ಅಹವಿ ಹಾಡು : ವ್ಯಾಲೆಂಟೈನ್ಸ್ ಡೇ ನೆಪದಲ್ಲಿ…


ಸರಿಯಾಗಿ ಇವತ್ತಿಗೆ ಒಂದು ವರ್ಷ ಹಿಂದೆ, ಅಂದರೆ ಫ಼ೆಬ್ರುವರಿ 14, 2013 ರಂದು ಅವಧಿಯ ಸಂಯೋಜಕಿ ಸಂಧ್ಯಾರಾಣಿ ನನ್ನನ್ನು ಅವಧಿಗೆ ಕಾಲಮ್ ಬರೆಯಲು ಶುರು ಹಚ್ಚಿಸಿದ್ದು. ಅವತ್ತು ವ್ಯಾಲೆಂಟೈನ್ ದಿನದ ಪ್ರಯುಕ್ತ ಪ್ರೇಮದ ಬಗ್ಗೆ ಒಂದು ಲೇಖನ ಬರೆಯುವುದರಿಂದ ಶುರುವಾಯ್ತು ನನ್ನ ಕಾಲಮ್. ಶುರು ಮಾಡುವ ಮುಂಚೆ ನಾನು ತುಂಬ ಹಿಂಜರಿದಿದ್ದೆ. ಬರೆಯುವುದರಲ್ಲಿ ಒಂದು ಚೂರು ಶಿಸ್ತು ಕಡಿಮೆ ಇರುವ ನಾನು ನಿಜಕ್ಕೂ ನಿಷ್ಠೆಯಿಂದ ಕಾಲಮ್ ಬರೆಯಬಲ್ಲೆ ಅನ್ನುವ ನಂಬಿಕೆಯೇ ಇರಲಿಲ್ಲ. ‘ಒಂದು ವರ್ಷ ಆಯ್ತು ಭಾರತಿ ನಿನ್ನ ಅಹವಿ ಹಾಡು ಕಾಲಮ್ ಶುರುವಾಗಿ’ ಅಂತ ಬೆರಗಿನಿಂದ ಹೇಳಿಕೊಂಡೆ. ಬರೆದಿದ್ದನ್ನೆಲ್ಲ ಪ್ರೀತಿಯಿಂದ ಪ್ರಕಟಿಸಿದ ಅವಧಿ ಮತ್ತು ಪ್ರೀತಿಯಿಂದ ಓದಿದ ನೀವು ಇಬ್ಬರಿಗೂ ಹೃದಯಪೂರ್ವಕ ಥ್ಯಾಂಕ್ಸ್. ಒಂದು ಪ್ರೇಮ ಕಥೆಯಿಂದ ಶುರುವಾದ ಕಾಲಮ್‌ಗೆ ಒಂದು ವರ್ಷ ಮುಗಿದಿದೆ. ನಾಳೆಯೂ ಪ್ರೇಮಿಗಳ ದಿನ … ಒಂದು 80 ರ ದಶಕದ ಪ್ರೇಮ ಕಥೆ … ನಿಮಗಾಗಿ !!
***
ಸ್ಕೂಲಿನಿಂದ ವಾಪಸ್ ಬರುವಷ್ಟರಲ್ಲಿ ಅವಳು ಹಸಿವಿನಿಂದ ಸುಸ್ತಾಗಿ ಹೋಗಿರುತ್ತಾಳೆ. ‘ಹಾಳು ಹೊಟ್ಟೆಯಲ್ಲಿ ಯಾಕಿರಬೇಕು, ಸ್ಕೂಲಿಗೆ ಡಬ್ಬಿ ಕಟ್ಟಿಕೊಂಡು ಹೋಗು’ ಅಂತ ಅವಳಮ್ಮ ಹೇಳಿದರೆ ಕೇಳುವವಳಾ ಅವಳು? ಚಂಡಿಯ ವಂಶಜಳಾದ ಹೆಣ್ಣು ಬೆಳಗ್ಗಿನಿಂದ ಖಾಲಿ ಹೊಟ್ಟೆಯಲ್ಲಿದ್ದು, ಸಂಜೆ ಬರುವಷ್ಟರಲ್ಲಿ ಎದುರಾಗುವ ಅಮ್ಮನನ್ನೇ ತಿನ್ನುವ ಹಾಗೆ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಾಳೆ! ಅವತ್ತೂ ಹಾಗೆಯೇ … ಅವಳು ಬರುವಾಗ ಆರು ಹೊಡೆದಿತ್ತು. ಸುಸ್ತಾಗಿ ಮನೆಯೊಳಗೆ ಕಾಲಿಡಬೇಕು ಅನ್ನುವಷ್ಟರಲ್ಲಿ, ಸೈಡಿನಿಂದ ಮನೆಯ ಒಳಗೆ ಹೋಗುವ ಬಾಗಿಲು ಹಾಕಿದೆಯಾ ಅಂತ ನೋಡಲು ಬಗ್ಗಿದಳು… ಅದು ಹಾರು ಹೊಡೆದು ಬಿದ್ದಿತ್ತು.
 
ಬೆಂಗಳೂರಿನಲ್ಲಿ ನೀರಿಗೆ ಬರ. ದಿನಕ್ಕೆ ಅರ್ಧ ಘಂಟೆ ಸಹಾ ನೀರು ಬರುವುದಿಲ್ಲ. ಇವಳ ಮನೆಯಲ್ಲೊಂದು ಬಾವಿ. ಇಡೀ ರಸ್ತೆಯ ಜನ ಒಬ್ಬರಾದ ನಂತರ ಒಬ್ಬರು ಬಂದು ನೀರು ಕೇಳುತ್ತಲೇ ಇರುತ್ತಾರೆ. ‘ವಾಪಸ್ ಹೋಗುವಾಗ ಹೇಳಿ ಹೋಗಿ, ಬಾಗಿಲು ಹಾಕಿಕೊಳ್ಳುತ್ತೇನೆ’ ಅಂತ ಅವಳಮ್ಮ ಹೇಳಿದರೂ ಕೂಡಾ ನೀರು ಸೇದಿದ ನಂತರ ಯಾರೂ ಹೇಳಿ ಹೋಗುವುದೇ ಇಲ್ಲ. ಹಾಗಾಗಿ ಬಾಗಿಲು ಹಾರು ಹೊಡೆದು ಬಿದ್ದಿರುತ್ತದೆ. ಸೈಡಿನ ಬಾಗಿಲಿನಿಂದ ಯಾರಾದರೂ ಬಂದರೆ, ತೆಗೆದು ಬಿದ್ದಿರುವ ಹಿಂದಿನ ಬಾಗಿಲಿನ ಮೂಲಕ ಆರಾಮವಾಗಿ ಮನೆಯೊಳಕ್ಕೇ ಬಂದುಬಿಡಬಹುದು. ಅದು ಅವಳಿಗೆ ಸಿಕ್ಕಾಪಟ್ಟೆ ಸಿಟ್ಟು ತರಿಸುತ್ತದೆ. ಹೋಗುವಾಗ ಹೇಳಿ ಹೋಗದ ದರಿದ್ರದವರಿಗೆ ನೀರು ಯಾಕೆ ಕೊಡ್ತಿ ಅಂತ ಜಗಳವಾಡಿದರೂ ಅವಳಮ್ಮ ಕಿವಿಗೇ ಹಾಕಿ ಕೊಳ್ಳೋದಿಲ್ಲ. ನೀರು ಇಲ್ಲ ಅಂದರೆ ಮುಂದಿನ ಜನ್ಮದಲ್ಲಿ ಅದೇನೋ ಹಲ್ಲಿಯಾಗೋ, ಕೋತಿಯಾಗೋ ಹುಟ್ಟುತ್ತೀನಿ ಅನ್ನುವ ಭಯ ಅವಳಿಗೆ. ‘ಮನುಷ್ಯ ಜನ್ಮ ಅನುಭವಿಸಿ ಆಗಿರುತ್ತದಲ್ಲ, ಮುಂದಿನ ಜನ್ಮದಲ್ಲಿ vertical ಆಗಿ ಗೋಡೆ ಏರುವ, ಕಟ್ ಆದ ಬಾಲ ಬೆಳೆಸಿಕೊಳ್ಳುವ, ಕೊಂಬೆಯಿಂದ ಕೊಂಬೆಗೆ ಆರಾಮವಾಗಿ ಹಾರುವ, ಬೀದಿ ಬೀದಿಯಲ್ಲಿ ಹೇನು ತೆಗೆದುಕೊಳ್ಳುವ ಸುಖವನ್ನೂ ಅನುಭವಿಸಬೇಕೆನ್ನುವ ಸುಖದ ಪರಿಕಲ್ಪನೆಯಿಲ್ಲದ ಅಮ್ಮನಿಗೆ ಮುಂದಿನ ಜನ್ಮದಲ್ಲೂ ಇದೇ ಮನುಷ್ಯ ಜನ್ಮವೇ ಆಗಬೇಕು. ಹಾಗಾಗಿ ಇವತ್ತೂ ನೀರು ಕೊಟ್ಟಿರಬೇಕು, ಹೋಗುವ ಕೃತಘ್ನರು ಹೇಳದೇ ಹಾಗೆಯೇ ಹೋಗಿದ್ದಾರೆ’ ಅಂತ ಹಲ್ಲು ಮಸೆಯುತ್ತಾ, ಸೈಡ್ ಬಾಗಿಲಿನಿಂದ ಹೋಗಿ ಚಿಲಕ ಹಾಕಿ, ಬಾವಿಯ ಪಕ್ಕದ ಸಣ್ಣ ಓಣಿಯಲ್ಲಿ ಮನೆಯ ಹಿಂಬಾಗಿಲ ಕಡೆ ತಿರುಗಿದವಳು ತಬ್ಬಿಬ್ಬಾಗಿ ನಿಂತಳು … ಎದುರಲ್ಲಿ ಅವನು ನಿಂತಿದ್ದ, ಅವಳನ್ನೇ ನೋಡುತ್ತಾ … ನಗುತ್ತಾ….
ಅವನಿರುವುದನ್ನೇ ಗಮನಿಸದೇ ಬಾಗಿಲು ಮುಚ್ಚಿದ್ದ ಅವಳಿಗೆ ‘ಹಂ ತುಂ ಏಕ್ ಕಮರೇ ಮೆ ಬಂದ್ ಹೋ’ ಹಾಡು ಯಾಕೆ ನೆನಪಾಯ್ತೋ! ಅವಮಾನದಿಂದ ಕೆಂಪಗಾದ ಮುಖದಲ್ಲಿ ಅವನ ಕಡೆ ನೋಡಿದರೆ, ಅವನು ಮೀಸೆಯಡಿಯಲ್ಲಿ ನಗುತ್ತಾ ಅವಳನ್ನೇ ನೋಡುತ್ತಿದ್ದ. ‘ಸಾರಿ, ನಂಗೆ ನೀವಿರೋದು ಗೊತ್ತಿರಲಿಲ್ಲ …’ ಅಂತ ಅರ್ಧಂಬರ್ಧ ಹೇಳಿದವಳೇ ಮನೆಯೊಳಕ್ಕೆ ಓಡಿದಳು. ‘ಎದುರು ಮನೆಗೆ ಹೊಸದಾಗಿ ಬಂದಿದ್ದಾರಂತೆ ಕಣೇ ಪಾಪ. ನೀರಿಲ್ಲ ಅಂತ ಬಂದ ಆ ಹುಡುಗ’ ಅಮ್ಮ ಕೇಳದೆಯೇ ವರದಿ ಒಪ್ಪಿಸಿದಳು. ಎದುರು ಮನೆಗೆ ಬಂದಿದ್ದಾನೆ!!!! ಎದೆಯೊಳಗೆಲ್ಲ ಗೆಜ್ಜೆಯ ಹಾಗೆ ಆ ಮಾತು ಘಲ್ಲೆನ್ನುತ್ತಾ ಘಂಟೆಗಟ್ಟಳೆ ಓಡಾಡಿತು. ‘ಅವನು ದಿನವೂ ಎದುರಾಗುತ್ತಾನೆ ಇನ್ನು ಮುಂದೆ…ಚಂದಕ್ಕಿದ್ದಾನೆ ಡುಮ್ಮ ಮೀಸೆಯ ಹುಡುಗ’ ಎಂದುಕೊಂಡಳು. ಅವನು ನೀರು ತೆಗೆದುಕೊಂಡು ಹೋದ ನಂತರವೂ ಎಷ್ಟೋ ಹೊತ್ತು ಅವನ ನಗು ಮನಸ್ಸಿನಿಂದ ಮರೆಯಾಗಲೇ ಇಲ್ಲ. ‘ಗಂಡು ಹುಡುಗಿಯಂತಿದ್ದ’ ಅವಳಿಗೆ ಮೊದಲ ಸಲ ತಾನು ‘ಹೆಣ್ಣು ಹುಡುಗಿ’ ಅನ್ನಿಸಿತ್ತು!! ಏನೋ ಖುಷಿ ಖುಷಿ ಮನಸ್ಸಿಗೆ. ಸುಮ್ಮ ಸುಮ್ಮನೆ ನಕ್ಕಳು. ದಿನಾ ಸಿಡುಕುತ್ತಲೇ ಮನೆಯೊಳಗೆ ಕಾಲಿಡುತ್ತಿದ್ದ ಮಗಳ ಇವತ್ತಿನ ನಗು ಮುಖ ನೋಡಿ ಅವಳ ಅಮ್ಮ ಬಾಯಿ ಬಾಯಿ ಬಿಟ್ಟರು. ಯಾವುದೋ ಭಾವದಲ್ಲಿ ಮತ್ತೇನೂ ಮಾಡಲು ತೋಚದೇ ಮೂರು ಸಲ ಮುಖ ತೊಳೆದಳು. ಮೊದಲ ಬಾರಿ ಕನ್ನಡಿಯ ಎದುರು ನಿಂತು ‘ಥೂ ಎಣ್ಣೆಣ್ಣೆ ಮುಖ, ಎಷ್ಟು ಸಲ ಸೋಪು ಹಾಕಿ ತೊಳೆದರೂ ಅಷ್ಟೇ’ ಅಂತ ಬಯ್ದುಕೊಂಡಳು. ತಳಮಳಿಸಿದಳು, ಎದುರು ಮನೆಯ ಕಡೆ ನೂರು ಸಲ ಬಗ್ಗಿ ನೋಡಿದಳು. ಅಷ್ಟರಲ್ಲಿ ಅವನು ಮತ್ತೊಬ್ಬ ಹುಡುಗನ ಜೊತೆ ರೆಡಿಯಾಗಿ ಎಲ್ಲೋ ಹೊರಟುಹೋದ. ಅವಳ ಖುಷಿಯ ಬಲೂನು ಠುಸ್ಸೆಂದಿತು. ಎದುರು ಮನೆಗೆ ಬಂದಿದ್ದ ನೆಂಟನೋ, ಏನೋ… ಅಯ್ಯೋ ಹೊರಟುಹೋದ, ಮತ್ತೆ ಯಾವತ್ತು ಬರ್ತಾನೋ ಅಂತೆಲ್ಲ ಸಂಕಟ ಪಟ್ಟಳು. ಸಪ್ಪಗೆ ಪುಸ್ತಕ ಹಿಡಿದು ಕೂತಳು. ಒಂದಿಷ್ಟು ಹೊತ್ತು ಓದುತ್ತಿರುವಾಗಲೇ ಎದುರು ಮನೆಯ ಕಡೆ ನೋಡಿದರೆ, ಅವ ಮತ್ತೆ ಮನೆಯೊಳಗೆ ಹೋಗುತ್ತಿದ್ದ. ಎದೆಯಲ್ಲಿ ಬೆಳದಿಂಗಳು ಹರಡಿದ ಹಾಗೆನ್ನಿಸಿತು! ‘ಅಮ್ಮಾ, ಹಸಿವು ಕಣೇ. ಊಟಾಆಆಆ …’ ಅಂತ ಕೈಲಿದ್ದ ಪುಸ್ತಕ ಎಸೆದು ಕೂಗುತ್ತಾ ಒಳ ಬಂದವಳನ್ನ ಅವಳಮ್ಮ ಬೆಪ್ಪಾಗಿ ನೋಡಿದರು … ‘ತಲೆ ಕೆಟ್ಟಿದ್ಯೇನೆ ನಿನ್ಗೆ?! ಊಟ ಮಾಡಿ ಈಗಿನ್ನೂ ಒಂದು ಘಂಟೆ ಕಳೆದಿಲ್ಲ. ಆಗಲೇ ಮತ್ತೆ ಊಟಾನಾ!!!’ ಅಂದಿದ್ದು ಕೇಳಿ ‘ಅಯ್ಯೋ ಊಟ ಅಂದ್ರೆ ಊಟಾನಾ, ಏನಾದ್ರೂ ಬಾಯಾಡಿಸಕ್ಕೆ ಕೊಡು ಅಂದೆ ಅಷ್ಟೆ’ ಅಂದಳು ಬಿದ್ದರೂ ಮೀಸೆ ಮಣ್ಣಾಗದವಳ ಹಾಗೆ ….

***

ಮಾರನೆಯ ದಿನ ಸ್ಕೂಲಿನಿಂದ ಬಂದವಳೇ ಅವನ ಮನೆ ಕಡೆ ನಡೆದಳು. ನಸುಗತ್ತಲಲ್ಲಿ ಕಂಡವನನ್ನು ಬೆಳಕಿನಲ್ಲಿ ಕಂಡವಳು ಬೆಪ್ಪಾಗಿದ್ದಳು. ಆಗ ಸುಧಾ ಮ್ಯಾಗಜ಼ೀನಿನಲ್ಲಿ ಪ್ರಕಟವಾಗುತ್ತಿದ್ದ ಬಿಂದಿಯಾ ಕಾದಂಬರಿಗೆ ಪೂರಕವಾದ ಚಿತ್ರಗಳು ಪ್ರಕಟವಾಗುತ್ತಿದ್ದವು. ಅದು ಅವಳಿಗೆ ಬಹಳ ಇಷ್ಟವಾದ ಮೆಲೊಡ್ರಾಮಾ ಕಥೆಯಾಗಿತ್ತು. ಅವನು ಆ ಬಿಂದಿಯಾದ ಹೀರೊ ಸತ್ಯನ ಥರವೇ ಇದ್ದ. ಈಗ ಅವನು ಹೆಚ್ಚು ಇಷ್ಟವಾದ! (ಪ್ರೇಮಕ್ಕೆ ಏನೆಲ್ಲ ಕಾರಣಗಳು!) ಅವನ ಹೆಸರು ರವಿ. ಇಂಜಿನಿಯರಿಂಗ್ ಮುಗಿಸಿದ್ದ. ಎದುರು ಮನೆಯಲ್ಲಿದ್ದ ಚಿಕ್ಕಪ್ಪ, ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ಕೆಲಸದ ಬೇಟೆ ಶುರು ಮಾಡುವವನಿದ್ದ ಅಂತೆಲ್ಲ ಗೊತ್ತಾಯಿತು. ಅಪ್ಪ, ಅಮ್ಮ ಹಾಸನದಲ್ಲಿದ್ದರಂತೆ. ಅವನನ್ನೇ ಆರಾಧನಾ ಭಾವದಿಂದ ನೋಡುತ್ತಾ ಮಾತು ಕತೆಯಲ್ಲಿ ಮುಳುಗಿದಳು.
ಅವನು ‘ನೀನೇನು ಓದ್ತಿದ್ದಿ?’ ಅಂದ. ಸ್ವಲ್ಪ ನಾಚಿಕೆ, ಜೊತೆಗಿಷ್ಟು ಅವಮಾನದಿಂದ ‘ಒಂಭತ್ತನೇ ಕ್ಲಾಸು’ ಅಂದಳು. ‘ಎಷ್ಟು ಮಾರ್ಕ್ಸ್ ತೆಗೀತಿ?’ ಅಂದ. ತುಂಬ ಹೆಮ್ಮೆಯಿಂದ ‘ಫ಼ರ್ಸ್ಟ್ ಕ್ಲಾಸ್ ಯಾವಾಗ್ಲೂ’ ಅಂದಳು. ‘ಅಯ್ಯೋ ಅಷ್ಟೇನಾ!! ತುಂಬ ಕಡಿಮೆ ಆಯ್ತು’ ಅಂತ ಹೇಳಿ ಅವಳ ಜಂಭದ ಬಲೂನಿಗೆ ಪಿನ್ನು ಚುಚ್ಚಿದ. ‘ಚೆನ್ನಾಗಿ ಓದು. ಇನ್ನೇನು ಕೆಲಸ ನಿಂಗೆ’ ಅಂತ ಗದರಿದ. ಇನ್ಯಾರಾದರೂ ಅವಳನ್ನು ಹಾಗೆ ಗದರಿದ್ದರೆ ಅವರ ರುಂಡ ಚೆಂಡಾಡಿ ಬಿಡುವಂಥ ಕೋಪಿಷ್ಠೆಯಾದ ಅವಳು, ಅವನ ಮಾತುಗಳನ್ನು ಮಾತ್ರ ಆಯ್ದು ಎತ್ತಿಟ್ಟುಕೊಂಡಳು ಪಾರಿಜಾತದ ಹಾಗೆ!
ಅಲ್ಲಿಂದ ಮುಂದೆ ಅವಳ ಬದುಕು ಬದಲಾಯಿತು. ದಿನವೂ ಸ್ಕೂಲಿನಿಂದ ಅಲ್ಲಾಡಿಕೊಂಡು ಬರುತ್ತಿದ್ದವಳು, ಮಾರನೆಯ ದಿನದಿಂದ ಸ್ಕೂಲು ಬಿಟ್ಟ ಕೂಡಲೇ ಬಾಣದ ಹಾಗೆ ಮನೆಯ ಕಡೆ ಓಡಲು ಶುರು ಮಾಡಿದಳು. ಹಸಿವಿನಲ್ಲಿ ಸಿಡುಕು ಮೋರೆ ಹೊತ್ತು ಬರುತ್ತಿದ್ದವಳ ಮುಖದಲ್ಲಿ ಈಗ ನಗುವೋ ನಗು. ಅವಳ ಮನೆಯ ರಸ್ತೆಗೆ ಕಾಲಿಡುವಾಗ ಆ ನಗು ಇನ್ನೂ ಪ್ರಖರವಾಗುತ್ತಿತ್ತು! ಮನೆಗೆ ಓಡಿ ಬ್ಯಾಗ್ ಎಸೆದು, ತಿಂಡಿ ತಿಂದು ಎದುರು ಮನೆಯಲ್ಲಿ ಬೀಡು ಬಿಡುತ್ತಿದ್ದಳು. ಅವನ ಜೊತೆಯ ಮಾತು ಒಂದೊಂದನ್ನೂ ಎದೆಯಲ್ಲಿ ಕೊರೆ ಕೊರೆದು ಇಟ್ಟುಕೊಂಡಳು. ಅವನ ಮನೆಯ ಬಾಗಿಲು ಕಾಣುವಂತೆ ಇದ್ದ ಜಾಗದಲ್ಲಿ ಒಂದು ಬೆತ್ತದ ಖುರ್ಚಿ ಹಾಕಿ ಕೂತು, ಅವನಿಗೆ ಕಾಣುವಂತೆ ಓದಲು ಶುರು ಮಾಡಿದಳು! ಅದೇನು ಓದುತ್ತಿದ್ದಳೋ ದೇವರಿಗೇ ಗೊತ್ತು! ಕೈನಲ್ಲಿ ಪುಸ್ತಕವಂತೂ ಇರುತ್ತಿತ್ತು ಮತ್ತು ಅವಳು ಓದುವುದನ್ನು ಅವನು ಕಂಡಾಗ ಅವನ ಕಣ್ಣಲ್ಲಿನ ಬೆನ್ನು ತಟ್ಟುವಿಕೆಯ ಭಾವ ಅವಳಿಗೆ ಒಂದಿಷ್ಟು ಹುಮ್ಮಸ್ಸು ಕೊಡುತ್ತಿತ್ತು. ಹಾಗಾಗಿ ಅಷ್ಟೆಲ್ಲ ಹಾರಾಟ!!

ಒಂದೆರಡು ತಿಂಗಳಲ್ಲಿ ಅವನಿಗೆ HMT ಯಲ್ಲಿ ಕೆಲಸ ಸಿಕ್ಕಿದ ದಿನ ಅವಳ ಸಂಭ್ರಮ ನೋಡಬೇಕು. ಆದರೆ ಆ ಜಿಪುಣ ಅವಳಿಗೊಂದು ಸ್ವೀಟ್ ಕೂಡಾ ಕೊಡಿಸಲಿಲ್ಲ. ‘ಸ್ವೀಟ್ ಕೊಡಿಸ್ರಿ’ ಅಂದರೆ ‘ನೀನೇ ಕೊಡಿಸ ಬೇಕು. ನಂಗೆ ಅದರ ಜೊತೆಗೆ ಹೀರೆ ಕಾಯಿ ಬಜ್ಜಿನೂ ಇಷ್ಟ. ಅದನ್ನೂ ಮಾಡು’ ಅಂದ ಆ ಭಂಡ. ಅವಳಿಗ್ಯಾವ ಬಜ್ಜಿ ಮಾಡಲು ಬರಬೇಕು ಪಾಪ. ಮೊದಲ ಬಾರಿಗೆ ಅಡುಗೆ ಮಾಡಲು ಬರುವುದಿಲ್ಲವಲ್ಲ ಅಂತ ಕೈ ಕೈ ಹಿಸುಕಿ ಕೊಂಡಳು!
ಅಲ್ಲಿಯವರೆಗೆ ಬದುಕು ಯಾವುದೋ ಒಂದು ಹದದಲ್ಲಿ ಸಾಗುತ್ತಿತ್ತು. ಅವ ಬಂದ ಕೂಡಲೇ ಅದರ ಹಾದಿಯೇ ಬದಲಾಯಿತು. ಎದೆಯಲ್ಲಿ ನೂರಾರು ಕವಿತೆಗಳು. ಸೂರ್ಯಾಸ್ತ ಹಿಂದೆಂದೂ ನೋಡಿಲ್ಲದಷ್ಟು ಸುಂದರವಾಗಿ ಕಾಣಿಸಲು ಶುರುವಾಯ್ತು. ಮನೆಯ ಮೇಲೆ ಕೂತು ಕವನ ಗೀಚೇ ಗೀಚಿದಳು. ಯಾರಿಗೂ ಸಿಗದ ಹಾಗೆ ಬಚ್ಚಿಟ್ಟು ಕೊಂಡಳು. ಏಕಾಂಗಿಯಾಗಿರುವುದು ಪ್ರಿಯವಾಗ ತೊಡಗಿತು. ಪಾಠಗಳು ಇದ್ದಕ್ಕಿದ್ದ ಹಾಗೆ ಬೋರ್ ಹೊಡೆಸಲು ಶುರು ಮಾಡಿದವು. ಮಾರ್ಕ್ಸ್ ಕಡಿಮೆಯಾಯ್ತು. ಅದಕ್ಕೆ ಅವನು ಇನ್ನಿಷ್ಟು ಬೈದ. ‘ನಿನ್ನಿಂದಲೇ ಇದೆಲ್ಲ’ ಅಂತ ಮನಸ್ಸಿನಲ್ಲೇ ಬಯ್ದಳು. ಅವನು ಮಾತ್ರ ಅವಳ ಭಾವನೆಗಳು ಅರ್ಥವೇ ಆಗುತ್ತಿಲ್ಲವೇನೋ ಅನ್ನುವ ಹಾಗೆ ಅವಳನ್ನು ಸಣ್ಣ ಮಗುವಿನ ಹಾಗೆ ಮಾತಾಡಿಸುತ್ತಿದ್ದ. ಅವಳ ಅಮ್ಮ ಗೊಣಗುತ್ತಿದ್ದಳು ‘ದಿನಾ ಅವರ ಮನೆಗೆ ಹೋಗಿ ಕೂತ್ರೆ ಅವರೇನು ಅಂದ್ಕೊಳ್ತಾರೆ ಹೇಳು. ನಿಂಗಂತೂ ಒಂಚೂರೂ ಬುದ್ಧಿ ಇಲ್ಲ’ ಅಂತ. ‘ಏನಂದು ಕೊಳ್ತಾರೆ? ನಾನೇನು ಅವರ ಮನೆಗೆ ಊಟಕ್ಕಾ ಹೋಗ್ತೀನಿ? ಮಾತಾಡ್ಕೊಂಡು ಬಂದ್ರೆ ಯಾಕೆ ಬಯ್ಕೊಳ್ತಾರೆ’ ಅಂತ ದಬಾಯಿಸಿದಳು. ಅವನು ರಜೆ ಹಾಕಿ ಹಾಸನಕ್ಕೆ ಹೋದರೆ ಇಡೀ ಬೆಂಗಳೂರೇ ಕತ್ತಲಾದ ಹಾಗೆ ಚಡಪಡಿಸುತ್ತಿದ್ದಳು. ಅವಳು ಊರಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದರಂತೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳಲು ಹೆಣಗುತ್ತಿದ್ದಳು.
ಹಾಗೊಂದು ಸಲ ಊರಿಗೆ ಹೋಗಿ ಬಂದ ನಂತರದ ಕಥೆ ತಮಾಷೆಯಾಗಿತ್ತು. ಅವಳ ಈ ಆಕರ್ಷಣೆ ಇಡೀ ಬೀದಿಯ ಎಲ್ಲರಿಗೂ ಗೊತ್ತಾಗಿ ಹೋಗಿತ್ತು. ಹಾಗಾಗಿ ಅವಳನ್ನು ರೇಗಿಸಲು ಎಲ್ಲರೂ ಏನಾದರೊಂದು ಹೇಳುತ್ತಿದ್ದರು. ಅದು ಅರ್ಥವಾಗದ ಇವಳು ಒಳಗೊಳಗೇ ಬೇಯುವುದನ್ನು ಕಂಡು ಸಂತೋಷಿಸುತ್ತಿದ್ದ ವಿಕೃತ ಮನುಷ್ಯರು ಎಷ್ಟೊಂದು ಜನರಿದ್ದರು! ಆ ಸಲ ಊರಿನಿಂದ ಬಂದಾಗ ಬೇಬಿ ಅನ್ನುವ ಹುಡುಗಿಯೊಬ್ಬಳು ರಜೆಯಲ್ಲಿ ಪಕ್ಕದ ಮನೆಗೆ ಬಂದಿದ್ದಳೆಂತಲೂ, ರವಿ ಅವಳನ್ನು ತುಂಬ ಮಾತಾಡಿಸುತ್ತಿದ್ದ ಅಂತಲೂ ಹೇಳಿ ಅವಳ ಎದೆಯಲ್ಲಿ ಕಿಚ್ಚು ಹೊತ್ತಿಸಿಟ್ಟಿದ್ದರು. ಅದಾದ ನಂತರ ಅವನು ಒಂದೇ ಒಂದು ದಿನ ಯಾವುದೋ ಕಾರಣಕ್ಕಾಗಿ ಕಡಿಮೆ ಮಾತಾಡಿದರೆ ಆ ಬೇಬಿಯೆನ್ನುವ ಸವತಿಯೇ ಇದಕ್ಕೆ ಕಾರಣ ಅಂತ ಹಲ್ಲು ಮಸೆಯುತ್ತಿದ್ದಳು ಈ ನಮ್ಮ ಹೀರೋಯಿನ್! ಒಂದಿಷ್ಟು ದಿನ ಆ ಬೇಬಿಯ ಗುಣಗಾನ ಪಾಡಿ ಪಾಡಿ ನಂತರ ಎಲ್ಲರೂ ಸುಮ್ಮನಾಗಿದ್ದರು. ಆದರೆ ಇವಳಿಗೆ ಮಾತ್ರ ಪ್ರತೀ ರಜೆಯಲ್ಲೂ ಆ ಬೇಬಿ ಮತ್ತೆಲ್ಲಿ ಬಂದುಬಿಡುತ್ತಾಳೋ ಅನ್ನುವ ಆತಂಕ ತುಂಬ ದಿನ ಕಾಡುತ್ತಲೇ ಇತ್ತು …
ಒಂದು ದಿನ ಅವನ ಮನೆಯಲ್ಲಿ ಕೂತು ಹರಟುತ್ತಿರುವಾಗ ಸುಮ್ಮನೆ ಪಕ್ಕದಲ್ಲಿ ನೋಡಿದರೆ ಆ ‘ಬಿಂದಿಯಾ’ ಕಾದಂಬರಿ ಸುಧಾದಲ್ಲಿ ಪ್ರಕಟವಾಗುತ್ತಿತ್ತಲ್ಲ, ಅದನ್ನೆಲ್ಲ ಬೈಂಡ್ ಮಾಡಿದ್ದು ಕಣ್ಣಿಗೆ ಬಿತ್ತು. ಅವಳ ಖುಷಿ ಯಾಕೆ ಹೇಳಬೇಕು! ಅದನ್ನ ಅವರಿಂದ ಬೇಡಿ, ಪರಮ ಪಾವನವಾಗಿ ಮನೆಗೆ ಎತ್ತಿಕೊಂಡು ಬಂದಳು. ಒಂದೊಂದು ಭಾಗದ ಆರಂಭದಲ್ಲೂ ಹಾಕಿದ್ದ ಅವನ ಚಿತ್ರವನ್ನು ಮತ್ತೆ ಮತ್ತೆ ನೋಡಿದಳು. ಆ ಪುಸ್ತಕ ಮತ್ತೆ ವಾಪಸ್ ಕೊಡದೇ ತನ್ನಲ್ಲೇ ಉಳಿಸಿಕೊಂಡಳು.
ನೂರು ಭಾವಗಳ
ಜಲಪಾತ ಧುಮ್ಮಿಕ್ಕುವ
ನಿನ್ನ ಕಣ್ಣಲ್ಲಿ
ನನ್ನ ನೆನಪಿನ
ಹನಿಯೊಂದಾದರೂ ಇರಲಿ …
ಹೀಗಂತ ಬರೆದುಕೊಂಡಿದ್ದಳು ಒಂದು ದಿನ. ಹಾಗೊಂದು ಹನಿ ಇತ್ತೋ, ಇಲ್ಲವೋ ಅಂತ ಯಾವತ್ತಿಗೂ ಅವಳಿಗೆ ಅರ್ಥವೇ ಆಗಲಿಲ್ಲ. ಅದೇ confusion ನಲ್ಲಿ ಅವಳಿರುವಾಗಲೇ ಕಾಲೇಜಿಗೆ ಕಾಲಿಟ್ಟು ಆಗಿತ್ತು. ಆಗಲೇ ಆ ಶಾಕಿಂಗ್ ಸುದ್ದಿ ಬಂದಿದ್ದು … ಅವರು ಮನೆ ಬದಲಾಯಿಸುವವರಿದ್ದರು. ಅದರಲ್ಲೂ ಸಣ್ಣ ಸಮಾಧಾನವೆಂದರೆ ಅವರು ಬದಲಾಯಿಸುತ್ತಿದ್ದ ಮನೆ ಭಾಷ್ಯಂ ಸರ್ಕಲ್‌ನಲ್ಲಿತ್ತು … ಅವಳ ಮನೆಯಿಂದ ಒಂದು ಕಿಲೋ ಮೀಟರ್ ಮಾತ್ರ ದೂರದಲ್ಲಿತ್ತು. ಆ ನಂತರ ಕೂಡಾ ಅವಳು ವಾರಕ್ಕೆ ಒಂದು ದಿನ ವ್ರತದಂತೆ ಅವನ ಮನೆಗೆ ಹೋಗುವುದನ್ನು ತಪ್ಪಿಸಲಿಲ್ಲ. ಅವನ ಜೊತೆ ಮಾತನಾಡಿ ಬಂದರೆ ಮುಂದಿನ ವಾರಕ್ಕೆ ಪೂರಾ ಸಾಕಾಗುವಷ್ಟು ಜೀವನೋತ್ಸಾಹದ ಟಾನಿಕ್ ಸಿಕ್ಕ ಹಾಗೆ ಅನ್ನಿಸುತ್ತಿತ್ತು. ಅವನೂ ಎಂದಾದರೊಂದು ಸಲ ಬರುತ್ತಿದ್ದ ಮನೆಯ ಎಲ್ಲರ ಜೊತೆ. ಅವನು ಬಂದಾಗೊಮ್ಮೆ ಹೀರೆ ಕಾಯಿ ಬಜ್ಜಿ ಮಾಡು ಅಂತ ಅಮ್ಮನಿಗೆ ಹೇಳಿದರೆ ಅವಳು ಯಾಕೋ ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ. ಅವನ ಮೆಲುನಗೆ, ಕೊಂಕು ಮಾತು, ಗದರಿಕೆ, ಛೇಡಿಕೆಗಳಲ್ಲಿ ದಿನ ಉರುಳಿ ಹೋದದ್ದು ಗೊತ್ತೇ ಆಗಲಿಲ್ಲ.
ಅಷ್ಟೆಲ್ಲಾ ಆದರೂ ಅವಳು ಎಂದೂ ಅವನ ಎದುರು ನಿಂತು ನಿನ್ನನ್ನು ಪ್ರೀತಿಸುತ್ತೇನೆ ಅನ್ನಲೇ ಇಲ್ಲ. ಆ ಕಾಲದ ಪ್ರೇಮ ಕತೆಗಳಲ್ಲಿ ಸುಮಾರು ಇಂಥವೇ …. ಬರೀ ಎದೆಯ ಕಪ್ಪೆ ಚಿಪ್ಪಿನೊಳಗೆ ಮುತ್ತಾದ ಪ್ರೇಮವೇ. ಪ್ರಕಟ ಪಡಿಸಲು ಅದೇನು ತಡೆ ಹಿಡಿಯುತ್ತಿತ್ತೋ ಯಾರು ಕಂಡರು! ಒಂದು ಸಲ ಮಾತ್ರ ಅವನ ಮನೆಗೆ ಹೋಗಿದ್ದಾಗ ಅವನ ಚಿಕ್ಕಪ್ಪ ‘ಆ ಬಿಂದಿಯಾ ಬುಕ್ಕು ಕೊಡಮ್ಮಾ ವಾಪಸ್’ ಅಂದಾಗ ಮಾತ್ರ ಜೊತೆಯಲ್ಲಿದ್ದ ಅವಳ ಅಕ್ಕ ‘ಅವಳು ಅದನ್ನ ಕೊಡಲ್ಲ ಅನ್ಸತ್ತೆ. ಅದರ ಹೀರೋ ನಿಮ್ಮ ರವಿ ಇದ್ದ ಹಾಗಿದಾನಂತೆ’ ಅಂದು ಬಿಟ್ಟಿದ್ದಳು. ಅವಳು ತಲೆ ಎಲ್ಲಿಟ್ಟುಕೊಳ್ಳಲಿ ಅಂತ ಹುಡುಕುತ್ತಿರುವಾಗಲೇ ಚಿಕ್ಕಪ್ಪ ‘ಹಾಗಿದ್ದರೆ ಅದನ್ನ ನೀನೇ ಇಟ್ಟುಕೋ’ ಅಂದಾಗ, ಅವರ ಜೊತೆ ಇಡೀ ಮನೆಯಲ್ಲಿದ್ದ ಎಲ್ಲರೂ ನಕ್ಕಿದ್ದರು. ಅವಳಿಗೆ ಅವಮಾನವಾಗಿ ಹೋಗಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ಖುಷಿ ಕೂಡಾ ಅವನನ್ನು ಕಂಡರೆ ತನಗೆ ಇಷ್ಟ ಅನ್ನುವ ಮೆಸೇಜ್ ಹಾಗಾದರೂ convey ಆಯ್ತಲ್ಲಾ ಎಂದು….
ಮುಂದೇನಾಯಿತು ಅಂತ ನೀವು ಕೇಳುತ್ತೀರಿ ಅನ್ನುವುದು ನನಗೆ ಗೊತ್ತು. ಮುಂದೆಯೂ ಏನೂ ಆಗಲಿಲ್ಲ! ಅಲ್ಲಿಂದ ಮುಂದೆಯೂ ಅಸಂಖ್ಯಾತ ಬಾರಿ ಭೇಟಿಯಲ್ಲೂ ಏನೂ ಆಗಲಿಲ್ಲ. ಅವಳ ಎದೆಯಲ್ಲಿ ಮೊದಲ ಬಾರಿಗೆ ಪ್ರೇಮ ಅನ್ನುವುದರ ಅನುಭವ ಮೂಡಿಸಿದ ಅವನು ಅವಳನ್ನು ಇಷ್ಟ ಪಡುತ್ತಿರಲಿಲ್ಲವೋ ಅಥವಾ ಅವಳು ಹತ್ತು ವರ್ಷ ಚಿಕ್ಕವಳಾಗಿದ್ದರಿಂದ ಅವನಿಗೆ ಆ ಭಾವನೆ ಮೂಡಲೇ ಇಲ್ಲವೋ ಅಥವಾ ನೋಡಲು ಸುಂದರಿಯಲ್ಲದ ಅವಳ ಮೇಲೆ ಪ್ರೇಮ ಮೂಡಲಿಲ್ಲವೋ ಗೊತ್ತಿಲ್ಲ. ಆ ಅನಿಶ್ಚಯತೆಯಲ್ಲೇ ಬದುಕಿನ ಹೊರಳಾಟಗಳಲ್ಲಿ, ತಿರುವುಗಳಲ್ಲಿ ಇಬ್ಬರೂ ಕಳೆದು ಹೋದರು…

***

ಕಥೆ ಮುಗಿಸುವವರೆಗೂ ಆ “ಅವಳು” ಅಂದರೆ ನಾನು ಅಂತ ಹೇಳಬೇಕೋ, ಬೇಡವೋ ಅನ್ನುವ ಜಿಜ್ಞಾಸೆ. ಕಾಲನ ಹೊಡೆತಕ್ಕೆ ಸಿಕ್ಕು ಕಂದು ಬಣ್ಣಕ್ಕೆ ತಿರುಗಿದ ಬಿಂದಿಯಾ ಕಾದಂಬರಿ ಆಗೀಗ ಕಾಣುವಾಗೆಲ್ಲ ನೆನಪಾಗುವ ಅವನು ಇದನ್ನು ಓದಿದರೆ ಇಂಥ ಹುಚ್ಚಿಯೊಬ್ಬಳಿದ್ದಳು ಅಂತ ನೆನಪಾಗಬಹುದು ಅನ್ನುವ ನಿರೀಕ್ಷೆಯಲ್ಲಿ ಕೊನೆಗೊಮ್ಮೆ ಹೇಳುವ ನಿರ್ಧಾರಕ್ಕೆ ಬಂದೆ. ಇಷ್ಟೆಲ್ಲ ಬರೆದ ಮೇಲೆ ಅವನನ್ನು ಒಮ್ಮೆ ಭೇಟಿಯಾಗಬೇಕು ಅಂತ ಅನ್ನಿಸಿತು ಯಾಕೋ. ಇಷ್ಟೆಲ್ಲ ಚಾಚಿಕೊಂಡ ಬದುಕಿನ ಕೊಂಡಿಗಳಲ್ಲಿ ಯಾರಿಗಾದರೂ ಅವ ಗೊತ್ತಿರಬಹುದಾ? ಒಮ್ಮೆ ಅವನನ್ನು ಭೇಟಿಯಾಗಬೇಕು…
ಆಗಿ …..? ಏನು ಹೇಳುವುದು ?????
ನಿನ್ನ ನೆನಪಾಗಿ ಈಗಲೂ ನನ್ನಲ್ಲಿ ಉಳಿದಿರುವ ಬಿಂದಿಯಾ ತೋರಿಸಿ ‘ಈಗಲಾದರೂ ಇದನ್ನು ವಾಪಸ್ ಕೊಡುವ ಉದ್ದೇಶವಿಲ್ಲ’ ಅಂತ ರೇಗಿಸಬೇಕಾ?
ನಿನ್ನನ್ನು ಕಂಡು ಹುಚ್ಚಾಗಿ ಪ್ರೀತಿಸುತ್ತಿದ್ದೆ ಅನ್ನಬೇಕಾ?
ನಿನಗೆ ಯಾಕೆ ನನ್ನನ್ನು ಕಂಡರೆ ಏನೂ ಅನ್ನಿಸಲೇ ಇಲ್ಲ ಅಂತ ಪ್ರಶ್ನಿಸಬೇಕಾ?
ಇಷ್ಟು ವರ್ಷಗಳ ನಂತರವೂ ನನಗೆ ಎಲ್ಲವೂ ನಿಚ್ಛಳವಾಗಿ ನೆನಪಿದೆ ನೋಡು ಅಂತ ನೆನಪಿಸಿ, ಸುಮ್ಮನೆ ನಕ್ಕು ಹಿಂತಿರುಗಬೇಕಾ?
ನನಗೆ ಈಗ ಹೀರೆಕಾಯಿ ಬಜ್ಜಿ ಮಾಡಲು ಬರುತ್ತೆ ಅನ್ನಬೇಕಾ?
ಅಥವಾ … ಅಥವಾ …. ಮುಚ್ಚಿರುವ ಕೋಣೆಯ ಬಾಗಿಲ ಕೀಲಿಯನ್ನು ಸುಮ್ಮನೆ ಎಸೆದು ಬಿಡುವುದು ಒಳಿತಾ ….?!

‍ಲೇಖಕರು G

February 13, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Ajit

    ಅಥವಾ … ಅಥವಾ …. ಮುಚ್ಚಿರುವ ಕೋಣೆಯ ಬಾಗಿಲ ಕೀಲಿಯನ್ನು ಸುಮ್ಮನೆ ಎಸೆದು ಬಿಡುವುದು ಒಳಿತಾ ….?! …. Such a wonderful end.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: