ಶಿವಾನಂದ ತಗಡೂರು
ಆಗಿನ್ನೂ ಕುಡಿಮೀಸೆ…
ಹೆಸರುಬಲ ನಿನ್ನದೇ
ಕಟ್ಟಬೇಕಂತ ಹೊನ್ನಾರು…
ಅಜ್ಜನ ಮಾತಿಗೆ ಅಪ್ಪನದು
ಒಗ್ಗರಣೆ, ಅವ್ವನದು ಸಾಥ್

ಬೆಳಿಗ್ಗೆಯೇ ಶುರುವಾಗಿತ್ತು
ಅವ್ವನ ಹಬ್ಬದ ಸಡಗರ
ಮಲಗಲು ಬಿಡಲಿಲ್ಲ
ವರ್ಷದ ಹಬ್ಬದಲ್ಲಿ
ನಿನ್ನದೇನು ಭಂಡ ನಿದ್ರೆ?
ಹೋಗಬಾರದೇನು ಕೆರೆಗೆ…
ಎತ್ತು ಹಿಡಿದು, ಮೈದಡವಿ
ಊರ ಕೆರೆಯಲಿ ಈಜಾಡಿಸಿ
ಚಡ್ಡಿ ಗೆಳೆಯರ ಜೊತೆಗೆ
ಏರಿ ಹಿಂದಲ ಬಾವಿಗೆ
ಸಾಲು ಸಾಲಾಗಿ ನೆಗೆದು
ಮುಗಿದಿತ್ತು ಮಹಾ ಮಜ್ಜನ
ತೋಟದಲ್ಲೂ ಎಣ್ಣೆ ನೀರು
ಅಲ್ಲಿ ಊರೊಟ್ಟಿನ ಸ್ನಾನ
ಮನೆಗೆ ಬಂದಾಗ ಒಬ್ಬಟ್ಟು
ಘಮಘಮ…
ಜೊಲ್ಲು ರಸ ನುಂಗಿ
ಅಡುಗೆ ಮನೆಗೆ
ಕಳ್ಳಬೆಕ್ಕು ಹೆಜ್ಜೆ ಇಟ್ಟು
ಸಿಕ್ಕಿಕೊಂಡಿದ್ದಕ್ಕೆ ಬೈಗುಳ
ಎಡೆ ಹಿಡಿಯೋ ತನಕ
ತಿನ್ನಂಗಿಲ್ಲ, ಆಚೆಗಿರೆಂದು
ಅಬ್ಬರಿಸಿದಳು ಅವ್ವ…
ಹಸಿದ ಹೊಟ್ಟೆಯಲಿ
ಹಬ್ಬದೂಟ ಚಡಪಡಿಕೆ
ಆಚೆ ಈಚೆಗೂ ನಡೆದಿತ್ತು
ಅಲ್ಲಿ ಮ್ಯಾರಥಾನ್ ಓಟ
ಮತ್ತೆ ತೋಟಕ್ಕೆ ಲಗ್ಗೆ
ಎಳನೀರು ಕಿತ್ತು ಕುಡಿದು
ದಾಹ ಇಂಗಿಸಿ ಬಂದಾಗ
ಊರ ದೇಗುಲದ ಪೂಜೆ
ಎತ್ತಿನ ಮೇಲೆ ನೊಗ ಕಟ್ಟಿ
ಹೊಸ ಬಟ್ಟೆಯನ್ನುಟ್ಟು
ಹೊರಟೆವು ಊರ ಸುತ್ತ
ಹೊನ್ನಾರು, ಎಲ್ಲೆಲ್ಲೂ
ನಮ್ಮದೇ ಕಾರುಬಾರು
ಕೊಟ್ಟಿಗೆಗೆ ಎತ್ತುಗಳ ಕಟ್ಟಿ
ಅಡುಗೆಮನೆಗೆ ಇಟ್ಟೆವು ಲಗ್ಗೆ
ಒಂದಾದ ಮೇಲೊಂದು
ಒಬ್ಬಟ್ಟು… ಭರ್ಜರಿ ಊಟ
ತಿಂದು ತೇಗಿ, ಮೇಲೆದ್ದಾಗ
ಯುಗಾದಿಯ ಗಮ್ಮತ್ತು
ಮೈ ಮನ ಉಬ್ಬಿಸಿತ್ತು
ಊರಲಿ ಹಬ್ಬದ ಕಾವಿತ್ತು






ಇಂದು ಬರಿ ಮನೆಯೊಳಗೆ ಮಾತ್ರ ಆಚರಿಸಲ್ಪಡುವ ಹಬ್ಬಕ್ಕೆ ಅಣಕವಾಡುವಂತಿದೆ ನಿಮ್ಮ ಸಾಲುಗಳು…
habba andre adoo…
Nice….