ಹೊಸ ಬಾಕ್ಸ್ ಆಫೀಸ್ ಹಿಟ್ ಚಿತ್ರ..“The great Indian fight “

ಹೊಸ ಬಾಕ್ಸ್ ಆಫೀಸ್ ಹಿಟ್ ಚಿತ್ರ..
“The great Indian fight “

ಅದ್ದೂರಿ ಬಾಕ್ಸ್ ಆಫೀಸ್ ಚಿತ್ರದಂತೆ ಕಂಡು ಬರುತ್ತಿರುವ ಭಾರತ ರಾಜಕಾರಣದ, ಈ ಭಾರೀ ಯುದ್ದಕ್ಕೆ ಮೇಲಿನ ಹೆಸರು ಇಡಬಹುದೇನೋ?

ಭಾರತ ಪ್ರಜಾಸತ್ತೆಯ ಬಹುಕೋಟಿ, ಬಹುಭಾಷಾ ಚಿತ್ರದ ಮೇಕಿಂಗ್ ಭರ್ಜರಿಯಾಗಿದೆ.

ಚಿತ್ರದ ಹೀರೋ ನರೇಂದ್ರ ಮೋದಿ ಪ್ರತಿ ಹಂತದಲ್ಲೂ ಗರ್ಜಿಸುತ್ತ, ಗುರಾಣಿ ಹಿಡಿದು, ವೀರಾಗ್ರಣಿಯಂತೆ ಭಾವೋನ್ಮಾದದ ಡೈಲಾಗ್ ಹೊಡೆಯುತ್ತಿರುವುದು ನೋಡಿದರೆ ಜನ ಚಪ್ಪಾಳೆ, ಶಿಳ್ಳೆ ಹೊಡೆದು ಕಮಾನ್, ಬಕಪ್ ಹೀರೋ ಎಂದು ಹುರಿದುಂಬಿಸುವುದು ಗ್ಯಾರಂಟಿ ಎಂಬಂತೆ ಮೇಲ್ನೋಟಕ್ಕೆ ಕಾಣುತ್ತದೆ.

ಶತ್ರು ರಾಷ್ಟ್ರದ ಪಾತಕಿಗಳ ಜೊತೆ, ಭಾರತದ ಕೆಲವರು ಪಿತೂರಿ ನಡೆಸಿ ಯೋಧರನ್ನು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಿದ್ದೇ ತಡ ದೇಶಪ್ರೇಮದ ಹಾಡು, ಕವಿತೆ, ಭಾಷಣದಿಂದ ದುಮ್ಮಿಕ್ಕುವ ನಾಯಕ ‘ಧರ್ಮ ಯುದ್ದ’ ಸಾರುತ್ತಾನೆ.

ಇದರಿಂದ ಮತ್ತೊಂದು ಧರ್ಮ ಬೆಚ್ಚಿ ಬೀಳುತ್ತದೆ. ತನ್ನ ಆಡಳಿತದ ಈವರೆಗಿನ ವೈಫಲ್ಯಕ್ಕೆ ಬದಲಾಗಿ ದೇಶಪ್ರೇಮದ ಹಾಡು ಹೇಳಿದ್ದೆ ತಡ ಎಲ್ಲವನ್ನು ಮರೆತ ಪ್ರೇಕ್ಷಕರು ತಲೆದೂಗುತ್ತ ನರ್ತಿಸತೊಡಗುತ್ತಾರೆ.
ಮತ್ತೊಬ್ಬ ನಾಯಕ ರಾಹುಲ್ ಪರಿಸ್ಥಿತಿ ಅರ್ಥ ಮಾಡಿಕೊಳ್ಳುವ ಷ್ಟರಲ್ಲಿ ಕಿಂದರಜೋಗಿ ಪೀಪಿ ಊದುತ್ತಾ ಜನರನ್ನು ಮರುಳು ಮಾಡುವ ರೀತಿ ಕೌತುಕಮಯ.

ಆದರೂ ರಾಹುಲ್ ತನ್ನ ಸೇನೆ ಕಟ್ಟಿಕೊಂಡು ಜನರಿಗೆ ವರ್ತಮಾನದ ಕಟು ಮಾಸ್ಥವ ಸ್ಥಿತಿ ಮನವರಿಕೆ ಮಾಡಿಕೊಡಲು ಪರದಾಡುವ ದೃಶ್ಯ ಮನಕಲಕುವಂತಿದೆ..

ತನ್ನ ಬೆಂಬಲಿಗರನ್ನು ಸೇರಿಸಿಕೊಂಡು ಜನಸಾಮಾನ್ಯರ ಅನ್ನ, ಅಕ್ಷರ, ನೀರು, ಸೂರು ಎಂದು ಬಡಬಡಾಯಿಸುತ್ತಿರುವ ರಾಹುಲ್ ದ್ವನಿ ಜನಕ್ಕೆ ಕೇಳುತ್ತಿದೆಯೆ?.. ಅದೂ ಸ್ಪಷ್ಟವಾಗುತ್ತಿಲ್ಲ. ಇದರ ಜೊತೆ ಅಖಿಲೇಶ್, ಮಾಯಾ, ಮಮತಾ ಇವರ ಹೋರಾಟ ಕೂಡಾ ಕುತೂಹಲಕಾರಿ.

ಯುದ್ಧದ ಉನ್ಮಾದ, ದೇಶಪ್ರೇಮದ ಉದ್ವೇಗ, ಜಾತಿ, ಧರ್ಮದ ಅಫೀಮು ಇದರಲ್ಲಿ ಬಡತನ, ನಿರುದ್ಯೋಗ, ನೋವನ್ನು ಮರೆತಂತೆ ಕಾಣುವ ದೃಶ್ಯ. ಹೀಗೆ ಸಾಗುತ್ತದೆ ನಾಯಕನ ದಂಡಯಾತ್ರೆ. ಇದು..ಮೇಕಿಂಗ್ ಆಫ್ ದ ಮೂವೀ.

ಬಾಂಬ್ ಬ್ಲಾಸ್ಟ್ ನ ಎದೆ ಝಲ್ ಎನಿಸುವ ದೃಶ್ಯ, ಉನ್ಮತ್ತ ಭಾಷಣಗಳು, ಅಲ್ಲಲ್ಲಿ ಅಖಾಡದಲ್ಲಿ ಭರ್ಜರಿ ಫೈಟ್ಸ್, ವ್ಯಂಗ್ಯಾಸ್ತ್ರ ಪ್ರಯೋಗ ಇವೆಲ್ಲ ರೋಮಾಂಚನಕಾರಿಯಾಗಿವೆ. ತಂತ್ರ, ಪ್ರತಿತಂತ್ರ ಬಾಣಗಳು ಚಿತ್ರವನ್ನು ಇನ್ನಷ್ಟು ಕದನ ಕೌತುಕಗೊಳಿಸಲಿವೆ.

ಭರ್ಜರಿ ಫೈಟು, ಡೈಲಾಗು, ದಿಢೀರ್ ಟ್ವಿಸ್ಟ್ ಗಳಿಂದ ಯಶಸ್ವಿ ಸಿನಿಮಾದ ಎಲ್ಲ ಸೂತ್ರಗಳು ಇಲ್ಲಿ ಕಾಣುತ್ತಿವೆ.
ಕರ್ನಾಟಕ, ತಮಿಳುನಾಡು, ಕೇರಳ.. ಹೀಗೆ ದ್ರಾವಿಡರ ನೆಲದಲ್ಲಿ ಅದ್ದೂರಿ ಚಿತ್ರೀಕರಣ ಮುಗಿದಿದ್ದು, ಇನ್ನು ಉತ್ತರಪ್ರದೇಶ, ಬಿಹಾರ, ಗುಜರಾತ, ರಾಜಸ್ಥಾನ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ಜಾರ್ಖಂಡ್.. ಮೊದಲಾದ ಕಡೆ ಚಿತ್ರೀಕರಣ ಬಾಕಿ ಇದೆ…

ಇದು ಪ್ರಸಕ್ತ ರಾಜಕಾರಣದ ‘ಪೌರಾಣಿಕ ವರ್ಷನ್’ ಆದರೆ, ಇದಕ್ಕೆ ಆಧುನಿಕತೆಯ ರೂಪ ನೀಡೋಣ.
ಅದಕ್ಕೆ ‘ಕಾರ್ಪೊರೇಟ್ ಸ್ಟೈಲ್’ ಎನ್ನೋಣ.

ಕಳೆದ ಐದು ವರ್ಷ ಆಡಳಿತ ನೀಡಿರುವ ಮೋದಿ ಮರು ಆಯ್ಕೆ ಬಯಸಿದ್ದಾರೆ. ರಾಹುಲ್ ಗಾಂಧಿ ಮತ್ತೆ ಇತರೆ ವಿರೋಧಿ ನಾಯಕರು ಮೋದಿಗೆ ಸೆಡ್ಡು ಹೊಡೆದಿದ್ದಾರೆ.

ಈ ಕಾರ್ಪೊರೇಟ್ ಶೈಲಿ ಹೇಗಿದೆ ಅಂದ್ರೆ ಪುಲ್ವಾಮ ಬಾಂಬ್ ಬ್ಲಾಸ್ಟ್ ಆಗುತ್ತಿದ್ದಂತೆ, ಅದರಿಂದ ಸ್ಪೂರ್ತಿ ಪಡೆದು ರೊಚ್ಚಿಗೆದ್ದ ಪ್ರಧಾನಿ, ಪಾಕ್ ಮೇಲೆ ದಾಳಿ ನಡೆಸಿದರು. ಸೈನಿಕರ ಪ್ರಾಣದ ಹೆಸರಲ್ಲಿ ಮತ ಯಾಚನೆಗೆ ಭರ್ಜರಿ ಆರಂಭ ನೀಡಿದರು.ತಾನೇ ಖುದ್ದು ಹೋಗಿ ಉಗ್ರರ ನೆಲೆಗೆ ಬಾಂಬ್ ಹಾಕಿದ ಮಾದರಿಯಲ್ಲೇ ತೊಡೆತಟ್ಟಿದರು.
ಪ್ರಶ್ನೆ ಕೇಳಿದ ಎದುರಾಳಿಗಳನ್ನು ದೇಶದ್ರೋಹಿ ಎಂದು ಅವರು ಅನುಯಾಯಿಗಳು ನಿಂದಿಸಿದರು. ಎದುರಾಳಿಗಳನ್ನು ಮಟ್ಟಹಾಕಲು ಯತ್ನಿಸಿದರು. ಕಂಡಕಂಡಲ್ಲಿ “ಮೋದಿ…ಮೋದಿ “ ಎಂದು ಅಬ್ಬರಿಸಿದರು.

ಈ ಚೌಕಿದಾರನನ್ನು ಚೋರ್ ಎಂದು ರಾಹುಲ್ ಕರೆದಾಗ ‘ಮೈ ಬೀ ಚೌಕೀದಾರ್’ ಎಂದು ಇಡೀ ಮೋದಿ ಪಡೆಯೇ ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮದಲ್ಲಿ ಅಬ್ಬರಿಸುವ ಮೂಲಕ ಈ ಕಾರ್ಪೊರೇಟ್ ಹೈಟೆಕ್ ಶೈಲಿ ತಾರಕಕ್ಕೆ ಏರಿತು.

ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ, ಮೂಲಭೂತ ಸೌಕರ್ಯ ಕುರಿತಾದ ಪ್ರಶ್ನೆಯನ್ನೇ ಕಣದಿಂದ ಮಾಯ ಮಾಡಿದ ಹಣವಂತರ ಈ ಕಾರ್ಪೊರೇಟ್ ಶೈಲಿ, ಭರ್ಜರಿ ಶಕ್ತಿ ಪ್ರದರ್ಶನದ ಸಮಾವೇಶ, ಮರುಳು ಮಾಡುವ ಮಾತುಗಾರಿಕೆಯ ಮೂಲಕ ಕೃತಕ ಅಲೆ ಸೃಷ್ಟಿಸುವ ಯತ್ನ ನಡೆಸಿತು.. ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಇದಕ್ಕಾಗಿ ಟೊಂಕ ಕಟ್ಟಿ ನಿಂತವು.

ಮೊದಲ ಹಂತದ ಮತದಾನದ ನಂತರ ಕಾರ್ಪೊರೇಟ್ ಸರ್ವೇ ಶುರು. ಮೋದಿ ಅಲೆ ಇಲ್ಲ ಎನ್ನುತ್ತಿದ್ದಂತೆ, ಏರಡನೆ ಹಂತದಲ್ಲೂ ಅದನ್ನು ಸೃಷ್ಟಿಸಲು ಇಲ್ಲವೇ ನೆಲೆ ‘ಇಂಪ್ರೂವ್’ ಮಾಡಿಕೊಳ್ಳಲು ಮತ್ತೊಂದು ತಂತ್ರ.
ಅದು ಇಲ್ಲಿ ಕರ್ನಾಟಕದಲ್ಲಿ ಸ್ಥಳೀಯ ಲಿಂಗಾಯಿತರನ್ನು, ಅತ್ತ ಕೇರಳದಲ್ಲಿ ಶಬರಿಮಲೆ ಭಕ್ತರನ್ನು ಸೆಳೆದು ಅಲೆ ಎಬ್ಬಿಸುವ ತಂತ್ರ.

ಹೀಗೆ ಮತದಾನದ ನಂತರ ಮತ್ತೆ ಕೋಟ್ಯಂತರ ಖರ್ಚು ಮಾಡಿ , ಮತ್ತೆ ಅನಧಿಕೃತ exit poll ರಹಸ್ಯ survey.
ಈ ಸಮೀಕ್ಷೆಯಲ್ಲಿ ಬಿಜೆಪಿ ಹಾಗೂ ಮೋದಿ ವರ್ಚಸ್ಸು ಸುಧಾರಿಸಿಲ್ಲ ಎಂದು ಕಂಡು ಬಂದ ನಂತರ, ಅಖಾಡಕ್ಕೆ ಹೊಸ ಮಸಾಲೆ ಸೇರ್ಪಡೆ. ಈ ತಂತ್ರ ಬೇರೆ ಯಾರೂ ಅಲ್ಲ. ಸಾಧ್ವಿ ಪ್ರಗ್ಯಾ ಸೇರ್ಪಡೆ.

ಈ ಸೇರ್ಪಡೆ ಮೂಲಕ ಕಠೋರ ಹಿಂದುತ್ವದ ಹೊಸ ಅಜೆಂಡಾವನ್ನು ಚುನಾವಣೆ ಕಣಕ್ಕೆ ತಂದು ಮುಂದಿನ ಹಂತದ ಚುನಾವಣೆಯಲ್ಲಿ ಮತ ವಿಕೇಂದ್ರಿಕರಣ ನಡೆಸುವ ತಂತ್ರ.

ಹೀಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ, ಪ್ರತಿ ವಹಿವಾಟಿನಲ್ಲೂ ಮಾರುಕಟ್ಟೆ ಸೂಚ್ಯಂಕ ಗಮನಿಸುವ ಕಂಪನಿಗಳ ಮಾದರಿಯಲ್ಲೇ, ಪ್ರತಿ ಹಂತದ ಚುನಾವಣೆಯಲ್ಲಿ ಒಂದೊಂದು ingredient ಸೇರಿಸಿ, ಮೋದಿಯವರ ವರ್ಚಸ್ಸಿನ ಸೂಚ್ಯಂಕ ಗಮನಿಸಿ ಪದೇಪದೇ ತಂತ್ರ ಬದಲಾಯಿಸುವ ಈ ವೈಖರಿಗೆ ಏನನ್ನುತ್ತೀರ?

ನಾಲ್ಕು, ಐದು, ಆರನೇ ಹಂತದ ಚುನಾವಣೆ ಉದ್ವೇಗ ಹೆಚ್ಚಿಸುತ್ತಿದ್ದಂತೆ ಪ್ರತಿ ಹಂತದಲ್ಲೂ ವರ್ಚಸ್ಸು, ತಂತ್ರ, ವಿಚಾರವನ್ನು ದಿಢೀರ್ ಬದಲಿಸಿಕೊಳ್ಳುವುದು ಈ ಕಾರ್ಪೊರೇಟ್ ರಾಜಕೀಯದಲ್ಲಿ ಸಲೀಸಾಗಿಬಿಟ್ಟಿದೆ.
ಇತ್ತೀಚಿಗೆ ತುಸು ಗಡಸು, ಕಠೋರ ಮಾತಿನ ವ್ಯಕ್ತಿತ್ವ ಅಷ್ಟಾಗಿ ಗಮನ ಸೆಳೆಯದೇ ‘ಏಕತಾನತೆ’ಯಾಗುತ್ತಿದೆ ಎಂದು ಸಮೀಕ್ಷೆ ಹೇಳುತ್ತಿದ್ದಂತೆ, ತಕ್ಷಣ ನಟ ಅಕ್ಷಯ ಕುಮಾರ್ ಮೂಲಕ ಸಂದರ್ಶನ ಮಾಡಿಸಿ ರಾತ್ರೋರಾತ್ರಿ ‘ಮೃದು ವ್ಯಕ್ತಿತ್ವ’ ರೂಪಿಸಿ, ಅವರು ಮಾವಿನ ಹಣ್ಣು ತಿನ್ನುವ ಹಸನ್ಮುಖಿ ನಾಯಕ ಎಂದು ಬಿಂಬಿಸುವ ನಡೆದದ್ದು ‘ಕಂಪನಿ ರಾಜಕಾರಣದ’ ಹಿಡಿತದ ಪ್ರತೀಕ.

ಇದೀಗ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ , ಮಧ್ಯಪ್ರದೇಶ, ಛತ್ತೀಸ್ ಘಡ ಮೊದಲಾದ ಚುನಾವಣೆಯಲ್ಲಿ ‘ಹಿಂದುಳಿದ ವರ್ಗಗಳ ನಾಯಕ’ ಎಂಬ ಮುಖವಾಡ. ಇಂಥ ಕಾರ್ಪೊರೇಟ್ ನಾಟಕಗಳಿಗೆ ಕೇಳುವವರು ಯಾರೂ ಇಲ್ಲವೇ?

ಜಗತ್ತಿನ ದೊಡ್ಡ ಪ್ರಜಾಸತ್ತೆ ಎಂದೇ ಹೆಸರು ಪಡೆದುಕೊಂಡಿರುವ ಭಾರತ ರಾಜಕೀಯದಲ್ಲಿ ಕುತಂತ್ರಗಳು ಹೆಚ್ಚಾಗಿ ಮೌಲ್ಯಗಳು ನೆಲ ಕಚ್ಚಿರುವ ರೀತಿ ಇದು. ವಾಸ್ತವವಾಗಿ ಐದು ವರ್ಷದ ಸಾಧನೆ ಮೇಲೆ ಮತ ಕೇಳಬೇಕಾಗಿರುವ ಆಡಳಿತ ಪಕ್ಷ, ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟು ಹೊಸ ಭರವಸೆಯ ಆಧಾರದ ಮೇಲೆ ಮತ ಕೇಳಬೇಕಾದ ಪ್ರತಿಪಕ್ಷ ಎಲ್ಲವನ್ನೂ ಬದಿಗಿಟ್ಟು ಕೇವಲ ಚುನಾವಣೆ ರಾಜಕೀಯ ಮಾಡಿದರೆ ಏನೆಲ್ಲಾ ಆಗಬಹುದು ಎನ್ನುವುದಕ್ಕೆ ಇಂದಿನ ಸ್ಥಿತಿಯೇ ಸಾಕ್ಷಿ.

ಐದು ವರ್ಷ ಬೇಕಾಬಿಟ್ಟಿ ಆಡಳಿತ ನೀಡಿ ಚುನಾವಣೆ ಸಂದರ್ಭದಲ್ಲಿ ಜನರನ್ನು ಮರಳು ಮಾಡಬಹುದೆಂಬ ದೂರ್ತತನ ಪ್ರಜಾಸತ್ತೆಯನ್ನು ಅಣಕಿಸುವಂತಿದೆ.

ಪ್ರತಿಪಕ್ಷಗಳ ರಾಜಕಾರಣದ ವೈಖರಿ ಬದಲಾಗದ ಹೊರತು ಈ ವ್ಯವಸ್ಥೆಗೆ ಚಿಕಿತ್ಸೆ ಸಿಗಲಾರದು. ವ್ಯಕ್ತಿ ವೈಭವದ ಚುನಾವಣೆ ರಾಜಕಾರಣವನ್ನು ಪಕ್ಕಕ್ಕಿಟ್ಟು, ಸೈದ್ದಾಂತಿಕ ಹೋರಾಟವೆಂದು ರಾಹುಲ್ ಪರಿಭಾವಿಸಿದರೆ ಮಾತ್ರ ಆಡಳಿತ ಪಕ್ಷಕ್ಕೆ ಲಗಾಮು ಹಾಕಲು ಸಾಧ್ಯ. ಇಂಥ ಹೊಸತನ ಈವರೆಗೂ ಕಾಂಗ್ರೆಸ್ ನಿಂದ ಸಾಧ್ಯವಾಗಿಲ್ಲ. ಜೋತಿರಾದಿತ್ಯ, ಸಚಿನ್ ಪೈಲಟ್ ರಂತಹ ಯುವ ಮುಖಗಳು ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಮಾಡಲು ಈವರೆಗೂ ಅವಕಾಶ ಸಿಕ್ಕಿಲ್ಲ.

ಇವೆಲ್ಲಕ್ಕಿಂತ ಹೆಚ್ಚಾಗಿ ರಿಸರ್ವ್ ಬ್ಯಾಂಕ್, ಸಿಬಿಐ ಮಾದರಿಯಲ್ಲೇ ಚುನಾವಣೆ ಆಯೋಗ ಕೃಪಾಪೋಷಿತ ನಾಟಕ ಮಂಡಳಿ ಆಗಿ, ಕಾರ್ಪೊರೇಟ್ ಶೈಲಿ ರಾಜಕೀಯಕ್ಕೆ ಪೂರಕವಾಗಿಯೇ ತೀರ್ಮಾನಗಳನ್ನು ಕೈಗೊಂಡರೆ ಪ್ರಜಾಸತ್ತೆಗೆ ಇದಕ್ಕಿಂತ ಅಪಾಯ ಬೇರೊಂದಿಲ್ಲ.

‍ಲೇಖಕರು avadhi

April 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shivanand vali

    ಸತ್ಯದ ಪ್ರತಿಬಿಂಬಿಸುವ ಪತ್ರಿಕೆ ಅವಧಿ ..!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: