ಹೊಸತು ಸಂದರ್ಶನದಲ್ಲಿ ಬಿ. ಗಂಗಾಧರಮೂರ್ತಿ…

ಗೌರಿಬಿದನೂರು ಅಂದ್ರೆ ಬಿ. ಗಂಗಾಧರ ಮೂರ್ತಿ ಅನ್ನುವಷ್ಟು ಆ ಊರಿನ ಹೃದಯ ಭಾಗವಾಗಿದ್ದ ಎಲ್ಲರ ಪ್ರೀತಿಯ ಬಿ.ಜಿ.ಎಂ. ನನ್ನ ಊರಿನವರು ಎಂದು ನನಗೂ ಹೆಮ್ಮೆ. ಈ ಹೆಮ್ಮೆಯ ಗುರುತು ಇಂದು ಕಳಚಿಹೋಗಿದೆ. ಅವರು ಇನ್ನಿಲ್ಲ ಎಂಬ ವಾರ್ತೆಯನ್ನು ಗೆಳೆಯ ರಾಮಕೃಷ್ಣ ಬಿಕ್ಕಿ ಬಿಕ್ಕಿ ಅಳುತ್ತಾ ತಿಳಿಸಿದಾಗ ನನಗೆ ನಂಬಲಾಗಲಿಲ್ಲ. ಈಗಲೂ ನಂಬಲಾಗದೆ ಒದ್ದಾಡುತ್ತಿರುವೆ.

ಕಳೆದ ನಾಲ್ಕು ದಶಕಗಳಲ್ಲಿ ಕಾರ್ಮಿಕ ಚಳುವಳಿ, ಸಮುದಾಯ, ಬಂಡಾಯ, ದಲಿತ ಸಂಘರ್ಷ ಸಮಿತಿ, ಜನ ವಿಜ್~ಆನ ಚಳುವಳಿ, ಸಾಕ್ಷರತಾ ಚಳುವಳಿ….. – ಹೀಗೆ ಹತ್ತು ಹಲವು ಚಳುವಳಿಗಳ ಒಡನಾಡಿಯಾಗಿ ನಮ್ಮಂಥವರಿಗೆ ಸ್ಪೂರ್ತಿದಾಯಕರಾದವರು. ಕಳೆದ ಹತ್ತು ದಿನಗಳ ಹಿಂದಷ್ಟೇ ಫೋನ್ ಮಾಡಿ ಮಾತಾಡಿದ್ದರು. ಗಲಾಟೆಯ ಕೇಂದ್ರವಾಗಿ ವಿದುರಾಶತ್ಥ ಎಲ್ಲರ ಗಮನ ಸೆಳೆದ ಸಂದರ್ಭದಲ್ಲಿ ನಾನು ಅವರನ್ನು ಮೂರು ನಾಲ್ಕು ಬಾರಿ ಭೇಟಿಯಾಗಿದ್ದೆ.

ಕಳೆದ ಹೊಸತು ಸಂಚಿಕೆಯಲ್ಲಿ ಅವರ ಸಂದರ್ಶನ ಮಾಡುವ ಸದವಕಾಶ ನಮಗೆ ಸಿಕ್ಕಿತ್ತು. ಅದರ ಪೂರ್ಣ ಪಾಠವನ್ನು ಇಲ್ಲಿ ಹಂಚಿಕೊಳ್ಳುವೆ:
ವೀರಸೌಧದ ರೂವಾರಿ ಪ್ರೊಫೆಸರ್ ಗಂಗಾಧರ ಮೂರ್ತಿ ಸ್ವತಂತ್ರ ಭಾರತ ತನ್ನ ಅಮೃತೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಅಮೂಲ್ಯ ಕ್ಷಣಗಳನ್ನು ಸ್ಮರಿಸುವುದು ಒಂದು ಸಂಪ್ರದಾಯ. ಈ ಪರಂಪರೆಯ ಭಾಗವಾಗಿ ಕರ್ನಾಟಕದ ಜಲಿಯನ್ವಾಲಾ ಬಾಗ್ ಎಂದೇ ಪ್ರಖ್ಯಾತವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿರುವ ವೀರಸೌಧವನ್ನು ಪರಿಚಯಿಸಲು ಮತ್ತು ಅದರ ರೂವಾರಿಯಾದ ಪ್ರೊಫೆಸರ್ ಗಂಗಾಧರ ಮೂರ್ತಿಯವರನ್ನು ಸಂದರ್ಶಿಸಲು ಹೊಸತು ಸಂಪಾದಕ ಬಳಗ ಇತ್ತೀಚೆಗೆ ವಿದುರಾಶ್ವತ್ಥಕ್ಕೆ ಭೇಟಿ ನೀಡಿತು. ಆ ಸಂದರ್ಭದಲ್ಲಿ ವೀರಸೌಧದ ಆವರಣದಲ್ಲಿಯೇ ಪ್ರೊಫೆಸರ್ ಗಂಗಾಧರಮೂರ್ತಿಯವರೊಡನೆ ನಡೆಸಿದ ಸಂದರ್ಶನ ಲೇಖನ ಇಲ್ಲಿದೆ:

ಹೊಸತು: ಸರ್, ನಮಸ್ತೆ. ಸ್ವತಂತ್ರ ಭಾರತ ತನ್ನ ಅಮೃತೋತ್ಸವವನ್ನು ಆಚರಿಸುತ್ತಿರುವ ಹೊಸ್ತಿಲಲ್ಲಿರುವಾಗ, ನಿಮ್ಮ ವಿದುರಾಶ್ವತ್ಥ ವಿಶೇಷವಾಗಿ ಸುದ್ದಿ ಮಾಡುತ್ತಿದೆಯಲ್ಲ, ಒಳ್ಳೆಯ ಕಾರಣಕ್ಕೆ ಸುದ್ದಿ ಮಾಡುವುದು ಸ್ವಾಗತಾರ್ಹ . ಆದರೆ ಈಗ ಅದೇನು ಅಪಸ್ವರ?
ಗಂಗಾಧರ ಮೂರ್ತಿ : ಹೌದು. ಇದೊಂದು ದುರಂತ. ಇದು ಆರಂಭವಾಗಿ ಹದಿನೈದು ವರ್ಷಗಳೇ ಆಗಿವೆ. ಇಲ್ಲಿನ ಚಿತ್ರಪಟದ ಗ್ಯಾಲರಿ ಆರಂಭವಾಗಿ ಹದಿಮೂರು ವರ್ಷಗಳಾಗಿವೆ. ಇಲ್ಲಿಯವರೆಗೂ ಕಾಣದ ನ್ಯೂನತೆಗಳು ಈಗ ಕೆಲವರಿಗೆ ಮಾತ್ರ ಕಂಡು ಅವರು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಚಿತ್ರಪಟವನ್ನು ವೀಕ್ಷಿಸಲು ಕೆಲವರು ಆರ್.ಎಸ್.ಎಸ್, ಭಜರಂಗದಳ ಮತ್ತು ಸ್ಥಳೀಯ ಬಿ.ಜೆ.ಪಿ.ಯ ಕಾರ್ಯಕರ್ತರು ಗುಂಪುಗಳಲ್ಲಿ ಬಂದು ಇಲ್ಲಿನ ಚಿತ್ರಪಟದ ಔಚಿತ್ಯವನ್ನು ಪ್ರಶ್ನಿಸಿದ್ದಾರೆ. ಕೆಲವು ಪಟಗಳನ್ನು ತೆಗೆಯಬೇಕೆಂದು, ತೆಗೆಯದಿದ್ದರೆ ಬೆಂಕಿಹಾಕುವುದಾಗಿ ಬೆದರಿಸಿ ಹೋಗಿದ್ದಾರೆ.

ಹೊಸತು: ಹೌದು ಸರ್, ಇದು ನಮ್ಮ ಕಾಲದ ದುರಂತ. ಸರ್, ನಿಮ್ಮ ಊರು ಯಾವುದು?
ಗಂಗಾಧರ ಮೂರ್ತಿ: ನಾನು ಹಾಸನದ ಹೊಳೆನರಸೀಪುರ ತಾಲ್ಲೂಕಿನವನು.

ಹೊಸತು: ನಿಮ್ಮ ಬಾಲ್ಯದ ಶಾಲಾ ವಿದ್ಯಾಭ್ಯಾಸ ನಡೆದದ್ದು ಅಲ್ಲಿಯೇ?
ಗಂಗಾಧರ ಮೂರ್ತಿ: ಹೌದು. ನಾನು ಎಸ್.ಎಸ್. ಎಲ್.ಸಿ.ಯವರೆಗೆ ಓದಿದ್ದು ಅಲ್ಲಿಯೇ.

ಹೊಸತು: ನಿಮ್ಮ ತಂದೆ ಏನು ಕೆಲಸ ಮಾಡುತ್ತಿದ್ದರು?
ಗಂಗಾಧರ ಮೂರ್ತಿ: ಅವರು ಹೊಳೆನರಸೀಪುರದಲ್ಲಿ ಒಂದು ಸೆಲೂನ್ ಇಟ್ಟುಕೊಂಡಿದ್ದರು. ಅವರ ಆದಾಯ ಎಷ್ಟು ಕಡಿಮೆಯಿತ್ತೆಂದರೆ, ಅದು ಜೀವನ ಸಾಗಿಸೋಕೆ ಸಾಲುತ್ತಿರಲಿಲ್ಲ. ಟ್ಯೂಷನ್ ಫೀ ಕೊಡಬೇಕೆಂದು ಕೇಳಿದಾಗೆಲ್ಲ ಅವರ ಬಳಿ ಒಂದು ಉಂಗುರ ಇತ್ತು. ಅದನ್ನು ಅಡವಿಟ್ಟು ಹಣ ತಂದುಕೊಡುತ್ತಿದ್ದರು. ಸಾಲ ತೀರಿದ ಮೇಲೆ ಮತ್ತೆ ಅದೇ ಅಭ್ಯಾಸ.

ಹೊಸತು: ಮತ್ತೆ ಕಾಲೇಜು ಶಿಕ್ಷಣಕ್ಕೆ ಏನು ಮಾಡಿದಿರಿ?
ಗಂಗಾಧರ ಮೂರ್ತಿ: ಕಾಲೇಜಿಗೆ ಶಿವಮೊಗ್ಗೆಗೆ ಹೋಗಬೇಕಾಯ್ತು. ನಮ್ಮಪ್ಪಂಗೆ ಸ್ವಲ್ಪ ಹಣದ ಕಷ್ಟವಿತ್ತು. ಅದಕ್ಕೆ ನನ್ನ ಅಣ್ಣನ ಮನೆಗೆ, ಅಂದರೆ ಚಿಕ್ಕಪ್ಪನ ಮಗನ ಮನೆಗೆ ಪಿಯುಸಿ ಓದಲು ಕಳುಹಿಸಿದರು. ಅಲ್ಲಿ ನನಗೆ ಲಕ್ಕ÷್ಕಪ್ಪ ಗೌಡರ ಪರಿಚಯವಾಯಿತು. ಅದು ನನ್ನ ಬದುಕಿನಲ್ಲಿ ತುಂಬ ಮಹತ್ವದ್ದು. ಅವರು ಕುವೆಂಪು ವಿಶ್ವವಿದ್ಯಾಲಯಕ್ಕೆ ರಿಜಿಸ್ಟ್ರಾರ್ ಆಗಿ ಬಂದಿದ್ದರು. ಅವರೊಡನೆ ನನಗೆ ಸ್ವಲ್ಪ ಒಡನಾಟ ಬೆಳೆಯಿತು. ನಾನು ಪುಸ್ತಕಗಳನ್ನು ಓದುವುದನ್ನು ಕಲಿತದ್ದೇ ಲಕ್ಕಪ್ಪ ಗೌಡರಿಂದ. ಅವರು ಒಂದು ಲೈಬ್ರರಿ ಇಟ್ಟಿದ್ದರು. ಅವರಿಗೆ ಊಟ ತೆಗೆದುಕೊಂಡು ಹೋಗುವುದು ನನ್ನ ಕೆಲಸವಾಗಿತ್ತು. ಅವರು ಎರಡು ಗಂಟೆಗೆ ಬರುತ್ತಿದ್ದರು. ನಾನು ಅಲ್ಲಿಗೆ ಒಂದು ಗಂಟೆಗೇ ಹೋಗಿಬಿಡುತ್ತಿದ್ದೆ. ಲೈಬ್ರರಿಯಲ್ಲಿ ಕಪಾಟುಗಳನ್ನು ತೆರೆದೇ ಇಟ್ಟಿರುತ್ತಿದ್ದರು. ಅವರು ಬರುವವರೆಗೂ ಪುಸ್ತಕಗಳನ್ನು ಓದುತ್ತಾ ಕುಳಿತಿರುತ್ತಿದ್ದೆ. ನಡೆದು ಬಂದ ದಾರಿ, ಅಂತಹ ಪುಸ್ತಕಗಳನ್ನು ಓದುತ್ತಿದ್ದೆ. ಇನ್ನು ಕನ್ನಡ ಸಾಹಿತ್ಯದ ಹಲವಾರು ಪುಸ್ತಕಗಳನ್ನು ಅಲ್ಲಿ ಓದಿದೆ. ಲಕ್ಕಪ್ಪಗೌಡರ ಪರಿಚಯವಾಯಿತು. ಹಾಗೆಯೇ ನೆನಪಿಸಿಕೊಳ್ಳಲೇ ಬೇಕಾದ ಮತ್ತೊಬ್ಬ ವ್ಯಕ್ತಿಯೆಂದರೆ ರಾಮಪ್ರಸಾದ್ ಅನ್ನುವವರು ಹಿಂದಿ ಪಾಠ ಮಾಡುತ್ತಿದ್ದರು. ಆಮೇಲೆ ಕನ್ನಡ ಪ್ರಭದಲ್ಲಿಯೂ ಕೆಲಸ ಮಾಡಿದರು. ತುಂಬ ಉದಾರವಾದಿ ವಿಚಾರಗಳ ಅದ್ಭುತ ಮನುಷ್ಯ. ಅವರ ವಿಚಾರಗಳಿಗೇ ಹೊಳೆ ನರಸೀಪುರದಲ್ಲಿ ಅವರನ್ನು ಒಂದು ಥರ್ ಐಸೋಲೇಟ್ ಮಾಡಿಬಿಟ್ಟಿದ್ದರು. ಅವರು ಪ್ರೇಮ ಚಂದ್ ಪುಸ್ತಕಗಳನ್ನು ಓದಲಿಕ್ಕೆ ಕೊಡುತ್ತಿದ್ದರು. ತುಂಬ ಉದಾರವಾದ ಮತ್ತು ಪ್ರಗತಿಪರವಾದ ಪುಸ್ತಕಗಳನ್ನು ಕೊಡುತ್ತಿದ್ದರು. ಹೀಗಾಗಿ ನನಗೆ ಅಲ್ಲಿ ಒಂದು ಒಳ್ಳೆಯ ವಾತಾವರಣ ಸಿಕ್ಕುವುದಕ್ಕೆ ಸಾಧ್ಯವಾಯಿತು.
ಪಿಯುಸಿ ಓದಿದ ನಂತರ ನಾನು ಪಿ ಅಂಡ್ ಟಿಯಲ್ಲಿ ಕೆಲಸಕ್ಕೆ ಸೇರಿದೆ. ಕೆಲಸಕ್ಕೆ ಬೆಳಗಾಂಗೆ ಹೋದೆ. ಅಲ್ಲಿ ಅದ್ಭುತವಾದ ಲೈಬ್ರರಿ ಇತ್ತು. ನಾನು ರಾತ್ರಿ ಪಾಳಿ ಮತ್ತು ರೈಲಿನ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದರಿಂದ ಓದೋದಕ್ಕೆ ತುಂಬ ಸಮಯ ಸಿಕ್ತು. ಅಲ್ಲಿದ್ದಾಗ ಪದ್ಯ ಬರೀತಿದ್ದೆ. ಬಿ.ಎ.ಯನ್ನು ಹೊರಗಿನ ವಿದ್ಯಾರ್ಥಿಯಾಗಿ ಮುಗಿಸಿಕೊಂಡೆ. ನಂತರ ಬೆಳಗಾಂನಿ೦ದ ಮೈಸೂರಿಗೆ ವರ್ಗವಾದಾಗ ನನಗೆ ಎಂ.ಎ. ಓದಲು ಸಾಧ್ಯವಾಯಿತು. ಅಲ್ಲಿ ಮತ್ತೆ ನನಗೆ ಲಕ್ಕಪ್ಪ ಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿಕ್ಕರು. ಮೈಸೂರು ವಿಶ್ವವಿದ್ಯಾಲಯದಲ್ಲಿ ನನಗೆ ಎಸ್. ನಾರಾಯಣ್ (ಒಡನಾಡಿ ನಾರಾಯಣ್) ಸಿಕ್ಕರು. ಅವರೂ ಬರೀತಿದ್ದರು. ನಾವು ಒಟ್ಟಾಗಿ ಸೇರಿ ವಿಕಾಸ ಪ್ರಕಾಶನ ಅಂತ ಶುರು ಮಾಡಿದೆವು. ಆಗಲೇ ನಾವು ಇ.ಎಂ.ಎಸ್. ನಂಬೂದ್ರಿಪಾದ್ ಅವರ ‘ನನ್ನ ಬದುಕು’, ಗೋದಾವರಿ ಪರುಳೇಕರ್ ಅವರ ‘ಮಾನವ ಎಚ್ಚೆತ್ತಾಗ’ ಅಂತಹ ಪುಸ್ತಕಗಳನ್ನು ಪ್ರಕಟಿಸಿದೆವು. ದೇವನೂರು ಅವರು ‘ರಾಮಧರ್’ಅಂತ ಪುಸ್ತಕವನ್ನು ಬರೆದುಕೊಟ್ಟರು. ಈ ವಿಕಾಸ ಪ್ರಕಾಶನದಿಂದಲೇ ಮುಂದೆ ಒಡನಾಡಿಯನ್ನು ತರಲು ಆರಂಭಿಸಿದ್ದು. ನಾನು ಆರ್.ಎಂ.ಎಸ್. ನಲ್ಲಿ ಕೆಲಸ ಮಾಡುತ್ತಿದ್ದೆ, ನಾರಾಯಣ್ ಟೆಲಿಫೋನ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ, ಅಲ್ಲಿ ಒಂದು ಕನ್ನಡ ಸಂಘವನ್ನು ಮಾಡಿಕೊಂಡಿದ್ದೆವು. ಆ ಕನ್ನಡ ಸಂಘಕ್ಕೆ ಅನಂತಮೂರ್ತಿ, ಜಿ.ಎಚ್.ನಾಯಕ್ – ಎಲ್ಲಾ ಬರ್ತಿದ್ದರು. ಆಗಿನ್ನು ಮಾನಸ ಗಂಗೋತ್ರಿ ಇಷ್ಟು ಬೆಳೆದಿರಲಿಲ್ಲ. ನ. ರತ್ನ, ಸಿಂಧುವಳ್ಳಿ ಅನಂತಮೂರ್ತಿ , ಹಳೆಮನೆ, ಎಂ.ಎಸ್. ರಘುನಾಥ್, ಅಬ್ದುಲ್ ರೆಹಮಾನ್ ಪಾಷಾ , ರಾಮೇಶ್ವರಿ ಮತ್ತು ಅವರ ಪತಿ ವರ್ಮ- ಎಲ್ಲಾರೂ ಸೇರುತ್ತಿದ್ದೆವು. ಚರ್ಚೆ, ನಾಟಕ ಮಾಡ್ತಿದ್ದೆವು. ಹೊಸ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದೆವು. ಹೊಸ ಹೊಸ ಪುಸ್ತಕಗಳನ್ನು ಕುರಿತು ಚರ್ಚೆ ಮಾಡ್ತಿದ್ದೆವು. ಈ ಎಲ್ಲರ ಪ್ರಯತ್ನಗಳಿಂದ ಒಡನಾಡಿ ಆರಂಭವಾಯ್ತು. ಒಡನಾಡಿಗೆಂದೇ ಒಂದು ಸಮಿತಿಯನ್ನು ಮಾಡಿಕೊಂಡೆವು. ಅದರಲ್ಲಿ ನಾನು, ನಾರಾಯಣ್, ಬಿ.ಕೆ.ಚಂದ್ರಶೇಖರ್, ಜಿ.ಎಚ್. ರಾಮರಾವ್ ಎಲ್ಲ ಇದ್ದೆವು. ಜಿ.ಎಚ್. ರಾಮರಾವ್ ಅವರ ಪ್ರೆಸ್ನಲ್ಲಿ ಪು.ತಿ.ನ. ಅವರು ಸಿಕ್ಕುತ್ತಿದ್ದರು. ಅವರೊಡನೆ ಜೋರು ಜೋರಾಗಿ ಚರ್ಚೆ ಮಾಡುತ್ತಿದ್ದೆವು. ಒಡನಾಡಿಯ ಸಂಪಾದಕರಾಗಿ ಅನಂತಮೂರ್ತಿ, ಸಣ್ಣಗುಡ್ಡಯ್ಯ – ಎಲ್ಲಾ ಕೆಲಸ ಮಾಡುತ್ತಿದ್ದರು. ನಾವು ಪ್ರಕಟಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲು ನಂಬೂದ್ರಿಪಾದ್, ಮಾತೃಭೂಮಿ ಸಂಪಾದಕರಾದ ಗೋವಿಂದ ಪಿಳ್ಳೆöಯವರನ್ನು ಕರೆಸಿದ್ದೆವು. ಅನಂತಮೂರ್ತಿಯವರ ಮನೆಯಲ್ಲಿ ಸಭೆ ಸೇರುತ್ತಿದ್ದೆವು. ಅನಂತಮೂರ್ತಿ ಲಿಬರಲ್ ಆದರೂ ಅವರಿಗೆ ನಮ್ಮ ಅಭಿಪ್ರಾಯಗಳ ಬಗ್ಗೆ ವಿರೋಧ ಇರೋದು. ಕೃಷ್ಣ ಆಲನಹಳ್ಳಿ, ವಿ.ಎನ್. ಲಕ್ಷ್ಮಿನಾರಾಯಣ – ಎಲ್ಲರೂ ಬಂದು ಈ ಚರ್ಚೆಗಳಲ್ಲಿ ಸೇರಿಕೊಳ್ಳುತ್ತಿದ್ದರು. ಒಂದು ರೀತಿಯ ಹೊಸ ವಿಚಾರಗಳು ಬೇಕು, ಎನ್ನುವವರ ವೇದಿಕೆ ಇದಾಗಿತ್ತು. ಅಲ್ಲಿ ಕೆಲವರು ಎಡ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ನಾರಾಯಣ್ ಅಂತೂ ನೇರವಾಗಿ ಸಿ.ಪಿ.ಎಂ. ಜೊತೆ ಇದ್ದರು. ಅದೇ ಸಂದರ್ಭದಲ್ಲಿ ನಾನು ನನ್ನ ಪಿ.ಅಂಡ್ಟಿ ಕಾರ್ಮಿಕ ಸಂಘಟನೆಯಲ್ಲಿ ಕ್ರಿಯಾಶೀಲವಾಗಿದ್ದೆ. ಅಲ್ಲಿ ನನಗೆ ರಘೋತ್ತಮ್, ಆನಂದ ಹಾಗೂ ಭಾಸ್ಕರನ್ ಅವರ ಸಂಪರ್ಕಕ್ಕೆ ಬಂದೆ. ಅಂದರೆ ನನಗೆ ಕಾರ್ಮಿಕ ಸಂಘಟನೆಯ ನಂಟೂ ಇತ್ತು ಮತ್ತು ಬೌದ್ಧಿಕ ವಲಯದ ಚರ್ಚೆಗಳೂ ಗೊತ್ತಾಗುತ್ತಿದ್ದವು. ಆಮೇಲೆ, ನನಗೆ ರತಿ ದೇವಿ , ನಂತರ ಡಾ| ಲಕ್ಷಿ÷್ಮನಾರಾಯಣ್ ಅವರ ಪರಿಚಯ ಆಯಿತು. ನಾವು ಸರಸ್ವತಿಪುರಂನಲ್ಲಿ ಮಾರ್ಕ್ಸ್ವಾದಿ ಲೈಬ್ರರಿ ಅಂತ ಆರಂಭಿಸಿದೆವು. ನರೇಂದ್ರ ಸಿಂಗ್, ರಾಮಲಿಂಗ ಮತ್ತು ಡಾ| ಸುಂದರ, ಎಲ್ಲರೂ ಭೇಟಿಯಾಗುತ್ತಿದ್ದೆವು.

ಬೆಂಗಳೂರಿನಲ್ಲಿ ಸಮುದಾಯದವರು ‘ತಾಯಿ’ ನಾಟಕ ಮಾಡಿದ್ದರು. ಅದನ್ನು ನೋಡಿದ್ದ ನಾರಾಯಣ ಮೈಸೂರಿನಲ್ಲಿಯೂ ಆ ನಾಟಕ ಮಾಡಿಸೋಣವೆಂದು ಹೇಳಿದರು. ಅವಾಗ ಪ್ರಸನ್ನನ ಪರಿಚಯವಾಯಿತು. ಮಾಲತಿಯೂ ಆಗಲೇ ಪರಿಚಯವಾದದ್ದು. ಮೈಸೂರಿನಲ್ಲಿ ತಾಯಿ ನಾಟಕದ ಸಂದರ್ಭಕ್ಕೆ ಒಂದು ಸ್ಮರಣ ಸಂಚಿಕೆ ಮಾಡಿದೆವು. ಅದರ ಸಂಪಾದಕರಾಗಿ ನಾನು, ಜಿ.ಎಚ್.ನಾಯಕ್ ಮತ್ತು ಬಾಲ ಗೋಪಾಲ ವರ್ಮ ಕೆಲಸ ಮಾಡಿದೆವು. ಸಮುದಾಯ ಆರಂಭದ ಸಭೆ ಆದದ್ದು ರಾಮೇಶ್ವರಿಯವರ ಮನೆಯಲ್ಲಿ. ಆಗ ನಾನು ಸಮುದಾಯಕ್ಕೆ ಸೇರಿಕೊಂಡದ್ದು. ತಾಯಿ ನಾಟಕ ಆದ ಮೇಲೆ ಈ ನಾಟಕದ ಪ್ರದರ್ಶನವನ್ನು ನಾರಾಯಣ ಪ್ರತಿ ಜಿಲ್ಲೆಯಲ್ಲಿಯೂ ಸಂಘಟಿಸಿದರು. ಅವರಿಗಿದ್ದ ಸಂಘಟನಾ ಶಕ್ತಿ ಅಪಾರ. ನಂತರ ಸಮುದಾಯದಿಂದ ಗೆಲಿಲಿಯೋ ಮಾಡಿದೆವು.

ಹೊಸತು : ಸರ್, ಈ ಎಲ್ಲ ಗದ್ದಲದ ನಡುವೆ ನೀವು ಎಂ.ಎ. ಮಾಡಿದ್ದು ಯಾವಾಗ?
ಗಂಗಾಧರ್ : ನಾನು ಆರ್.ಎಂ.ಎಸ್.ನಲ್ಲಿ ಕೆಲಸ ಮಾಡುತ್ತಲೇ ಎಂ.ಎ.ಗೆ ಅರ್ಜಿ ಹಾಕಿದ್ದೆ. ಈ ಎಲ್ಲ ಸಾಹಿತ್ಯದ ಮೇಷ್ಟ್ರುಗಳು ಗೊತ್ತಿದ್ದರಲ್ಲಾ, ಮೊದಲು ಕನ್ನಡ ಎಂ.ಎ. ಗೆ ಅಂತ ಹಾಕಿದ್ದೆ. ಜಿ. ಎಚ್. ನಾಯಕ್ ಹೇಳಿದರಂತಲ್ಲಾ, ಅಂತ. ಆಮೇಲೆ ಅನಂತ ಮೂರ್ತಿಯವರು ಕನ್ನಡ ಎಂ.ಎ. ಬೇಡ, ಇಂಗ್ಲಿಷ್ ಎಂ.ಎ. ಮಾಡು ಅಂದ್ರು. ಆ ವೇಳೆಗೆ ನಾನು ಸ್ವಲ್ಪ ಇಂಗ್ಲಿಷ್ ಸಾಹಿತ್ಯವನ್ನು ಓದುವುದನ್ನು ಕಲಿತಿದ್ದೆ. ಟಾಲ್ಸ್ಟಾಯ್, ಡಾಸ್ಟೋವಸ್ಕಿ, ಕಾಫ್ಕಾ ಅವರನ್ನು ಓದುಕೊಂಡಿದ್ದೆ. ಅವಾಗ ನವ್ಯರ ಕಾಲ. ಇಂಗ್ಲಿಷ್ ಪುಸ್ತಕ ಓದೋದು, ಓದಿದೆ ಅಂತ ಹೇಳ್ಕೊಳ್ಳೋದು ಒಂದು ರೀತಿಯ ಫ್ಯಾಷನ್ ಆಗಿತ್ತು. ಕಾಫ್ಕಾ, ಸಾರ್ತ್ರೆ ಓದಿ, ಅವರ ಥರಾನೇ ಮಾತಾಡೋದು ಎಲ್ಲ ಮಾಡ್ತಿದ್ದೆವು. ಮೈಸೂರಿನಲ್ಲಿ ನನಗೆ ತುಂಬ ಪ್ರಭಾವ ಬೀರಿದವರು ಅಂದ್ರೆ ಅನಂತಮೂರ್ತಿ. ಅವರೊಡನೆ ಸಣ್ಣ ಸಣ್ಣ ಭೇದ ಭಿನ್ನಾಭಿಪ್ರಾಯಗಳು ಇರುತ್ತಿದ್ದವು. ನಂತರ ಪ್ರೊ. ಸಿ.ಡಿ. ನರಸಿಂಹಯ್ಯನವರಲ್ಲಿ ಪಿ.ಎಚ್.ಡಿ.ಗೂ ನೋಂದಾಯಿಸಿಕೊ೦ಡೆ. ಅಷ್ಟರಲ್ಲಿ ಜೆ.ಎಸ್.ಎಸ್. ಕಾಲೇಜಿನಲ್ಲಿ ಒಂದು ಕೆಲಸ ಖಾಲಿ ಆಯಿತು. ಅಲ್ಲಿನ ಸುತ್ತೂರು ಸ್ವಾಮಿಗಳು ನಮ್ಮ ನಾರಾಯಣ್ಗೆ ತುಂಬ ಸ್ನೇಹಿತರಾಗಿದ್ದರು. ಅವರು ನಮ್ಮನ್ನು ತುಂಬ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಅವರ ಕಾಲೇಜಿನಲ್ಲಿ ನನಗೆ ಕೆಲಸ ಕೊಟ್ಟರು. ಅಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದೆ. ಈ ಮಧ್ಯೆ ನ್ಯಾಷನಲ್ ಕಾಲೇಜಿನಲ್ಲಿ ಕೆಲಸಕ್ಕೆ ಪ್ರಕಟಣೆ ಬಂತು. ಅನಂತಮೂರ್ತಿಯವರು ನನಗೆ ಅರ್ಜಿ ಹಾಕಲು ಹೇಳಿ, ನರಸಿಂಹಯ್ಯನವರಿಗೆ ಒಂದು ಪತ್ರ ಬರೆದುಕೊಟ್ಟರು. ನನಗೆ ಈಗಲೂ ನೆನಪಿದೆ. ಅನಂತಮೂರ್ತಿಯವರು ನರಸಿಂಹಯ್ಯನವರಿಗೆ ಪತ್ರದಲ್ಲಿ ಬರೆದಿದ್ದರು: … ನೀವು ತಳಸಮುದಾಯದವರನ್ನು ಎತ್ತಬೇಕು, ಅಂತ ತುಂಬ ಮಾತಾಡ್ತೀರ. ಇವರಿಗೆ ಕೆಲಸ ಕೊಡದಿದ್ದರೆ, ನೀವು ಘೋರ ಅಪರಾಧ ಮಾಡಿದಂತೆ ಆಗುತ್ತದೆ, ಅಂತ ಬರೆದಿದ್ದರು. ಎಚ್.ಎನ್. ಅವರನ್ನು ಮೊದಲು ಭೇಟಿಯಾದದ್ದು ಆಗಲೇ. ಸಿ.ಡಿ.ಎನ್. ಕೂಡ ಪಿ.ಎಚ್.ಡಿ. ಆಮೇಲೆ ಮಾಡು, ಮೊದಲು ಹೋಗಿ ಕೆಲಸಕ್ಕೆ ಸೇರ್ಕೋ ಅಂತ ಹೇಳಿದರು.

ಹೊಸತು : ಅಂದ್ರೆ, ನೀವು ಗೌರಿಬಿದನೂರು ನ್ಯಾಷನಲ್ ಕಾಲೇಜಿಗೆ ಆಗ ಸೇರಿದ್ರಾ?
ಗಂಗಾಧರ್ : ಹೌದು. ಆಗ ನಾನು ಬಂದಾಗ ಅಲ್ಲಿ ಕೃಷ್ಣಮೂರ್ತಿ ರಾವ್ ಇದ್ದರು. ನಗರಗೆರೆ ರಮೇಶ್, ರಂಗಾರೆಡ್ಡಿ, ಕೋದಂಡರಾಮ ಶೆಟ್ಟಿ – ಎಲ್ಲಾ ಸಿಕ್ಕಿದರು. ಒಂದು ವರ್ಷ ಸುಮ್ಮನೆ ಪಾಠ ಮಾಡಿಕೊಂಡು ಇದ್ದೆ. ಆಮೇಲೆ ಇಲ್ಲಿದ್ದ ಟೀಚರ್ಸ್ ಮತ್ತು ಕೆಲವು ಹಿರಿಯ ಶಿಷ್ಯರುಗಳು ಸೇರಿ ಒಂದು ವೇದಿಕೆ ಮಾಡಿಕೊಂಡೆವು. ಇದು ಮೂರು ವರ್ಷಗಳ ಕಾಲ ತುಂಬ ಚೆನ್ನಾಗಿ ನಡೆಯಿತು. ಲೋಕಾಯತ ಎಲ್ಲಾ ಅಧ್ಯಯನ ಮಾಡಿದ್ದು ಆಗಲೇ ನಾನು. ಒಮ್ಮೆ ಮೂರು ದಿನದ ವಿಚಾರ ಸಂಕಿರಣ ನಡೆಸಿದ್ದೆವು. ಶಿವರಾಮ ಕಾರಂತರನ್ನು ಆಹ್ವಾನಿಸಿದ್ದೆವು. ಜಿ.ಆರ್. ನೀವೂ ಬಂದಿದ್ದಿರಿ ಅಲ್ವಾ? ಒಂದು ಹದಿನೈದು ಜನರು ಸೇರುತ್ತಿದ್ದೆವು. ಈ ಜನಗಳೇ ಸೇರಿ ಗೌರಿಬಿದನೂರಿನಲ್ಲಿ ಸಮುದಾಯ ಆರಂಭಿಸಿದೆವು. ನಂತರದ ದಿನಗಳಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಚಟುವಟಿಕೆಗಳನ್ನೂ ಇಲ್ಲಿ ನಡೆಸಿದೆವು.

ಹೊಸತು : ನೀವು ದಲಿತ ಸಂಘರ್ಷ ಸಮಿತಿ ಜೊತೆ ಸೇರಿದ್ದು ಯಾವಾಗ?
ಗಂಗಾಧರ್ : ಹೀಗೆ ನಮ್ಮ ಚಟುವಟಿಕೆಗಳು ನಡೆಯುತ್ತಿದ್ದಾಗ, ಒಮ್ಮೆ ಕೆಲವು ದಲಿತ ಹುಡುಗರು, ಕಾರ್ಯಕರ್ತರು ಬಂದು ಇಲ್ಲಿ ದಲಿತ ವಿದ್ಯಾರ್ಥಿಗಳನ್ನು ಸಂಘಟಿಸಬೇಕು, ಎಂದು ನನ್ನನ್ನು ಕೇಳಿದರು. ಸರಿ, ಎಂದು ಕಾರ್ಯಪ್ರವೃತ್ತರಾದೆವು. ಆಗ ಬಹಿರಂಗವಾಗಿ ನಾನು ದಲಿತ ಅಂತ ಹೇಳ್ಕೋಳ್ಳೇಕೆ ಜನ ಹೆದರುತ್ತಿದ್ದರು. ದಲಿತ ವಿದ್ಯಾರ್ಥಿ ಸಂಘಟನೆ ಮಾಡೋಣ ಎಂದು ಉತ್ತರ ಪಿನಾಕಿನಿ ನದಿಯ ತೀರದಲ್ಲಿ ಸಭೆ ಕರೆದೆವು. ನಮ್ಮ ಕಾಲೇಜಿನಲ್ಲಿ ಆಗ ಸುಮಾರು ೭೦೦ ಮಂದಿ ವಿದ್ಯಾರ್ಥಿಗಳಿದ್ದರು. ಆ ಸಭೆಗೆ ಬಂದದ್ದು ಕೇವಲ ನಾಲ್ಕು ಮಂದಿ. ಇನ್ನು ಕಾರ್ಯಕರ್ತರಾಗಿ ಬಂದಿದ್ದ ದಲಿತ ಯುವಕರು ಇದರಿಂದ ವಿಚಲಿತರಾಗಲಿಲ್ಲ. ಅದೆಷ್ಟು ಗಟ್ಟಿ ಕಾರ್ಯಕರ್ತರು ಅವರು! ಅದೆಷ್ಟು ಹುಮ್ಮಸ್ಸಿನಿಂದ ದಲಿತ ಸಂಘರ್ಷ ಸಮಿತಿ ಕಟ್ಟಲು ಮುಂದಾದರು. ಅದರಲ್ಲಿ ಒಬ್ಬ ರಾಮಚಂದ್ರ ಅಂತ. ಆಗ ಮುಖ್ಯವಾಗಿ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಬೇಕು, ಅಂತ ಹೋರಾಟ ನಡೆಸಿದರು. ಆಗಷ್ಟೇ ದಲಿತ ಕವಿ ಸಿದ್ದಲಿಂಗಯ್ಯನವರ ಹೊಲೆ ಮಾದಿಗರ ಹಾಡು ಬಂದಿತ್ತು. ‘ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?’ ಎಂಬುದು ಎಲ್ಲರ ನಾಲಿಗೆಯ ಮೇಲೆ ನಲಿಯುತ್ತಿತ್ತು.
ಆಮೇಲೆ, ನಾವು ನಾಗಸಂದ್ರ ಹೋರಾಟ ತೆಗೆದುಕೊಂಡೆವು., ಈ ನಾಗಸಂದ್ರದಲ್ಲಿ ಒಂದು ಎ.ಕೆ. ಕಾಲೊನಿ ಅಂತ ಇದೆ. ಅಲ್ಲಿನ ದಲಿತರು ಸುಮಾರು ೪೦೦-೫೦೦ ಮಂದಿ ಶಂಕ್ರಪ್ಪ ರೆಡ್ಡಿ ಅಂತ (ಈಗಿನ ಎಂ.ಎಲ್.ಎ. ಶಿವಶಂಕರ ರೆಡ್ಡಿಯವರ ತಂದೆ) ಆ ಹಳ್ಳಿಯ ಯಜಮಾನನ ಮನೆಯಲ್ಲಿ ಜೀತ ಮಾಡುತ್ತಿದ್ದರು. ಇವರಿಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ಅವರು ಶಾಲೆಗೆ ಹೋಗುತ್ತಿರಲಿಲ್ಲ, ಆಸ್ಪತ್ರೆಗೆ ಹೋಗುತ್ತಿರಲಿಲ್ಲ, ಗೌರಿಬಿದನೂರಿಗೆ ಬರೋದು ಅಂದ್ರೆ ದೊಡ್ಡ ಹಬ್ಬ ಇದ್ದಂತೆ. ಆಗಲೂ ಅವರನ್ನು ಕಾಯಲು ಪೈಲ್ವಾನ್ಗಳನ್ನು ಇಟ್ಟುಕೊಂಡಿರುತ್ತಿದ್ದರು. ಈ ಹಳ್ಳಿ ಹೋರಾಟವನ್ನು ಮೊದಲು ಎಂಎಲ್ ಗುಂಪಿನವರು ತೆಗೆದುಕೊಂಡಿದ್ದರು. ಇದು ನಮಗಾಗಲಿ, ಎಡ ಪಕ್ಷಗಳ ಇತರ ಗುಂಪಿನವರಿಗಾಗಲಿ ಗೊತ್ತಿರಲಿಲ್ಲ. ನಗರಿ ಬಾಬಯ್ಯ, ಹಸನ್ ಮನ್ಸೂರ್ ಅವರೆಲ್ಲಾ ಇವರನ್ನು ಮಾತನಾಡಿಸಲು ಬಂದರೆ, ಅವರನ್ನು ಹಿಡಿದು ಕೋಣೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಲು ಹೊರಟಿದ್ದರು. ಅಂತೂ ಅವರನ್ನು ಆ ಹಳ್ಳಿಯವರೇ ಹೇಗೋ ಬಚಾವ್ ಮಾಡಿದರು. ನಂತರ ದಲಿತ ಸಂಘರ್ಷ ಸಮಿತಿಯವರು ‘ಇದು ದಲಿತರ ಸಮಸ್ಯೆ. ನಾವು ಇದನ್ನು ಕೈಗೆತ್ತಿಕೊಳ್ಳಬೇಕು’ ಎಂದು ಅರ್ಥಮಾಡಿಕೊಂಡು ಹೋರಾಟದ ಕಣಕ್ಕೆ ಇಳಿದರು. ಈ ಹೋರಾಟ ನಾಲ್ಕು ವರ್ಷ ನಡೆಯಿತು. ಆಗ ನಾನು, ರಂಗಾರೆಡ್ಡಿ, ಕಾ.ನಾ. ಶ್ರೀನಿವಾಸ್ ಮುಂತಾದವರೆಲ್ಲಾ ಇವರ ಹೋರಾಟಕ್ಕೆ ಜೊತೆಯಾಗಿ ನಿಂತೆವು. ಮೊದಲು ಇಲ್ಲಿನ ಜೀತ ಪದ್ಧತಿಯನ್ನು ಕುರಿತು ಲಂಕೇಶ್ ಪತ್ರಿಕೆಯಲ್ಲಿ ಲೇಖನ ಬರೆದೆವು. ಅದು ಪ್ರಕಟವಾದಾಗ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಆಗ ನೀರಾವರಿ ಮಂತ್ರಿಯಾಗಿದ್ದ ನಜೀರ್ ಸಾಬ್ ಬಂದರು. ಹಳ್ಳಿಗರು ಅವರನ್ನು ಊರೊಳಗೆ ಬಿಟ್ಟುಕೊಳ್ಳಲಿಲ್ಲ. ಅವರ ಮೇಲೆ ಹಲ್ಲೆ ನಡೆಯಿತು. ಲಕ್ಷಿ÷್ಮÃಪತಿ ಕೋಲಾರ ಅವರು ಲಂಕೇಶ್ ಪತ್ರಿಕೆಗೆ ಲೇಖನ ಬರೆದರು: ‘ನಜೀರ್ ಸಾಬ್ ಮೇಲೆ ಹಲ್ಲೆ’, ಅಂತ. ಆಗ ದೇವನೂರು ಮಹಾದೇವ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿದ್ದರು. ಅವರು ಗೌರಿಬಿದನೂರಿಗೆ ಬಂದರು. ಅವರಿಗೆ ತಹಶೀಲ್ದಾರ್ ಭಕ್ತ ರಾಮೇಗೌಡ ಸ್ನೇಹಿತರಾಗಿದ್ದರು. ಅವರೂ ಲೋಹಿಯಾವಾದಿ. ಆಗ ಎಲ್ಲರೂ ಒಟ್ಟಾಗಿ ನಮ್ಮನ್ನೂ ಸೇರಿಸಿಕೊಂಡು ಒಂದು ಸಭೆಯನ್ನು ಕರೆದರು. ಆ ಸಭೆಯ ನಿರ್ಣಯದಂತೆ ಹೋರಾಟವನ್ನು ರಾಜ್ಯದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಇನ್ನೂ ಗಟ್ಟಿಗೊಳಿಸಬೇಕೆಂದು ತೀರ್ಮಾನಿಸಿದರು. ಈ ಹೋರಾಟ ಎಲ್ಲ ತಾಲ್ಲೂಕು, ಜಿಲ್ಲೆಗಳಿಗೆ ಹಬ್ಬಿ ಒಂದು ರೀತಿಯಲ್ಲಿ ಮಿಂಚಿನ ಸಂಚಾರವನ್ನೇ ಹುಟ್ಟಿಹಾಕಿತು. ಕೋಟಗಾನ ಹಳ್ಳಿ ರಾಮಯ್ಯ “ಹೆಂಡ ಬೇಡ, ಭೂಮಿ ಬೇಕು” ಎಂಬ ಸ್ಲೋಗನ್ ಕೊಟ್ಟರು. ಪ್ರತಿದಿನ ಕಾಲೇಜು ಮುಗಿಸಿ ನಾವು ಈ ಹೋರಾಟಗಾರರೊಂದಿಗೆ ಬೆರೆತು ಅಂದAದಿನ ಅನುಭವದ ವರದಿಗಳನ್ನು ಪಡೆದುಕೊಳ್ಳುತ್ತಿದ್ದೆವು. ಒಂದು ದಿನ ಆ ಸಭೆ ಮುಗಿಸಿ ಮನೆಗೆ ಹಿಂತಿರುಗುವಾಗ ರಾತ್ರಿ ಹತ್ತು ಗಂಟೆಯಲ್ಲಿ ನನಗೆ ಮತ್ತು ರಾಮಚಂದ್ರನನ್ನು ಕೊಲೆ ಮಾಡಲು ಹೊಂಚು ಹಾಕಿದ್ದರು. ಅದು ಹೇಗೋ ತಪ್ಪಿಸಿಕೊಂಡ್ವಿ. ರಾಮಕೃಷ್ಣ ಹೆಗ್ಗಡೆ ಮುಖ್ಯ ಮಂತ್ರಿಗಳಾಗಿದ್ದ ಕಾಲದಲ್ಲಿ ಇಲ್ಲಿ ಗೋಲಿಬಾರ್ ಕೂಡ ಆಗಿತ್ತು. ಅಂತೂ ನಾಲ್ಕು ವರ್ಷಗಳ ನಂತರ ಜೀತಪದ್ಧತಿ ಕೊನೆಯಾಗುವ ಕಾಲ ಬಂತು. ಆಗ ಡಿ.ವಿ. ಪ್ರಸಾದ್ ಅನ್ನುವವರು ಡಿ.ಸಿ.ಯಾಗಿ ಬಂದರು. ಇವರು ರಾಷ್ಟಾçಧ್ಯಕ್ಷರಾಗಿದ್ದ ಸಂಜೀವ ರೆಡ್ಡಿಯವರ ಮೊಮ್ಮಗ. ದಲಿತರ ಬಗ್ಗೆ ಅಪಾರ ಕಾಳಜಿಯುಳ್ಳವರು. ಅವರು ಸರ್ಕಾರದ ಜೊತೆ ಮಾತನಾಡಿ ಒಂದು ಪರಿಹಾರ ಕಂಡುಹಿಡಿಯುವಲ್ಲಿ ಯಶಸ್ವಿಯಾದರು. ನಾಗಸಂದ್ರದ ರೆಡ್ಡಿಯ ಜಮೀನನ್ನು ಬಿಟ್ಟುಕೊಡುವ ಸಲಹೆಗೆ ಸರ್ಕಾರ ಒಪ್ಪಿಗೆ ಕೊಡಲಿಲ್ಲ. ಆದರೆ ಸುಮಾರು ೬೦೦ ಎಕರೆಯಷ್ಟು ಈಚಲು ವನ ಇತ್ತು. ಅದನ್ನು ಈ ದಲಿತರಿಗೆ ಹಂಚಿಕೊಟ್ಟರು. ನಿಧಾನವಾಗಿ ಮನೆಯನ್ನು ಕಟ್ಟಿಕೊಟ್ಟರು. ಈ ವಸತಿಗೆ ‘ಶಂಭೂಕ ನಗರ’ ಎಂದು ಹೆಸರಿಡಬೇಕೆಂದು ನಾನೇ ಸಲಹೆ ಕೊಟ್ಟೆ. ಈ ಹೋರಾಟ ನನಗೆ ಹೊಸ ಅನುಭವವನ್ನು ಕೊಟ್ಟಿತು. ನನಗೆ ಮುಂಚೆ ಇಂತಹ ಯಾವ ಹೋರಾಟದ ಅನುಭವವೂ ಇರಲಿಲ್ಲ. ನಮ್ಮಂಥ ಹಿಂದುಳಿದ ಜಾತಿಯವರಿಗೆ ದಲಿತರ ಸಮಸ್ಯೆಗಳ ಬಗ್ಗೆ, ಅವರ ಸ್ಥಿತಿಗತಿಗಳ ಬಗ್ಗೆ ಅಷ್ಟೊಂದು ಜ್ಞಾನವೂ ಇರುವುದಿಲ್ಲ, ಹಾಗೆಯೇ ಕಾಳಜಿಯೂ ಇರುವುದಿಲ್ಲ. ಇಂತಹ ಹೋರಾಟಗಳು ನಮ್ಮ ಅಭಿಪ್ರಾಯವನ್ನು , ದೃಷ್ಟಿಕೋನವನ್ನು ಬದಲಾಯಿಸಿದವು.

ಹೊಸತು : ಸರ್, ನೀವು ಸಮುದಾಯದಲ್ಲೂ ಕ್ರಿಯಾಶೀಲರಾಗಿದ್ದಿರಲ್ವಾ?
ಗಂಗಾಧರ್ : ನಾನು ಮಾತ್ರ ಅಲ್ಲ, ನಾವೆಲ್ಲರೂ ಹೊಸ ಹೊಸ ನಾಟಕಗಳನ್ನು ಮಾಡಿಸುತ್ತಿದ್ದೆವು. ಹಳ್ಳಿ ಹಳ್ಳಿಗೂ ಹೋಗಿ ನಾಟಕ ಆಡಿಸುತ್ತಿದ್ದೆವು. ವೇಣುಗೋಪಾಲ್ ಮತ್ತು ನಾನು ನಾಟಕಗಳನ್ನು ಬರೆಯುತ್ತಿದ್ದೆವು. ಹೀಗೆ ನಾವುಗಳು ಸಮುದಾಯದಲ್ಲಿಯೂ ಕ್ರಿಯಾಶೀಲವಾಗಿದ್ದೆವು. ನಾನು ಸ್ವಲ್ಪ ಕಾಲ ಸಮುದಾಯ ವಾರ್ತಾಪತ್ರದ ಸಂಪಾದಕನಾಗಿದ್ದೆ. ಆಗ ಮುಂಬೈನಲ್ಲಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದಿತ್ತು. ನಾನು ವೇಣುಗೋಪಾಲ್ ಅವರಿಗೆ ನೀವು ಈ ಉತ್ಸವಕ್ಕೆ ಹೋಗಿ ವರದಿ ತಯಾರಿಸಿಕೊಂಡು ಬರುವಿರಾ, ಎಂದು ಕೇಳಿದೆ. ಅವರಿಗೆ ಅದೇನು ಉತ್ಸಾಹ! ರೈಲು ರಿಸರ್ವೇಶನ್ ಇಲ್ಲ, ಮುಂಬೈಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯೂ ಮಾಡಿಕೊಳ್ಳದೆ ಉತ್ಸಾಹದಿಂದ ಅವರು ಹೋಗಿ ಬಂದರು. ಅದರ ಪರಿಣಾಮ, ನಾವು ಚಿತ್ರೋತ್ಸವ ವಿಶೇಷ ಸಂಚಿಕೆಯನ್ನು ತರುವುದಕ್ಕೆ ಸಾಧ್ಯವಾಯಿತು.

ಮತ್ತೊಂದು ವಿಷಯ, ತೊಂಭತ್ತರ ದಶಕದಲ್ಲಿ ಸಾಕ್ಷರತಾ ಆಂದೋಲನವು ರಾಷ್ಟ್ರೀಯ ಕಾರ್ಯಕ್ರಮವಾಗಿ ಯೋಜಿತವಾದಾಗ, ನಾನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ.

ಹೊಸತು : ಸರ್, ನೀವು ಕಾಲೇಜಿನಲ್ಲಿದ್ದಾಗ ಒಮ್ಮೆ ನಿಮ್ಮ ಮೇಲೆ ಹಲ್ಲೆಯಾಗಿತ್ತಲ್ಲವೆ?
ಗಂಗಾಧರ್ : ಹೂಂ. ಅದೊಂದು ದೊಡ್ಡ ಕತೆ. ಪಿನಾಕಿನಿ ನದಿಯಲ್ಲಿದ್ದ ಮರಳನ್ನು ಹೊಡೆಯುತ್ತಿದ್ದರು. ಅದೊಂದು ದೊಡ್ಡ ದಂಧೆಯಾಗಿತ್ತು. ಭಕ್ತ ರಾಮೇಗೌಡ ಅವರು ‘ಸ್ವಲ್ಪ ಇದನ್ನು ನೋಡಿ ಸರ್’ ಎಂದು ನಮಗೆ ಹೇಳಿದರು. ನಾವೆಲ್ಲ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಾಕ್ಷ÷್ಯಗಳನ್ನು ಹುಡುಕಿ, ಮೋಸದಿಂದ ಮರಳು ಹೊಡೆಯುತ್ತಿದ್ದವರ ಅಂಕಿ-ಅAಶಗಳನ್ನು ಕಲೆ ಹಾಕಿದೆವು. ನಾನು ಗೌರಿಬಿದನೂರಿನ ಪ್ರಜಾವಾಣಿಯ ಬಾತ್ಮೀದಾರನಾಗಿದ್ದರಿಂದ ಕೆಲವರ ಪರಿಚಯವಿತ್ತು. ಆಗ ತುಮಕೂರಿನ ವರದಿಗಾರರಾಗಿದ್ದ ಅಮಿನ್ ಮಟ್ಟು ಅವರಿಗೆ ನಾವು ಸಂಗ್ರಹಿಸಿದ್ದ ಮಾಹಿತಿಗಳನ್ನು ಕೊಟ್ಟೆ. ಅವರು ಪ್ರಜಾವಾಣಿಯಲ್ಲಿ ಲೇಖನ ಬರೆದರು. ಆ ಲೇಖನದ ಹಿಂದೆ ನಾನಿದ್ದೆ, ಎಂದು ಇಲ್ಲಿನವರು ಊಹಿಸಿದರು. ಹಾಗೆಯೇ ಮತ್ತೊಂದು ಘಟನೆ ನಡೆದಿತ್ತು. ನಮ್ಮ ಕಾಲೇಜಿನಲ್ಲಿ ಒಂದು ಸಮಸ್ಯೆ ಎದ್ದಿತ್ತು. ನಮ್ಮ ಕೆಲವು ಶಿಕ್ಷಕರ ಅರಿವಿಲ್ಲದೆ, ನಮ್ಮಗಳ ಹೆಸರಿನಲ್ಲಿ ಕೆಲವರು ಅದ್ಯಾವುದೋ ಕೇರಳದ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದರು. ಇವೆರಡೂ ಘಟನೆಗಳ ಹಿಂದೆ ಅದು ಹೇಗೋ ನಮ್ಮ ಪ್ರಿನ್ಸಿಪಾಲರಾಗಿದ್ದ ಚಿಕ್ಕ ವೀರ ತಿಪ್ಪಯ್ಯನವರು ಇದ್ದರು. ಸುಮ್ಮನೆ ಪಾಠ ಮಾಡಿಕೊಂಡು ಹೋಗಿ, ನಿಮಗೆ ಏಕೆ ಮರಳಿನ ವಿಚಾರ? ಎನ್ನುತ್ತಿದ್ದರು. ಆದರೆ ಅವರೂ ಮರಳಿನ ವ್ಯಾಪಾರದಲ್ಲಿ ಭಾಗಿಯಾಗಿದ್ದರು. ಇದು ಭಾರಿ ದೊಡ್ಡ ಕೇಸಾಯಿತು. ಹೈಕೋರ್ಟಿನಲ್ಲಿ ವಿಚಾರಣೆಗೆ ಬಂತು. ಬೆಂಗಳೂರಿನಿAದ ವಕೀಲರಾದ ಬಿ.ಟಿ.ವೆಂಕಟೇಶ್ ಮತ್ತು ಬಾಬಯ್ಯ ಮಾನವ ಹಕ್ಕುಗಳ ಆಯೋಗದ ಪರವಾಗಿ ಬಂದಿದ್ದರು. ಯಾವುದೇ ಶುಲ್ಕವಿಲ್ಲದೆ ವೆಂಕಟೇಶ್ ಕೋರ್ಟಿನಲ್ಲಿ ನಮ್ಮ ಪರವಾಗಿ ವಾದ ಮಾಡಿದರು. ತೀರ್ಪು ನಮ್ಮ ಪರವಾಗಿ ಬಂತು. ಇದರಿಂದ ತುಂಬ ಸಿಟ್ಟುಗೊಂಡವರು ನಮ್ಮ ಪ್ರಿನ್ಸಿಪಾಲ್. ಅವರ ಮಗನದು ಒಂದು ಪುಂಡರ ಗ್ಯಾಂಗು ಇತ್ತು. ಮಹಾನ್ ಕುಡುಕರು ಅವರು. ನಾನು ಒಂದು ದಿನ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಈ ಗ್ಯಾಂಗು ನುಗ್ಗಿ ನನ್ನ ಮೇಲೆ ಹಲ್ಲೆ ಮಾಡಿತು. ಕಣ್ಣಿಗೆ ಮೆಣಸಿನ ಪುಡಿ ಹಾಕಿದರು. ತಲೆಗೂ ಪೆಟ್ಟಾಗಿತ್ತು. ಕೂಡಲೇ ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ನನ್ನ ತಲೆಗೆ ಆರು ಇಂಚಿನಷ್ಟು ಹೊಲಿಗೆಯನ್ನು ಹಾಕಬೇಕಾಗಿ ಬಂತು. ನಂತರ ಈ ಕೃತ್ಯವನ್ನು ಪ್ರತಿಭಟಿಸಿ ಜಿ.ಆರ್, ಗೋವಿಂದರಾವ್, ಟಿ.ಎನ್.ಸೀತಾರಾಂ, ಇನ್ನೂ ಅನೇಕ ಶಿಕ್ಷಕರು ಬೆಂಗಳೂರಿನಿAದ ಬಂದು ನನ್ನನ್ನು ಬೆಂಬಲಿಸಿದರು. ಇಲ್ಲಿಯೂ ಶಿಷ್ಯರೆಲ್ಲಾ ಸೇರಿ ಬೃಹತ್ ಮೆರವಣಿಗೆಯನ್ನು ನಡೆಸಿದ್ದರು. ನಾನು ಬೆಂಗಳೂರು ವಿಶ್ವವಿದ್ಯಾಲಯದ ಕಾಲೇಜು ಶಿಕ್ಷಕರ ಸಂಘಟನೆ(ಬುಕ್ಟಾ)ಯಲ್ಲೂ ತುಂಬ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದೆ. ಹೀಗೆ ಒಂದು ಕಡೆ ಓದು, ಮತ್ತೊಂದು ಕಡೆ ಚಳುವಳಿ – ಎರಡೂ ಸೇರಿ ನನ್ನ ತಿಳುವಳಿಕೆ ಮತ್ತು ಅನುಭವ ವಿಸ್ತಾರವಾಗುವುದಕ್ಕೆ ಸಾಧ್ಯವಾಯಿತು.

ಹೊಸತು : ಸರ್, ನೀವು ಕರ್ನಾಟಕದಾಚೆಯೂ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದೀರ. ಅದು ಹೇಗೆ ಸಾಧ್ಯವಾಯಿತು?
ಗಂಗಾಧರ್ : ಒಂದು ರೀತಿಯಲ್ಲಿ ನನ್ನ ಇಂಗ್ಲಿಷ್ ಜ್ಞಾನ ನನಗೆ ವರವಾಯಿತು. ದಲಿತ ಸಂಘಟನೆಗಳಲ್ಲಿ ಇಂಗ್ಲಿಷ್ ಬರುವವರು ಕಡಿಮೆ. ನನಗೆ ಇಂಗ್ಲಿಷ್ ಬರುತ್ತಿದ್ದುದರಿಂದ ನಾನು ದಲಿತರ ಪ್ರತಿನಿಧಿಯಾಗಿ ದೆಹಲಿಯಿಂದ ಕನ್ಯಾಕುಮಾರಿಯವರೆಗೆ, ಗೌಹಾತಿಯಿಂದ ಮುಂಬೈವರೆಗೆ ಪ್ರಯಾಣ ಮಾಡಿದೀನಿ. ನನಗೆ ಆಹ್ವಾನಗಳು ಬರುತ್ತಿದ್ದವು. ವಿ.ಪಿ.ಸಿಂಗ್, ರಾಮ ವಿಲಾಸ ಪಾಸ್ವಾನ್ ಮತ್ತು ಶರತ್ ಪಾಟೀಲರು ವ್ಯವಸ್ಥೆಗೊಳಿಸಿದ್ದ ಕಾರ್ಯಕ್ರಮಗಳಲ್ಲಿ ನಾನು ಹೋಗಿ ಭಾಗವಹಿಸಿದ್ದೀನಿ. ಮಹಾರಾಷ್ಟ್ರದ ಮೇಧಾ ಪಾಟ್ಕರ್ ಅವರ ಹೋರಾಟಗಳಲ್ಲಿ ಮತ್ತು ಆಂಧ್ರದ ಕಾಂಚ ಐಲಯ್ಯ ಅವರೊಡನೆ ಸಂಪರ್ಕವಿಟ್ಟುಕೊ೦ಡಿದ್ದೆ. ಕೇರಳದ ಥಾಮಸ್ ಅನ್ನುವವರು ‘ವಿಷಮತ್ ನಿರ್ಮೂಲನಾ ಆಂದೋಲನಾ’ ಎನ್ನುವ ವಿಸ್ತಾರವಾದ ವೇದಿಕೆಯನ್ನು ಮಾಡಿಕೊಂಡಿದ್ದರು. ಅದರೊಂದಿಗೆ ಸಂಪರ್ಕವಿರಿಸಿಕೊ೦ಡಿದ್ದೆ. ಹೀಗೆ ನನ್ನ ಅನುಭವದ ಲೋಕ ವಿಸ್ತಾರವಾಗಿತ್ತು.

ಹೊಸತು : ಸರ್, ನಿವೃತ್ತಿಯ ನಂತರ ನಿಮ್ಮ ಚಟುವಟಿಕೆಗಳು ಏನಾಗಿದ್ದವು?
ಗಂಗಾಧರ್ : ನಾನು ೨೦೦೩ರಲ್ಲಿ ನಿವೃತ್ತಿಯಾದೆ. ೨೦೦೪ರವರೆಗೂ ನನಗೂ ಸ್ಥಳೀಯ ಶಾಸಕರಾದ ಶಿವರೆಡ್ಡಿಯವರಿಗೂ ಆಗುತ್ತಿರಲಿಲ್ಲ. ಏಕೆಂದರೆ ಜೀತ ನಿರ್ಮೂಲನ ಹೋರಾಟದಲ್ಲಿದ್ದಾಗ ಅವರ ವಿರುದ್ಧ ಹೋರಾಟ ಮಾಡಿದ್ದೆವಲ್ಲಾ, ಅದಕ್ಕೆ. ಅವರು ಚುನಾವಣೆಗೆ ಮತ ಕೇಳಲು ಬಂದಾಗಲೆಲ್ಲ, ನಾನು ದಲಿತರ ಪ್ರತಿನಿಧಿ. ನನ್ನ ಮತ ಅಷ್ಟೇ ಅಲ್ಲ, ಅವರ ಮತವೂ ನಿಮಗೆ ಸಿಕ್ಕುವುದಿಲ್ಲ, ಎಂದೆನ್ನುತ್ತಿದ್ದೆ. ನಂತರ ನಮ್ಮ ಸಂಬ೦ಧ ನಿಧಾನವಾಗಿ ಬದಲಾಯಿತು.

ಹೊಸತು : ಸರ್, ನಿಮ್ಮ ಮುಂದಿನ ಕನಸುಗಳೇನು?
ಗಂಗಾಧರ್ : ವಿಶಿಷ್ಟ ವಿಷಯಗಳನ್ನಾಧರಿಸಿ ಇಲ್ಲಿನ ಚಿತ್ರಪಟಗಳನ್ನು ವಿಸ್ತರಿಸುವ ಆಸೆ ಇದೆ.

‍ಲೇಖಕರು Admin

September 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: