ಹೊಸ ಕಥೆ: ಮಸಾಲೆ ದೋಸೆ

ರಾ. ಬಂದೋಳ್
ಅಮ್ಮ ಗುಡಿಯಿಂದ ಹೊರಗೇ ನಿಂತು ಚಪ್ಪಲಿ ಬಿಟ್ಟು ಎದುರಿದ್ದ ಹನುಮಪ್ಪನಿಗೆ ಎಡಕ್ಕಿದ್ದ ಭೂತಪ್ಪನಿಗೆ ಕೈಮುಗಿದಳು. ಆಗಲೇ ತಡವಾಗಿತ್ತು. ಬುಧವಾರವಾದ್ದರಿಂದ ಜಂಗುಳಿ ಜಾಸ್ತಿ. ಬಸ್ಸು ಚೂರು ತಡವಾಗೆ ಬಂತು. ಬೆಳಗುತ್ತಿ ಕಡೆಯಿಂದ ಆಗಲೇ ತುಂಬಿ ವಾಲುತ್ತ ಬಂದ ಬಸ್ಸು ಅಕ್ಷಿಬಾಗಲಲ್ಲಿ ನಿಲ್ತು. ಮೆಟ್ಟಿಲ ಬಳಿ ನಿಂತಿದ್ದ ಜನ ಆ ಧೂಳಿನಿಂದ ಅಸ್ಪಷ್ಟ ಚಿತ್ರಗಳಂತೆ ಕೆಳಗೆ ಇಳಿಯುತ್ತಿದ್ದರು. ಒಂದೊಂದೇ ನೋಟನ್ನು ಉದ್ದಕ್ಕೆ ಅರ್ಧ ಮಡಿಕೆ ಮಾಡಿ ಕೈ ಬೆರಳುಗಳ ಮಧ್ಯೆ ಸಿಗಿಸಿಕೊಂಡು ಒಂದು ಕಿವಿಯಲ್ಲಿ ಪೆನ್ನು ಸಿಗಿಸಿಕೊಂಡು ಕಂಡಕ್ಟರ್ ‘ಗಂಡಸ್ರೆಲ್ಲಾ ಮ್ಯಾಲತ್ರಿ’ ಎಂದು ಕೂಗುತ್ತಾ ಬಂದ.
ಅವನ ಮಾತನ್ನು ಪಾಲಿಸುತ್ತಾ ಎಲ್ಲಾ ಗಂಡಸರು ಮೇಲೆ ಹತ್ತುತ್ತಿದ್ದರೆ ಕಂಡಕ್ಟರ್ ಒಬ್ಬ ನಾಯಕನಂತೆ ಕಾಣಿಸುತ್ತಿದ್ದ. ಮೇಲೆ ಎಲ್ಲು ಚೂರು ಜಾಗವಿರಬಹುದೆಂದು ಅನಿಸುತ್ತಿರಲಿಲ್ಲವಾದರೂ ಜನ ಹತ್ತುತ್ತಲೇ ಇದ್ದರು ಕೂರುತ್ತಲೇ ಇದ್ದರು. ಬಸ್ಸಿನ ಹಿಂದಿನ ಏಣಿಯ ಕಂಬ ಹಿಡಿದು ಜನ ಒಬ್ಬರ ಹಿಂದೆ ಒಬ್ಬರು ಹತ್ತುತ್ತಿದ್ದರೆ ಅದೊಂದು ರೋಮಾಂಚನಕಾರಿ ಸಾಹಸಮಯ ದೃಶ್ಯದಂತೆ ಗೋಚರವಾಗುತ್ತಿತ್ತು. ನಾನೂ ಹೀಗೆ ಎಂದು ಮೇಲೆ ಹತ್ತಿ ಕೂರುವುದು ಎಂದುಕೊಳ್ಳುತ್ತಿರುವಾಗಲೇ ಅಮ್ಮ ನನ್ನ ಕೈ ಹಿಡಿದು ಬಸ್ಸಿನೊಳಗೆ ನುಗ್ಗಿದಳು. ನಾವೇ ಹತ್ತಿದೆವೊ? ಜನರೇ ಹತ್ತಿಸಿದರೊ? ತಿಳಿಯಲಿಲ್ಲ! ಜನರೆಲ್ಲಾ ಹತ್ತಿದ ಮೇಲೆ ಬಸ್ಸು ಹೊರಡುತ್ತಿದ್ದರೆ ನನಗೇಕೋ ಬಸ್ಸು ತೇಲಿಕೊಂಡು ಹೋಗುತ್ತಿದೆ ಎನಿಸುತ್ತಿತ್ತು. ನಮ್ಮೂರಿಂದ ಹೊನ್ನಾಳಿಗೆ ಒಂದುಕಾಲು ರುಪಾಯಿಯಿಂದ ಒಂದೂವರೆ ರುಪಾಯಿಗೆ ಬಸ್ ಚಾರ್ಜ್ ಜಾಸ್ತಿ ಮಾಡಲಾಗಿ ಜನರೆಲ್ಲಾ ಕಂಡಕ್ಟರನೊಂದಿಗೆ ಜಗಳಕ್ಕಿಳಿದಿದ್ದರು.
ಒಂದಿಷ್ಟು ವಾದ-ವಿವಾದಗಳ ನಂತರ ಕಂಡಕ್ಡರ್ ವಿಜಿಲ್ ಹಾಕಿ ಬಸ್ ನಿಲ್ಲಿಸಿ ‘ಯಾರ್ಯಾರಿಗ್ ಕೊಡಕಾಗಲ್ಲ ಅವ್ರ್ ಇಲ್ಲೇ ಇಳ್ಕಳ್ರಿ. ಓನರ್ ಏನ್ ಹೇಳ್ತಾರೊ ಅದ್ ಕೇಳಾದಷ್ಟೆ ನಮ್ ಕೆಲ್ಸ, ಇದ್ರಾಗ್ ನಂದೇನೈತಿ!’ ಅಂದ. ಜನ ಎಲ್ಲಾ ಒಂದ್ ಗಳಿಗೆ ಸುಮ್ನಾದ್ರು. ಕಂಡಕ್ಟರ್ ಮತ್ತೆ ವಿಜಿಲ್ ಹಾಕ್ದ, ಬಸ್ಸು ತೇಲುತ್ತಾ ಮುಂದೆ ಹೊರಟಂತೆ ‘ನಾಳೆ ಒನರ್ ಹೇಳ್ದ ಅಂತ ಈ ಕಂಡಕ್ಟರ್ ಎರಡ್ ರುಪಾಯ್ ಕೇಳಿದ್ರೆ ಎರಡ್ ರುಪಾಯ್ ಕೊಡಕಾಗುತ್ತಾ??!’ ಎಂದು ಮೂಲೆಯೆಲ್ಲೆಲ್ಲೋ ಕ್ಷೀಣವಾಣಿ ಕೇಳಿಸಿತು. ಬಸ್ಸು ಮುಂದೆ ಕೊಣಕಲ್ಲವ್ವನ ಬಸ್‍ಸ್ಟಾಪು, ಶಿಕಾರಿಪುರ್ ರಸ್ತೆ ಬಸ್ಟಾಪಿನಿಂದ ಮುಂದೆ ಕಡದಕಟ್ಟೆ, ಕೈಮರ, ಮಠದಿಂದ ಜನ ತುಂಬಿಸಿಕೊಂಡು ಪ್ರೈವೇಟ್ ಬಸ್ಟ್ಯಾಂಡಿಗೆ ಬಂದು ನಿಂತಿತು.
ಬಸ್ಸು ನಿಲ್ಲುತ್ತಿದ್ದಂತೆ ಸಂತೆ ಮುಗಿಸಿ ವಾಪಾಸ್ಸು ಹೊರಡಲು ಕಾಯುತಿದ್ದ ಜನ ಹೋ ಎಂದು ತೂರಿಕೂಂಡು ಬಂದು ಟವಲ್ಲು, ಸಣ್ಣ ಸಣ್ಣ ಚೀಲಗಳನ್ನು ಕಿಟಕಿಯ ಮೂಲಕ ಕೊಟ್ಟು ಸೀಟು ಹಾಕಲು ಹೇಳುತಿದ್ದರು. ಇನ್ನು ಕೆಲವರು ಒಳಗಿನ ಜನ ಇಳಿಯಲು ಬಿಡದೆ ಮೆಟ್ಟಿಲುಗಳಿಗೆ ಅಡ್ಡಲಾಗಿ ನಿಂತು ಒಳನುಗ್ಗಲು ಹವಣಿಸುತ್ತಿದ್ದರು. ಸೀಟು ಹಾಕಲು ಸುತ್ತುವರಿದ ಜನ, ಬಸ್ಸಿನೊಳಗಿಂದ ಇಳಿಯುತ್ತಿರುವ ಜನ, ಒಳನುಗ್ಗಲು ಹೆಣಗುತ್ತಿರುವ ಜನ, ಟಾಪಿನಿಂದ ಇಳಿಯುತ್ತಿರುವ ಜನ, ಏಣಿ ಹಿಡಿದು ಮೇಲೇರಲು ಕೆಳಗೆ ಕಾಯುತ್ತಿರುವ ಜನ ಈ ಎಲ್ಲ ಜನಗಳ ಮದ್ಯೆ ನೀಲಿ ಬಿಳಿ ಪಟ್ಟಿಯ ತೀರ್ಥ ರಾಮೇಶ್ವರ ಮೋಟಾರ್ಸ್ ಬಸ್ಸು ಇರುವೆ ಮೆತ್ತಿದ ಆಯತಾಕಾರದ ಸಿಹಿ ಮಿಠಾಯಿಯಂತೆ ಕಾಣುತ್ತಿತ್ತು. ಈ ಜನಜಂಗುಳಿಯ ಮದ್ಯದಿಂದ ಅಮ್ಮ ವೀರ ವನಿತೆಯಂತೆ ಹೋರಾಡಿ ನನ್ನ ಕೈಯನ್ನು ಒಂದರಗಳಿಗೆಯೂ ಬಿಡದೆ ಬಸ್ಸಿನಿಂದ ಕೆಳಗಿಳಿದಳು. ನಾನು ಅಮ್ಮ ಇಬ್ಬರು ಒಂದು ದೀರ್ಘ ಉಸಿರು ತೆಗೆದೆವು. ಬಸ್ಸು ಇಳಿದಾಗಿನಿಂದ ನನ್ನ ಮನಸ್ಸು ದೃಷ್ಟಿ ಎರಡೂ ವಿಜಯಲಕ್ಷ್ಮಿ ಹೋಟೆಲ್ ಕಡೆಗೇ ನೆಟ್ಟಿತ್ತು.
ಮಸಾಲೆ ದೋಸೆ ಕಣ್ಣೆದುರು ಹಾದು, ಬಾಯಿ ಸಣ್ಣಗೆ ನೀರಾಡುತ್ತಿತ್ತು. ಅದನ್ನು ಗಮನಿಸಿದ ಅಮ್ಮ ‘ಮೊದಲು ಸಂತೆ ಮಾಡ್ಕೊಂಡು ಬರಾನ, ಆಮೇಲೆ ಹೋಟ್ಲಲ್ಲಿ ಏನಾದ್ರು ತಿನ್ನುವಂತೆ’ ಅಂದ್ಲು. ಶಾಂತ ಟಾಕೀಸ್ಗೆ ಹೋಗೋ ದಾರಿಯಿಂದ ನನ್ನ ಕೈ ಹಿಡಿದು ಅವ್ವ ಸಂತೆಯೊಳಗೆ ಸೇರಿಕೊಂಡಳು. ಮಧ್ಯೆ ಜನ ಓಡಾಡುವಷ್ಟು ಜಾಗ ಬಿಟ್ಟು ಎರಡೂ ಕಡೆ ಬಿಡಾರ ಹಾಕಿಕೊಂಡು ತರಕಾರಿ ವ್ಯಾಪಾರಸ್ಥರು ವಿವಿಧ ತರಕಾರಿಗಳ ಹೆಸರು ಜೊತೆಗೆ ಅದರ ದರ ಹೇಳುತ್ತಾ ‘ಎಳೆ ಬೆಂಡೆ ಎಳೇ ಬೀನ್ಸ್ ಕೆಂಪೋ ಟಮಾಟ’ ಹೀಗೆ ಹಲವು ತರಕಾರಿಗಳ ಹೆಸರ ಹಿಂದೆ ವಿಶೇಷಣಗಳನ್ನು ಸೇರಿಸಿ ಅವುಗಳ ಗಣಗಾನ ಮಾಡುತ್ತಾ ಗಿರಾಕಿಗಳನ್ನು ಆಕರ್ಷಿಸಲು ಪೈಪೋಟಿಯಲ್ಲಿ ಯತ್ನಿಸುತ್ತಿದ್ದರು.

ನನ್ನ ಡೊಡ್ಡಮ್ಮ, ದೊಡ್ಡಮ್ಮನ ಮಗ ನನ್ನಣ್ಣ ಮತ್ತು ಸಣ್ಣ ಮಾವ ತರಕಾರಿ ವ್ಯಾಪಾರ ಮಾಡುತ್ತಿದ್ದರು. ನನ್ನಮ್ಮ ನನ್ನನ್ನು ಅವರ ಬಿಡಾರದಲ್ಲಿ ದೊಡ್ಡಮ್ಮನ ಸುಪರ್ದಿಯಲ್ಲಿ ಬಿಟ್ಟು ತರಕಾರಿ ಕೊಳ್ಳಲು ಸಂತೆಯೊಳಗೆ ಲೀನಳಾದಳು. ‘ಬೆಂಡೆಕಾಯಿಯ ಸುಮ್ನೆ ತೊಟ್ ಮುರ್ದ್ ಹಂಗೇ ಹೋಗ್ತಿರಲ್ಲಾ, ಕೊಂಡ್ಕಳಂಗಿದ್ರೆ ಮುರೀರಿ’ ‘ಟಮಾಟ ಯಾಕಂಗೆ ಒತ್ತಿ ಒತ್ತಿ ಮೆತ್ತಗ್ ಮಾಡ್ತೀರ?’ ‘ಈ ಮಾಲು ಇಡೀ ಸಂತ್ಯಾಗ್ ಎಲ್ಲೂ ಸಿಗಾಕಿಲ್ಲ’ ‘ಸಾರು ನಮ್ಮಂಗ್ಡೀಲಿ ಬಿಟ್ಟು ಬೇರೆ ಎಲ್ಲೂ ತರ್ಕಾರಿ ತಗಳಲ್ಲ’ ‘ಅಕ್ಕೊ ಈ ರೇಟು ಎಲ್ಲೂ ಸಿಗಾಕಿಲ್ಲ ಸುಮ್ನೆ ತಕೊ’ ಎಂದು ಗಿರಾಕಿಗಳನ್ನು ಒಮ್ಮೊಮ್ಮೆ ಒಲಿಸುತ್ತ ಒಮ್ಮೊಮ್ಮೆ ಸಣ್ಣಗೆ ಗದರುತ್ತಾ ತರಹೇವಾರಿ ಚೌಕಾಸಿಗಳೊಂದಿಗೆ ದೊಡ್ಡಮ್ಮನು ಅಣ್ಣನೂ ವ್ಯಾಪಾರ ಮುಂದುವರಿಸಿದ್ದರು. ಒಂದರ್ಧ ಗಂಟೆಯಲ್ಲಿ ಅಮ್ಮ ಸಂತೆ ಮುಗಿಸಿ ಬಂದಳು. ಅಮ್ಮ ಎಷ್ಟೇ ಬೇಡವೆಂದರೂ ದೊಡ್ಡಮ್ಮ ಒಂದಷ್ಟು ತರಕಾರಿ ಬ್ಯಾಗಿನೊಳಗೆ ತುರುಕಿದಳು. ವ್ಯಾಪಾರದಲ್ಲಿ ದೊಡ್ಡಮ್ಮನೊಂದಿಗೆ ಹೆಚ್ಚು ಮಾತನಾಡಲು ಆಗುತ್ತಿರಲಿಲ್ಲವಾಗಿ “ಸಾಯಂಕಾಲ ಸಂತೆ ಮುಗುದ್ ಮ್ಯಾಲೆ ಮನೆಗ್ ಬಾ” ಎಂದು ಹೇಳಿ ಒಂದು ಕೈಯಲ್ಲಿ ಬ್ಯಾಗು ಒಂದು ಕೈಯಲ್ಲಿ ನನ್ನನ್ನು ಹಿಡಿದು ಹೊರಟಳು. ದೊಡ್ಡಮ್ಮ ಕೊಟ್ಟಿದ್ದ ಒಂದು ರುಪಾಯಿಯ ಎರಡು ನಾಣ್ಯಗಳು ಜೇಬಿನಲ್ಲಿ ಸಣ್ಣಗೆ ಸದ್ದು ಮಾಡುತ್ತಿದ್ದವು.
ಬಸ್ಟ್ಯಾಂಡ್ ಬಳಿಯ ವಿಜಯಲಕ್ಷಿ ಹೋಟೆಲ್‍ಗೆ ಬಂದೆವು. ಎರಡು ಕುರ್ಚಿ ಖಾಲಿಯಿದ್ದ ಒಂದು ಟೇಬಲ್‍ನಲ್ಲಿ ಕುಳಿತೆವು. ಎಲ್ಲಾ ಟೇಬಲ್ಲಿನಲ್ಲೂ ಕನಿಷ್ಠವೆಂದರೆ ಎರಡು ದೋಸೆಗಳಾದರೂ ಇದ್ದವು. ಮನೆಯಿಂದ ಹೊರಡುವಾಗಲೇ ಹೇಳಿದಂತೆ ಅಮ್ಮ ನನಗೆ ಒಂದು ಮಸಾಲದೋಸೆ ಹೇಳಿದಳು. ನಮ್ಮ ಪಕ್ಕದಲ್ಲಿ ಕೂತಿದ್ದ ಇಬ್ಬರು ದೋಸೆಯನ್ನೇ ತಿನ್ನುತ್ತಿದ್ದರು. ಈ ಹೋಟೆಲ್ಲಿಗೆ ಬರುವ ಎಲ್ಲರೂ ದೋಸೆ ತಿನ್ನಲಿಕ್ಕೇ ಬರುತ್ತಾರೆ ಎಂದೆನಿಸುತ್ತಿತ್ತು. ಒಮ್ಮೊಮ್ಮೆಯಂತೂ ಜನ ಹೊನ್ನಾಳಿಗೆ ಬರುವುದೇ ಹೋಟೆಲ್ಲಿನ ಗರಿಗರಿ ಮಸಾಲ ದೋಸೆ ಮೆಲ್ಲಲು ಎಂದೆನಿಸುತ್ತಿತ್ತು. ನಾವು ದೋಸೆ ಹೇಳಿ ಅರ್ಧ ಗಂಟೆ ಸಮೀಪಿಸುತ್ತಿದ್ದರೂ ಕೌಂಟರ್ನಿಂದ ಬಂದ ದೋಸೆ ನಮ್ಮ ಟೇಬಲ್ ಬಿಟ್ಟು ಬೇರೆಲ್ಲ ಕಡೆ ತಲುಪುತಿತ್ತು. ಈ ಸಪ್ಲೈಯರ್ ಬೇಕಂತಲೇ ನಮಗೆ ತಡ ಮಾಡುತ್ತಿದ್ದಾನೆ ಎಂದು ಒಳಗೊಳಗೆ ಕೋಪ ನನಗೆ.
ಕೊನೆಗೂ ದೋಸೆ ನಮ್ಮ ಟೇಬಲ್ ತಲುಪಲು ಅದರ ಹೊಟ್ಟೆಯೊಡೆದು ಅಲೂಗೆಡ್ಡೆ ಪಲ್ಯ, ಚಟ್ನಿಯೊಂದಿಗೆ ಗರಿ ಗರಿ ದೋಸೆ ಸವೆಯುತ್ತಿದ್ದರೆ ನನಗಿಂತ ಜಾಸ್ತಿ ಅಮ್ಮನ ಹಸಿವು ಇಂಗುತ್ತಿತ್ತು. ಅಮ್ಮ ಚಹಾ ಕೂಡ ಕುಡಿಯಲಿಲ್ಲ. ನಾನು ತಿಂದು ಮುಗಿಸಿ ಕೈ ತೊಳೆಯುವಷ್ಟರಲ್ಲಿ ದೋಸೆಯ ಬಿಲ್ ಬಂದಿತ್ತು. ಬಿಲ್ ಕೌಂಟರ್ ಬಳಿ ಧಾವಿಸಿ ಒಂದು ದೋಸೆಯ ಬೆಲೆ ತೆತ್ತು ಅಲ್ಲಿಂದ ಮತ್ತೆ ನನ್ನ ಕೈ ಹಿಡಿದು ಎದುರಿದ್ದ ಬಸ್ಟ್ಯಾಂಡ್ ಕಡೆ ಹೊರಟಳು. ಸರಿ ಸುಮಾರು ಒಂದು-ಒಂದೂವರೆ ತಾಸಿನ ಬಳಿಕ ಹೊನ್ನಾಳಿ-ಬೆಳಗುತ್ತಿ ಬಸ್ಸು ಬರಲು ಎಂದಿನಂತೆ ಸಮರೋಪಾದಿಯಲ್ಲಿ ಜನ ಇಳಿದರು ಮತ್ತು ಹತ್ತಿದರು. ಬಸ್ಸಿನಲ್ಲಿ ತೇಲುತ್ತ ನಾವು ಊರು ತಲುಪಿದೆವು.
ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದಂತೆ ಕೊನೆಗೂ ಅಮ್ಮ ನನ್ನ ಕೈಗಳಿಗೆ ಮುಕ್ತಿ ಕೊಟ್ಟಳು. ಮನೆ ತಲುಪಲು ನನ್ನ ತಂಗಿಯರು ಸಂತೆ ಚೀಲಗಳಿಗೆ ದಾಳಿಯಿಟ್ಟು ಖಾರ ಮಂಡಕ್ಕಿ ಸಿಹಿ ತಿಂಡಿಗಳನ್ನು ತೆಗೆದರು. ‘ಅಪ್ಪಾಜಿ ಬರ್ಲಿ’ ‘ಟೀ ಮಾಡ್ತಿನಿ ಇರಿ’ ‘ಅಮೆಲೆ ತಿನ್ನೋಣ’ ಎನ್ನುವ ಯಾವ ಸೂಚನೆಗಳು ಸಣ್ಣ ಗದರಿಕೆಗಳು ಕೆಲಸ ಮಾಡಲಿಲ್ಲ, ಅಷ್ಟರಲ್ಲೇ ಅಪ್ಪನು ಬಂದೇ ಬಿಟ್ಟ. ಅಪ್ಪನೂ ಕೈಯಲ್ಲಿ ಒಂದಿಷ್ಟು ಸಿಹಿ ತಿಂಡಿಗಳನ್ನು ತಂದಿದ್ದ. ಆಗ ಅಪ್ಪ ಗ್ರಾಮ ಪಂಚಾಯಿತಿಯಲ್ಲಿ ದಿನಗೂಲಿ ಲೆಕ್ಕದಲ್ಲಿ ಕರವಸೂಲಿಗಾರನಾಗಿ ಕೆಲಸ ಮಾಡುತ್ತಿದ್ದ. ಆಫೀಸಿನ ಮೀಟಿಂಗುಗಳಲ್ಲಿ ತಿಂಡಿ ಏನನ್ನಾದರು ಕೊಟ್ಟರೆ ಅಪ್ಪ ಅದನ್ನು ತಿನ್ನದೆ ಹಾಗೆ ತಂದು ನಮಗೆ ಕೊಡುತ್ತಿದ್ದ. ಅಮ್ಮ ಟೀ ಮಾಡಿದಳು. ಎಲ್ಲ ಕೂತು ಖಾರ ಮಂಡಕ್ಕಿ ತಿಂಡಿಗಳನ್ನು ಟೀ ಯೊಂದಿಗೆ ಸವಿದೆವು.

‍ಲೇಖಕರು nalike

May 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: