ಯಶಸ್ವಿಯಾದ ‘ಸಿನೆಯಾನ’

ಮನುಜಮತ ಸಿನಿಯಾನದ ಗಮನಾರ್ಹ ಪ್ರಯೋಗ

ಇತ್ತೀಚೆಗೆ ಯಶಸ್ವಿಯಾಗಿ ಜರುಗಿದ ಶಿವಮೊಗ್ಗ ಸಿನಿಹಬ್ಬ

ಮ ಶ್ರೀ ಮುರಳಿ ಕೃಷ್ಣ

**

ಮನುಜಮತ ಸಿನಿಯಾನ‘ ಎಂಬ ವಾಟ್ಸಪ್‌ ಗುಂಪು ಸಿನಿಮಾ ಕುರಿತ ವಿಷಯಗಳನ್ನು ಚರ್ಚಿಸಲು 2015ರಲ್ಲಿ ಅಸ್ತಿತ್ವಕ್ಕೆ ಬಂದಿತು.  ನಂತರ ಬರೀ ಇಷ್ಟಕ್ಕೆ ಮಾತ್ರ ಸೀಮಿತಗೊಳಿಸಬಾರದು, ಕ್ರಿಯಾತ್ಮಕವಾಗಿಯೂ ಏನನ್ನಾದರೂ ಮಾಡಬೇಕು ಎಂಬ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಪ್ರಥಮ ಸಿನಿಹಬ್ಬವನ್ನು 2015ರ ಅಂತ್ಯದಲ್ಲಿ ಆಯೋಜಿಸಲಾಯಿತು.  ಇದರಲ್ಲಿ ನಮ್ಮ ರಾಜ್ಯದ ಅನೇಕ ಜಿಲ್ಲೆಗಳಿಂದ ಸಿನಿಮಾಸಕ್ತರು ಭಾಗವಹಿಸಿದರು.  ಪ್ರದರ್ಶಿತ ಸಿನಿಮಾಗಳ ಕುರಿತು ವಿಚಾರ-ವಿನಿಮಯ ಜರುಗಿತು.

 ಈ ಕಾರ್ಯಕ್ರಮದಿಂದ ಸ್ಪೂರ್ತಿಗೊಂಡು ಪ್ರತಿ ವರ್ಷ ಇಂತಹ ಸುಮಾರು ಮೂರು ಸಿನಿಹಬ್ಬಗಳು ಈ ಗುಂಪಿನ ವತಿಯಿಂದ ಕರ್ನಾಟಕದ ಬೇರೆ ಬೇರೆ ಜಿಲ್ಲಾ ಮತ್ತು ಇತರ ಕೆಲವು ಕೇಂದ್ರಗಳಲ್ಲಿ ಜರುಗಿದವು.  ಇದುವರೆಗೆ ಕುಪ್ಪಳ್ಳಿ, ಹಾಸನ, ಮಂಗಳೂರು, ಉಡುಪಿ, ಬೆಂಗಳೂರು, ಕಲ್ಬುರ್ಗಿ, ಶಿವಮೊಗ್ಗ, ಮಂಡ್ಯ, ಕೋಲಾರ, ಚಿತ್ರದುರ್ಗ ಕೊಟ್ಟಿಗೆಹಾರಗಳಲ್ಲಿ ಸಿನಿಹಬ್ಬವನ್ನು ನಡೆಸಲಾಗಿದೆ.

ಸಿನಿಮಾ ಮಾಧ್ಯಮದ ಮೂಲಕ ನಮ್ಮ ದೇಶದ, ವಿಶ್ವದ ಬೇರೆ ಬೇರೆ ಪ್ರಾಂತ್ಯಗಳಲ್ಲಿರುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿಸ್ಥಿತಿಯನ್ನು ಅರಿತುಕೊಂಡು ಒಂದು ಲೋಕದೃಷ್ಟಿಯಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಸಿನಿಹಬ್ಬಗಳನ್ನು ಆಯೋಜಿಸಲಾಗುತ್ತಿದೆ.

ಈ ಸಿನಿಹಬ್ಬಗಳ ವೈಶಿಷ್ಟ್ಯಗಳೆಂದರೆ- ಅ) ಭಾಗವಹಿಸುವವರು ತಮ್ಮ ಹಣವನ್ನು ಸಂದಾಯ ಮಾಡಿ, ಭಾಗವಹಿಸುತ್ತಾರೆ. ಆ) ಸಿನಿಹಬ್ಬ ಜರಗುವ ಸ್ಥಳದಲ್ಲಿ ಒಂದು ಸಿದ್ಧತಾ ಸಮಿತಿಯನ್ನು ರಚಿಸಲಾಗುತ್ತದೆ.  ಇದು ಸಿನಿಮಾಗಳ ಆಯ್ಕೆ ಸಮಿತಿ(ಇದರಲ್ಲಿ ಕೆಲವು ಸಿನಿ ವಿದ್ವಾಂಸರು, ವಿಶೇಷಜ್ಞರು ಇರುತ್ತಾರೆ)ಯ ಜೊತೆ ಕೆಲಸವನ್ನು ಮಾಡುತ್ತದೆ. ಇ) ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಸ್ವಲ್ಪ ರಿಯಾಯಿತಿಯನ್ನು ನೀಡಲಾಗುತ್ತದೆ.  ಈ) ಇಂತಹ ಸಿನಿಹಬ್ಬದ ತಯಾರಿಯ ಹಿಂದೆ ಸುಮಾರು ಒಂದೂವರೆ ಅಥವಾ ಎರಡು ತಿಂಗಳ ಶ್ರಮವಿರುತ್ತದೆ.  ಸಿನಿಮಾಗಳ( ಫೀಚರ್‌, ಡಾಕ್ಯುಮೆಂಟರಿ ಮತ್ತು ಶಾರ್ಟ್‌ ಫಿಲ್ಮ್‌ಗಳು) ಆಯ್ಕೆ ಸಮಿತಿಯ ಸದಸ್ಯರು ಸುಮಾರು ಇಪ್ಪತ್ತೈದು ಸಿನಿಮಾಗಳ ಪಟ್ಟಿಯನ್ನು ತಯಾರಿಸುತ್ತಾರೆ.  ನಂತರ ಪರಸ್ಪರ ಮಾತುಕತೆಯ ತರುವಾಯ ಸುಮಾರು 5-6 ಸಿನಿಮಾಗಳನ್ನು ಆಯ್ಕೆ ಮಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಬಿಸಿ ಬಿಸಿ ಚರ್ಚೆಗಳು, ವಾದ-ವಾಗ್ವಾದಗಳು ಕೂಡ ಜರಗುತ್ತವೆ. ಉ) ಪ್ರತಿಯೊಂದು ಸಿನಿಹಬ್ಬಕ್ಕೆ ಒಂದು ವಸ್ತುವನ್ನು ಸೂಚಿಸಲಾಗುತ್ತದೆ. ಉದಾ: ಯುದ್ಧ, ಶಾಂತಿ, ಭಾತೃತ್ವ, ಸ್ತ್ರೀ ಪ್ರಪಂಚ, ಸೌಹಾರ್ದತೆ, ದಲಿತರು, ಪ್ರಜಾಪ್ರಭುತ್ವ ಇತ್ಯಾದಿ.  ಇದಕ್ಕೆ ತಕ್ಕಂತೆ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಊ) ಪ್ರತಿ ಚಲನಚಿತ್ರದ ಪ್ರದರ್ಶನದ ತರುವಾಯ ದೀರ್ಘವಾಗಿ ಚರ್ಚೆ, ವಿಷಯ-ವಿನಿಮಯಗಳು ಜರಗುತ್ತವೆ. ಎ) ಕೆಲವೊಮ್ಮೆ ಸಿನಿಮಾ ಕ್ಷೇತ್ರದವರ ಮಾಸ್ಟರ್‌ ಕ್ಲಾಸನ್ನು ನಡೆಸಲಾಗುತ್ತದೆ.

ಇತ್ತೀಚೆಗೆ ಜನವರಿ 27, 28, 2024ರಂದು ಎರಡು ದಿನಗಳ ಮನುಜಮತ ಸಿನಿಹಬ್ಬ (21ನೇ)ವನ್ನು ಶಿವಮೊಗ್ಗದಲ್ಲಿ ಜರುಗಿತು. ಇದನ್ನು ಮನುಜಮತ ಸಿನಿಯಾನ, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಮತ್ತು ಶಿವಮೊಗ್ಗ್‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆಸಲಾಯಿತು.   ಇದು ಶಿವಮೊಗ್ಗದಲ್ಲಿ ಜರುಗಿದ ಐದನೇ ಸಿನಿಹಬ್ಬ.   ಸಮಾಜವಾದ ಈ ಸಿನಿಹಬ್ಬದ ವಸ್ತುವಾಗಿತ್ತು.  ಶಿವಮೊಗ್ಗ ಜಿಲ್ಲೆ ಕೆಲವು ದಶಕಗಳ ಹಿಂದೆ ಸಮಾಜವಾದಿ ಹೋರಾಟಗಳಿಂದ ಗುರುತಿಸಲ್ಪಟ್ಟಿತ್ತು.  ಕಾಗೋಡು ಸತ್ಯಾಗ್ರಹದಂತಹ ಚಳವಳಿ ಇದೇ ಜಿಲ್ಲೆಯಲ್ಲಿ ಜರುಗಿತು.  ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಈ ಜಿಲ್ಲೆ ಗುರುತಾರ್ಹವಾದ ಕೊಡುಗೆಗಳನ್ನು ನೀಡಿದೆ. ಇದೇ ಜಿಲ್ಲೆಯವರಾದ ಶಾಂತವೇರಿ ಗೋಪಾಲಗೌಡ, ಯು ಆರ್‌ ಅನಂತಮೂರ್ತಿ, ಪಿ ಲಂಕೇಶ್‌, ಗಿರೀಶ್‌ ಕಾಸರವಳ್ಳಿ, ಕೆ ವಿ ಸುಬ್ಬಣ್ಣ ಮುಂತಾದ ಧೀಮಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಉದ್ಘಾಟನೆಯ ತರುವಾಯ ಎರಡು ದಿನಗಳಲ್ಲಿ ನಾಲ್ಕು ಸಿನಿಮಾಗಳನ್ನು ತೋರಿಸಲಾಯಿತು. ಅವೆಂದರೆ -1) ʼ ದಿ ಓಲ್ಡ್  ಓಕ್  ʼ(ನಿರ್ದೇಶಕ : ಕೆನ್‌ ಲೋಚ್)‌, 2) ʼ ಡಿಯರ್‌ ಕಾಮ್ರೇಡ್ಸ್‌ ( ನಿರ್ದೇಶಕ : ಅಂದ್ರೈ ಕೊನ್ಚಲೋವ್ಸ್ಕಿ), 3) ʼ ತುರಮುಖಂ ʼ( ನಿರ್ದೇಶಕ: ರಾಜೀವ್‌ ರವಿ), 4) ʼ ಎ ಟೈಂ ಟು ರೈಸ್‌ ʼ ( ಸಾಕ್ಷ್ಯಚಿತ್ರ- ನಿರ್ದೇಶಕ ಆನಂದ್‌ ಪಟವರ್ಧನ್).‌  ಇವುಗಳ ನಡುವೆ ಒಂದು ವಿಶೇಷ ಕಾರ್ಯಕ್ರಮವಿತ್ತು.  ಅದರಲ್ಲಿ ಚಿತ್ರಕಲಾವಿದ, ಇಲ್ಲಸ್ಟ್ರೇಟರ್‌, ಪತ್ರಕರ್ತ ಮತ್ತು ಸಿನಮಾ ನಿರ್ದೇಶಕರಾಗಿರುವ(ಇವರು ನಿರ್ದೇಶಿಸಿರುವ ʼ ಅತ್ತಿಹಣ್ಣು ಮತ್ತು ಕಣಜ ʼ ಎಂಬ ಸಿನಿಮಾ ಭಿನ್ನ ಬಗೆಯದ್ದಾಗಿದ್ದು, ಅದು ಸಿನಿವಿಮರ್ಶಕರಿಂದ ಮನ್ನಣೆಗೆ ಪಾತ್ರವಾಗಿದೆ) ಎಂ ಎಸ್‌ ಪ್ರಕಾಶ್‌ ಬಾಬು ʼ ಸಿನಿಮಾ ಫಾರ್ಮ್‌ ಮತ್ತು ಸ್ಟ್ರಕ್ಚರ್‌ ʼ ಕುರಿತು ಮಾಸ್ಟರ್‌ ಕ್ಲಾಸನ್ನು ತೆಗೆದುಕೊಂಡರು.  ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವೀಡಿಯೊಗಳನ್ನು ತೋರಿಸಿದರು. ಪ್ರತಿಯೊಂದು ಸಿನಿಮಾದ ಪ್ರದರ್ಶನದ ನಂತರ ಚರ್ಚೆ ಜರುಗಿತು.  ಪ್ರಥಮ ಬಾರಿಗೆ ಇಂತಹ ಸಿನಿಹಬ್ಬದಲ್ಲಿ ಭಾಗವಹಿಸಿದ ಕೆಲವರು ತಾವು ಭಿನ್ನ ರೀತಿಯಲ್ಲಿ ಸಿನಿಮಾ ವೀಕ್ಷಿಸುವುದನ್ನು ಕುರಿತಂತೆ ಒಳನೋಟಗಳು ದೊರಕಿದವು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ʼ ಮನುಜಮತ ಸಿನಿಯಾನದಿಂದ ಸಿನಿಮಾ ವೀಕ್ಷಣೆಯ ನಿಟ್ಟಿನಲ್ಲಿ ವಿಕೇಂದ್ರೀಕರಣದ ಇಂತಹ ಪ್ರಯತ್ನಗಳು ಸಣ್ಣ ಮಟ್ಟದಲ್ಲಾದರೂ ಒಳ್ಳೆಯ ಸಿನಿಮಾಗಳನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಸಹಕಾರಿಯಾಗುತ್ತವೆ.  ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ವರ್ಷ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFES)ವನ್ನು ನಡೆಸಲಾಗುತ್ತದೆ.  ಇದನ್ನು ಒಂದೆರಡು ಬಾರಿ ಮಾತ್ರ ಮೈಸೂರಿಗೆ ವಿಸ್ತರಿಸಲಾಗಿತ್ತು.  ಇದನ್ನು ನಮ್ಮ ರಾಜ್ಯದ ಇತರ ಕೆಲವು ಕೇಂದ್ರಗಳಲ್ಲೂ ನಡೆಸಬೇಕೆಂದು ಸಿನಿಪ್ರಿಯರು ಆಗ್ರಹಿಸುತ್ತಲೇ ಬರುತ್ತಿದ್ದಾರೆ.

ಒಳ್ಳಯ ವೀಕ್ಷಕರಿಂದ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತವೆಎಂದು ಸಿನಿಮಾ ಕ್ಷೇತ್ರದ ಒಬ್ಬ ಹೆಸರುವಾಸಿ ವ್ಯಕ್ತಿಯ ಮಾತುಗಳು ಮನನಯೋಗ್ಯ.  ʼ ಮನುಜಮತ ಸಿನಿಯಾನದಿಂದ ಇಂತಹ ಸಿನಿಹಬ್ಬಗಳು ಭವಿಷ್ಯದಲ್ಲಿ ಜರುಗತ್ತಲಿರಲಿ, ಉತ್ತಮ ಸಿನಿಮಾ ಸಂಸ್ಕೃತಿ ಬೆಳೆಯುವಂತಾಗಲಿ ಎಂದು ಆಶಿಸೋಣ.

‍ಲೇಖಕರು avadhi

February 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: