ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸಮ್ಮ ನಮ್ಮ ಅವ್ವಾರ ಗೆಳತಿ ಸರ್..

ಕೋಮು ಸೌಹಾರ್ದತೆಯ ಸುತ್ತ ಮುತ್ತ …

ಎನ್ ಆರ್ ವಿಶುಕುಮಾರ್ 

ಇತ್ತೀಚಿಗೆ ಚಾಲುಕ್ಯ ಸಾಮ್ರಾಜ್ಯದ ಹಾಗೂ ಗುಹಾಂತರ ದೇವಾಲಯಗಳ ಖ್ಯಾತಿಯ ಬಾದಾಮಿ ಊರಿನಲ್ಲಿ ನಡೆಯುವ ಹೆಸರುವಾಸಿಯಾದ ಬನಶಂಕರಿ ಜಾತ್ರೆಗೆ ಹೋಗಿದ್ದೆವು . ಪ್ರಯಾಣದ ನಡುವೆ ಬಾದಾಮಿ ರಸ್ತೆಯಲ್ಲೇ ಸಿಗುವ ನರಗುಂದದಲ್ಲಿ ಇಳಿದು ನಮ್ಮ ವಾಹನ ಚಾಲಕ ರಾಜು ಉರುಫ್ ಮೈನು ಸಾಬ್ ನದಾಫ್ ಅವರ ಮನೆಗೆ ರಾತ್ರಿ ಹತ್ತು ಘಂಟೆಗೆ ಹೋದೆವು . ಹೋದ ಕೂಡಲೇ ಕೈಗೆ ನೀರಿನ ಗಿಂಡಿ ನೀಡಿ ಕೈ ಕಾಲು ತೊಳೆದು ಕೊಳ್ಳಲು ಹೇಳಿದರು. ಬಿಸಿ ಬಿಸಿ ಚಾ ಮಾಡಿಕೊಟ್ಟರು . ಆಮೇಲೆ ಜೋಳದ ರೊಟ್ಟಿ ತಯಾರಿಗೆ ತೊಡಗಿದರು.

ಹಳೆಯ ಕಾಲದ ಮಾಳಿಗೆ ಮನೆಯನ್ನು ನೋಡಲು ನಾವು ಕುತೂಹಲದಿಂದ ಒಳಹೊಕ್ಕು ಮನೆಯೊಳಗೆ ಕಣ್ಣಾಡಿಸಿದೆವು . ಒಳಗಡೆ ಒಂದು ಕೋಣೆಯಲ್ಲಿ ಮಗು ತೂಗುವ ಜೋಲಿ ತೂಗಾಡುತ್ತಿತ್ತು. ಪಕ್ಕದಲ್ಲೇ ಬಾಣಂತಿ ಮಲಗಿದ್ದರು. ಜೋಲಿ ಒಳಗೆ ಮುದ್ದಾದ ಹಸುಗೂಸು ಮಲಗಿತ್ತು. ಮಗು ಯಾರದೆಂದು ಕೇಳಿದೆವು. ಮನೆಯವರು ‘ಬಸಮ್ಮನ ಮಗಳ ಮಗು ಸರ್ ‘ ಎಂದರು. ಬಸಮ್ಮ ಯಾರು ಎಂದೆವು. ನಮ್ಮ ವಾಹನ ಚಾಲಕ ರಾಜು ಥಟ್ಟನೆ ” ಬಸಮ್ಮ ನಮ್ಮ ಅವ್ವಾರ ಗೆಳತಿ ಸರ್ ” ಎಂದ.

ನಮಗೆ ಆಶ್ಚರ್ಯ!! ಸರಿ ಬಸಮ್ಮರ ಮಗಳು ಮತ್ತು ಮಗು ಇಲ್ಲ್ಯಾಕೆ ಇದಾರೆ? ಎಂದೆವು. ಬಸಮ್ಮ ಇರೋದು ನಮ್ ಮನೇಲೆ ಸರ್ ಅಂದ್ರು. ನಮಗೋ ಗಲಿಬಿಲಿ. ಸರಿ, ಬಸಮ್ಮ ಅವರು ನಿಮ್ಮನೇಲಿ ಯಾಕ್ ಇದಾರೆ ? ಎಂದು ಇನ್ನೊಂದು ಪ್ರಶ್ನೆ ಪೋಣಿಸಿದೆವು. ‘ ಸರ್ , ನಮ್ಮ ಅವ್ವ ಮತ್ತು ಬಸಮ್ಮ ಬಾಲ್ಯದಿಂದಲೂ ಗೆಳತಿಯರು. ಹತ್ತು ವರ್ಷದ ಹಿಂದೆ ನಮ್ಮ ಅಪ್ಪಾರು ತೀರಿಕೊಂಡ ಮ್ಯಾಲೆ ನಮ್ ತಾಯಿ ಒಂಟಿ ಅದಾರೆ ಅಂತೇಳಿ ಬಸಮ್ಮ ಅವರು ಬಂದು ನಮ್ ಮನೇಲೆ ನಮ್ ತಾಯಿ ಜೊತೆನೇ ಇದಾರೆ ಸರ್’ ಅಂದ ನಮ್ಮ ಚಾಲಕ ರಾಜು

ಬಸಮ್ಮರ ಮನೇಲಿ ಯಾರೂ ಇಲ್ಲವ ಎಂದು ಕೇಳಿದರೆ “ಬಸಮ್ಮರ ಮನೆ ಇಲ್ಲೇ ನಮ್ ಮನೆ ಪಕ್ಕದಲ್ಲೇ ಇದೇ ಸರ್. ಅವರಿಗೆ ಗಂಡ ಮಕ್ಕಳು ಎಲ್ಲಾ ಇದಾರೆ. ಬಸಮ್ಮರ ಗಂಡ ಕುರಿ ಮಂದೆ ಮೇಯಿಸಲು ಊರೂರು ಸುತ್ತುತ್ತಾ ಆರೇಳು ತಿಂಗಳು ಊರಿಂದ ಅಚೇಲೇ ಇರ್ತಾರೆ. ಬಸಮ್ಮ ಮತ್ತು ಆಕೆಯ ಮಗ ಇಬ್ಬರೂ ಅವರ ಮನೆ ಬಿಟ್ಟು ಬಂದು ಇಲ್ಲೇ ನಮ್ಮ ಮನೇಲೆ ವಾಸ ಇದಾರೆ. ಬಸಮ್ಮರ ಗಂಡ ಊರಿಗೆ ಬಂದಾಗ ಅವರೂ ಕೂಡ ಇಲ್ಲೇ ನಮ್ ಮನೇಲೆ ಇರ್ತಾರೆ. ಎಂದರು .

ಇದು ನಮಗೆ ಅಸಹಜ ಮತ್ತು ಅಚ್ಚರಿಯ ವಿಷಯವಾಗಿದ್ದರೆ ಅವರಿಗೆ ಇದು ಮಾಮೂಲಿ ವಿಷಯವಾಗಿತ್ತು. ಮನೆ ಖರ್ಚು ವೆಚ್ಚ ಹೇಗೆ ತೂಗಿಸಿಕೊಳ್ತೀರಿ ಅಂದರೆ ಅವರ ಕೈಲಿ ಇದ್ದಾಗ ಅವರು ಮನೆ ವೆಚ್ಚ ಹಾಕ್ತಾರೆ. ಅವರ ಕೈಯಲ್ಲಿ ಇಲ್ಲ ಅಂದ್ರೆ ನಮ್ ಕೈಯಲ್ಲಿ ಹಾಕ್ತಿವಿ. ಅದರ ಬಗ್ಗೆ ಎಲ್ಲಾ ನಾವು ಹೆಚ್ಚು ತಲೆ ಕೆಡಿಸಿ ಕೊಳ್ಳಕ್ಕಿಲ್ಲ ಸರ್ ಎಂದರು .

ನಮಗಂತೂ ಆಶ್ಚರ್ಯವೋ ಆಶ್ಚರ್ಯ. ನಮ್ಮ ಚಾಲಕ ರಾಜು ಅವರ ತಾಯಿ ರೋಷನ್ ಬಿ. ಮುಸ್ಲಿಂ ಹೆಣ್ಣು ಮಗಳು. ಆಕೆಯ ಬಾಲ್ಯದ ಗೆಳತಿ ಬಸಮ್ಮ ಕುರುಬರವಳು. ಹಿಂದು ಧರ್ಮದವರು. ಮುಸ್ಲಿಂ – ಹಿಂದೂ ಇಬ್ಬರೂ ಕೂಡಿ ಒಂದೇ ಮನೇಲಿ ಹತ್ತು ವರ್ಷಗಳಿಂದ ಎರಡು ದೇಹ ಒಂದೇ ಜೀವ ಎನ್ನುವಂತೆ ಕೂಡಿ ಬಾಳುತ್ತಿರುವುದನ್ನು ನೋಡಿ ಕಣ್ಣಲ್ಲಿ ಸಂತೋಷದ ಹನಿಗಳು ತುಂಬಿ ಬಂದವು

‍ಲೇಖಕರು avadhi

15 January, 2020

2 Comments

  1. T S SHRAVANA KUMARI

    ಇಂತಹ ಸಂತತಿ ಸಾವಿರವಾಗಲಿ

  2. Lalitha siddabasavayya

    ಈ ಹೆಣ್ಣುಮಕ್ಕಳು ಯಾವ ಪಂಥ? ಎಡವೊ ಬಲವೋ?? ಇವರು ಮನುಷ್ಯ ಪಂಥ….
    ಈ ಎಡಬಲ ಪಂಥಮಠೀಯರು ಸುಮ್ಮನಿದ್ದರೆ ಸಾಕು. ಬದುಕು ಇಂತಹ ಮನೆಗಳಲ್ಲಿ ಸಹಜವಾಗಿ ಬದಕುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading