ಗುರ್ಬಾಣಕ್ಕಿ ಅಂದ್ರೆ ಯಾವ ಹಕ್ಕಿ?

 ರಾಜೀವ ನಾರಾಯಣ ನಾಯಕ

ಈ ಲಾಕ್ ಡೌನ್ ಕಾಲದಲ್ಲಿ ಭವಿಷ್ಯದ ಅನಿಶ್ಚಿತತೆ ಬಗೆಗಿನ ಆತಂಕಗಳನ್ನು ತೆಳುಗೊಳಿಸಲು ಹಲವರು ಹಳೆಕಾಲದ ನೆನಪುಗಳಿಗೆ ಎಡತಾಕಿದ್ದು ಸುಳ್ಳಲ್ಲ. ಸ್ನೇಹ, ಸಂಬಂಧಗಳ ಸವಿ ನೆನಪುಗಳನ್ನು ಮೆಲುಕು ಹಾಕುವಂಥ, ಮರೆತುಹೋದ ಅಭಿರುಚಿಗಳನ್ನು ಮತ್ತೆ ಕೈಗೆತ್ತಿಕೊಳ್ಳುವಂಥ ಚಟುವಟಿಕೆಗಳು ವರ್ತಮಾನದ ತಾಪತ್ರಯಗಳನ್ನು ಸಹ್ಯಗೊಳಿಸಲು ಒದಗಿಬಂದದ್ದು ನಿಜ. ಹಳೆಯ ವಸ್ತುಗಳನ್ನು, ಪುಸ್ತಕಗಳನ್ನು ಹುಡುಕಾಡುವ, ಸ್ಪರ್ಷಿಸುವ, ಘ್ರಾಣಿಸುವ, ಮತ್ತೆ ನೀಟಾಗಿಡುವಂಥ ಅಮುಖ್ಯ ಕಾರ್ಯಗಳೂ ಈ ಕ್ಷಣದ ತಲ್ಲಣಗಳನ್ನು ದಾಟುವ ಪ್ರಕ್ರಿಯೆಗಳೇ ಆದವು.

ಇಪ್ಪತೈದು ವರ್ಷಗಳ ಹಿಂದೆ “ತರಂಗ” ಮಾಸಪತ್ರಿಕೆಯಲ್ಲಿ ಎರಡು ಕಂತುಗಳಲ್ಲಿ ಪ್ರಕಟವಾದ ನನ್ನ ಬಹುಮಾನಿತ  ಕತೆ “ಗುರ್ಬಾಣಕ್ಕಿ” ಕೈಗೆ ಸಿಕ್ಕಿದ್ದು ಇಂಥ ಒಂದು ನಿರುದ್ಧಿಶ್ಯ ಹುಡುಕಾಟದಲ್ಲಿಯೇ. 1995 ರ ಆ ಸಂಚಿಕೆಗಳನ್ನು ಇನ್ನೊಮ್ಮೆ ತಿರುವಿ ಹಾಕಿದೆ. ಅದರಲ್ಲಿ ಹಾ.ಮಾ.ನಾಯಕ, ಪಾಟೀಲ ಪುಟ್ಟಪ್ಪ, ಅಬಿದ್ ಸುರ್ತಿ, ಕೆ.ಟಿ.ಗಟ್ಟಿ, ವಸುಮತಿ ಉಡುಪ ಮತ್ತು ಮುಂಬೈನ ಸುನೀತಾ ಶೆಟ್ಟಿ ಮುಂತಾದವರ ಕತೆ, ಕವಿತೆ, ಲೇಖನಗಳು ಪ್ರಕಟವಾಗಿದ್ದವು. ಇಂಥ ಘಟಾನುಘಟಿ ಸಾಹಿತಿಗಳ ನಡುವೆ ಗುರ್ಬಾಣಕ್ಕಿಯೂ ಬೆಚ್ಚಗೆ ಚಿತ್ತಾರದಲ್ಲಿ ಗರಿ ಬಿಚ್ಚಿ ಕೂತಿತ್ತು. ಒಬ್ಬ ಕತೆಗಾರನಾಗಿ ನನ್ನನ್ನು ಒಂದು ಎತ್ತರಕ್ಕೆ ಚಿಮ್ಮಿಸಿದ, ಸ್ವಲ್ಪಮಟ್ಟಿಗೆ ಹೆಸರನ್ನೂ ತಂದುಕೊಟ್ಟ ಈ ಕತೆಯನ್ನು ಮತ್ತೆ ಓದಿದೆ. ಈ ಕಾಲುಶತಮಾನದಲ್ಲಿ ಗಂಗಾವಳಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ ನಿಜ. ಆ ನಂತರದಲ್ಲಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸಿರುವುದರಿಂದ ಕಥಾವಿವರಗಳು ಹಳತಾಗಿರುವುದೂ ನಿಜ. ಆದರೂ ಅಲ್ಲಿಯ ಕತೆಗಾರನ ಸಂವೇದನೆ ಈಗಲೂ ಫ್ರೆಶ್ ಆಗಿದೆ ಅನಿಸಿ ಖುಶಿಯಾದೆ. ಈ ಕತೆ ಪ್ರಕಟವಾದಾಗಿನ ಕೆಲವು ನೆನಪುಗಳೂ ತಾಜಾ ಆದವು.

ಆಗೆಲ್ಲ ಟಿವಿ ಹಾವಳಿ ಅಷ್ಟಿರಲಿಲ್ಲ. ಫೇಸ್ಬುಕ್ಕು ವ್ಹಾಟ್ಸಾಪು ಇತ್ಯಾದಿ ಆಧುನಿಕ ಸೋಷಿಯಲ್ ಮೀಡಿಯಾಗಳು ಜನ್ಮತಾಳಿರಲಿಲ್ಲ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳೇ ಸಾಹಿತ್ಯಿಕ ಸೃಜನಶೀಲತೆಯನ್ನು ಪೊರೆಯುತ್ತಿದ್ದ ಕಾಲವದು. ಒಂದು ಒಳ್ಳೆಯ ಕತೆ ಕವಿತೆ ಪ್ರಕಟವಾದರೆ ಪತ್ರ ಮುಖೇನ ಆಯಾ ಸಂಪಾದಕರಿಗೆ ಮೆಚ್ಚುಗೆ ತಿಳಿಸಬೇಕಾಗಿದ್ದ ಜಮಾನಾ. ಸಂತೋಷಕುಮಾರ ಗುಲ್ವಾಡಿಯವರು ಸಂಪಾದಕರಾಗಿದ್ದಾಗ ತುಷಾರದಲ್ಲಿ  ಕತೆ, ಲೇಖನಗಳ ಜೊತೆಗೆ ಆಯಾ ಬರಹಗಾರರ ವಿಳಾಸವನ್ನೂ ಜೊತೆಗೆ ನೀಡುತ್ತಿದ್ದರು. ಇದರಿಂದ ಓದುಗರು ಮತ್ತು ಲೇಖಕರ ನಡುವೆ ನೇರ ಸಂಪರ್ಕ ಸಾಧ್ಯವಾಗಿತ್ತು. ಗುರ್ಬಾಣಕ್ಕಿ ಕತೆ ಪ್ರಕಟವಾದಾಗಲೂ ನನಗೆ ಸಾಕಷ್ಟು ಕಾಗದಗಳು ಬಂದಿದ್ದವು. ಅವುಗಳಲ್ಲಿ ಎಂ.ಎಚ್.ನಾಯಕಬಾಡ ಅವರು ಬರೆದ ಕಾಗದವನ್ನು 25 ವರ್ಷ ಹಿಂದಿನ ತರಂಗ ಸಂಚಿಕೆಯ ಜೊತೆಗೇ ಜತನದಿಂದ ಕಾದಿಟ್ಟಿದ್ದೆ.

ಎಂ.ಎಚ್.ನಾಯಕಬಾಡ ಅವರು ಆಗ ಕನ್ನಡದ ಜನಪ್ರಿಯ ಕತೆಗಾರರಲ್ಲಿ ಒಬ್ಬರು. ಅವರ ಕತೆಗಳು ಸಂಯುಕ್ತ ಕರ್ನಾಟಕ ಲಂಕೇಶ್ ಪತ್ರಿಕೆ ಮಯೂರ ಮುಂತಾದ ಪತ್ರಿಕೆಗಳಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದವು. ಅವರ ಕತೆಗಳಲ್ಲಿ ಉತ್ತರ ಕನ್ನಡದ ಕುಮಟೆ ಅಘನಾಶಿನಿ ಬೆಟ್ಕುಳಿ ಬಾಡ ಕಡೆಯ ಜನರ ಜೀವನ ವಿವರಗಳಿರುತ್ತಿದ್ದವು. ಒಂದು ರೀತಿಯಲ್ಲಿ ಆಗ ಚಿತ್ತಾಲರಂಥ ಕತೆಗಾರರಿಗಿಂತ ಎಂ.ಎಚ್. ನಾಯಕರ ಕತೆಗಳೇ ನಮಗೆ ರೋಚಕವೆನಿಸುತ್ತಿದ್ದವು. ಪರಸ್ಪರ ಪರಿಚಯ ಇಲ್ಲದಿದ್ದರೂ ನನ್ನ ಗುರ್ಬಾಣಕ್ಕಿಯನ್ನು ಓದಿ ಪತ್ರ ಬರೆದಿದ್ದರು. ಕತೆಯಲ್ಲಿ ಉತ್ತರ-ಕನ್ನಡದ ಆಡು ಭಾಷೆ ಬಳಸಿದ್ದನ್ನು ಮೆಚ್ಚಿಕೊಂಡಿದ್ದರು. ಆಡು ಭಾಷೆಯಲ್ಲಿ ಕಥಾ ನಿರೂಪಣೆಯ ಚಂದ ಮತ್ತು ಕಷ್ಟಗಳ ಬಗ್ಗೆ ಬರೆದಿದ್ದರು. ಹೊಸ ಕತೆಗಾರನೊಬ್ಬನನ್ನು ಪ್ರೋತ್ಸಾಹಿಸುವ ಅವರ ಮಾತುಗಳಿಂದ ಸಹಜವಾಗಿಯೇ ಸಂಭ್ರಮಪಟ್ಟಿದ್ದೆ.

ನಂತರವೂ ನಾನು ಆಡುಭಾಷೆಗೆ ಒತ್ತುಕೊಟ್ಟು “ಮಣ್ಣಿನದೋಣಿ”, ಝಕ್ಕುಂ ಜಂಗುಂ ಜೋಹೋಚೋ” ಮುಂತಾದ ಕತೆಗಳನ್ನು ಬರೆದಿದ್ದೆ. ಆಡುಭಾಷೆಯಲ್ಲಿ  ಭಾವನೆಗಳನ್ನು ಮಾತುಗಳನ್ನು ಸಾಂದ್ರವಾಗಿ ಕಾವ್ಯಮಯವಾಗಿ ಅಭಿವ್ಯಕ್ತಿಸಬಲ್ಲ ಶಕ್ತಿಯಿರುತ್ತದೆ. ಉತ್ತರ ಕನ್ನಡದಲ್ಲಿ ಹಾಲಕ್ಕಿಗಳು, ಹವ್ಯಕರು, ಆಗೇರರು, ನಾಡವರು ಮುಂತಾದವರು ಆಡುವ ಭಾಷೆಗೆ ಕಾವ್ಯಶಕ್ತಿಯಿದೆ. ಆದರೆ ಯಾವ ಆಡುಭಾಷೆ ಕನ್ನಡಕ್ಕೆ ಕಾವ್ಯಧ್ವನಿ ನೀಡಬಲ್ಲದೋ, ಅದು ನಿರ್ದಿಷ್ಟ ಜಾತಿ ಸೂಚಕವೂ ಆಗುವ ಮುಜುಗರದ ಮುಖವೂ ಇದೆ. ಜಾತಿಮುಕ್ತ ಸಮಾಜದತ್ತ ಚಲಿಸುವ ಬರಹಗಾರರಿಗೆ ಇದೊಂದು ಸವಾಲೇ ಸರಿ. ಇನ್ನೊಂದು ಸಂಗತಿಯೆಂದರೆ ಕತೆ ಕಾದಂಬರಿಗಳಲ್ಲಿ ಒಂದು ಪ್ರದೇಶದ ಆಡುಬಾಷೆ ಬಳಸಿದರೆ ಸಂಯುಕ್ತಾಕ್ಷರಗಳಿಂದಾಗಿ ಸರಾಗವಾಗಿ ಓದಲು ಸಾಧ್ಯವಾಗುವುದಿಲ್ಲ ಮತ್ತು ಬೇರೆ ಪ್ರದೇಶದ ಜನರಿಗೆ ಅರ್ಥವಾಗಲು ಕ್ಲಿಷ್ಟವೆನಿಸುವ ಸಾಧ್ಯತೆಯೂ ಇದೆ. ಪ್ರಾದೇಶಿಕ ಭಾಷೆಯನ್ನು ಅದ್ಭುತವಾಗಿ ಬಳಸಿ ಕನ್ನಡಕ್ಕೆ ಹೊಸ ಚೈತನ್ಯ ತುಂಬಿದ ಕುಂವೀ, ದೇವನೂರು, ಮೊಗಳ್ಳಿಯಂತಹ ಪ್ರತಿಭಾವಂತ ಲೇಖಕರ ಕೃತಿಗಳು ಇಂಥವುಗಳನ್ನು ಮೀರಿ ಓದುಗರನ್ನು ತಲುಪಿದವು ಎಂಬುದು ಬೇರೆ ಮಾತು.

ಕೆಲವೊಮ್ಮೆ ಪ್ರಾದೇಶಿಕ ಭಾಷೆಯನ್ನು ಸಾಹಿತ್ಯದಲ್ಲಿ ಬಳಸಿದರೂ ಆ ಭಾಷೆಯ ಗತ್ತು, ಲಯ, ಕಾವ್ಯಧ್ವನಿ ಓದಿಗೆ ದಕ್ಕದೇ ಹೋಗಬಹುದು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಥಾವಾಚನವೆಂಬ ಟ್ರೆಂಡ್ ಜನಪ್ರಿಯವಾಗಿದೆಯಷ್ಟೇ? ಖ್ಯಾತ ಕತೆಗಾರರಾದ ಡಾ. ವಿನಯಾ ಮತ್ತು ರಾಜು ಹೆಗಡೆ ಅವರು ವಾಚಿಸಿದ ಕತೆಗಳನ್ನು ಮೊನ್ನೆ ಕೇಳಿದೆ. ಅವರು ತಮ್ಮ ಕತೆಗಳನ್ನು ವಾಚಿಸುವಾಗ ಸಂಭಾಷಣೆಯ ಭಾಗಗಳನ್ನು ಗೋಕರ್ಣ, ಹೊನ್ನಾವರ ಸೀಮೆಯ ಆಡುಭಾಷೆಯಲ್ಲೇ ಓದಿದ್ದು ಕಿವಿಗಳಿಗೆ ಹಿತವಾಗಿತ್ತು, ಮಾತ್ರವಲ್ಲ ಅರ್ಥವಾಗುವುದೂ ಕಷ್ಟವಾಗಿರಲಿಲ್ಲ.  ಸಂವಹನಕ್ಕೆ ತೊಡಕಾಗುತ್ತದೆ ಎನ್ನುವ ಕಾರಣಕ್ಕೆ ಆಡುಭಾಷೆಯಿಂದ ದೂರ ಸರಿದವರಿಗೆ ಡಿಜಿಟಲ್ ಮೀಡಿಯಾದಲ್ಲಿ ಕಥಾಶ್ರವಣ ಒಂದು ಸಾಧ್ಯತೆಯಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಆಡುಭಾಷೆಯಲ್ಲಿ ಕತೆ ಬರೆಯುವ ಹುರುಪು ಬರಬಹುದೇನೋ!

ಗುರ್ಬಾಣಕ್ಕಿ ಕತೆ 25 ವರ್ಷಗಳ ನಂತರವೂ ಕೆಲವರಿಗಾದರೂ ನೆನಪಿದ್ದರೆ ಅದಕ್ಕೆ ಕಾರಣ ಕತೆಯಲ್ಲಿ ಬಳಸಿದ ಭಾಷೆಯಲ್ಲಿಯ ಜೀವಂತಿಕೆ ಮತ್ತು ಅಲ್ಲಿಯ ಜೀವಂತ ಪಾತ್ರಗಳು ಎನ್ನುವುದು ನನ್ನ ಭಾವನೆ. ಉಪನ್ಯಾಸಕ ರಾಮಮೂರ್ತಿ ಬಾಸಗೋಡ ಅವರು ಇಂದಿಗೂ ಅಂಕೋಲೆಯಲ್ಲಿ ನನ್ನನ್ನು ಪರಿಚಯಿಸುವುದು ಗುರ್ಬಾಣಕ್ಕಿ ರಾಜು ಎಂದೇ! (ಊರಲ್ಲಿ ಹಲವಾರು ರಾಜುಗಳು ಇರುವುದೂ ಇನ್ನೊಂದು ಕಾರಣ!) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಕಳೆದ ಜನ್ಮದಿನದಂದು “ಗುರ್ಬಾಣಕ್ಕಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಶಕ್ತ ಕಥೆಗಾರನಿಂದ ಇನ್ನಷ್ಟು ಕಥೆಗಳು ಬರಲಿ” ಎಂದು ಫೇಸ್ಬುಕ್ಕಿನಲ್ಲಿ ಶುಭ ಹಾರೈಸಿದ್ದರು. ಮುಖತಃ ಇನ್ನೂ ನಮ್ಮ ಭೇಟಿಯಾಗಿಲ್ಲವಾದರೂ ಕತೆಯೊಂದು ಇಪ್ಪತೈದು ವರ್ಷಗಳ ನಂತರವೂ ಹೀಗೆ ಪರಿಚಯವೊಂದನ್ನು ಬೆಚ್ಚಗಿಡುತ್ತದೆ ಎನ್ನುವುದು ಆಶ್ಚರ್ಯವೇ!  ಅಚವೆಯ ಕವಿ ಫಾಲ್ಗುಣ ಗೌಡ ಅವರೂ ಕಳೆದ ಬಾರಿ ಬೇರ್ಯಾವುದೋ ಬರಹ ಓದಿ ಕರೆ ಮಾಡಿದಾಗ, ಹೆಚ್ಚು ಮಾತಾಡಿದ್ದು ತಮ್ಮ ಆರಂಭದ ಸಾಹಿತ್ಯಿಕ ದಿನಗಳಲ್ಲಿ ಓದಿ ಇಷ್ಟಪಟ್ಟಿದ್ದ ಗುರ್ಬಾಣಕ್ಕಿ ಕತೆಯ ಬಗ್ಗೇ!

ಇತ್ತೀಚೆಗೆ ಪ್ರಕಟವಾದ “ಆರ್ಕಿಮಿಡೀಸ್” ಎಂಬ ಬೇರೊಂದು ನನ್ನ ಕತೆಯನ್ನೂ ಕುತೂಹಲಕ್ಕೆಂದು ಇನ್ನೊಮ್ಮೆ ಓದಿದೆ. ಗುರ್ಬಾಣಕ್ಕಿ ಕತೆಯಲ್ಲಿದ್ದ ದಲಿತ ಸಂವೇದನೆಯಾಗಲಿ ಅಥವಾ ಆಡುಭಾಷೆಯ ಸೊಗಡಾಗಲಿ “ಆರ್ಕಿಮಿಡೀಸ್” ಕತೆಯಲ್ಲಿ ರೂಪಾಂತರ ಹೊಂದಿದ್ದು ಮೇಲ್ನೊಟಕ್ಕೇ ಕಾಣುತ್ತಿತ್ತು. ವಾಸ್ತವದಲ್ಲೂ ಕತೆಯಲ್ಲೂ ಕಾಲುಶತಮಾನದ ಹಿಂದಿನ ಸಾಮಾಜಿಕ ಸನ್ನಿವೇಶಗಳು ಬದಲಾಗಿದ್ದವು. ದಲಿತರ ಬದುಕೂ ಬದಲಾವಣೆ ಕಂಡಿತ್ತು. ದಲಿತರ ಹಸಿವು, ಬಡತನ ಆ ಕಾಲದಲ್ಲಿದ್ದಷ್ಟು ತೀವ್ರವಾಗಿರಲಿಲ್ಲ. ಅವರ ಮೇಲಿನ ದೌರ್ಜನ್ಯವು ಆಗಿನಷ್ಟು ಅಮಾನುಷವಾಗಿರಲಿಲ್ಲ. ಆದರೆ ಅವರ ನೋವು ಅವಮಾನಗಳು ಬೇರೆಯದೇ ಸ್ವರೂಪ ತಾಳಿದ್ದವು. ಆ ಪ್ರಕಾರವೇ ಸಂವೇದನೆಯನ್ನು ಸೂಕ್ಷ್ಮಗೊಳಿಸಿದಿದ್ದರೆ “ಆರ್ಕಿಮಿಡೀಸ್” ಕತೆ ಇಂದಿನವರಿಗೆ ಕನೆಕ್ಟ್ ಆಗುತ್ತಿರಲಿಲ್ಲ. ಗುರ್ಬಾಣಕ್ಕಿಯಲ್ಲಿ ಬಳಸಿದ್ದ ಗ್ರಾಮೀಣ ಭಾಷೆ ಕೂಡ ಆರ್ಕಿಮಿಡೀಸ್ ಕತೆಗೆ ಬರುವಷ್ಟರಲ್ಲಿ ಬದಲಾವಣೆಗೆ ಒಳಗಾಗಿತ್ತು. ಗುರ್ಬಾಣಕ್ಕಿ ಕಾಲಘಟ್ಟದ ಆಡುಭಾಷೆಯಲ್ಲಿಯ ಅದೆಷ್ಟೋ ನುಡಿಗಟ್ಟುಗಳ ಬಳಕೆಯೇ ನಿಂತುಹೋಗಿದ್ದರಿಂದ, ಆರ್ಕಿಮಿಡೀಸ್ ಕತೆಯಲ್ಲಿ ಅವನ್ನು ಬಳಸಿದ್ದರೆ ಈ ಕಾಲದವರಿಗೆ ಅರ್ಥ ಆಗುತ್ತಿರಲಿಲ್ಲ. ನುಡಿಗಟ್ಟುಗಳ ಮಾತು ಬಿಡಿ, “ಗುರ್ಬಾಣಕ್ಕಿ ಅಂದ್ರೆ ಯಾವ ಹಕ್ಕಿ?” ಎಂದು ಕೇಳಲೂಬಹುದು!

ಅಂದಹಾಗೆ, ಈ ಕೊರೋನಾ ಕಾಲದಲ್ಲಿ ಬೆಂಗಳೂರಂಥ ನಗರಗಳಿಂದ ಹೇಗೋ ತಪ್ಪಿಸಿಕೊಂಡು ತಮ್ಮ ಮೂಲ ಹಳ್ಳಿಗಳಿಗೆ ಪಾಲಕರ ಜೊತೆಗೆ ಬಂದ ಮಕ್ಕಳು, ಕಿಟಕಿಯಿಂದ ಹೊರ ನೋಡುತ್ತಾ “ಓಹ್, ಎಷ್ಟೊಂದು ಬಟರ್ ಫ್ಲೈಸ್!!” ಎಂದು ಉದ್ಘಾರ ತೆಗೆಯುತ್ತಿವೆಯಂತೆ. ಹೂಗಿಡಗಳ ಮೇಲೆ ಮಕರಂದ ಹೀರಲು ಬರುವ ಚಿಟ್ಟೆಗಳಿಗೆ ಗುರ್ಬಾಣಕ್ಕಿ ಎಂಬ ಹೆಸರಿಂದ ಕರೆಯುತ್ತಿದ್ದ ಅಜ್ಜಿಯೂ ಈಗ “ಬಟರ್ ಪ್ರೈಸ್ ಬಂದವೆ ಮಕ್ಕಳೇ, ಬರ್ರೋ ಬಯಲಿಗೆ” ಎನ್ನುತ್ತಿದ್ದಾಳಂತೆ.

‍ಲೇಖಕರು nalike

May 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Prakash N.

    ಭಾಷೆಯೂ ಉಡುವ ಬಟ್ಟೆ, ಉಣ್ಣುವ ಊಟದಂತೆ ಸಾರ್ವತ್ರಿಕ ಲಯವನ್ನು ಪಡೆದುಕೊಂಡು ವೈವಿಧ್ಯತೆ ಕಡಿಮೆಯಾಗುವುದು ಈಗ ಸಾಧ್ಯತೆಯಾಗಿಯಷ್ಟೇ ಉಳಿದಿಲ್ಲ. ಸ್ಥಾನಿಕ ಭಾಷೆಗಳನ್ನು ಓದುವುದು ಕಷ್ಟ ಎನ್ನುವುದೂ ಹೌದು, ಕುಂವಿ (ಅರಮನೆ) ದೇವನೂರರ ಕೃತಿಗಳಿಗೂ ಈ ಕಷ್ಟ ತಪ್ಪಿದ್ದಲ್ಲ. ಆಡಿಯೋ ಪುಸ್ತಕಗಳು ಪ್ರಕಟವಾಗುವ ಈ ಕಾಲಘಟ್ಟದಲ್ಲಿ ಆಡುಭಾಷೆಗಳನ್ನು ಉಳಿಸುವುದು ಸುಲಭವಾಗಬೇಕಿತ್ತು. ಜಾಗತೀಕರಣದ ಸುಳಿಗೆ ಜಾತಿಗಳು ಕುಸಿದುಬೀಳಬೇಕಿತ್ತು, ಅದೂ ಆಗದಿರುವುದು ದುರಂತವೇ ಸರಿ. ಗುರ್ಬಾಣಕ್ಕಿ ಕಥೆಯಂತೆ ಇದೂ ವಿಚಾರಕ್ಕೆ ಹಚ್ಚುವ ಲೇಖನ.

    ಪ್ರತಿಕ್ರಿಯೆ
    • ರಾಜೀವ ನಾಯಕ

      ಥ್ಯಾಂಕ್ಸ್ ಪ್ರಕಾಶ್ ಚಂದದ ಓದಿಗೆ ಮತ್ತು ಒಪ್ಪುವ ಪ್ರತಿಕ್ರಿಯೆಗೆ ..

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: