Amazon Prime ನಲ್ಲಿ 19.20.21 ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ
ಕವಿ ಮೆಹಬೂಬ ಮಠದ ಅವರಿಂದ ಸಿನೆಮಾದ ಮರು ಭೇಟಿ
**
‘ಕಾಡಿನ ಪ್ರೀತಿ’ ಮತ್ತು ‘ನಾಡಿನ ಕ್ರೌರ್ಯ’ ದ ನಡುವಿನ ಸಂಘರ್ಷ
ಮೆಹಬೂಬ್ ಮಠದ, ಕೊಪ್ಪಳ
**
“ಮನುಷ್ಯ ಸುತ್ತಿ ಬದಲಾಗ್ತಾನೆ; ಮರ ನಿಂತಲ್ಲೇ ಬದಲಾಗುತ್ತೆ.” “ಈ ನೀರಲ್ಲಿ ಮಾಯವಾಗೊ ರಕ್ತದ ಹಾಗೆ ನಮ್ಮ ಕಷ್ಟಗಳೂ ಮಾಯವಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು.” “ಕಳೆದುಕೊಳ್ಳೋಕೆ ನಮ್ಮ ಹತ್ರ ಏನೂ ಇಲ್ಲಾ ಮಗಾ! ಏನಿದ್ರೂ ಪಡೆಕೊಳ್ಳೋದು ಮಾತ್ರ ಆದರೆ ಅದನ್ನ ಪಡೆದುಕೊಳ್ಳೋಕು ಇಷ್ಟೆಲ್ಲಾ ಹೋರಾಟ ಮಾಡಬೇಕಲ್ಲ…!” ಇಂಥ ಕೆಂಡದಂಥ ಸಂಭಾಷಣೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡು ನನ್ನನ್ನು ಕಾಡುತ್ತಿರುವ ಸಿನಿಮಾ 19.20.21 . ಈ ಸಿನಿಮಾವನ್ನು Airtel Xtreme ನಲ್ಲಿ ನೋಡಿ ನಾನು ಕೂಡ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಕಳೆದು ಹೋಗಿದ್ದೇನೆ.
ಕನ್ನಡದ ನೆಲದ ಕತೆಗಳನ್ನು ಶಕ್ತಿಯುತವಾಗಿ ನೋಡುಗರ ಎದೆಗಳಿಗೆ ದಾಟಿಸುವಲ್ಲಿ ನಾಡಿನಾದ್ಯಂತ ಹೆಸರಾದ, ಜೀವಪರ ಚಿಂತನೆಗಳ ಚಿಂತಕ ಹಾಗೂ ನಮ್ಮ ಚಿತ್ರರಂಗದ ಮಹತ್ವದ ನಿರ್ದೇಶಕರಾದ ಮಂಸೋರೆ ಅವರು ವಿಠ್ಠಲ್ ಮಲೆಕುಡಿಯ ಅವರ ಜೀವನವನ್ನು ಪರದೆಯ ಮೇಲೆ ನಮ್ಮ ನಿರೀಕ್ಷೆಗೂ ಮೀರಿ ಪರಿಣಾಮಕಾರಿಯಾಗಿ ತಂದಿದ್ದಾರೆ. ಕಾಡನ್ನೇ ತಮ್ಮ ತಾಯಿಯೆಂದು ನಂಬಿಕೊಂಡು ಬದುಕುತ್ತಿರುವ ಆದಿವಾಸಿ ಸಮುದಾಯವನ್ನು, ತಮ್ಮ ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಗಾಗಿ ಅಲ್ಲಿಂದ ಒಕ್ಕಲೆಬ್ಬಿಸಲು ಹಾತೊರೆಯುವ ಬೇರು ಮಟ್ಟದ ವ್ಯವಸ್ಥೆ ಹೇಗೆಲ್ಲ ‘ಚಕ್ರವ್ಯೂಹ’ ರಚಿಸುತ್ತದೆ ಎಂಬುದನ್ನು ನೋಡುವಾಗ ರಕ್ತ ಕುದಿಯುತ್ತದೆ. ಕೂಡುಮಲೆಯ ಮಂಜು ತನ್ನ ಸಮುದಾಯದ ಜನರ ಬದುಕನ್ನು ಹಸನು ಮಾಡಲು ತನಗಿಂತ ಸಾವಿರ ಪಟ್ಟು ಶಕ್ತಿಶಾಲಿಯಾದ ‘ವ್ಯವಸ್ಥೆಯನ್ನು’ ಎದುರು ಹಾಕಿಕೊಳ್ಳುತ್ತಾನೆ. ತಮ್ಮ ಪಾಡಿಗೆ ತಾವು ಕಾಡಿನೊಳಗೆ ಸ್ವಚ್ಛಂದವಾಗಿ ಜೀವಿಸುವ ಆದಿವಾಸಿಗಳನ್ನು; ಅವರನ್ನು ಕಾಯಲೆಂದೇ ನೇಮಕವಾದ ಕಾವಲುಗಾರರು ಹೇಗೆ ಹಿಂಸಿಸುತ್ತಾರೆ ಎಂಬುದನ್ನು ಊಹಿಸಿಕೊಳ್ಳಲೂ ಆಗದು. ತಮ್ಮ ಕುರ್ಚಿಗಾಗಿ ಎಲ್ಲ ಸಿದ್ಧಾಂತಗಳನ್ನು ಗಾಳಿಗೆ ತೂರುವ ಕೆಲವು ‘ಅಧಿಕಾರ ದಾಹದ’ ರಾಜಕಾರಣಿಗಳ ಮನಸ್ಥಿತಿ ಎಲ್ಲ ಕ್ರೌರ್ಯಕ್ಕೂ ಮಿಗಿಲಾದದ್ದು. ಇಂಥ ಅವಕಾಶವಾದಿಗಳು ‘ಕಾಲಕ್ಕೇ ಕಳಂಕ’ ಎಂಬುದನ್ನು ಸಿನಿಮಾದಲ್ಲಿ ಬಲವಾಗಿ ನಿರೂಪಿಸಲಾಗಿದೆ.
ತಮ್ಮ ದಾರಿಗೆ ಅಡ್ಡವಾಗುತ್ತಾನೆ ಅಂತ ತಿಳಿದಕೂಡಲೇ ‘ಕೂಡುಮಲೆಯ ಮಂಜುನನ್ನು’ ಸುಳ್ಳು ಕೇಸಿನಲ್ಲಿ ಫಿಟ್ ಮಾಡುವ ವ್ಯವಸ್ಥೆ ಅವನಿಗೆ ‘ಬಹು ವಿನ್ಯಾಸದ ನರಕ ದರ್ಶನ’ ಮಾಡಿಸುತ್ತದೆ. ಅಧಿಕಾರಿಯೊಬ್ಬ ಸಿಗರೇಟ್ ಹಚ್ಚಲು ಲೈಟರ್ ಆನ್ ಮಾಡಿದ ಕ್ಷಣದಲ್ಲೇ ಹಿನ್ನೆಲೆಯಲ್ಲಿ ಬರುವ ಬಂದೂಕಿನ ಗುಂಡಿನ ಸದ್ದು ನೇರವಾಗಿ ಪ್ರೇಕ್ಷಕನ ಎದೆಗೆ ಬಡಿದಂತೆ ಭಾಸವಾಗುತ್ತದೆ. ಒಂದೇ ಏಟಿಗೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ವಿಧ್ವಂಸಕ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗುವ ‘ಮಂಜು’ ನನ್ನು ಕಾಪಾಡಲು ಒಂದು ಸಂಘಟನೆಯ ಮುಖ್ಯಸ್ಥರು, ಮಾಧ್ಯಮದ ಸೈನಿಕರು ಹಾಗೂ ಮನುಷ್ಯ ಪರ ದುಡಿಯುವ ಬೆರಳೆಣಿಕೆಯ ರಾಜಕಾರಣಿಗಳು ತಮ್ಮ ಶಕ್ತಿ ಮೀರಿ ಹೋರಾಡುವುದನ್ನು ನೋಡುವ ಪ್ರೇಕ್ಷಕ ‘ ಸತ್ಯಕ್ಕೆ ಸಾವಿಲ್ಲ’ ಎನ್ನುವುದನ್ನು ಬಲವಾಗಿ ನಂಬುತ್ತಾನೆ. ಇಡೀ ಸಿನಿಮಾದ ಆತ್ಮವೆಂದರೆ ಅದು ‘ಭಾರತೀಯ ಸಂವಿಧಾನ’. ಸಂವಿಧಾನದ ಆರ್ಟಿಕಲ್ 19, 20 ಮತ್ತು 21 ರ ಅಡಿಯಲ್ಲಿ ನೀಡಿರುವ ‘ಸಂಜೀವಿನಿಯಂಥ ಹಕ್ಕುಗಳ’ ಕುರಿತು ಜಾಗೃತಿ ಮೂಡಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಚಿತ್ರದ ಪ್ರತಿಯೊಂದು ದೃಶ್ಯವೂ ವಿಷಾದದಲ್ಲಿ ಅದ್ದಿ ತೆಗೆದ ಕವಿತೆಯಂತಿದೆ. ಭಗತ್ ಸಿಂಗ್ ಪುಸ್ತಕ, ಒಂದಿಷ್ಟು ದಿನಸಿ ಸಾಮಾನು, ಸಣ್ಣ ಚಾಕು ಮತ್ತು ಆಟಿಕೆಯ ಬೈನಾಕುಲರ್ ಗಳನ್ನೇ ಆಧಾರವಾಗಿಟ್ಟುಕೊಂಡು ಮಂಜುನನ್ನು ‘ಹರಕೆಯ ಕುರಿ’ ಯಂತೆ ಬಲಿ ಕೊಡಲು ಹಸಿದ ಕತ್ತೆ ಕಿರುಬದಂತೆ ಹವಣಿಸುವ ವ್ಯವಸ್ಥೆಯ ಅಧಿಕಾರಿ ವರ್ಗದ ‘ಅನಿವಾರ್ಯ ಕರ್ಮ’
ಕೊನೆಗೂ ಮಂಡಿಯೂರತ್ತದೆ. ಅಕ್ಷರ ಗೊತ್ತಿಲ್ಲದ ಮುಗ್ಧ ಜನರ ಮೇಲೆ ಪೊಲೀಸ್ ಸ್ಟೇಷನ್ ನಲ್ಲಿ ನಡೆಯುವ ದೌರ್ಜನ್ಯದ ಪರಮಾವಧಿ, ಅಂಧ ಭಿಕ್ಷುಕನ ತಟ್ಟೆಯಿಂದ ಹಣ ಕಿತ್ತುಕೊಳ್ಳುವಂತ ಹೀನ ಸುಳಿಯ ಜನರ ‘ನರಿ ನಗು’, ಕಗ್ಗತ್ತಲ ಭಯಾನಕ ಮೌನದಲ್ಲಿಯೂ ಆದಿವಾಸಿಗಳು ಕಾಡಿನಲ್ಲಿ ನಿರ್ಭೀಡೆಯಿಂದ ಸಂಚರಿಸುವ ಪರಿ ಹಾಗೂ ಹೋರಾಟದ ಮೊದಲ ಹೆಜ್ಜೆಯಿಂದ ಆಗುವ ಅಡ್ಡ ಪರಿಣಾಮಗಳನ್ನು ನಿರ್ದೇಶಕರು ಸಹಜವಾಗಿ ಕಟ್ಟಿಕೊಡುತ್ತಾರೆ.
ಬಿಗಿಯಾದ ಮತ್ತು ವೇಗವಾದ ಚಿತ್ರಕಥೆ ನಮ್ಮನ್ನು ಉಸಿರು ಬಿಗಿ ಹಿಡಿದು, ಕಣ್ಣು ಕಿರಿದು ಮಾಡುತ್ತ ಹಣೆ ಗಂಟಿಕ್ಕಿಕೊಂಡು ನೋಡುವಂತೆ ಮಾಡುತ್ತದೆ.
ಮಂಜುವಿನ ತಾಯಿ ಪಾತ್ರ ಮಾಡಿರುವ ಎಂ.ಡಿ. ಪಲ್ಲವಿ ಅವರು ವಾತ್ಸಲ್ಯ ಮತ್ತು ಅಸಹಾಯಕತೆಯ ಮೂರ್ತರೂಪವಾಗಿ ಕಾಡುತ್ತಾರೆ. ಅವರು ಹಾಡುವುದರಲ್ಲಿ ಮಾತ್ರವಲ್ಲ ನಟನೆಯಲ್ಲೂ ನಂಬರ್ ಒನ್ ಎಂದು ಸಾಬೀತು ಮಾಡುತ್ತಾರೆ. ತಂದೆ ಪಾತ್ರ ಮಾಡಿರುವ ಮಹಾದೇವ ಅವರು ತಮ್ಮ ಪರಕಾಯ ಪ್ರವೇಶದಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಾಜೇಶ್ ನಟರಂಗ ತುಂಬಾ ಕಾಡುತ್ತಾರೆ. ಪೊಲೀಸ್ ವ್ಯಾನಿನ ಮುಂದೆ ಅಡ್ಡಲಾಗಿ ಮಲಗುತ್ತಾ ಮಾತನಾಡುವ ಸನ್ನಿವೇಶದಲ್ಲಿ, ಪ್ರಿನ್ಸಿಪಾಲರೊಂದಿಗೆ ವಾದ ಮಾಡುವ ದೃಶ್ಯದಲ್ಲಿ ಅವರು ಭರ್ಜರಿ ಸ್ಕೋರ್ ಮಾಡುತ್ತಾರೆ. ವಕೀಲರಾಗಿ ಬಾಲಾಜಿ ಮನೋಹರ್ ಸಿದ್ಧಮಾದರಿಗಳನ್ನು ಕುಟ್ಟಿ ಪುಡಿ ಪುಡಿ ಮಾಡಿದ್ದಾರೆ. ವಾದ ಮಂಡಿಸುವಾಗ ಅವರ ಹಣೆಯ ಬೆವರೂ ಒಂದು ಪಾತ್ರವಾಗುವುದು ಸೋಜಿಗ. ಇಡೀ ಜಗತ್ತಿನ ನೋವನ್ನು ಒಂದು ಸಾಗರ ಅನ್ನುಕೊಳ್ಳುವುದಾದರೆ ಮತ್ತು ಇಡೀ ಜಗತ್ತಿನ ಆಕ್ರೋಶವನ್ನು ಒಂದು ಜೀವಂತ ಜ್ವಾಲಾಮುಖಿ ಅಂತ ಅನ್ನುಕೊಳ್ಳುವುದಾದರೆ ಈ ಎರಡನ್ನೂ ತಮ್ಮ ಕಣ್ಣುಗಳ ಒಳಗೆ ಇಟ್ಟುಕೊಂಡು ನಟ ಶೃಂಗ ಅವರು ‘ಮಂಜು’ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ಬೇಡಿ ಬಿಚ್ಚಿಸಿಕೊಂಡು ಪೊಲೀಸ್ ವ್ಯಾನಿನಿಂದ ಕೆಳಗೆ ಇಳಿಯುವಾಗ ಎರಡೂ ಕೈಗಳನ್ನೂ ಮೇಲಕ್ಕೆತ್ತಿ ಒಂದು ಕ್ಷಣ ಕ್ಯಾಮರಾ ಕಡೆ ನೋಡುವ ದೃಶ್ಯ, “ಸರ್ ನನಗೆ ಬೇಲ್ ಸಿಗದಿದ್ದರೂ ಪರವಾಗಿಲ್ಲ ಒಂದು ದಿನ ನಿದ್ದೆ ಮಾಡೋಕೆ ಪರ್ಮಿಶನ್ ಆದ್ರು ತಗೊಳ್ಳಿ”. ಅಂತ ಲಾಯರ್ ಗೆ ಹೇಳುವಾಗಿನ ಅವರ ಕಣ್ಣುಗಳಲ್ಲಿನ ದೈನೇಸಿತನ, ಕೇಸ್ ಗೆದ್ದ ಖುಷಿಯಲ್ಲಿ ಕಣ್ಣುಗಳನ್ನು ಚೂರೇ ಚೂರು ಅಗಲಿಸಿ, ಹೌದೋ ಅಲ್ಲವೋ ಎನ್ನುವಂತೆ ಕರಾರುವಕ್ಕಾದ ಅಳತೆಯಂತೆ ತುಟಿಯಿಂದ ಹೊರ ಸೂಸುವ ನಗುವಿನ ದೃಶ್ಯ. ಹೀಗೆ ಇಡೀ ಸಿನಿಮಾದಲ್ಲಿ ಶೃಂಗ ಕಾವ್ಯವಾಗಿ ಆವರಿಸಿದ್ದಾರೆ. ಮೌನದಲ್ಲೇ ಪ್ರಖರವಾಗಿ ಮಾತಾಡಬಲ್ಲ ನಟ ಇವರು. ಎಲ್ಲ ಬಗೆಯ ಪಾತ್ರಗಳಿಗೂ ಶೃಂಗ ಜೀವ ತುಂಬಬಲ್ಲರು. ಕನ್ನಡ ಚಿತ್ರರಂಗ ಇವರನ್ನು ಮಂಸೋರೆ ಅವರಂತೆ ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಈ ಸಿನಿಮಾದ ಪಾತ್ರಧಾರಿಗಳ ಜೊತೆ ಕನ್ನಡದ ಸಾಕ್ಷಿ ಪ್ರಜ್ಞೆಯಂತಿರುವ ‘ಪ್ರಜಾವಾಣಿ’ ಪ್ರೇಕ್ಷಕರ ಹೃದಯ ಮುಟ್ಟುತ್ತದೆ. ಸಿನಿಮಾ ಮುಗಿದ ನಂತರವೂ ‘ಸ್ಮಶಾನ ಮೌನವೊಂದು’ ನನ್ನನ್ನು ಬೇಟೆಯಾಡುತ್ತಲೇ ಇದೆ. ಕಾಡಿನ ಪ್ರೀತಿ ಮತ್ತು ನಾಡಿನ ಕ್ರೌರ್ಯದ ನಡುವಿನ ಸಂಘರ್ಷದಲ್ಲಿ ‘ಕಾಡು ಜನರ ತಾಯಿ ಪ್ರೀತಿ’ಯೇ ಗೆಲ್ಲುತ್ತದೆ.
ಭಾರತೀಯ ಸಂವಿಧಾನ ಮಾತ್ರ ನಮ್ಮ ದೇಶದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಬಲ್ಲದು ಎಂಬುದನ್ನು ಈ ಚಿತ್ರ ಒತ್ತಿ ಹೇಳುತ್ತದೆ. ಇದು ಸುಡು ವಾಸ್ತವವೂ ಹೌದು. ಈ ಸಿನಿಮಾ ಸಾಧ್ಯವಾದಷ್ಟೂ ಹೆಚ್ಚು ಜನರನ್ನು ತಲುಪಬೇಕು ಅಂದಾಗ ಮಾತ್ರ ಇದರ ಆಶಯ ಈಡೇರುತ್ತದೆ.
ದಯವಿಟ್ಟು ಎಲ್ಲರೂ ನೋಡಿ ಆ ಮೂಲಕ ಈ ಮಹತ್ವದ ಪ್ರಯತ್ನವನ್ನು ಗೆಲ್ಲಿಸಿ.
ನಮ್ಮೆಲ್ಲರ ಎದೆಗಳ ಒಳಗೆ ಸಮಾನತೆಯ ಗೀತೆ ಮೊಳಗುತಿರಲಿ.
ಮಂಸೋರೆ ಎಂಬ ಮಾನವೀಯ ತಂತು ಹೀಗೆ ಮಿಡಿಯುತ್ತಿರಲಿ.
Tumbaa chennaagide nimma lekhana. Mana muttide. Nodale bekeniside.