಚಾರಗಳು, ರಾಜಕಾರಣದ ಪರಿ ಇವೆಲ್ಲ ಬಸಾಪುರದ ಸಾಮಾನ್ಯ ಜನ ಕಂಡಂತೆ, ಕೇಳಿಸಿಕೊಂಡಂತೆ, ಅನುಭವಿಸಿದಂತೆ ಮತ್ತು ಅಷ್ಟು ಮಾತ್ರ ಕಥಾನಕದ ಮುನ್ನೆಲೆಯಲ್ಲಿದ್ದು, ಕಾಂಗ್ರೆಸ್ ರಾಜಕಾರಣ, ಸುಭಾಷಚಂದ್ರರ ಪ್ರಭಾವ, ನಿಜಾಮನ ಕಾರ್ಯಚಟುವಟಿಕೆ ಹಿನ್ನೆಲೆಯಲ್ಲಿವೆ.

ಆ ಕಾಲದ ರಾಜಕೀಯ ಎಷ್ಟು ತೀವ್ರವಾಗಿದೆ ಎಂದರೆ ಅದು ಬಸಾಪುರದಂಥ ದೂರದ ಹಳ್ಳಿಯ ಸಾಮಾನ್ಯ ಕುಟುಂಬಗಳನ್ನೂ ಸ್ಪರ್ಶಿಸಿಬಿಟ್ಟಿದೆ. ಅವರು ಅದಕ್ಕೆ ಒಂದಲ್ಲ ಒಂದು ರೀತಿ ಸ್ಪಂದಿಸಲೇಬೇಕಾಗಿದೆ. ಅವರಲ್ಲಿ ಯಥಾಸ್ಥಿತಿವಾದಿಗಳು, ಗಾಂಧಿವಾದಿಗಳು, ಸುಭಾಷರ ಪ್ರಭಾವಕ್ಕೆ ಒಳಗಾದವರು, ನಿಜಾಮನ ಪರವಾಗಿರುವವರು, ಅವನಿಗೆ ವಿರೋಧಿಗಳಾಗಿರುವವರು ಎಲ್ಲ ಸೇರಿದ್ದಾರೆ. ಇವರೆಲ್ಲರ ವೈವಿಧ್ಯಮಯ ಕ್ರಿಯೆ-ಪ್ರತಿಕ್ರಿಯೆಗಳಲ್ಲಿ ನಾಡಿನ ಇತಿಹಾಸವು ಅನಾವರಣಗೊಳ್ಳುವ ಬಗೆ ಗಮನಾರ್ಹವಾಗಿದೆ. ಮುಗ್ಧತೆ-ಪ್ರಬುದ್ಧತೆ-ಆದರ್ಶ-ಕುಟಿಲತೆ-ಕ್ರಾಂತಿಕಾರತೆ ಇವೆಲ್ಲ ಕೂಡಿದ ವರ್ಣಮಯ ಸನ್ನಿವೇಶಗಳಲ್ಲಿ ಆ ಕಾಲದ ಇತಿಹಾಸ ಮಿಂಚುತ್ತದೆ.

ಗ್ರಾಮೀಣ ಬದುಕಿನ ದೈನಿಕಗಳು ಮತ್ತು ಅಖಿಲಭಾರತೀಯ ರಾಜಕೀಯ ಚಟುವಟಿಕೆಗಳು ಮುಖಾಮುಖಿಯಾಗುತ್ತ ಆ ಮುಖಾಮುಖಿಯಲ್ಲಿ ಮನುಷ್ಯಸ್ವಭಾವದ ಹಲವು ಮುಖಗಳೂ ಅನಾವರಣಗೊಂಡು ಬರಹ ದಟ್ಟವಾಗುತ್ತದೆ. ಇತಿಹಾಸವನ್ನು ಕೇವಲ ದೇಶದ ಮಹಾನಾಯಕರ ಚಟುವಟಿಕೆಗಳ ನೆಲೆಯಲ್ಲಾಗಲೀ, ಸಿದ್ಧಾಂತಗಳ ಚೌಕಟ್ಟಿನ ನೆರವಿನಿಂದಾಗಲೀ ನೋಡದೆ ಎಲ್ಲವನ್ನೂ ಮನುಷ್ಯಾನುಭವದ ನೆಲೆಯಲ್ಲಿ ಗ್ರಹಿಸಿರುವುದರಿಂದ ದೈನಂದಿನ ಬದುಕಿನ ಲಯಗಳು ಮತ್ತು ಹೊಸ ಇತಿಹಾಸ ಸೃಷ್ಟಿಸುತ್ತಿರುವ ಹೊಸ ಒತ್ತಡಗಳು ಎರಡನ್ನೂ ಏಕತ್ರ ಹಿಡಿಯಲು ಲೇಖಕರಿಗೆ ಸಾಧ್ಯವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ನಿಜಾಮನ ಆಳ್ವಿಕೆಯಲ್ಲಿರುವ ತಮಗೆ ಸ್ವಾತಂತ್ರ್ಯ ಸಿಕ್ಕುವುದಿಲ್ಲವೇನೋ ಎಂಬ ಆತಂಕ ಬಸಾಪುರದ ಹಲವರನ್ನು ಬಾಧಿಸುತ್ತದೆ. ನಿಜಾಮನ ಆಡಳಿತವನ್ನು ಕೊನೆಗಾಣಿಸಿ ತಾವೂ ಸ್ವತಂತ್ರ ಭಾರತದ ಭಾಗವಾಗಬೇಕು ಎಂಬುದು ಅವರ ಆಶಯ. ಅದನ್ನು ಈಡೇರಿಸಿಕೊಳ್ಳಲು ಅವರು ಮಾಡುವ ಪ್ರಯತ್ನಗಳು, ನಡೆಸುವ ಹೋರಾಟಗಳು ಅವುಗಳಿಗೆ ಬಸಾಪುರದ ಒಳಗೆ ಮತ್ತು ಹೊರಗೆ ಎದುರಾಗುವ ಅಡ್ಡಿ-ಆತಂಕಗಳು ಇವುಗಳ ಸುತ್ತ ಕಾದಂಬರಿ ಬೆಳೆಯುತ್ತದೆ.

ಇತಿಹಾಸದ ಹಲವು ವ್ಯಕ್ತಿಗಳ ಪ್ರಸ್ತಾಪ ನೇರವಾಗಿಯೇ ಬರುತ್ತದೆ. ಇತರರು ಪರೋಕ್ಷವಾಗಿ ಪಾತ್ರಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಿ ಲೇಖಕರು ಸ್ವತಃ ಕಂಡು ಕೇಳಿದ ವ್ಯಕ್ತಿಗಳೂ ಇರಬಹುದು. ವಾಸ್ತವವನ್ನು ವಾಸ್ತವಿಕ ವಿವರಗಳಲ್ಲಿಯೇ ನಿರೂಪಿಸುವಲ್ಲಿ ಲೇಖಕ ಹಲವು ತೊಂದರೆಗಳನ್ನು, ಮುಜುಗರಗಳನ್ನು ಎದುರಿಸಬಹುದು. ಯಾವುದೇ ವಾಸ್ತವವಾದೀ ಬರಹಗಾರ ಎದುರಿಸುವ, ಬಗೆಹರಿಸಿಕೊಳ್ಳಬೇಕಾದ ಪ್ರಶ್ನೆ ಇದು.

ಇತಿಹಾಸದ ಉಳಿದೆಲ್ಲ ವಿವರಗಳನ್ನು ಹಾಗೆಯೇ ಇಟ್ಟುಕೊಂಡು ಒಂದು ಗ್ರಾಮಸಮುದಾಯವನ್ನು ಮತ್ತು ಅಲ್ಲಿನ ಪ್ರಜೆಗಳನ್ನು ಕಾಲ್ಪನಿಕವಾಗಿ ಚಿತ್ರಿಸಲು ಹಿರೇಮಠರಿಗೂ ಅದೇ ಕಾರಣಗಳಿರಬಹುದು. ಆದರೆ ಬಸಾಪುರ ಕಾಲ್ಪನಿಕ ಹಳ್ಳಿಯಾಗಿದ್ದರೂ ಅದೊಂದು ಮಿನಿ ಇಂಡಿಯಾ ಎಂದೇ ಭಾಸವಾಗುತ್ತದೆ. ಇಲ್ಲಿನ ಆಡಳಿತ ದೇಸಾಯಿ ಅವರ ಕೈಯಲ್ಲಿದೆ. ಅವರ ಸಹಾಯಕರಾಗಿ ಗೌಡ-ಪಾಟೀಲರಿದ್ದಾರೆ. ಅವರು ನಿಜಾಮನ ಆಡಳಿತಕ್ಕೆ ನಿಷ್ಠರಾಗಿದ್ದಾರೆ. ಸ್ವಾತಂತ್ರ್ಯ ಚಳುವಳಿಯನ್ನು ಅನುಮಾನದಿಂದ, ಸಿನಿಕತನದಿಂದ ನೋಡುತ್ತಿದ್ದಾರೆ. ತಮ್ಮ ಪ್ರಜೆಗಳನ್ನು, ಅದರಲ್ಲೂ ಯುವಕರನ್ನು, ಚಳುವಳಿಗಳಿಂದ ದೂರವಿಡಲು ಅವರು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ನಿಜಾಮನ ಆಳ್ವಿಕೆಯ ಮುಂದುವರಿಕೆಯಲ್ಲಿ ಮಾತ್ರ ತಮ್ಮ ಆಡಳಿತದ ಮುಂದುವರಿಕೆ ಸಾಧ್ಯ ಎಂಬುದು ಅವರಿಗೆ ಗೊತ್ತಿರುವುದರಿಂದ ಯಥಾಸ್ಥಿತಿಯನ್ನು ಕಾಯಲು ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಮುಂದೆ ನಿಜಾಮನ ಆಳ್ವಿಕೆ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಗುವಾಗ ಅದರ ಲಾಭವನ್ನು ಪಡೆಯುವ ವರ್ಗವೂ ಇದೇ ಎಂಬುದನ್ನು ಕಾದಂಬರಿಯು ವಿಷಾದದಿಂದ ಗಮನಿಸುತ್ತದೆ. ಇನ್ನು ಯಥಾಸ್ಥಿತಿಯೇ ಮುಂದುವರೆಯಬೇಕೆಂದು ಮುಗ್ಧವಾಗಿ ನಂಬಿದವರೂ ಅದನ್ನು ಪ್ರತಿಪಾದಿಸುವವರೂ ಅಲ್ಲಿದ್ದಾರೆ.

ಇದೇ ಗ್ರಾಮದಲ್ಲಿ ವಿರೂಪಾಕ್ಷಪ್ಪ ಮಾಸ್ತರ ಎಂಬ ಗಾಂಧಿವಾದಿಯೂ ಇದ್ದಾರೆ. ನಾಟಕಗಳ ಮೂಲಕವೂ ಅವರು ಜನಜಾಗೃತಿ ಮೂಡಿಸಲು ಪ್ರಯತ್ನಿಸುವವರು. ಅಹಿಂಸೆಯ ಕಟ್ಟಾ ಪ್ರತಿಪಾದಕರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿಜಾಮನನ್ನು ಎದುರಿಸಲು ಕೇವಲ ಅಹಿಂಸೆ ಸಾಕಾಗುವುದಿಲ್ಲ, ಹಿಂಸೆ ಅನಿವಾರ್ಯವಾದರೆ ಅದನ್ನು ಬಳಸಲು ಹಿಂದೆಗೆಯಬಾರದು ಎನ್ನುವ ಸುಭಾಷರ ಪ್ರಭಾವಕ್ಕೆ ಒಳಗಾಗುವವರೂ ರಜಾಕಾರರಿಗೆ ಎದುರಾಗಲು ತಮ್ಮದೇ ಸಂಘಟನೆಗಳನ್ನು ಹುಟ್ಟುಹಾಕುವವರೂ ಬಸಾಪುರದಲ್ಲಿ ಇದ್ದಾರೆ.

ನಿಜಾಮನನ್ನೂ, ರಜಾಕಾರರನ್ನೂ ನೇರವಾಗಿ ಬೆಂಬಲಿಸಿ ತಮ್ಮ ಊರಿನವರ, ಸಂಗಾತಿಗಳ ಮೇಲೆಯೇ ಹಿಂಸಾಚಾರಕ್ಕೆ ಸಿದ್ಧವಾಗಿರುವವರೂ ಅಲ್ಲೇ ಇದ್ದಾರೆ. ಹೀಗೆ ಆ ಕಾಲದ ಉಪಖಂಡದ ರಾಜಕೀಯ ಸಂದರ್ಭದ ವಿವಿಧ ಮಾದರಿಗಳು ಸಣ್ಣ ಪ್ರಮಾಣದಲ್ಲಿ ಬಸಾಪುರದಲ್ಲೇ ಕಾಣಿಸಿಕೊಳ್ಳುತ್ತವೆ. ಸ್ಥೂಲವಾಗಿ ಭಾರತ ಉಪಖಂಡದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಗಾತ್ರದಲ್ಲಿ ಕಿರಿದುಗೊಳಿಸಿ ಹಿರೇಮಠರು ತಮ್ಮ ಕಥನಕ್ಕೆ ಸ್ಥಳೀಯತೆಯನ್ನೂ ಅಖಿಲಭಾರತ ವ್ಯಾಪ್ತಿಯನ್ನೂ ಏಕಕಾಲದಲ್ಲಿ ತಂದುಬಿಡುತ್ತಾರೆ. ಹಿರೇಮಠರ ಬರಹವು ಕೇವಲ ಇತಿಹಾಸದ ವಿವರಗಳ ಒಣ ದಾಖಲೆಯಾಗದೆ ರಕ್ತಮಾಂಸ ತುಂಬಿದ ಮನುಷ್ಯ ಕಥನವಾಗುವುದು ಹೀಗೆ.

ಆ ಕಾಲದ ರಾಜಕೀಯ ಸಂಘರ್ಷವನ್ನು ದಾಖಲಿಸುವಾಗ ಏಕಾಕಾರದ ಮಾದರಿಗಳನ್ನು ಸೃಷ್ಟಿಸದೆ, ಒಂದು ಕುಟುಂಬದ, ಗ್ರಾಮದ ಮತ್ತು ದೇಶದ ಒಳಗೇ ಕಂಡುಬರುವ ಅಂತರ್ ವಿರೋಧಗಳನ್ನೂ, ಇಕ್ಕಟ್ಟು-ಬಿಕ್ಕಟ್ಟುಗಳನ್ನೂ ಗಮನಿಸಿರುವಲ್ಲಿ ಹಿರೇಮಠರ ಕಾದಂಬರಿಯ ಯಶಸ್ಸಿದೆ. ಉದಾಹರಣೆಗೆ ದೇಸಾಯರ ಮನೆಯಲ್ಲಿಯೇ ಭಿನ್ನ ಭಿನ್ನ ವಿಚಾರಧಾರೆಗಳ, ಮನಸ್ಥಿತಿಗಳ ವ್ಯಕ್ತಿಗಳನ್ನು ಕಾಣಬಹುದು. ಸ್ಥೂಲವಾಗಿ ಉಪಖಂಡದೊಳಗೆ ಕಾಣಿಸಿಕೊಳ್ಳುವ ಆಂತರಿಕ ಸಂಘರ್ಷಗಳ ಸೂಕ್ಷ್ಮ ಸ್ವರೂಪವೊಂದು ದೇಸಾಯಿಯವರ ಕುಟುಂಬದೊಳಗೇ ಅಂತಸ್ಥವಾಗಿರುವುದನ್ನು ಹಿರೇಮಠರ ಕಾದಂಬರಿ ಗಮನಿಸದೇ ಬಿಟ್ಟಿಲ್ಲ.

ದೇಸಾಯಿ ಅವರ ಹಿರಿಯ ಮಗನು ವಿಲಾಸಿಯೂ, ಉಡಾಳನೂ ಆಗಿದ್ದಾನೆ, ನಿಜ. ಆದರೆ ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸುವುದು, ತನ್ನ ಹೆಂಡತಿಯ ರಾಜಕೀಯ ನಿರ್ಧಾರಗಳನ್ನು ಬೆಂಬಲಿಸುವವನು ಅವನೇ. ದೇಸಾಯಿಯವರು ಕಟ್ಟಾ ಸಂಪ್ರದಾಯಸ್ಥರೂ, ಯಥಾಸ್ಥಿತಿವಾದಿಗಳೂ ಆಗಿದ್ದರೆ ಅವರ ಸೊಸೆ ಕೌಟುಂಬಿಕ ಗಡಿಗಳನ್ನು ಉಲ್ಲಂಘಿಸುತ್ತಾಳೆ. ಕಿರಿಯ ಮಗನು ಮೊದಮೊದಲು ತನ್ನ ಗೆಳೆಯರೊಡಗೂಡಿ ಚಳುವಳಿಯನ್ನು ಬೆಂಬಲಿಸುತ್ತಿದ್ದವನು ಕ್ರಮೇಣ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅದಕ್ಕೆ ವಿಮುಖನಾಗುತ್ತಾನೆ.

ದೇಶ ಸ್ವತಂತ್ರವಾಗಿ, ಪ್ರಜಾಪ್ರಭುತ್ವದ ಆಗಮನವಾಗುತ್ತಿದ್ದಂತೆ ಅದರ ಲಾಭ ಪಡೆಯುವದು ಅವನು ಮತ್ತು ಅವನಂಥವರು ಎಂಬ ವ್ಯಂಗ್ಯಕ್ಕೆ ಕಾದಂಬರಿ ಕುರುಡಾಗಿಲ್ಲ. ಹಾಗೆಯೇ ನಬಿಯು ನಿಜಾಮನ ಪರವಾಗಿ ಹೋರಾಡುವ ನಿಶ್ಚಯ ಮಾಡಿದರೆ ಅವನ ತಂದೆ ತಾಯಿಯರು ಸ್ವಾತಂತ್ರ್ಯ ಚಳುವಳಿಗಾರರನ್ನು ಬೆಂಬಲಿಸುತ್ತಾರೆ.ಒಮ್ಮೆ ಶಂಕರ ದಸ್ತಗಿರಿಯಾದಾಗ ಅವನನ್ನು ಬಿಡಿಸುವುದು ಮತ್ತು ಸುರಕ್ಷಿತ ತಾಣ ಸೇರಿಕೊಳ್ಳಲು ಸಹಾಯ ಮಾಡುವುದು ನಿಜಾಮನ ಸರಕಾರದ ಓರ್ವ ಮುಸಲ್ಮಾನ ಅಧಿಕಾರಿಯೇ. ಮುಂದೆ ಪರಿಸ್ಥಿತಿಯ ವಿಪರ್ಯಾಸದಿಂದ ಶಂಕರನು ಇದೇ ಅಧಿಕಾರಿಯನ್ನು ಕೊಂದು ತೀವ್ರವಾದ ಪಾಪಪ್ರಜ್ಞೆಯನ್ನು ಅನುಭವಿಸುತ್ತಾನೆ.

ಈ ಪಾಪಪ್ರಜ್ಞೆಯಿಂದ ಅವನನ್ನು ವಿಮೋಚಿಸುವುದು ಕೂಡ ಓರ್ವ ಓರ್ವ ಮುಸ್ಲಿಂ ಗುರುವೇ. ವಿರೂಪಾಕ್ಷಪ್ಪ ಮಾಸ್ತರರು ನಬಿಯನ್ನು ದಂಡಿಸುವುದು ಅವನೊಬ್ಬ ಮುಸ್ಲಿಂ ಎಂದಲ್ಲ. ನಾಟಕದ ಓರ್ವ ಪಾತ್ರಧಾರಿಯಾಗಿ ತನ್ನ ಔಚಿತ್ಯವನ್ನು ಮೀರಿದ್ದಕ್ಕಾಗಿ. ಮುಖ್ಯವಾದ ಮಾತೆಂದರೆ ಬಸಾಪುರದ ನಾಟಕ ಮಂಡಳಿಯಲ್ಲಿ ಮತ್ತು ಪ್ರೇಕ್ಷಕ ವರ್ಗದಲ್ಲಿ ಹಿಂದೂಗಳೂ ಮುಸ್ಲಿಮರೂ ಇದ್ದರು ಎನ್ನುವುದು. ಮುಗ್ಧತೆಯಿಂದ, ಅವಜ್ಞೆಯಿಂದ ಹೊಸ ತಿಳಿವಳಿಕೆಗೆ, ಪ್ರಬುದ್ಧತೆಗೆ ಚಲಿಸುವ ಹಲವು ಪಾತ್ರಗಳು ಇಲ್ಲಿವೆ. ಈ ಚಲನಶೀಲತೆ ಕಾದಂಬರಿಗೆ ಒಂದು ಬಗೆಯ ಲವಲವಿಕೆಯನ್ನು ತಾನಾಗಿ ತಂದುಬಿಟ್ಟಿದೆ. ಇನ್ನು ಶಂಕರ, ಶೇಖರ ಮುಂತಾದ ಯುವ ಉತ್ಸಾಹೀ ಚಳುವಳಿಗಾರರನ್ನೂ ಕಾದಂಬರಿಯು ಕೇವಲ ಆರಾಧನಾ ಭಾವದಲ್ಲಿ ಆದರ್ಶೀಕರಿಸದೆ ಅವರ ವೈಯಕ್ತಿಕ ಮಿತಿಗಳು, ತಳಮಳಗಳು, ಗೊಂದಲಗಳ ಸಮೇತ ಚಿತ್ರಿಸಿ ಸಮತೋಲನವನ್ನು ಕಾಯ್ದುಕೊಂಡಿದೆ.

ನಿಜಾಮನ ಆಳ್ವಿಕೆಯ ವಿರುದ್ಧದ ಚಳುವಳಿ, ರಜಾಕಾರರ ಹಾವಳಿಗಳನ್ನು ನಿರೂಪಿಸುವ ಹೆಚ್ಚಿನ ಬರಹಗಳು ಕೋಮುವಾದೀ ವಾಗ್ವಿಲಾಸಗಳಲ್ಲಿ ವಿಜೃಂಭಿಸುವುದೇ ಜಾಸ್ತಿ. ಇದಕ್ಕೆ ಅಪವಾದಗಳು ಇಲ್ಲದೇ ಇಲ್ಲ. ಮಾಸ್ತಿ, ಲಂಕೇಶ್, ಶಾಂತರಸರ ಕತೆಗಳಲ್ಲಿ ಒಟ್ಟೂ ಸಂದರ್ಭವನ್ನು ಅದರ ವಿವಿಧ ಮುಖಗಳಲ್ಲಿ ಹಿಡಿಯುವ ಹವಣಿಕೆ ಇರುವುದು ನಿಜ. ಆದರೆ ಹೆಚ್ಚಿನ ಕತೆ-ಪ್ರಬಂಧಗಳು ರಜಾಕಾರರ ಕ್ರೌರ್ಯವನ್ನು ಮತ್ತು ಅದರಿಂದ ತೊಂದರೆಗೊಳಗಾದವರ ಬವಣೆಗಳನ್ನು ಇಲ್ಲವೇ ಚಳುವಳಿಗಾರರ ಶೌರ್ಯವನ್ನು ಕೀರ್ತಿಸುವ ಏಕಮುಖೀ ನಿರೂಪಣೆಗಳಾಗಿವೆ.

ಈ ಹಿನ್ನೆಲೆಯಲ್ಲಿ ಹಿರೇಮಠರ ಕಾದಂಬರಿಯು ಸಾಧಿಸಿಕೊಂಡಿರುವ ಬಹುಮುಖತೆ, ಸಂಕರ‍್ಣತೆ ಮತ್ತು ಒಟ್ಟಂದಗಳು ಗಮನಾರ್ಹವಾಗಿವೆ. ತಮ್ಮ ಕಥನವು ಕೇವಲ ಹಿಂದೂ-ಮುಸ್ಲಿಂ ಸಂಘರ್ಷದ ವೈಭವೀಕರಣವಾಗಲು ಲೇಖಕರು ಬಿಟ್ಟಿಲ್ಲ. ನಿಜಾಮನ ಆಳ್ವಿಕೆಯೇ ಮುಂದುವರಿಯಬೇಕು ಎನ್ನುತ್ತಿದ್ದವರು ಮುಸ್ಲಿಮರು ಮಾತ್ರ ಅಲ್ಲ, ದೇಸಾಯಿ ಮುಂತಾದ ಹಿಂದೂಗಳೂ ಹೌದು ಎಂಬುದನ್ನು ಕಾದಂಬರಿ ಗಮನಿಸಿದೆ.

ಹಾಗೆಯೇ ನಿಜಾಮನ ಮತ್ತು ರಜಾಕಾರರ ವಿರೋಧಿಗಳು ಹಿಂದೂಗಳು ಮಾತ್ರ ಅಲ್ಲ, ಬಸಾಪುರದಲ್ಲೇ ಶಂಕರ ಮತ್ತು ಶೇಖರರ ಜೊತೆ ಇರುವ ರಹಮಾನ ಮತ್ತು ಮೈಯಲ್ಲಿ ‘ಮುಸ್ಲಿಂ ರಕ್ತ’ ಹರಿಯುತ್ತಿರುವ ಕುಮಾರ ಮುಂತಾದವರೂ ಇದ್ದಾರೆ. ಅಂದರೆ, ಹಿರೇಮಠರ ಕಾದಂಬರಿಯು ಆ ಸಂಘರ್ಷವನ್ನು ಎರಡು ಕೋಮುಗಳ ಸಂಘರ್ಷವನ್ನಾಗಿ ಕಾಣದೆ ಎರಡು ರಾಜಕೀಯ ಧೋರಣೆ-ನಂಬಿಕೆಗಳ ಸಂಘರ್ಷವನ್ನಾಗಿ ಕಂಡಿದೆ.

ರಜಾಕಾರರು ಮುಸ್ಲಿಮರಿರಬಹುದು, ಆದರೆ ಎಲ್ಲ ಮುಸ್ಲಿಮರೂ ರಜಾಕಾರರಲ್ಲ ಎಂದು ಕಾದಂಬರಿ ಧ್ವನಿಸುತ್ತಿರುವ ಹಾಗೆ ಕಾಣುತ್ತದೆ. ದೇಸಾಯಿ ಕುಟುಂಬದ ಒಳಗೇ ಆಂತರಿಕ ಸಂಘರ್ಷದ ನೆಲೆಗಳು ಕಾಣುವಂತೆ ನಬಿಯ ಕುಟುಂಬದ ಒಳಗೇ ವ್ಯಕ್ತಿಗಳ ನಡುವೆ ಪರಸ್ಪರ ವಿರೋಧಗಳಿವೆ. ವೈಚಾರಿಕ ನೆಲೆಯಲ್ಲೂ ಗಾಂಧಿ ಮತ್ತು ಸುಭಾಷರನ್ನು ಪರಸ್ಪರ ವಿರೋಧಿಗಳೆಂಬಂತೆ ಬಿಂಬಿಸದೆ ಪರಸ್ಪರ ಪೂರಕ ಶಕ್ತಿಗಳೆಂಬಂತೆ ಚಿತ್ರಿಸಲಾಗಿದೆ. ಚಳುವಳಿಯಲ್ಲಿ ಭಾಗವಹಿಸಿದವರಲ್ಲಿ ಕೇವಲ ಯುವ ಉತ್ಸಾಹಿಗಳು ಮಾತ್ರ ಇಲ್ಲ. ವಿವಿಧ ವಯೋಮಾನದವರು, ಜಾತಿಯವರು, ಹೆಣ್ಣುಮಕ್ಕಳು, ಗೃಹಿಣಿಯರು ಬೇರೆಬೇರೆ ಬಗೆಗಳಲ್ಲಿ ಚಳುವಳಿಗೆ ಬೆಂಬಲ ನೀಡುತ್ತಾರೆ ಮತ್ತು ಅದರ ಫಲವನ್ನು ಅನುಭವಿಸುತ್ತಾರೆ.

ವಸಾಹತುಶಾಹಿ ವಿರೋಧದ ಚಳುವಳಿಯ ವಿಶಾಲ ಹಿನ್ನೆಲೆಯಲ್ಲಿ ಹೈದರಾಬಾದ್ ವಿಮೋಚನೆಯ ಚಳುವಳಿಯನ್ನು ಮುನ್ನೆಲೆಗೆ ತಂದು ಆ ಸಂದರ್ಭದ ಬಗ್ಗೆ ಕಾದಂಬರಿ ತನ್ನ ಗಮನ ಹರಿಸಿದೆ. ಹಾಗೆ ಮಾಡುವಾಗ ಹೈದರಾಬಾದನ್ನು ಹಿನ್ನೆಲೆಯಲ್ಲಿಟ್ಟು ಬಸಾಪುರವನ್ನು ಮುನ್ನೆಲೆಗೆ ತಂದಿದೆ. ರಾಷ್ಟ್ರನಾಯಕರನ್ನು ಹಿನ್ನೆಲೆಯಲ್ಲಿಟ್ಟು ಸ್ಥಳೀಯ ನಾಯಕರು ಮತ್ತು ಚಳುವಳಿಗಾರರನ್ನು ಮುನ್ನೆಲೆಗೆ ತಂದಿದೆ. ಆ ಚಳುವಳಿಗಾರರನ್ನು ಪೂರ್ಣಪ್ರಮಾಣದ ರಾಜಕೀಯ ಕಾರ್ಯಕರ್ತರನ್ನಾಗಿ ಚಿತ್ರಿಸದೆ ಒಂದು ಗ್ರಾಮದ, ಕುಟುಂಬದ ಸದಸ್ಯರನ್ನಾಗಿ ಚಿತ್ರಿಸಿದೆ. ವಿಶಾಲವಾದ ರಾಜಕೀಯ ಪ್ರಶ್ನೆಗಳ ಎದುರು ಜನಸಾಮಾನ್ಯರ ನಿತ್ಯಜೀವನದ ಪ್ರಶ್ನೆಗಳನ್ನೂ ಇಟ್ಟಿದೆ. ಅಂದರೆ ರಾಜಕಾರಣ ಮಾತ್ರ ಈ ಕಾದಂಬರಿಯ ಏಕೈಕ ಆಸಕ್ತಿಯಾಗಿಲ್ಲ.

ಪ್ರೇಮ, ಕಾಮ, ದ್ವೇಷ, ಅಸೂಯೆ, ವಾತ್ಸಲ್ಯ, ಅಭಿಮಾನ, ತಿರಸ್ಕಾರ ಮುಂತಾದ ಸಂಗತಿಗಳಲ್ಲಿ ಮುಳುಗಿದ, ಜೀವನ ನಿರ್ವಹಣೆಗಾಗಿ ಸದಾ ಚಿಂತಿಸುವ, ದುಡಿಯುವ ಬಸಾಪುರದ ವ್ಯಕ್ತಿಗಳನ್ನು ದೇಶದ ರಾಜಕೀಯ ಆವರಿಸಿಕೊಳ್ಳುವ ಬಗೆ ಮುನ್ನೆಲೆಯಲ್ಲಿದ್ದರೂ ಒಟ್ಟಾರೆ ಜೀವನದ ದೈನಂದಿನ ಪ್ರಶ್ನೆಗಳಿಗೆ ಕಾದಂಬರಿ ಕುರುಡಾಗಿಲ್ಲ. ಈ ಚಳುವಳಿಯ ನಂತರವೂ, ದೇಶ ಸ್ವತಂತ್ರವಾದಮೇಲೂ, ರಾಜಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಬಂದಮೇಲೂ, ಗ್ರಾಮೀಣ ಭಾರತದ ದಿನನಿತ್ಯದ ಸಮಸ್ಯೆಗಳು ಇದ್ದೇ ಇರುತ್ತವೆ ಮತ್ತು ಹೊಸ ಪ್ರಭುತ್ವವು ಈ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬ ಪ್ರಶ್ನೆಗಳೂ ಉಳಿದುಕೊಳ್ಳುತ್ತವೆ.

ಪ್ರಭುತ್ವದ ಮಾದರಿ ಬದಲಾದೊಡನೆ ಜನಸಾಮಾನ್ಯರ ಸಮಸ್ಯೆಗಳು ಥಟ್ಟನೆ ಮಾಯವಾಗಿ ಬಿಡುತ್ತವೆ ಎಂಬ ರಮ್ಯ ಆಶಾವಾದವನ್ನೇನೂ ಈ ಕಾದಂಬರಿ ಇಟ್ಟುಕೊಂಡಿಲ್ಲ. ಹಳೆಯ ಪ್ರಭುತ್ವದ ಪಳೆಯುಳಿಕೆಗಳೇ ಹೊಸಪ್ರಭುತ್ವದ ಹೊಸನಾಯಕರಾಗಿ ಹೊಸ ವೇಷ ತೊಟ್ಟು ಬರಲಿದ್ದಾರೆ ಎಂಬ ಮುನ್ಸೂಚನೆಯನ್ನು ಕಾದಂಬರಿ ನೀಡುತ್ತದೆ. ಅಷ್ಟೇ ಅಲ್ಲ. ಕಾಲದ ಅನಂತ ಪ್ರವಾಹದಲ್ಲಿ ಇದು ಕೇವಲ ಒಂದು ಘಟ್ಟ. ಈ ಘಟ್ಟವು ಹಿಂದೆ ಸರಿದು ಕಾಲ ಮುಂದೆ ಚಲಿಸುತ್ತಲೇ ಇರುತ್ತದೆ. ಈ ಘಟ್ಟದಲ್ಲಿ ನಾವು ಮಾಡಬೇಕಾದುದನ್ನು ನಾವು ಮಾಡಲೇಬೇಕು ಎಂಬ ತಾತ್ವಿಕತೆ ಒಟ್ಟೂ ಕಾದಂಬರಿಗೆ ಮತ್ತೊಂದೇ ಆಯಾಮವನ್ನು ಧಾರಣೆ ಮಾಡಿಬಿಡುತ್ತದೆ.

ವಾಸ್ತವಿಕ ವಿವರಗಳಿಂದ ಇಡುಕಿರಿದಿರುವ ತಮ್ಮ ಕಥಾನಕವನ್ನು ಒಂದು ನಿರ್ದಿಷ್ಟ ಕಾಲ ದೇಶಗಳ ಚೌಕಟ್ಟಿನಲ್ಲಿ ಕಟ್ಟಿದ್ದರೂ ಅದಕ್ಕೊಂದು ಸಾರ್ವಕಾಲಿಕ ನೆಲೆಯನ್ನು ಕಲ್ಪಿಸಲು ಲೇಖಕರು ಯೋಜಿಸಿಕೊಂಡಿರುವ ಉಪಕ್ರಮಗಳೂ ಅರ್ಥಪೂರ್ಣವಾಗಿವೆ. ಉಪಖಂಡದ ಒಳಗೆ ಅಲ್ಲಿನ ಮನುಷ್ಯರ ನಡುವೆಯೇ ಹುಟ್ಟಿದ ಸಂಘರ್ಷಗಳನ್ನು ಅವರು ದಾಯಾದಿಗಳ ನಿತ್ಯ ಕಲಹವೆಂಬಂತೆ ನೋಡಿದ್ದಾರೆ. ಈ ದೃಷ್ಟಿಯಿಂದ, ಈ ಕಾದಂಬರಿಯಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಮಹಾಭಾರತವು ಈ ದಾಯಾದಿ ಕಲಹಗಳಿಗೆ ಒಂದು ಆದಿಮ ರೂಪಕವೆಂಬಂತೆ ಗೋಚರವಾಗುತ್ತದೆ. ದ್ರೌಪದಿಯ ವಸ್ತ್ರಾಪಹರಣದ ಪ್ರಸ್ತಾಪವೂ ಮತ್ತೆ ಮತ್ತೆ ಆಗುತ್ತದೆ.

ಕಾದಂಬರಿಯ ಮೊದಲ ಅಧ್ಯಾಯದಲ್ಲೇ ಮಹಾಭಾರತವನ್ನು ಆಧರಿಸಿದ ನಾಟಕಪ್ರದರ್ಶನವೊಂದರ ವರ್ಣನೆ ಇದೆ. ಎಲ್ಲರೊಳಗೆ ಒಂದಾಗಿದ್ದ ನಬಿಯ ಮನಸ್ಸು ಅಸ್ವಸ್ಥಗೊಳ್ಳುವುದು ಈ ಸಂದರ್ಭದಲ್ಲಿಯೇ ಎಂಬುದು ಗಮನಾರ್ಹವಾಗಿದೆ. ಕ್ಷುಲ್ಲಕ ಜಗಳವೊಂದು ಅವನು ಸಮುದಾಯದಿಂದ ಬೇರ್ಪಡುವುದಕ್ಕೆ ಕಾರಣವಾಗುತ್ತದೆ. ತನ್ನ ದ್ವೇಷ ರೋಷಗಳಿಗೆ ಒಂದು ಸೈದ್ಧಾಂತಿಕ ರೂಪ ಕೊಡಲೋ ಎಂಬಂತೆ ಅವನು ಕಟ್ಟಾ ಕೋಮುವಾದಿಯಾಗಿ ನಿಜಾಮನ ಆಳ್ವಿಕೆಯ ಸಮರ್ಥಕನಾಗುತ್ತಾನೆ ಮತ್ತು ತನ್ನ ಬದಲಾದ ನೆಲೆಯನ್ನು ಸಮರ್ಥಿಸಿಕೊಳ್ಳಲು ಧರ್ಮವನ್ನು ತನಗೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳಲು ಆರಂಭಿಸುತ್ತಾನೆ. ತೀರಾ ವೈಯಕ್ತಿಕವಾದ ಅಸಮಾಧಾನಕ್ಕೆ ಈಗ ಧಾರ್ಮಿಕ ಲೇಪವನ್ನು ಹಚ್ಚುತ್ತಾನೆ.

ಓರ್ವ ಮುಸಲ್ಮಾನನಾಗಿ ನಿಜಾಮನನ್ನು ಸಮರ್ಥಿಸುವುದು, ಹೈದರಾಬಾದನ್ನು ಇಸ್ಲಾಂ ದೇಶವನ್ನಾಗಿ ಮಾಡಲು ಪ್ರಯತ್ನಿಸುವುದು ತನ್ನ ಕರ್ತವ್ಯವೆಂಬ ನಂಬಿಕೆಯನ್ನು ರೂಢಿಸಿಕೊಳ್ಳಲು ತೊಡಗುತ್ತಾನೆ. ರಜಾಕಾರರು ಮತ್ತು ಸ್ವಾತಂತ್ರ್ಯ ಚಳುವಳಿಗಾರರ ನಡುವಣ ಕಲಹವನ್ನು ಧರ್ಮಯುದ್ಧವೆಂದು ಸಾರುತ್ತಾನೆ. ಹೀಗೆ ನಂಬಿದ ಮುಸಲ್ಮಾನರು ಅವನ ಬೆನ್ನಿನ ಹಿಂದೆ ಹಲವರಿದ್ದಾರೆ. ರಾಜಕಾರಣಕ್ಕೆ ಧರ್ಮವನ್ನು ಎಳೆದು ತಂದು ಕೋಮುವಾದವನ್ನು ಒಂದು ಸಿದ್ಧಾಂತದ ಮಟ್ಟಕ್ಕೆ ಏರಿಸುವ ಧರ್ಮಗುರುಗಳು ಮತ್ತು ರಾಜಕಾರಣಿಗಳ ಪ್ರಸ್ತಾಪ ಕಾದಂಬರಿಯಲ್ಲಿ ಸ್ಪಷ್ಟವಾಗಿದೆ. ಆದರೆ ಎಲ್ಲ ಮುಸಲ್ಮಾನರೂ ಹಾಗಿಲ್ಲ ಎಂಬುದನ್ನು ಹಲವು ಪಾತ್ರಗಳ, ಸನ್ನಿವೇಶಗಳ ಮೂಲಕ ಲೇಖಕರು ನಿರೂಪಿಸುತ್ತ ಹೋಗಿದ್ದಾರೆ.

ನಿಜಾಮನ ಆಳ್ವಿಕೆಯನ್ನು ಸಮರ್ಥಿಸುವವರಲ್ಲಿ ಹಿಂದೂಗಳೂ ಇದ್ದರು ಎಂಬುದನ್ನು ಗಮನಿಸಿದಾಗ ಈ ರಾಜಕೀಯ ಸಂದರ್ಭಕ್ಕೆ ಕೋಮುವಾದವನ್ನೂ ಮೀರಿದ ಮುಖಗಳು ಇರುವುದು ಗೋಚರವಾಗುತ್ತದೆ. ಹಿಂದೂಗಳು ಮತ್ತು ಮುಸ್ಲಿಮರು ಒಂದು ಸಮುದಾಯವಾಗಿ ಬಸಾಪುರದಲ್ಲಿ ಬಾಳುತ್ತಿದ್ದ ಕ್ರಮವನ್ನು ಕಾದಂಬರಿ ಹಲವು ವಿವರಗಳಲ್ಲಿ ಕಾಣಿಸುತ್ತ ಹೋಗಿದೆ. ಬಸಾಪುರವು ಹಿಂದೂಗಳು ಮತ್ತು ಮುಸಲ್ಮಾನರು ಎಂದು ಒಡೆದುಕೊಂಡಿಲ್ಲ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕೂಡ ಇಂಥ ದ್ವಿದಳ ವಿಭಜನೆ ಕಾಣುವುದಿಲ್ಲ.

ನಿಜಾಮನ ಸಮರ್ಥಕರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಇರುವಂತೆ ಅವನ ವಿರೋಧಿಗಳಲ್ಲೂ ಎರಡೂ ಧರ್ಮಕ್ಕೆ ಸೇರಿದವರು ಇದ್ದಾರೆ ಎಂಬುದು ಲೇಖಕರು ಇತಿಹಾಸ ಮತ್ತು ರಾಜಕಾರಣವನ್ನು ಪರಿಭಾವಿಸಿರುವ ಬಗೆಯನ್ನೂ ಸೂಚಿಸುವಂತಿದೆ. ಅಷ್ಟೇ ಅಲ್ಲ, ನಬಿ ಕೂಡ ಹುಟ್ಟಾ ಕೋಮುವಾದಿಯಲ್ಲ. ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ಕೋಮುವಾದಿಯಾಗಲು ಆ ರಾಜಕೀಯ ಸಂದರ್ಭವೂ ತನ್ನ ಕಾಣಿಕೆಯನ್ನು ಸಲ್ಲಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಇನ್ನು ಶಂಕರನ ಕುಟುಂಬ ಮತ್ತು ಅವನ ದೊಡ್ಡಪ್ಪನ ಕುಟುಂಬಗಳ ನಡುವಣ ದಾಯಾದಿ ಕಲಹವು ಧರ್ಮ-ಧರ್ಮಗಳ ನಡುವಣ ಕಲಹವೇನೂ ಅಲ್ಲವಷ್ಟೆ. ಅವರೆಲ್ಲ ಒಂದು ಕುಟುಂಬದವರೇ ಆಗಿದ್ದವರಲ್ಲವೆ? ಎಲ್ಲ ಕಲಹಗಳಿಗೆ ಧರ್ಮ ಮತ್ತು ರಾಜಕಾರಣಗಳೇ ಕಾರಣವಾಗಬೇಕಿಲ್ಲವಷ್ಟೆ. ಅಂದರೆ ಲೇಖಕರು ಮನುಷ್ಯ-ಮನುಷ್ಯ ನಡುವಣ ಕಲಹಗಳಿಗೆ ಮನುಷ್ಯನ ಸ್ವಭಾವದಲ್ಲಿರುವ ಏನೋ ಒಂದು ಕಾರಣವಾಗಿರಬಹುದು ಎಂದು ಪಿಸುದನಿಯಲ್ಲಿ ಸೂಚಿಸುತ್ತಿರುವಂತಿದೆ.

ನಬಿಯಂಥ ನವಕೋಮುವಾದಿಯ ವಿಚಾರ ಮತ್ತು ಕ್ರಿಯೆಗಳನ್ನು ಮತ್ತು ಅವುಗಳ ಪರಿಣಾಮಗಳನ್ನು ಲೇಖಕರು ನಿರ್ವಹಿಸಿರುವ ಬಗೆಯೂ ಧ್ವನಿಪೂರ್ಣವಾಗಿದೆ. ಉದಾಹರಣೆಗೆ ತನಗೆ ಅವಮಾನವಾಯಿತೆಂದು ಊರು ಬಿಟ್ಟು ಎಷ್ಟೋ ಸಮಯದ ನಂತರ ಕಟ್ಟಾ ಕೋಮುವಾದಿಯಾಗಿ ಬಸಾಪುರಕ್ಕೆ ಮರಳುವ ನಬಿಯು ಮಸೀದಿಯ ಸುತ್ತ ಕಾಂಪೌಂಡ್ ಕಟ್ಟಿಸಿ, ನಿಯಮಿತವಾಗಿ ಮಸೀದಿಗೆ ಭೇಟಿ ಕೊಡುತ್ತ, ದಿನಕ್ಕೆ ಐದು ಬಾರಿ ನಮಾಜು ಮಾಡಲು ಪ್ರಾರಂಭಿಸಿದಾಗ ಅವನ ಕುಟುಂಬದವರಿಗೆ ಮತ್ತು ಇನ್ನೂ ಕೆಲವರಿಗೆ ಆಶ್ರ‍್ಯಭರಿತ ಸಂತೋಷವೇ ಆಗುತ್ತದೆ.

ಊರವರಿಗೆ ಇದರಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ಆದರೆ ಹಿಂದೆಂದೂ ಇಲ್ಲದೆ ಮಸೀದಿಗೆ ಲೌಡ್ ಸ್ಪೀಕರ್ ಬಂದಾಗ ಸೋಜಿಗವಾಗುತ್ತದೆ: ‘ಈ ಹಿಂದೆ ಸಂಗಯ್ಯನ ಚಹಾದಂಗಡಿಯಲ್ಲಿ ಫೋನೋಗ್ರಾಮ್ ಬಂದಾಗಲೂ ಹೀಗೇ ಸಡಗರವಾಗಿತ್ತು. ಹುಡುಗರು ಹುಪ್ಪಡಿ ಮುದಕರು ಹೊರಗ ನಿಂತು ಗಾನಾ ಕೇಳಿದರೆ, ದುಡ್ಡು ದುಗ್ಗಾಣಿಯವರು ಚಹಾದಂಗಡಿಯಲ್ಲಿ ಮಿರ್ಚಿ ಭಜಿ ತಿನ್ನುತ್ತಾ ಗಾನಾ ಸವಿಯೋರು. ಲೌಡ್ ಸ್ಪೀಕರು ಈಗ ಇಂಥದೇ ಸೋಜಿಗವನ್ನು ತಂದಿತ್ತು.

ಬಸವಣ್ಣನ ಗುಡಿಯಲ್ಲಿ ನಸುಕಿಲೆ ಭಜನಿ ಮಾಡುತ್ತಿದ್ದ ಮ್ಯಾಳದವರೂ ಕೂಡ ಸಂಜೀಗೆ ಕಟ್ಟೀಗೆ ಕೂತು ತಾವೂ ಎಲ್ಲಾರೂ ಪಟ್ಟಿ ಹಾಕಿ ಇಂಥದ್ದೊಂದು ಲೌಡಸ್ಪೀಕರ ಗುಡಿಗೆ ಹಾಕಿದರೆ ಹ್ಯಾಗೆ ತಮ್ಮ ಭಜನಿಯನ್ನೂ ಊರೆಲ್ಲಾ ಕೇಳಬಹುದು ಅನಿಸಿ ಕಾರ್ಯೋನ್ಮುಖರಾದರು. ಈಗ ಊರಲ್ಲಿ ಮುಂಜಾನೆ ಏಳತಿದ್ದಂತೆ ಲೌಡಸ್ಪೀಕರಗಳಲ್ಲಿ ಒಂದು ದಿಕ್ಕಿನಿಂದ ನಮಾಜು ಇನ್ನೊಂದು ದಿಕ್ಕಿನಿಂದ ಭಜನಿ ಏಕಕಾಲಕ್ಕೆ ಸುರು ಆಗಿ ಊರೆಲ್ಲ ಭಕ್ತಿಯ ಭರಪೂರದಲ್ಲಿ ಹರೀತಿದೆ’.

ಧರ್ಮನಿಷ್ಠೆಯ ಬದಲಾದ ಸ್ವರೂಪದಲ್ಲಿ ಆಧುನಿಕ ಭಾರತದ ಹೊಸ ಸಂಘರ್ಷಗಳ ಸ್ವರೂಪ ಹೇಗಿರಬಹುದು ಎಂಬ ಮುನ್ಸೂಚನೆಯನ್ನು ಮೇಲಿನ ಪ್ರಸಂಗವು ಲಘುಧಾಟಿಯಲ್ಲೇ ನೀಡುವಂತಿದೆ. ಹಾಗೆಂದು ನಿಜವಾದ ಧರ್ಮನಿಷ್ಠರು ಸಂಪೂರ್ಣವಾಗಿ ಕಾಣೆಯಾಗಿದ್ದಾರೆ ಎಂದೇನೂ ಕಾದಂಬರಿಯು ಸಾಧಿಸಹೊರಡುವುದಿಲ್ಲ. ಉದಾಹರಣೆಗೆ ಈ ಕಾದಂಬರಿಯ ಇಬ್ರಾಹಿಂ ಸಾಹೇಬರು ಧರ್ಮ, ಅದರ ಅನುಷ್ಠಾನ, ಧಾರ್ಮಿಕ ಕರ್ತವ್ಯ ಮುಂತಾದ ಕಲ್ಪನೆಗಳನ್ನು ವ್ಯಾಖ್ಯಾನಿಸುವುದಕ್ಕೂ ಕೋಮುವಾದಿ ಸಂಘಟನೆಗಳ ವಕ್ತಾರನೆಂಬಂತೆ ನಬಿಯು ಮಾತನಾಡುವ ರೀತಿಗೂ ಇರುವ ವ್ಯತ್ಯಾಸಗಳನ್ನು ಕಾದಂಬರಿ ಗಮನಿಸಿದೆ.

ಈ ದೃಷ್ಟಿಯಿಂದ ಕಾದಂಬರಿಯ ಇಪ್ಪತ್ತೈದನೆಯ ಅಧ್ಯಾಯವು ಲೇಖಕರ ಜೀವನದೃಷ್ಟಿ ಮತ್ತು ಒಟ್ಟಾರೆ ಕಾದಂಬರಿಯ ದರ್ಶನಕ್ಕೆ ಮಹತ್ವದ ಸೂಚನೆಯಾಗಿದೆ ಎಂದು ಅನ್ನಿಸದಿರದು. ನಿಜಾಮನಪ್ರಧಾನ ಸಲಹೆಗಾರ ರಜವಿಯ ಮಾತುಗಳ ಗಿಳಿಪಾಠವನ್ನು ಒಪ್ಪಿಸುತ್ತ ನಬಿಯು ತಾವು ಮಾಡುತ್ತಿರುವುದು ‘ಜಿಹಾದ್’ ಎಂದು ಘೋಷಿಸುತ್ತಾನೆ. ಅಂದರೆ ಧರ್ಮವನ್ನು ಉಳಿಸೋದಕ್ಕಾಗಿ ಪವಿತ್ರ ಯುದ್ಧವನ್ನು ಮಾಡೋದು. ಓರ್ವ ಮುಸಲ್ಮಾನನಾಗಿ ಮುಸಲ್ಮಾನ ದೊರೆಯನ್ನು ರಕ್ಷಿಸಿಕೊಳ್ಳುವುದು, ಇಸ್ಲಾಂ ಪ್ರಭುತ್ವವನ್ನು ಸ್ಥಾಪಿಸುವುದು ತನ್ನ ಕರ್ತವ್ಯವೆಂದು ಕೋಮುವಾದಿ ಗುರುಗಳಿಂದ ನಬಿ ಪ್ರಭಾವಿತನಾಗಿದ್ದಾನೆ.

ಇಬ್ರಾಹಿಂ ಸಾಹೇಬರು ಹೇಳುತ್ತಾರೆ: ‘ಜಿಹಾದ್ ಅಂದರೆ ಪವಿತ್ರ ಯುದ್ಧ ಖರೆ. ಅದು ನಮ್ಮೊಳಗಿನ ಹಾವಳಿ ವಿರುದ್ಧ, ಸೈತಾನನ ವಿರುದ್ಧ ಹೋರಾಡೋದು ಅಂತ, ಜಿಹಾದ್ ಅಂದರ ಹಿಂಸಾಚಾರ ನಡೆಸು ಅಂತ ಅರ್ಥ ಅಲ್ಲ. ಜಿಹಾದ್ ಅಂದ್ರ ನಿರಕ್ಷರತೆ, ಕ್ರೌರ್ಯ, ದಾರಿದ್ರ್ಯದ ವಿರುದ್ಧ ಹೋರಾಡೋದು’. ‘ನಿಮಗ ನಿಜಾಮರು ಸಾರ್ವಭೌಮರಾಗೋದು ಇಷ್ಟ ಇದೆಯೊ ಇಲ್ಲೊ?’ ಎಂದು ನಬಿ ಪ್ರಶ್ನಿಸಿದರೆ ಇಬ್ರಾಹಿಂ ಸಾಹೇಬರು ಹೀಗೆ ಉತ್ತರಿಸುತ್ತಾರೆ: ‘ಅಲ್ಲಾ ಒಬ್ಬನೇ ಸಾರ್ವಭೌಮ. ಸೂರ್ಯನಿಗೆ ಬೆಳಕನ್ನ, ಚಂದ್ರನಿಗೆ ಹೊಳಪನ್ನ ನೀಡುವ ಖುದಾನ ಗುಣಗಾನ ಮಾಡೋಣ’.

ಹಿರೇಮಠರ ಕಾದಂಬರಿಯ ಶೀರ್ಷಿಕೆಗೆ ಹೀಗೆ ಬಹುಧ್ವನಿ ಆವಾಹಿತವಾಗುತ್ತದೆ. ಕಾದಂಬರಿಯು ವರ್ಣಿಸುವುದು ಕೇವಲ ರಜಾಕಾರರ ‘ಹಾವಳಿ’ ಯನ್ನಲ್ಲ. ಅದನ್ನು ಕಾದಂಬರಿ ಮರೆಮಾಚುವುದಿಲ್ಲ. ಆ ಹಾವಳಿಯು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದ ಒಂದು ಉಪಫಲ. ಆದರೆ ಪ್ರತಿಯೊಬ್ಬ ಮನುಷ್ಯ, ಸಮುದಾಯ, ಸಮಾಜ ಮತ್ತು ರಾಷ್ಟ್ರಗಳು ಕಾಲದ ಪ್ರವಾಹದಲ್ಲಿ ಹಲವು ಬಗೆಯ ಹಾವಳಿಗಳನ್ನು ಎದುರಿಸುತ್ತಲೇ ಹೋಗಬೇಕಾಗುತ್ತದೆ.

ಕೊನೆಯ ಪಕ್ಷ ಇತಿಹಾಸದಿಂದ ಕೆಲವು ಮೂಲಭೂತ ಪಾಠಗಳನ್ನು ಕಲಿಯಬೇಕಾಗುತ್ತದೆ. ಹಾಗೆ ನಾವು ಸರಳವಾಗಿ, ಸುಲಭವಾಗಿ ಪಾಠ ಕಲಿಯುವುದಿಲ್ಲ ಎಂಬ ನಿಷ್ಠುರ ಸತ್ಯವನ್ನೂ ಕಾದಂಬರಿ ಧ್ವನಿಸುವಂತಿದೆ. ಮಹಾಭಾರತದ ನೆನಪು ಶಂಕರನ ಕುಟುಂಬವರ್ಗದೊಳಗಣ ದಾಯಾದಿ ಕಲಹವನ್ನು ತಡೆಯುವುದಿಲ್ಲ. ಹೀಗೆ ‘ಹಾವಳಿ’ ಎಂಬ ಕಲ್ಪನೆಯನ್ನೇ ಸಮಸ್ಯಾತ್ಮಕಗೊಳಿಸಿ ಹಿರೇಮಠರ ಕಾದಂಬರಿಯು ದಟ್ಟವಾದ ಅನುಭವವನ್ನು ಕೊಡುತ್ತದೆ.

ಹಾವಳಿಯ ಬಹಿರ್ಮುಖತೆಯನ್ನು ಮಾತ್ರ ವಿಜೃಂಭಿಸದೆ ಅದನ್ನೊಂದು ಸಾರ್ವಕಾಲಿಕ ಆಂತರಂಗಿಕ ನೈತಿಕ ಸಂಘರ್ಷದ ಸಂಗತಿಯನ್ನಾಗಿಯೂ ಪರಿಭಾವಿಸಬೇಕು ಎಂಬುದು ಕಾದಂಬರಿಯ ಒಟ್ಟಾರೆ ಆಶಯವೆನ್ನಬಹುದು. ಸ್ವಾತಂತ್ರ್ಯ ಚಳುವಳಿಯನ್ನು ಕುರಿತು ಕನ್ನಡದಲ್ಲಿ ಹಲವಾರು ಕತೆ-ಕಾದಂಬರಿಗಳು ಪ್ರಕಟವಾಗಿವೆ. ಈ ಪರಂಪರೆಯಲ್ಲೂ ಹಿರೇಮಠರ ‘ಹಾವಳಿ’ ಗೆ ಒಂದು ವಿಶಿಷ್ಟ ಸ್ಥಾನವಿದೆ. ಹಿಂಸೆಯ ಅನ್ಯ ಮೂಲವನ್ನು ಹುಡುಕುವುದು ಸುಲಭ. ನಮ್ಮೊಳಗೇ ಇರುವ ಹಿಂಸೆಯ ಸಾಧ್ಯತೆಗಳನ್ನು ಅರಿತಾಗ, ಅದನ್ನು ಎದುರಿಸಿ ಅದರಿಂದ ವಿಮೋಚನೆ ಪಡೆದಾಗ ಮಾತ್ರ ನಿಜವಾದ ಸ್ವಾತಂತ್ರ್ಯವನ್ನು ಪಡೆಯಬಹುದು ಎಂದು ಹಿರೇಮಠರ ಕಾದಂಬರಿ ಸೂಚಿಸುತ್ತಿದೆ.

ಒಬ್ಬ ವ್ಯಕ್ತಿಯ ಅಥವಾ ಗುಂಪಿನ ವಿಕೃತಿಗಳಿಗೆ ಇಡೀ ಸಮುದಾಯವನ್ನು ಹೊಣೆ ಮಾಡುವುದೂ ಹಿಂಸೆಯ ಮತ್ತೊಂದು ಕರಾಳ ರೂಪವೇ. ಕೋಮುವಾದೀ ಕಥನಗಳು ಮಾಡುವುದೇ ಅದನ್ನು. ಇಂಥ ಅಪಾಯದಿಂದ ತಪ್ಪಿಸಿಕೊಂಡಿರುವುದು ಹಿರೇಮಠರ ಕಾದಂಬರಿಯ ಹೆಗ್ಗಳಿಕೆಯಾಗಿದೆ. ಹಾಗೆಂದು ಎಲ್ಲವನ್ನೂ ಸಪಾಟಾಗಿ ಸಮನ್ವಯಗೊಳಿಸುವ, ಸಮತೋಲನಗೊಳಿಸುವ ಸರಳ-ಸುಲಭ ‘ರಾಜಕೀಯವಾಗಿ ಸರಿ’ ಯಾದ ಮಾರ್ಗವನ್ನೂ ಅವರು ತುಳಿದಿಲ್ಲ. ಈ ಎಲ್ಲ ಕಾರಣಗಳಿಂದ ‘ಹಾವಳಿ’ಗೆ ಕನ್ನಡ ಕಾದಂಬರಿ ಪರಂಪರೆಯಲ್ಲಿ ಒಂದು ಮಹತ್ವದ ಸ್ಥಾನ ಖಂಡಿತಾ ಇದೆ.

‍ಲೇಖಕರು Admin

September 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: