ಒಂದು ಕವನ ಮುಗಿಯಿತೆಂದು ನನಗೆ ಹೇಗೆ ಗೊತ್ತಾಗುವುದು?

ಅಹಲ್ಯಾ ಬಲ್ಲಾಳ್

ಅಹಲ್ಯಾ ಬಲ್ಲಾಳ್ ಉಡುಪಿ ಮೂಲದವರು, ಈಗ ಮುಂಬಯಿ ನಿವಾಸಿ. ಕಂಠದಾನ, ಅನುವಾದ ಇತ್ಯಾದಿಯಾಗಿ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ, ಸಂಗೀತ, ನೃತ್ಯ, ರಂಗಭೂಮಿ, ಅಭಿನಯ ಇವುಗಳಲ್ಲಿ ಆಸಕ್ತಿ. ಪತ್ರಿಕೆಗಳಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬಿಡಿ ಲೇಖನಗಳನ್ನು ಬರೆದಿದ್ದಾರೆ. ಕಿರುತೆರೆಯಲ್ಲಿ ನಿರ್ಮಾಣ ಸಹಾಯಕಿಯಾಗಿ, ಅಭಿನೇತ್ರಿಯಾಗಿ ಅಷ್ಟಿಷ್ಟು ಅನುಭವ. ಡಾ. ಶ್ರೀಪಾದ್ ಭಟ್ ನಿರ್ದೇಶನದಲ್ಲಿ ಟ್ಯಾಗೋರ್ ಕತೆಗಳನ್ನು ಆಧರಿಸಿದ ‘ಅವಳ ಕಾಗದ’ ಇತ್ತೀಚಿನ ಏಕವ್ಯಕ್ತಿ ರಂಗಪ್ರಸ್ತುತಿ.

ಈ ಅನುವಾದ ಸಂಚಿಕೆಗಾಗಿ ನೆಓಮಿ ಶೀಹಾಬ್ ನಯ್ ಅವರ ಕವಿತೆಯೊಂದನ್ನು ಇಂಗ್ಲಿಷಿನಿಂದ ಅನುವಾದಿಸಿದ್ದಾರೆ.

ನೆಓಮಿ ಶೀಹಾಬ್ ನಯ್ ಪ್ಯಾಲೆಸ್ತೇನಿಯನ್ ತಂದೆ, ಅಮೆರಿಕನ್ ತಾಯಿಗೆ ಜನಿಸಿದ ನೆಓಮಿ ಶಿಹಾಬ್ ನಯ್ ಕಾವ್ಯ, ಹಾಡು, ಕಾದಂಬರಿಗಳನ್ನು ಬರೆದಿದ್ದಾರೆ. ಅಮೆರಿಕಾದ ಟೆಕ್ಸಸ್‌ನಲ್ಲಿ ವಾಸವಾಗಿದ್ದಾರೆ. ‘ಅಲೆದಾಡುವ ಕವಿ’ ಎಂದೇ ಗುರುತಿಸಿಕೊಳ್ಳುವ ಈಕೆ ಲೇಖಕಿ ಹಾಗೂ ಸಂಪಾದಕಿ. ಈವರೆಗೆ 30 ಕವನ ಸಂಗ್ರಹಗಳ ಭಾಗವಾಗಿ ಕೆಲಸ ಮಾಡಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಹಾಗೂ ಯುವ ಜನರಿಗೆ ಸೃಜನಶೀಲ ಬರವಣಿಗೆಯನ್ನು ಕಲಿಸುತ್ತಾರೆ. ಸಂಸ್ಕೃತಿಗಳ ನಡುವಿನ ಸಾಮ್ಯ ಮತ್ತು ವ್ಯತ್ಯಾಸಗಳನ್ನು ಶೋಧಿಸುವುದು ಇವರ ನಿಡುಗಾಲದ ಆಸಕ್ತಿ. ಇವರ ಬಹುತೇಕ ಕವನಗಳು ನಿತ್ಯ ಜೀವನದ ಸಂಗತಿಗಳನ್ನು ಹೇಳುತ್ತವೆ ಮತ್ತು ಮಾನವೀಯತೆಯ ಭದ್ರ ಬುನಾದಿಯ ಮೇಲೆ ನಿಂತಿವೆ. ಅಮೆರಿಕ ಪೊಯೆಟ್ರಿ ಫೌಂಡೇಶನ್‌ನ Young People’s Poet Laureate (2019-2021) ಗೌರವವೂ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ.

ಒಂದು ಕವನ ಮುಗಿಯಿತೆಂದು ನನಗೆ ಹೇಗೆ ಗೊತ್ತಾಗುವುದು?

ಒಂದು ಕೋಣೆಯ ಬಾಗಿಲನ್ನು
ನೀವು ಸದ್ದಿಲ್ಲದೆ ಮುಚ್ಚಿದಾಗ
ಕೋಣೆ ಮುಗಿಯುವುದಿಲ್ಲ.

ಅದು ವಿರಮಿಸುತ್ತದೆ. ತಾತ್ಕಾಲಿಕವಾಗಿ.
ಕೊಂಚ ಕಾಲ ನಿಮ್ಮ ಸಾಂಗತ್ಯ ತಪ್ಪಿದ್ದಕ್ಕೆ
ಖುಷಿ ಅದಕ್ಕೆ.

ಈಗ ತನ್ನ ಬೂದು ಧೂಳ ಚೆಂಡುಗಳನ್ನು
ಬಾಚಿ ಮೂಲೆಯಿಂದ ಮೂಲೆಗೆ ಎಸೆಯಲು
ಅದರ ಬಳಿ ಸಮಯವಿದೆ.

ಈಗ ಮತ್ತೆ ತನ್ನೊಳಗೇ ಜಿನುಗುತ್ತದೆ ಅದು
ಅವಿಚಲಿತವೂ ಸ್ವಾಭಿಮಾನಿಯೂ.
ರೂಪರೇಖೆಗಳು ಇನ್ನಷ್ಟು ದೃಢವಾಗುತ್ತವೆ.

ನೀವು ಮರಳಿದಾಗ
ಆ ಪುಸ್ತಕ ರಾಶಿಯನ್ನು ಸ್ಥಳಾಂತರಿಸಬಹುದು,
ಗುಲಾಬಿಗಳಿಗೆ ಹೊಸ ನೀರನುಣಿಸಬಹುದು.

ನನಗನಿಸುತ್ತದೆ ನೀವು ಹೀಗೆ ನಿರಂತರವಾಗಿ
ಮಾಡುತ್ತಲೇ ಇರಬಹುದು. ಆದರೆ ಆ ನೀಲಿ ಕುರ್ಚಿಗೆ
ಈ ಕೆಂಪು ದಿಂಬು ತುಂಬ ಒಪ್ಪುತ್ತದೆ. ಅದಕ್ಕೇ ನೀವದನ್ನು

ಹಾಗೇ ಇರಗೊಡುವುದು ಒಳ್ಳೆಯದು.

ನಾನೇಕೆ ಅನುವಾದಿಸುತ್ತೇನೆ

ವೃತ್ತಿಸಂಬಂಧಿತ ಅನುವಾದಕ್ಕೆ ಅದರದ್ದೇ ಚೌಕಟ್ಟು ಇರುತ್ತದೆ: ಅದು ಒಂದು ಪರಿ.

ಅದನ್ನು ಬಿಟ್ಟು, ಕೆಲವೊಮ್ಮೆ ಯಾವುದೋ ಕವನ ತುಂಬಾ ಇಷ್ಟವಾದಾಗಲೋ, ಅಪರೂಪಕ್ಕೆ ಕತೆ ಇಷ್ಟವಾದಾಗಲೋ ಇದನ್ನು ಅನುವಾದಿಸಲು ನನ್ನಿಂದಾದೀತೇ ಎಂಬ ಕುತೂಹಲ. ಒಂದು ಸಾಲು, ಪದ, ಸನ್ನಿವೇಶ, ಭಾವ ಒಂದು ಸಂಸ್ಕೃತಿಯಿಂದ ಇನ್ನೊಂದಕ್ಕೆ ಹೋಗುವಾಗ ಅದಕ್ಕೆ ‘ಸರಿಯಾದ’ ಒಂದು ದಾರಿ ಎನ್ನುವುದು ಇದೆಯೇ? ಎಷ್ಟು ಸ್ವಾತಂತ್ರ್ಯ ವಹಿಸಬಹುದು ಅಥವಾ ಬಾರದು? ಕವನವಾದರೆ ಸಾಲುಗಳ ಸಂಖ್ಯೆ ಅಷ್ಟೇ ಇರಬೇಕೇ? ಅದು ಸಾಧ್ಯವೇ? ತೀರಾ ತೊಡಕು ತೊಡಕು ಅನಿಸುತ್ತದೆಯೇ ಇತ್ಯಾದಿ ನೂರು ಪ್ರಶ್ನೆಗಳ ಸಮ್ಮುಖದಲ್ಲೂ ನನ್ನ ಹಿಂಜರಿಕೆ, ಸೋಮಾರಿತನ ಸೋತರೆ ಅನುವಾದ ಮಾಡುತ್ತೇನೆ.

ಮತ್ತೆ ಮತ್ತೆ ಅದನ್ನು ತಿದ್ದುವುದರಲ್ಲಿ ವಿವರಿಸಲಾಗದ ಏನೋ ಒಂದು ಖುಷಿ. ಈ ತಿದ್ದುವ ಪ್ರಕ್ರಿಯೆ ಕೊಡುವ ಖುಷಿಯೇ ಅನುವಾದಕ್ಕೆ ಪ್ರೇರಣೆ ಇರಬೇಕು. ‘Every word was once a poem’ ಎಂಬ ಎಮರ್ಸನ್ ಸಾಲು, “ಮಾತು ಮಂತ್ರ ಕವಿತೆ ಎಂಬೆಲ್ಲ ಕರಣಗಳಿಂದ / ನಿನ್ನಾಕೃತಿಯ ತಡವಲು ಹವಣಿಸುತ್ತಿರುವ / ಮೂಕ ಮಕ್ಕಳು ನಾವು -ನುಡಿಯೇ / ನಿನ್ನ ಸುಳಿವೆಂತು ದೊರಕೀತು ನಮಗೆ?” ಎಸ್ ಮಂಜುನಾಥ್ ಸಾಲುಗಳ ಗುಂಗು ಆಗಾಗ.

‍ಲೇಖಕರು Admin

September 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: