ಶ್ರೀನಿವಾಸ ಪ್ರಭು ಅಂಕಣ: ಅವರು ‘ಉಪಾಸನಾ ಮೋಹನ್’

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 123

ಅದೊಂದು ಕಾಲಘಟ್ಟ. ಸಿ.ಅಶ್ವಥ್, ಕವಿಗುರು ಹೆಚ್ ಎಸ್ ವಿ , ಪ್ರೇಮಕವಿ ಬಿ ಆರ್ ಎಲ್, ಟಿ.ಎನ್. ಸೀತಾರಾಮ್, ಜೋಗಿ, ಈಟಿವಿ ಸೂರಿ, ಬಿ ಆರ್ ಎಲ್ ಸೋದರ—ಅದ್ಭುತ ಫೋಟೋಗ್ರಾಫರ್ ಬಿ.ಆರ್. ಶಂಕರ್… ಮೊದಲಾದ ಸಮಾನಮನಸ್ಕ ಗೆಳೆಯರ ದಂಡು ಆಗಾಗ್ಗೆ ಗೋಷ್ಠಿಗಳಲ್ಲಿ ಕಲೆಯುತ್ತಿದ್ದುದುಂಟು. ಬಿ ಆರ್ ಎಲ್ ಹಾಗೂ ಶಂಕರ ಇಬ್ಬರೂ ಉತ್ತಮ ಗಾಯಕರು. ಹಾಗಾಗಿ ಗೋಷ್ಠಿಗೆ ವಿಶೇಷ ರಂಗು ಏರಿಬಿಡುತ್ತಿತ್ತು. ಅಪರೂಪಕ್ಕೊಮ್ಮೆ ಹನಿಖಜಾನೆಯ ಒಡೆಯ ಡುಂಡಿರಾಜರೂ ಗೋಷ್ಠಿಯಲ್ಲಿ ಹಾಜರಾಗಿ ಕಚಗುಳಿ ಇಡುತ್ತಿದ್ದುದುಂಟು. ಅವು ಕೇವಲ ‘ತೀರ್ಥಯಾತ್ರೆ’ಯಾಗಿ ಪರ್ಯವಸಾನವಾಗದೇ ಒಂದು ಸಾಂಸ್ಕೃತಿಕ ಸಂಜೆಯಾಗಿ ರೂಪುಗೊಂಡು ಮುದ ನೀಡುತ್ತಿದ್ದವು. ನಾನೂ ಒಮ್ಮೊಮ್ಮೆ ಕೆಲ ಗಜ಼ಲ್ ಗಳನ್ನು ಹಾಡಿ ಅವನ್ನು ವಿವರಿಸಿ ಬೆನ್ನು ತಟ್ಟಿಸಿಕೊಂಡದ್ದುಂಟು!

ಇಂಥದೊಂದು ಸಾಂಸ್ಕೃತಿಕ ಸಂಜೆಯ ಕೂಟದಲ್ಲಿ ನನಗೆ ಪರಿಚಿತರಾದ ಪ್ರತಿಭಾವಂತ ಗಾಯಕ—ಸಂಯೋಜಕರೇ ಉಪಾಸನಾ ಮೋಹನ್. ನನ್ನ ಪರಿಚಯದ ವಲಯಕ್ಕೆ ಬರುವ ವೇಳೆಗಾಗಲೇ ಮೋಹನ್ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಎನ್ˌಎಸ್.ಎಲ್. ಮೇಷ್ಟ್ರು, ಹೆಚ್.ಎಸ್.ವಿ. , ಬಿ.ಆರ್.ಎಲ್. ಅವರುಗಳ ಹಾಗೂ ಮತ್ತೂ ಹಲವಾರು ಕನ್ನಡ ಕವಿವರೇಣ್ಯರ ಅನೇಕ ಭಾವಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ಹಲವಾರು ಧ್ವನಿಸುರುಳಿಗಳನ್ನು ಲೋಕಾರ್ಪಣೆ ಮಾಡಿದ್ದರು ಉಪಾಸನಾ ಮೋಹನ್. ಅಂದಿನ ಗೋಷ್ಠಿಯಲ್ಲಿ ಒಂದೆರಡು ಭಾವಗೀತೆಗಳನ್ನು ಸೊಗಸಾಗಿ ಹಾಡಿದ ಮೋಹನ್ ಎಲ್ಲರ ಮನಸ್ಸನ್ನೂ ಸೂರೆಗೊಂಡುಬಿಟ್ಟರು. ಕೆಲ ವರ್ಷಗಳಿಂದ ಬಸವನಗುಡಿಯಲ್ಲಿ ತಮ್ಮದೇ ‘ಉಪಾಸನಾ’ ಸಂಸ್ಥೆಯಲ್ಲಿ ಅನೇಕ ಮಕ್ಕಳಿಗೆ ಭಾವಗೀತೆಗಳನ್ನು ಕಲಿಸುತ್ತಿದ್ದ ಮೋಹನ್ ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯವಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವ ಹೆಬ್ಬಯಕೆಯಿಂದ ಫಿಲಿಪ್ಸ್ ಕಂಪನಿಯಲ್ಲಿದ್ದ ತಮ್ಮ ಒಳ್ಳೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆಂದು ತಿಳಿದು ಅವರ ಬಗ್ಗೆ ಮತ್ತಷ್ಟು ಹೆಮ್ಮೆ ಅನ್ನಿಸಿತು. ಕಾವ್ಯ ಗಾಯನದ ಬಗ್ಗೆ ಹೀಗೊಂದು ಅಪೂರ್ವ ಬದ್ಧತೆ, ಅಪರಿಮಿತ ಆಸಕ್ತಿ—ಶ್ರದ್ಧೆಗಳು ತುಂಬಿಕೊಂಡಿರುವ ಕಾರಣಕ್ಕೇ ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಉಪಾಸನಾ ಮೋಹನ್ ಒಂದು ದೊಡ್ಡ ಹೆಸರಾಗಿದ್ದಾರೆಂಬುದು ಸೂರ್ಯಸ್ಪಷ್ಟ.

ಅಂದು ಗೋಷ್ಠಿಯಲ್ಲಿ ಮೋಹನ್ ಅವರ ಪರಿಚಯವಾದ ವಿಷಯವನ್ನು ಮನೆಗೆ ಹೋದಮೇಲೆ ರಂಜನಿಗೆ ಹೇಳಿದೆ. ಬರುವ ವಾರ ನಡೆಯಲಿದ್ದ ಉಪಾಸನಾ ಸಂಸ್ಥೆಯ ವಾರ್ಷಿಕೋತ್ಸವಕ್ಕೆ ನಮ್ಮನ್ನು ಆಹ್ವಾನಿಸಿದ್ದಾರೆಂದೂ ಹೇಳಿದೆ. ಹೇಳುತ್ತಿದ್ದಂತೆ ರಂಜನಿಯ ಕಣ್ಣುಗಳು ಹೊಳೆದು ಮನಸ್ಸು ನವಿಲಾಗಿಹೋಯಿತು! ಸಮಯ ಹೊಂದಿದರೆ ಮೋಹನ್ ಅವರಿಂದ ಒಂದಷ್ಟು ಭಾವಗೀತೆಗಳನ್ನು ಕಲಿಯಬೇಕು ಅನ್ನುವುದು ರಂಜನಿಯ ಮನದ ಆಶಯ!

ಉಪಾಸನಾ ವಾರ್ಷಿಕೋತ್ಸವಕ್ಕೆ ಹೋಗಿಬಂದ ಮೇಲೆ ಮೋಹನ್ ಅವರ ಸಂಘಟನಾ ಚಾತುರ್ಯ—ಮಕ್ಕಳನ್ನು ಬೆರಗುಗೊಳಿಸುವ ರೀತಿಯಲ್ಲಿ ರಂಗದ ಮೇಲೆ ಹಾಡಲು ಸಿದ್ಧಗೊಳಿಸುವ ಅವರ ತರಬೇತಿಯ ಕ್ರಮಗಳ ಪರಿಚಯವೂ ಆಗಿ ಅವರಿಂದ ಭಾವಗೀತೆ ಕಲಿಯುವ ಹಂಬಲ ಹೆಚ್ಚಾಗಿ ಹೋಯಿತು ರಂಜನಿಗೆ. ಮೋಹನ್ ಅವರೊಂದಿಗೆ ಮಾತನಾಡಿ ವಾರಕ್ಕೊಂದು ಕ್ಲಾಸ್ ನಿಗದಿ ಮಾಡಿಕೊಂಡು ಇಬ್ಬರೂ ಅವರಲ್ಲಿ ಶಿಷ್ಯವೃತ್ತಿ ಆರಂಭಿಸಿಯೇ ಬಿಟ್ಟೆವು! ನನಗೆ ಶೂಟಿಂಗ್ ಒತ್ತಡದಿಂದಾಗಿ ಕೆಲವೊಮ್ಮೆ ಹೋಗಲಾಗದಿದ್ದರೂ ರಂಜನಿ ತಪ್ಪಿಸುತ್ತಿರಲಿಲ್ಲ. ಏತನ್ಮಧ್ಯೆ ಪದೇಪದೇ ಕವಿತೆ ಬರೆಯಲು ನಾನು ಒತ್ತಾಯಿಸಿದ್ದರ ಫಲವಾಗಿ ರಂಜನಿ ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲವಾರು ಕವಿತೆಗಳನ್ನು ರಚಿಸಿದ್ದಳು. ಒಂದು ದಿನ ಕ್ಲಾಸ್ ಗೆ ಹೋಗಿದ್ದಾಗ “ನಾನು ಬರೆದ ಒಂದೆರಡು ಕವಿತೆಗಳಿವೆ.. ಸ್ವರಸಂಯೋಜನೆ ಮಾಡಲು ಸಾಧ್ಯವೇ ನೋಡಿ” ಎಂದು ಹೇಳಿ ಮೋಹನ್ ಅವರಿಗೆ ಕೆಲ ಭಾವಗೀತೆಗಳನ್ನು ಕೊಟ್ಟುಬಂದಳು. ಮುಂದಿನ ತರಗತಿಗೆಂದು ಹೋಗಿದ್ದಾಗ ನಮಗೊಂದು ಅಚ್ಚರಿ ಕಾದಿತ್ತು! ಮೋಹನ್ ಅವರು, “ನಿಮ್ಮ ಜೋಗಿ (ರಂಜನಿ ಕೊಟ್ಟಿದ್ದ ಒಂದು ಕವಿತೆ) ಕಾಡ್ತಾ ಇದ್ದಾನೆ.. ಸಧ್ಯದಲ್ಲೇ ಒಂದು ಚೌಕಟ್ಟಲ್ಲಿ ಅವನನ್ನ ಕಟ್ಟಿಹಾಕ್ತೀನಿ” ಅಂದಾಗ ರಂಜನಿಗೆ ಹಿಗ್ಗೋಹಿಗ್ಗು! ಹೇಳಿದಂತೆಯೇ ಮುಂದಿನ ಒಂದೆರಡು ದಿನಗಳಲ್ಲೇ ವಾಸಂತಿ ರಾಗದಲ್ಲಿ ರಂಜನಿಯ ಜೋಗಿ ಹಾಡಿಗೆ ಅಪೂರ್ವವಾದ ರೀತಿಯಲ್ಲಿ ಸ್ವರ ಸಂಯೋಜನೆ ಮಾಡಿ ಕೇಳಿಸಿಯೇಬಿಟ್ಟರು ಮೋಹನ್!. ಇಂದು ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಹಾಡುಗಳಲ್ಲಿ ಒಂದಾಗಿರುವ ರಂಜನಿಯ ‘ಜೋಗಿ ಹಾಡತಾನ’, ಸ್ವರ ಸಂಯೋಜನೆಗೊಂಡ ಅವಳ ಮೊಟ್ಟಮೊದಲ ಹಾಡು!

ಕನ್ನಡ ಕವಿಗೀತೆಗಳನ್ನು ಮನೆಮನೆಗೆ ಮುಟ್ಟಿಸುವ ಸಲುವಾಗಿ ಮೋಹನ್ ಅವರು “ಮನೆಯಂಗಳದಲ್ಲಿ ಕವಿತಾ ಗಾಯನ” ಎಂಬೊಂದು ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ನಮ್ಮ ಮನೆಯಲ್ಲೂ ಏಕೆ ಇಂಥದೊಂದು ಕಾರ್ಯಕ್ರಮವನ್ನು ನಡೆಸಬಾರದೆಂದು ನಾನೂ ರಂಜನಿಯೂ ಆಲೋಚಿಸಿದೆವು. ನಮ್ಮ ಮನೆಯ ಅಂಗಳ ಸಣ್ಣ ಪುಟ್ಟ ಗೋಷ್ಠಿಗಳಿಗೆ ಹೇಳಿ ಮಾಡಿಸಿದಂತಿದ್ದರೂ ಕೊಂಚ ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯರು ಬಂದರೂ ಜಾಗ ಸಾಲುತ್ತಿರಲಿಲ್ಲ. ಏನು ಮಾಡುವುದೆಂದು ನಾವು ಚಿಂತಿಸುತ್ತಿದ್ದಾಗಲೇ ನಮ್ಮ ನೆರವಿಗೆ ನಿಂತವರು ನಮ್ಮ ನೆರೆಮನೆಯವರಾದ ಡಾ॥ರಘುರಾಮ ಭಟ್ ಹಾಗೂ ಮಾಲಿನಿ ಭಟ್ ದಂಪತಿಗಳು.

ಈ ದಂಪತಿಗಳು ಸರಳತೆ—ಸಜ್ಜನಿಕೆಗಳೇ ಮೈವೆತ್ತಂತಹ ಅಪರೂಪದ ಜೋಡಿ. ಅವರ ಏಕೈಕ ಪುತ್ರಿ ಸೌಮ್ಯ ಹೆಚ್ಚುಕಡಿಮೆ ನನ್ನ ಮಗಳು ರಾಧಿಕಾಳ ಸಮವಯಸ್ಕಳು. ರಘುರಾಮಭಟ್ಟರಂತೂ ಬಹಳ ಒಳ್ಳೆಯ ಡಾಕ್ಟರ್ ಎಂದು ಪ್ರಸಿದ್ಧರಾದವರು. “ಅದೆಂಥ ಜಡ್ಡಾದರೂ ನಮ್ಮ’ರಘುರಾಮಬಾಣ’ದೆದುರು ನಿಲ್ಲುವುದು ಶಕ್ಯವೇ ಇಲ್ಲ” ಎಂದು ನಾನೇ ಅವರ ಕೈಗುಣವನ್ನು ಮೆಚ್ಚಿ ನುಡಿದಿದ್ದುಂಟು! ಅವರ ಕಾರ್ ಗ್ಯಾರೇಜ್ ಕೊಂಚ ತಗ್ಗಿನಲ್ಲಿದ್ದರೂ ಸಾಕಷ್ಟು ವಿಶಾಲವಾಗಿತ್ತು. “ನೋಡಿ ಪ್ರಭುಗಳೇ, ನಿಮ್ಮ ಮನೆಯಂಗಳ ಕಾರ್ಯಕ್ರಮವನ್ನು ನಮ್ಮ ಗ್ಯಾರೇಜ್ ನಲ್ಲಿ ನಡೆಸಲು ಸಾಧ್ಯವೇ ನೋಡಿ.. ಹೊರಗಡೆ ರಸ್ತೆ ಬಂದ್ ಮಾಡಲು ಅನುಮತಿ ಪಡೆದುಕೊಂಡರೆ ಅಲ್ಲೊಂದಿಷ್ಟು ಕುರ್ಚಿಗಳನ್ನು ಹಾಕಿ 70-80 ಜನಕ್ಕೆ ಆಸನ ವ್ಯವಸ್ಥೆ ಮಾಡಬಹುದು.. ನಿಮ್ಮಿಂದಾಗಿ ನಮಗೂ ಸ್ವಲ್ಪ ಕನ್ನಡ ಸೇವೆ ಮಾಡಿದ ಪುಣ್ಯ ದಕ್ಕಲಿ!” ಎಂದು ನುಡಿದು ಮುಗ್ಧನಗೆ ನಕ್ಕಾಗ ಹೃದಯ ತುಂಬಿಬಂದಿತ್ತು! ಮೋಹನ್ ಅವರೂ ಬಂದು ‘ಅಲ್ಲಿ ಕಾರ್ಯಕ್ರಮ ನಡೆಸಬಹುದು’ ಎಂದು ಒಪ್ಪಿಕೊಂಡಾಗ ನಮ್ಮ ಖುಷಿಗೆ ಪಾರವೇ ಇಲ್ಲ. ಮರುದಿನವೇ ಹೋಗಿ ಕಾರ್ಯಕ್ರಮದ ದಿನ ಸಂಜೆ ಮೂರು ತಾಸು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ವಾಹನ ಸಂಚಾರ ನಿಲ್ಲಿಸಲು ಪರವಾನಗಿ ಪಡೆದುಕೊಂಡು ಬಂದೆ. ಡಾಕ್ಟರ್ ದಂಪತಿಗಳೂ ಪರಮೋತ್ಸಾಹದಿಂದ ನಮ್ಮ ಜೊತೆಗೆ ನಿಂತು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲು ನೆರವಾದರು.

ಅಂದಿನ ನಮ್ಮ (ಡಾಕ್ಟರ) ಮನೆಯಂಗಳದ ಕವಿತಾ ಗಾಯನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಮಂಗಳಾ ರವಿ ಅವರು ರಂಜನಿಯ ‘ಜೋಗಿ ಕಾಡತಾನ’ ಹಾಡನ್ನು ಹಾಡುತ್ತಿದ್ದಾರೆಂದು ಮೋಹನ್ ಹೇಳಿದಾಗ ಮತ್ತಷ್ಟು ಸಂತೋಷವಾಯಿತು! ಅಂದಿನ ಕಾರ್ಯಕ್ರಮಕ್ಕೆ ಹೆಚ್ ಎಸ್ ವಿ ಅವರು, ಬಿ ಆರ್ ಎಲ್ ಅವರು, ಟಿ.ಎನ್.ಸೀತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಂದಿನ ಕಾರ್ಯಕ್ರಮಲ್ಲಿ ಮೋಹನ್ , ಪಂಚಮ್ ಹಳಿಬಂಡಿ, ರಿತೀಶಾ ಹಾಗೂ ಮಂಗಳಾ ರವಿಯವರು ಹಲವಾರು ಗೀತೆಗಳನ್ನು ಪ್ರಸ್ತುತಪಡಿಸಿದರು. ನಾವು ಆ ವೇಳೆಗಾಗಲೇ ಮೋಹನ್ ಅವರ ಶಿಷ್ಯರಾಗಿದ್ದೆವಲ್ಲಾ, ನಮಗೂ ಹಾಡಲು ಒಂದು ಅವಕಾಶ ಸಿಕ್ಕಿಯೇ ಬಿಟ್ಟಿತು! ನಾನು ಹಾಗೂ ರಂಜನಿ ಇಬ್ಬರೂ ಒಟ್ಟಿಗೆ ಹೆಚ್ ಎಸ್ ವಿ ಅವರ ‘ಕನ್ನಡ ಎನುವುದು ಜೀವನದಿ’ ಗೀತೆಯನ್ನು ಹಾಡಿದೆವು. ಮಂಗಳಾ ರವಿ ‘ಜೋಗಿ’ ಹಾಡನ್ನು ಅದ್ಭುತವಾಗಿ ಹಾಡಿ ಎಲ್ಲರ ಮನಸೂರೆಗೊಂಡರು. ಬಂದ ಅತಿಥಿಗಳಿಗೆ, ಕಿಕ್ಕಿರಿದು ನೆರೆದಿದ್ದ ಸಹೃದಯರಿಗೆ—ಎಲ್ಲರಿಗೂ ‘ಜೋಗಿ’ ಇಷ್ಟವಾಗಿಬಿಟ್ಟ. ಒಟ್ಟಿನಲ್ಲಿ ನಮ್ಮ ಮನೆಯ ‘ಮನೆಯಂಗಳದಲ್ಲಿ ಕವಿತಾಗಾಯನ’ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿಯೇ ಅತ್ಯಂತ ನೋವಿನ ಸಂಗತಿಯೊಂದನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಬೇಕು: ನಮ್ಮ ಆತ್ಮೀಯ ಮಿತ್ರ—ಅತ್ಯಂತ ಜನಾನುರಾಗಿ ವೈದ್ಯ—ಸಹೃದಯಿ ಸಜ್ಜನ ಡಾಕ್ಟರ್ ರಘುರಾಮ್ ಭಟ್ ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ನಮ್ಮನ್ನು ಅಗಲಿ ಹೊರಟುಹೋದರು. ನಿಜಕ್ಕೂ ನಮ್ಮನ್ನು ತಲ್ಲಣಗೊಳಿಸಿದ, ಗಾಢ ವಿಷಾದಕ್ಕೆ ನಮ್ಮನ್ನು ದೂಡಿದ ಅತ್ಯಂತ ಅನಿರೀಕ್ಷಿತ ನಿರ್ಗಮನ ಡಾ॥ ರಘುರಾಮ್ ಭಟ್ಟರದು.

ಇದೇ ಸಂದರ್ಭದಲ್ಲಿಯೇ ನಾನು ಹಲವಾರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದು ಆ ಕಾರಣವಾಗಿಯೇ ಬಂದ ಅನೇಕ ಸಿನೆಮಾ ನಟನೆಯ ಅವಕಾಶಗಳನ್ನು ನಿರಾಕರಿಸಬೇಕಾಯಿತು! ಆಗ ನಾನು ನಟಿಸಲು ತೊಡಗಿದ ಎರಡು ಮುಖ್ಯ ಧಾರಾವಾಹಿಗಳೆಂದರೆ ಟಿ.ಎನ್. ಸೀತಾರಾಮ್ ಅವರ ‘ಮುಕ್ತ’ ಹಾಗೂ ಬಿ.ಸುರೇಶ ಅವರ ‘ನಾಕುತಂತಿ’. ‘ಮುಕ್ತ’ ಧಾರಾವಾಹಿಯ ನನ್ನ ಟೋಪಿ ಶೇಷಪ್ಪನ ಪಾತ್ರ ಹಾಗೂ ‘ನಾಕುತಂತಿ’ ಧಾರಾವಾಹಿಯ ಹೊಸಮನೆ ಸದಾನಂದನ ಪಾತ್ರ ಆ ಕಾಲದಲ್ಲಿ ನನಗೆ ಬಹು ಜನಪ್ರಿಯತೆಯನ್ನು ತಂದುಕೊಟ್ಟ ಪಾತ್ರಗಳು. ಸೋಜಿಗದ ಸಂಗತಿ ಎಂದರೆ ಆ ಎರಡೂ ಪಾತ್ರಗಳಿಗೆ ನಾನು ಮೊದಲ ಆಯ್ಕೆಯಾಗಿರಲಿಲ್ಲ!

‘ಮುಕ್ತ’ ಧಾರಾವಾಹಿಯಲ್ಲಿ ನನ್ನನ್ನು ಸೀತಾರಾಂ ಅವರು ಮೊದಲು ಆರಿಸಿದ್ದು ಮುಖ್ಯಮಂತ್ರಿಗಳ ಪಾತ್ರಕ್ಕೆ! ಶ್ರೀರಂಗಪಟ್ಟಣದ ಸಂಗಮದಲ್ಲಿ ನಮ್ಮ ಮೊಟ್ಟಮೊದಲ ದಿನದ ಚಿತ್ರೀಕರಣ ನಿಗದಿಯಾಗಿತ್ತು. ಚಿತ್ರೀಕರಣಕ್ಕೆ ಹಿಂದಿನ ದಿನ ನಾನು ಪಾತ್ರಸಂಬಂಧಿ ಚರ್ಚೆಗಾಗಿ ಸೌತ್ ಎಂಡ್ ಸರ್ಕಲ್ ಬಳಿಯಿದ್ದ ಸೀತಾರಾಂ ಅವರ ಕಛೇರಿಗೆ ಹೋಗಿದ್ದೆ. ಸೀತಾರಾಂ ಅವರು ಏಕೋ ಸ್ವಲ್ಪ ಒತ್ತಡದಲ್ಲಿದ್ದಂತೆ ಕಂಡರು. ‘ಬಾರಯ್ಯ ಶ್ರೀನಿವಾಸ ಪ್ರಭು’ ಎಂದು ನನ್ನನ್ನು ಸ್ವಾಗತಿಸಿದವರೇ ಮ್ಯಾನೇಜರ್ ಶ್ರೀನಾಥ್ ಕಡೆ ತಿರುಗಿ,”ಈಗೇನ್ರೀ ಮಾಡೋದು ಶ್ರೀನಾಥ್? ಅವನಿಗೆ ಸಬ್ ಸ್ಟಿಟ್ಯೂಟ್ ಯಾರ್ರೀ ಇದಾರೆ ನಮ್ಮ ಆರ್ಟಿಸ್ಟ್ಸ್ ಪೈಕಿ? ಕೊನೇ ಹೊತ್ತಲ್ಲಿ ಇದೇನೋ ಫಜೀತಿ ಆಗ್ಹೋಯ್ತಲ್ರೀ!” ಎಂದು ನಿಟ್ಟುಸಿರಿಟ್ಟರು.

ತುಸು ಸಮಯದ ಬಳಿಕ ನನಗೆ ವಿಷಯ ಅರ್ಥವಾಯಿತು: ಧಾರಾವಾಹಿಯ ಒಂದು ಮುಖ್ಯ ಪಾತ್ರ ಟೋಪಿ ಶೇಷಪ್ಪನ ಪಾತ್ರ ನಿರ್ವಹಿಸಬೇಕಾಗಿದ್ದ ಸೇತೂರಾಂ ಅವರಿಗೆ ಅವರ ಕಛೇರಿಯ ಕೆಲಸ ಕಾರ್ಯಗಳ ಒತ್ತಡದಿಂದಾಗಿ ಶೂಟಿಂಗ್ ಗೆ ಬರಲು ಸಾಧ್ಯವಾಗುತ್ತಿಲ್ಲ! ಮರುದಿನ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧತೆಯೂ ಆಗಿದೆ; ಆದರೆ ಮುಖ್ಯ ಪಾತ್ರಧಾರಿಯೇ ಅಲಭ್ಯ! ತಲೆ ಕೆಡಿಸಿಕೊಂಡು ಅತ್ತಿಂದಿತ್ತ ಶತಪಥ ಹಾಕುತ್ತಿದ್ದ ಸೀತಾರಾಂ ಇದ್ದಕ್ಕಿದ್ದಂತೆ ಗಕ್ಕನೆ ನಿಂತರು! ಅವರ ದೃಷ್ಟಿ ನನ್ನ ಮೇಲೆ! ಏನೋ ನಿರ್ಧಾರ ಮಾಡಿದವರಂತೆ ಅದೇ ಸರಿ ಅನ್ನುವಂತೆ ತಲೆ ಆಡಿಸುತ್ತಾ, “ಶ್ರೀನಿವಾಸ ಪ್ರಭು, ಟೋಪಿ ಶೇಷಪ್ಪನ ಪಾತ್ರ ನೀನೇ ಮಾಡಯ್ಯಾ! ಭಾಳ ಅದ್ಭುತವಾದ ಪಾತ್ರ… ನನಗೆ ತುಂಬಾ ಇಷ್ಟವಾದ ಪಾತ್ರ ಅದು. ನೀನು ಮಾಡಬಹುದು ಕಣಯ್ಯಾ… ನಂಗೆ ನಿನ್ನ ಮೇಲೆ confidence ಇದೆ” ಎಂದಾಗ ನಾನು ತಬ್ಬಿಬ್ಬಾಗಿ ಹೋದೆ. ‘ಅದು ಸರಿ ಅಣ್ಣಾ, ಆದರೆ ನಾನು ಸಿ ಎಂ ಅಂತ ಹೇಳಿದ್ರಿ’ ಎಂದು ಮಾತು ಜೋಡಿಸಿಕೊಂಡು ಹೇಳುತ್ತಿದ್ದಂತೆಯೇ ನನ್ನ ಮಾತನ್ನು ತುಂಡರಿಸುತ್ತಾ, “ಸಿ ಎಂ ಪಾತ್ರಕ್ಕೆ ನೂರು ಜನ ಸಿಕ್ತಾರಯ್ಯಾ ನಂಗೆ.. ಶೇಷಪ್ಪಂಗೆ ಸಿಗೋದು ಕಷ್ಟ… ನೀನು ಮಾಡು” ಎಂದು ಸೀತಾರಾಂ ನುಡಿದಾಗ ನಾನು ಮೌನವಾಗಿ ತಲೆ ಆಡಿಸಿ ಒಪ್ಪಿಗೆ ಸೂಚಿಸಿದೆ. ಇದು ಟೋಪಿ ಶೇಷಪ್ಪನ ಪಾತ್ರ ನನ್ನ ಪಾಲಿಗೆ ಬಂದ ಪ್ರಸಂಗ.

ಇನ್ನು ಹೊಸಮನೆ ಸದಾನಂದನ ಪಾತ್ರಕ್ಕೆ ಬಂದರೆ, ಒಂದು ದಿನ ಬಿ. ಸುರೇಶ ಅವರಿಂದ ಕರೆ ಬಂದಿತು: “ಮೇಷ್ಟ್ರೇ, ಹೊಸಾ ಸೀರಿಯಲ್ ಶುರು ಮಾಡ್ತೀದೀನಿ… ನಿಮಗೊಂದು ಬಹಳ ಮುಖ್ಯವಾದ ಪಾತ್ರ ಇದೆ.. ನಾಲ್ಕು ಹೆಣ್ಣುಮಕ್ಕಳ ತಂದೆಯ ಪಾತ್ರ.. ಅದ್ಭುತವಾದ ಪಾತ್ರ ಮೇಷ್ಟ್ರೇ.. ತಿಂಗಳಿಗೆ ಕನಿಷ್ಠ ಹತ್ತು ದಿನ ಬೇಕು.. ನಾಡಿದ್ದರಿಂದಾನೇ ಶೂಟಿಂಗ್ ಶುರು ಮಾಡಲೇಬೇಕಾಂದಂಥ ಅನಿವಾರ್ಯ ಪರಿಸ್ಥಿತಿ ಬಂದುಬಿಟ್ಟಿದೆ.. ನಾಡಿದ್ದರಿಂದ ಒಂದು ಏಳೆಂಟು ದಿವಸ ನಿಮ್ಮ ಡೇಟ್ಸ್ ಬೇಕು” ಎಂದರು ಬಿ. ಸುರೇಶ!

ಆದರೆ ಆ ವೇಳೆಗಾಗಲೇ ನಾಲ್ಕು ಸೀರಿಯಲ್ ಗಳನ್ನು ಒಪ್ಪಿಕೊಂಡುಬಿಟ್ಟಿದ್ದೆ; ಅಷ್ಟೇ ಅಲ್ಲ, ಎಲ್ಲದರ ಚಿತ್ರೀಕರಣವೂ ಆರಂಭವಾಗಿಹೋಗಿತ್ತು. ಅದರಲ್ಲೂ ಸುರೇಶ ಬೇಕೆಂದು ಕೇಳುತ್ತಿದ್ದ ದಿನಾಂಕಗಳಲ್ಲಿ ಒಂದು ದಿನವೂ ನನಗೆ ಬಿಡುವಿರಲಿಲ್ಲ! ನನ್ನ ಅಸಹಾಯಕತೆಯನ್ನು ವಿವರಿಸಿ ಹೇಳಿದ ಮೇಲೆ ಸುರೇಶನಿಗೆ ಕೊಂಚ ನಿರಾಸೆಯಾಯಿತಾದರೂ, “ಪರವಾಗಿಲ್ಲ ಬಿಡಿ ಮೇಷ್ಟ್ರೇ… ಏನು ಮಾಡೋಕಾಗುತ್ತೆ? ಇನ್ಯಾರನ್ನಾದ್ರೂ ಹುಡುಕ್ತೀನಿ ಆ ಪಾತ್ರಕ್ಕೆ.. ಆದರೆ ನನ್ನ ಧಾರಾವಾಹೀಲಿ ನೀವು ಪಾತ್ರ ಮಾಡಲೇ ಬೇಕು.. ಇನ್ನೊಂದು ಪಾತ್ರ ಇದೆ— ಹೊಸಮನೆ ಸದಾನಂದ ಅಂತ…ಸಂಸ್ಕೃತಿ ಸಚಿವನ ಪಾತ್ರ.. guest role ಅಂತಾನೇ ಹೇಳಬಹುದು.. ವಾರಕ್ಕೊಂದು ದಿನ ಕೊಟ್ಟರೆ ಸಾಕು.. ಆ ಪಾತ್ರ ಬರೋ ತಿಂಗಳಲ್ಲಿ ಆರಂಭವಾಗುತ್ತೆ” ಎಂದಾಗ ನನಗೆಷ್ಟೋ ನಿರಾಳವಾಯಿತು. ಹೀಗೆ ನನ್ನ ಪಾಲಿಗೆ ಬಂದದ್ದು ಹೊಸಮನೆ ಸದಾನಂದನ ಪಾತ್ರ! ನಾಲ್ಕು ಹೆಣ್ಣುಮಕ್ಕಳ ತಂದೆಯ ಪಾತ್ರವನ್ನು ಮುಂದೆ ಅದ್ಭುತವಾಗಿ ನಿರ್ವಹಿಸಿದವರು ಪ್ರತಿಭಾವಂತ ನಟ ಏಣಗಿ ನಟರಾಜ್.

ಹೊಸಮನೆ ಸದಾನಂದನ ಪಾತ್ರ ಅತಿಥಿ ಪಾತ್ರವೆಂದೇ ಆರಂಭವಾಯಿತಾದರೂ ಶುರುವಿನಿಂದಲೇ ಅಪಾರ ಜನಪ್ರಿಯತೆಯನ್ನು ಗಳಿಸಿಕೊಂಡದ್ದರಿಂದ ಸುರೇಶ ಆ ಪಾತ್ರವನ್ನು ಚೆನ್ನಾಗಿ ಬೆಳೆಸಲೇಬೇಕಾದಂತಹ ಅನಿವಾರ್ಯತೆ ಬಂದೊದಗಿಬಿಟ್ಟಿತು ಅನ್ನುವುದೊಂದು ಬೇರೆಯದೇ ಕಥೆ! ಒಟ್ಟಿನಲ್ಲಿ—
“ದಾನೇ ದಾನೇ ಪೇ ಲಿಖಾ ಹೈ ಖಾನೇವಾಲೇಕಾ ನಾಮ್ ; ಕಿರ್ ದಾರ್ ಕಿರ್ ದಾರ್ ಪೇ ಲಿಖಾ ಹೈ ನಿಭಾನೇವಾಲೇ ಕಾ ನಾಮ್!!

“ಧಾನ್ಯದ ಪ್ರತಿ ಕಾಳಿನ ಮೇಲಿದೆ ತಿನ್ನುವವನ ಹೆಸರು; ಪ್ರತಿ ಪಾತ್ರದ ಮೇಲೂ ಕೆತ್ತಿದೆ ನಟನ ಹೆಸರು!”

‍ಲೇಖಕರು avadhi

February 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: